November 23, 2024
Antarala
ಇಲ್ಲಿವರೆಗೆ…..
ಶಮಿಕಾಳ ಅಪ್ಪ ಯಾರು ಎಂದು ಗೊತ್ತಿಲ್ಲದೇ ಶಮಿಕಾ ತನ್ನ ತಾಯಿ ಭವಾನಿ ಮೇಲೆ ಸಂಶಯ ಬಂದು ಅವಳು ಇಲ್ಲದ ಸಮಯದಲ್ಲಿ ಡೈರಿ ತೆಗೆದು ಓದುತ್ತಾಳೆ… ಭವಾನಿ ಎಳೆಯ ವಯಸ್ಸಿನಲ್ಲೇ ಆಕಸ್ಮಿಕವಾಗಿ ಅಪ್ಪನನ್ನು ಕಳೆದುಕೊಂಡು ತನ್ನ ತಾಯಿ ಜೊತೆ ಮಾವನ ಮನೆಯಲ್ಲಿ ಇರಬೇಕಾಗುತ್ತದೆ… ಪ್ರಾಥಮಿಕ ಶಿಕ್ಷಣ ಮುಗಿಸಿ ಮುಖ್ಯೋಪಾಧ್ಯಾಯರ ಸಹಾಯದಿಂದ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ…..

ಅಂತರಾಳ  – ಭಾಗ 3

ನನಗೆ ತುಂಬಾ ಕನಸಿತ್ತು. ಕಷ್ಟ ಪಟ್ಟು ಒಂದು ವರ್ಷ ದುಡಿದು ಸಂಬಳದ ಹಣ ಉಳಿತಾಯ ಮಾಡಬೇಕು. ಸಣ್ಣ ಮನೆ ಬಾಡಿಗೆಗೆ ಪಡೆದು ಅಮ್ಮನನ್ನು ಮಾವನ ಮನೆಯಿಂದ ಕರೆ ತಂದು ನಾವಿಬ್ಬರೂ ಜೊತೆಯಲ್ಲಿಯೇ ಇರಬೇಕು. ಮಾವನ ಮನೆಯಲ್ಲಿ ಅಮ್ಮ ಜೀತದಾಳಿಗಿಂತ ಕಡೆಯಾಗಿ ಹೋಗಿದ್ದರು. ಅಮ್ಮನನ್ನು ಚೆನ್ನಾಗಿ ಆರೈಕೆ ಮಾಡಬೇಕು. ಒಳ್ಳೆಯ ಆಹಾರ ಹಣ್ಣು ನೀಡಬೇಕು ಎಂದು ದಿನಾಲು ಕನಸು ಕಾಣುತ್ತಿದ್ದೆ.ನಮ್ಮ ಗ್ರಂಥಾಲಯಕ್ಕೆ ತುಂಬಾ ಜನ ಓದುಗರು ಬರುತ್ತಿದ್ದರು. ನನ್ನನು ತುಂಬಾ ಗೌರವದಿಂದಲೇ ಕಾಣುತ್ತಿದ್ದರು. 7 ಗಂಟೆಯವರೆಗೆ ಗ್ರಂಥಾಲಯ ಇರುವುದರಿಂದ ಕೆಲವೊಂದು ಸಮಯ ಬೇಗನೇ ಕತ್ತಲಾಗುತ್ತಿತ್ತು.ಗ್ರಂಥಾಲಯದಿಂದ ಹಾಸ್ಟೆಲ್ ಗೆ 5 ರಿಂದ 10 ನಿಮಿಷದ ದೂರ ಇತ್ತು. ಆಗ ದಾರಿಯಲ್ಲಿ ಹೆಚ್ಚು ಮನೆ , ಅಂಗಡಿಗಳು ಇರಲಿಲ್ಲ. ನಾನು ಭಯದಿಂದಲೇ ಬೇಗ ಬೇಗನೇ ಹೆಜ್ಜೆ ಹಾಕಿ ಹಾಸ್ಟೆಲ್ ತಲುಪುತ್ತಿದ್ದೆ.ಕೆಲಸಕ್ಕೆ ಸೇರಿ 6 ತಿಂಗಳು ಕಳೆಯಿತು. ಮುಖ್ಯೋಪಾದ್ಯಾಯಿನಿಯವರ ಕಾಗದ ಬಂತು. “ನಿನ್ನ ಮಾವನಿಗೆ ಹೇಳಿ ಒಪ್ಪಿಸಿದ್ದೇನೆ. ನಿನ್ನ ರಿಸಲ್ಟ್ ಬಗ್ಗೆಯೂ ಹೇಳಿದ್ದೇನೆ. ಒಮ್ಮೆ ಮನೆಗೆ ಬಂದು ಅಮ್ಮನಲ್ಲಿ ಮಾವನಲ್ಲಿ ಮಾತನಾಡಿಕೊಂಡು ಹೋಗು ಎಂದು ಬರೆದಿದ್ದರು. ಹಾಗೇನೇ ಒಂದು ಶನಿವಾರ ಮನೆಗೆ ಹೊರಟೆ. ಮನೆಗೆ ಹೋಗುವಾಗ ಅತ್ತೆಗೆ, ಅಮ್ಮನಿಗೆ ಒಂದೊಂದು ಸೀರೆ, ಮಾವನ ಸಣ್ಣ ಮಗುವಿಗೆ ಬಟ್ಟೆ ಸಿಹಿ ತಿಂಡಿ ತೆಗೆದುಕೊಂಡು ಹೋಗಿದ್ದೆ.

ಅಮ್ಮ ಮೊದಲಿಗಿಂತ ಈಗ ಸ್ವಲ್ಪ ಚೆನ್ನಾಗಿದ್ದರು. ಮುಖದಲ್ಲಿ ಸಂತೋಷ ಕಾಣುತಿತ್ತು…….ಅತ್ತೆಗೂ ಖುಷಿಯಾಯಿತು.ಮಾವ ಮಾತ್ರ ರಾತ್ರಿ ಊಟಕ್ಕಿಂತ ಮುಂಚೆ ಒಂದು ಗಂಟೆ ನಿರಂತರ ಮಾತನಾಡಿದರು. “ಕೆಲಸ ಸಿಕ್ಕಿತು ಎಂದು ಜಂಬ , ಅಹಂಕಾರ ಬೇಡ, ಸಿಕ್ಕಿದವರ ಜೊತೆ ತಿರುಗಾಡಬೇಡ.ನೀನು ಏನಾದರೂ ಎಡವಟ್ಟು ಮಾಡಿಕೊಂಡರೆ ನನ್ನ ಮರ್ಯಾದೆ ಹೋಗುತ್ತದೆ. ಹೇಗೋ ನಿನ್ನ ಅಪ್ಪ ತೀರಿಕೊಂಡಿದ್ದಾನೆ. ನನಗೆ ಶಾಲೆ ಕಾಲೇಜು ಇಷ್ಟವಿರಲಿಲ್ಲ ಮನೆಯಲ್ಲಿ ಕೆಲಸವೂ ಇದೆ. ಅನ್ನವೂ ಇದೆ. ಕೆಲಸ ಮಾಡಿ ಆರಾಮವಾಗಿ ಇರಬಹುದಿತ್ತು. ನಿನ್ನ ಮುಖ್ಯೋಪಾಧ್ಯಾಯಿನಿ ನಿನ್ನ ತಲೆ ಕೆಡಿಸಿದಳು. ಕಾಲೇಜು ಕಲಿಯಲು ಹೋಗಿ ಈಗ ಅಲ್ಲೇ ಕೆಲಸ ಕೂಡ ಸಿಕ್ಕಿದೆ. ಈಗಂತೂ ನಿನ್ನನ್ನು ಕೇಳುವವರೇ ಇಲ್ಲ. ನಿನ್ನ ತಲೆಯಲ್ಲಿ ಅಲ್ಲೇ ಮನೆ ಮಾಡಿ ತಾಯಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಎನಿಸಿದ್ದರೆ ಅದನ್ನು ಬಿಟ್ಟು ಬಿಡು. ನಿಮ್ಮನ್ನು ಇಲ್ಲಿಯವರೆಗೆ ಸಾಕಿದ್ದು ನಾನು! ನಿನ್ನ ಅಮ್ಮ ಹೋದರೆ ಇಲ್ಲಿ ಗದ್ದೆ ಕೆಲಸ ಮಾಡುವವರು ಯಾರು? ಹೆಚ್ಚು ಹಾರಾಡಬೇಡ” ಇನ್ನು ಏನೇನೊ ಅಸಂಬದ್ಧ ಮಾತುಗಳನ್ನಾಡಿ ನನ್ನನ್ನು ಅಮ್ಮನನ್ನು ತೀರಿಕೊಂಡ ಅಪ್ಪನನ್ನೂ ಸೇರಿಸಿ ಹೀನಾಯವಾಗಿ ಬೈದು ಹೆಣ್ಣು ಕುಲಕ್ಕೆ ಹೆಚ್ಚು ಸ್ವಾತಂತ್ರ್ಯ ಕೊಡಬಾರದು ಎಂಬಂತೆ ಮಾತನಾಡಿದರು. ನನಗಂತೂ ಯಾಕೆ ಇಲ್ಲಿಗೆ ಬಂದೆ ಎಂದೆನಿಸಿತು. ರಾತ್ರಿಯಂತೂ ಅಮ್ಮ ನನ್ನನ್ನು ತಬ್ಬಿಕೊಂಡೆ ಮಲಗಿದರು. ಅಮ್ಮನಿಗೆ ಮಾತ್ರ ಕೇಳುವಂತೆ “ಅಮ್ಮ ನೀನು ಹೆದರಬೇಡ ಸ್ವಲ್ಪ ಸಮಯ ಸಹಿಸಿಕೊಳ್ಳಿ ನಾನು ಖಂಡಿತ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಾವು ಖುಷಿಯಾಗಿ ಇರೋಣ ಅಮ್ಮ” ಎಂದು ಸಂತೈಸಿದೆ.
ಮರುದಿನ ಸಂಜೆ ಹೊರಟೆ. ಹೀಗೆಯೇ ಕೆಲಸ ಸಾಗುತ್ತಿತ್ತು. ಗ್ರಂಥಾಲಯದ ನಿರಂತರ ಓದಿನಿಂದ ನನ್ನ ಬುದ್ಧಿ ಮಟ್ಟವು ಹೆಚ್ಚಿತು. ಕುವೆಂಪು, ಶಿವರಾಮ ಕಾರಂತ, ದ.ರಾ.ಬೇಂದ್ರೆ,ಅ.ನ.ಕೃ, ಮಾಸ್ತಿ ಇಂತಹ ಲೇಖಕರ ಕಥೆ ಕಾದಂಬರಿಗಳು, ಕವನ ಸಂಕಲನಗಳು ನನ್ನನ್ನು ಜಾಗೃತಗೊಳಿಸುತ್ತಿತ್ತು. ಕೆಲಸಕ್ಕೆ ಸೇರಿ 1
ವರ್ಷಕ್ಕೆ 5 ದಿನಗಳು ಬಾಕಿ ಇತ್ತು. ದಿನಾ ಲೆಕ್ಕ ಹಾಕುತ್ತಿದ್ದೆ. ಸಂಬಳವನ್ನು ಲೆಕ್ಕದಲ್ಲಿ ಖರ್ಚು ಮಾಡುತ್ತಿದ್ದೆ. ಆ ದಿನ ಸಂಜೆ 7 ಗಂಟೆಗೆ ಗ್ರಂಥಾಲಯದ ಬಾಗಿಲು ಹಾಕಿ 10 ಹೆಜ್ಜೆ ಇಟ್ಟಿರಬಹುದು.ಜಿಟಿ ಜಿಟಿ ಮಳೆ ಬರುತ್ತಿತ್ತು. ಯಾರೋ ಮೂರು ಜನ ಮುಸುಕುಧಾರಿಗಳು ಒಮ್ಮೆಲೇ ಬಂದು ನನ್ನನ್ನು ಎಳೆದುಕೊಂಡು ಪೊದರಿನಾಚೆ ತಂದರು. ಒಬ್ಬ ನನ್ನ ಬಾಯಿಗೆ ಬಟ್ಟೆ ತುರುಕಿದ. ನನಗೆ ಏನು ಆಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ನನ್ನನ್ನು ದೂಡಿ ಒಳ ಉಡುಪನ್ನು ಕಿತ್ತು ಹರಿದು ದೈಹಿಕ ವಾಂಛೆಯನ್ನು ಒಬ್ಬರ ನಂತರ ಒಬ್ಬರಂತೆ ತೀರಿಸಿಕೊಂಡು ಕತ್ತಲಲ್ಲಿ ಕಣ್ಮರೆಯಾದರು.ಬರೀ 5 ರಿಂದ 7 ನಿಮಿಷಗಳ ಒಳಗೆ ಇಷ್ಟೆಲ್ಲಾ ನಡೆದು ಹೋಗಿತ್ತು. ನನ್ನ ದೇಹವೆಲ್ಲಾ ಅವರ ಕೊಳಕಿನಿಂದ ವಾಸನೆ ಬರುತ್ತಿತ್ತು. ಅದಕ್ಕಿಂತ ಹೆಚ್ಚು ನನ್ನ ಮನಸ್ಸಿಗೆ ಹೇಳಲಾಗದ, ವಿವರಿಸಲಾಗದ, ತುಮುಲ, ಕೋಪ, ನೋವು, ಸೇಡು ಏನೇನೋ ಅನ್ನಿಸಿತು. ಅಲ್ಲಿಂದ ಏಳಲು ಸಾಧ್ಯವಾಗಲಿಲ್ಲ. ಒತ್ತಿ ಬರುತ್ತಿದ್ದ ದುಃಖವನ್ನು ಸಹಿಸಿಕೊಂಡು ಎದ್ದೆ. ಎದ್ದು ಎಲ್ಲೆಂದರಲ್ಲಿ ಬಿದ್ದಿದ್ದ ಉಡುಪನ್ನು ತೊಟ್ಟು , ಹರಿದ ರವಕೆಯ ಮೇಲೆ ಸೆರಗನ್ನು ಮೈ ತುಂಬಾ ಮುಚ್ಚಿಕೊಂಡು ಕುಂಟುತ್ತಾ ಹಾಸ್ಟೆಲ್ ಗೆ ಬಂದೆ. ಹಾಸ್ಟೆಲ್ ನಲ್ಲಿರುವ ಎಲ್ಲರೂ ಯಾಕೆ? ಏನಾಯಿತು? ಬಿದ್ದೀರಾ? ಕೆಸರು ಆಗಿದೆ ಎಂದು ವಿಚಾರಿಸಿದರು.
ನನಗೆ ಎಲ್ಲವನ್ನೂ ಹೇಳುವ ಧೈರ್ಯ ಸಹನೆ ಇರಲಿಲ್ಲ. ಕಾಲು ಜಾರಿ ಬಿದ್ದೆ ಎಂದಷ್ಟೇ ಹೇಳಿ ಹೋಗಿ ಮಲೀನವಾದ ವಾಸನೆ ಬರುತ್ತಿದ್ದ ನನ್ನ ದೇಹ ತೊಳೆದು, ಸ್ನಾನ ಮಾಡಿ ಬಂದು ಮಲಗಿದೆ. ಊಟ ಮಾಡಲು ಹಸಿವೆಯೇ ಹೋಗಿತ್ತು. ನನ್ನ ದೇಹ, ಮನಸ್ಸು ಮಲೀನವಾಗಿದ್ದಕ್ಕೆ ಎನೋ ಎಂಬಂತೆ ನಿದ್ರಾ ದೇವಿ ನನ್ನ ಹತ್ತಿರ ಸುಳಿಯುತ್ತಿರಲಿಲ್ಲ.ಕಣ್ಣು ಮುಚ್ಚಿದರೂ ಕಣ್ಣು ತೆರೆದರೂ ಆ ದೃಶ್ಯವೇ ಕಾಣುತ್ತಿತ್ತು….. ಎದೆಯಲ್ಲಿ ಅವ್ಯಕ್ತವಾದ ಭಯವಾಗುತ್ತಿತ್ತು …..ಯಾರಲ್ಲಿ ಹೇಳುವುದು? ……ಏನೆಂದು ಹೇಳುವುದು?…… ಇಂತಹ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು………..ಗಂಡಿನ ಬಗ್ಗೆ ಮಧುರ ಪ್ರೇಮ, ಪ್ರೀತಿ ಬಗ್ಗೆ ಇತ್ತೀಚಿಗೆ ಕಥೆ ಕಾದಂಬರಿಯಲ್ಲಿ ಓದಿ ಮನಸ್ಸು ಗರಿಗೆದರಿತ್ತು. ದೇಹ ರೋಮಾಂಚನವಾಗುತ್ತಿತ್ತು. ನರ ನಾಡಿಗಳು ನಲಿಯುತ್ತಿತ್ತು. ಆದರೆ ಇಂದು ಇದೇನಾಯ್ತು? ……ಯಾಕೆ ಹೀಗಾಯ್ತು?…… ನಾನೇನು ತಪ್ಪು ಮಾಡಿದೆ? ಜಾತಿ, ಧರ್ಮ, ದೇವರು, ಲಿಂಗ, ಶ್ರೀಮಂತ, ಬಡವ ಹೀಗೆಲ್ಲಾ ಅಸಮಾನತೆಯನ್ನು ಈ ಜನರು ಇಷ್ಟು ಪಾಲಿಸುವಾಗ ಅಸಾಯಕ ಹೆಣ್ಣೊಬ್ಬಳು ಸಿಕ್ಕಿದರೆ ಅವರ ದೈಹಿಕ ತೀಟೆಯನ್ನು ತೀರಿಸಿಕೊಳ್ಳುವರೇ? ……ಪ್ರಕೃತಿ ಎಲ್ಲರಿಗೂ ಎಲ್ಲವನ್ನೂ ನೀಡಿದೆ. ಆದರೆ ಬಲಾತ್ಕಾರವಾಗಿ ಕಬಳಿಸುವುದು ಸರಿಯೇ?…… ಗಂಡಿನ ಸುಖ ಮಾತ್ರ ಮುಖ್ಯವೇ? …….ಹೆಣ್ಣು ಅಷ್ಟೊಂದು ಅಬಲೆಯೇ?…..

ಹೆಣ್ಣು ಸರಿ ಇದ್ದರೆ ಅತ್ಯಾಚಾರ ಆಗುವುದಿಲ್ಲ ಎನ್ನುತ್ತಾರೆ…..ಅವಳ ಉಡುಪು ನೋಡಿ ಗಂಡು ಅತ್ಯಾಚಾರ ಮಾಡುವುದು ಎಂದು ಹೇಳುತ್ತಾರೆ… ನಾನು ಯಾವ ತಪ್ಪು ಮಾಡಿಲ್ಲ… ಅಶ್ಲೀಲ ಎನಿಸಿ ಕೊಳ್ಳುವ ಉಡುಪು ಧರಿಸಿಲ್ಲ…. ಹಾಗಾದರೆ ಯಾಕೆ ಹೀಗಾಯಿತು…………… ನಾನು ಈಗ ಯಾರಲ್ಲಿ ಹೇಳುವುದು?……..ಹೇಳಿದರೆ ಎಲ್ಲರೂ ನಿನ್ನದೇ ತಪ್ಪು ಎನ್ನುವರು…. ಅಷ್ಟು ಕತ್ತಲೆಗೆ ನೀನು ಒಬ್ಬಳೇ ಬರಬಾರದಿತ್ತು ಎನ್ನುವರು……. ಕೆಲವರು ಹಿಂದಿನಿಂದ ತಮಾಷೆ ಮಾಡುವರು……ಕೆಲವು ಜನರು ನನ್ನ ಮುಂದೆಯೇ ಹೀಯಾಳಿಸುವರು……ನನ್ನ ಮಾವನಿಗೆ ತಿಳಿದರೆ ನನ್ನನು ಸಾಯಿಸುವರು……..ಅಮ್ಮನ ಸ್ಥಿತಿ ಹೇಳ ತೀರದು……….
ನಾನು ಯಾರಲ್ಲೂ ಸಲುಗೆಯಿಂದ ಮಾತನಾಡಿಲ್ಲ…. ನಾನು ನನ್ನ ಕೆಲಸ ಎಂಬಂತೆ ಇರುತ್ತಿದ್ದೆ……ಆದರೆ ಮಾವ ಊರಿನವರು , ಸಮಾಜದ ಜನ ನಂಬುತ್ತಾರಾ? …….. ಹೀಗೆನೇ ಯೋಚನೆಗಳು ಬರುತ್ತಿತ್ತು.. ಬೆಳಗ್ಗಿನ ಜಾವ ಸ್ವಲ್ಪ ನಿದ್ದೆ ಬಂತು. 7 ಗಂಟೆಗೆ ಎಚ್ಚರವಾದಾಗ ಮೈಯಿಡೀ ನೋಯುತ್ತಿತ್ತು. ಜ್ವರ ಬರುತ್ತಿತ್ತು. ವಾರ್ಡನ್ ಬಂದು ಚಹಾ ಕೊಟ್ಟು ಜ್ವರದ ಮಾತ್ರೆ ಕುಡಿಸಿದರು.ಇವರಲ್ಲಿ ಹೇಳೋಣವೇ ಎಂದು ಯೋಚಿಸಿದೆ. ಏನೆಂದು ಹೇಳುವುದು? ಯಾರು ಎಂದು ಕೇಳಿದರೆ? ಮಾತೇ ಹೊರಡಲಿಲ್ಲ…..ಕೆಲಸಕ್ಕೆ ಹೋಗದೆ ದಿನವಿಡೀ ಯೋಚಿಸಿದೆ.” …..ಕೆಲಸ ಬಿಟ್ಟು ಊರಿಗೆ ಹೋಗಿ ಮಾವನ ಪೆಟ್ಟು ಬೈಗುಳನ್ನು ತಿಂದು ಬದುಕೋಣವೇ?……..ನೇಣು ಹಾಕಿಕೊಂಡು ಸಾಯುವುದ? …… ವಿಷ ಕುಡಿಯಬೇಕಾ?…… ಪತ್ರ ಬರೆದು ಸಾಯಬೇಕಾ? …….ಹಾಸ್ಟೆಲ್ ನಲ್ಲಿ ಸಾಯುವುದ/ ಗ್ರಂಥಾಲಯದಲ್ಲಿ ಸಾಯುವುದ?….. ಹಾಸ್ಟೆಲ್ ನಲ್ಲಿ ಸತ್ತರೆ ವಾರ್ಡನ್ ಗೆ ಕಷ್ಟ ಆಗುವುದಿಲ್ಲವೇ? ……ಎಲ್ಲಿ ಸತ್ತರೂ ನನಗೆ ಸಹಾಯ ಮಾಡಿದವರನ್ನು ಪೋಲಿಸರು ವಿಚಾರಿಸುತ್ತಾರೆ….ನಾನು ಸತ್ತರೂ ಜನ ಬೇರೇನೋ ಹೇಳುವರು……. ನನ್ನ ನಿಜವಾದ ಸ್ಥಿತಿ ಯಾರಿಗೆ ಅರ್ಥವಾಗುತ್ತದೆ?………………………… ಇಲ್ಲ ನಾನು ಸಾಯುವುದೇ ಇದಕ್ಕೆ ಪರಿಹಾರ………

(ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *