ಪರಶುರಾಮ ದೇವರು ಸೃಷ್ಟಿ ಮಾಡಿದ ಈ ಪುಣ್ಯಭೂಮಿಯಲ್ಲಿ ತುಳುನಾಡಿನಲ್ಲಿ ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಆಟಿ ಅಮಾವಾಸ್ಯೆಯೂ ಒಂದು. ಆಟಿ ಅಮವಾಸ್ಯೆ ಎಂದರೆ ನಮಗೆ ನೆನಪಾಗುವುದು ಕಷಾಯ. ಹಿಂದಿನ ಕಾಲದ ಜನರು ಆರೋಗ್ಯದ ದೃಷ್ಟಿಯಿಂದ ಮಾಡಿದ ಈ ಕಷಾಯವನ್ನು ಈಗ ಕೆಲವು ಕಡೆ ಮಾತ್ರ ಕುಡಿಯುತ್ತಾರೆ ಎನ್ನುವುದೇ ವಿಪರ್ಯಾಸ.
ನಾವು ಚಿಕ್ಕದಿರುವಾಗ ನಮಗೆ ಆಟಿ ಅಮಾವಾಸ್ಯೆ ಎಂದರೆ ಬಹಳ ಖುಷಿ. ಯಾಕೆಂದರೆ ಆ ದಿನ ನಮ್ಮ ಮನೆಯಲ್ಲಿ ನಮ್ಮ ಚಿಕ್ಕಪ್ಪನ ಮಕ್ಕಳು ನಾವು ಎಲ್ಲಾ ಸೇರಿ ಸ್ನಾನ ಮಾಡಿ ಒಂದು ಒಂದು ಬಾಳೆ ಎಲೆಯಲ್ಲಿ ದವಸ ಧಾನ್ಯ ಹೂ ಹಾಕಿ ದೀಪ ಇಟ್ಟು ನೀರಿನಲ್ಲಿ ದಾನ ಬಿಡುತ್ತಿದ್ದೆವು. ಅದು ಏನೋ ಒಂಥರಾ ಖುಷಿ ನಮಗೆ. ನಂತರ ಬಂದು ಪಾಲೆಯ ಕೆತ್ತೆಯ ಕಷಾಯ ಕುಡಿಯುವಾಗ ಮನೆಯಲ್ಲಿ ಗೋಡಂಬಿ ಬೆಲ್ಲ ಕೊಡುವಾಗ ನನಗೆ ಹೆಚ್ಚು ಬೇಕು ನನಗೆ ಹೆಚ್ಚು ಬೇಕು ಎಂದು ಗಲಾಟೆ ಮಾಡಿ ತೆಗೆದುಕೊಂಡ ಖುಷಿ ಎಷ್ಟು ಹಣ ಕೊಟ್ಟರು ಬರದು.
ನಂತರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಬಂದು ತಜಂಕ್ ಸೊಪ್ಪಿನ ದೋಸೆ(ಕನ್ನಡದಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ) ತಿನ್ನುವ ಪದ್ಧತಿ ನಮ್ಮ ಮನೆಯಲ್ಲಿ.ಆಟಿ ಅಮಾವಾಸ್ಯೆ ದಿನ ಆಟಿದ ಗುಳಿಗ ದೈವಕ್ಕೆ ರೊಟ್ಟಿ ಕೋಳಿ ಸಾರು ಮಾಡಿ ಪೂಜೆ ಮಾಡಿ ಫ್ಯಾಮಿಲಿಯ ಎಲ್ಲಾ ಸದಸ್ಯರು ಊಟ ಮಾಡುವ ಖುಷಿಯೇ ಬೇರೆ.
ಈ ಆಟಿ ಅಮವಾಸ್ಯೆ ಯು ತುಳುನಾಡಿನ ಒಂದು ಹಬ್ಬವಾಗಿ ಎಲ್ಲರ ಮನೆಯಲ್ಲಿ ಆಚರಿಸುವಂತಾಗಲಿ ಅನ್ನೋದೇ ನನ್ನ ಆಶಯ.
-ಶ್ರೀಮತಿ. ಅಶ್ವಿನಿ ಪ್ರವೀಣ್ ಭಂಡಾರಿ, ಅಂಜರಾಡಿ ಜಾರಿಗೆ ಕಟ್ಟೆ