November 21, 2024
WhatsApp Image 2021-10-06 at 13.49.10
ಆತ್ಮೀಯ ಓದುಗ ಮಿತ್ರರೇ ,
ಇಂದಿನಿಂದ ಮುಂದಿನ 9 ದಿನಗಳವರೆಗೆ ನವರಾತ್ರಿ ವಿಶೇಷಾಂಕದಲ್ಲಿ ಎ ಆರ್ ಭಂಡಾರಿ ವಿಟ್ಲ ರವರ ವಿಶೇಷ ಕಥಾ ಸರಣಿ ಪ್ರಕಟವಾಗಲಿದೆ.
ತಾವುಗಳು ಎಂದಿನಂತೆ ಓದಿ ಪ್ರೋತ್ಸಾಹಿಸುವಿರೆಂಬ ಆಶಯವಿದೆ.

 

ಕಥೆ-1

ಆದ್ಯಾ

 ‘ಬೆಳ್ಮುಗಿಲು’ ಹೊನ್ನ ಬಣ್ಣದಲ್ಲಿ ಅದ್ದಿ ತೆಗೆದಂತೆ ಸೂರ್ಯನ ಬೆಳಕಿಗೆ ಪ್ರತಿಫಲಿಸುತ್ತಿತ್ತು. ಬೀಸಿ ಬರುವ ತಂಗಾಳಿ ಬೆರಗುಗೊಳಿಸುವ ಬೆಟ್ಟಸಾಲು ಬರಸೆಳೆದು ಬರಮಾಡಿಕೊಳ್ಳುವ ಕಾನನದ ಐಸಿರಿ…. ಮರವಂತೆಯ ಮರಳಲ್ಲಿ ಆಟವಾಡುತ್ತಾ ಪ್ರಕೃತಿಯ ಅದ್ಭುತಕ್ಕೆ ನವೀನ್ ಹಾಗೂ ರಮ್ಯಾ ಮನಸೋತಿದ್ದಾಯ್ತು. ಆನತಿ ದೂರದಲ್ಲಿ “ಆದ್ಯಾ” ಮರಳಿನ ಅರಮನೆ ಕಟ್ಟುವುದರಲ್ಲಿ ನಿರತಳಾಗಿದ್ದಳು. ಅವಳ ಪ್ರಯತ್ನ ಪದೇಪದೇ ಸೋತಾಗ , ಮೂತಿಯುಬ್ಬಿಸಿ ಅಪ್ಪನ ಬಳಿ ಓಡಿ ಬಂದಿದ್ದಳು. “ಅಪ್ಪನಿಗೆ ಅಮ್ಮನ ಕಂಡರೆ ಮಾತ್ರ ಪ್ರೀತಿ. ನಂಜೊತೆ ಆಟನೆ ಆಡ್ತಿಲ್ಲ” ಅಂದವಳ ಮಾತಿಗೆ ನಕ್ಕು ನವೀನ್ – ರಮ್ಯಾ ಅವಳ ಜೊತೆ ಮರಳು ಗೂಡು ಕಟ್ಟುವ ಸಾಹಸಕ್ಕೆ ಕೈ ಜೋಡಿಸಿದ್ದಾಯ್ತು. ಕಪ್ಪೆಚಿಪ್ಪುಗಳನ್ನು ಆಯುತ್ತಾ ಅಲೆಗಳ ಜೊತೆ ಕುಣಿದಾಡುತ್ತಾ “ಆದ್ಯಾ” ಮೈಮರೆತಿದ್ದಳು.. ಎಂಟರ ಪೋರಿಗೆ ‘ಕೋರೊನ’ ಬಂದಾಗಿನಿಂದ, ಮನೆಯೊಳಗಿನ ಆಟ, ಆನ್ಲೈನ್ ಕ್ಲಾಸ್ಗಳು ಖುಷಿಯನ್ನು ಕಿತ್ತುಕೊಂಡಂತಾಗಿತ್ತು.

ಸಂಕ್ರಾಂತಿ ಹಬ್ಬಕ್ಕೆ ಕುಂದಾಪುರದ ಅಜ್ಜಿಮನೆಗೆ ಬಂದವಳು ತಂದೆ ತಾಯಿ ಜೊತೆ ಮರವಂತೆಯಲ್ಲಿ ಮನಸೋ ಇಚ್ಛೆ ಆಡಿ ಕುಣಿದು ದಣಿದಿದ್ದಳು.
ಅಜ್ಜಿ- ತಾತ, ಮಾಮ -ಅತ್ತೆ ಯರ ಜತೆ ಪಕ್ಕದ ಮನೆಯ ರಾವ್ ದಂಪತಿಗಳು ಅವಳ ಜತೆ ಮಗುವಾಗಿದ್ದರು.ಇಂದು‌ ಹಠ ಹಿಡಿದು ಮರವಂತೆಗೆ ಬಂದಿದ್ದಾಯ್ತು.
“ಅಮ್ಮ ನಾನು ಆ ಮರದ ಬಳಿ ಹೋಗಿ ಕುಳಿತುಕೊಳ್ಳಲಾ? ಅಂದಾಗ ಎಚ್ಚೆತ್ತ ರಮ್ಯ, ಆ ಕಡೆ ನೋಡಿ ಮಕ್ಕಳಲ್ಲಿ ಆಡಿ ಕೊಂಡಿರುವುದನ್ನು‌ ಗಮನಿಸಿ ‘ಆಯ್ತು’ ಎಂದು ತಲೆಯಾಡಿಸಿದಳು. ನವೀನನ ಜೊತೆ ಸೇರಿ ತಾವು ಮದುವೆಗೆ ಮೊದಲು ಕಡಲತೀರದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ, ಆಗಾಗ ಆದ್ಯಳ ಕಡೆ ಕಣ್ಣು ಹಾಯಿಸ ತೊಡಗಿದಳು.ಆದ್ಯ ಮಕ್ಕಳೊಂದಿಗೆ ಆಟ ಮಾಡುವುದರಲ್ಲಿ ಮಗ್ನ ವಾಗಿದ್ದು ಕಂಡು ಸುಮ್ಮನಾದಳು.


ಸ್ವಲ್ಪ ಹೊತ್ತಿನಲ್ಲಿ ಅಮ್ಮನ ಬಳಿ ಬಂದ ಆದ್ಯ ‘ರಮ್ಯ’ನ ಮೊಬೈಲ್ ಕಿತ್ತುಕೊಂಡು ಓಟಕಿತ್ತಿದ್ದಳು. ಸೂರ್ಯ ಸಮುದ್ರದಾಳದ ಇಳಿಯುವ ಸೂಚನೆ ಸಿಕ್ಕ ಕೂಡಲೇ ರಮ್ಯಾ ನವೀನ ಆದ್ಯಳತ್ತ‌ ಗಮನ ಹರಿಸಿದರೆ ಆಕೆಯ‌ ಸುಳಿವೆ ಇಲ್ಲ. ಮೊಬೈಲ್ ಬೇರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಜತೆಯಲ್ಲಿದ್ದ ಮಕ್ಕಳು ಕಾಣುತ್ತಿಲ್ಲ.ಸಮುದ್ರದ ಅಲೆಗಳ ಜತೆ ಮೈ ಮರೆತಿದ್ದಕ್ಕೆ ತಮ್ಮನ್ನು ತಾವು ದೂಷಿಸುತ್ತಾ ಗಾಬರಿಯಿಂದ ಅಲ್ಲಿ ಇಲ್ಲಿ ಹುಡುಕಾಡಿದ ಬಳಿಕ ಆದ್ಯ ಐಸ್ ಕ್ರೀಮ್ ಮೆಲ್ಲುತ್ತ ಮನೆಯ ಸಮೀಪದ ರಾವ್ ದಂಪತಿಗಳು ಜತೆ ಬರುತ್ತಿದ್ದಳು. ರಮ್ಯ- ನವೀನರ ಉಸಿರು ಮತ್ತೆ ಬಂದಂತಾಯಿತು. ಆದ್ಯಾಳನ್ನು ಗದರಬೇಕೆನ್ನುವಷ್ಟರಲ್ಲಿ ರಾವ್ ದಂಪತಿ ತಡೆದಿದ್ದರು. ಅವರನ್ನು ಹೊರಡಿಸಿಕೊಂಡು ಮನೆಗೆ ಜೊತೆಯಲ್ಲೆ ನಡೆದಿದ್ದರು.

ಆದರೆ “ಆದ್ಯಾ” ಅನ್ಯಮನಸ್ಕಳಾಗಿಯೇ ಇದ್ದಳು. ರಮ್ಯಾ – ನವೀನ್ , ಆದ್ಯ ಆಟವಾಡಿ ಸುಸ್ತಾಗಿದ್ದಾಳೆ ಎಂದೇ ಭಾವಿಸಿದ್ದರು.
ಎಲ್ಲರೂ ರಾತ್ರಿಯೂಟ ಮುಗಿಸಿ ನಿದಿರೆಗೆ ಶರಣಾಗಿದ್ದರು.ನಿಶೆಯ ಮಡಿಲು ಸೇರಿದ ರವಿ ಉಷೆಯ ಸೆರಗು ಹಿಡಿದು ಭೂಮಿಗಿಳಿದಿದ್ದ.ಅಜ್ಜ-ಅಜ್ಜಿ ಮಾವನೊಂದಿಗೆ ತುಂಟಾಟ ಮಾಡುತ್ತಾ ಬೆಳಗಿನ ತಿಂಡಿ ತಿನ್ನುತ್ತಿದ್ದ ಆದ್ಯ ಕಾಲಿಂಗ್ ಬೆಲ್ಲಿನ ಸದ್ದಿಗೆ ಹೊರಗೋಡಿ ಬಂದಿದ್ದಳು.ಹಾಲ್ ನಲ್ಲಿ ಪೇಪರ್ ಓದುತ್ತ ಕುಳಿತಿದ್ದ ರಮ್ಯಾ ಹಾಗೂ ನವೀನ್ ಆಶ್ಚರ್ಯದಿಂದ ಎದ್ದುನಿಂತರು. ನವೀನನ ಗೆಳೆಯ ಪಕ್ಕದಮನೆಯಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ರಾವ್ ದಂಪತಿಗಳ ಮಗ “ಮನೋಜ್” ಜಿಲ್ಲಾಧಿಕಾರಿಗಳೊಂದಿಗೆ ಮನೆಯೊಳಗಡೆ ಅಡಿ ಇಟ್ಟ.ಮನೆಯವರೆಲ್ಲ ಆಶ್ಚರ್ಯಚಕಿತರಾದರು. ಇನ್ಸ್ಪೆಕ್ಟರ್ ಮನೋಜ್ ‘ಆದ್ಯಾ’ಳನ್ನು ಹಿಡಿದೆತ್ತಿ ಮುತ್ತಿಕ್ಕಿದರು.ಜಿಲ್ಲಾಧಿಕಾರಿ ಬರಸೆಳೆದು ಅಪ್ಪಿಕೊಂಡರು. ಅಷ್ಟೊತ್ತಿಗೆ ಮನೆಯವರ ಕುತೂಹಲಕ್ಕೆ ‘ಮನೋಜ’ನ ತಂದೆ ದನಿಯಾದರು.

ಹಿಂದಿನ ದಿನ ಸಮುದ್ರ ಕಿನಾರೆಯ ಮರದ ಬಳಿ ಆಟವಡುತ್ತಿದ್ದ ಆದ್ಯ ಅಲ್ಲಿದ್ದ ಮಕ್ಕಳೆಲ್ಲಾ ಹೋದ ಬಳಿಕ ಒಬ್ಬಂಟಿಯಾದಳು.ಕಪ್ಪೆ ಚಿಪ್ಪಿ ಆರಿಸುತ್ತಾ ನಡೆದ ಆಕೆ ಅಚಾನಕ್ಕಾಗಿ ದುಷ್ಕರ್ಮಿಗಳ ಮಾತಿಗೆ ಕಿವಿ ಯಾಗಿದ್ದಳು. ಭಾರತ ಸಂಶೋಧಿಸಿದ ‘ಕೊರೋನ ವ್ಯಾಕ್ಸಿನ್’ ಈಗಾಗಲೇ “ಕೋರೋನ ವಾರಿಯರ್ಸ್”ಗೆ ನೀಡಲೆಂದು ಮಂಗಳೂರು ಸಹಿತ ದೇಶದ ಇನ್ನಿತರ ನಗರಗಳನ್ನು ತಲುಪಿ ಆಗಿತ್ತು.ಈ ದುಷ್ಕರ್ಮಿಗಳ ತಂಡ ಅವುಗಳಿಂದ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡುವುದಕ್ಕಾಗಿ ಪ್ರತಿಕೂಲಕಾರಿ ಔಷಧಿಯನ್ನು ಸಿದ್ಧಪಡಿಸಿ ಕೇಂದ್ರ ಸರಕಾರದ ಯೋಜನೆಯನ್ನು ಯಶಸ್ಸು ದೊರೆಯದಂತೆ ಮಾಡುವುದರೊಂದಿಗೆ ನಮ್ಮ ದೇಶ ಸಂಶೋಧಿಸಿದ ವ್ಯಾಕ್ಸೀನ್ ನ್ನು ಶತ್ರು ದೇಶಕ್ಕೆ ಸಾಗಿಸಲು ಸಿದ್ಧತೆ ನಡೆಸಿದ್ದರು..ಇದರ ಬಗ್ಗೆ ಪೂರ್ಣ ಅರಿವಿರದೆ ಇದ್ದರೂ, ದೇಶಕ್ಕೆ ಕಂಟಕಪ್ರಾಯರಾಗಿ ಇದ್ದಾರೆ ಎಂಬುದನ್ನು ಅರಿತು ಅವರ ಚಲನವಲನವನ್ನು ವಿಡಿಯೋ ಮಾಡಿದ್ದಳು. ಜತೆಗೆ ಅವರ ಬಳಿ, ತಾಯಿಯ ಮೊಬೈಲ್ ಕಳೆದು ಹೋಗಿದೆ ಎಂದು ಸುಳ್ಳು ಹೇಳಿ ಅವರ ಮೊಬೈಲ್ನಿಂದ ತನ್ನ ತಾಯಿಯ ಫೋನಿಗೆ ಕರೆಯಾಯಿಸಿದಳು. ಅವಳು ಸ್ವಲ್ಪ ದೂರದಲ್ಲಿದಲ್ಲಿ ಇಟ್ಟು ಬಂದಿದ್ದ ಮೊಬೈಲ್ ನ್ನು ಅವರಲ್ಲೊಬ್ಬ ಹುಡುಕಾಡಿ ತಂದುಕೊಟ್ಟಿದ್ದ. ಅಷ್ಟರಲ್ಲಿ ಪಕ್ಕದಮನೆಯ ದಂಪತಿಗಳನ್ನು ದೂರದಲ್ಲಿ ಕಂಡು ತಾನೂ ಅವರ ಜೊತೆ ಹೋಗುವುದಾಗಿ ಓಡಿ ಬಂದಿದ್ದಳು. ಜೊತೆಯಲ್ಲಿ ತನ್ನ ಪ್ರೀತಿಯ ಮಾವ ಪೊಲೀಸ್ ಅಧಿಕಾರಿ ‘ಮನೋಜ್’ಗೆ ತನಗೆ ತಿಳಿದ ವಿಷಯ ಹೇಳಿ ವಿಡಿಯೋ ಹಾಗೂ ವ್ಯಕ್ತಿಯೊಬ್ಬರ ನಂಬರನ್ನು ರಾವ್ ತಾತನ ಸಹಾಯದಿಂದ ಕಳಿಸಿದಳು. ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳ ಜಾಡನ್ನು ಅವರಿಗೆ ಅರಿವಿಲ್ಲದಂತೆ ಹಿಡಿದು ಬಂಧಿಸಿತ್ತು.

ಬಾಲೆಯೊಬ್ಬಳ ಸಮಯಪ್ರಜ್ಞೆಯಿಂದ ದೇಶಕ್ಕೆ ಒದಗಿದ ಆಪತ್ತು ಪರಿಹಾರವಾಗಿತ್ತು . ನನ್ನ ದೇಶ ಯಾವಾಗಲೂ “ಸೇಫ್” ಆಗಿರಬೇಕೆಂದು ಈ ರೀತಿ ಮಾಡಿದೆ ಎಂದವಳ ಮುಗ್ಧತೆಗೆ ಅವಳ ಜಿಲ್ಲಾಧಿಕಾರಿಗಳು ತಲೆದೂಗಿದರು.ಎಳೆಯ ಮಗುವಿನ ದೇಶಪ್ರೇಮ ಸಮಯಪ್ರಜ್ಞೆ ಹಾಗೂ ಸಾಹಸ ಕ್ಕೆ , ಹೆತ್ತವರು ಶಿಕ್ಷಕರು ಕಳಿಸಿದ ಸಂಸ್ಕಾರದ ಪಾಠ ಪ್ರೇರಣೆಯಾಗಿತ್ತು.

✍🏻ಎ.ಆರ್.ಭಂಡಾರಿ.ವಿಟ್ಲ.

Leave a Reply

Your email address will not be published. Required fields are marked *