January 18, 2025
Antarala

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..ಪವನ್ ನ ಅಮ್ಮ ಪದ್ಮಜಾ ಬಳಿ ಮದುವೆ ಆಗಿ ಮಗು ಇದ್ದು ಗಂಡ ತೀರಿ ಕೊಂಡ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳುತ್ತಾನೆ. ಅಮ್ಮ ಯಾರಿಗೆ ಎಂದಾಗ ನೀವು ಮೊದಲು ಉತ್ತರ ಹೇಳಿ ಎಂದು ಹಟ ಮಾಡುತ್ತಾನೆ…ಭವಾನಿ ನೀಡಿದ ಡೈರಿ ನೆನಪಾಗಿ ಪದ್ಮಜಾ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ.. ಡೈರಿ ಶಮಿಕಾ ಓದಿದರೆ ಅಥವಾ ಬೇರೆಯವರು ಓದಿದರೆ ಅದು ಅವರ ಮುಂದಿನ ಜೀವನಕ್ಕೆ ಹಾನಿ ಆಗಬಹುದು ಎಂದು ಪವನ್ ಹೇಳುತ್ತಾನೆ. ಪದ್ಮಜಾ ಭವಾನಿ ಮನೆಗೆ ಬಂದು ಪವನ್ ಹೆಣ್ಣಿನ ವಿಚಾರ ಹೇಳಿರುವುದು ತನ್ನ ನಿರ್ಧಾರ ಎಲ್ಲವನ್ನೂ ಹೇಳುತ್ತಾಳೆ. ಅದಕ್ಕೆ ಭವಾನಿ ನೀನು ಹಟ ಮಾಡಿ ಎಡವಟ್ಟು ಮಾಡಬೇಡ. ಪವನ್ ಅವಳನ್ನೇ ಮದುವೆ ಆಗಿ ನಿನ್ನನು ಬಿಟ್ಟು ಹೋದರೆ ಅಥವಾ ಜೀವನ ಕೊನೆಗೊಳಿಸಿದರೆ ಎರಡರಿಂದಲೂ ನೀನೇ ತೊಂದರೆಗೆ ಸಿಲುಕಿ ಬಿಡುತ್ತಿ… ಹಾಗೆ ಆತುರದ ನಿರ್ಧಾರ ಮಾಡಬೇಡ ಎಂದು ಗೆಳತಿಗೆ ಬುದ್ಧಿ ಹೇಳಿ ಅವಳನ್ನು ಶಾಂತವಾಗಿ ಯೋಚನೆ ಮಾಡಲು ಹೇಳುತ್ತಾಳೆ…ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಶಮಿಕಾ ಉಡುಪಿಗೆ ಹೋದ ಮೇಲೆ ಭವಾನಿಗೆ ಶಮಿಕಾಳ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾಳೆ.. ಇತ್ತ ಪವನ್ ಮತ್ತು ಆರತಿ ಉಡುಪಿಯ ಪೇಟೆಗೆ ಹೊರಟರು.. ಬಸ್ ನಲ್ಲಿ ಜೊತೆಯಲ್ಲಿ ಕುಳಿತಿದ್ದಾಗ ಆರತಿಯ ಮನಸ್ಸಿನಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿತು.ಉಡುಪಿಗೆ ಬಸ್ ನಲ್ಲಿ ಹೊರಟ ಪವನ್ ಮತ್ತು ಆರತಿ ದಾರಿ ಮಧ್ಯೆ ಮಲ್ಪೆಯಲ್ಲಿ ಇಳಿದು ಬೀಚ್ ಗೆ ತೆರಳಿದರು .. ಬೀಚ್ ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಇಬ್ಬರ ಮನಸ್ಸಿನಲ್ಲೂ ಒಂದು ರೀತಿಯ ಅವಿನಾಭಾವ ಕಾಡುತ್ತಿತ್ತು ..ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುವ ಬಗ್ಗೆ ಹೇಳಿಕೊಳ್ಳದಿದ್ದರೂ ಮನಸ್ಸಿನಲ್ಲಿ ಆ ಭಾವನೆಯಿಂದ ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ. ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳಲು ಪ್ರಯತ್ನಿಸುತ್ತಾನೆ……

ಅಂತರಾಳ – ಭಾಗ 28

ಶಮಿಕಾಳನು ಕಂಡು ಯಾಕೋ ತನ್ನ ಮನಸ್ಸಿನ ದುಗುಡ ತಾನು 23 ವರುಷದಿಂದ ಆ ಕರಾಳ ನೆನಪಿನ ಪುಟಗಳನ್ನು ಯಾರ ಬಳಿಯೂ ತೆರೆಯದೆ ಬಚ್ಚಿಟ್ಟು ಕೊಂಡಿದ್ದೇನೆ….. ಯಾರಲ್ಲೂ ಹೇಳುವ ಧೈರ್ಯ ಇಲ್ಲ ಯಾಕೆಂದರೆ ಸಣ್ಣ ತಪ್ಪು, ಕ್ಷಮಿಸಬಹುದು ಎಂಬುದನ್ನು ಹೇಳಬಹುದು…. ಆದರೆ ಕ್ಷಮಿಸಲು ಸಾದ್ಯವಿಲ್ಲದ ಪ್ರಜ್ಞಾವಂತ ಜನ ಛೀ ಥೂ ಎಂದು ಹೇಳಿ ಸಮಾಜದಿಂದ ಬಹಿಷ್ಕಾರ ಹಾಕುವ ತಪ್ಪನ್ನು ಯಾರಲ್ಲಿ ಹೇಳುವುದು….

ಮದುವೆ ಆದ ಮೇಲೆ ರಮಣಿ ಬಳಿ ಹೇಳಬೇಕು ಎಂದು ತುಂಬಾ ಸಲ ಪ್ರಯತ್ನ ಪಟ್ಟರೂ ಅವಳು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಬೇರೆ ಹೆಣ್ಣು ಮಕ್ಕಳ ಬಳಿ ಹೇಳಿದ್ದು ಕೇಳಿ ನಾನು ಅಂತವನು ಎಂದು ಗೊತ್ತಾದರೆ ಎಲ್ಲಿ ಒಂಟಿ ಮಾಡಿ ಹೋಗುತ್ತಾಳೊ ಎಂದು ಹೇಳುವ ಧೈರ್ಯ ಮಾಡಿಲ್ಲ ……ಇತ್ತೀಚೆಗೆ ನನ್ನ ಮಗಳು ಸ್ಪೂರ್ತಿಯನ್ನು ಯಾರೋ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಮೇಲೆ ಹೇಳುವ ಜಂಘಾಬಲವೇ ಇರಲಿಲ್ಲ…

ನನಗೆ ಚೆನ್ನಾಗಿ ನೆನಪಿದೆ 22, 23 ವರುಷದ ಹಿಂದೆ ನಡೆದ ಘಟನೆ ಆದರೂ ಅಂತಹ ತಪ್ಪು ಮೊದಲು ಮಾಡಿಲ್ಲ ನಂತರವೂ ಅಂತಹ ತಪ್ಪು ಮಾಡಿಲ್ಲ ಹಾಗೂ ಇಂತಹ ತಪ್ಪು ಯಾರೂ ಕೂಡ ಮಾಡಬಾರದು!!!!! ಇಷ್ಟೆಲ್ಲಾ ವಿಚಾರಗಳು ಅವರ ಮನಸ್ಸಿನಲ್ಲಿ ಬಂದು ಪುಟ್ಟ ಘರ್ಷಣೆಯೆ ನಡೆದು ಹೋಯಿತು……

“ಶಮಿಕಾ ನಿನ್ನ ಬಳಿ ಯಾಕೋ ನನ್ನ ಅಮ್ಮನ ಭಾವನೆ ಬರುತ್ತಿದೆ….. ಮಗಳು ಅಂದರೆ ಅಪ್ಪನಿಗೆ ಅಮ್ಮ ನ ಪ್ರೀತಿ ಅಂತೆ….ಯಾವ ತುಂಟ ತಂಟೆ ಮಕ್ಕಳು ಅಮ್ಮನ ಪ್ರೀತಿಗೆ ಕರಗುತ್ತಾರೆ ಹಾಗೆ ನೀನು ನನ್ನ ಮಗಳು ಎಂಬ ಪ್ರೀತಿಯ ಜೊತೆಗೆ ಅಮ್ಮ ಎಂಬ ಭಾವನೆ ಮೂಡುತ್ತದೆ ಹಾಗಾಗಿ ನೀನು ತಾಳ್ಮೆಯಿಂದ ನಾನು ಮಾಡಿದ ತಪ್ಪು ಕೇಳಬಹುದು ಹಾಗೂ ಅದು ನನ್ನ ಆತ್ಮಕ್ಕೆ ಶಾಂತಿ ಸಿಗಬಹುದು ನನ್ನ ಸಾವು ನೆಮ್ಮದಿಯಿಂದ ಆಗಬಹುದು ಎಂಬ ಕಲ್ಪನೆಯಿಂದ ನಾನು 23 ವರುಷದ ಹಿಂದೆ ನಡೆದ ಘಟನೆ ಹೇಳುತ್ತೇನೆ ಮಗಳೇ” ಶಮಿಕಾ ಬೆಚ್ಚಿ ಬಿದ್ದು ಸಾವರಿಸಿಕೊಂಡು ಸರಿ ಹೇಳಿ ಎಂದಳು…. ಅವಳಿಗೆ ಗೊತ್ತಿಲ್ಲ ತಾನು ಇನ್ನೊಂದು ಮನಸ್ಸಿನ ಕೂಪಕ್ಕೆ ಬೀಳುತ್ತೇನೆ ಎಂದು!!!!!!!
ಸಂಬಂಧವನ್ನು ಕಣ್ಣು ಅರಿಯದಿದ್ದರೂ ಕರುಳು ಅರಿಯಿತೆ?

ಅದೇ ಕ್ಷಣದಲ್ಲಿ ಶಮಿಕಾಳ ಮೊಬೈಲ್ ರಿಂಗ್ ಆಯಿತು. ಭವಾನಿಯ ಫೋನ್.. ಒಂದು ನಿಮಿಷ ಬರುತ್ತೇನೆ ಎಂದು ಹೇಳಿ ಹೊರಗೆ ಬಂದು ಹಲೋ ಎಂದಳು ಶಮಿಕಾ. ಆಗ ಅತ್ತ ಕಡೆಯಿಂದ ಭವಾನಿ ನನಗೆ ಕೆಟ್ಟ ಸುದ್ದಿ ಕೇಳಲು ಇದೆ ಎಂಬಂತೆ ಎದೆ ಬಡಿದುಕೊಳ್ಳುತ್ತಿದೆ!!! ನೀವು ಇವತ್ತು ಬರುತ್ತೀರಾ ಎಂದು ಕೇಳಿದಳು. ಪವನ್ ಮತ್ತು ಆರತಿ ಪೇಟೆಗೆ ಔಷಧಿ ತರಲು ಹೋಗಿದ್ದಾರೆ. ಬೇಗ ಬಂದರೆ ಬರುತ್ತೇವೆ … ನೋಡೋಣ ಇವತ್ತು ಬರದಿದ್ದರೆ ನಾಳೆ ಖಂಡಿತಾ ಹೊರಡುತ್ತೇವೆ . ನಾನು ಇಲ್ಲಿ ಚೆನ್ನಾಗಿ ಇದ್ದೇನೆ ನೀವು ಏನೋ ಯೋಚನೆ ಮಾಡಿಕೊಂಡು ಇದ್ದೀರಾ‌ಬಹುದು ಹಾಗಾಗಿ ಎದೆ ಬಡಿದುಕೊಳ್ಳುತ್ತಿದೆ. ನಿಶ್ಚಿಂತೆಯಿಂದ ಇರಿ ಎಂದು ಹೇಳಿ ಆರತಿಯ ಮಗಳು ಪ್ರೀತಿ ಹಾಗೂ ಪವನ್ ನ ಅಮ್ಮನನ್ನು ಹೇಗಿದ್ದಾರೆ ಎಂದು ಕೇಳಿ ಫೋನ್ ಇಟ್ಟಳು..
ಶಮಿಕಾ ಅಮ್ಮನನ್ನು ಸಮಾಧಾನ ಮಾಡಿದ್ದಳು.. ಆದರೆ ಅವಳ ಮನಸ್ಸು ಕೂಡ ತುಂಬಾ ಚಡಪಡಿಸುತ್ತಿತ್ತು… ಯಾಕೆ ಎಂದು ತಿಳಿಯುತ್ತಿಲ್ಲ…. ಅಮ್ಮ ಮಾತನಾಡಿದ ಮೇಲೆ ಮನಸ್ಸು ಹೃದಯ ತುಂಬಾನೇ ಅಮ್ಮ ಅನುಭವಿಸಿದ ನೋವುಗಳು ಒಂದೊಂದಾಗಿ ಬರಲು ಶುರುವಾಯಿತು… ಅದೇ ಸಮಯಕ್ಕೆ ಮಲ್ಲಿಕಾ ಘಂಟಿ ಬರೆದ

” ಪ್ರಸಿದ್ಧ ಪುರುಷನ ಬೆನ್ನ ಹಿಂದೆ
ಒಬ್ಬ ಮಹಿಳೆ ಇರುತ್ತಾಳೆ
ಅದಕ್ಕೆ ಗರ್ಭಿಣಿ ಸೀತೆಯನ್ನಡವಿಗಟ್ಟಿ
ರಾಮ ಪ್ರಜಾ ಪ್ರಿಯನಾದ
ಹೆಂಡತಿಯನ್ನು ಮಾರಾಟ ಮಾಡಿ
ಹರಿಶ್ಚಂದ್ರ ಸತ್ಯವಂತನಾದ
ದ್ರೌಪತಿಯ ಸೀರೆ ಸೆಳೆಯಲು ಸಮ್ಮತಿಸಿ
ಧರಮಣ್ಣ ಧರ್ಮರಾಯನಾದ
ಹೌದು ಪ್ರಸಿದ್ಧ ಪುರುಷನ ಕಾಲಕೆಳಗೂ
ಒಬ್ಬ ಮಹಿಳೆ ಇರುತ್ತಾಳೆ”

ಎಂದು ಓದಿದ್ದು ನೆನಪಾಯಿತು ಶಮಿಕಾಳಿಗೆ..

ಶಮಿಕಾ ಪ್ರಾಯದಲ್ಲಿ ಸಣ್ಣವಳು ಆಗಿದ್ದರೂ ಕೂಡ ವಿದ್ವಾಂಸರ ಭಾಷಣ ಒಡನಾಟ ಬೇರೆ ಬೇರೆ ಧರ್ಮಗಳ ಧರ್ಮ ಗ್ರಂಥಗಳ ಓದಿನಿಂದ ವ್ಯಕ್ತಿಯ ಒಳಹೊರಗನ್ನು ತಕ್ಕ ಮಟ್ಟಿಗೆ ಅರಿಯವ ಚಾಕಚಕ್ಯತೆ ಹೊಂದಿದ್ದಳು….
ಮನುಷ್ಯ ಎಷ್ಟೇ ಓದಿರಲಿ ಸಂಪತ್ತು ಹೊಂದಿರಲಿ ಅವನ ಹುಟ್ಟು ಹೇಗೆ?ಎಲ್ಲಿ ? ಮತ್ತು ಸಾವು ಹೇಗಿರುತ್ತದೆ? ಎಂಬುದನ್ನು ತಿಳಿದುಕೊಳ್ಳಲು ಮನುಷ್ಯನಿಗೆ ಆಗಿಲ್ಲ ಎಂದರೆ ಪ್ರಕೃತಿಯನ್ನು ಅರಿಯಲು ಇನ್ನೂ ಸಾಧ್ಯವಾಗಿಲ್ಲ ಎಂದೇ ಅರ್ಥ!!!!!!

ಈ ನಿಸರ್ಗ ‌ಪ್ರತಿ ಜೀವಿಗೂ ಇಲ್ಲಿ ನಡೆಯುವ ಘಟನೆಗಳನ್ನು ಆರನೇ ಇಂದ್ರಿಯಗಳ ಮೂಲಕ ಎಚ್ಚರಿಕೆ ನೀಡುತ್ತದೆ. ಆದರೆ ಈಗ ಜಗತ್ತಿನಲ್ಲಿ ಇಷ್ಟೊಂದು ಅನ್ಯಾಯಗಳು ವಿಜೃಂಭಿಸುತ್ತಿರುವಾಗ ಪ್ರತಿ ಕ್ಷಣ ಮನುಷ್ಯ ಅದನು ನೋಡಿ, ಕೇಳಿ ಮನಸ್ಸು ತುಂಬಾನೇ ಜಡ್ಡು ಗಟ್ಟಿದೆ . ಹಾಗಾಗಿ ಮನಸ್ಸಿನಲ್ಲಿ ಆಗುವ ತಳಮಳವನ್ನು ಆಲಿಸುವ ಕೌಶಲ್ಯ ತಾಳ್ಮೆ ಜಾಣ್ಮೆ ಸಂಯಮ ಮನುಷ್ಯನಿಗೆ ಇಲ್ಲ…. ಈ ದಿನ ಆಗುವ ತಳಮಳವನ್ನು ಆಲಿಸುವ ಸ್ಥಿತಿಯಲ್ಲಿ ಶಮಿಕಾ ಇರಲಿಲ್ಲ…….

ಸಂಜೀವ ರಮಣಿಗೆ ಯಾವ ಘಟನೆಯನ್ನು ತಿಳಿಯಬಾರದು ಎಂದು ಮುಚ್ಚಿಟ್ಟಿದ್ದರೋ ಬಟ್ಟೆ ಒಗೆಯಲು ಹೋದ ರಮಣಿ ಸಾಬೂನು ಮನೆಯಲ್ಲಿ ಉಳಿದಿದೆ ಎಂದು ಮನೆಗೆ ಬಂದಾಗ ಶಮಿಕಾಳ ಬಳಿ ತನ್ನ ಗಂಡ ಏನನೋ ಹೇಳಲು ಇದೆ ಎಂದು ಹೇಳುವುದು ಕೇಳಿ ಮರೆಯಲ್ಲಿ ನಿಂತು ಕೇಳುತ್ತಿರುವುದು ಸಂಜೀವರಿಗೆ ಗೊತ್ತಿಲ್ಲ!!!

ಶಮಿಕಾ ರಮಣಿಯ ಗಂಡ ಸಂಜೀವರ ಹತ್ತಿರ ಕುಳಿತಾಗ ಇನ್ನೂ ಸ್ವಲ್ಪವೇ ಹೊತ್ತಿನಲ್ಲಿ ಅರುವ ದೀಪ ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತಿರುವ ರೀತಿಯಲ್ಲಿ ಸಂಜೀವರ ಕಣ್ಣು, ಮುಖ ಹೊಳೆಯುತ್ತಿತ್ತು……..
” ಆನಂದ ಹಂಚಿಕೊಂಡರೇ ಎರಡರಷ್ಟಾಗುತ್ತದೆ, ದುಃಖ ಹಂಚಿಕೊಂಡರೆ ಅರ್ಧ ಆಗುತ್ತದೆ” ನೀವು ಎನೂ ಹೇಳಬೇಕು ಇದ್ದೀರೋ ಅದನು ಹೇಳಿ ಎಂದು ಮೊದಲ ಬಾರಿಗೆ ಸಂಜೀವರ ಕೈಯನ್ನು ಆಪ್ತವಾಗಿ ಮನಃಪೂರ್ವಕವಾಗಿ ತನ್ನ ಕೈಗಳಿಂದ ಅಮ್ಮ ತನ್ನ ಮಗುವನ್ನು ನೇವರಿಸುವಂತೆ ಸವರಿದಳು…. ತನ್ನ ಅಮ್ಮನೇ ಹತ್ತಿರ ಕುಳಿತಂತೆ ಭಾಸವಾಗಿ ಸಂಜೀವರಿಗೆ ತನ್ನ ಬಾಲ್ಯದಲ್ಲಿ ಬೇರೆ ಮಕ್ಕಳ ಜೊತೆ ಸೇರಿ ಮಾಡಿದ ಗಲಾಟೆಯನ್ನು ಅಮ್ಮನ ಜೊತೆ ಹೇಳುವಂತೆ ಆ ದಿನ ನಡೆದ ಘಟನೆ ಹೇಳಲು ಶುರು ಮಾಡಿದರು.

“ಆಗ ನನಗೆ 20 ವರುಷ ಇರಬಹುದು ನಮ್ಮ ಮನೆಯ ಪಕ್ಕದ ಮನೆಯಲ್ಲಿ ಉತ್ತರ ಕರ್ನಾಟಕದ ಇಬ್ಬರು ಮಧ್ಯವಯಸ್ಕ ಗಂಡಸರು ಬಾಡಿಗೆಗೆ ಇದ್ದರು. ಅವರಲ್ಲಿ ದಿನಾ ಮಾತನಾಡಿಯೋ ಅಥವಾ ನಮ್ಮ ಮನೆಯ ಹತ್ತಿರ ಇರುವುದರಿಂದಲೋ ಏನೋ ಆತ್ಮೀಯತೆ ಬೆಳೆಯಿತು. ಅವರಿಬ್ಬರೂ ಮದುವೆ ಆಗಿ ಸಂಸಾರ ಇದ್ದರೂ ಹೆಂಡತಿ ಮಕ್ಕಳು ಊರಲ್ಲಿ ಇದ್ದು ಇವರಿಬ್ಬರೇ ಇಲ್ಲಿ ಉದ್ಯೋಗ ಮಾಡುತಿದ್ದರು.‌‌ ರಾತ್ರಿ ಅವರ ಜೊತೆ ಕಳೆಯುವಷ್ಟು ಆತ್ಮೀಯತೆ ಬೆಳೆಯಿತು… ಅವರಿಬ್ಬರೂ ಹೆಣ್ಣಿನ ಬಗ್ಗೆ ಲೈಂಗಿಕತೆ ಬಗ್ಗೆ ಮಾತನಾಡುವುದು ನನಗೇಕೋ ಅದನು ಗಮನವಿಟ್ಟು ಕೇಳುವುದು ಆಸಕ್ತಿಯ ವಿಷಯ ಆಗಿತ್ತು….. ನಾನು ಕಾಲೇಜು ಆಗಿ ಅಪ್ಪನ ಜೊತೆ ತೋಟದಲ್ಲಿ ಕೆಲಸ ಮಾಡುತಿದ್ದರು ಕಥೆ ಕಾದಂಬರಿ ಓದುವುದು ನನಗೆ ತುಂಬಾ ಖುಷಿಯ ವಿಚಾರ ಆಗಿತ್ತು……
ನಾನು ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಎರವಲು ಪಡೆದು ಮನೆಗೆ ತಂದು ಓದಿ ಕೊಡುತ್ತಿದ್ದೆ…‌ ಗ್ರಂಥಾಲಯದಲ್ಲಿ ಗ್ರಂಥಾಪಾಲಕಿ ಆಗಿರುವಂತಹ ಒಬ್ಬ ನನಗಿಂತ ಸಣ್ಣ ಪ್ರಾಯದ ಹೆಣ್ಣು ಕೆಲಸ ಮಾಡುತ್ತಿದ್ದಳು… ನಾನು ಗ್ರಂಥಾಲಯಕ್ಕೆ ಎರಡು ಮೂರು ದಿನಕ್ಕೆ ಒಮ್ಮೆ ಹೋಗುತ್ತಿರುವುದರಿಂದ ಆ ಮುಗ್ಧ ಮುಖದಲ್ಲಿ ನಿರ್ಮಲ ಸ್ವಚ್ಛ ನಗು… ಎನೂ ಕಪಟ ಅರಿಯದ ಕಣ್ಣು, ಹೊರಗಿನ ಪ್ರಪಂಚದ ಮೋಸ ವಂಚನೆ ಅರಿಯದೆ ಜಿಂಕೆಯ ಮರಿಯು ಸ್ವಚ್ಛಂದವಾಗಿ ತಿರುಗುತ್ತಿರುವಂತೆ ಈ ಅಮಾಯಕ ಹೆಣ್ಣು ಗ್ರಂಥಾಲಯದಲ್ಲಿ ಚುರುಕಾಗಿ ಕೆಲಸ ಮಾಡುತ್ತಿದ್ದಳು. ಅವಳನ್ನು ಅವಳ ಸರಳ ಸುಂದರ ಸೌಂದರ್ಯವನ್ನು ನೋಡಿ ನನಗೆ ಅರಿವು ಇಲ್ಲದೆ ಪ್ರೀತಿಸಲು ಪ್ರಾರಂಭ ಮಾಡಿದೆ.

” ಪ್ರೇಮ ಒಂದು ವಿಚಿತ್ರ ಆಟ,ಆ ಆಟದಲ್ಲಿ ಇಬ್ಬರು ವಿಜೇತರೇ ಆಗಿರಬೇಕು. ಇಲ್ಲದಿದ್ದರೆ ಇಬ್ಬರು ಸೋತು ಹೋದಂತೆ, ಒಬ್ಬರು ಸೋತು ಇನ್ನೊಬ್ಬರು ಗೆಲ್ಲೋ ಅವಕಾಶವಿಲ್ಲದ ಏಕೈಕ ಆಟ ಪ್ರೇಮ”

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *