ಇಲ್ಲಿಯವರೆಗೆ…..
ಉಡುಪಿಯಿಂದ ರಮಣಿ ಗಂಡನಿಗೆ ಹುಶಾರ್ ಇಲ್ಲ ಎಂದು ಹೇಳಿದ್ದಕ್ಕೆ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಶಮಿಕಾ ಉಡುಪಿಗೆ ಹೋದ ಮೇಲೆ ಭವಾನಿಗೆ ಶಮಿಕಾಳ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾಳೆ.. ಇತ್ತ ಪವನ್ ಮತ್ತು ಆರತಿ ಉಡುಪಿಯ ಪೇಟೆಗೆ ಹೊರಟರು.. ಬಸ್ ನಲ್ಲಿ ಜೊತೆಯಲ್ಲಿ ಕುಳಿತಿದ್ದಾಗ ಆರತಿಯ ಮನಸ್ಸಿನಲ್ಲಿ ವಿವಿಧ ಯೋಚನೆಗಳು ಬರಲಾರಂಭಿಸಿತು.ಉಡುಪಿಗೆ ಬಸ್ ನಲ್ಲಿ ಹೊರಟ ಪವನ್ ಮತ್ತು ಆರತಿ ದಾರಿ ಮಧ್ಯೆ ಮಲ್ಪೆಯಲ್ಲಿ ಇಳಿದು ಬೀಚ್ ಗೆ ತೆರಳಿದರು .. ಬೀಚ್ ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಇಬ್ಬರ ಮನಸ್ಸಿನಲ್ಲೂ ಒಂದು ರೀತಿಯ ಅವಿನಾಭಾವ ಕಾಡುತ್ತಿತ್ತು ..ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುವ ಬಗ್ಗೆ ಹೇಳಿಕೊಳ್ಳದಿದ್ದರೂ ಮನಸ್ಸಿನಲ್ಲಿ ಆ ಭಾವನೆಯಿಂದ ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ. ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳಲು ಇಚ್ಛಿಸುತ್ತಾನೆ….. ಮರೆಯಲ್ಲಿ ನಿಂತು ರಮಣಿ ಕೇಳಿಸಿಕೊಳ್ಳುತ್ತಾ ಇರುವುದು ಅವರಿಬ್ಬರಿಗೂ ತಿಳಿದಿಲ್ಲ……ಗ್ರಂಥಾಲಯಕ್ಕೆ ಓದಲು ಹೋಗುತ್ತಿದ್ದಾಗ ಅಲ್ಲಿರುವ ಹುಡುಗಿಯಲ್ಲಿ ಪ್ರೀತಿ ಹುಟ್ಟಿತು .ಅದೆಷ್ಟೋ ಪ್ರೇಮ ಪತ್ರವನ್ನು ಅವಳಿಗಾಗಿ ಬರೆದು ಕೊಡುವ ಧೈರ್ಯ ಸಾಲದೇ ಬಿಸಾಡಿರುವುದು ಇದೆ .ಅವಳನ್ನು ನನ್ನ ಮನಸ್ಸಿನಲ್ಲೇ ಇಟ್ಟು ಪೂಜಿಸುತ್ತಾನೆ..ಆದರೆ ಆ ಪ್ರೀತಿಯ ಬಗ್ಗೆ ತನ್ನ ಅಆತ್ಮೀಯ ಗೆಳೆಯರು ಅಂದುಕೊಂಡ ಇಬ್ಬರಲ್ಲಿ ಹೇಳಿ ಅವರಿಗೆ ಅವಳನ್ನು ತೋರಿಸಿದ್ದಾನೆ .. ಅದು ಕುರಿಯನ್ನು ಕಟುಕನಿಗೆ ತೋರಿಸಿದ ಹಾಗೆ ಆಯಿತು.
ಅಂತರಾಳ – ಭಾಗ 30
ನಾನು ನನ್ನ ಆತ್ಮೀಯ ಗೆಳೆಯರು ತುಂಬಾ ಒಳ್ಳೆಯವರು ಎನಿಸಿಕೊಂಡ ಆ ಇಬ್ಬರು ಮದ್ಯ ವಯಸ್ಕರು ನನಗೆ ಸಹಾಯ ಮಾಡುತ್ತಾರೆ ಎಂದು ಎನಿಸಿ ನನ್ನ ಮನಸಿನಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟ ಪಟ್ಟೆ… ಅದೇ ನಾನು ಮಾಡಿದ ಮೊದಲ ತಪ್ಪು…. ನಾವು ಕೆಲವೊಮ್ಮೆ ಬೆಣ್ಣೆಯಂತೆ ನಯ ನಾಜೂಕು ಬಳಸಿ ಮಾತನಾಡುವವರನ್ನು ಒಳ್ಳೆಯವರು ಎಂದು ನಂಬಿ ಬಿಡುತ್ತೇವೆ… ಒರಟು ಮಾತನಾಡಿ ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಕೆಟ್ಟವರು ಎಂದು ಪಟ್ಟ ಕಟ್ಟುತ್ತೇವೆ.. ನಮ್ಮ ಜೀವನದಲ್ಲಿ ಮೊದಲ ಯಶಸ್ಸಿನ ಮೆಟ್ಟಿಲೇ ವ್ಯಕ್ತಿ ಹೇಗೆ ಎಂದು ತಿಳಿದುಕೊಳ್ಳುವುದೇ ಆಗಿರುವುದು. ಬೆಣ್ಣೆಯಂತೆ ಮಾತನಾಡುವವರ ನಾಲಿಗೆ ಮಾತ್ರ ನಯವಾಗಿದ್ದು ಮನಸ್ಸು ವಿಷವನ್ನು ತುಂಬಿಕೊಂಡಿರುತ್ತದೆ ಎಂದು ನಾನು ಮುಳುಗಿದ ಮೇಲೆ ತಿಳಿಯಿತು…“ನಮ್ಮನು ಟೀಕಿಸುವ ಸ್ನೇಹಿತರನ್ನು ನಿರ್ಲಕ್ಷಿಸಬಾರದು ಹೊಗಳುವಿಕೆಯ ಭ್ರಮಾಲೋಕದಲ್ಲಿಡುವ ಅವಕಾಶವಾದಿಗಳಿಗಿಂತ ಟೀಕಿಸುವ ಸ್ನೇಹಿತರು ಎಷ್ಟೋ ಮೇಲು”
ನಾನು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಮೇಲೆ ಅವಳು ಯಾರು ನಮಗೆ ತೋರಿಸು ಎಂದು ತುಂಬಾ ಪೀಡಿಸುತ್ತಿದ್ದರು…. ಆಗ ಕೂಡ ಇವರ ನಯ ವಂಚಕತನ ನನಗೆ ತಿಳಿಯಲಿಲ್ಲ…. ನಾನು ಪ್ರೀತಿಸುವ ಹುಡುಗಿ ನೋಡಲು ಹೇಗಿದ್ದಾಳೆ ಎಂಬ ಕಾತರದಿಂದ ಕೇಳುತ್ತಾರೆ ಎಂದು ನಾನು ಅಂದುಕೊಂಡೆ. ಒಂದು ದಿನ …ಮೊದಲು ನಾನು ಗ್ರಂಥಾಲಯಕ್ಕೆ ಹೋಗಿ ನನ್ನ ಹಿಂದೆ ಅವರಿಬ್ಬರೂ ಬರುವಂತೆ ಹೇಳಿ ಅದರಂತೆ ಬಂದರು . ಆ ದಿನ ಕೂಡ ಆಗ ತಾನೇ ಅರಳಲು ಸಿದ್ಧವಾಗಿ ನಿಂತಿರುವ ಗುಲಾಬಿ ಹೂವಿನ ಹಾಗೆ ನನ್ನನು ಕಂಡು ನಸು ನಗು ಬೀರಿದಳು…. ನನಗೇಕೋ ತುಂಬಾ ಆನಂದವಾಯಿತು…. ನನ್ನ ಗೆಳೆಯರು ನೋಡಿದರು ಇನ್ನೂ ಮದುವೆ ಆದಂತೆ ಎಂದು ಎನಿಸಿ ಮೈ ಮನ ಪುಳಕಿತವಾಯಿತು…..
ನೋಡಿದ ಮೇಲೆ ತುಂಬಾ ಚೆನ್ನಾಗಿ ಇರುವ ಹುಡುಗಿಯೇ ನಿನಗೆ ಸಿಕ್ಕಿದ್ದಾಳೆ ಎಂದಾಗ ಸ್ವರ್ಗ ಮೂರೇ ಗೇಣು ಎಂಬಷ್ಟು ಕುಶಿ ಆಯಿತು… ಆದರೆ ಅವಳನ್ನು ನೋಡಿದ ಮೇಲೆ ದಿನಾ ರಾತ್ರಿ ಅವಳನ್ನು ಹಾಗೆ ಬಳಸಿ ಕೊಳ್ಳಬೇಕು ಹೀಗೆ ಬಳಸಿಕೊಳ್ಳಬೇಕು ಎಂದು ಮಾತನಾಡುವುದು ಸರಿ ಎನಿಸಲಿಲ್ಲ…. ಒಂದು ವಸ್ತುವಿಗೆ ಹೇಳುವ ರೀತಿ ಜೀವಂತ ವ್ಯಕ್ತಿ ಬಗ್ಗೆ ಹೇಳುವುದು ಅದು ಕೂಡ ನಾನು ಮನಸ್ಸಲ್ಲಿ ಇಟ್ಟು ಪೂಜಿಸುವ ಒಬ್ಬ ಹೆಣ್ಣಿಗೆ ಹೇಳುವುದು ಈ ವ್ಯಕ್ತಿಗಳು ಸರಿ ಇಲ್ಲ ಎಂದು ಅನಿಸಿತು… ಆದರೆ ಬಿಸಿ ತುಪ್ಪ ಬಾಯಲ್ಲಿ ಇಟ್ಟು ಆಗಿತ್ತು ಉಗುಳಲು ಆಗದೆ ನುಂಗಲು ಆಗದೆ ಇರುವ ಸ್ಥಿತಿ ಆಗಿತ್ತು…. ಇಷ್ಟು ಆದರೂ ಈ ಇಬ್ಬರು ಬೇರೆ ಏನೋ ಮಾಡುತ್ತಾರೆ ಎಂದು ನಾನು ಖಂಡಿತವಾಗಿಯು ಅಂದುಕೊಂಡಿರಲಿಲ್ಲ…. ತಿಳಿದಿದ್ದರೆ ನಾನು ಮೊದಲೇ ಆ ಹುಡುಗಿ ಬಳಿ ಹೇಳಿ ಅವಳನ್ನು ಪಾರು ಮಾಡುತಿದ್ದೆ…..
ಆದರೆ ಅವರೊಂದಿಗೆ ಜಗಳ ಮಾಡಿದರೆ ಎಲ್ಲರಿಗೂ ವಿಷಯ ಗೊತ್ತಾಗಿ ರಾದ್ಧಾಂತ ಆದರೆ, ಹೃದಯದಲ್ಲಿ ಇಟ್ಟು ಪೂಜಿಸುವ ನನ್ನ ಮನದರಸಿಗೆ ತೊಂದರೆ ಆಗುತ್ತದಾ ಎಂಬ ಭಯದಿಂದಲೇ ಅವರು ಎನೂ ಹೇಳಿದರು ಸುಮ್ಮನೆ ಇದ್ದೆ…. ಸುಣ್ಣದ ನೀರನ್ನು ಹಾಲು ಎಂದು ಎನಿಸಿ ಆಗಿತ್ತು….. ಕುಡಿಯಲು ಮಾತ್ರ ಬಾಕಿ ಉಳಿದಿತ್ತು…
ಆ ದಿನ ನನಗೆ ಚೆನ್ನಾಗಿ ನೆನಪಿದೆ ನಾನು ಈ ಮಣ್ಣಲಿ ಮಣ್ಣು ಆಗುವವರೆಗೆ ಆ ಕೆಟ್ಟ ನೆನಪು ನನ್ನನ್ನು ಕಾಡುತ್ತಲೇ ಇರುತ್ತದೆ………. ಅವತ್ತು ಕೆಲಸದಿಂದ ಬೇಗ ಬಂದಿದ್ದರು…. ನನ್ನನ್ನು ಕರೆದು ಸಂಜೆ ಸ್ವಲ್ಪ ಹೊರಗೆ ಹೋಗಿ ಬರೋಣ ನೀನು ಬರಲೇಬೇಕು ಎಂದರು…. ಯಾಕೆ ಎಂದು ಕೇಳಿದೆ ಆಮೇಲೆ ನಿನಗೆ ತಿಳಿಯುತ್ತದೆ, ಆದರ ಮುಂಚೆ ಹೇಳುವುದಿಲ್ಲ…. ನಿನಗೆ ಒಮ್ಮೆ ಅದರ ಅನುಭವ ಆದರೆ ಆಮೇಲೆ ನೀನೇ ನಮ್ಮನು ಹೋಗೋಣ ಎಂದು ಹೇಳುತ್ತಿ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು… ನನಗೆ ಯಾವುದು ತಿಳಿಯಲಿಲ್ಲ….
ಅಮ್ಮನಲ್ಲಿ ನಾನು ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ ಎಂದಾಗ ಇವತ್ತು ಹೋಗಬೇಡ ಮಳೆ ಬರುವ ಹಾಗಿದೆ ಯಾಕೋ ನೀನು ಅವರ ಜೊತೆ ಹೋಗುವುದು ನನಗೆ ಇಷ್ಟವಿಲ್ಲ ಎಂದು ಬಿಟ್ಟರು…….
ಆದರೆ ನಾನು ಅವರಲ್ಲಿ ಬರುತ್ತೇನೆ ಎಂದು ಹೇಳಿದ್ದೇನೆ ಅಲ್ಲದೆ ಅವರು ನಿನಗೆ ಇವತ್ತು ಆಕಸ್ಮಿಕ ವಿಚಾರ ತಿಳಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಮನಸ್ಸು ಅವರ ಕಡೆಯೇ ಸೆಳೆಯಿತು … ಪುನಃ ಹೋಗುವುದಾ ಬೇಡವಾ ಎಂದು ಎರಡು ಕಡೆಯಿಂದ ಮನಸ್ಸು ಜಗ್ಗಿತು. ಆ ದಿನ ನಾನು ನನ್ನ ಅಮ್ಮನ ಮಾತು ಕೇಳಿದ್ದರೆ ಅದರ ಕಥೆಯೇ ಬೇರೆ ಇತ್ತು…. ನಾವು ಎನಿಸಿದ ಹಾಗೆ ನಮ್ಮ ಜೀವನ ಇರುವುದೇ ಇಲ್ಲ ಅಲ್ವಾ ಮನುಷ್ಯ ತಾನೊಂದು ಎನಿಸಿದರೆ ವಿಧಿ ಬೇರೆಯೇ ಬರೆದು ಇಟ್ಟಿರುತ್ತದೆ…..
ಅಮ್ಮನಲ್ಲಿ ಬೇಗ ಬರುತ್ತೇನೆ ನೀವು ಎನಿಸಿದ ಹಾಗೆ ಅವರು ಕೆಟ್ಟವರು ಅಲ್ಲ ಅವರು ನನ್ನನ್ನು ಹಾಳುಮಾಡಲು ಕೆಟ್ಟ ಅಭ್ಯಾಸ ಮಾಡಿಸಲು ನಾನೇನು ಸಣ್ಣ ಮಗುವಾ ನನ್ನ ಮನಸ್ಸು ನಾನು ಹೇಳಿದ ಹಾಗೆ ಕೇಳುತ್ತದೆ ವಿನಃ ಅವರು ಹೇಳಿದ ಹಾಗೆ ಅಲ್ಲ ಎಂದು ಅಮ್ಮನಲ್ಲಿ ವಾದಿಸಿ ಹೊರಟ್ಟೆ…….
ನನಗೆ ಗೊತ್ತಿರಲಿಲ್ಲ ನಾನು ಕನಸು ಮನಸ್ಸಿನಲ್ಲೂ ಯೋಚನೆ ಮಾಡದ ಹಾಗೂ ಯಾರೂ ಮಾಡಬಾರದ ಕೆಲಸ ಮಾಡಲು ಹೊರಟಿದ್ದೇನೆ ಎಂದು…. ಬಹುಶಃ ನನ್ನನ್ನು ಈ ಭೂಮಿ ಮೇಲೆ ತಂದು ತನ್ನ ರಕ್ತವನ್ನು ಹಾಲಾಗಿ ಪರಿವರ್ತಿಸಿ ತನಗೆ ನೀಡಿ ಬೆಳೆಸಿದ ಆ ಮಹಾನ್ ದೇವತೆಗೆ ತಿಳಿದಿತ್ತಾ ಏನೋ ನನ್ನಂತೆ ಇರುವ ಇನ್ನೊಂದು ಹೆಣ್ಣು ಜೀವಕ್ಕೆ ಕೊಡಲಿ ಪೆಟ್ಟು ನೀಡಲು ತೆರಳುತ್ತಿದ್ದ ದುಷ್ಟರು ಇವರು ಇವರ ಜೊತೆ ನನ್ನ ಮಗ ಸೇರಬಾರದು ಎಂದು!!!!!!
ಆದರೆ ಹೆಣ್ಣು ಆಗಲಿ ಗಂಡು ಆಗಲಿ ಸ್ವಲ್ಪ ಬುದ್ಧಿ ದೇಹ ಬೆಳೆದ ಮೇಲೆ ತಾನೇ ತನ್ನ ರಕ್ತ ಮಾಂಸ ನೀಡಿ ಭೂಮಿಗೆ ತಂದ ಅಮ್ಮನ ಮಾತು ಯಾರಿಗೆ ಸಹ್ಯ ವಾಗುತ್ತದೆ!!!!!!!
ನಾನು ಅಮ್ಮನ ಮಾತು ಕೇಳದೆ ಬೇಗ ಬರುತ್ತೇನೆ ಎಂದು ಹೇಳಿ ಅವರ ಜೊತೆ ಹೊರಟೆ ಅವರು ನೇರ ಅಲ್ಕೋಹಾಲ್ ಅಂಗಡಿಗೆ ಹೋಗಿ ಕುಡಿಯಲು ಕುಳಿತರು… ನಾನು ಇಲ್ಲಿ ಬರುವುದಿಲ್ಲ ನಾನು ಕುಡಿಯುವುದಿಲ್ಲ ಎಂದಾಗ ನೀನು ಸುಮ್ಮನೆ ಕೂತರೆ ಸಾಕು ಎಂದರು…. ಕೆಲವರು ಜೋರಾಗಿ ಕೆಲವರು ತುಂಬಾ ಸಣ್ಣದಾಗಿ ಮಾತನಾಡುತ್ತಿದ್ದರು…..ಹೊಟೇಲ್ ಒಳಗಡೆ ಮಬ್ಬು ಕತ್ತಲಿನಲ್ಲಿ ಅವರು ಕುಡಿಯುತ್ತಾ ಇರುವುದು ಯಾಕೆ ಎಂದು ತಿಳಿಯಲಿಲ್ಲ….. ಅಕ್ಕ ಪಕ್ಕದ ಮನೆಯವರು ಯಾರಾದರೂ ನೋಡಿ ಅಮ್ಮ ಅಪ್ಪನ ಬಳಿ ಹೇಳಿದರೆ ಎಂದು ತುಂಬಾ ಭಯವಾಯಿತು….. ಮೈಯೆಲ್ಲಾ ಬೆವರಿತ್ತು…. ಅಮ್ಮ ಹೇಳಿದ್ದು ಕೇಳಬೇಕಿತ್ತು ಎಂದು ಈಗ ಅನಿಸುತ್ತಿತ್ತು…. ಮುದುಡಿ ಕುಳಿತಿರುವಾಗ ವೈಟರ್ ನನಗೆ ತಂಪು ಪಾನೀಯ ಎಂದು ತಂದುಕೊಟ್ಟ… ಇದು ನಾವು ಕುಡಿಯುವುದು ಅಲ್ಲ ನಿನ್ನದು ತಂಪು ಪಾನೀಯ ಕುಡಿ ಎಂದಾಗ ಸರಿ ಎಂದು ಒಂದೇ ಗುಟುಕಿಗೆ ಎಲ್ಲಾ ಕುಡಿದು ಬಿಟ್ಟೆ…… …….. …. ಕುಡಿದು ಏಳು ಎಂಟು ನಿಮಿಷ ಅದ ಮೇಲೆ ತಲೆ ಧಿಮು ಅನ್ನಲು ಶುರು ಆಯಿತು…. ಇವರಿಬ್ಬರೂ ಮುಖ ಮುಖ ನೋಡಿಕೊಂಡು ನಕ್ಕರು ತಲೆ, ಮನಸ್ಸು ನನ್ನ ಸೀಮಿತದಲ್ಲಿ ಇರಲಿಲ್ಲ…. ಅವರಿಬ್ಬರೂ ದುಡ್ಡು ಕೊಟ್ಟು ನನ್ನನ್ನು ಭುಜಕ್ಕೆ ಭುಜ ಹಿಡಿದು ಅಲ್ಲಿಂದ ಹೊರಟರು… ಯಾಕೋ ತಲೆ ಗಿರಗಿರನೇ ತಿರುಗಿದಂತೆ ಆಗುತಿತ್ತು……..ಮುಖ ಮುಖ ಕಾಣದಷ್ಟು ಕತ್ತಲು ಆವರಿಸಿತ್ತು…. ಮಳೆ ಹನಿ ಹನಿ ಬೀಳುತಿತ್ತು…. ಮೋಡದಿಂದ ತುಂಬಾ ಕತ್ತಲು ಇದ್ದ ಹಾಗೆ ಆಗುತಿತ್ತು…. ಸ್ವಲ್ಪ ಹೆಚ್ಚು ಪೊದರು ಇರುವ ಕಡೆ ಬಂದು ಮರೆಯಲ್ಲಿ ನಿಂತುಕೊಂಡರು….ಆಗ ದೂರದಿಂದ ಯಾರೋ ಬರುವ ಹಾಗೆ ಕಂಡಿತು…. ಆಗ ಇವರಿಬ್ಬರೂ ನೀನು ನಾವು ಹೇಳಿದಂತೆ ಕೇಳಬೇಕು ಇಲ್ಲದಿದ್ದರೆ ನೀನು ಪ್ರೀತಿಸುವ ಹುಡುಗಿಯ ಜೀವ ತೆಗೆಯಲು ನಾವು ಹೇಸಲ್ಲ ಎಂದರು…. ನನಗೆ ಎಲ್ಲಾ ಅಯೋಮಯ ಸ್ಥಿತಿ ಆಗಿತ್ತು…. ಕಣ್ಣು ತಲೆ ದೇಹ ಯಾವುದು ಕೆಲಸ ಮಾಡುತ್ತಿಲ್ಲ ಎಂದೆನಿಸಿತು…. ಕಣ್ಣು ಮುಚ್ಚಿ ತೆರೆಯುವುದರೊಳಗೆ ಹೆಣ್ಣು ಒಬ್ಬಳು ಬರುತ್ತಿರುವುದು ಎಂಬುದು ತಿಳಿಯಿತು…. ಸರಕ್ಕನೆ ಅವಳನ್ನು ಎಳೆದು ಅವಳ ಬಾಯಿಗೆ ಬಟ್ಟೆ ತುರುಕಿ ಒಬ್ಬರ ನಂತರ ಒಬ್ಬರು ಅವರ ತೀಟೆ ತೀರಿಸಿಕೊಂಡರು… ಈಗ ನೀನು ಎಂಬಂತೆ ಸನ್ನೆ ಮೂಲಕ ಸಣ್ಣ ಚೂಪಾದ ಚೂರಿ ತೋರಿಸಿ ನನ್ನನ್ನು ಅವಳ ಮೇಲೆ ದೂಡಿದರು….. ಎಲ್ಲ ಗಂಡು ಜಾತಿಗೆ ಸಿಕ್ಕಿದ ಯಾವುದೇ ಹೆಣ್ಣಿನ ಮೇಲೆ ಎರಗುವಷ್ಟು ಕಾಮ ಬರುತ್ತದ ? ಎಂಬುದು ನನಗೆ ಗೊತ್ತಿಲ್ಲಾ…… ಆದರೆ ಆಗ ನಾನು ಕೂಡ ನನ್ನ ಮನಸ್ಸಲ್ಲಿ ಇಟ್ಟು ಪೂಜಿಸುವ ಹೆಣ್ಣನ್ನು ಭೋಗಿಸಿ ಬಿಟ್ಟೆ……!!!!! ಮೊದಲ ಬಾರಿಗೆ ಇಡೀ ದೇಹವೇ ರೋಮಾಂಚನವಾಗಿ ನಂಜು ತುಂಬಿದ ಕೀವನ್ನು ಹಿಂಡಿದಾಗ ಆಗುವ ಖಾಲಿತನ, ಹೊಟ್ಟೆಯಲ್ಲಿ ಕೆಟ್ಟ ಆಹಾರ ತುಂಬಿಕೊಂಡು ಹೊಟ್ಟೆ ತೊಳೆಸಿದಂತಾಗ ಎಲ್ಲಾ ಕೆಟ್ಟ ಆಹಾರ ವಾಂತಿ ಮಾಡಿ ನಿರಾಳವಾದಂತೆ ನನಗೆ ಅನಿಸಿತು…. !!!! ಈಗ ನನಗೂ ಅವರಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ……. ನನ್ನ ಎಲ್ಲ ಅಮಲು ಇಳಿದು ಮನಸ್ಸು ಹೃದಯ ತುಂಬಾನೇ ನಾಚಿಕೆ, ಅವಮಾನ, ದುಃಖ, ಕೋಪದಿಂದ ಕುದಿಯುತ್ತಿರುವ ಹಾಗೆ ಆವೇಶ ಹೆಚ್ಚಾಗಿತ್ತು….. ನಾನು ಇಷ್ಟು ದಿನ ಪ್ರೀತಿ, ಪ್ರೇಮ, ಪೂಜೆ, ನಿಜವಾದ ಪ್ರೀತಿಯಲ್ಲಿ ಕಾಮ ಇಲ್ಲ ಎಂದು ಹೇಳಿರುವುದು ಎಲ್ಲಾ ಸುಳ್ಳು ಎಂದು ಸಾಬೀತು ಮಾಡಿದೆ……. ಬಹುಶಃ ಇದೆಲ್ಲ ಇಷ್ಟು ಸುಲಭವೇ ಎಂದು ಎನಿಸಬಹುದು…. ಆದರೆ ಇದು ಆರರಿಂದ ಎಂಟು ನಿಮಿಷದ ಒಳಗಡೆ ಆಗಿತ್ತು…….ನಾನೇ ನನ್ನ ಈ ಹೇಯ ಕೃತ್ಯವನ್ನು ಎನಿಸಿದಾಗ ನನ್ನ ಮನಸ್ಸಲ್ಲಿ ಗಂಡು ಜಾತಿಗೆ ದಿಕ್ಕಾರ ಎಂದು ಕೂಗಿ ಕೂಗಿ ಹೇಳುತ್ತೇನೆ……
“ಈ ಜಗತ್ತಿನ ಅತ್ಯಂತ ಮಧುರ ಸಂಗೀತ ಯಾವುದೆಂದರೆ ಅದು ನಮ್ಮ ಹೃದಯದ ಬಡಿತ. ಇಡೀ ಜಗತ್ತು ನಮ್ಮನ್ನು ತೊರೆದು ಏಕಾಂಗಿಯಾದರೂ ನಾವು ಬದುಕಬಲ್ಲೆವು ಎಂಬ ಭರವಸೆಯನ್ನು ಅದು ನೀಡುತ್ತದೆ”
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ