November 23, 2024
Antarala

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತು ಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ.

ಅಂತರಾಳ – ಭಾಗ 25

ಶಮಿಕಾ, ಆರತಿ ಮತ್ತು ಪವನ್ ಉಡುಪಿಗೆ ಹೋದ ಮೇಲೆ ಮನೆ ಬಿಕೋ ಎನ್ನುತ್ತಿತ್ತು. ಭವಾನಿ ಶಮಿಕಾ ಹುಟ್ಟಿದ ಮೇಲೆ ಇಲ್ಲಿತನಕ ಅವಳನ್ನು ಬಿಟ್ಟು ಇರದೇ ಇರುವುದರಿಂದ ತುಂಬಾ ಮಂಕಾಗಿ ಕುಳಿತು ಕೊಂಡಳು.

ಪದ್ಮಜಾ ಎಷ್ಟು ಸಮಾಧಾನ ಮಾಡಿದರೂ ಭವಾನಿಗೆ ತನ್ನ ಜೀವನ ಹಾಳು ಆದ ಹಾಗೆ ಶಮಿಕಾಳಿಗೆ ಆದರೆ ಎಂಬ ಚಿಂತೆ ಗಾಢವಾಗಿ ಕಾಡುತಿತ್ತು… ನಾನು ಅವಳನ್ನು ರಮಣಿ ಮನೆಗೆ ಕಳಿಸ ಬಾರದಿತ್ತು ಎಂದು ಮನಸ್ಸು ತುಂಬಾ ಪಶ್ಚಾತಾಪ ಪಟ್ಟು ಕೊಂಡಳು… ಯಾರದೋ ಕಷ್ಟಕ್ಕೆ ನಾವು ಉಪಕಾರ ಮಾಡಲು ಹೋದರೆ ನಮಗೆ ಕಷ್ಟ ಬಂದರೆ ಯಾರು ಬರುತ್ತಾರೆ ಎಂದು ಪದ್ಮಜಾ ಬಳಿ ಹೇಳಿದಳು. ಅದಕ್ಕೆ ಪದ್ಮಜಾ ಭವಾನಿ ನಿನ್ನ ಜೀವನದ ಬಗ್ಗೆಯೇ ಯೋಚನೆ ಮಾಡು. ನೀನು ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಇರುವಾಗ ನಿನಗೆ ಆಪತ್ಬಾಂಧವನಂತೆ ಶಂಕರ್ ಸಹಾಯ ಮಾಡಿಲ್ವಾ.. ಆ ವ್ಯಕ್ತಿ ಮಾಡಿದ ಸಹಾಯಕ್ಕೆ ಬೆಲೆ ಕಟ್ಟಲು ಸಾದ್ಯವೇ ಭವಾನಿ… ನೀನು ಎನಿಸಬಹುದು ಮಧ್ಯದಲ್ಲಿ ಅವನು ಬಿಟ್ಟು ಹೋದ ಎಂದು.. ಆದರೆ ಶಂಕರ್ ನ ಸ್ಥಾನದಲ್ಲಿ ನಿಂತು ಯೋಚಿಸಿದರೆ ಆ ವ್ಯಕ್ತಿ ಬೇರೆ ಏನು ಮಾಡಲು ಸಾಧ್ಯವಿತ್ತು? ಮದುವೆ ಆಗದೆ ಇದ್ದರೆ ಅಮ್ಮ, ಅಣ್ಣ, ಅಕ್ಕಂದಿರಿಗೆ ಅವನು ಏನು ಹೇಳಲು ಸಾಧ್ಯವಿದೆ.. ಪ್ರತಿಯೊಬ್ಬರೂ ಬೇರೆಯವರ ಬಗ್ಗೆ ಯೋಚನೆ ಮಾಡುವಾಗ ಬೇರೆಯವರು ಸಾಮಾಜಿಕವಾಗಿ ಜನರಿಗೆ ಪರಸ್ಪರ ಸಹಾಯ ಮಾಡಬೇಕು ಜಾತಿ ಧರ್ಮ ನೋಡಬಾರದು ಎಂದು ಉಪದೇಶ ನೀಡುತ್ತಾರೆ.. ವೈಯಕ್ತಿಕ ವಿಷಯ ಅಥವಾ ತನ್ನ ಮನೆಯ ವಿಚಾರ ಬಂದಾಗ ‌ ತನ್ನ ಜಾತಿ ಧರ್ಮ ಎಂದೇ ಯೋಚನೆ ಮಾಡುವುದು. ಅದರಲ್ಲೂ ಮದುವೆ ವಿಚಾರಕ್ಕೆ ಬಂದರೆ ತನ್ನ ಮಗ, ಮಗಳು ತನ್ನ ಜಾತಿಯ ಹೆಣ್ಣು ಗಂಡು ಮದುವೆ ಆಗಿ ಸಂಬಂಧ ಬೆಳೆಸಲು ಹಾತೊರೆಯುತ್ತಾರೆ. ಜಾತಿ ತಪ್ಪಿದರೆ ಕೊನೆಯ ಅಸ್ತ್ರವಾಗಿ ಧರ್ಮ ನಮ್ಮದೇ ಇರಬೇಕು ಎಂದು ತಾಕೀತು ಮಾಡುತ್ತಾರೆ… ನೀನು ಡೈರಿಯಲ್ಲಿ ಬರೆದದ್ದು ಓದಿದಾಗ ಶಂಕರ್ ಒಬ್ಬ ಬ್ರಾಹ್ಮಣ ಜಾತಿ ಎಂದು ತಿಳಿಯುತ್ತದೆ… ಅಂತವರು ಶೂದ್ರರಾದ ನಮ್ಮನು ಮನೆಯಲ್ಲಿ ಹೇಳಿ ಮದುವೆ ಆಗಲು ಸಾಧ್ಯವೇ….. ಬಾಯಿ ಮಾತಿನಲ್ಲಿ ನಾವೆಲ್ಲ ಒಂದು ಎಂದು ಹೇಳುವುದು ಸುಲಭ ಆದರೆ ಮನುಷ್ಯನಲ್ಲಿ ಇರುವಷ್ಟು ಮಡಿ-ಮೈಲಿಗೆ, ಆಚಾರ- ವಿಚಾರ, ಸಂಸ್ಕೃತಿ -ಸಂಸ್ಕಾರ ಭೂಮಿ ಮೇಲೆ ಇರುವ ಬೇರೆ ಯಾವ ಜೀವಿಯಲ್ಲೂ ಕಾಣುವುದಿಲ್ಲ ಭವಾನಿ… ಸಕಲ ಜೀವಿಯಲ್ಲೂ ಪರಮಾತ್ಮ ಇದ್ದಾನೆ ಎನ್ನುತ್ತಾರೆ!! ಎಲ್ಲ ಹೇಳಲು ಕೇಳಲು ಮಾತ್ರ!! ಹೇಳಿದ್ದನ್ನು ಕೇಳಿದ್ದನ್ನು ಪಾಲನೆ ಮಾಡುವವರು ಸಾವಿರದಲ್ಲಿ ಒಬ್ಬ ಸಿಗುವುದು ಕಷ್ಟಸಾಧ್ಯ…. ಆಕಸ್ಮಾತ್ ಪಾಲನೆ ಮಾಡುವವರಿಗೆ ನಮ್ಮ ಸಮಾಜ ಕೊಡುವ ಮರ್ಯಾದೆ ಎಷ್ಟು ಎಂದು ನನಗಿಂತ ನಿನಗೆ ಹೆಚ್ಚು ಗೊತ್ತಿರಬಹುದು…. ಒಂದು ಹೆಣ್ಣು ಗಂಡು ಯಾವುದೇ ರೀತಿಯ ಕಾಮಾಸಕ್ತಿ ಇಲ್ಲದೆ ಮುಕ್ತವಾಗಿ ನಾಲ್ಕು ಗೋಡೆಗಳ ಮಧ್ಯೆ ಬದುಕಿದರೂ ಅದನು ನಂಬುವ ಸ್ಥಿತಿಯಲ್ಲಿಲ್ಲ ಈ ಸಮಾಜ… ಹೆಚ್ಚು ಬೇಡ ನೀನು ಶಂಕರ್ ಒಂದೇ ಮನೆಯಲ್ಲಿ ಗಂಡ ಹೆಂಡಿರ ತರಹ ಸಂಸಾರ ನಡೆಸಿದರೂ ಯಾವುದೇ ದೈಹಿಕ ಮಿಲನದಲ್ಲಿ ಭಾಗಿ ಆಗದೆ ಪರಿಶುದ್ಧವಾದ ಜೀವನ ಮಾಡಿದ್ದೀರಿ ಎಂದು ಹೇಳಿದರೆ ಯಾರು ನಂಬುತ್ತಾರೆ? ಯಾರೂ ನಂಬುವುದಿಲ್ಲ…. ಹಾಗೆ ಇದೆ ಈ ಸಮಾಜ…. ಆದರೂ ಅಲ್ಲೊಂದು ಇಲ್ಲೊಂದು ನಕ್ಷತ್ರದಂತೆ ಇರುವ ಒಳ್ಳೆಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ ಎಂಬುದೇ ಸಂತೋಷದ ವಿಚಾರ…. ಆದರೆ ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ…. ಯಾವುದೇ ಕೆಲಸವನ್ನು ಮಾಡುವಾಗ ಅಥವಾ ಹೊರಗೆ ಹೋಗುವಾಗ ಕೆಟ್ಟದು ಎನಿಸುತ್ತಾ ಅದನು ಮಾಡದೆ ಇರಲು ಅಥವಾ ಎಲ್ಲಿಗೂ ಹೋಗದೆ ಇರಲು ಸಾಧ್ಯವೇ ಭವಾನಿ….. ನೀನು ಇನ್ನೂ ಜೀವನವೇ ಬೇಡ ಇದು ಅಂತ್ಯ ಎಂದು ಯೋಚನೆ ಮಾಡಿದ ಸಮಯದಲ್ಲೂ ಕಾನ್ವೆಂಟ್ ನ ಸನ್ಯಾಸಿನಿ ಒಬ್ಬರು ನೀನು ಮತ್ತು ನಿನ್ನ ಮಗಳಿಗೆ ಆಸರೆ ನೀಡಿ ಶಮಿಕಾ ಮತ್ತು ನಿನ್ನ ಜೀವನ ಈ ಹಂತಕ್ಕೆ ಬರುವ ಹಾಗೆ ಮಾಡಿಲ್ಲವೇ…. ಹಾಗಿದ್ದೂ ನೀನು ನಮ್ಮ ಕಷ್ಟಕ್ಕೆ ಯಾರೂ ಸಹಾಯ ಮಾಡಿದ್ದಾರೆ ಎಂದು ಹೇಳುವುದು ತಪ್ಪು ಆಗುತ್ತದೆ ಭವಾನಿ.. ಅಲ್ಲದೆ ಕಷ್ಟದಲ್ಲಿ ಇರುವವರಿಗೆ ನಾವು ಸಹಾಯ ಮಾಡದೇ ಇನ್ನೂ ಯಾರೂ ಮಾಡಲು ಸಾಧ್ಯ… ಮಂಕುತಿಮ್ಮನ ಕಗ್ಗದಲ್ಲಿ ” ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು -ಮಂಕುತಿಮ್ಮ” .ಎಂದು ಹೇಳಿದ್ದಾರೆ…. ಅಲ್ಲದೆ ಶಮಿಕಾ ಜೊತೆ ಆರತಿ ಪವನ್ ಕೂಡ ಇದ್ದಾರೆ ಅವಳು ಒಬ್ಬಳೇ ಹೋಗಿದ್ದರೆ ನಾವು ಭಯ ಪಡುವುದು ಸಹಜ…… ಪದ್ಮಜಾಳ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ಭವಾನಿ ಹೌದು ಎಂಬಂತೆ ತಲೆದೂಗಿದಳು…

ಆರತಿಯ ಮಗು ಪ್ರೀತಿ ಅಜ್ಜಿ ಅಜ್ಜಿ ಎಂದು ನಗುತ್ತಾ ಮಾತನಾಡುತ್ತಾ ಆಚೆ ಈಚೆ ಹೋಗಿ ಆಟವಾಡುತ್ತಾ ಇರುವುದರಿಂದ ಭವಾನಿಗೆ ಹೆಚ್ಚು ಶಮಿಕಾಳ ಚಿಂತೆ ಬಾರದೇ ಇರಲು ಸಾಧ್ಯ ಆಯಿತು….
ಭವಾನಿ ಮತ್ತು ಪದ್ಮಜಾ ಮೊದಲಿನ ಬಾಲ್ಯದಲ್ಲಿ ಇದ್ದ ಆತ್ಮೀಯತೆ ಆಪ್ತತೆ ಬರಲು ಈ ಸಂದರ್ಭದಲ್ಲಿ ಸಾದ್ಯವಾಯಿತು….
ಆರತಿಯ ಮಗು ಪ್ರೀತಿ ಭವಾನಿ ಗಿಂತ ಪದ್ಮಜಾಳ ಬಳಿ ತುಂಬಾ ಬೇಗನೇ ಹೊಂದಿಕೊಂಡಳು….. ರಾತ್ರಿ ಮಲಗುವಾಗ ಕೂಡ ಪದ್ದು ಅಜ್ಜಿ ಬಳಿಯೇ ಮಲಗುತ್ತೇನೆ ಎಂದು ಹೇಳಿ ಅವರ ಜೊತೆ ಮಲಗಿತು. ಪದ್ಮಜಾಳಿಗೆ ಮಗು ಹೆಚ್ಚು ತನ್ನ ಬಳಿ ಮಲಗುವುದು ಹೆಚ್ಚು ಆತ್ಮೀಯವಾಗಿ ಇರುವುದು ತನ್ನ ಹೆಣ್ತನದ ಬಯಕೆಗಳು ಜಾಗೃತಗೊಂಡಿತ್ತು…. ಅಕ್ಕನ ಮಕ್ಕಳನ್ನು ಸಾಕುವಾಗ ಇದ್ದ ಪ್ರೀತಿಗಿಂತ ಈ ಪ್ರಾಯದಲ್ಲಿ ಮಗುವಿನಲ್ಲಿ ಪ್ರೀತಿ ತೋರುವುದು ಹೆಚ್ಚು ಆಪ್ತತೆ ಅನಿಸಿತು…… ಎರಡೇ ದಿನದಲ್ಲಿ ಮಗು ಪ್ರೀತಿಯನ್ನು ಒಂದು ಕ್ಷಣವೂ ಬಿಟ್ಟು ಇರಲಾರೆ ಎನ್ನುವಷ್ಟು ಗಟ್ಟಿಯಾಗಿತ್ತು ಮಗುವಿನ ಮೇಲಿನ ಮಮತೆ…. “ಸಮುದ್ರದ ಮೇಲ್ಮೈಯಲ್ಲಿ ಎಷ್ಟೊಂದು ಅಲೆಗಳಿವೆ! ಆದರೆ ಸಮುದ್ರದ ಆಳಕ್ಕೆ ಹೋದಂತೆ ಶಾಂತತೆಯ ಅನುಭವವಾಗುತ್ತದೆ, ಸಂಬಂಧಗಳು ಹಾಗೇನೇ”ಎಂದು ಕೊಂಡಳು ಪದ್ಮಜಾ. ಭವಾನಿ ಮತ್ತು ಪದ್ಮಜಾ ತಮ್ಮ ಬಾಲ್ಯ ಯೌವ್ವನ ದ ವಿಚಾರ ಮಾತನಾಡುತ್ತಾ, ಮಗುವಿನ ಜೊತೆ ಆಡುತ್ತಾ, ಅಡುಗೆ ಮಾಡುತ್ತಾ, ಸಮಯ ಇದ್ದಾಗ ಕಾದಂಬರಿ, ವಿಮರ್ಶೆ ಓದುತ್ತಾ ಎರಡು ದಿನ ಕಳೆದುದೆ ತಿಳಿಯಲಿಲ್ಲ… ದಿನಾ ಶಮಿಕಾ ಭವಾನಿ ಜೊತೆ, ಆರತಿ ತನ್ನ ಮಗುವಿನ ಜೊತೆ ಮತ್ತು ಭವಾನಿಯಲ್ಲಿ, ಪವನ್ ಅಮ್ಮ ಪದ್ಮಜಾಳ ಜೊತೆ ಅಲ್ಲಿಯ ಆಗುಹೋಗುಗಳ ಬಗ್ಗೆ, ಇಲ್ಲಿಯ ವಿಶೇಷ ಕೇಳಲು ಫೋನ್ ಮಾಡಿ ಮಾತನಾಡುತ್ತಿದ್ದರು .ನಾಳೆ ಆದರೆ ಬರುತ್ತೇವೆ ನೋಡೋಣ …..ಖಂಡಿತಾ ಹೊರಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮೂವರೂ ಹೇಳಿದ್ದರು… ಪದ್ಮಜಾಳಿಗೆ‌ ಪವನ್ ಬಿಟ್ಟು ಅಭ್ಯಾಸ ಇತ್ತು ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದಾಗ ತರಬೇತಿಗೆ ಹೋದಾಗ ತಿಂಗಳುಗಟ್ಟಲೆ ಮನೆಗೆ ಬರಲು ಆಗುತ್ತಿರಲಿಲ್ಲ…… ಮೊದ ಮೊದಲು ಪವನ್ ನನು ಬಿಟ್ಟು ಇರಲು ಪದ್ಮಜಾಳಿಗೆ ಆಗುತ್ತಿರಲಿಲ್ಲ… ಕ್ರಮೇಣ ಅವನು ಇಲ್ಲದೆ ಕೂಡ ಇರುವುದು ರೂಢಿಯಾಯಿತು….
ಪದ್ಮಜಾ ಮಗು ಪ್ರೀತಿ ಮೇಲೆ ಮಮತೆಯಿಂದ ಅಪ್ಪಿ ಹಿಡಿದುಕೊಂಡು ಮಲಗಿ ನಾಳೆ ನಿನ್ನ ಅಮ್ಮ ಬರುತ್ತಾರೆ ಕಂದ ಎಂದಾಗ ‘ಪದ್ದು ಅಜ್ಜಿ ನಾನು ನಿನ್ನ ಜೊತೆನೆ ಇರುತ್ತೇನೆ” ಎಂದು ಪ್ರೀತಿ ಹೇಳಿದಳು. ಹಾಗೆ ಹೇಳಬಾರದು ಕಂದಾ ನಿನ್ನ ಅಪ್ಪ ಅಜ್ಜ ಅಜ್ಜಿ ನಿನ್ನನ್ನು ಎರಡು ದಿನದಿಂದ ನೋಡದೆ ನೊಂದು ಕೊಳ್ಳುತ್ತಾರೆ ಎಂದಾಗ ನನಗೆ ಅಮ್ಮ ಒಬ್ಬರು ಬಿಟ್ಟು ಬೇರೆ ಯಾರೂ ಇಲ್ಲ ಪದ್ದು ಅಜ್ಜಿ , ಅವರೆಲ್ಲ ನಮ್ಮನ್ನು ಇಬ್ಬರನ್ನೇ ಬಿಟ್ಟು ದೇವರಲ್ಲಿ ಹೋಗಿದ್ದಾರೆ ಎಂದಾಗ ಒಂದು ಕ್ಷಣ ಈ ಮಗು ಎನೂ ಹೇಳುತ್ತಿದೆ ಎಂದು ಮೌನವಾದರು. ನಂತರ ಭವಾನಿಯಲ್ಲಿ ಕೇಳಿದರು…. ಭವಾನಿ ಆರತಿ ಮತ್ತು ಮಗು ಪ್ರೀತಿ ಬಗ್ಗೆ ಹೇಳಿದಾಗ ಅವರ ಬದುಕಿನ ಏಳುಬೀಳುಗಳನ್ನು ಕೇಳಿ ತಲ್ಲಣಗೊಂಡರು.. ಮರುಕ್ಷಣ ಪವನ್ ಹೇಳಿದ್ದು ನೆನಪಿಗೆ ಬಂದು ಈ ಮಗು ಮತ್ತು ಆರತಿಯ ಬಗ್ಗೆನೇ ನನ್ನಲ್ಲಿ ಕೇಳಿರಬಹುದೇ ಎಂದು ಅವಕ್ಕಾದರು………

ಇತ್ತ ಪವನ್ ಮತ್ತು ಆರತಿ ಉಡುಪಿ ಪೇಟೆಗೆ ಎಂದು ಹೊರಟರು…. ಹೋಗಲು ಒಂದು ಗಂಟೆ ಅಲ್ಲಿ ಬೇಕಾದ ಮದ್ದು ಇತರ ವಸ್ತುಗಳನ್ನು ತೆಗೆದುಕೊಳ್ಳಲು ಮೂವತ್ತು ನಿಮಿಷ. ಹಿಂದೆ ಬರಲು ಒಂದು ಗಂಟೆ ಒಟ್ಟು ಎರಡುವರೆ ಗಂಟೆಯಲ್ಲಿ ನಾವು ಬರಬಹುದು ಎಂದು ಲೆಕ್ಕ ಹಾಕಿ ಹೋಗಿದ್ದರು… ಆದರೆ ಹಳ್ಳಿ ಒಳಗೆ ಬಂದ ಬಸ್ಸಲ್ಲಿ ಉಡುಪಿ ಎಂದು ಹೇಳಿದ ತಕ್ಷಣ ಹತ್ತಿದರು… ಸೀಟು ಖಾಲಿ ಇತ್ತು.ಪವನ್ ಜೊತೆಗೆ ಕುಳಿತು ಕೊಳ್ಳುವುದಾ ಬೇಡವಾ ಎಂದು ಆರತಿ ಯೋಚನೆ ಮಾಡುತ್ತಿರಬೇಕಾದರೆ ಪವನ್ ಒಂದು ಸೀಟಲ್ಲಿ ಕುಳಿತು ಇಲ್ಲಿ ಬನ್ನಿ ಆರತಿ ಎಂದು ಕರೆದು ಆಯಿತು ಹೋಗದಿದ್ದರೆ ಬಸ್ಸಲ್ಲಿ ಇದ್ದ ಜನ ನಮ್ಮ ಬಗ್ಗೆ ಕೆಟ್ಟ ಎನಿಸಬಹುದು ಎಂದು ಅವನ ಪಕ್ಕ ಹೋಗಿ ಕುಳಿತಳು.
ಅವಳ ಸನಿಹ ನೀಲಿ ಆಗಸದಲ್ಲಿ ಎತ್ತರೆತ್ತರಕ್ಕೆ ಹಾರುತ್ತಿರುವ ಸ್ವಚ್ಛಂದ ಪಕ್ಷಿಗಳಂತೆ ತಾವು ಎಂದು ಸಂಭ್ರಮಪಟ್ಟನು ಪವನ್…. ಆರತಿಗೆ ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಶುರುವಾಗಿತ್ತು…. ವಿಶಾಲ್ ನ ಆತ್ಮ ನನ್ನ ಸುತ್ತ ಮುತ್ತ ತಿರುಗುತ್ತಿರಬಹುದೇ ಎಂಬ ಅನುಮಾನಗಳು ಕೂಡ ಕಾಡಲು ಶುರು ಆಯಿತು…” ಕತ್ತಲಿನಲ್ಲಿ ಕೈ ಹಿಡಿದು ನಡೆಸುವವರಿಗಿಂತ ಮುಂದೆ ದೀಪ ಉರಿಸಿಡುವವರು ಉತ್ತಮರು” ಅಲ್ವೇ……

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *