ಉಡುಪಿ ತಾಲೂಕು ಕುತ್ಯಾರು ಶ್ರೀ ಪರಶುರಾಮೇಶ್ವರ ಕ್ಷೇತ್ರದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಭಂಡಾರಿ ಸಮಾಜದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರವು ಫೆಬ್ರವರಿ 21 ರ ಮಹಾಶಿವರಾತ್ರಿಯ ಶುಭದಿನ ಶುಕ್ರವಾದಂದು ನಡೆಯಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ಸೂರ್ಯೋದಯ ಯೋಗ , ಸೂರ್ಯ ನಮಸ್ಕಾರ ನಡೆಯಿತು ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು ಹಾಗೂ ಭಕ್ತರಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ನಡೆಯಿತು.
ಶಿವ ಪ್ರಸಾದ ಭೋಜನದ ನಂತರ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣದ ವ್ಯಾಮೋಹದಿಂದಾಗಿ ಶಂಭುದಾಸ ಗುರೂಜಿ ಕುತ್ಯಾರಿನಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಕಡಿಮೆ ಶುಲ್ಕದಿಂದ ನಡೆಸುತ್ತಿರುವ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗೆ ಉಜ್ವಲವಾದ ಭವಿಷ್ಯ ಇರಲಿ ಎಂದು ಹಾರೈಸಿದರು.
ಮನೆ ಭಾಷೆ ತುಳು, ರಾಜ್ಯ ಭಾಷೆ ಕನ್ನಡ , ರಾಷ್ಟ್ರ ಭಾಷೆ ಹಿಂದಿ. ಸಂಪರ್ಕ ಭಾಷೆ ಇಂಗ್ಲಿಷ್ ಇದರ ಅಗತ್ಯತೆ ಇದೆ. ಇಂಗ್ಲೀಷ್ ಭಾಷೆಯ ಅರಿವು ಸರಿಯಾಗಿ ಬಾರದೆ ಇರುವುದರಿಂದ ಉದ್ಯೋಗದ ಸಂದರ್ಶನದ ಸಂದರ್ಭದಲ್ಲಿ ಉತ್ತೀರ್ಣರಾಗದಿರುವ ಸನ್ನಿವೇಶ ಕೂಡ ಇದೆ ಎಂದು ಶಾಸಕರು ಹೇಳಿದರು .
ಭಂಡಾರಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿ ವೈದ್ಯಕೀಯ ಪದವಿ ಪಡೆದ ಡಾ॥ ಕು॥ ನಿಧಿ ಶಿರಾಳಕೊಪ್ಪ , ಸಂಶೋಧನಾ ಕ್ಷೇತ್ರದಿಂದ ಡಾ॥ ಶ್ರೀಮತಿ ಶ್ರುತಿ ಸುಭಾಶ್ಚಂದ್ರ ಮೂಡಿಗೆರೆ , (ಪರವಾಗಿ ಶ್ರೀ ಷಣ್ಮುಖಾನಂದ ಭಂಡಾರಿ ಮೂಡಿಗೆರೆ ಮತ್ತು ಶ್ರೀಮತಿ ವನಿತಾ ) ಕು॥ ಪ್ರಿಯದರ್ಶಿನಿ ಕೊಲ್ಲೂರು , ಪ್ರೊ॥ ಶ್ರೀ ಪ್ರವೀಣ್ ಭಂಡಾರಿ ಮೂಡಬಿದ್ರೆ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಪೆರೇಡ್ ಮಾಡಿದ ಕು॥ ಸ್ಮಿತಾ ಎಸ್ ಭಂಡಾರಿ ಮಲ್ಪೆ , ಸಿ.ಎ.ಪದವಿ ಮುಗಿಸಿದ ಕು॥ ಸಹನಾ ಎಸ್. ಕಾರ್ಕಳ ,ಕವಯಿತ್ರಿ- ಸಾಹಿತಿ ಶ್ರೀಮತಿ ನಾಗಶ್ರೀ ಸಂತೋಷ ಭಂಡಾರಿ ನಾಗರಕಟ್ಟೆ, ಇವರುಗಳನ್ನು ಸನ್ಮಾನಿಸಲಾಯಿತು .
ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರಿ ವಾರ್ತೆಯ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪ್ರಕಾಶ್ ಭಂಡಾರಿ ಕಟ್ಲ ಮಾತನಾಡುತ್ತಾ ಕಳೆದ ಮೂರು ನಾಲ್ಕು ವರ್ಷಗಳಿಂದ ಭಂಡಾರಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರು ನೂರಾರು ಮಂದಿ ಇದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಭಂಡಾರಿ ಸಮಾಜದ ಸಾಧಕರಿಗೆ ಭಂಡಾರಿ ವಾರ್ತೆ ಸದಾ ಪ್ರೋತ್ಸಾಹ ನೀಡುತ್ತದೆ, ಮುಂದಿನ 2025 ಇಸವಿಯ ಯ ಒಳಗೆ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯಿಂದ ಸಾಧನೆ ಮಾಡಿದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಬಂದು ಶ್ರೀ ಶಂಭುದಾಸ್ ಗುರೂಜಿ ಮತ್ತು ಶ್ರೀಮತಿ ಶಾರದಾ ಅಕ್ಕ ನವರ ಕನಸು ಈಡೇರಿಸಲಿ ಎಂದು ಶುಭ ಹಾರೈಸಿದರು.
ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಧೀರಜ್ ಶೆಟ್ಟಿ, ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಶ್ರೀ ಶಂಭುದಾಸ ಗುರೂಜಿ, ಪ್ರಾಂಶುಪಾಲರಾದ ಶ್ರೀ ಗುರುದತ್ತ ಸೊಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಕುತ್ಯಾರು ಸ್ವಾಗತಿಸಿ, ಕು॥ ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ಸಂಸ್ಕೃತ ಶಿಕ್ಷಕಿ ಶ್ರೀಮತಿ ಚೇತನ ಧನ್ಯವಾದವಿತ್ತರು.
ಸಾಧಕರನ್ನು ಸನ್ಮಾನಿಸಿ, ಗೌರವಿಸಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಮತ್ತು ಸಾಧಕರಿಗೆ ಭಂಡಾರಿ ಸಮಾಜದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.
-ಭಂಡಾರಿ ವಾರ್ತೆ