ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ತಿಳಿಯುತ್ತದೆ……
ಅಂತರಾಳ – ಭಾಗ 10
ಶಮಿಕಾ ರಮಣಿ ಮಾತನಾಡುತ್ತಿರುವಾಗಲೇ ಆರು ಅಡಿ ಎತ್ತರದ ಸ್ಪುರದ್ರೂಪಿ ಎಣ್ಣೆ ಕಪ್ಪಿನ ಯುವಕನೊಬ್ಬ ಬಂದು ದಾದಿಯಲ್ಲಿ ಏನೋ ಕೇಳಿ ಶಮಿಕಾಳ ಬಳಿ ಬಂದು ನಿಂತನು. ಎನೂ ಎಂಬಂತೆ ಶಮಿಕಾ ಎದ್ದು ನಿಂತಳು… ನನ್ನ ಹೆಸರು ಪವನ್ ನಾನು ಪೋಲೀಸ್ ಇಲಾಖೆಯಲ್ಲಿ ಠಾಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿ ಮಾಡುತ್ತಿದ್ದೇನೆ ನಿಮ್ಮ ಅಮ್ಮ ನನ್ನ ಬೈಕ್ ತಾಗಿ ಬಿದ್ದಿದ್ದು ಎಂದು ಹೇಳಿ ಅವಳ ಮುಖವನ್ನೆ ನೋಡಿದ. ಶಮಿಕಾ ಸಾವರಿಸಿಕೊಂಡು ಏನ್ರೀ ಪೋಲೀಸ್ ಇಲಾಖೆಯಲ್ಲಿ ಸೇವೆಯಲ್ಲಿ ಇದ್ದೆ ಎನ್ನುತ್ತೀರಿ ನಿಮಗೆ ಕಾನೂನು ಕಾಯಿದೆಗಳು ಗೋತಿಲ್ವ ಅಥವಾ ಎನೂ ಮಾಡಿದರೂ ನಡೆಯುತ್ತದೆ ಎಂಬ ಅಹಂಭಾವದಿಂದ ಗಾಡಿ ಓಡಿಸಿಕೊಂಡು ಹೋಗುವುದಾ ಎಂದಾಗ. ಪವನ್ ನನ್ನದು ತಪ್ಪಾಯ್ತು ಎಂದು ಎರಡೂ ಕೈಜೋಡಿಸಿ ನನ್ನ ಅಮ್ಮನಿಗೆ ಹುಷಾರಿಲ್ಲ ಎಂದು ಫೋನ್ ಬಂದ ಕಾರಣಕ್ಕೆ ನಾನು ರಭಸವಾಗಿ ಗಾಡಿ ಓಡಿಸಿಕೊಂಡು ಹೋದೆ ಎಂದಾಗ ಶಮಿಕಾ ಸ್ವಲ್ಪ ಮೆದುವಾದಳು.. ಇವರ ಮಾತೆಲ್ಲ ಕೇಳಿಸಿಕೊಂಡ ರಮಣಿ ನಿಮ್ಮ ಅಮ್ಮ ನಿಗೆ ಏನಾಯಿತು ಈಗ ಹೇಗಿದ್ದಾರೆ ಎಂದು ಕೇಳಿದಳು. ಅದಕ್ಕೆ ಪವನ್ ಈಗ ಚೆನ್ನಾಗಿದ್ದಾರೆ ಅಂಟಿ ಅವರಿಗೆ ರಕ್ತದ ಒತ್ತಡ ಹೆಚ್ಚಳ ಆಗಿ ತಲೆ ತಿರುಗಿ ಬಿದ್ದಿದ್ದರು ಪಕ್ಕದ ಮನೆಯವರು ನೋಡಿ ತಕ್ಷಣ ಉಪಚರಿಸಿದರು. ಇಲ್ಲದಿದ್ದರೆ ತುಂಬಾ ಅಪಾಯವಾಗುತ್ತಿತ್ತು ಎಂದು ಹೇಳಿ ಶಮಿಕಾಳ ಮುಖ ನೋಡಿ ನಿಮ್ಮ ಅಮ್ಮನನ್ನು ನೋಡಿ ಮಾತನಾಡಿದೀರಾ? ಎಂದು ಕೇಳಿದಾಗ ಶಮಿಕಾ ಇಲ್ಲ ಎಂದಾಗ ಬನ್ನಿ ಕೇಳೋಣ ಎಂದು ಇಬ್ಬರೂ ಹೊರಟರು.! ಶಮಿಕಾ ರಮಣಿ ಕಡೆ ನೋಡಿ ಅಂಟಿ ನಿಮಗೆ ಮತ್ತೇ ಸಿಗುತ್ತೇನೆ ಎಂದಾಗ ಆಗಲಿ ನಿನ್ನ ಅಮ್ಮನನ್ನು ನೋಡಿ ಬಾ ಎಂದರು.
ಶಮಿಕಾ ಮತ್ತು ಪವನ್ ಜೊತೆಯಲ್ಲಿ ಇಬ್ಬರು ದಾದಿಯಲ್ಲಿ ಕೇಳಿದಾಗ ಒಂದು 15 ನಿಮಿಷ ನಿಲ್ಲಿ ಅವರನ್ನು ವಾರ್ಡಿಗೆ ಶಿಫ್ಟ್ ಮಾಡುತ್ತೇವೆ ಎಂದರು. ತಕ್ಷಣ ಶಮಿಕಾ ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡುತ್ತೀರಾ , ಸ್ಪೆಷಲ್ ರೂಮಿಗೆ ಆದರೆ ಎಷ್ಟು ದುಡ್ಡು ಆಗುತ್ತದೆ ಎಂದಾಗ ದಾದಿ ಪವನ್ ನ ಮುಖ ನೋಡಿದರು… ಆಗ ಪವನ್ ಅದಕ್ಕೆ ನಾನು ವ್ಯವಸ್ಥೆ ಮಾಡಿದ್ದೇನೆ ಮೇಡಂ.ನಾನು ಆಸ್ಪತ್ರೆಗೆ ದಾಖಲು ಮಾಡಿ ಗಂಭೀರ ಗಾಯಗೊಂಡಿಲ್ಲ ಎಂದು ಗೊತ್ತಾಗಿ ಇಲ್ಲಿ ನನಗೆ ಗೊತ್ತಿರುವ ಒಬ್ಬರಲ್ಲಿ ಹೇಳಿ ನಾನು ನನ್ನ ಮನೆಗೆ ಹೋಗಿದ್ದು ಎಂದಾಗ ಶಮಿಕಾಳಿಗೆ ಪವನ್ ಬಗ್ಗೆ ಗೌರವ ಮೂಡಿತು.. ನನ್ನ ಹೆಸರು ಶಮಿಕಾ ಎಂದು ಹೇಳಿದಾಗ ಓಹ್ ಎಂದ ಪವನ್ ಇಬ್ಬರು ಮೌನವಾಗಿ ನಿಂತರು.. ಆಗ ಪವನ್ ನಿಮಗೆ ಅಭ್ಯಂತರವಿಲ್ಲದಿದ್ದರೆ ಪಕ್ಕದಲ್ಲಿ ಆಸ್ಪತ್ರೆಯ ಕ್ಯಾಂಟೀನ್ ಇದೆ ಕಾಫಿ ಕುಡಿದು ಬರುವ ಆಗ ನಿಮ್ಮ ಅಮ್ಮನನು ತುರ್ತು ಘಟಕದಿಂದ ಕೊಠಡಿಗೆ ಸ್ಥಳಾಂತರಿಸುತ್ತಾರೆ , ಸಂಜೆ ಎನೂ ತಿನ್ನದೆ ಹಸಿವಾಗುತ್ತದೆ ಎಂದಾಗ ಶಮಿಕಾಳಿಗೆ ಸಂಜೆ ಕಾಲೇಜಿನಿಂದ ಬಂದ ಮೇಲೆ ಒಂದರ ನಂತರ ಒಂದು ಏನೋ ಆಗುತ್ತಿದೆ ಎಂದೆನಿಸಿತು. ಮಿದುಳು ನಿಷ್ಕ್ರಿಯ ಆದಂತೆ ತಲೆ ಸಿಡಿಯುತ್ತಿತ್ತು. ಬಹುಶಃ ಬಿಸಿ ಕಾಫಿ ಕುಡಿದರೆ ಹೋಗಬಹುದೋ ಏನೋ…. ಅಮ್ಮನ ಬಾಲ್ಯದ ನೆನಪುಗಳು, ಅಮ್ಮನಿಗೆ ಯೌವನದಲ್ಲಿ ಅದ ನೋವುಗಳು.. ನನ್ನ ಹುಟ್ಟಿನ ರಹಸ್ಯ, ಅಮ್ಮನಿಗೆ ತಲೆಗೆ ಏಟು ಆಗಿ ಆಸ್ಪತ್ರೆಗೆ ದಾಖಲು ಆಗಿರುವುದು, ರಮಣಿ ಎನ್ನುವವರ ಪರಿಚಯ ಅವರ ಮಗಳ ಸಾವಿನ ರಹಸ್ಯ.. ಈ ಜಗತ್ತಿನಲ್ಲಿ ಪ್ರತಿ ಕ್ಷಣ ಪ್ರತಿ ಸೆಕೆಂಡು ಏನೋ ಒಂದು ನಡೆಯುತ್ತಿದೆ. ಆದರೆ ನನಗೆ ಮಾತ್ರ ಒಂದು ಗೊತ್ತಿಲ್ಲ… ಅಥವಾ ತಿಳಿಯುವ ಪ್ರಯತ್ನವೇ ಮಾಡಿಲ್ಲ ನಾನು……. ಬಾವಿಯ ಒಳಗೆ ಇರುವ ಕಪ್ಪೆಯಂತೆ ಇಲ್ಲಿ ತನಕ ಇದ್ದೆ….. ಎನೂ ಯೋಚನೆ ಮಾಡುತ್ತೀರಿ ಶಮಿಕಾರವರೇ ನಿಮ್ಮ ಅಮ್ಮನಿಗೆ ಏನು ಆಗಿಲ್ಲ ತುಂಬಾ ಚಿಂತೆ ಮಾಡುತ್ತೀರಿ ಎಂದು ಪವನ್ ಹೇಳಿದಾಗ ಇಲ್ಲ ಇಲ್ಲ ಹಾಗೇನಿಲ್ಲ ಎಂದು ಶಮಿಕಾ ಹೇಳಿದಳು.. ಕಾಫಿ ಕುಡಿಯಲು ಹೊರಟಾಗ ಶಮಿಕಾ ರಮಣಿ ಬಳಿ ಬಂದು ಅಂಟಿ ನಾವು ಇಲ್ಲೇ ಇರುವ ಕ್ಯಾಂಟೀನ್ ಗೆ ಹೋಗುತ್ತೇವೆ ಬನ್ನಿ ಎಂದು ಕರೆದಳು… ಬೇಡ ಶಮಿಕಾ ನೀವು ಕುಡಿದು ಬನ್ನಿ ನಾನು ಆವಾಗಲೇ ತಿಂಡಿ ತಿಂದು ಬಂದೆ ಎಂದಾಗ ಸರಿ ಅಂಟಿ ಎಂದು ಪವನ್ ಜೊತೆ ಹೊರಟಳು…ಆಗ ಪವನ್ ನಿಮ್ಮ ಸಂಬಂಧಿಕರೇ ಎಂದು ಕೇಳಿದ… ನನಗೆ ಈಗ ಆಸ್ಪತ್ರೆಯಲ್ಲಿ ಪರಿಚಯ ಆದದ್ದು, ಪಾಪ ತುಂಬಾ ನೊಂದ ಜೀವ ಮಗಳನ್ನು ಕಳೆದುಕೊಂಡಿದ್ದಾರೆ. ಈಗ ಗಂಡನಿಗಾಗಿ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಿದಾಗ ಪವನ್ ಹೌದು ಎಷ್ಟು ಜನ ಕಷ್ಟದಲ್ಲಿ ಇದ್ದು ಆರೋಗ್ಯ ಸರಿ ಇಲ್ಲದೆ ಅವರ ಸಂಬಂಧಿಕರು ಪರದಾಡುವ ಸ್ಥಿತಿಯನ್ನು ಅರಿಯಲು ಇಂತಹ ಆಸ್ಪತ್ರೆಗೆ ಬಂದರೆ ಸಾಕು ದೇವರೇ ಇಷ್ಟೆಲ್ಲಾ ಕಷ್ಟ ಪಡುವ ಜನರು ಇದ್ದಾರಲ್ಲಾ ಎಂದು ಆಶ್ಚರ್ಯ ಆಗುತ್ತದೆ. ಅದರ ಮೊದಲು ಜೀವನದಲ್ಲಿ ನಮಗೆ ಮಾತ್ರ ಕಷ್ಟ ಎಂದು ಕೊಳ್ಳುತ್ತೇವೆ ಆದರೆ ಇಂತವರನ್ನು ನೋಡಿದಾಗ ನಮ್ಮ ಕಷ್ಟ ಎನೂ ಇಲ್ಲ ಎಂದು ತಿಳಿಯುತ್ತದೆ ಎಂದಾಗ ಹೌದು ಆಸ್ಪತ್ರೆಯಲ್ಲಿ ಎಷ್ಟು ಜನ ಇದ್ದಾರೆ ಹೊರ ಜಗತ್ತಿಗೆ ಇದು ಎನು ಗೊತ್ತಿಲ್ಲ ಎಂಬಂತೆ ಆನಂದದಿಂದ ಜನ ಇರುತ್ತಾರೆ ಇಲ್ಲಿ ಬಂದಾಗ ಎಷ್ಟು ಜನರಿಗೆ ಆರೋಗ್ಯ ಸರಿ ಇಲ್ಲ ಎಷ್ಟು ಜನ ಅಪಘಾತದಲ್ಲಿ ನರಳುತ್ತಿದ್ದಾರೆ ಎಂದು ತಿಳಿಯುತ್ತದೆ. ಇಲ್ಲಿಯ ಜಗತ್ತು ಬೇರೆ ಹೊರ ಹೋದರೆ ಇನ್ನೊಂದು ಜಗತ್ತು ಕಾಣುತ್ತದೆ ಎಂದು ಶಮಿಕಾ ಹೇಳುತ್ತಿರುವಂತೆ ಕ್ಯಾಂಟೀನ್ ಒಳ ಹೊಕ್ಕು ಎದುರು ಬದುರು ಕುಳಿತು ಕೊಂಡರು… ಎನೂ ತಗೋತೀರಿ ನನಗೆ ತುಂಬಾ ಹಸಿವಾಗಿದೆ ಅಲ್ಲದೆ ಇಲ್ಲಿ ಸಂಜೆ ಗೋಳಿಬಜೆ ಚೆನ್ನಾಗಿರುತ್ತದೆ ಎಂದ ಪವನ್… ಇಲ್ಲ ನನಗೆ ಬರೀ ಕಾಫಿ ಸಾಕು ಸಂಜೆ 4 ಗಂಟೆಗೆ ನೀರು ದೋಸೆ ತಿಂದಿದ್ದೇನೆ ಎಂದಳು ಶಮಿಕಾ. ಸರಿ ಎಂದು ಪವನ್ ಕೂಪನ್ ಮಾಡಿಸಲು ಕೌಂಟರ್ ಗೆ ಹೋದ.
ಶಮಿಕಾ ಪುನಃ ಯೋಚನೆ ಮಾಡಲು ಪ್ರಾರಂಭಿಸಿದಳು. ನಾನು ಈ ರೀತಿ ಕಾಫಿಗೆ ಪರಿಚಯ ಇಲ್ಲದ ವ್ಯಕ್ತಿಯ ಜೊತೆ ಬರಬಹುದೇ? ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವುದಿಲ್ಲವಾ ? ಪವನ್ ಎಂತಹಾ ವ್ಯಕ್ತಿ ಆಗಿರಬಹುದು? ಅಮ್ಮ ಡೈರಿಯಲ್ಲಿ ಬರೆದ ರೀತಿಯ ಕೆಟ್ಟ ಗಂಡಸು ಆಗಿರಬಹುದೇ? ನೋಡುವಾಗ ಮಾತನಾಡುವಾಗ ಸಭ್ಯ ಸುಸಂಸ್ಕೃತ ಸಜ್ಜನ ವ್ಯಕ್ತಿ ರೀತಿ ಕಾಣುತ್ತಾರೆ ಒಳಗಿನ ಗುಟ್ಟು ಶಿವನೇ ಬಲ್ಲ!……..
ನನ್ನ ಎಚ್ಚರದಲ್ಲಿ ನಾನು ಇರಬೇಕು. ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಅಂದುಕೊಂಡಳು..ಪವನ್ ಒಂದು ಕೈಯಲ್ಲಿ ಗೋಳಿಬಜೆ ತಟ್ಟೆ ಇನ್ನೊಂದು ಕೈಯಲ್ಲಿ ಕಾಫಿ ಲೋಟ ತಂದು ಕಾಫಿಯನ್ನು ಶಮಿಕಾಳ ಬಳಿ ಇಟ್ಟನು.. ಶಮಿಕಾ ಕಾಫಿ ಲೋಟ ಎತ್ತಿಕೊಂಡಳು. ಪವನ್ ಗೋಳಿಬಜೆಯ ತಟ್ಟೆ ಹಿಡಿದು ತೆಗೆದು ಕೊಳ್ಳಿ ಎಂದಾಗ ಹೆಚ್ಚು ಮುಜುಗರ ತೋರಿಸದೆ ತೆಗೆದು ಕೊಂಡಳು. ನೀವು ಎನೂ ಕೆಲಸ ಮಾಡುತ್ತಿದ್ದೀರಿ ? ಎಂದು ಕೇಳಿದಾಗ ನಾನು ಉಪನ್ಯಾಸಕಿ ಆಗಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಶಮಿಕಾ ಹೇಳಿದಳು. ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂದು ಕೇಳಿದಾಗ ಯಾಕೋ ಇವನು ಅಧಿಕ ಪ್ರಸಂಗಿ ಎಂದು ಶಮಿಕಾಳಿಗೆ ಅನಿಸದೆ ಇರಲಿಲ್ಲ. ಈ ಪ್ರಶ್ನೆಗೆ ನಿಜ ಹೇಳಬೇಕಾ ಇಲ್ಲ ಸುಳ್ಳು ಹೇಳಬೇಕಾ ಎಂಬ ಇಕ್ಕಟ್ಟಿಗೆ ಸಿಲುಕಿದಳು ಶಮಿಕಾ… ಸತ್ಯ ಹೇಳಿದರೆ ಇವನು ಯಾರು? ಇವನ ಸ್ವಭಾವ ಹೇಗೆ ಎಂದು ಗೊತ್ತಿಲ್ಲ ಸುಳ್ಳು ಹೇಳಲು ಮನಸ್ಸು ಬರುತ್ತಿಲ್ಲ ………….
ಇವಳ ಮೌನ ಕಂಡು ಪವನ್ ನಾನು ಯಾವುದೇ ತಪ್ಪು ಅಭಿಪ್ರಾಯದಿಂದ ಕೇಳಿಲ್ಲ.. ಇವತ್ತು ನಿಮ್ಮ ಅಮ್ಮನನ್ನು ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಮಾಡುವುದಿಲ್ಲ ಬಹುಶಃ ನಾಳೆ ಮಾಡಬಹುದು.. ಗೊತ್ತಿಲ್ಲ….. ಇವತ್ತು ರಾತ್ರಿ ಅವರ ಜೊತೆ ಯಾರು ನಿಲ್ಲುತ್ತಾರೆ ಎಂಬ ಕಾರಣಕ್ಕಾಗಿ ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂದು ಕೇಳಿದ್ದು… ನಿಮಗೆ ನಾಳೆ ಕಾಲೇಜು ಇದೆ ಆಲ್ವಾ! ನಿಮಗೆ ಕಷ್ಟ ಆಗಬಹುದು….ಬೇರೆ ಯಾರು ಇಲ್ಲದಿದ್ದರೆ ನಾನು ನಿಲ್ಲುತ್ತೇನೆ…. ಶಮಿಕಾಳ ಮನಸ್ಸು
ನಿರಾಳವಾಯಿತು… ಪವನ್ ಬಗ್ಗೆ ಸ್ವಲ್ಪ ಮಟ್ಟಿಗೆ ನಂಬಿಕೆ ಉಂಟಾಯಿತು… ಅಮ್ಮನ ಜೊತೆ ನಾನೇ ನಿಲ್ಲುತ್ತೇನೆ ನನಗೆ ಎನೂ ತೊಂದರೆ ಇಲ್ಲ ರಜೆ ಕೂಡ ಬಾಕಿ ಇದೆ ಎಂದು ಶಮಿಕಾ ಹೇಳಿದಳು. ಇಬ್ಬರು ವಾಪಸ್ ಆಸ್ಪತ್ರೆಗೆ ಬಂದರು.
ಭವಾನಿಯನು ವಿಶೇಷ ಕೊಠಡಿಗೆ ಸ್ಥಳಾಂತರಿಸಿದ್ದರು. ಅಮ್ಮನನ್ನು ನೋಡಿ ಶಮಿಕಾಳಿಗೆ ಅಳುವೇ ಬಂತು ತಲೆಗೆ ಬ್ಯಾಂಡೇಜು ಹಾಕಿದ್ದರು ಕೈ ಮತ್ತು ಕಾಲಿಗೆ ತರಚು ಗಾಯವಾಗಿತ್ತು.. ಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿತ್ತು... ಅಮ್ಮನನ್ನು ಅಪ್ಪಿಕೊಂಡು ಅತ್ತಾಗ ಭವಾನಿ ಕೂಡ ಶಮಿಕಾಳನು ಹಿಡಿದು ಅತ್ತೇ ಬಿಟ್ಟರು ಇಬ್ಬರಿಗೂ ಪವನ್ ಇರುವುದೇ ಮರೆತಂತೆ ಕಾಣುತ್ತಿತ್ತು.. ಶಮಿಕಾ “ಅಮ್ಮ ನನ್ನನ್ನು ಕ್ಷಮಿಸಿ ಬಿಡಿ ಇನ್ನೆಂದೂ ನಿಮ್ಮ ಬಗ್ಗೆ ಕೇವಲವಾಗಿ ನೋಡಲಾರೆ ಆ ರೀತಿ ನಡೆದು ಕೊಳ್ಳಲಾರೆ.. ನೀವಿಲ್ಲದೆ ನಾನು ಒಂದು ಕ್ಷಣವು ಇರಲಾರೆ” ಎಂದಾಗ ಭವಾನಿ ತುಂಬಾ ಮಧುರ ಅನುಭೂತಿಯನು ಅನುಭವಿಸಿದಳು…. ಇಬ್ಬರು ಅತ್ತೂ ಸಮಾಧಾನ ಹೊಂದಿದ ಮೇಲೆ ಪವನ್ ಇರುವಿಕೆಯನ್ನು ನೆನಪು ಮಾಡಿಕೊಂಡರು… ಭವಾನಿ ಇದು ಯಾರು ಇರಬಹುದು ಶಮಿಕಾಳ ಜೊತೆಗೆ ಬರಬೇಕಾದರೆ ಒಟ್ಟಿಗೆ ಕೆಲಸ ಮಾಡುವವರು ಇರಬಹುದೇ ಎಂಬ ಭಾವನೆ ಕೂಡ ಅವಳ ಮನಸಿನಲ್ಲಿ ಹಾದು ಹೋಯಿತು… ಪವನ್ ಭವಾನಿಯ ಮುಖ ಭಾವ ತಿಳಿದು ಅಂಟಿ ನಿಮಗೆ ಬೈಕ್ ಬಂದು ತಾಗಿದ್ದು ನಾನೇ… ನನ್ನ ಅಮ್ಮನಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ರಭಸದಿಂದ ಗಾಡಿ ಓಡಿಸಿಕೊಂಡು ಬಂದೆ.. ನನ್ನನ್ನು ಕ್ಷಮಿಸಿ ಎಂದು ಎರಡು ಕೈ ಜೋಡಿಸಿದಾಗ ಭವಾನಿ ಎನೂ ಆಗಬೇಕು ಎಂದು ಇದೆಯೋ ಅದು ಆಗಲೇ ಬೇಕು ನಾವು ನಿಮಿತ್ತ ಮಾತ್ರ ನೀವು ಬೇಸರಿಸಬೇಡಿ…..
ನಾನು ಚೆನ್ನಾಗಿದ್ದೇನೆ. ನಿಮ್ಮ ಅಮ್ಮನಿಗೆ ಏನು ಆಗಿದೆ ಅವರು ಹೇಗಿದ್ದಾರೆ ಎಂದಳು. . ಅಮ್ಮನಿಗೆ ರಕ್ತದೊತ್ತಡ ಹೆಚ್ಚಾಗಿ ಮೂರ್ಛೆ ತಪ್ಪಿ ಬಿದ್ದಿದ್ದರು ಹಾಗಾಗಿ ನಾವು ಗಾಬರಿ ಆಗಿದ್ದು ಈಗ ಚೆನ್ನಾಗಿದ್ದಾರೆ ಎಂದು ಪವನ್ ಹೇಳಿ ನಿಮಗೆ ಕುಡಿಯಲು ಎನೂ ತರಲಿ ಎಂದು ಕೇಳಿದಾಗ ಭವಾನಿ ಎನೂ ತೋರದೆ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಾ ಇದ್ದಳು ಆಗ ಪವನ್ ಶಮಿಕಾ ನೀವು ಇಲ್ಲೇ ಇರಿ ನಾನು ಹೋಗಿ ಈಗ ಬರುತ್ತೇನೆ ಎಂದು ಅವರ ಉತ್ತರಕ್ಕೆ ಕಾಯದೆ ಎದ್ದು ಹೋದನು…… ಭವಾನಿ ಪವನ್ ಹೋದ ಕಡೆಯೇ ನೋಡುತ್ತಾ ಶಮಿಕಾಳಿಗೂ ಇಂತಹ ಹುಡುಗ ಮದುವೆ ಆಗಿದ್ದರೆ ಚೆನ್ನಾಗಿತ್ತು… ಆದರೆ ನಮ್ಮ ಪೂರ್ವಾಪರ ತಿಳಿದರೆ ಯಾರು ಶಮಿಕಾಳನು ಮನೆ ತುಂಬಿಸುತ್ತಾರೆ ….ಶಮಿಕಾಳಿಗೆ ಮೊದಲೇ ಸಿಟ್ಟು ಬೇಗ ಬರುತ್ತದೆ ಮುಂದಿನ ಜೀವನ …..ನನಗೆ ಎನಾದರೂ ಆದರೆ ಶಮಿಕಾಳ ಗತಿ…..
( ಮುಂದುವರಿಯುವುದು)
✍️ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ