ಕೀಳೂರು ಬಹಳವಾದ ಜನನಿಬಿಡವಾದ ಊರು, ಬಹಳಷ್ಟು ಜಾತಿ, ಧರ್ಮದ ಜನಗಳು ಈ ಊರಿನಲ್ಲಿ ವಾಸವಿದ್ದರು. ಅದರಲ್ಲಿ ಮೆಟ್ಟಪ್ಪನೆನ್ನುವ ಕ್ಷೌರಿಕನೂ ಒಬ್ಬ. ತನ್ನದೇ ಊರಿನಲ್ಲಿ ತನ್ನದೇ ಕುಲಕಸುಬು ಮಾಡಿಕೊಂಡ ತನ್ನದೇ ಜಾತಿಯ ಹಲವು ಮನೆಗಳನ್ನು ನೆಂಟರಿಷ್ಟರೂ ಇದ್ದರು. ಅಲ್ಲೇ ಬಂದು ನೆಲೆನಿಂತು ಕವಲೊಡೆದ ಕುಟುಂಬಗಳವು. ಮನೆ ಮನೆಗೆ ಹೋಗಿ ಕ್ಷೌರ ಮಾಡುವ ಕಾಯಕ, ವಿಶೇಷವೆಂದರೆ ಒಂದೊಂದು ಕುಟುಂಬದವರಿಗೂ ಒಂದೊಂದು ಊರು, ಒಂದು ಕುಟುಂಬ ಹಂಚಿಕೊಂಡ ಊರುಗಳಿಗೆ ಕ್ಷೌರಕ್ಕೆ ಇನ್ನೊಂದು ಕುಟುಂಬ ಹೋಗುತ್ತಿರಲಿಲ್ಲ. ಸಹಜವಾಗಿಯೇ ಅವನ ಜಾತಿಯವರು ಸೇರಬೇಕೆಂದರೆ ಗಂಡಸರಿಗೆ ಅಲ್ಲಿನ ಶರಾಬು ಅಂಗಡಿ, ಉಳಿದಂತೆ ಹಬ್ಬ ಹರಿದಿನಗಳು, ಮದುವೆ ಇತ್ಯಾದಿ ಕಾರ್ಯಕ್ರಮಗಳೇ ಆಗಿತ್ತು.
ಕೆಳವರ್ಗ, ಮಧ್ಯಮ ಮತ್ತು ಉತ್ತಮ ವರ್ಗದವರಿಗೆಂದೆ ಕ್ಷೌರಿಕರು ಇರುತ್ತಿದ್ದರು. ಇದು ನಿಧಾನವಾಗಿ ಕ್ಷೌರಿಕರಲ್ಲಿಯೇ ಉತ್ತಮ, ಮಧ್ಯಮ, ಕೆಳವರ್ಗದ ಕವಲುಗಳಾಗಿ ವಿಂಗಡನೆ ಆಗಲು ಪ್ರಾರಂಭವಾಯಿತು. ಕ್ಷೌರಿಕರಲ್ಲಿನ ಕಾಯಕದ ಒಗ್ಗಟ್ಟು ಜಾತಿಯೊಳಗಿನ ಜಾತಿಯಿಂದಾಗಿ ಬಿಕ್ಕಟ್ಟಾಗಲು ಪ್ರಾರಂಭವಾಯಿತು. ಊರಿನಲ್ಲಿ ಇರುವುದೇ ಒಂದೆರಡು ಮನೆ ಅದರಲ್ಲಿಯೇ ಮೇಲುಕೀಳೆಂಬ ತಾತ್ಸಾರ ಇನ್ನಷ್ಟು ಕಗ್ಗಂಟಾಯಿತು.
ಅದಲ್ಲದೇ ಊರಿನಲ್ಲಿ ಕೆಳವರ್ಗದವರಾಗಿ ಗುರುತಿಸಿಕೊಂಡಿದ್ದ ಕ್ಷೌರಿಕ ವರ್ಗದ ಮೆಟ್ಟಪ್ಪನಿಗೆ ಊರಿನಲ್ಲಿ ತನ್ನವರಿಗೆ ಕೆಳವರ್ಗದವರೆಂದು ಮೇಲ್ವರ್ಗದವರು ನೀಡುತ್ತಿದ್ದ ಭೇದ-ಭಾವದ ನೀತಿ ಮಾನಸಿಕವಾಗಿ ಆಗುತ್ತಿದ್ದ ಹಿಂಸೆಯಿಂದ ಇನ್ನಷ್ಟು ಕುಸಿದು ಹೋಗಿದ್ದನು. ದುಡಿಮೆಯೂ ಗಂಜಿಗೆ ಸಾಕಾಗುತ್ತಿರಲಿಲ್ಲ, ಜೊತೆಗೆ ವರ್ಗ ಶೋಷಣೆ ಇವನನ್ನು ಇನ್ನಷ್ಟು ಕುಗ್ಗಿಸಿಬಿಟ್ಟಿತ್ತು. ಹೋರಾಟ ಮನೋಭಾವದ ಮೆಟ್ಟಪ್ಪ ಯವ್ವನದ ಹುರುಪಿನಲ್ಲಿ ಅದೆಷ್ಟೋ ಮಂದಿ ಮೇಲ್ವರ್ಗದ ಜನರ ವಿರುದ್ದ ತಿರುಗಿಬಿದ್ದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕುಸಿದು ಹೋಗಿದ್ದನು. ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗಿ ಬಹಿಷ್ಕಾರ ಪಡೆದುದಕ್ಕಿಂತಲೂ ತನ್ನವರೇ ತನ್ನೊಂದಿಗೆ ಕೈ ಜೋಡಿಸದೆ ಮೇಲ್ವರ್ಗದವರ ಜೊತೆಗೆ ನಿಂತು, ತಮ್ಮ ಮೇಲೆ ತಾವೇ ಚಪ್ಪಡಿಕಲ್ಲು ಹಾಕಿಕೊಂಡಿದ್ದು ತನಗಾಗುತ್ತಿರುವ ಹಿಂಸೆಗಿಂತ ಭಯಾನಕವಾಗಿ ಕಾಡಿತ್ತು. ಮುಖ್ಯವಾಗಿ ಒಡೆದ ಪಂಗಡಗಳಲ್ಲಿ ಇಲ್ಲದ ಒಗ್ಗಟ್ಟಿನ ಕೊರತೆ ಮತ್ತು ಶೋಷಿತರಾಗಿಯೇ ಹೊಂದಿಕೊಂಡು ಅಭ್ಯಾಸವಾದ ಅವರ ಜೀವನವನ್ನು ಸರಿಪಡಿಸುವುದು ಹೇಗೆಂಬ ಚಿಂತೆ ಸದಾ ಕಾಡುತಿತ್ತು.
ಯವ್ವನದ ಹುರುಪು ಕಳೆದಿತ್ತು, ಕುಟುಂಬದ ಚಿಂತೆ ಕಾಡಿತ್ತು. ಹೊಟ್ಟೆಪಾಡಿನ ಹೊಡೆತ, ಬದಲಾಗದ ತನ್ನವರೊಂದಿಗೆ ಮೊದಲಿನಂತೆ ಒಗ್ಗಿಕೊಂಡು ಹೋಗುವುದು ಅನಿವಾರ್ಯವಾಗಿಬಿಟ್ಟಿತ್ತು. ಹಾರಾಡಿ ರೆಕ್ಕೆ ಕಳೆದು ಮುದುಡಿ ಜೀವನ ಸಾಗಿಸುತ್ತಿದ್ದ ಮೆಟ್ಟಪ್ಪನ ಕಂಡು ತನ್ನವರೇ ” ನೋಡಿದ್ಯಾ ದೊಡ್ಡವರ ಕೋಪಕ್ಕೆ ಗುರಿಯಾದರೇ ಹೀಗೆ ಆಗುವುದು, ಆಗಲೇ ಬುದ್ದಿ ಹೇಳಿದ್ದನ್ನು ಕೇಳಲಿಲ್ಲ, ಅದೇನೋ ಮಾಡುತ್ತೇನೆ ಎಂದು ಹೋಗಿ ಏನಾಯಿತು ನಿನ್ನ ಕಥೆ ?! ನಮಗೂ ಹೀಗೆ ಆಗಬೇಕಿತ್ತಾ!! ಹೇಳಿದರೆ ಬುದ್ದಿ ಬರಲಿಲ್ಲ, ಅವರೊಂದಿಗಿನ ವಿರೋಧ ಬೆಂಕಿ ಕೆಂಡ ಮೈ ಮೇಲೆ ಸುರಿದುಕೊಂಡಂತೆ” ಎಂದು ವಿಧ ವಿಧವಾಗಿ ಬುದ್ದಿ ಹೇಳುವದನ್ನು ಕೇಳಿ ನಕ್ಕುಬಿಡುವುದು ಅಭ್ಯಾಸವಾಗಿಬಿಟ್ಟಿತ್ತು.
ವಯಸ್ಸು ಮಾಗಿತ್ತು, ಮೆಟ್ಟಪ್ಪನ ಹಾರಾಟದ ಕತೆಯೂ ಊರಿನಲ್ಲಿ ಮೂಲೆಗುಂಪು ಸೇರಿ ಮರೆಯಾಗಿತ್ತು. ಮಳೆಗಾಲ ಹಿಡಿಯುವ ಸಮಯ ಕಟ್ಟಿಗೆಯ ಸೇರಿಸಲೆಂದು ಬೆಟ್ಟದೆಡೆಗೆ ಕತ್ತಿ, ಬಳ್ಳಿಯ ಹಿಡಿದು ಹೊರಟ. ದಟ್ಟವಾದ ಕಾಡು ಸದಾ ಇವನು ಹೋಗುತ್ತಿದ್ದ ಕಾಡು ಮಧ್ಯದ ದಾರಿಯಲ್ಲಿನ ಒಂದು ಕಲ್ಲು ಯಾವಾಗಲೂ ಇವನ ಮನವನ್ನು ಸೂಜಿಗದಂತೆ ಸೆಳೆಯುತಿತ್ತು. ಅದನ್ನೇ ನೋಡುತ್ತಾ ಹೋದವನು, ಕಟ್ಟಿಗೆ ಹೊತ್ತು ಬರುವಾಗಲೂ ಅದನ್ನೇ ದಿಟ್ಟಿಸುತ್ತಾ ಬಂದನು.
ಕೆಲದಿನಗಳ ನಂತರ, ಊರೆಲ್ಲಾ ತನಗೊಂದು ಕನಸು ಬಿದ್ದ ಹಾಗೆ ಕನಸಲ್ಲಿ ಬಂದ ಧರಣೀಶ್ವರ ದೇವರು “ತಾನು ದರಲೆಯ ರಾಶಿಯಲ್ಲಿ ಹೂತು ಹೋಗಿದ್ದು, ಅಲ್ಲಿಂದ ತನ್ನನ್ನು ಹೊರತೆಗೆದು ನನಗೆ ಪೂಜೆ ನೆಡೆಸಿಕೊಡುವಂತೆ ಹೇಳಿತು” ಎಂದು ಸಾರಿದನು. ಬ್ರಾಹ್ಮಣೋತ್ತಮರ ಬಳಿ ತನ್ನ ಕನಸನ್ನು ಹೇಳಿದನು. ಊರೆಲ್ಲಾ ಹಬ್ಬಿದ ಸುದ್ದಿ ಸತ್ಯಾಸತ್ಯತೆ ತಿಳಿಯಲು ಊರಿನ ಹತ್ತು ಮಂದಿಯನ್ನು ಸೇರಿಸಿ ಕಾಡಿನ ದಾರಿಯನ್ನು ಹಿಡಿದರು.
ಕನಸಲ್ಲಿ ದೇವರು ಹೇಳಿದ ಜಾಡನ್ನು ಹಿಡಿದು ಹೊರಟ ಅವರಿಗೆ ಆ ಸ್ಥಳದಲ್ಲಿ ಆಳೆತ್ತರದ ದರಲೆಯ ರಾಶಿ ಕಂಡಿತು. ಎಲ್ಲರೂ ಆಶ್ಚರ್ಯಗೊಂಡು ದರಲೆಯನ್ನು ಸರಿಸಲಾರಂಭಿಸಿದರು. ಒಂದಷ್ಟು ಹುಳ- ಹಪ್ಪಟೆಗಳು, ಹಾವುಗಳೂ ಸಿಕ್ಕಿದವು. ಪೂರ್ತಿ ದರಲೆಯನ್ನು ಸರಿಸಿದ ಮೇಲೆ ಸಣ್ಣದೊಂದು ಹೊಳೆವ ಕಲ್ಲು, ಅದಕ್ಕಂಟಿದ ಅರಿಶಿಣ, ಕುಂಕುಮ, ಪಕ್ಕದಲ್ಲೇ ಇರುವ ಸಣ್ಣದೊಂದು ತ್ರಿಶೂಲ ಕಂಡ ಜನಗಳು ಭಕ್ತಿಪರವಶರಾದರು, ಕೈ ಮುಗಿದು ಉದ್ದಂಡ ನಮಸ್ಕಾರ ಮಾಡಿದರು. ತಕ್ಷಣದಲ್ಲಿಯೇ ಮೆಟ್ಟಪ್ಪನ ಮೇಲೆ ಧರಣೀಶ್ವರ ದೇವರು ಆವರಿಸಿಕೊಂಡಿತು, ತ್ರಿಶೂಲವನ್ನು ಕಿತ್ತು ಹಿಡಿದು ನರ್ತಿಸಿ, “ಇನ್ನು ಮುಂದೆ ತಾನು ಕೀಳೂರಿನ ಕ್ಷೌರಿಕರ ಕುಲದೇವರೆಂದು, ಅವರಿಂದ ಇನ್ನು ಮುಂದೆ ತನಗೆ ಪೂಜೆ ನೆರವೇರಬೆಕೆಂದು” ನುಡಿಯನ್ನು ಕೊಟ್ಟಿತು.
ಕೀಳೂರಿನ ಕ್ಷೌರಿಕರೆಲ್ಲಾ ಒಟ್ಟು ಗೂಡಿದರು, ಸಣ್ಣದಾದ ಹುಲ್ಲು ಹಾಸಿನ ಗುಡಿಯು ನಿರ್ಮಾಣವಾಯಿತು. ಧರಣೀಶ್ವರ ದೇವರು ಮೆಟ್ಟಪ್ಪನ ಮುಖಾಂತರ ಕ್ಷೌರಿಕರ ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿತು, ಭಯದ ಭಕ್ತಿಯಿಂದ ದುರಭ್ಯಾಸಗಳನ್ನು ಬಿಡಿಸಿತು. ಕ್ಷೌರಿಕರಲ್ಲಿನ ಒಡೆದ ಕವಲುಗಳನ್ನು ಒಂದುಗೂಡಿಸಿತು. ರೌದ್ರತೆಯ ಮೂಲಕ ತನ್ನ ಕುಲದವರ ಅವಮಾನಿಸಿದವರ ವಿರುದ್ದ ತಿರುಗಿಬೀಳುವಂತೆ ಮಾಡಿತು. ಕ್ಷೌರಿಕರು ಕಳೆದು ನರಳುತಿದ್ದ ಗೌರವವನ್ನು ತಕ್ಕಮಟ್ಟಿಗೆ ಮರಳಿಪಡೆಯುವಂತೆ ಮಾಡಿತು. ಕ್ಷೌರಿಕರು ಸಾಮಾಜಿಕವಾಗಿ, ಆರ್ಥಿಕವಾಗಿ ಒಂದು ಹಂತದಲ್ಲಿ ಬೆಳೆದರು. ಧರಣೀಶ್ವರನ ಭಕ್ತಿ, ಭಯ, ಪವಾಡಗಳು ಕ್ಷೌರಿಕರನ್ನಲ್ಲದೇ ಇನ್ನಷ್ಟು ಮಂದಿಯನ್ನು ಸೆಳೆಯಿತು.
ಮುಂದುವರೆಯುವುದು…..
- Vijay Nittur