ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಭವಾನಿ ಆಸ್ಪತ್ರೆಯಲ್ಲಿ ಇರುವಾಗ ಪರಿಚಯವಾದ ರಮಣಿಯ ಗಂಡ ಹುಷಾರಿಲ್ಲ ಅಂತ ಕರೆ ಮಾಡಿ ಹೇಳಿದಾಗ ಶಮಿಕಾ , ಆರತಿ ಮತ್ತು ಪವನ್ ರಮಣಿಯ ಗಂಡನನ್ನು ನೋಡಲು ಉಡುಪಿಗೆ ಹೋಗುತ್ತಾರೆ.
ಅಂತರಾಳ – ಭಾಗ 24
ಪವನ್ ನಗುತ್ತಾ ಏನು ಇಲ್ಲ ಶಮಿಕಾ ನಾನು ಏನು ಯೋಚನೆ ಮಾಡುವುದು ಎಂದು ಆರತಿಯವರು ಕೇಳಿದ್ದು ಎಂದಾಗ ಶಮಿಕಾ ತಕ್ಷಣ ಪವನ್ ಏನು ಯೋಚನೆ ಮಾಡುವುದು ಎಂದು ನನಗೆ ಗೊತ್ತು ಎಂದಳು…ಅರೇ ಕ್ಷಣ ಮೂವರು ಒಬ್ಬರಿಗೊಬ್ಬರು ಮುಖ ಮುಖ ನೋಡಿಕೊಂಡರು……… ಮನಸಿನಲ್ಲೇ ಪ್ರೀತಿಯನ್ನು ಧಾರೆ ಎರೆದು ಕೊಡುವ ಪವನ್ ಹೃದಯ ಮತ್ತು ಆ ಪ್ರೀತಿಯ ಧಾರೆಯನ್ನು ತನ್ನ ಮನಸೆಂಬ ಬೊಗಸೆಯಲ್ಲಿ ಹಿಡಿದಿಡುವ ಆರತಿಯ ಹೃದಯ ಎರಡು ಒಂದಕ್ಕೊಂದು ತಾಗಿ ಜೋರು ನಿನಾದ ಉಂಟಾಗುವಂತೆ ಇಬ್ಬರ ಕಣ್ಣು ಕಣ್ಣು ಕಲೆತು ಮರುಕ್ಷಣ ನೋಟ ಬೇರೆಡೆಗೆ ತಿರುಗಿಸಿದರು…ಆ ಪುಟ್ಟ ಕ್ಷಣವನ್ನು ಶಮಿಕಾ ತನ್ನ ಕ್ಯಾಮರಾ ಎಂಬ ಕಣ್ಣಲಿ ಸೆರೆಹಿಡಿದು ಬಿಟ್ಟಳು…….. ಇಬ್ಬರ ಮನಸ್ಸಿಗೂ ತಿಳಿದಿತ್ತು ತಾವು ಇಬ್ಬರು ಪ್ರೀತಿಸುತ್ತಿರುವುದು…. ನಿನ್ನೆ ಬೆಳಿಗ್ಗೆ ಮೂವರು ಹೊರಟು ಬಂದ ಬಳಿಕ ಶಮಿಕಾ ಇಬ್ಬರಿಗೂ ಪರಸ್ಪರ ತಿಳಿದುಕೊಳ್ಳಿ ಎಂಬಂತೆ ಅವರಿಬ್ಬರ ಮದ್ಯೆ ಸೇತುವೆಯಂತೆ ಸಂಬಂಧ ಪೊಣಿಸಲು ನೆರವಾಗುತ್ತಿದ್ದಾಳೆ… ಬಸ್ಸಲ್ಲಿ ಮೂವರು ಜೊತೆಗೆ ಕುಳಿತಾಗ ಶಮಿಕಾ ಮದ್ಯೆ ಇದ್ದು ಸ್ವಲ್ಪ ದೂರ ಬಸ್ಸು ಹೋದಾಗ ನನಗೆ ವಾಂತಿ ಬಂದ ಹಾಗೆ ಆಗುತ್ತಿದೆ… ನಾನು ಬಸ್ಸಿನ ಬದಿಯಲಿ ಕುಳಿತು ಕೊಳ್ಳುತ್ತೇನೆ ಎಂದು ಅವರಿಬ್ಬರನ್ನು ಜೊತೆ ಮಾಡಿ ಬದಿಯಲ್ಲಿ ಕಣ್ಣು ಮುಚ್ಚಿ ಕುಳಿತಳು.. ಆರತಿ ತನ್ನ ಪಕ್ಕವೇ ಕುಳಿತಾಗ ಪವನ್ ಗೆ ಯಾವುದೋ ತಂಗಾಳಿ ಬೀಸಿ ತಂಪೆರೆಯುವಂತೆ ಮನಸ್ಸು ತುಂಬಾನೇ ಆರತಿ ತುಂಬಿಕೊಂಡಳು… ಬೇಕಂತಲೇ ಮೈ ಕೈ ತಾಗಿಸಿ ತೀಟೆ ತೀರಿಸಿಕೊಳ್ಳುವ ಪಡ್ಡೆ ಹುಡುಗ ಅವನಲ್ಲ…. ಅವನಿಗೆ ಅವನ ಮನಸ್ಸಿಗೆ ಹತ್ತಿರವಾದ ತನ್ನ ಹೆಣ್ಣು ನನ್ನ ಪಕ್ಕವೇ ಇದ್ದಾಳೆ ಎಂಬುದೇ ಅವನಿಗೆ ಅವನ ಹೃದಯವೇ ತಾಳ ಹಾಕುತ್ತಿತ್ತು….ಅವಳ ಮೈಯ ಬಿಸಿ ಮತ್ತು ಉಸಿರಿನ ಬಿಸಿ ಎರಡು ಒಟ್ಟಾಗಿ ಬಂದು ತನ್ನನ್ನು ಅಪ್ಪಿ ಮುದ್ದಾಡಿ ಮುತ್ತಿಟ್ಟು ಹೋಗುವಂತೆ ಅವನಿಗೆ ಅವಳ ಇರುವಿಕೆ ಭಾಸವಾಗುತ್ತಿತ್ತು… ಇಬ್ಬರ ಮೌನದಲ್ಲೂ ಮಾತಿತ್ತು ಆದರೆ ಶಬ್ಧ ಇರಲಿಲ್ಲ… ಇಬ್ಬರ ಹೃದಯ ಮಾತಾಡುತ್ತಿತ್ತು… ಆರತಿಗೆ ಪವನ್ ನ ನಿಷ್ಕಲ್ಮಶ ಪ್ರೀತಿ ತಿಳಿಯುತ್ತಿತ್ತು…. ಅಷ್ಟು ಪಟ ಪಟನೆ ಮಾತನಾಡುವ ತಾನು ಇರುವಲ್ಲಿ ನಗುವೇ ಜೀವನ ಎಂದು ಕೊಂಡ ಹೆಣ್ಣು ಪವನ್ ಪಕ್ಕ ಗೊಂಬೆಯಂತೆ ಕುಳಿತಿದ್ದಳು… ಮೌನದಲ್ಲಿನ ಮಾತು ಚಂದ…. ಇಬ್ಬರು ನೇರವಾಗಿ ಹೊರಗೆ ನೋಡುವಂತೆ ಕಂಡರು ಒಳಗಣ್ಣಿನಿಂದ ಪರಸ್ಪರ ನೋಡಿ ಆನಂದಿಸುತ್ತಿದ್ದರು…… ಪ್ರೀತಿಗೆ ಇರುವ ಆನಂದವೇ ಬೇರೆ…. ಆಸ್ತಿ ಅಂತಸ್ತು ಅಧಿಕಾರ ಹಣ ಒಡವೆ ಯಾವುದಕ್ಕೂ ಪ್ರೀತಿ ಎಂಬುದು ಸರಿ ಸಾಟಿಯಾಗಲಾರದು…. ಬೇರೆ ಯಾವುದೇ ವಸ್ತು ನೀಡಿದರೂ ಮುಗಿದು ಹೋಗುತ್ತದೆ ಆದರೆ ಪ್ರೀತಿ ಹಾಗಲ್ಲ…….
ಮೌನದಲ್ಲಿನ ಮಾತು ಚಂದ…. ಬಸ್ಸಿನ ಕುಲುಕಾಟದಿಂದ ಪರಸ್ಪರ ಮೈ ತಾಗುವಂತೆ ಇದ್ದರೂ ಪವನ್ ಯಾವ ಕ್ಷುಲ್ಲಕ ಮನಸಿನಿಂದಲೂ ಅವಳನ್ನು ಎನಿಸಲಿಲ್ಲ ಇಬ್ಬರ ಮನಸ್ಸೂ ಮಾತನಾಡುತ್ತಿತು…. ….. ಇಬ್ಬರ ಪ್ರೀತಿಯು ಪರಿಪಕ್ವ ಆಗಿತ್ತು.. ಇಬ್ಬರಿಗೂ ಆತುರ ಇರಲಿಲ್ಲ…ಅವರ ಪ್ರೀತಿಗೆ ಕಾಮದ ಯಾವ ಕುರುಹೂ ಇರಲಿಲ್ಲ… ದೇಹದ ಪ್ರೀತಿಗಿಂತ ಮನಸ್ಸಿನ ಪ್ರೀತಿಗೆ ಬೆಲೆ ಹೆಚ್ಚು…ದೇಹದ ಪ್ರೀತಿ ಹೆಚ್ಚಾದರೆ ಅಲ್ಲಿ ಮೊದಲು ಬರುವುದೇ ಕಾಮ. ಮನಸ್ಸು ಮನಸ್ಸು ಪ್ರೀತಿ ಮಾಡಿದಾಗ ನೋಟ,ಮೌನ ,ಕೊನೆಗೆ ಮಾತು ಬರುತ್ತದೆ ಎಂದರೆ ತಪ್ಪಾಗಲಾರದು….ಪ್ರೀತಿಗೆ ಇರುವ ಆನಂದವೇ ಬೇರೆ…. ಆಸ್ತಿ ಅಂತಸ್ತು ಅಧಿಕಾರ ಹಣ ಒಡವೆ ಯಾವುದಕ್ಕೂ ಪ್ರೀತಿ ಎಂಬುದು ಸರಿ ಸಾಟಿಯಾಗಲಾರದು…. ಪ್ರೀತಿಸಿದವರ ಧ್ವನಿ ಕೇಳಿದರೆ ಸಾಕು ಹೃದಯದಲ್ಲಿ ಮಧುರಗಾನ ಪಲ್ಲವಿಸುತ್ತದೆ. ಬೇರೆ ಯಾವುದೇ ವಸ್ತು ನೀಡಿದರೂ ಮುಗಿದು ಹೋಗುತ್ತದೆ ಆದರೆ ಪ್ರೀತಿ ಕೊಟ್ಟಷ್ಟು ಹೆಚ್ಚಾಗುತ್ತದೆ…. ಪಡೆದಷ್ಟು ಪಡೆಯುವ ಎಂದಾಗುತ್ತದೆ… ನಿಜ ಪ್ರೀತಿಗೆ ಅಸಹನೆ, ರೋಷ, ಮತ್ಸರ, ದ್ವೇಷ,ಹಠ, ಅಹಂಕಾರ, ಕ್ರೋಧ ಯಾವೊಂದು ಇರಲಾರದು… ಅಲ್ಲಿ ಅದಿಯು ಪ್ರೀತಿಯೇ ಅಂತ್ಯವೂ ಪ್ರೀತಿಯೇ.. ಗಿಡದಲ್ಲಿ ಅರಳುವ ಹೂವಿಗೆ ಗೊತ್ತು ತನ್ನನ್ನು ದುಂಬಿ ಎಷ್ಟು ಪ್ರೀತಿಸುತ್ತಿದೆ ಎಂದು…. ಭೂಮಿಗೆ ಗೊತ್ತು ಮಳೆ ಬಂದರೆ ಮಾತ್ರ ತಾನು ಪ್ರೀತಿಯಿಂದ ಅರಳುತ್ತೇನೆ ಎಂದು…ಮಳೆ ಬಂದಾಗ ಮಾತ್ರ ಭೂಮಿ ಘಮಘಮಿಸುತ್ತಾಳೆ. ಪವನ್ ನ ಸ್ಫುರದ್ರೂಪಿ ಮುಖವೇ ಸಾವಿರ ಕನಸನ್ನೂ ಹೊತ್ತು ತರುವಂತಿದೆ… ಅದರಲ್ಲೂ ಅವನ ಕಣ್ಣಲ್ಲಿರುವ ಆರಾಧನೆ ತುಟಿಯಂಚಿನಲ್ಲಿ ಇರುವ ಮುಗುಳು ನಗು ನಕ್ಕಾಗ ಕಾಣುವ ಆ ರೂಪ , ಎತ್ತರಕ್ಕೆ ತಕ್ಕ ಅವನ ಘನ ಗಾಂಭೀರ್ಯ ಪ್ರವೃತ್ತಿ,ಕೆಲಸದ ಮೇಲಿನ ಏಕಾಗ್ರತೆ, ಮಾತಿನ ಹಿಡಿತ ಇದೆಲ್ಲ ಕಂಡು ಮನಸೋಲದ ಹೃದಯವೇ ಇರಲಾರದೊ ಏನೋ!! ಯಾರನ್ನೂ ಕಂಡರು ವಿಚಲಿತನಾಗದ ಪವನ್ ನ ಮನಸ್ಸು ಆರತಿಯನ್ನು ಕಂಡು ಮನಸ್ಸು ಗರಿಗೆದರಿದ ಹಾಗೆ ಆಗಿರುವುದು ವಿಶೇಷ!! ಆರತಿಗೆ ಆ ಕ್ಷಣ ವಿಶಾಲ್ ನೆನಪು ಬಂದು ಪವನ್ ಮತ್ತು ವಿಶಾಲ್ ಇಬ್ಬರಲ್ಲಿ ಯಾರು ಹೆಚ್ಚು ಎಂದು ತೂಕ ಮಾಡಿದ್ದು ಅದರಲ್ಲಿ ವಿಶಾಲ್ ನ ಗುಣವೇ ಬೇರೆ ಪವನ್ ಇರುವಿಕೆಯೇ ಬೇರೆ… ಪವನ್ ಹೆಣ್ಣಿನ ಭಾವನೆ ಹಾಗೂ ಅವರಿಗೆ ನೀಡುವ ಗೌರವವೇ ಅವನ ಮೇಲೆ ಉತ್ಕಟ ಪ್ರೀತಿ ಬರುವಂತೆ ಮಾಡುವುದು ಸುಳ್ಳಲ್ಲ…. ಪ್ರೀತಿ ಮಾಡುವ ಎರಡು ಮನಸ್ಸು ಜೊತೆ ಸೇರಿದರೆ ಊಟ ತಿಂಡಿ ಕೂಡ ನೆನಪಿಗೆ ಬಾರದೇ ನೋಟ, ಮಾತು, ಮೌನ ಹೀಗೆ ದಿನ ಕಳೆಯುತ್ತಾರೆ…… ಶಮಿಕಾ ಎಂಬ ಕರೆದ ಧ್ವನಿ ಬಂದಾಗ ಮೂವರು ಅತ್ತ ಕಡೆ ತಿರುಗಿದರು… ಕಾಫಿ ತಿಂಡಿ ತಯಾರು ಆಯಿತು ಬೇಗ ಬನ್ನಿ ಎಂದು ರಮಣಿ ಕರೆದಾಗ ಶಮಿಕಾ ಆರತಿ ಮತ್ತು ಪವನ್ ಗೆ ಇಬ್ಬರು ಬೇಗ ಬನ್ನಿ ಎಂದು ಹೇಳಿ ಅವಳು ಮುಂದೆ ಹೋದಳು..
ಮೂವರಿಗೂ ಅಲ್ಲಿಯ ವಾತಾವರಣ ಮುದ ನೀಡುವಂತೆ ಇತ್ತು ಇವರ ಮನೆಯ ಎರಡು ಫರ್ಲಾಂಗು ದೂರದಲ್ಲಿ ಒಂದು ಸಣ್ಣ ತೊರೆ ಹರಿಯುತ್ತಿತ್ತು…. ಸ್ವಲ್ಪ ದೂರ ಹೋದರೆ ಕಾಡು ಗುಡ್ಡ ಆ ಪರಿಸರದಲ್ಲಿ ಸುತ್ತಲಿನ ದನ ಕರುಗಳು ಮೇಯುತ್ತಿತ್ತು. ಕೋಳಿ ,ನಾಯಿ ,ಬೆಕ್ಕು ,ದನ ಎಲ್ಲವೂ ಇವರ ಮನೆಯಲ್ಲಿ ಇತ್ತು.ನೆರೆ ಮನೆಯವರು ಆತ್ಮೀಯ ಸಂಬಂಧ ಹೊಂದಿದ್ದರು…. ನೆರೆ ಮನೆಯವರೇ ನಾವು ಆಸ್ಪತ್ರೆಯಲ್ಲಿ ಇರುವಾಗ ಮನೆ ದನ, ಕರು, ಕೋಳಿ ನಾಯಿ ಬೆಕ್ಕು ಸಾಕುತ್ತಿದ್ದರು ಎಂದಾಗ ಅವರ ಬಗ್ಗೆ ಪವನ್ ಗೆ ಹೆಮ್ಮೆ ಅನಿಸಿತು. ಪೇಟೆಯಲ್ಲಿ ಒಂದೇ ಕಟ್ಟಡದಲ್ಲಿ ಇದ್ದರು ಒಬ್ಬರಿಗೊಬ್ಬರು ಪರಿಚಯ ಇಲ್ಲದ ಹಾಗೆ ಇರುತ್ತಾರೆ ಆದರೆ ಈ ಹಳ್ಳಿಯ ಜನರು ಮತ್ತು ಅವರ ನಿತ್ಯ ಜೀವನವೇ ಬೇರೆ..ಅವರ ಹೊಟ್ಟೆ ತುಂಬಿಸುವುದಕ್ಕಿಂತ ತಾವು ಸಾಕಿದ ದನಕರುಗಳಿಗೆ, ನಾಯಿ ಬೆಕ್ಕು, ಹಂದಿ, ಕೋಳಿ,ಆಡು ಇವುಗಳ ಹೊಟ್ಟೆ ತುಂಬುವುದು ಮುಖ್ಯವಾಗಿರುತ್ತದೆ… ಪಟ್ಟಣದಲ್ಲಿ ಕೆಲಸದ ಧಾವಂತ , ತಮ್ಮ ಹೊಟ್ಟೆ ತುಂಬಿದ ಮೇಲೆ ಬೇರೆಯವರ ಚಿಂತೆ ಇಲ್ಲದೆ ಜನ ತಾವು ಆರಾಮವಾಗಿ ಇರುತ್ತಾರೆ . ಹಳ್ಳಿಯ ಜನ ಜೀವನವೇ ಬೇರೆ ಪೇಟೆಯ ಜನ ಜೀವನವೇ ಬೇರೆ ಎಂದು ಪವನ್ ಗೆ ಅನಿಸಿತು…
ಎಲ್ಲಾರೂ ಜೊತೆಗೆ ಹರಟುತ್ತಾ ಕಾಫಿ ತಿಂಡಿ ಸವಿದರು… ತಿಂಡಿ ತಿನ್ನುತ್ತಿರುವಾಗ ರಮಣಿ ನಾನು ಇವತ್ತು ಸ್ವಲ್ಪ ಮದ್ದು ತರಲು ಮೆಡಿಕಲ್ ಗೆ ಹೋಗುತ್ತೇನೆ ಅದು ಉಡುಪಿ ಪೇಟೆಗೆ ಹೋಗಬೇಕು ನೀವು ಇಲ್ಲಿ ಇರಿ ನಾನು ಹೋಗಿ ಬೇಗ ಬರುತ್ತೇನೆ ಎಂದಾಗ ಪವನ್ ಏನೇನು ತರಬೇಕು ಹೇಳಿ ನಾನು ಹೋಗಿ ಬೇರೆ ಏನಾದರೂ ಸಾಮಾನು ಮತ್ತು ಮದ್ದು ತರುತ್ತೇನೆ ಎಂದಾಗ ಶಮಿಕಾ ಅದಕ್ಕೆ ದನಿಗೂಡಿಸಿದಳು… ಪವನ್ ಮತ್ತು ಆರತಿ ಹೋಗಿ ಬನ್ನಿ ನಾನು ಇಲ್ಲಿ ರಮಣಿ ಅಂಟಿ ಜೊತೆ ಇರುತ್ತೇನೆ ಎಂದಾಗ ಆರತಿ ಒಬ್ಬಳು ಬಿಟ್ಟು ಎಲ್ಲರೂ ಸರಿ ಎಂದು ಒಪ್ಪಿಕೊಂಡರು…
ಹೇಗೆ ಹೋದರೆ ಪೇಟೆಗೆ ಹತ್ತಿರ ಎಂಬುದನ್ನು ರಮಣಿ ಪವನ್ ಗೆ ಹೇಳಿದಳು…ಬೇಕಾದ ಸಾಮಾನು ಮತ್ತು ಔಷಧಿಯ ಚೀಟಿ ಶಮಿಕಾ ಬರೆದಳು. ಆರತಿ ಪವನ್ ಒಟ್ಟಿಗೆ ಹೋಗುವುದಕ್ಕೆ ಮನಸ್ಸು ಒಪ್ಪಿದರೂ ಎಲ್ಲರ ಎದುರಿಗೆ ಶಮಿಕಾ ನೀನು ಹೋಗು ನಾನು ಇಲ್ಲಿ ಇರುತ್ತೇನೆ ಎಂದಳು….ಈ ಮಾತು ಪೂರ್ತಿ ಸತ್ಯವಲ್ಲ ಎಂಬುದು ಶಮಿಕಾಳಿಗೆ ಗೊತ್ತು…. ಪವನ್ ಅರೇ ಕ್ಷಣ ಏನೂ ಹೇಳಲಿಲ್ಲ.. ಅವನಿಗೆ ಆರತಿ ಬರುವುದಿಲ್ಲ ಎಂದು ಕೇಳಿ ದಿಗಿಲು ಹುಟ್ಟಿತು… ಶಮಿಕಾ ಮಾತ್ರ ಬೇಡ ಆರತಿ ನಾನು ಅಂಟಿ ಜೊತೆ ಇರುತ್ತೇನೆ ಹೊರಗೆ ಹೋದರೆ ನನಗೆ ತಲೆಭಾರ ಆಗುತ್ತದೆ ಎಂದಳು… ಪವನ್ ಮತ್ತು ಆರತಿ ಪೇಟೆಗೆ ಹೊರಟರು… ಕೆಲವೊಮ್ಮೆ ನಾವು ಎನಿಸದೇ ನಾವು ಬಯಸಿದ್ದು ನಮ್ಮ ಬಳಿ ಬರುತ್ತದೆ…. ಎಂದು ಪವನ್ ನ ಮನಸ್ಸು ಆನಂದದಿಂದ ಹಿಗ್ಗಿ ಹೋಯಿತು… ಆರತಿ ಪವನ್ ನ ಮನಸ್ಸು ಹೇಗೆ ಅವನು ಯಾವ ದೃಷ್ಟಿಯಿಂದ ನನ್ನನ್ನು ತಿಳಿದುಕೊಂಡಿದ್ದಾನೆ ಅವನ ಮನಸ್ಸು ಬರಿ ಆರಾಧನೆಯ ಅಥವಾ ಪ್ರೀತಿಸುತ್ತಾನ ಎಂಬುದು ಅರಿಯಬೇಕು ಎಂದು ಯೋಚಿಸಿದಳು…
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ