January 18, 2025
bangalore sangha get togather

ಪ್ರತಿ ವರ್ಷದ ಪದ್ಧತಿಯಂತೆ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ

“ವಾರ್ಷಿಕ ಮಹಾಸಭೆ ಕೌಟುಂಬಿಕ ಸ್ನೇಹಕೂಟ”

ಡಿಸೆಂಬರ್ 25, 2018 ರ ಮಂಗಳವಾರ ಬೆಂಗಳೂರಿನ ಗಾಂಧಿನಗರದ ಮಹಾರಾಷ್ಟ್ರ ಮಂಡಳಿ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮವು ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರೂ,   ಹಿರಿಯರೂ ಆಗಿರುವ ಶ್ರೀ ಬಿ.ಕೆ.ಭಂಡಾರಿ, ಶ್ರೀ ಲಕ್ಷ್ಮಣ್ ಕರಾವಳಿಯವರು ಮತ್ತು ಸಮಾಜದ ಹಿರಿಯರು ಶ್ರೀ ದೇವರಿಗೆ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಅಧ್ಯಕ್ಷರಾದ ಶ್ರೀಯುತ ಉಮೇಶ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಶ್ರೀ ಪ್ರದೀಪ್ ಪಲಿಮಾರ್ ಪ್ರಾರ್ಥನೆ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರಸಾದ್ ಮುನಿಯಾಲ್ ರವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಕಳೆದ ವರ್ಷದ ನಡಾವಳಿಯನ್ನು ಸಭೆಯಲ್ಲಿ ಓದಿ ಅನುಮೋದನೆ ಪಡೆದರು. ನಂತರ ಕೋಶಾಧಿಕಾರಿ ಶ್ರೀ ಪ್ರಸಾದ್ ಪುತ್ತೂರು ಕಳೆದ ಸಾಲಿನ ಲೆಕ್ಕಪತ್ರ ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು.ನಂತರ ಸಭಾಧ್ಯಕ್ಷರಾದ ಶ್ರೀಯುತ ಉಮೇಶ್ ಅವರು ನೂತನ ಪದಾಧಿಕಾರಿಗಳ ಆಯ್ಕೆಯ ಬಗ್ಗೆ ಸಭೆಯ ಗಮನ ಸೆಳೆದು ನಂತರ ನಡೆದ ವಿದ್ಯಮಾನಗಳಲ್ಲಿ ಶ್ರೀ ಮಾಧವ ಭಂಡಾರಿ ಸಾಗರ ಅವರು ಅಧ್ಯಕ್ಷರಾಗಿ, ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು ಉಪಾಧ್ಯಕ್ಷರಾಗಿ, ಶ್ರೀ ಮೋಹನ್ ಭಂಡಾರಿ ಬಾಳೆಹೊನ್ನೂರು ವಲಯ ಉಪಾಧ್ಯಕ್ಷರಾಗಿ, ಶ್ರೀ ಸುಧಾಕರ್ ಭಂಡಾರಿ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ಕುಶಾಲ್ ಕುಮಾರ್ ಅವರು ಕೋಶಾಧಿಕಾರಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯರ ಅನುಮೋದನೆಯೊಂದಿಗೆ ಅಧಿಕೃತವಾಗಿ ಆಯ್ಕೆಗೊಂಡರು. ಉಳಿದ ಪದಾಧಿಕಾರಿಗಳ ಆಯ್ಕೆಯನ್ನು ನೂತನ ಕಾರ್ಯಕಾರಿ ಮಂಡಳಿಯ ವಿವೇಚನೆಗೆ ಬಿಟ್ಟು ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ನಂತರ ಒಳಾಂಗಣ ಕ್ರೀಡೆಗಳು ಆರಂಭಗೊಂಡವು. ಕಿರಿಯ, ಹಿರಿಯ ಮತ್ತು ವಯಸ್ಕರ ಮೂರು ಪಂಗಡಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆಗಳು ಜರುಗಿದವು. ಕಿರಿಯರ ವಿಭಾಗದಲ್ಲಿ ದೀಕ್ಷಾ, ಭೂಮಿಕಾ, ಭಾವನ್, ಹಿರಿಯರ ವಿಭಾಗದಲ್ಲಿ ಅರ್ಚಿತಾ ಉಮೇಶ್, ಪ್ರೇರಣ್ ಬನ್ನಂಜೆ, ಧ್ಯಾನ್, ವಯಸ್ಕರ ವಿಭಾಗದಲ್ಲಿ ಕೃಷ್ಣಮೂರ್ತಿ ಭಂಡಾರಿ ಸಾಗರ, ಕೃಷ್ಣಮೂರ್ತಿ ಭಂಡಾರಿ ಹೊಸನಗರ, ಶ್ರೀಮತಿ ಮಮತಾ ಸುಧಾಕರ್ ಬನ್ನಂಜೆ, ಶ್ರೀಮತಿ ಭಾರತಿ ಮಾಧವ ಭಂಡಾರಿ  ಮುಂತಾದವರು ಜಯಶೀಲರಾದರು. ನಂತರ ಭೋಜನಕ್ಕಾಗಿ ವಿರಾಮ ನೀಡಲಾಯಿತು.

 

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಅಧ್ಯಕ್ಷರಾದ ಶ್ರೀಯುತ ಉಮೇಶ್ ರವರು  ಮಾವ ಮತ್ತು ಅತ್ತೆ ದಿವಂಗತ ಗೋಪಾಲ್ ಭಂಡಾರಿ ಬೈಕಾಡಿ ಮತ್ತು ದಿವಂಗತ ಕುಸುಮ ಗೋಪಾಲ್ ಭಂಡಾರಿಯವರ ಸವಿನೆನಪಿಗಾಗಿ  ಏರ್ಪಡಿಸಿದ್ದ ಭೋಜನ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ,ರುಚಿ ಶುಚಿಯಾಗಿ ನೆರೆದಿದ್ದ ಸಮಾಜ ಬಾಂಧವರನ್ನು ಸಂತೃಪ್ತಿ ಗೊಳಿಸಿತು.

ಭೋಜನಾ ನಂತರ ಸಭಾ ಕಾರ್ಯಕ್ರಮ ಪುನಃ ಆರಂಭಗೊಂಡಿತು. ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಗೆ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ವೈ.ಎಸ್.ಭಂಡಾರಿ, ಶ್ರೀ ಬಿ.ಕೆ.ಭಂಡಾರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಲಯ ಉಪಾಧ್ಯಕ್ಷರಾದ ಶ್ರೀ ಹಿರಿಯಣ್ಣ ಭಂಡಾರಿ ಬಾಳೆಹೊನ್ನೂರು ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ತಮ್ಮ ಭಾಷಣದಲ್ಲಿ “ಈ ದಿನದ ಸಭೆಗೆ ಬೆಂಗಳೂರಿನ ಸಮಾಜ ಬಾಂಧವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಬೆಂಗಳೂರಿನ ಸಮಾಜ ಬಾಂಧವರ ಸಂಘಟನೆ ಅವಶ್ಯಕತೆ ಇದೆ” ಎಂಬುದನ್ನು ಸಭೆಯ ಗಮನಕ್ಕೆ ತಂದರು. ನಂತರ ಅತಿಥಿಗಳಾದ ಶ್ರೀಯುತ ವೈ.ಎಸ್.ಭಂಡಾರಿಯವರು ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಬೆಂಗಳೂರು ಸಮಾಜ ಸಂಘ ಸಂಘಟನೆಯಾದ ಕಾಲಘಟ್ಟವನ್ನು, ಸಂಘಟನೆಯ ಸಮಯದಲ್ಲಿ ತಾವು ಎದುರಿಸಿದ ಸನ್ನಿವೇಶಗಳನ್ನು ತುಂಬಾ ಮಾರ್ಮಿಕವಾಗಿ ಸಭೆಗೆ ವಿವರಿಸಿದರು.

ನಂತರ ಮಾತನಾಡಿದ ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಕೆ.ಭಂಡಾರಿಯವರು ತಮ್ಮ ಅಧಿಕಾರಾವಧಿಯ ಘಟನೆಗಳನ್ನು ಮೆಲುಕು ಹಾಕಿದರು. ನಂತರ ಸಭೆಯಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಗೀತಾ ಸುರತ್ಕಲ್, ಭಾರತೀಯ ಭೂ ಸೇನೆಯ ಮೇಜರ್ ಡಾಕ್ಟರ್ ರೋಹನ್ ಮತ್ತು ಕ್ಷೌರಿಕ ವೃತ್ತಿಯ ಹಿರಿಯ ಸಮಾಜ ಬಂಧು ಶ್ರೀ ಕುಶಲ್ ಭಂಡಾರಿ ಮಂದರ್ತಿ ಇವರುಗಳನ್ನು ಮುಖ್ಯ ಅತಿಥಿಗಳು ಮತ್ತು ಅಧ್ಯಕ್ಷರು ವೇದಿಕೆಯ ಮೇಲೆ ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ನಂತರ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಆ ನಂತರ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಯುತ ಉಮೇಶ್ ರವರು “ನನ್ನ ಅಧಿಕಾರಾವಧಿಯ ಎರಡು ವರ್ಷಗಳಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ರೀತಿ ನನಗೆ ಸಂಪೂರ್ಣ ತೃಪ್ತಿ ನೀಡಿದೆ.ದೂರದ ಕೋಣಂದೂರಿನಲ್ಲಿ ಕಳೆದ ಸಾಲಿನ ವಾರ್ಷಿಕ ಮಹಾಸಭೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ನನಗಿದೆ. ನನ್ನೊಂದಿಗೆ ಸಹಕರಿಸಿದ ಕಾರ್ಯಕಾರಿ ಮಂಡಳಿಯ ಪ್ರತಿಯೊಬ್ಬರಿಗೂ ಧನ್ಯವಾದಗಳು ಮತ್ತು ಪ್ರತಿಯೊಬ್ಬ ಸಮಾಜದ ಬಂಧುವಿಗೆ ನನ್ನ ಧನ್ಯವಾದಗಳು” ಎಂದು ಹೇಳಿ ಕ್ಷಣಕಾಲ ಭಾವುಕರಾದರು. ನಂತರ ನೂತನ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ ಅವರಿಗೆ ಹೂಗುಚ್ಛವನ್ನು ನೀಡುವುದರೊಂದಿಗೆ ಅಧಿಕಾರವನ್ನು ಹಸ್ತಾಂತರಿಸಿದರು.ಬೆಂಗಳೂರು ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಕುತ್ತೆತ್ತೂರು ವಂದನಾರ್ಪಣೆ ನೆರವೇರಿಸಿದರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು.ವೇದಿಕೆಯ ಮೇಲೆ ಸಮಾಜದ ಪುಟಾಣಿ ಪ್ರತಿಭೆಗಳು ನೃತ್ಯ ಪ್ರದರ್ಶನ ನೀಡಿದರು. ನಂತರ ಝೀ ಕನ್ನಡ ಸರಿಗಮಪ ಲಿಟ್ಲ್‌ ಚಾಂಪ್ಸ್ ಖ್ಯಾತಿಯ ಮಾಸ್ಟರ್ ಮನ್ವಿತ್ ಮತ್ತು ಸಂಗಡಿಗರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರೆದಿದ್ದವರ ಮನ ತಣಿಸಿತು. ಅವರೊಂದಿಗೆ ಪ್ರದೀಪ್ ಪಲಿಮಾರ್, ರಾಜಶೇಖರ್ ಭಂಡಾರಿಯವರ ಗಾಯನ ಸುಧೆ ಹರಿಯಿತು.ರಿಪ್ಪನ್ ಪೇಟೆಯ ಶ್ರೀ ಧನಂಜಯ್ ಭಂಡಾರಿ “ಘೋರಿ ತೇರಾ ಗಾಂವ್ ಬಡಾ ಪ್ಯಾರಾ” ಗೀತೆಯನ್ನು ಹಾಡಿ, ಕನ್ನಡ ಚಲನಚಿತ್ರ ರಂಗದ ಹಲವಾರು ಜನಪ್ರಿಯ ನಟರ ಧ್ವನಿಯನ್ನು ಅನುಕರಣೆ ಮಾಡಿ ರಂಜಿಸಿದರು. ಶಿರಾಳಕೊಪ್ಪದ ಜೂನಿಯರ್ ಉಪೇಂದ್ರ ಖ್ಯಾತಿಯ ಸುರೇಶ್ ಭಂಡಾರಿಯವರು “ಪ್ರೀತ್ಸೇ ಪ್ರೀತ್ಸೇ”ಹಾಡಿಗೆ ಹೆಜ್ಜೆ ಹಾಕಿ ಸಮಾಜ ಬಾಂಧವರನ್ನು ರಂಜಿಸಿದರು.

ನಂತರ ಆಕರ್ಷಕ ವೇಷಭೂಷಣ, ಆಕರ್ಷಕ ಕೇಶವಿನ್ಯಾಸ, ಆಕರ್ಷಕ ಉಡುಗೆ ತೊಡುಗೆ,ಅತ್ಯುತ್ತಮ ದಂಪತಿಗಳು ಮುಂತಾದ ಬಹುಮಾನಗಳನ್ನು ವಿತರಿಸಲಾಯಿತು. ಅತ್ಯುತ್ತಮ ಜೋಡಿಯಾಗಿ ಹಿರಿಯ ದಂಪತಿಗಳಾದ ಶ್ರೀ ಮಾಧವ ಭಂಡಾರಿ ದಂಪತಿಗಳು ಆಯ್ಕೆಯಾದರು. ಅತ್ಯುತ್ತಮ ಯುವ ಜೋಡಿಯಾಗಿ ಮೇಜರ್ ರೋಹನ್ ಮತ್ತು ಸ್ವಾತಿ ದಂಪತಿಗಳು ಆಯ್ಕೆಯಾದರು. ಅತ್ಯುತ್ತಮ ಕೇಶವಿನ್ಯಾಸ ಪ್ರೇರಣ್ ಸುಧಾಕರ್ ಬನ್ನಂಜೆ, ಅತ್ಯುತ್ತಮ ವಸ್ತ್ರ ವಿನ್ಯಾಸ ಜ್ಯೋತಿಕಾ ಸುರೇಶ್ ಭಂಡಾರಿ ಶಿರಾಳಕೊಪ್ಪ, ಅರುಣ್ ಭಂಡಾರಿ ಹರಿಹರಪುರ ಮತ್ತು ಶೃತಿಕಾ ಭಂಡಾರಿ ಅತ್ಯುತ್ತಮ ಉಡುಗೆ ತೊಡುಗೆ,ಭೂಮಿಕಾ ಭಾಸ್ಕರ್ ಭಂಡಾರಿ ಶಿರಾಳಕೊಪ್ಪ ಅತ್ಯುತ್ತಮ ವಸ್ತ್ರವಿನ್ಯಾಸ ಹೀಗೆ ಮುಂತಾದವರು ಆಯ್ಕೆಗೊಂಡು ಬಹುಮಾನಗಳನ್ನು ಸ್ವೀಕರಿಸುವುದರೊಂದಿಗೆ 2018-19 ನೇ ಸಾಲಿನ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಕೌಟುಂಬಿಕ ಸ್ನೇಹಕೂಟಕ್ಕೆ ಅಂತಿಮ ತೆರೆ ಎಳೆಯಲಾಯಿತು.

ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಕೌಟುಂಬಿಕ ಸ್ನೇಹ ಕೂಟದ ಸಭಾ ಕಾರ್ಯಕ್ರಮವನ್ನು ಭಂಡಾರಿ ವಾರ್ತೆ ತಾಂತ್ರಿಕ ತಂಡ ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಿ ವಿಶ್ವದಾದ್ಯಂತ  ಇರುವ   ಭಂಡಾರಿ ಸಮಾಜದ ಬಂಧುಗಳ ಮೆಚ್ಚುಗೆ ಗಳಿಸಿತು.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *