November 24, 2024
Antarala

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ಇರುವುದಕ್ಕೆ ಬೇಕಾದ ಬಟ್ಟೆ ಟವೆಲ್ ತರಲು ಪವನ್ ಜೊತೆ ಬೈಕ್ ನಲ್ಲಿ ಶಮಿಕಾ ಮನೆಗೆ ಹೊರಡುತ್ತಾಳೆ. ಆಗ ಭವಾನಿ ಯೋಚನೆಯಲ್ಲಿ ಮುಳುಗಿರುತ್ತಾಳೆ.

ಅಂತರಾಳ – ಭಾಗ 12

ಶಮಿಕಾರವರೆ ಇಳಿಯಿರಿ ಎಂದಾಗಲೇ ಗೊತ್ತು ಶಮಿಕಾಳಿಗೆ ಮನೆ ಬಳಿ‌ ಬಂದಿರುವುದು.. ದಡಬಡಿಸಿ ಇಳಿದು ಬೀಗ ತೆಗೆದು ಒಳಹೋದಳು. ತಕ್ಷಣ ಮನೆಗೆ ಬಂದವರನ್ನು ಒಳ ಕರೆಯಬೇಕು ಎಂದು ಅಮ್ಮ ಮೊದಲೊಮ್ಮೆ ಹೇಳಿದ್ದು ನೆನಪಾಯಿತು ಪುನಃ ಹೊರಗೆ ಬಂದು ಬನ್ನಿ ಎಂದು ಕರೆದಳು ಶಮಿಕಾ.. ಪವನ್ ಇಲ್ಲ ನನಗೆ ಪೋನ್ ಮಾಡಲು ಇದೆ ಎಂದು ಹೊರಗೆ ಇದ್ದು ಮೊಬೈಲಿನಲ್ಲಿ ಯಾರ ಜೊತೆಗೋ ಮಾತನಾಡುವುದರಲ್ಲಿಯೇ ತಲ್ಲೀನನಾಗಿದ್ದನು… ಶಮಿಕಾ ಬೇಗ ಬೇಗನೆ ಸ್ನಾನ ಮುಗಿಸಿ ಅಮ್ಮನಿಗೆ ಬೇಕಾದ ಬಟ್ಟೆ ಟವೆಲ್ ರಾತ್ರಿ ಮಲಗಲು ಬಟ್ಟೆ ತೆಗೆದುಕೊಂಡು ಮನೆಗೆ ಬೀಗ ಹಾಕಿ ಬಂದು ಇಬ್ಬರು ಆಸ್ಪತ್ರೆಗೆ ಬಂದರು. ದಾರಿ ಮಧ್ಯದಲ್ಲಿ ಪವನ್ ಹೊಟೇಲ್ ಗೆ ಹೋಗಿ ಇಬ್ಬರಿಗೂ ಊಟ ತಂದನು.
ಪವನ್ ಶಮಿಕಾಳನು ಆಸ್ಪತ್ರೆಗೆ ಬಿಟ್ಟು ಅವಳಿಂದ ಮೊಬೈಲ್ ಸಂಖ್ಯೆ ಪಡೆದುಕೊಂಡು ತಾನು ತನ್ನ ಮೊಬೈಲ್ ಸಂಖ್ಯೆ ನೀಡಿ ಎನಾದರೂ ಬೇಕಿದ್ದರೆ ವೈದ್ಯರು ಎನಾದರೂ ಮದ್ದು ತರಲು ಹೇಳಿದರೆ ನನಗೆ ಕರೆ ಮಾಡಿ ಎಂದು ಹೇಳಿ ಶಮಿಕಾಳ ಅಮ್ಮ ಭವಾನಿಯವರಲ್ಲಿ ಅಂಟಿ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಿ ನಾನು ನಾಳೆ ಬರುತ್ತೇನೆ… ರಾತ್ರಿ ನಾನು ಬರಬೇಕಿದ್ದರೆ ಪೋನ್ ಮಾಡಿ ಶಮಿಕಾರವರಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ ನಾನು ಮನೆಗೆ ಹೋಗುತ್ತೇನೆ ಎಂದು ಇಬ್ಬರಲ್ಲೂ ಬರುತ್ತೇನೆ ಎಂದು ಹೇಳಿ ‌ಪವನ್ ಮನೆಗೆ ಹೋದನು.

ಪವನ್ ಹೋದಮೇಲೆ ಶಮಿಕಾಳಿಗೆ ಏನೋ ಒಂದು ಕಳೆದುಕೊಂಡ ಭಾವವೊಂದು ಮನಸಿನಲ್ಲಿ ಹಾದು ಹೋಯಿತು. ಭವಾನಿ ಕೂಡ ಪವನ್ ಹೋದ ಮೇಲೆ ತುಂಬಾ ಸಪ್ಪೆಯಾಗಿ ಹೋದಳು.ತಾಯಿ ಮಗಳು ಇಬ್ಬರಿಗೂ ಏಕ ಕಾಲದಲ್ಲಿ ನಾವು ಒಂಟಿ ಎಂದು ಎನಿಸಿದ್ದು ಮಾತ್ರ ಸುಳ್ಳಲ್ಲ. ಭವಾನಿಗೆ ಮದ್ದಿನ ಪ್ರಭಾವದಿಂದ ಅಲ್ಲೇ ನಿದ್ದೆ ಬಂದ ಹಾಗೆ ಕಣ್ಣು ಮುಚ್ಚಿ ಮಲಗಿದರು. ‌ಶಮಿಕಾ ಎನೊ ಯೋಚನೆಗೆ ಜಾರಿದಳು. “ಪ್ರೀತಿಯ ಸಂಬಂಧ ಎಂಬುದು ಹೆಣ್ಣಿಗೆ ಆಗಲಿ ಗಂಡಿಗೆ ಆಗಲಿ ಬೆಚ್ಚನೆಯ ಅನುಭವ ಆಗುವುದಂತು ಸತ್ಯ. ತುಂಬಿದ ಕುಟುಂಬದಲ್ಲಿ ಇದ್ದು ಅಪ್ಪನ ಅಕ್ಕರೆ, ಅಮ್ಮನ ಪ್ರೀತಿ, ಅಜ್ಜ, ಅಜ್ಜಿ, ಅಣ್ಣ, ತಮ್ಮ, ಅಕ್ಕ, ತಂಗಿ, ಮಾಮಾ, ಮಾಮಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಎಲ್ಲರೊಂದಿಗೆ ಬೆರೆತು ಬಾಳುವ ಹೆಣ್ಣು ಆಗಿರಲಿ ಗಂಡೇ ಆಗಿರಲಿ ಅವರಿಗೆ ಗೊತ್ತಿರುವುದಿಲ್ಲ ಅದರ ಬೆಲೆ. ನನ್ನಂತಹ ನೂರಾರು ಅನಾಥ ಒಂಟಿ ಜೀವಿಗಳಿಗೆ ಮಾತ್ರ ಗೊತ್ತು ಅದರ ನೋವು ಏನು ? ಅದರ ಬೆಲೆ ಏನು ಎಂದು…… ಒಂದು ಎರಡು ಗಂಟೆ ನನ್ನ ಜೊತೆ ಪವನ್ ಇದ್ದ ಮಾತ್ರಕ್ಕೆ ಏನೋ ಒಂದು ನೆಮ್ಮದಿ ನಾನು ಯಾರಿಗೂ ಹೆದರಬೇಕಿಲ್ಲ ಎಂಬ ಒಳಮನಸ್ಸಿನ ಬೆಚ್ಚನೆಯ ಭಾವ ನನಗೂ ಅಪ್ಪ ,ಅಣ್ಣ ,ತಮ್ಮ ,ಅಕ್ಕ ,ತಂಗಿ ಇರಬೇಕಿತ್ತು ಎಂದು ಎಂದೆನಿಸಿತು….. ನನ್ನಂತಹ ನೂರಾರು ಅನಾಥ ಒಂಟಿ ಜೀವಗಳು ಬೇರೆಯವರು ಜೊತೆಯಾಗಿ ಹೊಟೇಲ್, ಮಾರುಕಟ್ಟೆ, ಬೀದಿಯಲ್ಲಿ, ಸಿನಿಮಾ ಹಾಲ್ ನಲ್ಲಿ, ಪಾರ್ಕುಗಳಲ್ಲಿ ಮಕ್ಕಳು ಅಪ್ಪ ಅಮ್ಮ ನ ಜೊತೆ, ಮೊಮ್ಮಕ್ಕಳು ಅಜ್ಜ ಅಜ್ಜಿಯ ಜೊತೆ, ಹೆಂಡತಿ ಗಂಡನ ಜೊತೆ, ಗಂಡ ಹೆಂಡತಿಯ ಜೊತೆ ಪ್ರೀತಿಯಿಂದ ಮಾತನಾಡುತ್ತಾ ಕಾಲ ಕಳೆಯುತ್ತಿರುವಾಗ ಅವರನ್ನು ನೋಡಿ ನಮ್ಮ ಕಣ್ಣು ಒದ್ದೆ ಆಗಿರುವುದು ರಾತ್ರಿ ನಿದ್ದೆ ಮಾಡುವಾಗ ಎನಿಸಿ ಎನಿಸಿ ಆಳುವುದು ಹೊರ ಜಗತ್ತಿಗೆ ತಿಳಿಯಲು ಸಾಧ್ಯವಿಲ್ಲ. ನನ್ನಂತಹ ನೂರಾರು ಮಂದಿಯ ಕಣ್ಣೀರೇ ಭೂಮಿಗೆ ಬಿದ್ದು ಮಳೆಯಾಗಿ ಬರಬಹುದೇ ಎಂದೆನಿಸುತ್ತೇನೆ.

ಪವನ್ ನ ಗುಣ, ಬೇರಯವರ ಬಗ್ಗೆ ಕಾಳಜಿ ಮೆಚ್ಚುವಂತಹದು. ಪವನ್ ಜೊತೆ ನನಗೆ ಯಾಕೋ ಒಂಥರಾ ಮನಸ್ಸಿಗೆ ಮುದ ನೀಡುವ ಆನಂದವನ್ನು ಉಂಟುಮಾಡುತ್ತದೆ.ಇದು ಪ್ರೀತಿ ಇರಬಹುದೇ….. ಪ್ರೀತಿ, ಪ್ರೇಮ ಪುಸ್ತಕದ ಬದನೆಕಾಯಿ ಎಂದು ಎನಿಸಿ ಅವಳೇ ಮನಸಿನಲ್ಲಿ ನಕ್ಕು ಬಿಟ್ಟಳು…
ಪ್ರೀತಿ ಎಂಬುದು ದೈಹಿಕ ಆಕರ್ಷಣೆಯಿಂದ ಹುಟ್ಟಿ ಮಿಲನದಲ್ಲಿ ಕೊನೆಗೊಳ್ಳುತ್ತದೆ ಎಂದು ಎಲ್ಲೊ ಓದಿದ ನೆನಪು……ಇದು ನಿಜವೇ ಆಗಿದ್ದರೆ ಪ್ರೀತಿಗೆ ಅರ್ಥವೇ ಇಲ್ಲ. ನನಗೆ ಪವನ್ ಜೊತೆ ಪ್ರೀತಿ ಬಂದಿರಬಹುದೇ….ಇಲ್ಲ ಅದು ಒಮ್ಮೆಲೇ ಬರುತ್ತದಾ….. ಅದು ಗೊತ್ತಿಲ್ಲ…. ನನ್ನ ಗೆಳತಿ ಒಬ್ಬಳು ಯಾರನ್ನೋ ಪ್ರೀತಿ ಮಾಡುತ್ತಿದ್ದೇನೆ ಎನ್ನುತ್ತಾಳೆ…. ಅವಳಿಗೆ ಪ್ರೀತಿ ಹೇಗೆ ಬಂತು ಎಂದು ನಾನು ಕೇಳಿಲ್ಲ ಅವಳು ಹೇಳಿಲ್ಲ…. ಬಹುಶಃ ಪ್ರೀತಿ ಹೇಗೆ ಹುಟ್ಟಿಕೊಳ್ಳುತ್ತದೆ?…….ಯಾರಲ್ಲಿ ಕೇಳುವುದು……. ಪ್ರೀತಿ, ಪ್ರೇಮ ಎಂಬುದು ಸುಳ್ಳ!……..ಸತ್ಯವಾ!……. ಇವತ್ತು ನನ್ನ ಯೋಚನೆಗೆ ದಿಕ್ಕು ದೆಸೆಯೇ ಇಲ್ಲ………ಈ ಮಧ್ಯೆ ರಮಣಿಯವರ ಯೋಚನೆಯೂ ಬಂತು ಪಾಪ ಮಗಳನ್ನು ಕಳೆದುಕೊಂಡು ಗಂಡನಿಗೆ ಹುಷಾರಿಲ್ಲದೆ ಹೈರಾಣಾಗಿ ಹೋಗಿದ್ದಾರೆ…… ನಾಳೆ ಅವರನ್ನು ಕಂಡು ಮಾತನಾಡಿಸಿ ಅವರ ಮೊಬೈಲ್ ಸಂಖ್ಯೆ ತೆಗೆದುಕೊಳ್ಳಬೇಕು……. ಈ ಜಗತ್ತು ಹೇಗೆ ಅಂದರೆ ತನಗೆ ಕಷ್ಟ ಬಂದರೆ ಮಾತ್ರ ಕಷ್ಟ ಎಂದು ಅನುಭವಿಸಿ ಬೆಂದು ಹೋಗುತ್ತಾರೆ…………..ಆದರೆ ತಾವು ಸುಖವಾಗಿರುವಾಗ ತಪ್ಪಿಯೂ ಬೇರೆಯವರ ಕಷ್ಟವನ್ನು ನೋಡಿ ನೊಂದುಕೊಳ್ಳುವುದಿಲ್ಲ…… ನೊಂದುಕೊಂಡರು ಕ್ಷಣಿಕ… ಇಂದಿನ ವೇಗದ ಜೀವನದಲ್ಲಿ ಕ್ಷಣ ಕ್ಷಣ ವಿಷಯಗಳು ಬೇರೆ ಬೇರೆ ಸಿಗುತ್ತಿರುತ್ತದೆ….. ಹಾಗಿರುವಾಗ ಒಬ್ಬರ ನೋವುಗಳು ಇನ್ನೊಬ್ಬರಿಗೆ ತಟ್ಟುವುದೇ ಇಲ್ಲ……ಹೆಚ್ಚಿನ ಶ್ರೀಮಂತರು ನಮಗೇಕೆ ಬೇರೆಯವರ ಉಸಾಬರಿ ಎಂದುಕೊಂಡು ಅವರು ಬೇಕಾದಷ್ಟು ಖರ್ಚು ಮಾಡಿ ಜೀವನ ಅಂದರೆ ಪಾರ್ಟಿ, ‌ಪಬ್, ಹೋಟೆಲ್ ‌ ಹೊರದೇಶಕ್ಕೆ ಪ್ರವಾಸಕ್ಕೆ ಹೋಗುವುದು ಎಂದೇ ಎನಿಸಿ ಅದರಂತೆ ಬಾರೀ ಸಲೀಸಾಗಿ ಜೀವನ ಸಾಗಿಸುತ್ತಿರುತ್ತಾರೆ. ಇನ್ನೂ ಹೆಚ್ಚಿನ ಮಧ್ಯಮ ವರ್ಗದವರು ಶ್ರೀಮಂತರನ್ನು ಕಂಡು ಜೀವನ ಅಂದರೆ ಅದೇ ಎಂದುಕೊಂಡು ಅವರ ರೀತಿ ಇರಬೇಕು ಎಂದು ಆ ಜೀವನಕ್ಕೆ ಹೆಣಗಾಡುತ್ತಾ……..ಹಾತೊರೆಯುತ್ತಾ ಇರುತ್ತಾರೆ.‌‌… ಕಡು ಬಡವರು ಹೊಟ್ಟೆಗೆ ಸರಿ ತಿಂದರೆ ಬಟ್ಟೆಗೆ ಇಲ್ಲ .. ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿ ಇಲ್ಲ ಅಂದರೆ ಬೇರೆಯವರಲ್ಲಿ ಬೇಡಿ ಬೈಸಿಕೊಳ್ಳುತ್ತಾ ಹೆಚ್ಚು ಅಲ್ಲದಿದ್ದರೂ ಮದ್ಯಮ ವರ್ಗದವರಂತೆ ನಾವು ಆಗಬೇಕು ಎಂದು ಇದ್ದ ಎಲ್ಲಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಹರಕೆ ತೀರಿಸುತ್ತಾ ಕನಸ್ಸು ಕಾಣುತ್ತಾ ಇರುತ್ತಾರೆ…. ನಿಜವಾಗಿಯೂ ಸಂತೃಪ್ತಿಯಿಂದ ಜೀವನ ಸಾಗಿಸುವುದು ಅಂದರೆ ಪಶು ಪಕ್ಷಿಗಳು ಮಾತ್ರವಾ ಎಂದೆನಿಸುತ್ತದೆ”………..ಅಮ್ಮ ಶಮಿಕಾ ಎಂದು ಕರೆದ ದ್ವನಿ ಕೇಳಿ ಯೋಚನೆಯಿಂದ ಎದ್ದು ಅಮ್ಮನ ಬಳಿ ಬಂದು ಅಮ್ಮ ಗಂಟೆ 8.30 ಆಯಿತು ಊಟ ಮಾಡೋಣ ಎಂದು ಪವನ್ ಹೋಟೆಲ್ ನಿಂದ ತಂದ ಊಟವನ್ನು ಇಬ್ಬರು ಮಾಡಿ ಮುಗಿಸಿದರು.. ದಾದಿ ಬಂದು ರಾತ್ರಿಯ ಮದ್ದು ಕೊಟ್ಟು ಹೋದರು.. ಭವಾನಿ ಮದ್ದು ಕುಡಿದು ಮಲಗಿದರು.. ಅಮ್ಮ ಮಲಗಿದ ಮೇಲೆ ಶಮಿಕಾ ಸ್ವಲ್ಪ ಹೊತ್ತು ಮೊಬೈಲ್ ನೋಡೋಣ ಎಂದು ಎತ್ತಿ ಕೊಂಡಳು… ಇಂದು ಸಂಜೆಯಿಂದ ಇಡೀ ಜೀವನದಲ್ಲಿ ಮಾಡಿರದ ಯೋಚನೆ ಇವತ್ತು ಸಂಜೆಯಿಂದ ಮಾಡಿದ್ದಾಳೆ….. ಹಾಗೆ ಯೋಚನೆ ಮಾಡಿ ಮಾಡಿ ಮಿದುಳು ವಿಶ್ರಾಂತಿ ಬೇಕು ಎಂದು ಬಯಸುವ ಹಾಗೆ ಅಲ್ಲೆ ನಿದ್ದೆ ಹೋದಳು……….

ಇತ್ತ ಪವನ್ ಮನೆಗೆ ಬಂದಾಗ ಅಮ್ಮ ಹುಶಾರಾಗಿದ್ದರು…. ಮನೆಯಲ್ಲಿ ಪವನ್ ನ ದೊಡ್ಡ ಅಕ್ಕ ಪಂಕಜಾ ಮತ್ತು ಮಕ್ಕಳು ಅಮ್ಮನಿಗೆ ಹುಷಾರಿಲ್ಲ ಎಂದು ಗೊತ್ತಾಗಿ ಮನೆಗೆ ಬಂದಿದ್ದರು ಅಕ್ಕನ ಮಕ್ಕಳಾದ ಅದಿತಿ ಮತ್ತು ಅಖಿಲ್ ನಿಂದ ಮನೆಯೆಲ್ಲಾ ಗದ್ದಲ ಇತ್ತು.
ಪವನ್ ಅಮ್ಮನಲ್ಲಿ, ಅಕ್ಕನಲ್ಲಿ ಮಾತನಾಡಿ ಮಕ್ಕಳು ನನ್ನನು ಮುಟ್ಟಬೇಡಿ ನಾನು ಸ್ನಾನ ಮುಗಿಸಿ ಬರುತ್ತೇನೆ ಎಂದು ನೇರ ಬಚ್ಚಲು ಮನೆಗೆ ಹೋಗಿ ಸ್ನಾನ ಮಾಡಿ ಬಂದ ತಕ್ಷಣ ಮಕ್ಕಳಿಬ್ಬರು ಮಾಮಾ ಮಾಮಾ ಎಂದು ಅವನಲ್ಲಿ ಆಟವಾಡಲು ಶುರು ಮಾಡಿದರು.
ಪವನ್ ನ ಅಕ್ಕ ಎನು ಇವತ್ತು ಬರುವಾಗ ತಡವಾಯಿತು ಎಂದಾಗ ತನ್ನಿಂದ ಆದ ತಪ್ಪು, ಅದರಿಂದ ಭವಾನಿ ಎಂಬ ಮಹಿಳೆ ಆಸ್ಪತ್ರೆಗೆ ದಾಖಲು ಆಗಿರುವುದು ಮತ್ತು ಅಲ್ಲಿಯ ಎಲ್ಲ ವಿಷಯಗಳನ್ನೂ ಅಕ್ಕ ಮತ್ತು ಅಮ್ಮನಿಗೆ ಹೇಳಿದ… ಅಮ್ಮ ಮತ್ತು ಅಕ್ಕ ತುಂಬಾ ಮರುಗಿದರು..‌ ನಮ್ಮಿಂದ ಅದ ತಪ್ಪಿನಿಂದ ಅವರು ನೋವು ತಿನ್ನುವ ಹಾಗೆ ಆಯಿತು ಎಂದು ನೊಂದುಕೊಂಡರು…… ಸ್ವಲ್ಪ ಹೊತ್ತು ಇದ್ದು ಊಟ ಮುಗಿಸಿ ಎಲ್ಲರೂ ಮಲಗಿದರು….
ಪವನ್ ಮೊಬೈಲ್ ತೆಗೆದು ಶಮಿಕಾಳಿಗೆ ಮೇಸೆಜ್ ಮಾಡಿದ ಅಮ್ಮ ಹೇಗಿದ್ದಾರೆ…. ಊಟ ಆಯಿತಾ ? ಎಂದು ಸ್ವಲ್ಪ ಹೊತ್ತು ಕಾದ ಶಮಿಕಾಳ ಪ್ರತಿಕ್ರಿಯೆ ಬರಲಿಲ್ಲ……… ಯಾಕೆ ಉತ್ತರ ಇಲ್ಲ ಮಲಗಿದ್ದಾರ ಇಲ್ಲ ನನ್ನ ಮೇಲೆ ಸಿಟ್ಟು ಇರಬಹುದೇ ಎಂಬ ಯೋಚನೆಯೂ ಬಂತು….. ತಪ್ಪು ನಡೆದ ಮೇಲೆ ಅದನು ಸರಿ ಮಾಡಲು ಆಗುವುದಿಲ್ಲ….. ಬಹುಶಃ ತಾಯಿ ಮಗಳು ಇಬ್ಬರೇ ಆನಂದದಿಂದ ಇದ್ದಾರೆ…. ನನ್ನ ಅವಸರ ಅವರ ಆನಂದವನ್ನೇ ಕಸಿದುಕೊಂಡಿತು…. ಶಮಿಕಾರಲ್ಲಿ ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂಬ ಒಂದೇ ಪ್ರಶ್ನೆಗೆ ಹುಡುಗಿಯ ಮುಖ ಭಾವವೇ ಬದಲಾಯಿತು…. ಇರಲಿ ಕೆಲವರಿಗೆ ಅವರ ವೈಯಕ್ತಿಕ ವಿಷಯ ಕೇಳಿದರೆ ತುಂಬಾ ಕೋಪ ಬರುತ್ತದೆ…. ನನ್ನ ಹಾಗೆ ಒಮ್ಮೆಲೇ ಎಲ್ಲರನ್ನೂ ನಂಬುವಂತಹ ಹುಡುಗಿ ಅಲ್ಲ..ಇದು ನಿಜವಾಗಿಯೂ ಒಳ್ಳೆಯದೇ…. ಅಲ್ಲ ಒಂದು ಕ್ಷಣದ ಪರಿಚಯದಲ್ಲಿ ಅವರು ನನ್ನನ್ನು ನಂಬುವುದಾದರು ಹೇಗೆ? ಹೆಚ್ಚಿನ ಗಂಡಸರು ಒಬ್ಬ ಹೆಣ್ಣಿನ ನಿಸ್ಸಾಯಕ ಸ್ಥಿತಿಯನ್ನು ಬಳಸಿಕೊಳ್ಳಲು ಹಿಂಜರಿಯುವುದಿಲ್ಲ…….
ನನಗೂ ಇಬ್ಬರು ಅಕ್ಕಂದಿರು ಇದ್ದಾರೆ ಎಂದು ನಾನು ಅಂದುಕೊಳ್ಳುತ್ತೇನೆ……ಈ ರೀತಿ ಎಷ್ಟು ಗಂಡಸರು ಎನಿಸಿಕೊಳ್ಳುತ್ತಾರೆ ?.

( ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ

Leave a Reply

Your email address will not be published. Required fields are marked *