ಧರ್ಮಸ್ಥಳ, ನ.20: ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಸೈನರ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ|ಶಿವರಾಮ ಭಂಡಾರಿ ಅವರ ಜೀವನಗಾಥೆ `ಸ್ಟೈಲಿಂಗ್ ಅಟ್ ದ ಟಾಪ್’ ಕನ್ನಡ ಕೃತಿಯನ್ನು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ಬೀಡುನಲ್ಲಿ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿ ಶುಭನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಡಾ|ಶಿವರಾಮ ಭಂಡಾರಿ ಮುಂಬಯಿ, ಮೂಲ ಇಂಗ್ಲಿಷ್ ಕೃತಿಯ ಲೇಖಕಿ ಜಯಶ್ರೀ ಜಿ.ಶೆಟ್ಟಿ, ಕೃತಿಯ ಕನ್ನಡ ಅನುವಾದಕ ಶಿವಾನಂದ ಬೇಕಲ್, ರಾಷ್ಟ್ರೀಯ ಹಿರಿಮೆಯ ಪತ್ರಿಕಾ ಛಾಯಾಚಿತ್ರಕಾರ ಗೋಪಾಲ ಶೆಟ್ಟಿ, ಶ್ರೀ ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಕಡಂದಲೆ ಸುರೇಶ್ ಎಸ್. ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರೊ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಮಕೃಷ್ಣ ಭಟ್ ಬೇಳಾಲು ವಂದಿಸಿದರು.
ನಮ್ಮ ಸಮಾಜದಲ್ಲಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ತೀರಾ ಬಡತನದಲ್ಲಿದ್ದು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತನ್ನ ಪರಿಶ್ರಮ ಮತ್ತು ಕೌಶಲ್ಯದಿಂದಲೇ ಅತ್ಯುನ್ನತ ಮಟ್ಟಕ್ಕೇರಿ ಕ್ಷೌರಿಕ ವೃತ್ತಿದಾರ ಸಮಾಜಕ್ಕೆ ಮಾದರಿಯಾಗಿರುವ ಶ್ರೀಯುತ ಶಿವರಾಮ್ ಭಂಡಾರಿಯವರ ಜೀವನಗಾಥೆ ಎಲ್ಲಾ ಕ್ಷೌರಿಕರಿಗೆ ಇವರ ಜೀವನದ ಸಾಹಸಗಾಥೆ, ಛಲಗಳನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಲು ಸ್ಪೂರ್ತಿಯಾಗಬಲ್ಲದು. ಈ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದ್ದು, Online ಸ್ಟೋರ್ ಗಳಾದ Amazon , Flipkart ನಲ್ಲಿ ಲಭ್ಯವಿದೆ. ಇಲ್ಲವೇ ಪ್ರಕಾಶಕರು, ಲೇಖಕರು ಅಥವಾ ಶಿವರಾಮ್ ಭಂಡಾರಿಯವರಿಂದ ನೇರವಾಗಿ ಪುಸ್ತಕ ಖರೀದಿಸಬಹುದು.
ಭಂಡಾರಿ ವಾರ್ತೆ