
ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತು ಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಶಮಿಕಾ ಉಡುಪಿಗೆ ಹೋದ ಮೇಲೆ ಭವಾನಿಗೆ ಶಮಿಕಾಳ ಬಗ್ಗೆಯೇ ಯೋಚನೆ ಬರಲಾರಂಭಿಸಿತು. ನನ್ನ ಬದುಕಿನಂತೆ ಶಮಿಕಾಳ ಬದುಕು ಆಗಬಾರದು ಎಂಬ ಆಲೋಚನೆಯಲ್ಲೇ ಮಂಕಾಗಿ ಕುಳಿತಿದ್ದ ಭವಾನಿಗೆ ಗೆಳತಿ ಪದ್ಮಜಾ ಸಮಾಧಾನ ಮಾಡಿದಳು .. ಇತ್ತ ಪವನ್ ಮತ್ತು ಆರತಿ ಉಡುಪಿಯ ಪೇಟೆಗೆ ಹೊರಟರು.. ಬಸ್ ನಲ್ಲಿ ಜೊತೆಯಲ್ಲಿ ಕುಳಿತಿದ್ದಾಗ ಆರತಿಯ ಮನಸ್ಸಿನಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿತು.ಉಡುಪಿಗೆ ಬಸ್ ನಲ್ಲಿ ಹೊರಟ ಪವನ್ ಮತ್ತು ಆರತಿ ದಾರಿ ಮಧ್ಯೆ ಮಲ್ಪೆಯಲ್ಲಿ ಇಳಿದು ಬೀಚ್ ಗೆ ತೆರಳಿದರು .. ಬೀಚ್ ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಇಬ್ಬರ ಮನಸ್ಸಿನಲ್ಲೂಒಂದು ರೀತಿಯ ಅವಿನಾಭಾವ ಕಾಡುತ್ತಿತ್ತು ..ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುವ ಬಗ್ಗೆ ಹೇಳಿಕೊಳ್ಳದಿದ್ದರೂ ಮನಸ್ಸಿನಲ್ಲಿ ಆ ಭಾವನೆಯಿಂದ ತೊಳಲಾಡುತ್ತಿದ್ದರು. ಆರತಿಯ ಕಣ್ಣೀರು ನೋಡಿ ಅವಳನ್ನು ಪವನ್ ಹತ್ತಿರ ಸೆಳೆದು ಕಣ್ಣೀರನ್ನು ಒರೆಸಿದನು..ಆಗ ಆರತಿಗೆ ತನ್ನ ಜೀವನದ ಕಥೆ ಹೇಳಬೇಕೆಂದೆನಿಸಿ ತುಂಬಾ ಮೆಲ್ಲಗೆ ನನಗೆ ಮದುವೆ ಆಗಿದೆ, ಮಗು ಇದೆ ಎಂದಳು .ಅದಕ್ಕೆ ಪವನ್ ಅದು ಗೊತ್ತು ಎಂದನು.
ಅಂತರಾಳ – ಭಾಗ 27
ಆರತಿ ಮತ್ತು ಪವನ್ ಉಡುಪಿಗೆ ಹೋದ ಮೇಲೆ ರಮಣಿ ಮತ್ತು ಅವಳ ಗಂಡ ಹಾಗೂ ಶಮಿಕಾ ಮೂವರೇ ಉಳಿದರು…. ಶಮಿಕಾ, ಆರತಿ, ಪವನ್ ಬಂದ ಮೇಲೆ ರಮಣಿ ಗಂಡ ಸಂಜೀವ ತುಂಬಾ ಉಲ್ಲಾಸ ಉತ್ಸಾಹದಿಂದ ಇದ್ದಾರೆ ಎಂದು ರಮಣಿ ಹೇಳಿದರು ಶಮಿಕಾಳಿಗೆ ಯಾಕೋ ಏನೋ ಸರಿ ಇಲ್ಲ ಎಂದು ಅಂದುಕೊಂಡಳು… ಅಲ್ಲದೆ ಆ ವ್ಯಕ್ತಿ ಏನನ್ನೋ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಿರುವಂತೆ ಭಾಸವಾಗುತ್ತಿತ್ತು…. ಶಮಿಕಾ ಮನಃಶಾಸ್ತ್ರದ ಕುರಿತು ಓದಿರುವುದುರಿಂದ ಆ ವ್ಯಕ್ತಿ ಆ ರೀತಿ ಯೋಚನೆ ಮಾಡುತ್ತಿದ್ದಾರೆ ಎಂದು ಅವಳು ಅಂದುಕೊಂಡಳು…
ರಮಣಿ ನಾನು ಹೊಳೆ ನೀರಲ್ಲಿ ಬಟ್ಟೆಯನ್ನು ತೊಳೆದು ಬೇಗ ಬರುತ್ತೇನೆ ನೀನು ಇಲ್ಲೇ ಇರು ಶಮಿಕಾ ಎಂದು ಹೇಳಿ ಬಟ್ಟೆ ಹಿಡಿದುಕೊಂಡು ಅತ್ತ ಹೋದಳು…
ರಮಣಿ ಅತ್ತ ಹೋದ ಮೇಲೆ ಶಮಿಕಾ ಮೊಬೈಲ್ ಹಿಡಿದು ಕೊಂಡು ಸ್ವಲ್ಪ ಹಾಡು ಕೇಳೋಣ ಎಂದು ಮನಸ್ಸಲ್ಲೇ ಅಂದುಕೊಂಡಳು…… ರಮಣಿ ಹೋಗಿ ಮೂರು ನಿಮಿಷ ಆಗಿರಬಹುದು ಬಾ ಮಗ ಎಂದು ರಮಣಿಯ ಗಂಡ ಹತ್ತಿರ ಕರೆದರು… ಯಾಕೋ ಗೊತ್ತಿಲ್ಲಾ ಶಮಿಕಾಳಿಗೆ ಮನಸ್ಸು ತುಂಬಾನೇ ಕೇಡನ್ನು ಶಂಕಿಸಿತು….. ಆದರೂ ಏನೊಂದೂ ಭಾವನೆಗಳನ್ನು ಮುಖದಲ್ಲಿ ತೋರಿಸದೆ ಅವರ ಹತ್ತಿರ ಹೋಗಿ ನಿಂತಳು.. ಕುಳಿತುಕೋ ಎಂಬಂತೆ ಸನ್ನೆ ಮಾಡಿದರು.. ಅವರು ಹಾಗೆ ಹೇಳಿದಾಗ ಈ ಮೊದಲು ಶಂಕಿಸಿದ ಮನಸ್ಸು ಅವರ ಬಗ್ಗೆ ಕನಿಕರ ಮತ್ತು ಆರ್ದ್ರತೆ ಭಾವವೊಂದು ಹೊರಹೊಮ್ಮಿತು…..
ಬಹುಶಃ ಅವರ ಮಗಳು ಸ್ಪೂರ್ತಿ ಇದ್ದಿದ್ದರೆ ನನ್ನ ಹಾಗೆ ಇದ್ದಳು ಎಂದು ರಮಣಿ ಅಂಟಿ ಹೇಳಿದ್ದರು… ಅವರ ಮಗಳ ನೆನಪು ಬಂದಿರಬಹುದು ಅದಕ್ಕೆ ನನ್ನನ್ನು ಹತ್ತಿರಕ್ಕೆ ಕುಳ್ಳಿರಿಸಿಕೊಂಡಿದ್ದಾರೆ ಎಂದು ಸಮಾಧಾನ ಪಟ್ಟು ಕೊಂಡಳು ಶಮಿಕಾ…..
ಬುದ್ಧಿ ತಿಳಿಯುವ ಸಮಯದಿಂದ ಯಾರೊಬ್ಬರ ಗಂಡಸಿನ ಪಕ್ಕ ನಿಂತ , ಕುಳಿತ, ಆತ್ಮೀಯವಾಗಿ ಮಾತನಾಡಿಸಿದ ನೆನಪು ಇಲ್ಲ. ಹಾಗೂ ಮಾತನಾಡಿದ್ದೂ ಇಲ್ಲ ಎಂದೇ ಹೇಳಬೇಕು…. …. ಆತ್ಮೀಯ ಸಲುಗೆಯಿಂದ ಮಾತನಾಡಿದ್ದೆ ಇತ್ತೀಚಿಗೆ ಪರಿಚಯ ಅದ ಪವನ್ ನಲ್ಲಿ ಹಾಗಿರುವಾಗ ರಮಣಿಯ ಗಂಡ ಹತ್ತಿರ ಕುಳಿತು ಕೊಳ್ಳಲು ಹೇಳಿದಾಗ ಒಮ್ಮೆ ಮುಜುಗರ ಆದರೂ ಹತ್ತಿರ ಕುಳಿತ ಮೇಲೆ ಬಂದ ಭಾವನೆಗಳು ತುಂಬಾ ಅಪ್ತವಾಗಿತ್ತು !! ಇದು ಹೇಗೆ ಮತ್ತು ಯಾಕೆ ಬಂತು ಎಂದುಕೊಂಡಳು ಶಮಿಕಾ……….
ಅರೆಗಳಿಗೆ ನನ್ನ ಅಪ್ಪನೂ ಇದ್ದಿದ್ದರೆ ಎಂಬ ನೋವು…. ಮೆಲ್ಲನೆ ಆದರೆ ಅಷ್ಟೇ ಮೊನಚಾಗಿ…..ಶಮಿಕಾಳ ಎದೆಯನ್ನು ಮೀಟಿದ್ದು ಪಕ್ಕಾ……. ಎಲ್ಲ ಮಕ್ಕಳೂ ಅಪ್ಪ ಅಮ್ಮ ಇಬ್ಬರೂ ಇರಬೇಕು ಎಂದು ಅಂದುಕೊಳ್ಳುತ್ತಾರೆ.. ಆದರೆ ಎಲ್ಲರೂ ಅಂದುಕೊಂಡಂತೆ ಆಗುತಿದ್ದರೆ ಇಲ್ಲಿ ಯಾಕೆ ಇಷ್ಟೊಂದು ಅನಾಥ ಮಕ್ಕಳು ಇರುತ್ತಿದ್ದರು……
ಆ ಕ್ಷಣವೇ ಸಂಜೀವ ಅವರ ಕೈ ಶಮಿಕಾಳ ಬೆನ್ನನ್ನು ನೇವರಿಸಿತು…..ಆ ಸ್ಪರ್ಶ ಅವಳ ಮನಸಿನಲ್ಲಿ ಏನೋ ಒಂದು ತರಂಗವನ್ನು ಉಂಟು ಮಾಡಿತ್ತು…. ಮೊದಲೇ ಪರಿಚಯ,ಆತ್ಮೀಯತೆ,ಆಪ್ತತೆ, ಇದ್ದ ಆನಂದದ ಅನುಭವಕ್ಕೆ ಬಂತು ಶಮಿಕಾಳಿಗೆ… ಬೇರೆಯವರು ಈ ರೀತಿ ಆಗುತ್ತದೆ ಎಂದು ಹೇಳಿದ್ದರೆ ಖಂಡಿತಾ ನಂಬುತ್ತಿರಲಿಲ್ಲ… !!! ಅವಳದೇ ಅನುಭವ ಆಗಿರುವುದರಿಂದ ಈ ರೀತಿ ಆಗುತ್ತಿರುವುದು ಯಾಕೆ? ಪ್ರತಿಯೊಬ್ಬರಿಗೂ ಹೀಗೆಯೇ ಆಗುತ್ತದ ಎಂಬ ಅನುಮಾನಗಳು ಮೂಡಿತು…..ಶಮಿಕಾಳಿಗೆ….
ರಮಣಿಯ ಗಂಡ ಸಂಜೀವರಿಗೆ ಶಮಿಕಾಳನು ನೋಡಿದ ಮೇಲೆ ತನ್ನ ಮಗಳು ಸ್ಪೂರ್ತಿ ತುಂಬ ನೆನಪಿಗೆ ಬಂದು ಮನಸ್ಸು ದುಃಖದಿಂದ ಕಣ್ಣು ಮಂಜು ಮಂಜಾಯಿತು… ಯಾವುದೋ ಹೆಣ್ಣು ಮಗಳಿಗೆ ಮಾಡಿದ ಅನ್ಯಾಯದ ಫಲ ತನಗೆ ಹಿಂದೆ ತಿರುಗಿ ಬಿದ್ದು ತನ್ನ ಕರುಳ ಕುಡಿ ಬಲಿಯಾದ ಪ್ರಸಂಗ ನೆನೆದು ತನ್ನ ಬಗ್ಗೆ ತನ್ನ ದೇಹದ ಬಗ್ಗೆನೇ ಅಸಹ್ಯ ಹುಟ್ಟಿಸುತ್ತದೆ…..
ಒಂದು ಕ್ಷಣದ ಸುಖಕ್ಕಾಗಿ ಅಲ್ಲದೆ ಆ ಸುಖ ಹೇಗೆ ಇರುತ್ತದೆ ಎಂಬ ಕುತೂಹಲ, ವಯೋಸಹಜ ದೈಹಿಕ ಆಸೆ, ಕೆಟ್ಟ ಗೆಳೆಯರ ಸಹವಾಸ ಇದರಿಂದ ಏನೂ ಅರಿಯದ ಆಗ ತಾನೇ ಅರಳಲು ತಯಾರಾಗಿದ್ದ ಹೂವನ್ನು ತೆಗೆದು ಕಾಲಿನ ಅಡಿಗೆ ಹಾಕಿ ತುಳಿದ ಹಾಗೆ ಮುಗ್ಧ ಹೆಣ್ಣಿನ ಸಮಾಜ ಹೇಳುವ “ಶೀಲಾ” ನಾನು ಹರಣ ಮಾಡಿದಾಗ, ಮುಂದಿನ ಪರಿಣಾಮ ಯೋಚನೆ ಮಾಡಿರಲಿಲ್ಲ ಹಾಗೂ ಆ ರೀತಿ ಯೋಚನೆ ಮಾಡುವ ವಯಸ್ಸು ಅದು ಆಗಿರಲಿಲ್ಲ………!!!
ಹೆಣ್ಣು ಮತ್ತು ಗಂಡು ಮಕ್ಕಳಿಗೆ ಅವರ ಹದಿಹರೆಯದಲ್ಲಿ ತಮ್ಮ ದೇಹ ರಚನೆ ಬಗ್ಗೆ ಹಾಗೂ ಲೈಂಗಿಕ ಸಂಪರ್ಕದಿಂದ ಆಗುವ ಪರಿಣಾಮಗಳ ಕುರಿತು ಶಾಲೆಯಲ್ಲಿ ಅಥವಾ ಮನೆಯಲ್ಲಿ ಮಾಹಿತಿ ಸಿಗುತ್ತಿದ್ದರೆ ನಾನು ಆ ದಿನ ಅಂತಹ ಕೆಟ್ಟ ಕೆಲಸಕ್ಕೆ ಮುಂದಾಗುತ್ತಿರಲಿಲ್ಲವೋ ಏನೋ…… ನನ್ನ ಪಾಲಿನ ದುರ್ಘಟನೆ ಸಂಭವಿಸುತ್ತಿರಲಿಲ್ಲ…. “ಒಬ್ಬ ವ್ಯಕ್ತಿ ಕಲಿಯಲು ಬಯಸಿದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ…. “
ಆದರೆ ನನಗೆ ನಾನು ಮಾಡಿದ್ದು ತಪ್ಪು ಎಂದು ತಿಳಿದಿದ್ದೂ ನನ್ನ ಅರ್ಧ ವಯಸ್ಸು ದಾಟಿದ ಮೇಲೆ !!!! “ಮನುಷ್ಯ ತನ್ನ ಕೊನೆಗಾಲದಲ್ಲಿ ತಾನು ಕಂಡ ಸುಂದರ ಮುಖವನ್ನು ನೆನಪಿಸಿ ಕೊಳ್ಳಲಾರ, ಬದಲಾಗಿ ಸುಂದರ ಮನಸ್ಸುಳ್ಳ ವ್ಯಕ್ತಿಯ ಸಾಂಗತ್ಯವನ್ನು ನೆನೆಯುತ್ತಾನೆ …. ಹಾಗೂ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟು ಕೊಳ್ಳುತ್ತಾನೆ” ಇದು ನನ್ನ ಜೀವನದ ಅನುಭವದ ಮಾತು…..
ಕೆಲವೊಮ್ಮೆ ನಮಗೆ ಇಷ್ಟ ಇಲ್ಲದಿದ್ದರೂ ನಾವು ಜೊತೆಯಲ್ಲಿ ಇದ್ದವರು ಹೇಳಿದ ಹಾಗೆ ಕೇಳುತ್ತೇವೆ, ಹಾಗೂ ನಮ್ಮ ಜೊತೆ ಇದ್ದವರು ಒತ್ತಾಯ ಮಾಡಿದಾಗ ಇಷ್ಟ ಇಲ್ಲದಿದ್ದರೂ ತಿನ್ನುತ್ತೇವೆ ಆದರ ಮುಂದಿನ ಪರಿಣಾಮ ಯೋಚನೆ ಮಾಡುವುದಿಲ್ಲ.
“ಯಾವ ಜಾಗದಲ್ಲಿ ನೆರಳು ನೀಡಬೇಕು ಎಂಬುದನ್ನು ನಿರ್ಧರಿಸುವುದು ಮರವಲ್ಲ, ಬದಲಿಗೆ ಸೂರ್ಯನ ಕಿರಣಗಳು. ಹಾಗೆಯೇ ಅನೇಕ ಸಂದರ್ಭಗಳಲ್ಲಿ ನಮ್ಮ ನಡೆಯನ್ನು ನಮ್ಮ ಬದಲಿಗೆ ಪರಿಸ್ಥಿತಿಯೇ ನಿರ್ಧರಿಸುತ್ತದೆ “.… ಇದು ನಾನು ಮಾಡಿದ ತಪ್ಪಿಗಾಗಿ ಸಮರ್ಥನೆ ಖಂಡಿತಾ ಅಲ್ಲ…. ಆದರೆ ನಾನು ಮಾಡಿದ ತಪ್ಪಿನ ಅವಲೋಕನ ತಪ್ಪು ಅಲ್ಲ ಎಂದು ನನ್ನ ಭಾವನೆ……. ………….
ತಪ್ಪು ಸಣ್ಣದಾಗಿರಲಿ ದೊಡ್ಡದಾಗಿರಲಿ ತಪ್ಪು ತಪ್ಪೆ……………ಆದರೆ ಈ ತಪ್ಪಿನಲ್ಲಿ ಮನೆ, ಶಾಲೆ, ಶಿಕ್ಷಣ ವ್ಯವಸ್ಥೆ, ಸಮಾಜ, ಸರಕಾರ, ಸಂಘ ಸಂಸ್ಥೆಗಳ, ಗುರು ಹಿರಿಯರ ತಪ್ಪು ಇಲ್ವೇ ? ರೋಗ ಬಂದ ಮೇಲೆ ಮದ್ದು ತೆಗೆದುಕೊಳ್ಳುವುದಕ್ಕಿಂತ ರೋಗ ಬಾರದ ಹಾಗೆ ತಡೆಯುವುದು ಬುದ್ಧಿವಂತ ಸಮಾಜದ ಕರ್ತವ್ಯ ತಾನೇ… ಹಾಗೆಯೇ ತಪ್ಪು ನಡೆಯುವ ಮುಂಚೆ ಅಂತಹಾ ತಪ್ಪು ನಡೆಯಬಾರದು ಎಂಬ ಮುಂದಾಲೋಚನೆ ಮಾಡಿ ಆ ಬಗ್ಗೆ ತಿಳಿವು ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ ತಾನೇ!!!
ಗಂಡು ಮಕ್ಕಳ ಕುತೂಹಲ, ದೈಹಿಕ ವಾಂಛೆಗಾಗಿ ಹೆಣ್ಣು ಮಕ್ಕಳ ಬಲಿಯಾಗಬೇಕೇ?!!! ತಪ್ಪು ಯಾರೇ ಮಾಡಿರಲಿ ! ಯಾವುದೇ ತಪ್ಪು ಮಾಡಿರಲಿ ಇಲ್ಲಿಯ ಕಾನೂನು ಶಿಕ್ಷೆ ಯಿಂದ ಜನರ ಕಣ್ಣಿಂದ ಪಾರಾಗಬಹುದು!!! ಆದರೆ ಈ ಮಣ್ಣಿನ, ಈ ಭೂಮಿಯ ನೀತಿ ಒಂದು ಹೆಣ್ಣಿನ ಕಣ್ಣೀರು ಅವನಿಗೆ ಯಾವುದೇ ರೀತಿಯಲ್ಲಿ ಆದರೂ ತಟ್ಟದೆ ಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ ……..!!!
ಈ ಪ್ರಕೃತಿಯ ನಿಯಮವೇ ಹಾಗೆ…. ಏನನ್ನೂ ಅರಿಯದ ಒಂದು ಮುಗ್ಧ ಮಗು ಮೆಣಸಿನ ಕಾಯಿ ತಿಂದರೂ ಬಾಯಿ ಉರಿಯುತ್ತದೆ..,… !! ಜಗದ ನಿಯಮವೇ ಹಾಗೆ ತಪ್ಪು ತಿಳಿದು ಮಾಡು ತಿಳಿಯದೆ ಮಾಡು ಅದರ ಪರಿಣಾಮ ಮಾತ್ರ ನೀನು ಅನುಭವಿಸಿಯೇ ತೀರಬೇಕು !!!!!!!
ಒಂದು ಹೆಣ್ಣು ಅವಳ ಕಣ್ಣೀರು ಈ ಭೂಮಿ ಮೇಲೆ ಬಿದ್ದರೆ ಅದು ಎಂದಿಗೂ ವ್ಯರ್ಥ ಆಗಲಾರದು… ಅದಕ್ಕೆ ತಿಳಿದವರು ಹೇಳಿರುವುದು ಹೆಣ್ಣಿನ ಕಣ್ಣಿಂದ ಕಣ್ಣೀರು ಜಾರದ ಹಾಗೆ ಜಾಗ್ರತೆ ವಹಿಸು ಎಂದು… ಆದರೆ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ… ಹಾಗಾಗಿ ಈ ಜಗತ್ತಿನಲ್ಲಿ ಇಷ್ಟೊಂದು ಅನ್ಯಾಯಗಳು ವಿಜೃಂಭಿಸುವುದು…..
ಕೆಟ್ಟ ಘಳಿಗೆಯಲ್ಲಿ ನಾನು ಮಾಡಿದ ತಪ್ಪು ಯಾರಲ್ಲೂ ಹೇಳಲಿಲ್ಲ…..ಹೇಳುವ ಧೈರ್ಯ ಕೂಡ ಇರಲಿಲ್ಲ…. ಯಾವಾಗ ನನ್ನ ಮುದ್ದಿನ ಮಗಳು ಸ್ಪೂರ್ತಿ ಅತ್ಯಾಚಾರ ಆಗಿ ಕೊಲೆ ಆದಳೋ 23 ವರುಷದ ಹಿಂದೆ ನಾನು ನನ್ನ ಇಬ್ಬರು ಗೆಳೆಯರು ಎನಿಸಿ ಕೊಂಡವರು ಆಗ ತಾನೇ ಕಣ್ಣು ತೆರೆದು ಪ್ರಕೃತಿ ನೋಡುತ್ತಿರುವ ಗುಬ್ಬಿ ಮರಿಯನ್ನು ಗಿಡುಗ ಗಳು ಕುಕ್ಕಿ ಕುಕ್ಕಿ ತಿಂದು ಮುಗಿಸುವ ರೀತಿ ಏನು ಅರಿಯದ ಮುಗ್ಧ ಹೆಣ್ಣನ್ನು ಬಾಯಿ ಮುಚ್ಚಿ ಬಲಾತ್ಕಾರ ಮಾಡಿ ಅವಳಿಂದ ಸುಖವನ್ನು ಪಡೆದುಕೊಂಡೆವು… ನಿಸರ್ಗದಲ್ಲಿ ಒಂದು ಹೆಣ್ಣು ಒಂದು ಗಂಡು ಪರಸ್ಪರ ಮೆಚ್ಚಿ ನಿಸರ್ಗ ಕ್ರಿಯೆಯಲ್ಲಿ ತೊಡಗುವುದು ಸಹಜ. ಅದು ಅವರಿಬ್ಬರಿಗೂ ಜೀವನದ ಬೇರೆ ಯಾವುದೇ ವಸ್ತು ತಿನಿಸು ನೀಡದ ಆನಂದವನ್ನು ಅದು ನೀಡುತ್ತದೆ….. ಮಿಲನ ಕ್ರಿಯೆ ಎಂಬುದು ಜೀವ ಜಗತ್ತಿನ ಪ್ರತಿ ಜೀವಿಯೂ ಮಾಡಲು ಪ್ರಕೃತಿ ಅನುಮತಿ ನೀಡಿದೆ… ಅದು ಹೇಗೆ ಎಂಬುದು ಪ್ರತಿ ಜೀವಿಗೂ ಯಾರು ಯಾವ ಶಾಲೆಯು ನೀಡದೆ ತಿಳಿದಿದೆ ಎಂಬುದೇ ನಿಸರ್ಗ ದ ವೈಶಿಷ್ಟ್ಯ!!!!!!!! …… ನಾನು ಹೆಚ್ಚು ಶಾಲೆ ಓದಿಲ್ಲದಿದ್ದರೂ ಕಥೆ ಕಾದಂಬರಿ, ಸಾಹಿತ್ಯ, ನಾಟಕ ಇದೆಲ್ಲ ತುಂಬಾ ಆಸಕ್ತಿಯ ವಿಷಯ ಆಗಿತ್ತು…. ಹೆಣ್ಣಿನ ಬಗ್ಗೆ ಅಂತಹ ಕೆಟ್ಟ ಯೋಚನೆ ಕೂಡ ಇರಲಿಲ್ಲ… ನನ್ನ ಮನಸ್ಸಿಗೆ ಆಗೊಮ್ಮೆ ಬಂದ ವಿಚಾರವೇ ಆದರೂ ಇನ್ನೊಮ್ಮೆ ಮನಸ್ಸಿಗೆ ಬರುತ್ತಿದೆ “ಯಾವ ಜಾಗದಲ್ಲಿ ನೆರಳು ನೀಡಬೇಕು ಎಂಬುದನ್ನು ನಿರ್ಧರಿಸುವುದು ಮರವಲ್ಲ, ಬದಲಿಗೆ ಸೂರ್ಯನ ಕಿರಣಗಳು. ಹಾಗೆಯೇ ಅನೇಕ ಸಂದರ್ಭಗಳಲ್ಲಿ ನಮ್ಮ ನಡೆಯನ್ನು ನಮ್ಮ ಬದಲಿಗೆ ಪರಿಸ್ಥಿತಿಯೇ ನಿರ್ಧರಿಸುತ್ತದೆ “ ಇದು ಮಾತ್ರ ನೂರಕ್ಕೆ ನೂರು ನಿಜ!!!!!
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ