January 18, 2025
images-3
ಕೇಂದ್ರದ ರಸಗೊಬ್ಬರ ಖಾತೆಯ ಸಚಿವರಾಗಿದ್ದ,ಹಾಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದ ಶ್ರೀಯುತ ಅನಂತ್ ಕುಮಾರ್ ಕ್ಯಾನ್ಸರ್ ಎಂಬ ಮಹಾಮಾರಿಯ ಬಲೆಗೆ ಬಿದ್ದು, ಬಹುಅಂಗಾಗ ವೈಫಲ್ಯಕ್ಕೊಳಗಾಗಿ ನವೆಂಬರ್ 12,2018 ರ ಸೋಮವಾರ ಬೆಳಗಿನ ಜಾವ 2:30 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.ಅವರಿಗೆ 59 ವರ್ಷ ವಯಸ್ಸಾಗಿತ್ತು.ಅವರು ಪತ್ನಿ ಶ್ರೀಮತಿ ತೇಜಸ್ವಿನಿ,ಮಕ್ಕಳಾದ ಐಶ್ವರ್ಯ ಮತ್ತು ವಿಜೇತಾ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

1959 ರ ಜುಲೈ 22 ರಂದು ಶ್ರೀ ನಾರಾಯಣ ಶಾಸ್ತ್ರಿ ಮತ್ತು ಶ್ರೀಮತಿ ಗಿರಿಜಾ ಶಾಸ್ತ್ರಿ ದಂಪತಿಯ ಮಗನಾಗಿ ಜನಿಸಿದ ಇವರು ಬಿ.ಎ ಪದವಿ ಪೂರೈಸಿ ನಂತರ ಕಾನೂನು ಪದವಿ ಗಳಿಸಿದರು.ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವದ ಗುಣ ಬೆಳೆಸಿಕೊಂಡ ಅನಂತ್ ಮೊದಲು ಆರ್ ಎಸ್ ಎಸ್ ನಡೆಗೆ ಆಕರ್ಷಿತರಾಗಿದ್ದರು.ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು,ಪ್ರಖರ ಹೋರಾಟಗಳಿಂದ ಯುವನಾಯಕನಾಗಿ ಗುರುತಿಸಿಕೊಂಡರು.1986 ರಲ್ಲಿ  ABVP ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.ನಂತರ ಎಲ್.ಕೆ.ಅಡ್ವಾಣಿ ಜೀ ಮತ್ತು ಅಟಲ್ ಜೀಯವರ ಬಲಪಂಥೀಯ ಸಿದ್ಧಾಂತಗಳಿಗೆ ಮನಸೋತು ಭಾರತೀಯ ಜನತಾ ಪಕ್ಷ ಸೇರಿದರು.ಇವರ ಅದಮ್ಯ ಉತ್ಸಾಹ ಕಂಡು ಬಿಜೆಪಿಯ ಮುಖಂಡರು ಇವರನ್ನು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಜ್ಯಾಧ್ಯಕ್ಷರನ್ನಾಗಿ ನಿಯೋಜಿಸಿದರು.ದಕ್ಷಿಣ ಭಾರತದಲ್ಲಿ ಬಿಜೆಪಿಯ ಉಗಮಕ್ಕೆ ಟೊಂಕ ಕಟ್ಟಿ ನಿಂತರು.ಆಗಷ್ಟೇ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬಿಜೆಪಿಯ ಯುವನಾಯಕ ಬಿ.ಎಸ್ ಯಡಿಯೂರಪ್ಪನವರೊಂದಿಗೆ ಸೇರಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಬಲವರ್ಧನೆಗೆ ಶ್ರಮಿಸಿದರು.ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಆರಂಭಗೊಂಡಾಗ ಅಡ್ವಾಣಿ ಜೀಯವರೊಂದಿಗೆ ದೇಶಾದ್ಯಂತ ಸಂಚರಿಸಿದರು. ಇವರ ನಿಸ್ವಾರ್ಥ ಸೇವೆಯನ್ನು ಮನಗಂಡ ಅಡ್ವಾಣಿ ಜೀ ಮತ್ತು ಅಟಲ್ ಜೀ ಅನಂತ್ ಕುಮಾರ್ ರವರನ್ನು ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು.ಅಡ್ವಾಣಿ ಜೀಯವರಂತೂ ಅನಂತ್ ರನ್ನು ತಮ್ಮ ಮಾನಸಪುತ್ರ ಎಂದು ಹಲವಾರು ಸಂದರ್ಭಗಳಲ್ಲಿ ಹೇಳಿದ್ದುಂಟು.

1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೊಟ್ಟಮೊದಲನೇ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ರವರ ಪತ್ನಿ ವರಲಕ್ಷ್ಮಿ ಗುಂಡೂರಾವ್ ರನ್ನು ಅಲ್ಪಮತದ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು.ಅಂದಿನಿಂದ ಇಂದಿನವರೆಗೆ ಸೋಮಣ್ಣ,ಕೃಷ್ಣಾ ಬೈರೇಗೌಡ,ನಂದನ್ ನೀಲೇಕಣಿ ಮುಂತಾದ ದಿಗ್ಗಜರು ಪ್ರತಿಸ್ಪರ್ಧಿಗಳಾದಾಗಲೂ ನಿರಾಯಾಸವಾಗಿ ಆರನೇ ಬಾರಿಯೂ ಗೆಲುವು ಸಾಧಿಸಿ ದಾಖಲೆ ಬರೆದರು.ಕ್ಷೇತ್ರದ ಅಭಿವೃದ್ಧಿ,ಸ್ನೇಹಮಯಿ ವ್ಯಕ್ತಿತ್ವ, ಸರಳ ಸಜ್ಜನಿಕೆ ಮತ್ತು ಪಕ್ಷಾತೀತ ಸ್ನೇಹ ಬಾಂಧವ್ಯ ಅವರ ಗೆಲುವಿನ ಒಳಗುಟ್ಟು ಎಂದರೆ ತಪ್ಪಾಗಲಾರದು.

ಮೂವತ್ತೆಂಟನೇ ವಯಸ್ಸಿನಲ್ಲಿ ಅಟಲ್ ಜೀಯವರ ಸಂಪುಟದಲ್ಲಿ ಅತೀ ಕಿರಿಯ ವಯಸ್ಸಿನ ಸಚಿವರಾಗಿ ಸೇರ್ಪಡೆಗೊಂಡು ನಾಗರಿಕ ವಿಮಾನಯಾನ ಖಾತೆಯಂತಹ  ಪ್ರಮುಖ ಖಾತೆಯನ್ನು ವಹಿಸಿಕೊಂಡರು.ನಂತರದ ದಿನಗಳಲ್ಲಿ ಯುವಜನ ಸೇವೆ,ನಗರಾಭಿವೃದ್ಧಿ, ಪೆಟ್ರೋಲಿಯಂ,ಔಷದೀಯ, ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರಗಳ ಖಾತೆಯಂತಹ ಉನ್ನತ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ದೆಹಲಿಯ ಮೆಟ್ರೋ ರೈಲ್ವೇ,ಫ್ಲೈ ಓವರ್,ಬೆಂಗಳೂರಿನ ಮೆಟ್ರೋ,ಫ್ಲೈ ಓವರ್,ಹಲವಾರು ಸಂಪರ್ಕ ರೈಲು ವ್ಯವಸ್ಥೆ, ನೆಹರೂ ಯುವಕೇಂದ್ರದ ಪುನರುಜ್ಜೀವನ,ಬೆಂಗಳೂರಿನ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ,ದೇಶಾದ್ಯಂತ ಲಕ್ಷಾಂತರ ಜನೌಷದಿ ಮಳಿಗೆಗಳು,ಹೃದಯದ ಸ್ಟಂಟ್ ಅಳವಡಿಕೆ ಸಾಧನದ ಬೆಲೆಯಲ್ಲಿ 70% ಇಳಿಕೆ,ಮೊಣಕಾಲು ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ವೆಚ್ಚ  69% ಇಳಿಕೆ,ಗ್ರಾಮೀಣ ಪ್ರದೇಶದ ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ “ಸುವಿಧಾ” ನ್ಯಾಪ್ ಕಿನ್ ಪ್ಯಾಡ್ ಗಳನ್ನು ಕೇವಲ ಎರಡೂವರೆ ರೂಪಾಯಿಗೆ ವಿತರಣಾ ವ್ಯವಸ್ಥೆ, ರಸಗೊಬ್ಬರದ ಸಮರ್ಪಕ ಉತ್ಪಾದನೆ, ವಿತರಣೆ,ನೈಸರ್ಗಿಕ ಬೇವಿನ ರಸದ ಕೋಟಿಂಗ್ ಇರುವ ನೀಮ್ ಕೋಟೆಡ್ ರಸಗೊಬ್ಬರಗಳ ತಯಾರಿಕೆಗೆ ಪ್ರಚೋದಿಸಿ ರೈತರ ಮೊಗದಲ್ಲಿ ವಿಶ್ವಾಸದ ನಗು ಮೂಡಿಸಿದ ವ್ಯಕ್ತಿಯಾಗಿದ್ದರು.ಹೀಗೆ ತಮಗೆ ವಹಿಸಿದ ಪ್ರತೀ ಖಾತೆಯಲ್ಲಿಯೂ ಕ್ರಾಂತಿ ಮಾಡಿದ ಏಕೈಕ ಸಚಿವ ಇವರಾಗಿದ್ದರು.ಮಹದಾಯಿ ಯೋಜನೆ ಇರಬಹುದು, ಕಾವೇರಿ ಸಮಸ್ಯೆ ಇರಬಹುದು ಪ್ರತಿಯೊಂದು ಜ್ವಲಂತ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಸ್ಪಂದಿಸುತ್ತಿದ್ದ ಮುತ್ಸದ್ದಿ ರಾಜಕಾರಣಿ ಇವರಾಗಿದ್ದರು.

ಕೇಂದ್ರದಲ್ಲಿ ಸರ್ಕಾರ ಯುಪಿಎ ಇರಲಿ,ಎನ್ ಡಿ ಎ ಇರಲಿ,ರಾಜ್ಯದಲ್ಲಿ ಸರ್ಕಾರ ಕಾಂಗ್ರೆಸ್ ಇರಲಿ,ಬಿಜೆಪಿ ಇರಲಿ,ಜನತಾದಳ ಇರಲಿ ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಲ್ಲಿ ಧ್ವನಿಯಾಗುತ್ತಿದ್ದವರು ಇವರು.ಇಂತಹ ನಿಷ್ಠಾವಂತ,ಜನಸೇವಕ ರಾಜಕಾರಣಿಯ ಅಂತ್ಯ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂಬುದಷ್ಟೇ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಯ ಪ್ರಾರ್ಥನೆ.

 

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *