ಮಳೆಗಾಲದ ದಿನವೊಂದರಲ್ಲಿ ಮಧ್ಯಾಹ್ನಕ್ಕೆ ಮಳೆ ಶುರುವಾಯಿತು. ಕೆಲವರಿಗೆ ಮಳೆ ಕುಷಿಯನ್ನು ನೀಡಿದರೆ,ಕೆಲವರಿಗೆ ಹಿರಿಸು-ಮುರಿಸು ತರುತ್ತದೆ ಹಾಗೂ ಮತ್ತೆ ಕೆಲವರಿಗೆ ಹಳೆಯ ಘಟನೆಗಳು ಮರುಕಳಿಸುತ್ತವೆ ಅಂತಹ ಸಾಲಿನಲ್ಲಿದ್ದಾಳೆ ನಮ್ಮ ಕಥಾನಾಯಕಿ ಲಕ್ಷ್ಮೀ…
ರಜೆಯದಿನವಾದ್ದರಿಂದ ಮನೆಯಲ್ಲೇ ಏನನ್ನೋ ಬರೆಯುತ್ತಿದ್ದ ಲಕ್ಷ್ಮೀ ಮಳೆಯ ಚಿಟಪಟ ಸದ್ದಿಗೆ ಪೆನ್ನನ್ನು ಕೈಯಲ್ಲೇ ಹಿಡಿದು ಕೋಣೆಯ ಕಿಟಕಿಯ ಬಳಿ ಬಂದು ಮಳೆಯನ್ನೇ ಎಷ್ಟು ನೋಡಿದರೂ ಸಾಕಾಗುವುದಿಲ್ಲ ಅದರಲ್ಲೂ ಹೆಣ್ಣು ಮಕ್ಕಳಿಗೆ ಮಳೆಯನ್ನು ನೋಡುತ್ತಿದ್ದರೆ ಮನಸ್ಸು ತೆರೆದುಕೊಳ್ಳುತ್ತದೆಯಂತೆ ಈಗ ನಮ್ಮ ಲಕ್ಷ್ಮೀಯ ಮನಸ್ಸು ತೆರೆದು ಒಂದು ಘಟನೆಯ ಕಡೆಗೆ ಸಾಗುತ್ತಿದೆ,ಬನ್ನಿ ಸ್ವತಃ ಅವಳಿಂದಳೇ ಏನದು ಎಂದು ಕೇಳೋಣ…!
ಆವಾಗ ನನಗೆ ೧೩-೧೪ ವಯಸ್ಸು ಒಂದು ದಿನ ಎಂದಿನಂತೆ ಶಾಲೆಗೆ ಹೊರಡಲು ಸಿದ್ದತೆ ನಡೆಸುತ್ತಿದ್ದೆ. ಅಮ್ಮ ನನಗೆ ಎರಡು ಜಡೆ ಹಾಕಿ ದೃಷ್ಟಿ ತೆಗೆದಳು ನಂತರ ಅಮ್ಮ ಮಾಡಿದ್ದ ನನ್ನ ನೆಚ್ಚಿನ ತಿಂಡಿಯನ್ನು ತಿಂದು ಒಮ್ಮೆ ಅಮ್ಮನ ಕೊರಳನ್ನು ಸುತ್ತಿ ಬಾಯ್ ಅಮ್ಮಾ… ಎಂದು ಜೋರಾಗಿ ಹೇಳಿ ಶಾಲೆಗೆ ಹೋದೆ, ನಾವು ಮೇಲ್ನೋಟಕ್ಕೆ ನೋಡುತ್ತಿರುವ ಅಮ್ಮ ನಿಜವಾದ ಅಮ್ಮನಾಗಿರುವುದಿಲ್ಲ,ಅಂದರೆ ಅಮ್ಮ ತನ್ನೊಳಗಿರುವ ಅದೆಷ್ಟೋ ಭಾವನೆಗಳನ್ನು ಹೇಳುವುದೇ ಇಲ್ಲ ಅವಳಿಗೆ ಎಷ್ಟೇ ಕಷ್ಟಗಳಿದ್ದರೂ, ನೊವುಗಳಿದ್ದರೂ ಮಕ್ಕಳೆದುರಿಗೆ ತೋರಿಸಿಕೊಳ್ಳುವುದಿಲ್ಲ ಬರೀ ಪ್ರೀತಿಯನ್ನು ಮಾತ್ರ ಹಂಚುತ್ತಾಳೆ ವಿನಹ ನೋವುಗಳನ್ನಲ್ಲ, ನನ್ನಮ್ಮ ಕೂಡ ಹಾಗೆಯೇ..
ನನ್ನ ತಾಯಿಗೆ ವಿಪರೀತ ಎದೆನೊವು ಯಾವ ಮಾತ್ರೆ, ಔಷಧಗಳಿಗೂ ಹೋಗಿರಲಿಲ್ಲ ನನ್ನ ತಂದೆ ಹಲವಾರು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು ಆದರೆ ವೈದ್ಯರ ಮಾತು ಒಂದೇ ಆಪರೇಶನ್ ಆಗಬೇಕು ಹೃದಯದಲ್ಲಿ ಒಂದು ಪುಟ್ಟ ರಂದ್ರವಾಗಿದೆ ಆದರೆ ಆಪರೇಶನ್ ಆದ ಮೇಲೂ ಸಹ ಬದುಕುಳಿಯುವುದು ಕಷ್ಟವೆಂದು ಹೇಳುತ್ತಿದ್ದರು.
ನಾನು ಸ್ಕೂಲಿಗೆ ಹೋಗಿದ್ದೆ ಅಪ್ಪ ಕೆಲಸಕ್ಕೆ ಹೋಗಿದ್ದರು, ಎಂದಿನಂತೆ ನಾನು ಸ್ಕೂಲು ಮುಗಿಸಿಕೊಂಡು ಮನೆಗೆ ಬಂದೆ ಬಾಗಿಲಿಗೆ ಬರುವಾಗಲೇ ಅಮ್ಮಾ….. ಎಂದು ಕರೆದು ಅಭ್ಯಾಸ ಆದರೆ ಅವತ್ತು ಅಮ್ಮನಿಂದ ಪ್ರತಿಕ್ರಿಯೆ ಬರಲಿಲ್ಲ, ನಾನು ಒಳಗೆ ಹೋದೆ ಅಲ್ಲೊಂದು ಆಘಾತ ನನಗಾಗಿ ಕಾಯುತ್ತಿತು. ಬಾಗಿಲು ತೆರೆದೇ ಇತ್ತು, ಅಮ್ಮ ಎಡಗೈಯಲ್ಲಿ ಎದೆ ಹಿಡಿದು ನೆಲದ ಮೇಲೆ ಬಿದ್ದಿದ್ದಳು, ಅಮ್ಮನ ಭುಜವಿಡಿದು ಅಲ್ಲಾಡಿಸಿ ಎಷ್ಟು ಭಾರಿ ಕೂಗಿದರೂ ಅಮ್ಮನಿಗೆ ಎಚ್ಚರವಾಗಲ್ಲಿಲ್ಲ ಏಕೆಂದರೆ ಮಧ್ಯಾಹ್ನದ ಹೊತ್ತಿನಲ್ಲೇ ಅಮ್ಮನಿಗೆ ಎದೆ ನೋವು ಹೆಚ್ಚಾಗಿ, ಉಸಿರಾಟಕ್ಕೂ ಕಷ್ಟವಾಗಿ ತನ್ನ ಕೊನೆಯ ಉಸಿರೆಳೆದಿದ್ದಳು. ಆಪರೇಶನ್ ಮಾಡಿಸಬೇಕ ಬೇಡವಾ ಎಂದು ನಿರ್ಧರಿಸುವ ಮುನ್ನವೇ ಅಮ್ಮ ಇಲ್ಲವಾಗಿದ್ದಳು.
ಅಮ್ಮ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಬಹಳಾ ಕಷ್ಟವಾಯಿತು. ಮಾರನೆಯದಿನ ಶಾಲೆಗೆ ಹೋಗಬೇಕು ಎರಡು ಜಡೆ ಹಾಕುವವರಿಲ್ಲ, ದೃಷ್ಟಿ ತೆಗೆಯುವವರಿಲ್ಲ, ನೆಚ್ಚಿನ ತಿಂಡಿ ಮಾಡುವವರಿಲ್ಲ ಅಮ್ಮನ ಕೊರಳ ಸುತ್ತಿ ಬಾಯ್ ಹೇಳಲು ಅಮ್ಮನೇ ಇಲ್ಲ. ಒಂದೇ ದಿನಕ್ಕೆ ಇಷ್ಟೋಂದು ವ್ಯತ್ಯಾಸವನ್ನು ಊಹಿಸಿಯೂ ಇರಲಿಲ್ಲ, ಹಿಂದಿನ ದಿನ ಅಮ್ಮನಿದ್ದ ಜಾಗವನ್ನೆಲ್ಲ ನೋಡಿ ನನಗೆ ತುಂಬಾ ನೋವಾಯಿತು ತಡೆಯಲಾಗದಷ್ಟು ಅಳುಬಂದಿತ್ತು, ಅಮ್ಮನ ಕೆಲಸಗಳನ್ನು ಬೇರೆಯಾರೋ ಮಾಡಬಹುದಿತ್ತು ಆದರೆ ಅಮ್ಮನ ಆ ನಗು ,ಅವಳು ನೀಡುತ್ತಿದ್ದ ಪ್ರೀತಿ ಸ್ವತಃ ಆ ದೇವರೇ ಬಂದರೂ ನೀಡಲು ಸಾದ್ಯವಿಲ್ಲ ಹೀಗೆ ಪ್ರತಿಯೊಂದರಲ್ಲೂ ಅಮ್ಮನನ್ನು ನೆನೆಯುತ್ತಿದ್ದ ಲಕ್ಷ್ಮೀಗೆ ಜೋರಾದ ಗುಡುಗೊಂದು ವಾಸ್ತವಕ್ಕೆ ಮರಳಿ ತಂದಿತು.
ಅಂದ ಹಾಗೆ ಲಕ್ಷ್ಮೀಗೆ ಅವತ್ತು ಅದೇ ಘಟನೆ ಏಕೆ ನೆನಪಾಯಿತು ಎಂದರೆ, ಲಕ್ಷೀ ಈಗ ಒಬ್ಬ ಸೈಕೋಲಜಿಸ್ಟ್ (ಮನೋಶಾಸ್ತ್ರಜ್ಞೆ). ಸುಮಾರು ೧೦-೧೨ ವರ್ಷದ ಹುಡುಗಿಯೊಬ್ಬಳು ಈಕೆಯ ಬಳಿ ಚಿಕಿತ್ಸೆಗಾಗಿ ನಾಳೆ ಬರುವವಳಿದ್ದಾಳೆ, ಆಕೆಗೆ ಕಾಯಿಲೆ ಏನೆಂದರೆ ಕೆಲವು ತಿಂಗಳುಗಳ ಹಿಂದೆ ಆಕೆಯ ತಾಯಿ ರಸ್ತೆ ಅಪಘಾತದಲ್ಲಿ ಸತ್ತು ಹೋಗಿರುತ್ತಾಳೆ, ಅಂದಿನಿಂದ ಈ ಹುಡುಗಿ ಒಂದು ಹನಿ ಕಣ್ಣೀರನ್ನೂ ಸಹ ಹಾಕದೆ ಜೀವಂತ ಶವದ ರೀತಿ ಬದುಕುತ್ತಿರುತ್ತಾಳೆ, ಆಕೆಯ ತಂದೆ ಹೇಗಾದರೂ ಮಾಡಿ ನನ್ನ ಮಗಳನ್ನು ಗುಣಪಡಿಸಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಅಂಗಲಾಚಿ ಬೇಡಿರುತ್ತಾರೆ.
ಮಗುವಿಗೆ ಚಿಕಿತ್ಸೆ ನೀಡಲು ಲಕ್ಷ್ಮೀಯ ಮನಸ್ಸು ಒದ್ದಾಡುತ್ತಿತ್ತು, ಏಕೆಂದರೆ ಬೇರೆ ಯಾವುದಕ್ಕಾದರೂ ಪರ್ಯಾಯ ಮಾರ್ಗವನ್ನು ಸೂಚಿಸಿ ಸರಿಯಾದದಾರಿಗೆ ತರಬಹುದು ಆದರೆ ಅಮ್ಮನಿಗೆ, ಅಮ್ಮನ ಪ್ರೀತಿಗೆ ಬದಲಿಯಾದ ಆಯ್ಕೆ ಇಲ್ಲವೆಂದು ಲಕ್ಷ್ಮೀಗೆ ಸ್ವತಃ ಅನುಭವವಿತ್ತು..
✍🏻 ರೇಖಾ. ಎಸ್, ಬೆಂಗಳೂರು