ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇದ್ದು ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸಿ ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬಾಡಿಗೆಗೆ ಮನೆ ಮಾಡುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂಬ ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ನಂತರ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಪರಸ್ಪರ ಪ್ರೀತಿಸುತ್ತಾರೆ……. ಪದ್ಮಜಾಳಿಗೆ ಭವಾನಿ ನೀಡಿದ ಡೈರಿ ನೆನಪಾಗಿ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ. ಉಡುಪಿಯಲ್ಲಿ ರಮಣಿಯ ಗಂಡನಿಗೆ ಹುಶಾರ್ ಇಲ್ಲ ಎಂದು ಗೊತ್ತಾಗಿ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಪವನ್ ಮತ್ತು ಆರತಿ ಉಡುಪಿಗೆ ಸಂಜೀವರಿಗೆ ಔಷಧಿ ತರಲು ಹೋಗುತ್ತಾರೆ …ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳುತ್ತಾನೆ…. ಸಂಜೀವರ ಮನೆ ಪಕ್ಕ ಉತ್ತರ ಕರ್ನಾಟಕದ ಇಬ್ಬರು ಮಧ್ಯವಯಸ್ಕ ಗಂಡಸರು ಬಾಡಿಗೆಗೆ ಇದ್ದರು ಇವರಲ್ಲಿ ಸಂಜೀವರಿಗೆ ಗೆಳೆತನ ಬೆಳೆದು ತಾನು ಗ್ರಂಥಾಲಯದಲ್ಲಿರುವ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳಿ ಅವಳನ್ನು ತೋರಿಸುತ್ತಾನೆ…. ಇವರಿಬ್ಬರೂ ಸಂಜೀವರನು ಮೋಸದಿಂದ ಅಲ್ಕೋಹಾಲ್ ಕುಡಿಸಿ ತಾವು ಸೇರಿಕೊಂಡು ಸಂಜೀವ ಪ್ರೀತಿಸುತ್ತಿರುವ ಆ ಹುಡುಗಿಯನ್ನು ಮೋಸದಿಂದ ಅತ್ಯಾಚಾರ ಮಾಡುತ್ತಾರೆ…..
ಅಂತರಾಳ – ಭಾಗ 31
ಕೆಟ್ಟ ಮೇಲೆ ಬುದ್ಧಿ ಬಂದರೆ ಪ್ರಯೋಜನ ಇಲ್ಲ!! ಸಹವಾಸ ದೋಷದಿಂದ ಮಲ್ಲಿಗೆ ಹೂವನ್ನು ಕಾಲಿನ ಅಡಿಗೆ ಹಾಕಿ ತುಳಿದೆ. ತಪ್ಪು ಮಾಡಿದ ಮೇಲೆ ನನ್ನ ಅಮಲು ನನ್ನ ಅಸಡ್ಡೆ ಹೇಡಿತನ ಎಲ್ಲವೂ ಇಳಿಯಿತು… ಕಾಲ ಮಿಂಚಿತು…… ಒಂದು ಕ್ಷಣ ಇವರಿಬ್ಬರನ್ನೂ ಅಲ್ಲೇ ಸಾಯಿಸಿ ಬಿಡೋಣ ಎಂಬ ಕೋಪ ಬಂದು ಅದೇ ಯೋಚನೆ ತಲೆಗೆ ಬಂತು.. ಆದರೆ ವಿವೇಕ ಅಡ್ಡ ಬಂತು. ಕೊಲ್ಲುವುದು ಸುಲಭ ಆದರೆ ಒಬ್ಬನಿಗೆ ಜೀವ ಕೊಡಲು ಸಾದ್ಯವಿಲ್ಲ !! ಅಲ್ಲದೆ ಕೊಂದು ನಾನು ಜೈಲಿಗೆ ಹೋದರೆ ನಾನು ಎನೂ ಸಾಧಿಸಿದ ಹಾಗೆ ಆಗುತ್ತದೆ ಎಂಬ ಚಿಂತನೆಯಿಂದ ಮನೆಗೆ ಬಂದೆ.. ತಲೆಯೆಲ್ಲಾ ಸಿಡಿಯುತ್ತಿತ್ತು…. ಒಂದು ವೇಳೆ ಆ ನನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಂಡರೆ………….?
ನಾನು ಇಂತವರ ಸಹವಾಸ ಯಾಕೆ ಮಾಡಿದೆ…..? ಅವಳನ್ನು ಯಾಕೆ ಇವರಿಗೆ ತೋರಿಸಿದೆ ಒಂದಾ …ಎರಡಾ ನನ್ನ ತಪ್ಪುಗಳು……
ಅಮ್ಮ ನನ್ನನ್ನು ನೋಡಿ ಕೇಳಿದರು ಹೋಗುವಾಗ ಸರಿ ಇದ್ದೆ ಬರುವಾಗ ಏನಾಯಿತು? ಕಣ್ಣು ಮುಖ ಕೆಂಪಾಗಿದೆ ಎಂದರು. ಒಂದು ಕ್ಷಣ ಅಮ್ಮನಲ್ಲಿ ಸತ್ಯ ಹೇಳೋಣ ಎಂದು ಅಂದುಕೊಂಡೆ. ಮರುಕ್ಷಣ ಬೇಡ ಯಾವ ಬಾಯಿಯಲ್ಲಿ ಒಂದು ಹೆಣ್ಣನ್ನು ಮಾನಭಂಗ ಮಾಡಿದೆ ಎನ್ನಲೇ ಅದೂ ನಾನು ಪ್ರೀತಿಸಿದ ಹುಡುಗಿಯನ್ನು, ಅಷ್ಟೇ ಆಗಿದ್ದರೆ ಸಮಸ್ಯೆ ಇಲ್ಲ ನನ್ನ ಕಣ್ಣೆದುರೇ ನನ್ನ ಗೆಳೆಯರು ಅನ್ನಿಸಿಕೊಂಡ ಎರಡು ಪಿಶಾಚಿಗಳು ಅವಳನ್ನು ಹರಿದು ತಿಂದು ಮುಕ್ಕಿದ್ದಾರೆ ಎಂದು ಹೇಳಲೇ…… ಅಯ್ಯೋ ದೇವಾ ಹೇಗೆ ಹೇಳಲಿ…..? ಯಾವುದೇ ತಪ್ಪು ಮಾಡುವುದು ಸುಲಭ….ಮಾಡಿದ ಮೇಲೆ ನನ್ನ ಹಾಗೆ ಯೋಚನೆ ಮಾಡಿದರೆ ಎನೂ ಪ್ರಯೋಜನ? ಆದರೆ ಮುಂದಿನ ಪರಿಣಾಮ ಎನಿಸಿದರೆ ಮೈಯೆಲ್ಲ ಝಂ ಅನಿಸುತ್ತದೆ…. ಸಾಯೋಣ ಎನಿಸಿದೆ ಸತ್ತರೆ ನನ್ನ ಹುಡುಗಿಗೆ ಯಾರು ಗತಿ? …..ಬೇಡ ಸಾಯಬಾರದು ಎನಿಸಿದೆ…… ನಾಳೆ ಎನಾದರೂ ಪೋಲೀಸ್ ಗೆ ಗೊತ್ತಾದರೆ ದೇವಾ ಎನೂ ಮಾಡಲಿ…………..?
ಒಳ್ಳೆ ಉಪಾಯ ಎಂದರೆ ನಾನೇ ಹೋಗಿ ಪೋಲೀಸ್ ಕೇಸ್ ಕೊಡಬೇಕು ಎಂದೆನಿಸಿದೆ…..ಆಗ ನೆನಪಾಯಿತು ಅವರಿಬ್ಬರೂ ಹಿಂದೆ ಬರುವಾಗ ತಪ್ಪಿಯೂ ಎಲ್ಲೂ ಯಾರಲ್ಲೂ ಹೇಳಬೇಡ! ಹೇಳಿದರೆ ನೀನೇ ಸಿಕ್ಕಿ ಬೀಳುತ್ತಿ… ಯಾಕೆಂದರೆ ನಾವಿಬ್ಬರೂ ಅವಳನ್ನು ಉಪಯೋಗ ಮಾಡಿದಾಗ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದೇವೆ…. ಎಲ್ಲಿಯಾದರೂ ನಾವು ಸಿಕ್ಕಿಬಿದ್ದು ಗೊತ್ತಾಗಿ ಅವಳು ಗರ್ಭವತಿ ಆದರೆ ನಮ್ಮ ಪರೀಕ್ಷೆ ಮಾಡಿದಾಗ ನಾವು ಎಂದು ಗೊತ್ತಾಗಬಾರದು ಎಂದು! ನೀನಾದರೆ ಅವಳನ್ನು ಪ್ರೀತಿಸುವವ ಅವಳನ್ನು ಮದುವೆ ಮಾಡಿಸಿದರೂ ತೊಂದರೆ ಇಲ್ಲ ನಮಗೆ ಹಾಗಲ್ಲ ಹೆಂಡತಿ ಮಕ್ಕಳು ಊರಲ್ಲಿ ಇದ್ದಾರೆ ಎಂದು ಹೇಳಿದ್ದು…. ನಾನು ಎನಿಸಿದ ಹಾಗೆ ಇವರಿಬ್ಬರೂ ಕಾಮುಕರು ಮಾತ್ರ ಅಲ್ಲದೆ ಚಾಣಾಕ್ಷರು ಕೂಡ……..
ಬೇಡ ಬೇಡ ನಾನೇ ಹೋಗಿ ಕೇಸ್ ಕೊಟ್ಟು ನಾನು ಮಾಡಿದ ತಪ್ಪಿಗಾಗಿ ಕೈಯಾರೆ ಜೈಲಲ್ಲಿ ಕೊಳೆತು ಹೋದರೆ? ಈ ಯೋಚನೆ ಕೂಡ ಬಿದ್ದು ಹೋಯಿತು…. ಒಮ್ಮೊಮ್ಮೆ ಅನಿಸುತ್ತದೆ ಮುಂದೆ ಎನೂ ಆಗುತ್ತದೆ ಎಂದು ಮೊದಲೇ ನಮಗೆ ತಿಳಿದರೆ ಇಷ್ಟು ತಪ್ಪುಗಳು ಈ ಭೂಮಿಯಲ್ಲಿ ನಡೆಯುತ್ತಿರಲಿಲ್ಲವೋ ಏನೋ…..
ಕೊನೆಗೆ ನಾಳೆ ಗ್ರಂಥಾಲಯಕ್ಕೆ ಹೋಗಿ ಅವಳನ್ನು ಮದುವೆ ಆಗುವ ನಿರ್ಧಾರ ಹೇಳಬೇಕು ನಾನು ಮಾಡಿದ ತಪ್ಪು ನಾನೇ ಸರಿ ಮಾಡುತ್ತೇನೆ….. ಅವಳನ್ನು ಯಾವುದೇ ಸಂದರ್ಭದಲ್ಲಿ ಕೂಡ ಬಿಟ್ಟು ಕೊಡಲಾರೆ…. ಅಪ್ಪ ಅಮ್ಮನನ್ನು ಒಪ್ಪಿಸಿ ಮದುವೆ ಆಗುತ್ತೇನೆ ಎಂದು ದೃಢ ನಿರ್ಧಾರ ಮಾಡಿದ ಮೇಲೆ ಬೆಳಿಗ್ಗಿನ ಜಾವ ನಿದ್ದೆ ಮಾಡಿದೆ.. ಎಚ್ಚರ ಆಗುವಾಗ ಬೆಳಿಗ್ಗೆ ಎಂಟು ಗಂಟೆ ಆಗಿತ್ತು……..
ಎದ್ದ ತಕ್ಷಣ ಅಮ್ಮ “ಏನೋ ಯಾವಾಗಲೂ ಇಷ್ಟು ಹೊತ್ತು ಮಲಗುವುದಿಲ್ಲ ಮೈ ಹುಷಾರಿಲ್ವ “ಎಂದರು… ನಂತರ ನಿನ್ನ ಗೆಳೆಯರು ಎನಿಸಿಕೊಂಡ ಆ ಎರಡು ನೀಚರು ಬೆಳಿಗ್ಗೆ ಬೇಗ ಬಂದು ನಾವು ಊರಿಗೆ ಹೋಗುತ್ತಿದ್ದೇವೆ ರೂಂ ಖಾಲಿ ಮಾಡುತ್ತಿದ್ದೇವೆ ಎಂದರು. ಹೌದಾ ಎಂದು ಒಮ್ಮೆಲೇ ಕೇಳಿದಾಗ ಅಮ್ಮ ಯಾಕೋ ಅವರು ನಿನ್ನ ಸಾಲ ಕೊಡಬೇಕಾ ಎಂದರು. ಸಾಲ ಆಗಿದ್ದರೆ ತೊಂದರೆ ಇಲ್ಲ ಅದಕ್ಕಿಂತ ಹೆಚ್ಚಿನ ತಪ್ಪು ಮಾಡಿದ್ದಾರೆ ಎಂದು ಮನಸ್ಸಲ್ಲೇ ಅಂದುಕೊಂಡೆ. ಹೋಗಿದ್ದು ಒಳ್ಳೆದು ಆಯಿತು ಇಲ್ಲಿ ಬೇರೆ ಹೆಣ್ಣು ಮಕ್ಕಳನ್ನು ಹಾಳು ಮಾಡುವುದು ತಪ್ಪಿತು ಎಂದೆನಿಸಿದೆ. ಯಾವಾಗಲೂ ಅಮ್ಮ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ.. ಆಗ ನಾನು ಅಮ್ಮನಿಗೆ ನೀವು ಅವರನ್ನು ಹಾಗೆ ನೋಡುತ್ತಿರಿ ಅದಕ್ಕೆ ನಿಮಗೆ ಅವರು ಹಾಗೆ ಕಾಣುತ್ತಾರೆ ಎಂದು ಹೇಳುತ್ತಿದ್ದೆ… ಆದರೆ ಇವತ್ತು ಅಮ್ಮ ಆ ನೀಚರು ಅಂದಿದ್ದಕ್ಕೆ ಅಮ್ಮನಿಗೆ ಮೊದಲೇ ಗೊತ್ತಿತ್ತು ಅವರು ಒಳ್ಳೆಯವರು ಅಲ್ಲ ಎಂದು…. ಒಬ್ಬ ಮನುಷ್ಯನನ್ನು ನೋಡಿದ ತಕ್ಷಣ ಈ ವ್ಯಕ್ತಿ ಹೀಗೆಯೇ ಎಂದು ತಿಳಿಯಬೇಕಾದರೆ ಅವರು ಪರಿಶುದ್ಧ ಪ್ರಾಮಾಣಿಕ ಮನಸ್ಸಿನವರಿಗೆ ಮಾತ್ರ ಸಾಧ್ಯ ಎಂದು ಮನಸ್ಸಲ್ಲೇ ಯೋಚಿಸಿದೆ …. ಅಮ್ಮ ನನ್ನ ಮುಖ ನೋಡಿ ಮುಖ ಎಲ್ಲ ಬಾಡಿ ಹೋಗಿದೆ ಒಂದೇ ದಿನಕ್ಕೆ ದೇಹ ಇಷ್ಟು ಇಳಿದ ಹಾಗೆ ಕಾಣುತ್ತದೆ ಎಂದಾಗ,
” ನಾವು ಏನನ್ನು ಯೋಚಿಸುತ್ತೇವೆಯೋ ಹಾಗೆ ಆಗುತ್ತೇವೆ, ದುರ್ಬಲ ಅಂದುಕೊಂಡರೆ ದುರ್ಬಲವಾಗಿರುತ್ತೇವೆ, ಬಲಶಾಲಿ ಅಂದುಕೊಂಡರೆ ಬಲಶಾಲಿ ಆಗುತ್ತೇವೆ” ಎಂದು ಅವರಲ್ಲಿ ಹೇಳಲಿಲ್ಲ ಯೋಚನೆ ಬಂತು……
ಮುಖ ತೊಳೆದು ಬೇಗ ಬೇಗ ಹೊರಟೆ ಅಮ್ಮ ನನಗೆ ಅರ್ಜೆಂಟ್ ಪೇಟೆಗೆ ಹೋಗಲು ಇದೆ ಎಂದೆ… ಅಮ್ಮನ ಒತ್ತಾಯಕ್ಕೆ ಮಣಿದು ತಿಂಡಿ ತಿನ್ನಲು ಕುಳಿತಾಗ ಹಿಂದಿನ ಸಂಜೆಯ ನೆನಪಾಗಿ ತಿಂಡಿ ತಿನ್ನಲು ಆಗದೆ ಸಾಕು ಎಂದು ಎದ್ದು ಎರಡು ಪುಸ್ತಕ ಹಿಡಿದು ಗ್ರಂಥಾಲಯಕ್ಕೆ ಹೊರಟೆ…
“ಒಂದೊಮ್ಮೆ ಯಾರಾದರೂ ನಾನು ಜೀವನದಲ್ಲಿ ತಪ್ಪು ಮಾಡಿಯೇ ಇಲ್ಲ ಎಂದು ಹೇಳಿದರೆ ಅವರು ಬದುಕಿನಲ್ಲಿ ಯಾವ ಹೊಸ ಸಂಗತಿಯನ್ನು ಕಲಿಯಲು ಯತ್ನಿಸಿಯೇ ಇಲ್ಲ ಎಂದರ್ಥ”
ಪ್ರತಿ ವ್ಯಕ್ತಿಯೂ ಹೆಣ್ಣಾಗಲಿ ಗಂಡಾಗಲಿ ತಪ್ಪು ಮಾಡಿಯೇ ಮಾಡುತ್ತಾರೆ ಕೆಲವರ ತಪ್ಪು ಸಣ್ಣ ಆಗಿರಬಹುದು ಅಥವಾ ಕ್ಷಮಿಸುವ ತಪ್ಪು ಆಗಿರಬಹುದು ಅಥವಾ ಕೆಲವರ ತಪ್ಪು ನನ್ನ ತಪ್ಪಿನ ಹಾಗೆ ದೊಡ್ಡ ತಪ್ಪು ಮತ್ತು ಕ್ಷಮಿಸದ ತಪ್ಪು ಆಗಿರಬಹುದು….. ಆದರೆ ಅದು ತಪ್ಪು ಎಂದು ಗೊತ್ತಾದ ಮೇಲೆ ಯಾವತ್ತೂ ಮುಂದೆ ಅಂತಹ ತಪ್ಪು ಮಾಡಬಾರದು ನಾನು ಖಂಡಿತ ಇನ್ನೂ ಮುಂದೆ ಅಂತಹ ತಪ್ಪು ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದೆ…..
ಹೇಗೆ ಮಾತನಾಡಬೇಕು ಯಾವ ರೀತಿ ಹೇಳಬೇಕು ಎಂದು ಮನಸ್ಸಲ್ಲೇ ಯೋಚಿಸಿ ಗ್ರಂಥಾಲಯಕ್ಕೆ ಬಂದೆ.
ಆದರೆ ಗ್ರಂಥಾಲಯದಲ್ಲಿ ಆ ಹೆಣ್ಣು ಇರಲಿಲ್ಲ… ಇವತ್ತು ಬರಲಿಲ್ಲ ಎಂದು ಕೇಳಿ ಎದೆ ಡಬ್ ಡಬ್ ಆಗಲು ಶುರುವಾಯಿತು…. ಎನಾದರೂ ಪ್ರಾಣಕ್ಕೆ ಸಂಚಕಾರ ತಂದುಕೊಂಡಳಾ ಎಂದು ಎನಿಸಿ ತುಂಬಾ ಭಯವಾಯಿತು….. ಏನು ಮಾಡಬೇಕು ಎಂದು ತಿಳಿಯದೇ ಹಿಂದೆ ಬಂದೆ ಮನೆಗೆ ತಲುಪುವ ಮುಂಚೆ ಮನೆಯ ಹತ್ತಿರದವರು ಹೇಳಿದರು… ಬೆಳಿಗ್ಗೆ ಬೇಗ ಎದ್ದು ಊರಿಗೆ ಎಂದು ಹೋದ ಇಬ್ಬರು ಇದ್ದ ರಿಕ್ಷಾ ಪಲ್ಟಿ ಆಗಿ ಇಬ್ಬರಿಗೂ ತುಂಬಾ ಗಂಭೀರವಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ ಇದ್ದಾರೆ ಎಂದರು……
ಇದೆಲ್ಲ ವಿಷಯ ಕೇಳಿ ಮನಸ್ಸು ತುಂಬಾನೇ ಕೇಡನ್ನು ಶಂಕಿಸಿತು……. ಮಾಡಿದ ಕರ್ಮ ತಿನ್ನದೇ ಇರುವುದಿಲ್ಲ ಎಂದು ಮೊದಲಿನಿಂದಲೂ ರೂಢಿಯಲ್ಲಿದೆ….. ಇವರಿಬ್ಬರೂ ಅಪಘಾತ ಆಗಿ ಗಂಭೀರವಾಗಿ ಇರುವುದು ಕೇಳಿದಾಗ ಹೌದು ಎಂದೆನಿಸುತ್ತದೆ….. ತಪ್ಪು ಮಾಡಿ ಇಲ್ಲಿಂದ ಅದಷ್ಟೋ ಬೇಗ ಜಾಗ ಖಾಲಿ ಮಾಡಲು ಹೋದರು. ಆದರೆ ಈ ಪ್ರಕೃತಿಯಲ್ಲಿ ಉಪ್ಪುತಿಂದವರು ನೀರು ಕುಡಿಯಲೇ ಬೇಕು …. ಮನುಷ್ಯ ನಿಮಿತ್ತ ಮಾತ್ರ… ಎಲ್ಲವೂ ಅವನು ಎನಿಸಿದ ಹಾಗೆ ಆಗುತ್ತಿದ್ದರೆ ? ಈಗಲೇ ಕೇಳುವವರು ಇಲ್ಲ…. ಇನ್ನೂ ಅವನು ಎನಿಸಿದ ಹಾಗೆ ಎಲ್ಲವೂ ಆಗುತ್ತಿದ್ದರೆ ಒಬ್ಬರಿಗೊಬ್ಬರು ಹಿಡಿದು ತಿನ್ನಬಹುದು!!!!! ಆದರೆ ಎನೂ ತಪ್ಪು ಮಾಡದ ಸಣ್ಣ ಮಕ್ಕಳು ಎನೂ ಅರಿಯದ ಮುಗ್ಧರಿಗೆ ಜೀವ ಹೋಗುವ ಕಾಯಿಲೆಗಳು ಅಪಘಾತ ನಡೆದಾಗ ಎನೂ ಹೇಳಬೇಕು ಎಂಬುದೇ ತಿಳಿಯುವುದಿಲ್ಲ……. ಆಗ ಅನಿಸುತ್ತದೆ ಬಲ್ಲವರು ಹೇಳುವ ಕಡಲೆ ಜೊತೆ ಎಳ್ಳು ಕರಟಿ ಹೋಯಿತು ಎಂದು ಇದಕ್ಕೆ ಹೇಳುವುದು ಇರಬಹುದೇ………..
ಮನಸ್ಸಿಗೆ ಒಂದೇ ಗೊತ್ತಿರುವುದು ಯೋಚನೆ, ಯೋಚನೆ, ನಮ್ಮ ದೇಹ ಇಲ್ಲಿ ಇದ್ದರೂ ಮನಸ್ಸು ಎಲ್ಲಿ ಎಲ್ಲಿಗೋ ಹೋಗಿ ಬರುತ್ತದೆ…… ನಾನು ತಪ್ಪು ಮಾಡಿದ ಮೇಲೆ ಎಷ್ಟು ಪಶ್ಚಾತ್ತಾಪ ಆದರೂ ಎನೂ ಪ್ರಯೋಜನ ಈಗ ಗ್ರಂಥಾಲಯದಲ್ಲಿ ಕೂಡ ಸಿಗಲಿಲ್ಲ…. ಅವಳಿಗೆ ಎನೂ ಆಗದಿದ್ದರೆ ಸಾಕು…. ಈ ನೈತಿಕ ಮೌಲ್ಯ ಎಂದರೆ ಎನೂ? ಇನ್ನೊಬ್ಬರಿಗೆ ಹೇಳುವುದು ಅಲ್ಲ? ನಮ್ಮ ನಡವಳಿಕೆಯಲ್ಲಿ ಇರಬೇಕು. ಹಿಂಸೆಯ ಬಗ್ಗೆ ಹೇಳುವುದಾದರೆ ಇರುವೆಯನ್ನು ಕೊಲ್ಲುವುದು, ಮಾಂಸ ತಿನ್ನುವುದು ಮಾತ್ರ ಹಿಂಸೆ ಅಲ್ಲ! ಇತರರಿಗೆ ಮಾನಸಿಕವಾಗಿ, ದೈಹಿಕವಾಗಿ ಶೋಷಣೆ ಮಾಡುವುದು ಕೂಡ ಹಿಂಸೆಯೇ ಆಗುತ್ತದೆ ಅಲ್ಲವೇ?
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ