January 18, 2025
Antarala

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತು ಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಶಮಿಕಾ ಉಡುಪಿಗೆ ಹೋದ ಮೇಲೆ ಭವಾನಿಗೆ ಶಮಿಕಾಳ ಬಗ್ಗೆಯೇ ಯೋಚನೆ ಬರಲಾರಂಭಿಸಿತು. ನನ್ನ ಬದುಕಿನಂತೆ ಶಮಿಕಾಳ ಬದುಕು ಆಗಬಾರದು ಎಂಬ ಆಲೋಚನೆಯಲ್ಲೇ ಮಂಕಾಗಿ ಕುಳಿತಿದ್ದ ಭವಾನಿಗೆ ಗೆಳತಿ ಪದ್ಮಜಾ ಸಮಾಧಾನ ಮಾಡಿದಳು .. ಇತ್ತ ಪವನ್ ಮತ್ತು ಆರತಿ ಉಡುಪಿಯ ಪೇಟೆಗೆ ಹೊರಟರು.. ಬಸ್ ನಲ್ಲಿ ಜೊತೆಯಲ್ಲಿ ಕುಳಿತಿದ್ದಾಗ ಆರತಿಯ ಮನಸ್ಸಿನಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿತು

ಅಂತರಾಳ – ಭಾಗ 26

ಆರತಿ ಪವನ್ ಪಕ್ಕ ಬಂದು ಕುಳಿತಾಗ ‘ಜಗತ್ತಿನ ಅತ್ಯುತ್ತಮ ಮತ್ತು ಅತಿ ಸುಂದರ ಸಂಗತಿಗಳು ನೋಡಲು ಅಥವಾ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ, ಅದು ಮನಸ್ಸಿನಿಂದ ಅನುಭವಿಸಬಹುದಷ್ಟೇ’ ಎಂದು ಕೊಂಡನು ಪವನ್. ಅವನ ಮನಸ್ಸು ಹೃದಯ ಎಲ್ಲವು ಆರತಿಯೇ ಆಗಿದ್ದಳು…. ಇಂತಹ ಸಂದರ್ಭ ಸಿಗುತ್ತದೆ ಎಂದು ಅವನು ಕನಸಲ್ಲೂ ಯೋಚಿಸಿರಲಿಲ್ಲ…. ಕೆಲವೊಮ್ಮೆ ನಮ್ಮ ಆಲೋಚನೆ,ಕೆಲಸ ,ಮನಸ್ಸು ಒಂದೇ ರೀತಿ ಇದ್ದಾಗ ಆ ಯೋಚನೆ ಪ್ರಕೃತಿಗೆ ಬೇಕಾದಾಗ ಮಾತ್ರ ಇಂತಹ ಘಟನೆ ನಡೆಯಲು ಸಾಧ್ಯ ಎಂದು ಕೊಂಡನು ಪವನ್….. ಮರುಕ್ಷಣ ಪವನ್ ಗೆ ಒಂದು ರೀತಿಯ ಭಯ ಕೂಡ ಆವರಿಸಿತ್ತು…ಕಾರಣ ತಾನು ಏನನ್ನು ಆರತಿಯಲ್ಲಿ ಹೇಳದೆ ಅವಳ ಒಪ್ಪಿಗೆ ಇಲ್ಲದೆ ಮನಸ್ಸಲ್ಲಿ ಕೂಡ ಅವಳನ್ನು ಬಯಸುವುದು ತಪ್ಪು ಎಂಬ ಕಲ್ಪನೆ ಅವನನ್ನು ಮಾನಸಿಕವಾಗಿ ಅಲುಗಾಡಿಸಿ ಬಿಟ್ಟಿತು..‌‌. ಮನಸ್ಸಿನ ಭಾವನೆ ಓಡುವ ಯೋಚನೆ ತಹಬಂದಿಗೆ ತರಲು ಪ್ರಯತ್ನಿಸಿ ಸೋತು ಹೋದ….. ಆ ಸಮಯಕ್ಕೆ ಸರಿಯಾಗಿ ಕಂಡೆಕ್ಟರ್ ಟಿಕೇಟ್ ಕೊಡಲು ಬಂದರು..‌. ದುಡ್ಡು ಕೊಟ್ಟು ಎರಡು ಉಡುಪಿ ಎಂದ ಪವನ್. ಆಗ ಕಂಡೆಕ್ಟರ್ ಓ ನೀವು ಊರಿಗೆ ಹೊಸದಾಗಿ ಬಂದಿರೋ ಹಾಗಿದೆ… ಇದು ಉಡುಪಿಗೆ ಹೋಗುವ ಮುಂಚೆ ತುಂಬಾ ಊರಿಗೆ ಹೋಗಿ ತಿರುಗಿ ತಿರುಗಿ ಹೋಗುವುದು..‌ ಈಗ ಸಮಯ 8.30 ಇದು ಎಲ್ಲ ಕಡೆ ಹೋಗಿ ಉಡುಪಿಗೆ ಬರುವಾಗ ಮದ್ಯಾಹ್ನ ಹನ್ನೆರಡು ಗಂಟೆ ಆಗುತ್ತದೆ… ನೀವು ಒಂದು ಕೆಲಸ ಮಾಡಿ ಇನ್ನೂ ಎರಡನೇ ಸ್ಟಾಫ್ ಮಲ್ಪೆ. ಅಲ್ಲಿ ಇಳಿದು ಬೇರೆ ಬಸ್ಸು ಹತ್ತಿ ಉಡುಪಿಗೆ ಹೋಗಿ ಎಂದು ಹೇಳಿ ಟಿಕೇಟ್ ಕೊಟ್ಟಾಗ ಆರತಿ ಮತ್ತು ಪವನ್ ಇಬ್ಬರು ಬೆಪ್ಪು ತಕ್ಕಡಿಗಳಂತೆ ಮುಖ ಮುಖ ನೋಡಿಕೊಂಡು ಆಯಿತು ಎಂದು ತಲೆ ಆಡಿಸಿದರು….. ಇವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮದ್ಯ ವಯಸ್ಕ ಮಹಿಳೆಯೊಬ್ಬರು ನಿಮಗೆ ಸಮಯ ಇದ್ದಾರೆ ಮಲ್ಪೆ ಬೀಚ್ ಸುತ್ತಾಡಿ ಹೋಗಿ ಮಗಾ ಎಂದು ಕಕ್ಕುಲತೆಯಿಂದ ಹೇಳಿದಾಗ ಇಬ್ಬರು ಹಿಂದೆ ತಿರುಗಿ ಆಯಿತು ಎಂದರು.. ಕಂಡೆಕ್ಟರ್ ಮಲ್ಪೆ ಇಳಿಯಿರಿ ಎಂದು ಹೇಳಿ ಬಸ್ಸು ನಿಂತಾಗ ಇಬ್ಬರು ಇಳಿದರು…‌

ಆರತಿ ಪವನ್ ನಲ್ಲಿ ಮಲ್ಪೆ ಬೀಚ್ ಗೆ ಹೋಗಿ ಮತ್ತೆ ಉಡುಪಿಗೆ ಹೋಗೋಣವೇ ಎಂದಾಗ ಪವನ್ ತಾನು ಕೇಳುವುದಾ ಬೇಡ್ವಾ ಎಂಬುದನ್ನು ಆರತಿಯೇ ಹೇಳಿದಾಗ ಯಾಕೋ ನಾನು ಮನಸ್ಸಿನಲ್ಲಿ ಯೋಚನೆ ಮಾಡಿದ್ದು ನಿಜವಾಗುತ್ತಿದೆ ಎಂದು ಕೊಂಡು ಸರಿ ಹೋಗೋಣ ಎಂದು ಇಬ್ಬರೂ ಅತ್ತ ಕಡೆ ಹೆಜ್ಜೆ ಹಾಕಿದರು…..
ಅಷ್ಟು ಬೇಗ ಪ್ರವಾಸಿಗರು ಬಂದು ಆಗಿತ್ತು…. ಒಂದು ಪ್ರಶಾಂತ ಜಾಗದಲ್ಲಿ ಇಬ್ಬರು ಸ್ವಲ್ಪ ಅಂತರ ಬಿಟ್ಟು ಕುಳಿತರು… ಇಬ್ಬರು ಸಮುದ್ರ ದ ಅಲೆಗಳನ್ನು ತದೇಕಚಿತ್ತದಿಂದ ದಿಟ್ಟಿಸಿ ನೋಡುತ್ತಿದ್ದರು ಎಂದು ಬೇರೆಯವರು ನೋಡಿದರೆ ಹೇಳಬಹುದಿತ್ತು ಆದರೆ ಇವರಿಬ್ಬರೂ ಮನಸಿನಲ್ಲಿ ದೊಡ್ಡ ಕೋಲಾಹಲವೇ ನಡೆಯುತಿತ್ತು…. ಪವನ್ ಹೇಗೆ ಹೇಳುವುದು ಏನನ್ನು ಹೇಳುವುದು ಎಂದು ಮನಸಿನಲ್ಲಿ ಲೆಕ್ಕ ಹಾಕುತ್ತಿದ್ದರೆ ಆರತಿ ಮನಸಿನಲ್ಲೇ ಕವನವನ್ನು ಗೀಚುತ್ತಿದ್ದಳು….

ಗೆಳೆಯ….
ನಾನೇನು ಮಾಡಲಿ?
ಹಕ್ಕಿಯಾಗಿದ್ದರೆ ಹಾರಿಬಂದು
ನಿನ್ನೆದೆಯ ಗೂಡು ಸೇರುತ್ತಿದ್ದೆ…..
ಗಾಳಿಯಾಗಿದ್ದರೆ ತೇಲಿಬಂದು
ನಿನ್ನೊಡಲ ಸೇರುತ್ತಿದ್ದೆ…….
ಹೂವಾಗಿದ್ದರೆ ನಿನ್ನ
ಮನೆಯಂಗಳದಿ
ಅರಳಿ ನಲಿಯುತ್ತಿದ್ದೆ……
ಆದರೆ
ಅದ್ಯಾವುದೂ ನಾನಾಗಲಿಲ್ಲ
ಹೆಣ್ಣಾಗಿ ಹುಟ್ಟಿ ….
ಮದುವೆ ಮಗು ವೆಂಬ
ಭಯ ಬಂಧನದಲ್ಲಿ ಬರಡು
ಬಂಡಾಯದೊಳಗೆ
ನಿಸ್ಸಾಹಾಯಕಳಾಗಿ
ಬಂಧಿಯಾಗಿ ಬಿಟ್ಟಿದ್ದೇನೆ……

ಇಷ್ಟು ಯೋಚಿಸಿದ ಕ್ಷಣ ಛೇ ನಾನು ಏನೇನೋ ಕಲ್ಪಿಸಿಕೊಂಡು ಸುಖಿಸುವುದು ತಪ್ಪು ಅಲ್ವಾ ನನಗೆ ಮದುವೆ ಆಗಿ ಮಗು ಇದೆ..‌. ಪವನ್ ಇನ್ನೂ ಮದುವೆ ಆಗದ ಯುವಕ..‌.ಅವನ ಆಸೆ ಆಕಾಂಕ್ಷೆ ಏನು ಇದೆಯೋ…ಅವನ ಅಮ್ಮ ಅಪ್ಪ ಸಂಸಾರ ಯಾವುದು ಗೊತ್ತಿಲ್ಲದೆ ನಾನು ಅವನನ್ನು ಮನಸ್ಸಿನಲ್ಲಿ ಪ್ರೀತಿ ಪ್ರೇಮ ಎಂದುಕೊಂಡರೆ ನನ್ನಂತಹ ಹೆಣ್ಣು ಇರಲಾರರು..‌‌ ಹುಚ್ಚು ಹುಡುಗಿ ಎಂದು ಮನಸ್ಸು ಅಂದುಕೊಂಡಿತು..‌‌ ಮರುಕ್ಷಣ ಈ ವ್ಯವಸ್ಥೆ ಬಗ್ಗೆ ಮನಸ್ಸು ದಿಕ್ಕಾರ ಕೂಗಿತು…. ಮದುವೆ ಆಗಿ ಎರಡು ತಿಂಗಳು ಮಾತ್ರ ಸಂಸಾರ ನಡೆಸಿದರೂ ಈ ಸಮಾಜದಲ್ಲಿ ನಾನು ಮದುವೆ ಆದ ಹೆಣ್ಣು… ನನ್ನಂತಹ ನೂರಾರು ಜೀವಗಳಿಗೆ ಆಸೆ,ಆಕಾಂಕ್ಷೆ ಇದೆ …….ನಾವು ಎಲ್ಲರಂತೆ ಮನುಷ್ಯ ಎಂಬುದನ್ನು ಯಾರೂ ಅರ್ಥವೇ ಮಾಡುತ್ತಿಲ್ಲ! …..ಸಮಾಜ….. ಸಮಾಜ…… ಈ ಸಮಾಜಕ್ಕೊಂದು ಧಿಕ್ಕಾರವಿರಲಿ ಎಂದು ಮನಸ್ಸು ಚೀರಿಕೊಂಡಿತು………..
ಪವನ್ ಆರತಿಯನ್ನು ಶಮಿಕಾಳ ಮನೆಯಲ್ಲಿ ನೋಡಿದ ನೆನಪು ಬಂದು…
ಮೊದಲ ನೋಟವೇ ನನ್ನ ಸೆಳೆದಿತ್ತು ನಿನ್ನೆಡೆಗೆ
ತಂದಿತು ದೇಗುಲದ ಮದನಿಕೆಯ ನೆನಪು
ನಿನ್ನ ಕಂಡಿಹ ಘಳಿಗೆ ಏನೋ ಮೃದು ಕಂಪನವು
ಕಣ್ಣ ಕಟ್ಟಿತು ನಗು ಪಲ್ಲವಿಸಿದ ಪಾರಿಜಾತದ ರೂಪು…
ಆ ಕ್ಷಣವೆ ಮನ ಹರಿಸಿರಲು ಪ್ರೀತಿ ಹೊನಲು
ಯೋಚಿಸಿದೆ ಈ ಅಭಿಸಾರಿಕೆಗೆ ಎನೂ ಹೆಸರು…

ಇಷ್ಟು ಯೋಚಿಸಿ ಪವನ್ ಗೆ ಆರತಿಯನ್ನು ನೋಡ ಬೇಕು ಎಂದು ಬಯಕೆ ಆಗಿ ತಿರುಗಿದಾಗ ಆರತಿಯ ಕಣ್ಣಿಂದ ನೀರು ಪಟ ಪಟನೆ ಕೆನ್ನೆ ಮೇಲೆ ಕೆಳಗೆ ಇಳಿಯುತ್ತಿತ್ತು…. ಪವನ್ ಗೆ ಆ ಕ್ಷಣ ಎನೂ ಹೇಳಬೇಕು ಎಂಬುದೇ ಹೊಳೆಯಲಿಲ್ಲ…..
ಆರತಿಯ ಭುಜವನ್ನು ಹಿಡಿದು ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ತಲೆ ಸವರಿದನು ಪವನ್…. ಆರತಿ ಯಾವುದೇ ಪ್ರತಿರೋಧ ತೋರಿಸದೆ ಅವನ ಮಡಿಲಲ್ಲಿ ಮಗುವಾದಳು….. ಪವನ್ ಆರತಿಯ ಮುಖವನ್ನೇ ನೋಡುತ್ತಾ ಯಾಕೆ ಕಣ್ಣೀರು ಎಂದು ಕಣ್ಣೀರು ಒರೆಸಿದ… ಆರತಿಗೆ ಎಲ್ಲವನ್ನೂ ಹೇಳಿ ಅವನಿಂದ ಉತ್ತರ ಪಡೆಯಬೇಕು ಎಂದು ಮನಸ್ಸು ಹೇಳುತ್ತಿತ್ತು… ಆದರೆ ಎನನ್ನು ಹೇಳದಾದಳು……ಅವನ ಸ್ಪರ್ಶ ನೂರು ಭರವಸೆಗಳನ್ನು ನೀಡಿದ್ದು ಮಾತ್ರವಲ್ಲದೆ ಅವನ ಸಂಗಡ ಶಾಂತಿ ನೆಮ್ಮದಿ ಇರುತ್ತದೆ ಎಂದು ಕಂಡುಕೊಂಡಳು…. ಆರತಿಗೆ ಪವನ್ ತನಗಿಂತ ಮೇಲ್ಮಟ್ಟದಲ್ಲಿ ಇದ್ದು ಯೋಚನೆ ಮಾಡುತ್ತಿದ್ದಾನೆ ಎಂದು ತಿಳಿಯಿತು….ಅವನ ಮಾತು, ನಡವಳಿಕೆ, ನಗು,ಸ್ಪರ್ಶ ಯಾವುದರಲ್ಲೂ ಆತುರ ಅಸಡ್ಡೆ ತೋರಿಕೆ ಯಾವುದು ಇರಲಿಲ್ಲ…. ಅಲ್ಲಿ ಹೂವೊಂದು ಅರಳುವಾಗ ಇದ್ದ ಪ್ರೀತಿ…. ತಾಯಿ ಹಕ್ಕಿ ಮರಿ ಹಕ್ಕಿಗೆ ಗುಟುಕು ತಿನ್ನಿಸುವಾಗ ಇದ್ದ ಕಾಳಜಿಯಂತೆ ಬಿರುಗಾಳಿ ಬೀಸುವಾಗ ತನ್ನ ಗೂಡು ಬಿದ್ದು ಮೊಟ್ಟೆ ಒಡೆಯಬಾರದು ಎಂದು ಮರದ ಸುತ್ತ ಸುತ್ತುತ ಹಾರುವ ಹಕ್ಕಿಯ ಕಾಯುವಿಕೆಯಂತೆ ಪವನ್ ತನ್ನ ಮಡಿಲಲ್ಲಿ ತಲೆಯಿಟ್ಟು ಮಲಗಿದ ಆರತಿಯ ಕೂದಲು ಸವರುತ್ತಿದನು….. ಗಂಡು ಆತುರಪಟ್ಟಷ್ಟೂ ಹೆಣ್ಣು ಆ ಗಂಡಿನ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಾಳೆ.ಆದರೆ ಗಂಡು ಸಮಾಧಾನಿಸಿದಷ್ಟು ಹೆಣ್ಣಿಗೆ ಗಂಡಿನ ಮೇಲಿನ ಗೌರವ ಆಸಕ್ತಿ ಹೆಚ್ಚು ಆಗುತ್ತದೆ ಎಂದು ಆರತಿ ಅಂದುಕೊಂಡಳು…. ಇದು ಎಲ್ಲರ ವಿಷಯದಲ್ಲೂ ಹೀಗೇ ಇರಬಹುದೇನೋ ಎಂದು ಕೊಂಡಳು….
ಆರತಿ ಅತ್ತಾಗ ಪವನ್ ಗೆ ತುಂಬಾ ಹಿಂಸೆ ಆಯಿತು ಒಂದು ಹೆಣ್ಣು ಆಳಬೇಕಾದರೆ ಅದಕ್ಕೆ ನೂರಾರು ಕಾರಣಗಳು ಇರುತ್ತದೆ…. ಗಂಡು ಮಿದುಳಿನಿಂದ ಯೋಚಿಸುತ್ತಾನೆ ಆದರೆ ಹೆಣ್ಣು ಹಾಗಲ್ಲ ಅವಳು ಹೃದಯದಿಂದ ಯೋಚಿಸುತ್ತಾಳೆ…. ಅವಳು ಎಲ್ಲ ಕಡೆಯಿಂದಲೂ ಯೋಚನೆ ಮಾಡಿ ಮನಸ್ಸು ಭಾರವಾಗಿ ಅಳು ಬಂದಿರಬಹುದು ಎಂದು ಯೋಚಿಸಲಾರದಷ್ಟೂ ದಡ್ಡನಲ್ಲ ಪವನ್……..
ಆರತಿ ಕಷ್ಟದಿಂದ ಅವನ ಮಡಿಲಿನಿಂದ ಎದ್ದು ಸರಿಯಾಗಿ ಕುಳಿತು ತುಂಬಾ ಮೆಲ್ಲಗೆ ನನಗೆ ಮದುವೆ ಆಗಿದೆ ಎಂದಳು ಅದಕ್ಕೆ ಪವನ್ ಗೊತ್ತು ಎಂದನು…. ಮಗು ಇದೆ ಎಂದಳು ಆರತಿ ಅದಕ್ಕೂ ಪವನ್ ಗೊತ್ತು ಎಂದನು….. ಮುಂದೆ ಎನೂ ಹೇಳಬೇಕು ತೋರಲಿಲ್ಲ ಆರತಿಗೆ…….

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *