November 23, 2024
budedi

ತುಳುವಿನಲ್ಲಿ ಹೆಂಡತಿಗೆ ಸಾಮಾನ್ಯವಾಗಿ ‘ಬುಡೆದಿ’ ಎನ್ನುತ್ತಾರೆ. ತುಳು ಭಾಷೆಯಲ್ಲಿ ಅನೇಕ ಸ್ವತಂತ್ರ ಪದಗಳಿದ್ದು ಸಹೋದರ ದ್ರಾವಿಡ ಭಾಷೆಗಳಿಂದ ಸಂಪೂರ್ಣ ಎರವಲು ಪಡೆದ ಭಾಷೆಯಾಗಿಲ್ಲ ಎಂಬುದು ಅಧ್ಯಯನಕಾರರಿಗೆ ತಿಳಿದು ಬಂದ ವಿಚಾರವಾಗಿದೆ.  ಬುಡೆದಿ ಪದವು ದ್ರಾವಿಡ ಭಾಷೆಯ ಪದದ ಹಿನ್ನಲೆಯನ್ನು ಹೊಂದಿಲ್ಲ.

ಪದದ ಸಾಮಾನ್ಯ ಹಿನ್ನಲೆ:  ಬುಡೆದಿ, ಪದವನ್ನು ವಿಶ್ಲೇಷಣೆಗೊಳಪಡಿಸಿದಾಗ ಬೂಡು +ದಿ , “ಬೂಡು” ತುಳುವಿನಲ್ಲಿ ಮನೆ ಎಂಬರ್ಥ ಹೊಂದಿದೆ. “ಎ’ದಿ” ಎಂಬುದು ಲಿಂಗ ಪ್ರತ್ಯಯವಾಗಿದೆ. ಮನೆಯೊಡತಿ ಎಂಬ ಅರ್ಥವನ್ನು ಹೊಂದಿದೆ. ಬೂಡುದಾಲ್ (ಮನೆಯಾಕೆ) , ಇಲ್ಲದ ಗುರ್ಕಾದಿ (ಮನೆ ಒಡತಿ) ಎಂಬ ತುಳು ಪದವನ್ನು ಸಾಮಾನ್ಯವಾಗಿ ಹಿರಿಯ ತುಳುವರು ಬಳಸುವುದನ್ನು ನೀವು ಗಮನಿಸಿರಬಹುದು. 

ದ್ರಾವಿಡ ಭಾಷೆ ಮತ್ತು ಬುಡೆದಿ ಪದ:

ದ್ರಾವಿಡ ಭಾಷೆಗಳಾದ ಕನ್ನಡ , ತಮಿಳು, ಮಲೆಯಾಲಂ ಮತ್ತು ತೆಲುಗು ಭಾಷೆಯಲ್ಲಿ ಕ್ರಮವಾಗಿ ಮಡದಿ, ಮಡಂದಾಯಿ, ಮಡಂದ ಮತ್ತು ಮಡಂತಿ ಎಂಬುದಾಗಿದ್ದು, ತುಳುವಿನ ಬುಡೆದಿ’ ಭಿನ್ನ ಪದ ಹಿನ್ನಲೆ ಹೊಂದಿದೆ.

ನೇಪಾಳಿ ಭಾಷೆಯ ಪ್ರಭಾವ:

ಪದಹಿನ್ನಲೆಯನ್ನು ಗಣನೆಗೆ ತೆಗೆದುಕೊಂಡಾಗ ನೇಪಾಳಿ ಭಾಷೆಯ ‘ಬುಡಿ’ ಪದಕ್ಕೂ ತುಳುವಿನ ‘ಬುಡೆದಿ’ ಗೂ ನೇರ ಸಾಮ್ಯತೆ ಕಂಡುಬರುತ್ತದೆ. ನೇಪಾಳಿಯಲ್ಲಿ ‘ಬುಡಿ’ ಎಂದರೆ “ಹೆಂಡತಿ ಮತ್ತು ಪ್ರೇಯಸಿ” ಎಂಬ ಅರ್ಥವಿದೆ. ನೇಪಾಳಿ ಭಾಷೆಯಲ್ಲಿ ಗಂಡ -ಹೆಂಡತಿ ಗೆ ಬುಡಾ-ಬುಡಿ ಎನ್ನಲಾಗುತ್ತದೆ. 

ನೇಪಾಳಿ ಭಾಷಾ ತಜ್ಞರಿಗೆ ಈ  ಪದದ ಮೂಲದ ಬಗ್ಗೆ ಸರಿಯಾದ ಮಾಹಿತಿಯಿಲ್ಲವಾಗಿದ್ದು ಇವರ ಪ್ರಕಾರ ಹಿಂದಿ ಪದದಲ್ಲಿ ಹಿರಿಯ ಹೆಂಗಸರಿಗೆ ಬಳಸುವ ಬುಡಿ ಪದ ನೇಪಾಳಿ ‘ಬುಡಿ’ಯ ಮೂಲ ಎಂದು ತರ್ಕಿಸುತ್ತಾರೆ. ಆದರೆ ನಿಖರವಾದ ಮಾಹಿತಿ ಈ ಬಗ್ಗೆ ಲಭ್ಯವಿಲ್ಲ. ದ್ರಾವಿಡ ಭಾಷೆಯಲ್ಲಿರದ ಒಂದು ಪದ ದ್ರಾವಿಡ ಭಾಷೆಯ ಲಿಂಗ ಪ್ರತ್ಯಯ (ಬುಡಿ+ಎದಿ) ದೊಂದಿಗೆ ನೇಪಾಳಿ ಪದವೊಂದು ಸೇರಿಹೋಗಿದೆ ಎನ್ನುವುದನ್ನು ಅಲ್ಲಗಲೆಯುವಂತಿಲ್ಲ. 

ಐತಿಹಾಸಿಕ ಹಿನ್ನಲೆ ಪ್ರಕಾರ ಕ್ರಿ.ಶ. 5-6 ನೇ ಶತಮಾನದ ಕದಂಬರ ಇತಿಹಾಸದಲ್ಲಿ ನೇಪಾಳ ಮತ್ತು ಉತ್ತರಭಾರತದ ಅರ್ಚಕರು ಮತ್ತು ತುಳುನಾಡಿನ ದೇವಾಲಯಗಳಿಗೆ ಸಂಬಂಧವಿತ್ತು. ಈಗಲೂ ಇದೆ. ಹಾಗಾಗಿ ಪ್ರಾಚೀನ ಕಾಲದಿಂದಲೂ ನೇಪಾಳ ಮತ್ತು ದಕ್ಷಿಣ ಭಾರತಕ್ಕೂ ಪರಸ್ಪರ ಸಂಪರ್ಕವಿತ್ತು ಎಂಬುದು ಇತಿಹಾಸದಲ್ಲಿ ದಾಖಲಾದ ಸತ್ಯ. ನೇಪಾಳಿ ಶೈಲಿಯ ಅನೇಕ ದೇವಾಲಯಗಳನ್ನು ತುಳುನಾಡಿನಲ್ಲಿ ಕಾಣಬಹುದಾಗಿದೆ. ಈಗ ಚಾಲ್ತಿಯಲ್ಲಿರುವ ತುಳು-ಕೇರಳ ವಾಸ್ತು ಶೈಲಿ ನೇಪಾಳದ ವಾಸ್ತುಶೈಲಿಯನ್ನೇ ಹೋಲುತ್ತದೆ. ಕರಾವಳಿ ಭಾಗದ ಹೆಂಚಿನ ಮನೆಗಳ ಶೈಲಿ ಕೂಡಾ ನೇಪಾಳಿ ಶೈಲಿಯ ಪ್ರಭಾವ ಹೊಂದಿದೆ.  ತುಳುವಿನ ಬುಡೆದಿ ಮೂಲ ಪದವೋ ಅಥವಾ ನೇಪಾಳಿಯ ಬುಡಿ ಮೂಲಪದವೋ ಎಂಬುದು ಹೆಚ್ಚಿನ ಅಧ್ಯಯನಗಳಿಂದಷ್ಟೇ ತಿಳಿಯಬಹುದಾಗಿದೆ. 

ಒಟ್ಟಾರೆ ಕೂಲಂಕುಷ ಅಧ್ಯಯನದ ನಂತರ ‘ಬುಡಿ'(ನೇಪಾಳಿ) ‘ಬುಡೆದಿ’ (ತುಳು) ಎರಡೂ ಕೂಡಾ ಪ್ರಾಚೀನ ಪದಗಳು ಎಂಬುದು ತಿಳಿದು ಬರುತ್ತದೆ. ಇವುಗಳೆರಡರ ಅರ್ಥವು ಸಮಾನವಾಗಿದೆ. ಬಂಗಾಳಿ ಪದ ‘ ಭೌದಿ’ (ಅತ್ತಿಗೆ) ಹಿಂದಿಯಲ್ಲಿ ಬಾಭಿ(ಅತ್ತಿಗೆ) ಯಾಗಿ ರೂಪಾಂತರ ಹೊಂದಿದೆ. ಹೀಗೆ ಮೂಲಪದ ಇನ್ನೊಂದು ಭಾಷೆಯೊಂದಿಗೆ ಸೇರಿಕೊಂಡರು ಪ್ರತ್ಯಯದಲ್ಲಿ ವ್ಯತ್ಯಾಸವಾಗುತ್ತದೆ ಹೊರತು ಅದರ ಅರ್ಥದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ.

 

ಲೇಖನ: ಪ್ರಶಾಂತ್ ಭಂಡಾರಿ ಕಾರ್ಕಳ 

Reference: 
  1. Ravindra Mundkoor ( tulu research)

Leave a Reply

Your email address will not be published. Required fields are marked *