ಪ್ರಪಂಚಕ್ಕೆ ಕಾಲಿಟ್ಟ ಪ್ರತಿಯೊಂದು ಮಗುವಿನ ಮೊದಲ ತೊದಲ ನುಡಿ ಅಮ್ಮ. ಬಿದ್ದಾಗ, ಎದ್ದಾಗ, ನಕ್ಕಾಗ, ಅಳುವಾಗ ಎಷ್ಟೋ ಸಲ ಅಮ್ಮ ಎಂದೇ ಸಂಬೋಧಿಸುವ ನಾವು, ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಏಳೇಳು ಜನ್ಮದಲ್ಲಿ ನಮ್ಮಿಂದ ಸಾಧ್ಯವಿಲ್ಲ. ಬಹುಶಃ ಈ ಜಗದಲ್ಲಿ ಬೆಲೆಕಟ್ಟಲಾಗದ ಪ್ರೀತಿಯ ಆಸ್ತಿಯೆಂದರೆ ಅದು ಅಮ್ಮ. ಅಮ್ಮಾ…ಅನ್ನುವ ಈ ಪದ ಎಂತಹ ನೋವನ್ನು ಕ್ಷಣಮಾತ್ರದಲ್ಲಿ ಮರೆಸಿ ಬಿಡುತ್ತದೆ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂದು ನಂಬಿರುವ ನಾವು ಈ ಮೂವರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ… ಅಮ್ಮಾ ನಮ್ಮೊಡನೆ ಇದ್ದಾಗ ಆಕೆಯ ಪ್ರೀತಿ, ಕಾಳಜಿ ನಮಗೆ ಅರ್ಥವಾಗೋದೇ ಇಲ್ಲ. ದೊಡ್ಡವರಾದಂತೆ ಆಕೆಗೆ ಏನು ಅರ್ಥವಾಗುವುದಿಲ್ಲ ಬರೀ ಮುಗ್ಧೆ ಎಂದು ಸದಾ ಬೈದುಕೊಳ್ಳುವ ನಾವು ಆಕೆಯ ನೋವು, ಆತಂಕವನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಮುಗ್ಧೆಯಾಗಿದ್ದುಕೊಂಡು ನಸುನಗುತ್ತಾ ಎಲ್ಲಾ ನೋವನ್ನು ಸಹಿಸಿಕೊಳ್ಳುವ ಆಕೆಯ ತಾಳ್ಮೆ ಮೆಚ್ಚುವಂತದ್ದು. ಒಂದು ಮನೆಯಲ್ಲಿ ತಾಯಿಯ ಸ್ಥಾನ ಖಾಲಿಯಾಗಿದ್ದರೆ ಇಡೀ ಮನೆಯೇ ಖಾಲಿಯಾದಂತೆ.
ನವಮಾಸ ತನ್ನ ಗರ್ಭದಲ್ಲಿ ಹೊತ್ತು, ಹೆತ್ತು ಕಠಿಣ ಹೆರಿಗೆ ನೋವು ಸಹಿಸಿ ಸಾಕಿದ ಅಮ್ಮನ ಸ್ವಾರ್ಥರಹಿತ ಪ್ರೀತಿ ಅಪಾರ. ಸಹೃದಯಿ, ಕರುಣಾಮಯಿ, ತ್ಯಾಗಮಯಿಯ ಪ್ರತಿರೂಪ ತಾಯಿ. ಆಕೆಯ ಋಣವನ್ನು ತೀರಿಸಲು ಅಸಾಧ್ಯ. ಆಕೆಯ ಜೀವನ ಸಾರ್ಥಕವಾಗುವುದೇ ಆಕೆ “ಅಮ್ಮಾ” ಎಂದು ಕರೆಸಿಕೊಂಡಾಗ ಮಾತ್ರ. “ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನನ್ನಮ್ಮ ನಾನಿನ್ನೇನು ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ” ಇದು ಮಹಾನ್ ಸಂತ ವಿವೇಕಾನಂದರು ಹೇಳಿದ ಮಾತು.
ಪ್ರಕೃತಿ ಮಾತೆಯಂತೆ ಈ ಮಾತೆಯು ಕೂಡ ನಮ್ಮಿಂದ ಫಲಾಪೇಕ್ಷೆ ಬಯಸದೇ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತಾಳೆ. ಬಾಲ್ಯದಲ್ಲಿ ಒಳ್ಳೆಯ ನೀತಿ ಕಥೆಗಳನ್ನು ಹೇಳಿ, ಜೀವನದ ಮೌಲ್ಯಗಳನ್ನು ನೀಡುವ ತಾಯಿ, ಮಕ್ಕಳಿಗೆ ಬೇಕಾದದ್ದನ್ನು ತಂದೆಯಿಂದ ಬೈಸಿಕೊಂಡು ಮಕ್ಕಳಿಗೆ ಕೊಡಿಸಿ ಅವರ ಏಳಿಗೆಗಾಗಿ ಶ್ರಮಿಸುವ ತಾಯಿ, ಮಕ್ಕಳು ಪ್ರಾಯಕ್ಕೆ ಬಂದ ನಂತರ ಬೇಡವಾಗುತ್ತಾಳೆ. ದುರಂತವೆಂದರೆ ಹುಟ್ಟಿದಾಗಿನಿಂದ ಸಾಕಿ-ಸಲಹಿದ ಆ ತಂದೆ- ತಾಯಿ ಕೊನೆಗೆ ಮಕ್ಕಳಿಗೆ ಭಾರವಾಗುತ್ತಾರೆ. ಮಕ್ಕಳು ಇದ್ದೂ ಅನಾಥರಾಗಿ ವೃದ್ಧಾಶ್ರಮದಲ್ಲಿ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತಿರುವುದು ದುರಾದೃಷ್ಟಕರ.
ವಿಶೇಷವಾಗಿ ಅಮ್ಮಂದಿರ ಅಪ್ಪಂದಿರ ದಿನದಂದು ಮಾತ್ರ ಅತ್ಯಂತ ಪ್ರೀತಿ, ಕಾಳಜಿ ತೋರಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಲು ಪ್ರೀತಿ ತೋರುವ ಬದಲು ಪ್ರತಿದಿನ ನಿಜವಾದ ಮಮತೆ, ಪ್ರೀತಿ ನೀಡಿದರೆ ಆ ಬಡಪಾಯಿ ಹೃದಯ ಅದೆಷ್ಟು ಖುಷಿ ಪಡಬಹುದು ಅಲ್ವೇ!!?
ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ