ಲೇ ಬೇಗ ಬಾರೆ ಎನ್ನುತ್ತಾ ಪತ್ನಿಯನ್ನು ಕರೆದೆ .ನನ್ನ ಮಗನ ವಿವಾಹ ಆಮಂತ್ರಣವನ್ನು ಸೋದರಮಾವನಿಗೆ ನೀಡಲು ಪತ್ನಿ ಜೊತೆ ಹೊರಟಿದ್ದೆ ತಂಗಿ ಮತ್ತು ಅವಳ ಮಗ ಚಿಂತನ್ ಜೊತೆಗೆ
ಬಂದರು.
ರೀ ನಾವು ಮಾವನ ಮನೆಗೆ ಹೋಗುವಾಗ ದಾರಿಯಲ್ಲಿ ಶ್ರೀಧರ್ ಅಣ್ಣನ ಮನೆ ಸಿಗುತ್ತದೆ. ನಾವು ಶ್ರೀಧರ್ ಅಣ್ಣನನ್ನು ಭೇಟಿಮಾಡುವ ಅವರಿಗೂ ಆಹ್ವಾನ ಪತ್ರಿಕೆ ನೀಡಿ ಬರೋಣ. ಬಹಳ ಒಳ್ಳೆಯ ವ್ಯಕ್ತಿ. ಶ್ರೀಧರಣ್ಣ ಸಮಾಜ ಸೇವಕ.
ನಾವು ಶ್ರೀಧರ್ ಅಣ್ಣನ ಮನೆಗೆ ಹೋದಾಗ ನಮ್ಮನ್ನು ಬಹಳ ಪ್ರೀತಿ ಮತ್ತು ವಿನಯತೆಯಿಂದ ಎದುರುಗೊಂಡರು. ಬಹಳ ಸುಂದರವಾದ ಮನೆ. ವಠಾರವನ್ನು ಬಹಳ ಶುಚಿಯಾಗಿ ಇಟ್ಟುಕೊಂಡಿದ್ದರು. ಯಾವುದೇ ಕಸ ವಾಗಲಿ ಮುಖ್ಯವಾಗಿ ಪ್ಲಾಸ್ಟಿಕ್ ರಾಕ್ಷಸನ ಅವಶೇಷ ವಿರಲಿಲ್ಲ. ನಾನು ಈ ಬಗ್ಗೆ ಶ್ರೀಧರ್ ಅಣ್ಣನಲ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದೆ. ಆಗ ಶ್ರೀಧರಣ್ಣ ಪ್ಲಾಸ್ಟಿಕ್ ನಿಂದ ಆಗುವ ಅನಾಹುತ ಹಾಗೂ ಮಡಿಕೇರಿಯ ಮಾಂದಲಪಟ್ಟಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅರಣ್ಯದ ಬಗ್ಗೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಬಹಳ ವಿಷಯಗಳ ಮಾಹಿತಿ ನೀಡಿದರು. ನಮ್ಮ ಅಕ್ಕಪಕ್ಕದ ವಠಾರ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೋಡಿ ಸ್ವಲ್ಪವೂ ಪರಿಸರ ಪ್ರಜ್ಞೆ ಇಲ್ಲದವರು. ಎಲ್ಲರೂ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ನಮ್ಮ ವಠಾರ ನೋಡಿ ನಾವು ಒಂದು ಚಾಕ್ಲೇಟ್ ಕವರ್ ಕೂಡ ಎಸೆಯುವುದಿಲ್ಲ. ನಾವು ಮಾತಿನಲ್ಲಿ ಅಲ್ಲ ಕೃತಿಯಲ್ಲಿ ಮಾಡಿ ತೋರಿಸಬೇಕು. ಎಂದರು ಶ್ರೀಧರಣ್ಣ.
ಅಷ್ಟರಲ್ಲಿ ಶ್ರೀಧರ್ ಅಣ್ಣನ ಕೆಲಸದಾಳು ತರಕಾರಿ ಮತ್ತು ಹಣ್ಣುಗಳನ್ನು 2 ಪ್ಲಾಸ್ಟಿಕ್ ಕವರುಗಳಲ್ಲಿ ಕೊಟ್ಟನು. ಆಗ ನನ್ನ ಸೋದರಳಿಯ ಚಿಂತನ್ ಹೀಗೆಂದನು. “ಅಂಕಲ್ ನೀವು ಈ ಪ್ಲಾಸ್ಟಿಕನ್ನು ಏನು ಮಾಡುತ್ತೀರಾ?” ಆಗ ಅವರು ಚಿಂತನ್ ನೀನು ಬಹಳ, ಜಾಣ ಎನ್ನುತ್ತಾ ಅವನ ತಲೆ ಸವರಿ ಸ್ವಲ್ಪ ಓವರ್ ಮಾತನಾಡುತ್ತಾನೆ ಅಲ್ವಾ ಎನ್ನುತ್ತಾ ನಮ್ಮನ್ನು ಬೀಳ್ಕೊಟ್ಟರು.
ನಾವು ಮಾವನ ಮನೆಗೆ ಹೋಗಿ ವಾಪಾಸ್ ಬರುವಾಗ ಅದೇ ದಾರಿಯಲ್ಲಿ ನಮ್ಮ ಮುಂದಿನಿಂದ ಶ್ರೀಧರ್ ಅಣ್ಣನ ಕಾರು ಚಲಿಸುತ್ತಿತ್ತು, ಅರೆ ಶ್ರೀಧರ್ ಅಣ್ಣನ ಕಾರ್ ಅಲ್ವಾ ಎನ್ನುವಷ್ಟರಲ್ಲಿ ರಿಕ್ಷಾದವ ನೊಬ್ಬ ನಮ್ಮೆರಡು ಗಾಡಿಗಳ ಮಧ್ಯೆ ಸೇರಿಕೊಂಡಿದ್ದರಿಂದ ನಮ್ಮ ಗಾಡಿಗಳ ನಡುವೆ ಅಂತರ ಹೆಚ್ಚಾಯ್ತು. ಸುಂದರವಾದ ಪ್ರಕೃತಿಯ ನಡುವೆ ನಾವು ಸಾಗುತ್ತಿದ್ದೆವು. ಮನುಷ್ಯನ ದುಷ್ಟತನಕ್ಕೆ ಈ ಏರಿಯಾ ಬಲಿಯಾಗಿಲ್ಲ ಎನ್ನುತ್ತಾ ಮುಂದೆ ಸಾಗಿದಾಗ ದುರ್ನಾತ ಮೂಗಿಗೆ ಬಡಿದು ನಾವು ಮೂಗು ಮುಚ್ಚಿಕೊಂಡು ನೋಡಿದರೆ ಶ್ರೀಧರ್ ಅಣ್ಣನ ಗಾಡಿ ನಿಧಾನವಾಯಿತು ಗಾಡಿ ಒಳಗಿಂದ ಶ್ರೀಧರಣ್ಣ 2 ದೊಡ್ಡ ಪ್ಲಾಸ್ಟಿಕ್ ಕವರುಗಳ ಮುಖಾಂತರ ತ್ಯಾಜ್ಯದ ರಾಶಿಯನ್ನು ರಸ್ತೆಬದಿಗೆ ಎಸೆದು ಬಾಣದಂತೆ ಕಾರನ್ನು ಮುಂದಕ್ಕೆ ಓಡಿಸಿದರು.
ನೋಡು ,ನೋಡು, ಇದೇ ವ್ಯಕ್ತಿ,ಇದೇ ಗಾಡಿ ನೋಡಲು ದೊಡ್ಡ ಜನ ಮಾಡುವುದು ಗಲೀಜು ಕೆಲಸ. ತನ್ನ ವಠಾರವನ್ನು ಸ್ವಚ್ಛಗೊಳಿಸಿ ಅಲ್ಲಿಯ ಗಲೀಜನ್ನು ಪ್ಲಾಸ್ಟಿಕ್ಕನ್ನು ತಂದು ಇಲ್ಲಿ ಸುರಿದು ನಮ್ಮ ಊರನ್ನು ನಮ್ಮ ಪರಿಸರವನ್ನು ಹಾಳು ಮಾಡುತ್ತಾನೆ .ಇಲ್ಲಿರುವ ತ್ಯಾಜ್ಯ ರಾಶಿಯಲ್ಲಿ ಅರ್ಧದಷ್ಟು ತ್ಯಾಜ್ಯ ಅವನೇ ತಂದು ಹಾಕಿದ್ದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಾನು ನಿಧಾನವಾಗಿ ಕಾರನ್ನು ಮುಂದಕ್ಕೆ ಚಲಾಯಿಸಿದೆ. ಪರಿಸರ ಸಂರಕ್ಷಣೆ, ಮಾತಿಗಿಂತ ಕೃತಿ ಲೇಸು, ಎಲ್ಲಾ ಪದಗಳು ನನ್ನ ತಲೆಯಲ್ಲಿ ದೊಂಬರಾಟ ನಡೆಸುತ್ತಿದ್ದಾಗ ನನ್ನ ಅಳಿಯ ಚಿಂತನನ ಮಾತು ಕಿವಿಗೆ ಅಪ್ಪಳಿಸಿತು. “ಮಾವ , ಶ್ರೀಧರ್ ಅಂಕಲ್ ಮಾಡಿದ್ದು ಓವರ್ ಅಲ್ವಾ ?!”
– ಶ್ರೀಮತಿ ಶಮ್ಮಿ ಬೊಟ್ಯಾಡಿ