ಈ ಶಿಖರವು ಪಶ್ಚಿಮ ಘಟ್ಟದ ಕುದುರೆ ಮುಖದ ಕುರಿಂಜಲ ಬೆಟ್ಟದಿಂದ ಆಗುಂಬೆಯತ್ತ ಸಾಗುವ ಘಟ್ಟಗಳ ಶ್ರೇಣಿಯಲ್ಲಿ ಸಿಗುತ್ತದೆ. ಕಾರ್ಕಳ ತಾಲೂಕಿನ ಸುತ್ತ ಮುತ್ತಲಿನ ಹಲವು ಹಳ್ಳಿಗಳಲ್ಲಿ ಇದನ್ನು ನೋಡಬಹುದಾಗಿದೆ. ಅದರಲ್ಲೂ ನಾನು ನೋಡಿದಂತೆ ಅಜೆಕಾರು, ಅಂಡಾರು, ಶಿರ್ಲಾಲು,ಊರುಗಳಲ್ಲಿ ಇದರ ವೀಕ್ಷಣೆ ಹತ್ತಿರದಿಂದ ಸುಲಭದಲ್ಲಿ ನೋಡಲು ಬರುತ್ತದೆ.
ಎಲ್ಲರೂ ಕರೆಯುವಂತೆ ಮತ್ತು ಬರೆದಂತೆ “ಅಜ್ಜಿ ಕುಂಜ” ಮತ್ತು “ವಾಲಿ ಕುಂಜ” ಎಂಬ ಹೆಸರುಗಳು ಸರಿಯಾದ ಅರ್ಥ ಕೊಡುವುದಿಲ್ಲ. ಕುಂಜ ಎಂದರೆ ಎತ್ತರದ ಈಕ್ಕಟ್ಟಾದ ಶಿಖರ,ಬೆಟ್ಟ, ಗುಡ್ಡ ಎಂಬ ಅರ್ಥದಲ್ಲಿ ಬರುತ್ತದೆ. ಈ ಕುಂಜದ ಶಿರ ನೆತ್ತಿಯನ್ನು ನೋಡಿಯೇ ಅಜೆಕಾರು, ಅಂಡಾರು, ಶಿರ್ಲಾಲು ಎಂಬ ಊರುಗಳ ಹೆಸರುಗಳು ಹುಟ್ಟಿರುವುದು ಕಂಡುಬರುತ್ತದೆ. ಕಾಲ ಕಳೆದಂತೆ ಹೆಸರಿನಲ್ಲಿ ಅಕ್ಷರಗಳ ಉಚ್ಛಾರಣೆಯಲ್ಲಿ ಹಿಂದು ಮುಂದು ಆಗಿ ವ್ಯತ್ಯಾಸ ಆಗಿರುತ್ತದೆ.
ಅಜೆಕಾರು:ಅಜ್ಜಿ ಕುಂಜ ತಪ್ಪು ಅಜೆ ಕುಂಜ ಸರಿ – ಇಲ್ಲಿ “ಅಜೆ” ಮತ್ತು “ಕಾರ್” ಎಂಬ ಪದಗಳು ಸೇರಿ ಅಜೆಕಾರ್ ಆಗಿದೆ. ತುಲು ಭಾಷೆಯಲ್ಲಿ ಅಜೆ ಅಂದರೆ ಎತ್ತರ,ಸಾಲು ಸಾಲಾಗಿ, ಸಮಾನಾಂತರ ಎಂಬ ಅರ್ಥ ಬರುತ್ತದೆ. ಉದಾಹರಣೆಗೆ “ಅಜೆಕೋಲು”. ಇದು ಅಪ್ಪಟ ತುಲು ಶಬ್ಧ ಆಗಿರುತ್ತದೆ. ಹಿಂದೆಲ್ಲಾ ಮನೆಗಳಲ್ಲಿ ಮರದಿಂದ ತಯಾರಿಸಿದ ಉದ್ದದ ಕೋಲು(ಸಲಾಕೆ) ಒಂದನ್ನು ಎತ್ತರದಲ್ಲಿ ಗಟ್ಟಿಯಾಗಿ ಬಡಿದು ಭದ್ರ ಮಾಡುತ್ತಿದ್ದರು. ಈ ಕೋಲಿನಲ್ಲಿ ಬಟ್ಟೆಗಳನ್ನು ನೇತು ಹಾಕುವುದು ಇತ್ತು. ಅದನ್ನು “ಅಜೆಕೋಲು”ಎಂದು ಕರೆಯುತ್ತಿದ್ದರು. ಅಲ್ಲದೆ ಮಗು ಮಲಗಿಸುವ ತೊಟ್ಟಿಲ ಮೇಲೆ ಎತ್ತರದಲ್ಲಿ ಅಜೆ(ನೇಲೆ)ನೇತು ಹಾಕುವುದು ಇತ್ತು. ಇಲ್ಲಿ ಮಗುವಿನ ಬಟ್ಟೆಗಳನ್ನು ಇಡುತ್ತಿದ್ದರು. ಇದು ಮೇಲಿಂದ ಯಾವುದೇ ಕಡ್ಡಿ ಕಸಗಳು ಮಗುವಿನ ಮೇಲೆ ಬೀಳದಂತೆ ತಡೆಯುತ್ತದೆ. ಒಟ್ಟಿನಲ್ಲಿ “ಅಜೆ”ಎಂದರೆ ಎತ್ತರಕ್ಕೆ ಎಂಬ ಅರ್ಥ ಸತ್ಯವಾಗಿದೆ. ದೈವ ಸ್ಥಾನಗಳಲ್ಲಿ ಕಾಯಿ ಒಡೆಯುವ “ಅಜೆಕಾಯಿ ಕಲ್ಲು”ಗಳು ಇರುತ್ತವೆ. ಅವು ಕೂಡಾ ಅಂಗಣದ ಎತ್ತರಕ್ಕೆ ಇರುತ್ತದೆ. ಕೆಲವರ ಜಮೀನಿನಲ್ಲಿ ಒಂದೇ ಕಡೆ ಹತ್ತಾರು ಹಲಸಿನ ಮರಗಳು ಇರುತ್ತದೆ. ಎಲ್ಲವನ್ನೂ ಒಂದೊಂದು ಹೆಸರಿನಲ್ಲಿ ಕರೆಯುವುದು ಇತ್ತು. ಅತಿ ಎತ್ತರದ ಜಾಗದಲ್ಲಿ ಇರುವ ಮರದ ಹಣ್ಣುಗಳನ್ನು “ಅಜ್ಜೆನ ಪೆಲಕ್ಕಾಯಿ” ಎಂದು ಹೆಸರಿಟ್ಟು ಕರೆಯಲಾಗು ತ್ತಿತ್ತು. ಇಲ್ಲಿ “ಅಜೆ”ಪದವನ್ನು ಅಜ್ಜೆ ಎಂದು ಉಚ್ಛಾರದ ಲ್ಲಿ ಕರೆದಿದ್ದಾರೆ. ಈ ಹೆಸರಿನ ಪೆಲಕ್ಕಾಯಿ ನಮ್ಮ ಮನೆ ಯ ಜಮೀನು ಜಾಗದಲ್ಲೂ ಇತ್ತು. ಅಜೆಕಾರ್ ಜನರಿಗೆ ಅಂದು ಈ ಕುಂಜವು ಎತ್ತರದಲ್ಲಿ ಕಟ್ಟಿದ್ದ ಅಜೆಯಂತೆ ಕಂಡಿತ್ತು. ಅಜೆ ಕುಂಜ ಎಂಬ ಹೆಸರನ್ನು ತಪ್ಪಾಗಿ ಅಜ್ಜಿ ಕುಂಜ ಎಂದಿದ್ದಾರೆ. ಈ ಅಜೆಕುಂಜದ ಹೆಸರಿನಿಂದಲೇ ಅಜೆಕಾರ್ ಎಂಬ ಊರಿನ ಹೆಸರು ಬಂದಿದೆ.
“ಕಾರ್”ಎಂದರೆ “ಕಲ್ಲ್”ಎಂದರ್ಥ ಆಗಿದೆ. ಉದಾ: ಕಾರ್+ಕಲ=ಕಾರ್ಲ, ಕಾರ್ಕಳ ಆದ ರೀತಿಯಲ್ಲಿ. ತುಲು ಭಾಷೆಯಲ್ಲಿ”ರ” ಕಾರ ಮತ್ತು “ಲ”ಕಾರಗಳು ಆಚೀಚೆ ಆಗುವುದು ಸಾಮಾನ್ಯ. ಅದೇ ರೀತಿ ಅಜೆಕಾರ್ ಎಂದರೆ
ಅಜೆ+ಕಾರ್=ಅಜೆಕಾರ್ ಆಗಿದೆ. ಮೇಲಿನ ಕಲ್ಲೇ ಅಜೆಕಾರ್. ಅಜೆಕಾರಿಗೆ ಕಾಣುವ ಕಲ್ಲು ಯಾವುದು?ಅಜೆಕಾರಿಗೆ ಬಂದವರನ್ನು ಸ್ವಾಗತಿಸುವುದು ಯಾರು?ಅದೇ ಕರೆಯುವ “ಅಜ್ಜಿ ಕುಂಜ”. ಇಲ್ಲಿ ಈ ಕುಂಜವುಕಲ್ಲಿನಂತೆಕಂಡಿದೆ. “ಅಜೆ ಕುಂಜ”ಎಂಬ ಪದವು ತಪ್ಪಾಗಿ”ಅಜಿ|ಅಜ್ಜಿ”ಕುಂಜ ಎಂದು ಕರೆದಿದ್ದಾರೆ. ಈಗಲೂ ಈಶಿಖರದ ನೆತ್ತಿಯು ಕಲ್ಲಿನಂತೆ ಕಾಣಿಸುತ್ತದೆ. “ಅಜ್ಜಿ ತಪ್ಪು,ಅಜೆ ಸರಿ”. ಈ ಶಿಖರವನ್ನು ಎತ್ತರದ ಶ್ರೇಣಿಯ ಅಜೆಕಲ್ಲು ಎಂದಿದ್ದಾರೆ. ಈ ಅಜೆಕಲ್ಲು ಅಜೆಕಾರ್ ಆಗಿದೆ.
ಅಜೆಕಾರು ಊರನ್ನು ಕೆಮ್ಮಂಜೆ ಎಂತಲೂ ಕರೆಯುತ್ತಾರೆ. ತುಲುವರು ಈ ಕಡಿದಾದ ಎತ್ತರದ ಕುಂಜವನ್ನು ಬಲಿಷ್ಠ ಕಂಭ(ಕಮ್ಮ)ಕ್ಕೆ ಹೋಲಿಸಿ “ಕಮ್ಮ ಕುಂಜ”ಎಂದಿದ್ದಾರೆ. ಕ್ರಮೇಣ ಕಮ್ಮಂಜೆ,ಕೆಮ್ಮಂಜೆ ಎಂದುಕರೆದರು. ಇಲ್ಲಿಒಂದೆಡೆ ಎತ್ತರದ ಕಲ್ಲಿನ ಕುಂಜ ಎಂದಿದ್ದಾರೆ. ಮತ್ತೊಂದು ಕಡೆ ಎತ್ತರದ ಶಿಖರವನ್ನು ಕಂಭದ ಕುಂಜ ಎಂದು ಕರೆದಿದ್ದಾರೆ. ಕುಂಜವು ಅವರಿಗೆಕಂಭದಂತೆ ಕಂಡಿದೆ. ಕೆಮ್ಮಂಜೆ ಎಂಬ ಹೆಸರು ಕೂಡಾ ಈ ಎತ್ತರದ ಇಳಿಜಾರಾದ ಶಿಖರದಿಂದ ಬಂದಿದೆ.
ಶಿರ್ಲಾಲ್: ವಾಲಿ ಕುಂಜ ತಪ್ಪು ಲಾಲಿ ಕುಂಜ ಸರಿ – ಶಿರ್ಲಾಲ್|ಶಿರ್ಲಾಲು ಎಂಬ ಊರು ಅಂಡಾರು ಮತ್ತು ಕೆರವಾಸೆ ಊರುಗಳ ಮಧ್ಯೆ ಇದೆ.ಇಲ್ಲೂ ಅಜೆ (ಅಂದು ಅಜ್ಜಿ)ಕುಂಜವನ್ನು ವೀಕ್ಷಣೆ ಮಾಡಲು ಬರುತ್ತದೆ. ಈ ಶಿಖರಕ್ಕೆ ಹೋಲಿಸಿಯೇ ಈ ಊರಿಗೆಶಿರ್ಲಾಲ್ ಎಂಬ ಹೆಸರನ್ನು ಇಟ್ಟಿದ್ದಾರೆ.ಶಿರ+ಲಾಲಿ= ಶಿರ್ಲಾಲಿ.”ಶಿರ್ಲಾಲಿ”ಪದವು ಕ್ರಮೇಣ “ಶಿರ್ಲಾಲು”| “ಶಿರ್ಲಾಲ್” ಎಂದರು.
ಶಿರ ಎಂದರೆ ತಲೆ, ಶಿರಸ್ಸು, ಮಂಡೆ ಎಂಬ ಅರ್ಥ. ಈಗ ಕರೆಯುವ ವಾಲಿ ಕುಂಜದ ಶೃಂಗದ ತುತ್ತ ತುದಿಯನ್ನು ಶಿರಕ್ಕೆ ಹೋಲಿಸಿದ್ದಾರೆ. ದೂರಕ್ಕೆ ಇದು ತನ್ನ ಮಂಡೆಯನ್ನು ಹೊರ ಚಾಚಿದಂತೆ ಕಾಣುತ್ತದೆ. ಇನ್ನು ತುಲುವಿನಲ್ಲಿ”ಲಾಲಿ” ಎಂದರೆ ಯಾವುದೇ ಕಾರಣ,ಕೆಲಸ,ಉದ್ದೇಶ ಇಲ್ಲದೆ ತಿರುಗಾಡುವುದು ಇಲ್ಲವೇ ಸುತ್ತುವುದು. “ಲಾಲಿ ಪಾಡುನು”(ಅಲೆಯುವುದು) ಎನ್ನುವರು. ಹಿಂದೆ ಮುಂದೆ ಚಲಿಸುವುದು. “ಆಯೆ ಲಾಲಿ ಪಾಡೊಂದು ಉಲ್ಲೆ”ಎಂದರೆ ಆಗಾಗ್ಗೆ ಕೆಲಸ ಇಲ್ಲದೆಅಲ್ಲೊಮ್ಮೆ ಇಲ್ಲೊಮ್ಮೆ ತಿರುಗುತ್ತಿದ್ದಾನೆ. ಎಲ್ಲೆಡೆ ನೋಡಿದರೂ ಅವನು ಇರುತ್ತಾನೆ. ಈ ಕುಂಜವನ್ನು “ಲಾಲಿ ಪಾಡುನ” ಶಿರ ಅಥವಾ ಶಿಖರ ಎಂದಿದ್ದಾರೆ. ಈ ಕಾರ್ಕಳದ ಹೆಚ್ಚಿನ ಕಡೆಗಳಲ್ಲಿ ಈ ಕುಂಜವು “ಲಾಲಿ” ಹೊಡೆಯುತ್ತಾ ಇರುತ್ತದೆ. “ಲಾಲಿ” ಪದದಿಂದಲೇ “ಲೇಲೇ” ಹುಟ್ಟಿದೆ. “ಲೇಲೇ ಪಾಡುನು”ಎನ್ನುತ್ತಾರೆ. ಲೇಲೇ ಪಾಡುನು ಎಂದರೆ ಕೆಲಸ ಇಲ್ಲದೆ ಹಾಡಿ ನಲಿಯುವುದು. ಜನ ಹೋದೆಡೆ ಈ ಕುಂಜ ಕಂಡು “ಲಾಲಿ ಕುಂಜ ಎಂದಿದ್ದಾರೆ.
“ಅಜ್ಜಿ ಕುಂಜ” ಮತ್ತು “ವಾಲಿ ಕುಂಜ”ಎಂಬ ಹೆಸರು ಗಳಿಗೆ ಅರ್ಥ ಇಲ್ಲ. ಯಾವುದೋ ಕಲ್ಪಿತ ಕತೆಗಳನ್ನು ಹೇಳುವುದು,ಬರೆಯುವುದು ತಪ್ಪು. ಪ್ರಕೃತಿ ನಿರ್ಮಿತ ಈ ಶಿಖರಕ್ಕೆ ನಮ್ಮ ಪೂರ್ವಜರು ಅರ್ಥ ಪೂರ್ಣ ಹೆಸರುಗಳನ್ನು ಇಟ್ಟಿದ್ದರು.ತಪ್ಪು ಉಚ್ಛಾರದಲ್ಲಿ ಈ ಹೆಸರುಗಳು ಅರ್ಥ ಹೀನಾಯವಾಗಿ ಹೋಗುತ್ತದೆ. ಇಂತಹ ತಪ್ಪನ್ನು ಸರಿಪಡಿಸುವ ಕೆಲಸದ ಬದಲು ಅವೈಜ್ಞಾನಿಕ ಕತೆಗಳನ್ನು ಸೃಷ್ಟಿಸುವುದು ಎಲ್ಲಿಯವರೆಗೆ ಸರಿ? ಕುದುರೆಮುಖ ನೇಷನಲ್ ಪಾರ್ಕ್ ಡಿಪಾರ್ಟ್ ಮೆಂಟ್, ಕರ್ನಾಟಕ ಇವರು ಈ ಕುಂಜದ ನಿಜವಾದ ಈ ಮಾಹಿತಿಯನ್ನು ಎಲ್ಲಾ ಕಡತಗಳಲ್ಲಿ ಅಗತ್ಯವಾಗಿ ಬರೆಯಬೇಕು.ತುಲು ಭಾಷೆಯ ಪದಗಳನ್ನು ಉಳಿಸಿ ಕೊಂಡು ಬರಬೇಕು.ತುಲುವರು ಇನ್ನಾದರೂ ಸರಿಯಾಗಿ ಉಚ್ಛರಿಸ ಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯವರು ಅದೇ ತಪ್ಪನ್ನು ಮುಂದು ವರಿಸಿ ಕೊಂಡು ಹೋಗುವರು.ಅದರಲ್ಲೂ ಅಜೆಕಾರು, ಅಂಡಾರು, ಶಿರ್ಲಾಲು ಜನತೆ ಎಚ್ಚೆತ್ತು ಈ ಶಿಖರದ ಹೆಸರನ್ನು ಇನ್ನು ಮುಂದೆ ಸರಿಯಾದ ಉಚ್ಛಾರದಲ್ಲಿ ಕರೆಯಬೇಕು. ಮುಂದಿನ ಪೀಳಿಗೆಯವರು ಈ ಹಳೆ ಹೆಸರಿನಲ್ಲಿ ಕರೆಯಬಾರದು.
ಅಂಡಾರ್: ಅಜೆ ಕುಂಜ|ಲಾಲಿ ಕುಂಜ ನೋಡಲು ಬನ್ನಿ – ಅಂಡಾರ್ ಎಂಬ ಊರು ಅಜೆಕಾರ್ ಮತ್ತು ಶಿರ್ಲಾಲ್ ಊರುಗಳ ಮಧ್ಯೆ ಇದೆ. ಅಜೆ ಕುಂಜ ಅಥವಾ ಲಾಲಿ ಕುಂಜದ ಅಡಿಯಲ್ಲಿದೆ ಅಂಡಾರ್. (Andraar is under Aje Kunja or Laali Kunja). ಈ ಹಳ್ಳಿಯನ್ನು ಈ ಶಿಖರದ ಮೇಲಿಂದ ನೋಡಿದಾಗ ಇದು ಅಂಡೆಯಂತೆ ಕಾಣುವುದು. ಮೇಲಿಂದ ಬಹಳ ಆಳ(deep)ಇದ್ದು ಅದು ಕಂದಕದ ರೂಪದಲ್ಲಿ ಕಾಣುತ್ತದೆ. ಅಂಡೆ ಅಂದರೆ ಬಿದಿರಿನಿಂದ ಮಾಡಿದ ವೃತ್ತಾಕಾರದ ನಳಿಕೆ ಅಥವಾ ಪಾತ್ರೆ. ಅಂದರೆ ಮೇಲಿಂದ ನೋಡಿದರೆ ಅಂಡಾರು ಊರು ಪಾತಾಳ ದಲ್ಲಿರುವಂತೆ ನಳಿಕೆಯ ರೂಪದಲ್ಲಿ ಕಾಣುತ್ತದೆ. ಈ ಕುಂಜವು ಅಷ್ಟೊಂದು ಎತ್ತರದಲ್ಲಿದೆ ಮತ್ತು ಅಂಡಾರ್ ಆಳದಲ್ಲಿದ್ದು ಸಣ್ಣದಾಗಿ ಕಾಣುತ್ತದೆ. ಮೂಡಬಿದ್ರೆ- ಮಂಗಳೂರು ಮಾರ್ಗದಲ್ಲಿ “ಅಂಡೇಲ್ “ಎಂಬ ಊರು ಸಿಗುತ್ತದೆ. ಇದು ಮೇಲಿಂದ ಬಹಳ ಆಳವಾಗಿ ಕಾಣುವುದರಿಂದ ಅಂಡೇಲ್ ಎಂಬ ಹೆಸರು ಬಂದಿದೆ. ಅದೇ ರೀತಿ ಅಂಡಾರ್ ಕೂಡಾ. ಮೇಲಿಂದ ಈ ಊರು ಸಪೂರ ನಳಿಕೆಯಂತೆ ಕಾಣುತ್ತದೆ. ಶೇಂದಿ ಅಥವಾ ಕಳ್ಳು ತುಂಬಿಸುವ ಬಿದಿರಿನ ಸಲಕರಣೆಗೂ ಅಂಡೆ ಎನ್ನುತ್ತಾರೆ.
ಅಂಡಾರು ಊರನ್ನು “ಮಲ್ಲಡ್ಕ”ಎಂತಲೂ ಕರೆಯುತ್ತಾರೆ. ತಗ್ಗು ಪ್ರದೇಶಗಳಲ್ಲಿ ಬೆಳೆ ಬೆಳೆಯುತ್ತಿದ್ದು ಅದರ ಮೇಲಿನ ಪ್ರದೇಶವು ಕೃಷಿಗೆ ಯೋಗ್ಯವಾಗದಿದ್ದರೆ ಅಂತಹ ಭೂಮಿಯನ್ನು ತುಲುನಾಡಲ್ಲಿ “ಅಡ್ಕ”ಎನ್ನುತ್ತಾರೆ. ಅಂಡಾರ್ ಊರಿನ ಉತ್ತರ ಮತ್ತು ದಕ್ಷಿಣ ದಿಕ್ಕುಗಳು ತಗ್ಗು ಪ್ರದೇಶ ಆಗಿದ್ದು ಹೊಲ ಗದ್ದೆಗಳಿವೆ. ಅವು ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಹರಡಿದೆ. ಇವೆರಡರ ಮಧ್ಯೆ ಎತ್ತರದ ಸಮತಟ್ಟಾದ ಪ್ರದೇಶದಲ್ಲಿ ಅಂಡಾರ್ ಊರು ಇದೆ. ಈ ಅಡ್ಕ ಪ್ರದೇಶ ವಿಸ್ತಾರ ಆಗಿದೆ. ಅದಕ್ಕಾಗಿ ಇದನ್ನು ಮಲ್ಲ(ದೊಡ್ಡ) ಅಡ್ಕ ಎಂದಿರಬಹುದು. ಅಂಡಾರ್ ಊರಿಗೆ “ಕಡ್ದೆ” ಎಂತಲೂ ಕರೆಯುತ್ತಾರೆ ಅಂತೆ. ಕಡ್ದೆ ಎಂದರೆ ಕಾಡ್ದ (ಕಾಡಿನ)ಎಂದಾಗುತ್ತದೆ. ಕಾಡು ಎಂದರೆ ಮಲೆ ಎಂತಲೂ ಆಗುತ್ತದೆ. ಆದ್ದರಿಂದ ಮಲ್ಲಡ್ಕ ಎಂದರೆ ಮಲೆಯ ಅಡ್ಕ ಎಂದಾಗುತ್ತದೆ. ಮಲ್ಲಡ್ಕವು ಅಂದು ಮಲೆಯಿಂದಲೇ ತುಂಬಿದ್ದರಿಂದ ಮಲೆ ಅಡ್ಕ ಎಂದಿರಬಹುದು. ಕ್ರಮೇಣ ಮಲ್ಲಡ್ಕ ಆಗಿದೆ.