ಕ್ಲಾಸ್ ಮುಗಿದ ಮೇಲೆ ಬಸ್ಸಿಗಾಗಿ ಬಸ್ ಸ್ಟಾಂಡ್ ನಲ್ಲಿ ನಿಂತವಳಿಗೆ ಕೇಳಿದ್ದು ಒಂದು ಮಗು ಅಳುವ ಶಬ್ದ. ಅ ಮಗುವಿನತ್ತ ಒಮ್ಮೆ ಕಣ್ಣಾಡಿಸಿದೆ .ಸುಮಾರು ಐದು ವರ್ಷದ ಅ ಹೆಣ್ಣು ಮಗು ತನ್ನ ತಾಯಿ ಬಳಿ ತುಂಬಾ ಹಠ ಮಾಡುತ್ತಿತ್ತು. ಸರಿಯಾಗಿ ಗಮನಿಸಿದ ನಂತರವೇ ನನಗೆ ತಿಳಿದದ್ದು ಅಣ್ಣನಿಗೆ ಕಟ್ಟಲು ರಾಖಿ ತೆಗೆದುಕೂಡು ಎಂದು ಅಮ್ಮನ ಬೆಂಬಿದ್ದಿದ್ದಳೆಂದು. ವಿಷಯ ಇಷ್ಟೇ ಆದರೂ ಒಂದೆರಡು ಕ್ಷಣ ಸ್ತಬ್ಧಗೊಳಿಸಿದ ಈ ಘಟನೆ ನನ್ನನ್ನು ಕರೆದೊಯ್ದದ್ದು ಕೆಲವು ವರ್ಷಗಳ ಹಿಂದೆ ನಡೆದ ಮರೆಯಲಾಗದ ಛಾಯೆಯ ಹತ್ತಿರ.
ಆಗಷ್ಟೇ ನಾನು ಪಿಯುಸಿಗೆ ನನ್ನ ಬಾಲ್ಯಸ್ನೇಹಿತೆಯೊಂದಿಗೆ ಕಾಲಿಟ್ಟಿದ್ದೆ. ಒಂಥರಾ ನನಗೆ ಹೊಸ ಪ್ರಪಂಚವೇ ಸರಿ. ದಿನ ಕಳೆದ ಹಾಗೆ ಅಪರಿಚಿತರು ಪರಿಚಿತರಾಗಿದ್ದರು. ಸಮಾಜಸೇವೆಯಲ್ಲಿ ಸ್ವಲ್ಪ ನನ್ನ ಆಸಕ್ತಿ ಹೆಚ್ಚೇ ಬಿಡಿ. ಹಾಗಾಗಿಯೇ ನಾನು ಎನ್.ಎಸ್.ಎಸ್ ಸೇರಿದ್ದು. ಪರೀಕ್ಷೆ ಮುಗಿದ ನಂತರ ರಜೆಯ ಸಮಯದಲ್ಲಿ ಎನ್.ಎಸ್.ಎಸ್ ಶಿಬಿರದಲ್ಲಿ ನಾನು ಪಾಲ್ಗೊಳ್ಳಲು ಇಚ್ಛೆ ಪಟ್ಟು ಅಮ್ಮನ ಕೈಕಾಲು ಹಿಡಿದು ಒಪ್ಪಿಸಿ ಶಿಬಿರಕ್ಕೆ ಧಾವಿಸಿಯೇ ಬಿಟ್ಟೆ. ಮನೆಯವರನ್ನು ಅದೇ ಮೊದಲ ಬಾರಿ ಬಿಟ್ಟು ಇದ್ದದ್ದು. ಶಿಬಿರಕ್ಕೆ ಬಂದವಳಿಗೆ ಸಂಜೆಯಾಗುತ್ತಿದ್ದಂತೆ ಮನೆನೆನಪು ತುಂಬಾ ಕಾಡುತ್ತಿತ್ತು. ಅಲ್ಲೇ ನೋಡಿ ಪರಿಚಯವಾದದ್ದು ಅ ವ್ಯಕ್ತಿ. ಗುಂಗುರು ಕೂದಲನ್ನು ಹೊಂದಿದ್ದ ಆತ ಬಹಳ ಮೃದು ಸ್ವಭಾವದವನು. ಮೊದಲ ದಿನ ಮುಖಾಮುಖಿಯಾಗಿದ್ದರೂ ಮರುದಿನದ ನಂತರವೇ ಮಾತಿಗಿಳಿದದ್ದು ನಾವು. ಆತನ ಬಾಯಲ್ಲಿ ಬಂದ ಮೊದಲ ಮಾತೇ “ಹಾಯ್ ತಂಗಿ” ಎಂದು ಒಮ್ಮೆ ಅಚ್ಚರಿಯಾದರೂ ಖುಷಿಯಾಯಿತು. ಬಹಳ ಮಂದಿ ಸೀನಿಯರ್ಸ್ ಗಳ ಪರಿಚಯವಾಗಿತ್ತು ಮಾತು ಬೆಳೆದಿತ್ತು. ಆದರೆ ಯಾರು ತಂಗಿ ಎಂದೇನೂ ಕರೆದಿರಲಿಲ್ಲ. ಆತನ ಮಾತು ಕೇಳಿ ತಕ್ಷಣ ನೆನಪಾದದ್ದು ಅಮ್ಮನ ಹತ್ರ ಆಗಾಗ ನಾನು ಹೇಳುತ್ತಿದ್ದ ವಾಕ್ಯ”ಅಮ್ಮ ನನಗೂ ಅಣ್ಣ ಇರಬೇಕಿತ್ತು”ಎಂದು. ಶಿಬಿರದಲ್ಲಿ ಮನೆಯ ನೆನಪೆ ಬರದಂತೆ ಸದಾ ಜೊತೆಗಿರುತ್ತಿದ್ದ. ಒಡಹುಟ್ಟಿದವರು ಮಾತ್ರ ಅಣ್ಣ ತಂಗಿಯಲ್ಲ ಅ ಭಾವನೆ ಹೊಂದಿದವರು ಸಹ ಸಹೋದರ ಸಹೋದರಿಯೇ ಎಂದು ಅರಿವಾದದ್ದು ನನಗೆ ಆತನೊಂದಿಗೆ ಬೆರೆತ ನಂತರವೇ. ಅವನ ಕಾಳಜಿ ನೋಡಿ ಕಾಲೇಜಲ್ಲಿ ನನ್ನನ್ನು ಆತನ ಸ್ವಂತ ತಂಗಿ ಎಂದೇ ಭಾವಿಸಿದ್ದರು.
ಅಣ್ಣ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕೆ ಹೋದ ನಂತರ ಎಲ್ಲವೂ ಬದಲಾಯಿತು. ನಮ್ಮ ಬಾಂಧವ್ಯಕ್ಕೆ ಯಾರ ದೃಷ್ಟಿ ಬಿತ್ತೋ ತಿಳಿಯಲಿಲ್ಲ. ಯಾವುದೋ ಕಾರಣದಿಂದ ನಮ್ಮಿಬ್ಬರ ನಡುವಿನ ಮಾತಿಗೆ ಬೀಗ ಬಿತ್ತು. ತದನಂತರ ನಾನು ಪಿಯುಸಿ ಮುಗಿಸಿ ಪದವಿಗೆ ಸೇರಿದೆ. ವಿಪರ್ಯಾಸವೆಂದರೆ ನಾನು ಸೇರಿದ ಕಾಲೇಜಿನಲ್ಲಿ ಯೇ ಅಣ್ಣ ಓದುತ್ತಿದ್ದ. ಅದೆಷ್ಟೋ ಸಲ ನಾವಿಬ್ಬರೂ ಎದುರೆದುರಾದರೂ ಒಂದು ನಗು ಸಹ ನಮ್ಮಿಬ್ಬರ ಮಧ್ಯೆ ಸುಳಿಯಲಿಲ್ಲ. ಅವನಿಗೆ ನಾನೇ ಮಾತಾನಿಡಿಸಬೇಕೆಂಬ ಎಂಬ ಹಠವೂ ಅಥವಾ ಮಾತಾನಾಡಬಾರದೆಂಬ ಶಪಥ ತಾಳಿದ್ದನೋ ಗೊತ್ತಿಲ್ಲ.ಇದನ್ನೆಲ್ಲವನ್ನೂ ಅರಿತ ನನ್ನ ಗೆಳತಿ ಅವನನ್ನು ಕಂಡರೆ ನೋಡೆ ಅಲ್ಲಿ ನಿನ್ನ ಅಣ್ಣ ಎಂದು ಹೇಳುತ್ತಿರುತ್ತಾಳೆ. ಸ್ವಲ್ಪ ಕಾಲದ ನಂತರ ನಮ್ಮ ನಡುವೆ ಮಾತು ಆರಂಭವಾಯಿತಾದರೂ ಅದು ಮೊದಲಿನಂತೆ ಇರಲಿಲ್ಲ.
ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವೇ ರಕ್ಷಾಬಂಧನ.ನನ್ನ ಬದುಕಿನಲ್ಲಿ ಸ್ವಲ್ಪ ಕಾಲ ಅಣ್ಣನ ಸ್ಥಾನ ತುಂಬಿದ ಆತ,ನಾನು ಕಟ್ಟುವ ರಾಖಿಗೆ ಸಂತೋಷದಿಂದ ಕೈ ನೀಡಿ ನನ್ನ ಇಷ್ಟದ ಚಾಕುಲೇಟು ಕೊಡುತ್ತಿದ್ದ ವ್ಯಕ್ತಿ, ಎಲ್ಲವನ್ನೂ ಮರೆತಂತೆ ನಟಿಸಿದರೂ ನೆನಪುಗಳು ಎಂದಿಗೂ ಶಾಶ್ವತ.
ಗ್ರೀಷ್ಮಾ ಭಂಡಾರಿ
ಅಂತಿಮ ಪತ್ರಿಕೋದ್ಯಮ ವಿಭಾಗ
ವಿ.ವಿ ಕಾಲೇಜು ಮಂಗಳೂರು