November 21, 2024
Kalayathamai
ಸುಮ್ಮನೆ ಹೀಗೆ ಏನೋ ಆಲೋಚಿಸುತ್ತಾ ಗೋಡೆಯ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ನೋಡಿದೆ. ಅದಾಗಲೇ ಅದರ ಜೀವಿತಾವಧಿ ಮುಗಿಯಲು ಕೇವಲ ಇಪ್ಪತ್ತನಾಲ್ಕು ಗಂಟೆಗಳು ಮಾತ್ರ ಇತ್ತು. ಅಷ್ಟು ಬೇಗ ಒಂದು ವರ್ಷ ಕಳೆಯಿತೇ??…ಹಾಗಾದರೆ ಈ ಅವಧಿಯಲ್ಲಿ ನನ್ನ ಸಾಧನೆಯ ಪ್ರಮಾಣ ಕಿಂಚಿತ್ತೂ ಇಲ್ಲ ಅನಿಸಿತು. ಕ್ಯಾಲೆಂಡರ್ ಮಾತ್ರ ಹೊಸದಾಗಿ ಬದಲಾಗುತ್ತಿರುವುದು ಹೊರತು ಜೀವನದ ಗುರಿ ಸಾಧನೆಗಳಲ್ಲ ಅಲ್ವಾ…
 
 
        ಹೊಸ ವರುಷವನ್ನು ಹೊಸ ಬದುಕಿನೊಂದಿಗೆ ಪ್ರಾರಂಭಿಸಲು ಜನರು ಬಯಸುತ್ತಾರೆ. ಇದು ಮಾನವನ ಸಹಜ ಸ್ವಭಾವ. ಹಳೆಯ ವರುಷ ಸಾಧಿಸಲಾಗದ್ದನ್ನು ಮಾಡಿ ತೋರಿಸುವುದಾಗಿ ಹೊಸ ವರುಷಕ್ಕೆ ಪ್ರತಿಜ್ಞೆ ಮಾಡುತ್ತಾರೆ. ಆದರೆ ಬರೀ ಪ್ರತಿಜ್ಞೆಯಲ್ಲೇ ಕಾಲಕಳೆದು ಛೇ ಈ ವರುಷ ನೆರವೇರಲಿಲ್ಲ ಮುಂದಿನ ವರ್ಷ ಅದೃಷ್ಟ ಪರೀಕ್ಷೆ ಮಾಡುವ ಎಂದು ಸುಮ್ಮನಾಗುತ್ತಾರೆ. ಆದರೆ ಅಂದುಕೊಂಡದನ್ನು ಸಾಧಿಸಲು ಪ್ರಯತ್ನ ಮಾಡುವುದಿಲ್ಲ. ಹೀಗೆ ಮುಂದಿನ ವರ್ಷ ಎಂದು ಮುಂದೂಡುತ್ತಾ ಹೋಗಿ ವೃದ್ಧಾಪ್ಯಕ್ಕೆ ಕಾಲಿಡುತ್ತೇವೆ. ಇನ್ನೂ ಕೆಲವರಂತೂ ಹೊಸ ವರ್ಷದ ಸಂಭ್ರಮದಲ್ಲಿ ಮದ್ಯಪಾನ ಮಾಡಿ ವರ್ಷವಿಡೀ ಔಷಧ ಸೇವಿಸುವಷ್ಟು ಅನಾಹುತ ಮಾಡಿಕೊಳ್ಳುತ್ತಾರೆ.
 
Related image
 
               ಹೌದು ಮತ್ತೊಂದು ಅಂಚನ್ನು ತಲುಪಿದ್ದೇವೆ. ಮುಂದೆ ಹೆಜ್ಜೆಯಿಡಲೇ ಬೇಕು. ಹಾಗೆ ಬಂದ ದಾರಿಯನ್ನು ‌ಸಹ ನೆನಪಿಸಿಕೊಳ್ಳೋಣ. ಗೋಡೆಯ ಮೇಲೆ ಹೊಸದಾಗಿ ಕ್ಯಾಲೆಂಡರ್ ನೇತು ಹಾಕುವಂತೆ ಹಳೆಯ ನೋವುಗಳ ಜಾಗದಲ್ಲಿ ಹೊಸ ಸಂತಸಗಳನ್ನು,ಮುರಿದು ಬಿದ್ದ ಕನಸುಗಳ ಅಂಗಳದಲ್ಲಿ ಹೊಸ ಕನಸುಗಳನ್ನು ಬಿತ್ತೋಣ. ಪಟಪಟನೆ ಉರುಳಿ ಹೋದ ವರುಷದಲ್ಲಿ ಉಳಿಸಿಕೊಂಡದೆಷ್ಟು? ಕಳೆದುಕೊಂಡದೆಷ್ಟು? ಗಳಿಸಿದೆಷ್ಟು? ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತದೆ. ಲೆಕ್ಕವೂ ಕೈಗೆ ಸಿಗದಷ್ಟು ವೇಗವಾಗಿ ಮುಗಿದುಬಿಟ್ಟಿವೆ. ಈ ಸಮಯದಲ್ಲಿ ಎರಡು ರೀತಿಯ ವ್ಯಕ್ತಿಗಳಿಗೆ ಧನ್ಯವಾದ ತಿಳಿಸುತ್ತೇನೆ.
 
ಒಂದು ಜೊತೆಯಲ್ಲೇ ಇದ್ದು ನನ್ನ ಕನಸನ್ನು ನನಸಾಗಿಸಲು ಮೆಟ್ಟಿಲಾದವರಿಗೆ ಹಾಗೂ ಅವಮಾನ,ನೋವು ನೀಡಿ ಬದುಕಿನಲ್ಲಿ ಮರೆಯಲಾಗದ ಪಾಠ ಕಲಿಸಿಕೊಟ್ಟವರಿಗೆ ಮನದಾಳದ ವಂದನೆಗಳು.
 
Image result for kalaya tasmai namaha
 
                ಹೊಸತನ ಎನ್ನುವುದು ಸೃಷ್ಟಿಯ ನಿಯಮ. ಹೀಗಾಗಿ ಸದಾ ಹೊಸತನಕ್ಕಾಗಿ ಮನಸ್ಸು ತುಡಿಯುತ್ತಿರುತ್ತದೆ. ಅಸೂಯೆ,ದ್ವೇಷ,ಪ್ರತೀಕಾರ, ಮೋಸ, ದುರಾಸೆಯನ್ನು ತೊರೆದು ಅ ಸ್ಥಳದಲ್ಲಿ ಪ್ರೀತಿ, ಆರೈಕೆ, ಸಹಾನುಭೂತಿ, ಪ್ರಾಮಾಣಿಕತೆಯನ್ನು ಆರಿಸಿಕೊಂಡು ಸಾಗೋಣ. ಮತ್ತು ಬದುಕಿನ ಗುರಿಯನ್ನು ಸಾಧಿಸೋಣ…..
 
ಗ್ರೀಷ್ಮಾ ಭಂಡಾರಿ 
ಅಂತಿಮ ಪತ್ರಿಕೋದ್ಯಮ 
ವಿ.ವಿ ಕಾಲೇಜು ಮಂಗಳೂರು

Leave a Reply

Your email address will not be published. Required fields are marked *