January 18, 2025
Ammana dina

ಅಮ್ಮಾ ಎಂದರೆ ಏನೋ ಹರುಷವು.. ನಮ್ಮ ಪಾಲಿಗೆ ಅವಳೇ ದೈವವು.. ಹೌದು ಅಮ್ಮನ ಸ್ಥಾನವನ್ನು ತುಂಬಲು ಆ ದೇವರಿಂದಲೂ ಸಾಧ್ಯವಿಲ್ಲ. ಅಮ್ಮಾ… ಎಂಬ ಎರಡಕ್ಷರದ ಹಿಂದಿರುವ ಶಕ್ತಿಯು ಅಗಾಧವಾದುದು.

ಸುಖ ಸಾಂತ್ವನದ ತೊಟ್ಟಿಲು ಅಮ್ಮನ ಮಡಿಲು,
ಕೈ ಹಿಡಿದು ಸಹಕರಿಸುವಳು ಬಾಳಬಂಡಿ ಸಾಗಲು,
ಉಸಿರಿರುವವರೆಗೂ ಶ್ರಮಿಸುವಳು ರಾತ್ರಿ-ಹಗಲು,
ಇಳಿವಯಸ್ಸಲ್ಲಿ ಬಯಸುವಳು ಮಕ್ಕಳ ಹೆಗಲು,

ಪುಟ್ಟ ಮಗುವಿಗೆ ಅಮ್ಮನ ಮಡಿಲು ಎಂದರೆ.ಅದು ತುಂಟಾಟದ ಬಯಲು,ಸುಖನಿದ್ರೆಯ ತೊಟ್ಟಿಲು,ಸಾಂತ್ವನದ ಒಡಲು.ಬರೀ ಪುಟ್ಟ ಮಗುವಿಗೆ ಅಂದೇನಿಲ್ಲ ದೊಡ್ಡವರಿಗೂ ಅಷ್ಟೇ.. ಮನಸ್ಸಿನ ದುಃಖ ದುಮ್ಮಾನವು ದೂರ ಸರಿಯಲು ಅಮ್ಮನ ಮಡಿಳೊಲು ತಲೆಯಿಟ್ಟು ಮಲಗಿದರೆ ಸಾಕು.. ಏನೋ ಒಂದು ತರಹದ ನೆಮ್ಮದಿ ಜೊತೆಗೆ ಮನಸ್ಸೂ ಹಗುರವಾಗುವುದು.ಜೀವನವೆಂಬ ಪಾಠಕೆ ಗುರುವಾಗಿ,ಕೆಡವಿದಾಗ ಶಿಕ್ಷಿಸಿ,ಎಡವಿದಾಗ ಪ್ರಶ್ನಿಸಿ,ರಕ್ಷಿಸಿ,ಪೋಷಿಸಿ ಜೀವನದ ಪ್ರತಿ ಮಜಲುಗಳನ್ನು ಸರಿ ದಾರಿಯಲಿ ದಾಟಲು ಕೈಹಿಡಿದು ಮುನ್ನಡೆಸುವಳು.


ಒಂದು ಹೆಣ್ಣು ಯಾವಾಗ ಅಮ್ಮನಾದಳೋ ಅಂದಿನಿಂದ ಅವಳು.. ಅವಳ, ಕೊನೆ ಉಸಿರು ಇರುವವರೆಗೂ ತನ್ನ ಜೀವನವನ್ನು ಕರುಳ ಕುಡಿಗಾಗಿ ಸಮರ್ಪಿಸುತ್ತಾಳೆ.ಮಕ್ಕಳೇ ಅವಳ ಪ್ರಪಂಚವಾಗುವುದು,ಏನೇ ಮಾಡುಡಿದ್ರು ಅದು ಅವಳ ಮಕ್ಕಳ ಶ್ರೇಯೋಭಿವೃದ್ಧಿಗಾಗಿಯೇ ಆಗಿರುತ್ತದೆ. ತನ್ನ ಜೀವನವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟು ನಿಷ್ಕಲ್ಮಶ ಪ್ರೀತಿ,ಮಮತೆ,ವಾತ್ಸಲ್ಯ ತೋರಿ ಮತ್ತು ನಿಸ್ವಾರ್ಥ ಮನಸ್ಸಿನಿಂದ ಹಾರೈಸುವ ಅಮ್ಮಂನೆಂಬ ಕಣ್ಣಿಗೆ ಕಾಣೋ ದೇವರನ್ನು ಕೊನೆಯುಸಿರು ಇರುವವರೆಗೂ ಹೆಗಲಾಗಿ ನಿಂತು ಅವರಿಗೆ ನೆಮ್ಮದಿಯ ಜೀವನವನ್ನು ಕೊಡಿಸುವುದು ಮಕ್ಕಳ ಕರ್ತವ್ಯ.

ಈ ವಿಶ್ವ ಅಮ್ಮಂದಿರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗಿರಬಾರದು, ಬದಲಾಗಿ… ಹೇಗೆ ಅಮ್ಮ ಪ್ರತಿ ದಿನವೂ ತನ್ನ ಮಕ್ಕಳ ಬಗ್ಗೆ ಯೋಚನೆ,ಕಾಳಜಿ ವಹಿಸುತ್ತಾ ಇರುತ್ತಾಳೋ..ಅದೇ ರೀತಿ ಮಕ್ಕಳೂ ಸಹ ಅಮ್ಮನಿಗಾಗಿ ಸಮಯವನ್ನು ಕಾದಿರಿಸಿ ಅವಳ ಬೇಕು-ಬೇಡಗಳನ್ನು ಈಡೇರಿಸುತ್ತಾ, ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾ ಅವಳ ಜೀವನದ ಸಂಧ್ಯಾಕಾಲದ ವರೆಗೂ ಬೆಂಗಾವಲಾಗಿ ಇರಬೇಕು.

✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ

Leave a Reply

Your email address will not be published. Required fields are marked *