November 22, 2024
smitha

ಜನವರಿ 26,2020 ರ ಭಾನುವಾರ ದೆಹಲಿಯ ಕೆಂಪು ಕೋಟೆಯ ಎದುರು ನೆಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ ರಾಷ್ಟೀಯ ಸೇವಾ ಯೋಜನೆ (NSS)ಯ ಟ್ರೂಪ್ ನೊಂದಿಗೆ ಹೆಜ್ಜೆ ಹಾಕುವ ಸುವರ್ಣ ಅವಕಾಶವನ್ನು ಪಡೆದು ಕುಮಾರಿ ಸ್ಮಿತಾ ಶ್ರೀನಿವಾಸ್ ಭಂಡಾರಿಯವರು ಅಪೂರ್ವ ಸಾಧನೆ ಮಾಡಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ (National Service Scheme) ಎಂಬುದು ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ಕೇಂದ್ರ ಸರ್ಕಾರದ “ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ”ಯ ಅಡಿಯಲ್ಲಿ ಈ ಸಂಸ್ಥೆ ಬರುತ್ತದೆ.ಈ ಯೋಜನೆಯ ಮೂಲ ಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದು,ದೇಶಸೇವೆಯ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಅನುಭವ ನೀಡುವುದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದಾಗಿದೆ.” ಶ್ರಮಮೇವ ಜಯತೇ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುವ NSS “ನನಗಲ್ಲ ನಿನಗೆ-Not me but you” ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ.ಕಲಿಕೆಯ ಜೊತೆಗೆ ಸಮಾಜಸೇವೆ ಮಾಡುವ ವಿದ್ಯಾರ್ಥಿಗಳು ಶ್ರಮದ ಮಹತ್ವವನ್ನು (Dignity of Labor) ಅರಿತುಕೊಂಡು ದೇಶ ಕಟ್ಟುವ,ದೇಶ ರಕ್ಷಿಸುವ ಕಾರ್ಯಗಳಲ್ಲಿ ಕೈ ಜೋಡಿಸಲಿ ಎಂಬುದು ಈ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ.

 
ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸುವ ಎನ್ ಎಸ್ ಎಸ್  ವಿದ್ಯಾರ್ಥಿಗಳ ಆಯ್ಕೆ ಅಷ್ಟು ಸುಲಭದ ಮಾತಲ್ಲ.ಪ್ರತಿ ಕಾಲೇಜಿನಿಂದ ಇಬ್ಬರು ಅತ್ಯುತ್ತಮ ವಿದ್ಯಾರ್ಥಿಗಳನ್ನು ಯುನಿವರ್ಸಿಟಿ ಮಟ್ಟದ ಆಯ್ಕೆಗೆ ಸೂಚಿಸಲಾಗುತ್ತದೆ.ಯುನಿವರ್ಸಿಟಿ ಮಟ್ಟದಲ್ಲಿ ಸಾಂಸ್ಕೃತಿಕ,ದೈಹಿಕ ಪರೀಕ್ಷೆಗಳು ನಡೆದು ಅಲ್ಲಿ ಆಯ್ಕೆಯಾಗುವುದು ಕೇವಲ ಎಂಟು ವಿದ್ಯಾರ್ಥಿಗಳು ಮಾತ್ರ,ಆ ಎಂಟು ವಿದ್ಯಾರ್ಥಿಗಳು ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ, ಅಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಗಳನ್ನೊಳಗೊಂಡ ಸೌತ್ ಜೋನ್ ಶಿಬಿರಗಳಲ್ಲಿ ಪಾಲ್ಗೊಂಡು, ಅಲ್ಲಿ ಕಠಿಣ ತರಬೇತಿಗಳನ್ನು ಪಡೆದು, ಹಲವಾರು ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾಗಬೇಕಾಗುತ್ತದೆ. ಹಾಗೆ ರಾಷ್ಟ್ರ ಮಟ್ಟಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಹದಿನಾಲ್ಕು. ಹೀಗೆ ಎಲ್ಲಾ ಕಠಿಣ ಅಡೆತಡೆಗಳನ್ನು ಎದುರಿಸಿ ಪರೇಡ್ ನಲ್ಲಿ ಭಾಗವಹಿಸಲು ಆಯ್ಕೆಯಾದ ರಾಜ್ಯದ ಹದಿನಾಲ್ಕು ವಿದ್ಯಾರ್ಥಿಗಳಲ್ಲಿ ಉಡುಪಿಯ ನಮ್ಮ ಸ್ಮಿತಾ ಶ್ರೀನಿವಾಸ ಭಂಡಾರಿಯವರು ಒಬ್ಬರು ಎಂಬುದೇ ಹೆಮ್ಮೆಯ ವಿಚಾರ. ಇಷ್ಟೆಲ್ಲಾ ಕಠಿಣ ಪರಿಶ್ರಮಗಳನ್ನು ಹಾಕಿ ಆಯ್ಕೆಯಾದರೂ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸುತ್ತೇನೆಂಬ ಯಾವುದೇ ನಂಬಿಕೆ ಇರುವುದಿಲ್ಲ.ಉತ್ತರ ಭಾರತದ ವಿಪರೀತ ಚಳಿ ಗಣರಾಜ್ಯೋತ್ಸವ ಪರೇಡ್ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಲ್ಲದು. ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ದೇಹ ಕ್ಷಮತೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದೂ ಕೂಡ ವಿದ್ಯಾರ್ಥಿಗಳಿಗೆ ಸವಾಲಿನದ್ದಾಗಿರುತ್ತದೆ.
 
 
ಗಣರಾಜ್ಯೋತ್ಸವ ದಿನದ ಪರೇಡ್ ನಲ್ಲಿ ಭಾಗವಹಿಸುವುದಕ್ಕೂ ಮೊದಲು ಆಯ್ಕೆಯಾದ ಎನ್ ಎಸ್ ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳು ಜನವರಿ 1 ರಿಂದ 25 ರವರೆಗೆ ಇಪ್ಪತ್ತೈದು ದಿನಗಳ ಕಾಲ ಕಠಿಣ ತಾಲೀಮು ನಡೆಸಬೇಕಾಗುತ್ತದೆ.ಬೆಳಗಿನ ಜಾವ ಎರಡು ಗಂಟೆಗೆ ಎದ್ದು,ಮೂರು ಗಂಟೆಯಿಂದ ರಾಜಪಥ್ ನ ರಾಜಬೀದಿಯಲ್ಲಿ ಬೆಳಗಿನ ಹತ್ತು ಗಂಟೆಯ ವರೆಗೆ 6 ರಿಂದ 12 ಡಿಗ್ರಿ ಸೆಲ್ಸಿಯಸ್ ನಷ್ಟು ಮೈ ಕೊರೆಯುವ ಚಳಿಯಲ್ಲಿ ಪರೇಡ್ ಪ್ರಾಕ್ಟೀಸ್ ಮಾಡಬೇಕಾಗುತ್ತದೆ.ಅದು ಎಷ್ಟು ಕಠಿಣ ಪ್ರಾಕ್ಟೀಸ್ ಎಂದರೆ ಆ ಕೊರೆಯುವ ಚಳಿಯಲ್ಲಿಯೂ ಮೈಯಲ್ಲಿ ಬೆವರು ಇಳಿಯುವಷ್ಟು ಕಠಿಣವಾಗಿರುತ್ತದೆ.ಮತ್ತೆ ಸಂಜೆ ನಾಲ್ಕರಿಂದ ಏಳು ಗಂಟೆಗಳ ವರೆಗೆ ಪರೇಡ್ ಪ್ರಾಕ್ಟೀಸ್,ಎಂಟರಿಂದ ಒಂಬತ್ತು ಗಂಟೆಗಳವರೆಗೆ ಸಾಂಸ್ಕೃತಿಕ ಕಲೆಗಳ ಅಭ್ಯಾಸ,ಪ್ರದರ್ಶನ ಮತ್ತು ದೇಶದ ಬೇರೆ ಬೇರೆ ಮೂಲೆಗಳಿಂದ ಬಂದ ವಿದ್ಯಾರ್ಥಿಗಳ ಸಾಂಪ್ರದಾಯಿಕ,ಸಾಂಸ್ಕೃತಿಕ ಕಲೆಗಳ,ಪ್ರತಿಭೆಗಳ ಅನಾವರಣ ಮತ್ತು ವಿನಿಮಯ ಇರುತ್ತದೆ.
 
 
ಸ್ಮಿತಾರವರು ಕೇವಲ ಪರೇಡ್ ನಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಪ್ರಧಾನಮಂತ್ರಿಗಳ ನಿವಾಸದಲ್ಲಿ,ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜೀಯವರ ಸಮಕ್ಷಮದಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೂ ಆಯ್ಕೆಯಾದರು.ಪರೇಡ್ ನಲ್ಲಿ ಭಾಗವಹಿಸಿದ ಇನ್ನೂರು ವಿದ್ಯಾರ್ಥಿಗಳಲ್ಲಿ ಕೇವಲ ಹದಿನೈದು ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ ದೊರೆಯಿತು.ಸ್ಮಿತಾರವರು ನಮ್ಮ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದ ಬಡಗುತಿಟ್ಟು ಶೈಲಿಯನ್ನು ಪ್ರಧಾನಮಂತ್ರಿಗಳ ಎದುರು ಪ್ರದರ್ಶಿಸಿ ಗಮನ ಸೆಳೆದರು.
 
 
ಈ ರೀತಿಯಲ್ಲಿ ಅಪೂರ್ವ ಸಾಧನೆ ಮಾಡಿದ ಭಂಡಾರಿ ಸಮಾಜದ ಹೆಣ್ಣು ಕುಮಾರಿ ಸ್ಮಿತಾ ಶ್ರೀನಿವಾಸ್ ಭಂಡಾರಿಯವರನ್ನು ಅಭಿನಂದಿಸಲು “ಭಂಡಾರಿವಾರ್ತೆ” ಅವರಿಗೆ ಕರೆ ಮಾಡಿದಾಗ ನಮ್ಮೊಂದಿಗೆ ಸಂತೋಷದಿಂದ ಮಾತನಾಡಿದರು.
 
ಭಂ : ಅಭಿನಂದನೆಗಳು ಸ್ಮಿತಾರವರೇ..
 
ಸ್ಮಿತಾ : ಧನ್ಯವಾದಗಳು ಸರ್.
 
ಭಂ : ಸ್ಮಿತಾರವರೆ…ನಿಮ್ಮ ಕುಟುಂಬದ ಬಗ್ಗೆ ಸ್ವಲ್ಪ ಹೇಳಿ.
 
ಸ್ಮಿತಾ : ನನ್ನ ಹುಟ್ಟೂರು ಮಲ್ಪೆ, ವಡಭಾಂಡೇಶ್ವರ. ನನ್ನ ತಂದೆ ದಿವಂಗತ ಶ್ರೀನಿವಾಸ ಭಂಡಾರಿಯವರು, ಮಲ್ಪೆ ಭಂಡಾರಿ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ, ಬಂಧು ಬಾಂಧವರಲ್ಲಿ ಚಿರಪರಿಚಿತರಾಗಿದ್ದ ಅವರು ನಾನು ಏಳನೇ ತರಗತಿಯಲ್ಲಿ ಓದುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದರು. ನನ್ನ ತಾಯಿ ಸುಮನಾ ಶ್ರೀನಿವಾಸ್ ಭಂಡಾರಿ.ಅವರು ಮೂಲತಃ ಹೆಬ್ರಿಯ ಕಲ್ತೂರಿನವರು.
 
 
ಭಂ : ವಿದ್ಯಾಭ್ಯಾಸ…
 
ಸ್ಮಿತಾ : ನಾನೀಗ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಕಾಂ ಎರಡನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.
 
ಭಂ : ಇತರೆ ಹವ್ಯಾಸಗಳು…
 
ಸ್ಮಿತಾ : ನಾನು ಹತ್ತನೇ ವಯಸ್ಸಿನಿಂದಲೂ ಯಕ್ಷಗಾನ ಕಲೆಯನ್ನು ಅಭ್ಯಸಿಸಿಕೊಂಡು ಬಂದಿದ್ದೇನೆ.ದುಗ್ಗಪ್ಪ ಮಾಸ್ಟರ್ ನನ್ನ ಮೊದಲ ಗುರುಗಳು.ನಂತರ ಜಯಂತ್ ತೋನ್ಸೆ,ಬನ್ನಂಜೆ ಸಂಜೀವ ಸುವರ್ಣ,ಶೈಲೇಶ್,ನಿತೇಶ್ ಮೊದಲಾದ ಗುರುಗಳಿಂದ ಯಕ್ಷಗಾನದ ಹಲವು ಪಟ್ಟುಗಳನ್ನು ಕಲಿತುಕೊಂಡಿದ್ದೇನೆ.ಮಣಿಪಾಲದ ಇಂದ್ರಾಳಿಯಲ್ಲಿರುವ ಯಕ್ಷಗಾನ ಕಲಾ ಕೇಂದ್ರದಲ್ಲಿ ದೇಶ ವಿದೇಶದ ವಿದ್ಯಾರ್ಥಿಗಳೊಂದಿಗೆ ಯಕ್ಷಗಾನ ಕಲೆಯನ್ನು ಕಲಿತುಕೊಂಡು ಹಲವಾರು ಪ್ರದರ್ಶನಗಳನ್ನೂ ನೀಡಿದ್ದೇನೆ.
 
 
ನಾಟಕ ಅಭಿನಯದಲ್ಲಿಯೂ ಆಸಕ್ತಿಯನ್ನು ಹೊಂದಿರುವ ನಾನು ಪ್ರಸಿದ್ಧ ರಂಗ ತಂಡಗಳಾದ ಸುಮನಸ ಕೊಡವೂರು ಮತ್ತು  ಸಂಗಮ ಕಲಾವಿದೆರ್ ಮಣಿಪಾಲ ತಂಡಗಳೊಂದಿಗೆ ಗುರುತಿಸಿಕೊಂಡಿದ್ದೇನೆ.ಹೈಸ್ಕೂಲು ದಿನಗಳಲ್ಲಿಯೇ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಆರಂಭಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಹಂತವನ್ನು ಪೂರೈಸಿ ಕೊಂಡಿರುವುದರಿಂದ ರಂಗ ಗೀತೆಗಳನ್ನು ಹಾಡುತ್ತಾ ನಾಟಕ ಕ್ಷೇತ್ರವನ್ನು ಪ್ರವೇಶಿಸಿದೆ.ರಂಗ ತಂಡಗಳೊಂದಿಗೆ ಸೇರಿ ಹಲವಾರು ನಾಟಕ ಪ್ರದರ್ಶನಗಳನ್ನು ನೀಡಿದ್ದೇನೆ.ಕಾಲೇಜಿನ ನಾಟಕ ಸ್ಪರ್ಧೆಗಳಲ್ಲಿ ಅಭಿನಯಿಸಿ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದೇನೆ.ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿ ಬರುವ ರಂಗತಂಡಗಳ ನಾಟಕಗಳ ಪ್ರದರ್ಶನದ ಸಲುವಾಗಿ ದೆಹಲಿಯಲ್ಲಿ ಏರ್ಪಡಿಸಲಾಗುವ ನಾಟಕ ಪ್ರದರ್ಶನದ ಉತ್ಸವ “ಭಾರತ್ ರಂಗ್ ಮಹೋತ್ಸವ್” ದಲ್ಲಿ ಭಾಗವಹಿಸಲು ಅವಕಾಶ ಪಡೆದ ಸಂಗಮ್ ಕಲಾವಿದೇರ್ ತಂಡದೊಂದಿಗೆ ತೆರಳಿ ದೆಹಲಿಯಲ್ಲಿ ನಾಟಕ ಪ್ರದರ್ಶನ ನೀಡಿದ್ದೇನೆ.
 
ಚಿತ್ರಕಲೆ ಮತ್ತು ವರ್ಣ ಕಲೆಗಳಲ್ಲಿಯೂ ಆಸಕ್ತಿ ಇರುವ ನಾನು ದಕ್ಷಿಣ ಕನ್ನಡದ ಪ್ರಸಿದ್ಧ ಗಣಪತಿ ಮೂರ್ತಿಗಳ ತಯಾರಕರಾದ ಉಡುಪಿಯ ಭಾಸ್ಕರ್ ಕೋಟ್ಯಾನ್ ರವರ ಬಳಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದೇನೆ.ನೃತ್ಯದಲ್ಲಿಯೂ ಅಭಿರುಚಿ ಹೊಂದಿರುವ ನಾನು ಶಾಲಾ ದಿನಗಳಲ್ಲಿ ವಾಲಿಬಾಲ್ ಆಟಗಾರ್ತಿಯಾಗಿ ಗಮನ ಸೆಳೆದಿದ್ದು ಉಂಟು.ಈ ಎಲ್ಲ ಹವ್ಯಾಸ,ಅಭಿರುಚಿಗಳ ನಡುವೆಯೂ ಓದಿನಲ್ಲಿಯೂ ಗಮನಾರ್ಹ ಸಾಧನೆಯನ್ನೇ ಮಾಡಿದ್ದೇನೆ.ಈಗಲೂ ನಾನು ಕಾಲೇಜಿನ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವುದಕ್ಕೆ ನನ್ನ ತಾಯಿಯ ಪ್ರೋತ್ಸಾಹ,ಬೆಂಬಲ ಕಾರಣವೆಂದರೆ ಅತಿಶಯೋಕ್ತಿಯೇನಲ್ಲ. 
 
 
ಭಂ : ನಿಮ್ಮ ಈ ಎಲ್ಲ ಸಾಧನೆಯ ಬಗ್ಗೆ ನಿಮ್ಮ ಒಟ್ಟಾರೆ ಅಭಿಪ್ರಾಯವೇನು?
 
ಸ್ಮಿತಾ : ಅವಕಾಶ ಎನ್ನುವುದು ಆಕಾಶಕ್ಕಿಂತ ವಿಶಾಲವಾದದ್ದು. ಕಲಿಯುವ ಅವಕಾಶ ದೊರೆತಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನನ್ನ ತಂದೆ,ತಾಯಿ ನನಗೆ ಬೆಂಬಲವಾಗಿ ಪ್ರೋತ್ಸಾಹ ನೀಡಿಕೊಂಡು ಬಂದಿರುವುದರಿಂದ ಈ ಅಲ್ಪ ವಿದ್ಯೆಯನ್ನು ಕಲಿಯಲು ಸಾಧ್ಯವಾಯಿತು.ಆದ್ದರಿಂದ ನಾನು ಅವರಿಗೆ ಎಂದೆಂದಿಗೂ ಚಿರರುಣಿಯಾಗಿರುತ್ತೇನೆ.
 
ಭಂ : ಕೊನೆಯದಾಗಿ ನಿಮ್ಮ ಅನಿಸಿಕೆ…
 
ಸ್ಮಿತಾ :  ನೋಡಿ…ಭಾರತ ದೇಶದ ರಾಜಧಾನಿಯಾದ ದೆಹಲಿಯ ಕೆಂಪು ಕೋಟೆಯ ರಾಜಪಥ್ ನಲ್ಲಿ ಪ್ರವೇಶಿಸುವ ಅವಕಾಶ ಭಾರತದ ಸೈನಿಕರಿಗೆ,ಭಾರತ ಸರ್ಕಾರದ ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಸಿಗುತ್ತದೆ.ನಾವು ಎನ್ಎಸ್ಎಸ್ ಸ್ವಯಂ ಸೇವಕರಾಗಿರುವುದರಿಂದ ರಾಜಪಥ್ ಪ್ರವೇಶಿಸಿ,ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶವೂ ದೊರೆಯಿತು. ರಾಷ್ಟ್ರಪತಿಗಳ,ಪ್ರಧಾನ ಮಂತ್ರಿಗಳ ಎದುರು ಪರೇಡ್ ನಲ್ಲಿ ಭಾಗವಹಿಸಿ, ಸೆಲ್ಯೂಟ್ ಡೆಸ್ಕ್ ನಲ್ಲಿ ಭಾಗವಹಿಸಿ, ಇಂಡಿಯಾಗೇಟ್ ವರೆಗೆ ಪಥ ಸಂಚಲನ ಮಾಡಿ ನ್ಯಾಷನಲ್ ಸಲ್ಯೂಟ್ ನೀಡುವ ಗೌರವಯುತವಾದ ಅವಕಾಶ ನಮಗೆ ದೊರೆತಿರುವುದಕ್ಕೆ ಹೆಮ್ಮೆಯೆನಿಸುತ್ತದೆ.ಅಂತಹ ರೋಮಾಂಚಕ ಗಳಿಗೆಯಲ್ಲಿ ನಮ್ಮ ಕಣ್ಣಾಲಿಗಳು ಆನಂದ ಬಾಷ್ಪಗಳಿಂದ ತುಂಬಿಕೊಳ್ಳುವ ಆ ಕ್ಷಣ ನಮಗೆಲ್ಲ ಅತ್ಯಂತ ಹೆಮ್ಮೆಯ ಕ್ಷಣ.ಇಂತಹ ಅವಕಾಶವನ್ನು ಮಾಡಿಕೊಟ್ಟ ನನ್ನ ತಂದೆ ತಾಯಿ,ಗುರುಗಳು,ನಮ್ಮ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನನ್ನ ಸಹಪಾಠಿಗಳು ಎಲ್ಲರನ್ನೂ ನಾನು ಈ ಕ್ಷಣದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ.ಧನ್ಯವಾದಗಳು ಎಲ್ಲರಿಗೂ.
 
 
 
ಭಂ : ಧನ್ಯವಾದಗಳು ಸ್ಮಿತಾರವರೇ… ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಕಳೆದದ್ದಕ್ಕಾಗಿ.
 
ಸ್ಮಿತಾ :  ಧನ್ಯವಾದಗಳು ಸರ್…ನಿಮ್ಮ ಪ್ರೋತ್ಸಾಹ,ಸಹಕಾರ ನಮ್ಮಂತಹ ಕಿರಿಯರ ಮೇಲೆ ಹೀಗೆ ಇರಲಿ. ಧನ್ಯವಾದಗಳು ಮತ್ತೊಮ್ಮೆ. 
 
 
 
 
ನೋಡಿದಿರಲ್ಲ ಬಂಧುಗಳೇ… ಕೇವಲ ಇಪ್ಪತ್ತರ ಹರೆಯದಲ್ಲಿಯೇ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿರುವ ಸ್ಮಿತಾ ಭಂಡಾರಿಯವರ ಜೀವನದ ಮೈಲುಗಲ್ಲುಗಳನ್ನು. ನೃತ್ಯ, ನಾಟಕ, ಕ್ರೀಡೆ, ಯಕ್ಷಗಾನ, ಶಾಸ್ತ್ರೀಯ ಸಂಗೀತ, ಎನ್ಎಸ್ಎಸ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ನಮ್ಮ ಸಮಾಜದ ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿರುವ ಸ್ಮಿತಾ ಭಂಡಾರಿಯವರ ಈ ಸಾಧನೆ ಸಾಮಾನ್ಯವಾದುದಲ್ಲ. ಕಿರಿಯ ವಯಸ್ಸಿನಲ್ಲಿಯೇ ಅಮೋಘ ಸಾಧನೆ ಮಾಡಿರುವ ಸ್ಮಿತಾ ಭಂಡಾರಿಯವರು ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡಿ ಭಂಡಾರಿ ಸಮಾಜದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿ ವಾರ್ತೆ”ಯ ಹೃದಯಪೂರ್ವಕ ಶುಭ ಹಾರೈಕೆಗಳು.
 
“ಭಂಡಾರಿ ವಾರ್ತೆ.”
 
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *