November 24, 2024
atal bihari vajapeyi 4

ಕವಿಹೃದಯದ ನಿಸ್ವಾರ್ಥ ರಾಜಕಾರಣಿ,ಮಾನವತಾವಾದಿ, ಶ್ರೇಷ್ಠ ಚಿಂತಕ,ಉತ್ತಮ ವಾಗ್ಮಿ,ದಾರ್ಶನಿಕ,ಪತ್ರಕರ್ತ ಇವೆಲ್ಲವುಗಳಿಗಿಂತ ಹೆಚ್ಚಾಗಿ ಅಪ್ರತಿಮ ದೇಶಭಕ್ತ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಆತ್ಮ ಆಗಸ್ಟ್ 16 ರ ಗುರುವಾರ ಸಂಜೆ 5.05 ಕ್ಕೆ ದೇಹತ್ಯಾಗ ಮಾಡುವುದರೊಂದಿಗೆ ರಾಷ್ಟ್ರವ್ಯಾಪಿ ಒಂದು ರೀತಿಯ ಸೂತಕದ ಛಾಯೆ ಆವರಿಸಿಕೊಂಡಿದೆ.

 

ಮೊದಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅಜನ್ಮ ಬ್ರಹ್ಮಚಾರಿ ಅಟಲ್ ಜೀ ಯವರಿಗೆ  2009 ರಲ್ಲಿ ಪಾರ್ಶ್ವವಾಯು ಬರಸಿಡಿಲಿನಂತೆ ಬಡಿಯಿತು.ಇದರಿಂದ ತಮ್ಮ ಸ್ಮರಣಶಕ್ತಿಯನ್ನು ಕಳೆದುಕೊಂಡರು.ಮಧುಮೇಹ ಅವರ ಒಂದು ಮೂತ್ರಪಿಂಡವನ್ನು ಬಲಿ ಪಡೆದುಕೊಂಡಿತು.ಅನಾರೋಗ್ಯದಿಂದ ಜರ್ಜರಿತರಾಗಿ ಜೂನ್ 11,2018 ರಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ಸೇರಿದ ಅಟಲ್ ಜೀಯವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಯಿತು.ಕೃತಕ ಆಮ್ಲಜನಕದ ಪೂರೈಕೆಯೊಂದಿಗೆ ಏಮ್ಸ್ ನ ತಜ್ಞ ವೈದ್ಯರ ತಂಡ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿತು.ದೇಶದ ಪ್ರಧಾನಿಯಾಗಿ ಪ್ರತಿಯೊಂದು ಸಮಸ್ಯೆಗೂ ತತ್ ಕ್ಷಣಕ್ಕೆ ಸ್ಪಂದಿಸುತ್ತಿದ್ದ ಅಟಲ್ ಜೀ ವೈದ್ಯರ ಯಾವ ಚಿಕಿತ್ಸೆಗೂ ಸ್ಪಂದಿಸದೆ 2018 ರ ಆಗಸ್ಟ್ 16 ರ ಸಂಜೆ ತಮ್ಮ ಕೊನೆಯುಸಿರೆಳೆದರು.ಇದರೊಂದಿಗೆ ಅರ್ಧ ಶತಮಾನದಷ್ಟು ದೀರ್ಘಕಾಲ ರಾಜಕೀಯ ಕ್ಷೇತ್ರದಲ್ಲಿದ್ದರೂ ಅಜಾತಶತ್ರುವಾಗಿ ಬಾಳಿದ ತೊಂಬತ್ನಾಲ್ಕು ವರ್ಷದ ಹಿರಿಯ ಮುತ್ಸದ್ದಿಯ ಯುಗಾಂತ್ಯವಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನ ಬಡಬ್ರಾಹ್ಮಣ ಕುಟುಂಬದ,ಆದರ್ಶ ಶಾಲಾ ಅಧ್ಯಾಪಕರಾಗಿದ್ದ ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಕೃಷ್ಣಾದೇವಿ ದಂಪತಿಗಳಿಗೆ 1924 ರ ಡಿಸೆಂಬರ್ 25 ರಂದು ಜನಿಸಿದ ಅಟಲ್ ಜೀ ಎಳವೆಯಿಂದಲೂ ದೇಶ,ದೇಶಭಕ್ತಿ,ಸ್ವಾತಂತ್ರ್ಯ ಹೋರಾಟ ಇವುಗಳಲ್ಲಿ ಆಸಕ್ತಿ ಹೊಂದಿದ್ದರು.1939 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.ವೀರ ಅರ್ಜುನ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ಲೇಖನಗಳನ್ನು ,ದೇಶಭಕ್ತಿಯ ಕವಿತೆಗಳನ್ನು ಬರೆದರು.1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಮೊದಲ ಬಾರಿಗೆ ಜೈಲುವಾಸ ಅನುಭವಿಸಿದರು.ಕಾನ್ಪುರ ವಿಶ್ವ ವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು,ಕಾನೂನು ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ರಾಜಕೀಯ ಪ್ರವೇಶಿಸಿದರು.

1951 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರೊಂದಿಗೆ ಸೇರಿ ಭಾರತೀಯ ಜನಸಂಘ ಸ್ಥಾಪಿಸಿ,1957 ರಲ್ಲಿ ಪ್ರಪ್ರಥಮ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.1975 ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎರಡನೇ ಬಾರಿಗೆ ಜೈಲುವಾಸ ಅನುಭವಿಸಿದರು.1979 ರಲ್ಲಿ ಜನತಾ ಪಕ್ಷ ವಿಸರ್ಜನೆಗೊಂಡಾಗ,ಸಮಾನಮನಸ್ಕರೊಡಗೂಡಿ 1980 ರಲ್ಲಿ “ಭಾರತೀಯ ಜನತಾ ಪಕ್ಷ” ಸ್ಥಾಪಿಸಿ, ಬಿಜೆಪಿಯ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.
1992 ರಲ್ಲಿ “ಪದ್ಮ ವಿಭೂಷಣ” ಪ್ರಶಸ್ತಿ ಒಲಿದರೆ,1993 ರಲ್ಲಿ ಕಾನ್ಪುರ ವಿ.ವಿ ಯಿಂದ ಗೌರವ ಡಾಕ್ಟರೇಟ್ ಪದವಿ ಒಲಿದುಬಂದಿತು.
ಸುಮಾರು ನಾಲ್ಕು ದಶಕಗಳ ಕಾಲ ವಿಪಕ್ಷಗಳ ಸಾಲಿನಲ್ಲಿ ಕುಳಿತುಕೊಂಡಿದ್ದ ಅಟಲ್ ಜೀಯವರಿಗೆ  1996 ರಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಗಾದಿಯೇರುವ ಅವಕಾಶ ಬಂದರೂ,ಅವಕಾಶವಾದಿಗಳ ಕುತಂತ್ರದಿಂದ ಕೇವಲ ಹದಿಮೂರು ದಿನಗಳಲ್ಲಿ ಪದವಿ ಬಿಟ್ಟು ಕೆಳಗಿಳಿಯಬೇಕಾಯಿತು.

 

1998 ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದರೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮಾಡಿದ ಪಗಡೆಯಾಟಕ್ಕೆ ಬಲಿಯಾಗಿ ಹದಿಮೂರು ತಿಂಗಳು ಮಾತ್ರ ಪ್ರಧಾನಿಯಾಗಿದ್ದು ಕೆಳಗಿಳಿದರು.ಆದರೆ 1999 ರಲ್ಲಿ ಮಾಡಿಕೊಂಡ ಎನ್.ಡಿ.ಎ ಮೈತ್ರಿಕೂಟ ಅವರ ಕೈ ಬಿಡಲಿಲ್ಲ.1999 ರಿಂದ 2004 ರ ವರೆಗೆ ಪೂರ್ಣಾವಧಿಯ ಪ್ರಧಾನಮಂತ್ರಿಯಾಗಿ ಅಧಿಕಾರ ಪೂರೈಸಿದ್ದು ಮಾತ್ರವಲ್ಲದೆ ಇಡೀ ವಿಶ್ವವೇ ತಲೆದೂಗುವಂತೆ ಆಡಳಿತ ನಡೆಸಿದರು.ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ,ಕಾರ್ಗಿಲ್ ಯುದ್ಧದ ವಿಜಯೋತ್ಸವ,ಸ್ನೇಹ ಸೌಹಾರ್ದದ ಸಂಕೇತವಾದ ಅಮೃತಸರದಿಂದ ಪಾಕಿಸ್ತಾನದ ಲಾಹೋರ್ ವರೆಗೆ ಬಸ್ ಪ್ರಯಾಣ ಆರಂಭ,ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆ,ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಇವೇ ಮೊದಲಾದ ದೂರದೃಷ್ಠಿತ್ವದ ಯೋಜನೆಗಳಿಂದಾಗಿ ಜನಪ್ರಿಯರಾದರು.

2004 ರ ಹದಿನಾಲ್ಕನೇ ಲೋಕಸಭಾ ಚುನಾವಣೆಯಲ್ಲಿ ಹತ್ತನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರೂ,ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲಾಗಲಿಲ್ಲ.2005 ರಲ್ಲಿ ತಮ್ಮ ಸಕ್ರಿಯ ರಾಜಕೀಯ ಜೀವನದಿಂದ ನಿವೃತ್ತರಾದರು.
ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು,ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾಗಿದ್ದ ಅಟಲ್ ಜೀ ಭಾರತ ಕಂಡ ಅಪರೂಪದ ಮಹಾನ್ ರಾಜಕೀಯ ನಾಯಕರಲ್ಲಿ ಒಬ್ಬರು.ಹಿಂದಿ,ಇಂಗ್ಲೀಷ್, ಸಂಸ್ಕೃತ ಭಾಷೆಯ ಮೇಲೆ ಅಪ್ರತಿಮ ಪಾಂಡಿತ್ಯ ಹೊಂದಿದ್ದ ಅವರು ಸ್ವತಃ ಕವಿ.ನೂರಾರು ಕವಿತೆಗಳನ್ನು,ಹಲವಾರು ದೇಶ ಭಕ್ತಿಗೀತೆಗಳನ್ನು ರಚಿಸಿದ್ದ ಅವರು ಸಭೆ ಸಮಾರಂಭಗಳಲ್ಲಿ, ಸಂಸತ್ತಿನಲ್ಲಿ ಭಾಷಣ ಮಾಡುವಾಗ ಸಂದರ್ಭೋಚಿತವಾಗಿ ಅವುಗಳನ್ನು ಬಳಸಿ ಕೇಳುಗರನ್ನು ಚಕಿತಗೊಳಿಸುತ್ತಿದ್ದರು.ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವದಿಂದಾಗಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ,ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡಿದ್ದರು.
2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಮಗೆ ರಾಜಕೀಯ,ರಾಜಧರ್ಮ ಪರಿಪಾಲನೆ ಪಾಠ ಮಾಡಿದ ಗುರುಗಳಾದ ಅಟಲ್ ಜೀ ಯವರನ್ನು ಅತ್ಯಂತ ಗೌರವದಿಂದ ನೋಡಿಕೊಂಡರು.2015 ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ “ಭಾರತರತ್ನ” ಪ್ರಶಸ್ತಿಯನ್ನು  ವಾಜಪೇಯಿಯವರಿಗೆ ನೀಡಿ ಗೌರವಿಸಲಾಯಿತು.
1992 ರಲ್ಲಿ ಬಾಬರೀ ಮಸೀದಿ ಧ್ವಂಸಗೊಂಡಾಗ ವಿರೋಧ ಪಕ್ಷದ ನಾಯಕರಾಗಿ ತಮ್ಮ ಪಕ್ಷದ ಕ್ರಾಂತಿಕಾರಿ ನಾಯಕರ ನಡೆಯನ್ನು ಖಂಡಿಸಿ,ಹಿರಿಯ ಮುತ್ಸದ್ದಿಯಂತೆ ಅವರು ನಡೆದುಕೊಂಡ ರೀತಿ,ಪೋಖ್ರಾನ್ ಅಣುಪರೀಕ್ಷೆಯ ನಂತರ ಮುನಿಸಿಕೊಂಡಿದ್ದ ಕೆಲವು ಬಲಿಷ್ಠ ರಾಷ್ಟ್ರಗಳ ವಿಶ್ವಾಸ ಗಳಸಿದ ಜಾಣ ನಡೆ,ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಣ್ವಸ್ತ್ರ ಬಳಸಬಹುದೆಂಬ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ ಪ್ರಬುದ್ಧ ನಡೆ….ಹೀಗೆ ತಮ್ಮ ಪ್ರತಿಯೊಂದು ನಡೆಯಿಂದ ಭಾರತವನ್ನು, ಭಾರತೀಯರನ್ನು ಗೌರವಯುತವಾಗಿ ವಿಶ್ವದ ಮುಂದೆ ವಿಶ್ವಾಸದಿಂದ ತಲೆಯೆತ್ತಿ ನಿಲ್ಲುವಂತೆ ಮಾಡಿದ ನಮ್ಮೆಲ್ಲರ ಪ್ರೀತಿಯ ಅಟಲ್ ಜೀ ಇನ್ನು ನೆನಪು ಮಾತ್ರ.
ರಾಜಕಾರಣಿ ಹೇಗಿರಬೇಕು,ಹೇಗೆ ವರ್ತಿಸಬೇಕು ಎಂದು ತೋರಿಸಿಕೊಟ್ಟ ಆದರ್ಶ ರಾಜಕಾರಣಿಯಿವರು.ವಿಧಿ ಎಷ್ಟು ಕ್ರೂರ ಅಲ್ಲವೇ?ಅಪ್ರತಿಮ ಮಾತುಗಾರಿಕೆಯ,ಚತುರ ನಡೆ ನುಡಿಯ ಸಜ್ಜನ ರಾಜಕಾರಣಿಯೊಬ್ಬರನ್ನು ಅನಾಮತ್ತು ಒಂಬತ್ತು ವರ್ಷಗಳ ಕಾಲ ಹಾಸಿಗೆಯ ಮೇಲೆ ನಿಶ್ಚಲವಾಗಿ ಬಂಧಿಸಿ ಬಿಟ್ಟಿತಲ್ಲ.ಅವರ ಯೋಚನೆಗಳನ್ನು,ಯೋಜನೆಗಳನ್ನು,ಚಿಂತನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ನಿರ್ಬಂಧಿಸಿ ಬಿಟ್ಟಿತಲ್ಲ….ಛೆ! 
ಇದನ್ನೆಲ್ಲಾ ನೆನೆದರೆ ಕಣ್ಣಂಚಲ್ಲಿ ನೀರು ಹನಿಗೂಡುವುದಿಲ್ಲವೇ?  ಆದರೂ ಮತ್ತೊಮ್ಮೆ ಹುಟ್ಟಿ ಬನ್ನಿ….ಅಟಲ್ ಜೀ ಎಂಬುದಷ್ಟೇ ಭಾರತದ ಪ್ರತಿಯೊಬ್ಬ ಪ್ರಜೆಯ ಧ್ವನಿಯಾಗಿ “ಭಂಡಾರಿವಾರ್ತೆ” ಯ ಪ್ರಾರ್ಥನೆ.
-ಭಂಡಾರಿವಾರ್ತೆ

1 thought on “ಅಜಾತಶತ್ರುವಿನ ಅಂತಿಮಯಾತ್ರೆ

  1. ಅಚ್ಚುಕಟ್ಟಾದ ಲೇಖನ, ಸಂಪೂರ್ಣ ಮಾಹಿತಿ ನೀಡಿ ಅಟಲ್ ಜಿ ಯವರ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ತ್ಯಾಂಕ್ಸ್ ಭಂಡಾರಿ ವಾರ್ತೆ.

Leave a Reply

Your email address will not be published. Required fields are marked *