ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ……
ಅಂತರಾಳ – ಭಾಗ 11
ಭವಾನಿ ಶಮಿಕಾಳ ಮುಖ ನೋಡಿ ಎನು ತಿಂದಿ ಎಂದು ಕೇಳಿದಾಗ ತಾಯಿ ಕರುಳು ಎಂದು ಇದಕ್ಕೆ ಹೇಳುವುದು ಎಂದೆನಿಸಿದಳು ಶಮಿಕಾ… ತಾನು ಆಸ್ಪತ್ರೆಯಲ್ಲಿ ನೋವಿನಲ್ಲಿ ಇರುವಾಗಲೂ ನನ್ನ ಹೊಟ್ಟೆಯ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ಮುಖದಲ್ಲಿ ನಗು ತುಂಬಿ ಕೊಂಡು ಯಾಕೆ ಅಮ್ಮ ನೀವು ನನಗೆ ನೀರು ದೋಸೆ ಮಾಡಿ ಇಟ್ಟು ಹೋದದ್ದು ನೆನಪು ಇಲ್ವಾ ಎಂದು ಕೇಳಿದಳು….. ಹುಂ ನೆನಪು ಬಂತು ಶಮಿಕಾ ತಿಂದು ಬಂದೆಯಾ ಎಂದು ಕೇಳಿದ್ದು ಎಂದು ಹೇಳುವಾಗ ಪವನ್ ಕೈಯಲ್ಲಿ ಬೊಂಡ ನೀರು ಹಿಡಿದು ಕೊಂಡು ಒಳ ಬಂದನು ಪೇಪರ್ ಲೋಟಕ್ಕೆ ಬೊಂಡ ನೀರು ಹಾಕಿ ಕುಡಿಯಿರಿ ಅಂಟಿ ಎಂದು ಅವರಿಗೆ ಕುಡಿಸಲು ಹೋದಾಗ ನಾನು ಕುಡಿಯುತ್ತೇನೆ ಎಂದು ಮೆಲ್ಲಗೆ ಎದ್ದು ಭವಾನಿ ಲೋಟ ತೆಗೆದುಕೊಂಡು ಕುಡಿದಳು.
ಪವನ್ ” ಆಂಟಿ ಇವತ್ತು ನೀವು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ…. ನಾಳೆ ಬಹುಶಃ ಡಿಸ್ಚಾರ್ಜ್ ಮಾಡಬಹುದು ” ಶಮಿಕಾ ನೀವು ಇಲ್ಲಿ ನಿಲ್ಲಲು ಬಟ್ಟೆ ಎನಾದರೂ ತಂದಿದ್ದೀರಾ ಎಂದು ಕೇಳಿದನು. ಇಲ್ಲ ಎಂದಾಗ ಬನ್ನಿ ನಿಮ್ಮ ಮನೆಯಿಂದ ತರೋಣ ಎಂದಾಗ ಶಮಿಕಾ ಅಮ್ಮನ ಮುಖ ನೋಡಿದಳು. ಭವಾನಿ ಏಕೋ ಏನು ಹೇಳಲಾರದಾದಳು . ಮನಸ್ಸು ಪವನ್ ಒಳ್ಳೆಯ ಸಭ್ಯ ಹುಡುಗ ಎಂದು ಹೇಳುತ್ತಿತ್ತು. ಆದರೂ ಮನಸ್ಸು ಹಿಂಜರಿಯುತ್ತಿತ್ತು…. ಆಂಟಿ ನಾನು ಶಮಿಕಾ ಹೋಗಿ ನಿಮ್ಮಿಬ್ಬರಿಗೆ ಬೇಕಾದ ಬಟ್ಟೆ ಟವೆಲ್ ತರುತ್ತೇವೆ ಎಂದು ತುಂಬು ಆತ್ಮ ವಿಶ್ವಾಸದಿಂದ ಹೇಳಿದಾಗ ಭವಾನಿ ಹೋಗು ಶಮಿಕಾ ಎಂದು ಹೇಳಲೇಬೇಕಾಯಿತು.
ಶಮಿಕಾ ಮತ್ತು ಪವನ್ ಹೋದಮೇಲೆ ಮನಸ್ಸು ಚಿತ್ರ ವಿಚಿತ್ರ ಭಾವನೆಗಳನ್ನು ಹೊರಹಾಕಿತ್ತು. ಆಗ ಭವಾನಿ ತಾನೇ ಮನಸ್ಸಿಗೆ ಸಮಾಧಾನ ಹೇಳಿದಳು ಶಮಿಕಾ ಓದಿದವಳು ತಿಳುವಳಿಕೆ ಇದೆ.. ಅಲ್ಲದೆ ಯಾವುದೇ ಟೀಕೆ, ವ್ಯಂಗ್ಯ ಯಾರಾದರೂ ಅನ್ಯಾಯ ಮಾಡುವುದು ಕಂಡು ಬಂದರೆ ತಕ್ಷಣ ನೇರವಾಗಿ ಎದುರಿಸುವ ಧೈರ್ಯ ಶಕ್ತಿ ಅವಳಲ್ಲಿ ಇದೆ. ಹೀಗೆ ಯೋಚಿಸುವಾಗ ಅವಳಿಗೆ ಮೊದಲು ಒಮ್ಮೆ ನಡೆದ ಘಟನೆ ನೆನಪಿಗೆ ಬಂತು. ಮಂಗಳೂರಿನಲ್ಲಿ ಶಮಿಕಾಳಿಗೆ ಕೆಲಸ ಸಿಕ್ಕಿದ ಮೇಲೆ ನಾಲ್ಕು ದಿನಗಳ ರಜೆಯಲ್ಲಿ ಹೊನ್ನಾವರಕ್ಕೆ ಹೋದೆವು. ಅಲ್ಲಿಂದ ಹಿಂದೆ ಬರುವಾಗ ಬಸ್ಸಿನಲ್ಲಿ ಬಂದೆವು. ನಾನು ಶಮಿಕಾ ಒಟ್ಟಿಗೆ ಒಂದೇ ಸೀಟಿನಲ್ಲಿ ಕುಳಿತಿದ್ದೆವು. ಬಸ್ಸು ಕುಂದಾಪುರ ತಲುಪಿಲ್ಲ . ಅದಕ್ಕಿಂತ ಮುಂಚೆ ಒಮ್ಮೆಲೇ ಶಮಿಕಾ ಎದ್ದು ಹಿಂದೆ ತಿರುಗಿ ತನ್ನಲ್ಲಿ ಇರುವ ಕೊಡೆಯ ಹಿಡಿಯಿಂದ ಒಬ್ಬ ಮದ್ಯ ವಯಸ್ಕ ಗಂಡಸಿನ ತಲೆಗೆ ಎರಡು ಮೂರು ಸಲ ಪೆಟ್ಟು ನೀಡಿದಳು ಬಸ್ಸಲ್ಲಿ ಇದ್ದವರು ಯಾರು ಎನು ಎಂದು ಯೋಚಿಸುವ ಮೊದಲೇ ಇವಳ ಪೆಟ್ಟು ಬಿದ್ದು ಆಗಿತ್ತು. ಪೆಟ್ಟು ಮಾತ್ರ ಕೊಟ್ಟಿದ್ದು ಅಲ್ಲ. ನಿಮಗೆ ಹೆಣ್ಣು ಅಂದರೆ ಅಷ್ಟು ತಾತ್ಸಾರ ಹೆಣ್ಣು ಮಕ್ಕಳ ಅಂಗ ಮುಟ್ಟಲು ಎಷ್ಟು ಧೈರ್ಯ! ನಾಚಿಕೆ ಮಾನ ಮರ್ಯಾದೆ ಇಲ್ಲದವರು .ಎಂದು ಎನೂ ಅಳುಕು ಅಂಜಿಕೆ ಇಲ್ಲದೆ ಜೋರು ಸ್ವರದಲ್ಲಿ ಬೈಯುತ್ತಿದ್ದಳು. ಆ ಕೆಟ್ಟ ಗಂಡಸು ಅಲ್ಲಿಂದ ಎದ್ದು ಹಿಂದೆ ಹೋದ. ನಾನು ಏನಾಯಿತು ಶಮಿಕಾ ಯಾಕೆ ಹೊಡೆದೆ? ಬುದ್ಧಿ ಹೇಳಿದರೆ ಸಾಕಿತ್ತು ಎಂದಾಗ .ಇಲ್ಲ ಅಮ್ಮ ಬೇರೆ ಎನೂ ತಪ್ಪು ಮಾಡಿದರೂ ಬುದ್ಧಿ ಹೇಳಿ ಸರಿ ಮಾಡಬಹುದು! ಆದರೆ ಹೆಣ್ಣು ಮಕ್ಕಳ ವಿಷಯದಲ್ಲಿ ಅವರ ಅಂಗಾಂಗಗಳನ್ನು ಮುಟ್ಟಿ ಕುಶಿ ಪಡುವುದು ಹೆಣ್ಣು ಮಕ್ಕಳಿಗೆ ಇಷ್ಟವಾಗದ ಕ್ರಿಯೆ, ಭಾಷೆ ಉಪಯೋಗಿಸಿ ಮಾತನಾಡುವುದು ಮಾಡಿದ ತಕ್ಷಣ ಅದಕ್ಕೆ ತಿರುಗಿ ಅಂತಹ ಗಂಡಸಿಗೆ ಹೊಡೆಯಬೇಕು ಇಲ್ಲದಿದ್ದರೆ ಇಂತವರೇ ಮುಂದುವರಿದು ಹೆಣ್ಣು ಮಕ್ಕಳಿಗೆ, ಹೆಣ್ಣು ಹೆಂಗಸರಿಗೆ ಎನೂ ಮಾಡಿದರೂ ನಡೆಯುತ್ತದೆ ಎಂಬ ಉಡಾಫೆಯಿಂದಲೇ ಒಂಟಿ ಮಹಿಳೆ ಅಥವಾ ಮಕ್ಕಳ ಮೇಲೆ ಲೈಂಗಿಕ ತೃಷೆ ತೀರಿಸಲು ಕಾಯುತ್ತಿರುತ್ತಾರೆ… ಹೆಚ್ಚಿನ ಎಲ್ಲಾ ಹೆಣ್ಣು ಮಕ್ಕಳು, ಮಹಿಳೆಯರು ಇಂತಹ ಘಟನೆ ನಡೆದಾಗ ಮರ್ಯಾದೆ ಪ್ರಶ್ನೆ ಎಂದು ತಮ್ಮ ನೋವು ಅಪಮಾನ ಸಹಿಸಿಕೊಂಡು ಯಾರಲ್ಲೂ ಹೇಳುವುದಿಲ್ಲ ! ಇಲ್ಲೆ ತಪ್ಪು ಆಗುವುದು! ಇಂತಹ ಗಂಡಸಿಗೆ ಇದು ಇನ್ನಷ್ಟು ತಪ್ಪು ಮಾಡಲು ಧೈರ್ಯ ಕೊಡುತ್ತದೆ. ನಮಗೆ ಹೆಣ್ಣು ಮಕ್ಕಳಿಗೆ ಬಸ್ಸಲ್ಲಿ, ಕಚೇರಿಯಲ್ಲಿ, ನೆರೆಹೊರೆಯಲ್ಲಿ, ಸಂಬಂಧಿಕರಲ್ಲಿ, ಸಂತೆಯಲ್ಲಿ, ಬಸ್ ನಿಲ್ದಾಣ ಹೀಗೆ ಎಲ್ಲೂ ಯಾವ ಕಡೆಯಲ್ಲಿ ಅನ್ಯಾಯ ನಡೆದರೂ ಜೋರು ಬೊಬ್ಬೆ ಹಾಕಿ ಗಲಾಟೆ ಮಾಡಲು , ಹೊಡೆಯಲು ಶುರುಮಾಡಿದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಅಮ್ಮ! ಇಲ್ಲದಿದ್ದರೆ ಈ ರೋಗವನ್ನು ತಡೆಗಟ್ಟಲು ಸಾದ್ಯವೇ ಇಲ್ಲ. ಒಬ್ಬ ಮಹಿಳೆ ಸುಮ್ಮನೇ ಇದ್ದರೆ ಎಲ್ಲ ಹೆಣ್ಣು ಮಕ್ಕಳು ಹೀಗೆಯೇ ಎಂಬ ಕಾರಣಕ್ಕೆ ಇಂತವರು ವಿಜೃಂಭಿಸುತ್ತಾರೆ. ನಮಗೆ ಯಾಕೆ ನಾಚಿಕೆ ಆಗಬೇಕು? ಆನ್ಯಾಯ ಮಾಡುವುದು ಅವನು ನಾಚಿಕೆ ಪಡುವುದು ನಾವು ಯಾಕೆ ಹೀಗೆ? ಪ್ರತಿ ತಪ್ಪು ನಡೆದಾಗಲೂ ಹೆಣ್ಣನ್ನು ಎಲ್ಲರೂ ವಿಮರ್ಶೆ ಮಾಡುತ್ತಾರೆ! ಯಾಕೆ? ನಮಗೆ ಪ್ರಕೃತಿ ಸಹಜವಾಗಿ ಬೆಳೆದ ಅಂಗಗಳನ್ನು ಎಷ್ಟು ಮುಚ್ಚಿ ಕೊಂಡರು ಅಷ್ಟೆ. ಅನ್ಯಾಯ ಮಾಡುವವನು ಹೇಗಾದರೂ ಮಾಡಿಯೇ ಮಾಡುತ್ತಾನೆ! ಅತ್ಯಾಚಾರ ನಡೆದಾಗಲೂ ಅಷ್ಟೇ ಹೆಚ್ಚಿನವರು ಯಾರಲ್ಲೂ ಹೇಳದೆ ಮುಚ್ಚಿ ಇಡುತ್ತಾರೆ.ಕೆಲವು ಕಡೆ ಪೋಲೀಸರೇ ಎರಡು ಕಡೆಯವರನ್ನು ಕರೆಸಿ ರಾಜಿ ಪಂಚಾಯಿತಿ ಮಾಡುತ್ತಾರೆ. ಯಾಕೆ? ಅದು ರಾಜಿ ಮಾಡುವ ವಿಷಯವೇ? ಗಂಡಸಿಗೆ ಇಲ್ಲದ ಮರ್ಯಾದೆ ಹೆಂಗಸಿಗೆ ಮಾತ್ರವಾ. ಶಮಿಕಾ ಹೇಳುತ್ತಲೇ ಇದ್ದಳು. ನಾನು ಮಾತ್ರ ಇದೆಲ್ಲ ಹೇಳಲು ಕೇಳಲು ಚಂದ ಕಾಣುತ್ತದೆ. ಹೌದು ಎಂದೆನಿಸುತ್ತದೆ. ಕಾರ್ಯಗತ ಮಾಡಲು ಎಷ್ಟು ಕಷ್ಟವಿದೆ? ಉದಾಹರಣೆಗೆ ಈಗ ಅದ ಘಟನೆಯೇ ನೋಡೋಣ ಎಲ್ಲರೂ ಕಣ್ಣು ಬಿಟ್ಟು ನೋಡಿದ್ದು ಮಾತ್ರ . ಇನ್ನು ಎರಡು ಹೆಚ್ಚು ಪೆಟ್ಟು ಕೊಡಿ ಎಂದು ಹೇಳಿದ್ದಾರಾ,? ಅಥವಾ ಈ ರೀತಿ ಹೆಣ್ಣು ಮಕ್ಕಳಿಗೆ ಕೀಟಲೆ ನೀಡಬಾರದು ಎಂದು ಯಾರಾದರೂ ಹೇಳಿದ್ದಾರಾ ಇಲ್ಲ! ಹೇಳುವುದು ಇಲ್ಲ.ಇಷ್ಟೆ ನಮ್ಮ ಸಮಾಜದ ಜನ. ನಮಗೇಕೆ ಇವರ ಉಸಾಬರಿ ಎಂದೇ ಎಲ್ಲರೂ ಯೋಚನೆ ಮಾಡುವುದು. ನಾಳೆ ನಮಗೆ ಆದರೆ ಅಥವಾ ನಮ್ಮ ಮನೆಯ ಮಗಳಿಗೆ ಆದರೆ ಎಂದು ಯಾರೂ ಭಾವಿಸುವುದಿಲ್ಲ.. ನನ್ನ ಪರಿಸ್ಥಿತಿ ಯಾರಲ್ಲಿ ಹೇಳುವುದು ಹೇಳಿದ ಮೇಲೆ ಯಾಕಾದರೂ ಹೇಳಿದೆ ಎಂದು ಅನಿಸುತ್ತದೆ. ಕೇಳಿದವರು ಹೆಣ್ಣು ಆಗಿದ್ದರೆ ಅಯ್ಯೋ ಪಾಪ ಎಂದು ಹೇಳುತ್ತಾಳೆ. ಗಂಡಸು ಆಗಿದ್ದರೆ ತನಗೂ ಸಿಗಬಹುದೇ ಎಂಬ ಆಸೆ ಒಳ ಮನಸ್ಸು ಹೇಳುತ್ತಿರುತ್ತದೆ. ಎಷ್ಟು ಜನ ಹೆಣ್ಣು ಮಕ್ಕಳಿಗೆ ಅತ್ಯಾಚಾರ ನಡೆದ ಮೇಲೆ ನ್ಯಾಯ ಸಿಕ್ಕಿದೆ? ಎಷ್ಟು ಜನ ಹೆಣ್ಣು ಮಕ್ಕಳು ಅತ್ಯಾಚಾರ ನಡೆದಿದೆ ಎಂದು ಹೇಳಿದ ಮೇಲೆ ನ್ಯಾಯಕ್ಕಾಗಿ ಹೋದಾಗ ನ್ಯಾಯ ಪರಿಪಾಲನೆ ಮಾಡುವವರೇ ಅವಳನ್ನು ಬಳಸಿಲ್ಲ? ಎಷ್ಟು ಜನ ಗಂಡಸರು ನಂತರ ಅವಳನ್ನು ಹಿಂಬಾಲಿಸಿಲ್ಲ ಆಗ ಅವಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ.ಈ ಎಲ್ಲ ಯೋಚನೆಗಳು ನನ್ನ ಮನಸಿನಲ್ಲಿ ಹಾದು ಹೋಯಿತು ಆದರೆ ಏನನ್ನೂ ಶಮಿಕಾಳ ಬಳಿ ನಾನು ಹೇಳಲಿಲ್ಲ. ಬಸ್ಸಿನಲ್ಲಿ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ.ಆದರೆ ಇವಳು ಇಷ್ಟು ಚೆನ್ನಾಗಿ ಹೆಣ್ಣಿನ ಬಗ್ಗೆ ತಿಳಿದವಳು ಅನ್ಯಾಯವನ್ನು ಪ್ರತಿಭಟನೆ ನಡೆಸುವವಳು ಇವಳ ಹುಟ್ಟಿನ ಬಗ್ಗೆ ತಿಳಿದರೆ ಹೇಗೆ ಇರಬಹುದು ಎಂಬುದೇ ನನಗೆ ಎನಿಸಿ ಭಯವಾಗುತ್ತಿದೆ. ಹೇಗಿದ್ದೀರಿ ಎಂದು ದಾದಿಯ ಸ್ವರ ಕೇಳಿ ಭವಾನಿ ನೆನಪಿನ ಆಳದಿಂದ ಹೊರಬಂದು ಮುಖದಲ್ಲಿ ಮಂದಹಾಸ ಬೀರಿದಳು.
ಇತ್ತ ಶಮಿಕಾ ಮತ್ತು ಪವನ್ ಆಸ್ಪತ್ರೆಯಿಂದ ಹೊರಗೆ ಬಂದು ಪವನ್ ಬೈಕ್ ತಂದು ಕುಳಿತು ಕೊಳ್ಳಲು ಹೇಳುತ್ತಿದ್ದಂತೆ ಶಮಿಕಾ ಎನೂ ಅಳುಕು ಇಲ್ಲದೆ ಇರುವ ಹಾಗೆ ಅವಳ ಮನಸಿನಲ್ಲಿ ಆಗುವ ಕೋಲಾಹಲ ಗೊತ್ತಾಗದ ರೀತಿಯಲ್ಲಿ ಇದು ತನಗೆ ಮಾಮೂಲು ಎಂದೇ ಪವನ್ ಎನಿಸಲಿ ಎಂದು ಮುಖದಲ್ಲಿ ಗಂಭೀರತೆ ತಂದು ಪವನ್ ನ ಹಿಂದೆ ಬೈಕ್ ನಲ್ಲಿ ಕುಳಿತು ಬೈಕ್ ನು ಗಟ್ಟಿಯಾಗಿ ಹಿಡಿದುಕೊಂಡಳು. ಮನೆಯ ವಿಳಾಸ ಹೇಳಿದಳು. ಪವನ್ ಏನೂ ಹೇಳದೆ ಮೌನವಾಗಿ ಗಾಡಿ ಓಡಿಸುತ್ತಿದ್ದ. ಶಮಿಕಾಳ ಮನಸ್ಥಿತಿ ತುಂಬಾನೇ ಅಲ್ಲೋಲ ಕಲ್ಲೋಲ ಆಗಿತ್ತು. ಅಮ್ಮನ ಡೈರಿ ಓದಿದ ಮೇಲೆ ಇಡೀ ಗಂಡಸು ಜಾತಿ ಬಗ್ಗೆನೇ ಹೇಳಿಕೊಳ್ಳಲು ಸಾಧ್ಯವಿಲ್ಲದ ಹೇವರಿಕೆ ಕಂಡು ಬರುತ್ತಿದೆ.ಅದು ಕೋಪನಾ, ತಿರಸ್ಕಾರನಾ, ಸಂಶಯವ, ಯಾವುದು ತಿಳಿಯುತ್ತಿಲ್ಲ. ಇಡೀ ದೇಹ ಮನಸ್ಸು ಅವಳ ಸೀಮಿತದಲಿ ಇರಲಿಲ್ಲ. ಇದೇ ದಿನ ಅಮ್ಮ ಆಸ್ಪತ್ರೆಯಲ್ಲಿ ಇರಬೇಕಾದ ಪರಿಸ್ಥಿತಿ ಬರಬೇಕೇ? ಕೆಲವೊಮ್ಮೆ ಕಷ್ಟಗಳು ಹಿಂಡು ಹಿಂಡಾಗಿ ಜೊತೆ ಜೊತೆಗೆ ಬರುತ್ತದೆ. ಇಲ್ಲಿ ತನಕ ಅಮ್ಮ ನ ಬಗ್ಗೆನೇ ಸಂಶಯ ಪಟ್ಟು ಇದ್ದ ಸಂತೋಷವನ್ನು ಕಳೆದುಕೊಂಡೆ. ಈಗ ನಿಜ ತಿಳಿದು ಹೇಗೆ ಇರಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅದಕ್ಕೆ ಇರಬೇಕು ಋಷಿ ಮೂಲ ಮತ್ತು ನದಿ ಮೂಲ ತಿಳಿದುಕೊಳ್ಳಬಾರದು ಎಂದು ಹೇಳಿರುವುದು. ನಮ್ಮ ಹುಟ್ಟಿನ ಬಗ್ಗೆ ನಮಗೆ ಎಷ್ಟು ಗೊತ್ತು ಎಲ್ಲವು ಅಂತೆ ಕಂತೆಗಳು ತಾನೇ? ನನ್ನ ಹಾಗೆ ಇರುವವರು ಎಷ್ಟು ಜನ ಇದ್ದಾರೆ ಯಾರಿಗೆ ಗೊತ್ತು? ಅದಕ್ಕೆ ಇರಬೇಕು ಪ್ರಕೃತಿಯಲ್ಲಿ ಪ್ರಾಣಿ, ಪಕ್ಷಿಯಂತಹ ಜೀವಿಗಳಲ್ಲಿ ಕೂಡ ಅಮ್ಮ ಮಾತ್ರ ಇರುವುದು ಅಪ್ಪನ ಪಾತ್ರವೇ ಇಲ್ಲ. ಹಾಗಾದರೆ ಪ್ರಕೃತಿಗೆ ಗಂಡು ಜೀವಿ ಬಗ್ಗೆ ಮೊದಲೇ ಗೊತ್ತಿದೆಯಾ? ಇವನಿಂದ ಇಷ್ಟೆ ಸಾಧ್ಯ ಎಂದು! ಭೂಮಿ ಅಂದರೆ ಹೆಣ್ಣು ಎನ್ನುವುದು ಅದೇ ಕಾರಣಕ್ಕೆ ಇರಬಹುದೇ? ಅಮ್ಮನಿಗೆ ಮಾತ್ರ ತನ್ನ ಮಗುವಿನ ಕಾರಣಕರ್ತ ಯಾರು ಎಂದು ತಿಳಿದಿರುವುದು. ಆದರೆ ಇಲ್ಲಿ ನನ್ನ ಹುಟ್ಟಿನ ಪಾತ್ರಧಾರಿ ಆ ಮೂವರು ನೀಚರಲ್ಲಿ ಯಾರು ಎಂದು ಅಮ್ಮನಿಗೂ ಗೊತ್ತಿಲ್ಲ.
( ಮುಂದುವರಿಯುವುದು)
–✍️ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ