ಹೋಯ್ ಭಂಡಾರ್ರೇ ಹೇಗಿದ್ದೀರಾ ? ನಾನು ಯಾರು ಅಂತಾ ಗೊತ್ತಾಗಿಲ್ವೇ ? ಹೆಸ್ರು ಬೇಡ ಬಿಡ್ರಿ, ನಾನು ಅಖಿಲ ಭಾರತ ಬೊಕ್ಕತಲೆಯ ಸಂಘದ ಅಧ್ಯಕ್ಷ. ನಮ್ಮ ಒಂದಿಷ್ಟು ಗೋಳುಗಳನ್ನು ನಿಮ್ಮ ಹತ್ರ ಹೇಳಿಕೊಂಡು ನಿಮ್ಮ ಸಂಘದವತಿಯಿಂದ ಪರಿಹಾರ ಏನಾದ್ರೂ ಕೊಡ್ತೀರಾ ನೋಡುವ ಅಂತ ನಿಮಗೆ ಈ ಪತ್ರ ಬರಿತಾ ಇದೀನಿ.
ನಮ್ಮ ಗೋಳು ಕೇಳೋರು ಯಾರು ಹೇಳಿ ನೋಡೋಣ ತಲೆ ಮೇಲೆ ಇರೋದು ಮೂರೇ ಕೂದಲು ಅದನ್ನ ಆರು ತಿಂಗಳಿಗೊಮ್ಮೆ ಆದ್ರೂ ಕತ್ತರಿಸಿಕೊಂಡು ಬರೋಣ ಅಂತ ನಿಮ್ಮವರ ಬಳಿ ಹೋದೆ. ಅವನೋ ದಡೂತಿ ಮನುಷ್ಯ ಅವನ ಕೈ ಗಿಂತ ಹೊಟ್ಟೆಯೇ ಮುಂದು ಕುರ್ಚಿಗೆ ಹೊಟ್ಟೆ ತಾಗಿಸಿಕೊಂಡೆ ಕಟ್ಟಿಂಗ್ ಮಾಡಬೇಕಿತ್ತು. ನನ್ನ ತಲೆ ಕೂದಲು ಕಂಡವನೇ ಒಲ್ಲದ ಮನಸ್ಸಿನಿಂದ ಕತ್ತರಿ ಹಿಡಿದ ಹೇಗೋ ನಾನು ಹೇಳಿದಂತೆಯೇ ಇರೋ ಮೂರು ಕೂದಲು ಕತ್ತರಿಸಿ ಕೊಟ್ಟ. ಎಷ್ಟಾಯ್ತು ಎಂದು ಕೇಳಿದರೆ ಹೇಳಬಾರದ ಮೊತ್ತ ಹೇಳಿದ. ಅಬ್ಬಾ ಮೂರು ಕೂದಲು ತೆಗೆಯೋಕೆ ನಿಮಿಷ ಸಾಕು ಆದ್ರೂ ಅದೆಂತಾ ರೇಟು ಮರಾಯ್ರೆ ನಿಮ್ದು ?!! ಸ್ವಲ್ಪ ಕಡಿಮೆ ತಕೊ ಮರಾಯ ಹೇಳಿದ್ರೆ, ಇರೋ ಮೂರು ಕೂದಲಿಗೂ ಹಂಗೇ ಕಟ್ ಮಾಡು ಹಿಂಗೇ ಕಟ್ ಮಾಡು ಅಂತಾ ತಲೆ ತಿಂತೀರಾ ಇರೋ ಮೂರ್ ಕೂದ್ಲಲ್ಲಿ ಹುಡ್ಕಿ ಹುಡ್ಕೀ ಕಟ್ ಮಾಡ್ಬೇಕು ಟೈಮ್ ಎಷ್ಟ್ ತಗೊಳುತ್ತೆ ಗೊತ್ತಾ ? ಅದೂ ಅಲ್ದೇ ಬೇರೆ ಎಲ್ಲಾ ತಿಂಗಳಿಗೆ, ಹದಿನೈದು ದಿವಸಕ್ಕೊಮ್ಮೆ ಬಂದ್ರೆ ನೀವು ಆರು ತಿಂಗಳಿಗೊಮ್ಮೆ ಬರ್ತಿರಾ ನಿಮ್ಮ ಹತ್ರ ಎರಡು ತಿಂಗಳು ಬಿಟ್ಟು ನಾಲ್ಕು ತಿಂಗಳಿಂದೂ ಸೇರಿಸಿ ತಗೊಂಡ್ರು ತೊಂದ್ರೆ ಇಲ್ಲಾ ಅಂತ ಕಾರಣ ಕೊಡ್ತೀರಾ ಏನ್ ನ್ಯಾಯ ಸ್ವಾಮಿ ಇದು ?
ಮೊನ್ನೆ ಶೇವಿಂಗ್ ಮಾಡೋಣ ಅಂತ ನಿಮ್ಮವ್ರ ಹತ್ರ ಹೋಗಿದ್ದೆ ದೂರದಿಂದ ನೋಡಿದಾಗ ನಮ್ಮ ಸಂಬಂಧಿಕನ ರೀತಿಯೇ ಕಂಡಿತು. ಸಂಬಂಧಿಕ ಎಂದರೆ ತಲೆಲಿ ಮರಾಯ್ರೆ. ಖುಷಿಯಿಂದ ನಮ್ಮವನೇ ಎಂದು ಒಳಹೊಕ್ಕೆ ಆದರೆ ದುರ್ವಿಧಿ ಕಟ್ಟಿಂಗ್ ಮಾಡುವಾತ ಹಿಡಿಕಡ್ಡಿಗಿಂತ ಸ್ವಲ್ಪ ದಪ್ಪವಿದ್ದ ನನ್ನ ಸಂಬಂಧಿಕ ಅವನ ಎದುರು ನಿಂತು ಮಾತಾಡುತಿದ್ದ. ಶೇವಿಂಗ್ ಎಂದೆ ಪೂರ್ತಿ ಶೇವ್ ಅಥವಾ ಮುಖ ಮಾತ್ರನಾ ಎಂಬ ಮಾತು. ಏನ್ ಸ್ವಾಮಿ ಇದೆ ತೋರಿಸ್ಕೊಳೊಕೆ ಇರೋ ಮೂರು ಕೂದ್ಲನ್ನು ತೆಗ್ದು ಗುಂಡು ಹೊಡೆಸಿ ಕಳಿಸೊ ಐಡಿಯಾನಾ ನಿಮ್ಮದು ಕೇಳಿದ್ದೆ ತಡ, ಅವನಿಗಲ್ಲದ ಕೂಪು ತೋರಿಸುತ್ತಾ ಸಣ್ಣ ನಗಲಾರಂಭಿಸಿದ. ಮೀಸೆ ಒಂದು ಚೆಂದ ಬಿಡು ಮರಾಯ ಎಂದರೆ, ಬೋಳುತಲೆಗೆ ಎಂತ ಮೀಸೆ ಇಡ್ತೀರ ಅಂತ ಅದರ ಮೇಲೂ ತಾತ್ಸಾರ ಅವನಿಗೆ.
ಇನ್ನು ಕೆಲವರದ್ದು ವರ್ಷಕ್ಕೊಮ್ಮೆ ತಿರುಪತಿನೋ ಧರ್ಮಸ್ಥಳನೋ ಹೋಗಿಬನ್ನಿ ಕಟ್ಟಿಂಗ್ ಖರ್ಚು ಉಳಿಯುತ್ತೆ, ದೇವರು ಕಣ್ಣು ಬಿಟ್ರೆ ಕೂದಲು ಬಂದ್ರು ಬರಬಹುದು ಅಂತ ಬಿಟ್ಟಿ ಸಲಹೆ ಬೇರೆ.. ಮುಖ ತೊಳೆವಾಗ ಎಲ್ಲಿವರೆಗೆ ತೊಳೆಯೋದು ನೀವು ಎಂಬ ವ್ಯಂಗ್ಯದ ಮಾತು ಬೇರೆ. ಇನ್ನು ಫೇಶಿಯಲ್, ಫೇಸ್ ವಾಶ್ ಎಂದು ಹೋದರೆ ನಿಮ್ಮವರ ಮುಖ ಇನ್ನಷ್ಟು ಕೆಂಪೇರಿ ಹೋಗುತ್ತದೆ ಎಲ್ಲಿಯವರೆಗೆ ಕ್ರೀಂ ಹಾಕೋದಪ್ಪಾ ಎಂದು. ನಮಗೂ ಕೂದಲಿಲ್ಲ ಮಧ್ಯ ತಲೆವರೆಗೂ ಹಾಕದಿದ್ದರೆ ಸಮಾಧಾನವಿಲ್ಲ. ಇನ್ನು ಕೆಲವರದ್ದು ಹೇರ್ ಸ್ಟ್ರೇಟಿಂಗ್ ಎಲ್ಲಿ ಮಾಡಿದ್ದು ಅಂತಾ ಅಲ್ಲಲ್ಲಿ ನೆಟ್ಟಗೆ ನಿಂತ ಕೂದಲು ನೋಡಿ. ಕಿರಿ ಕಿರಿ ಮರಾಯ ಅದೆರಡು ಕೂದಲು ಕತ್ತರಿಸಿಕೊಡು ಎಂದರೆ ಅದಕ್ಕೂ ಚಾರ್ಜ್ ಮಾಡಬೇಕೆ ?!
ಹೀಗೆ ಹೇಳಹೊರಟರೆ ನಮ್ಮವರ ಗೋಳು ಬಹಳಷ್ಟಿದೆ. ನಿಮ್ಮವರಲ್ಲೂ ನಮ್ಮ ಸಂಘ ಸೇರಿದವರ ಸಂಖ್ಯೆ ಕಡಿಮೆ ಏನಿಲ್ಲ. ನಿಮ್ಮವರದ್ದೆ ಒಂದಿಷ್ಟು ಸಹಿ ಸಂಗ್ರಹಿಸಿ ಅವರ ಮೂಲಕವೇ ನಿಮ್ಮ ಮೇಲೆ ಒತ್ತಡ ಹೇರಿ ನಮಗೆ ಅರ್ಧ ಚಾರ್ಜ್ ಮಾಡುವಂತೆ ಮಾಡಬೇಕು ಎಂದಿದ್ದೇನೆ ಏನಂತೀರಾ ಸ್ವಾಮಿ. ನಮ್ಮ ಗೋಳುಗಳಿಗೆ ಪರಿಹಾರ ದೊರಕಬಹುದೇ ?
ವಿಜಯ್ ನಿಟ್ಟೂರು
So nice😎