
ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇದ್ದು ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸಿ ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬಾಡಿಗೆಗೆ ಮನೆ ಮಾಡುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂಬ ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ನಂತರ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಪರಸ್ಪರ ಪ್ರೀತಿಸುತ್ತಾರೆ……. ಪದ್ಮಜಾಳಿಗೆ ಭವಾನಿ ನೀಡಿದ ಡೈರಿ ನೆನಪಾಗಿ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ. ಉಡುಪಿಯಲ್ಲಿ ರಮಣಿಯ ಗಂಡನಿಗೆ ಹುಶಾರ್ ಇಲ್ಲ ಎಂದು ಗೊತ್ತಾಗಿ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಪವನ್ ಮತ್ತು ಆರತಿ ಉಡುಪಿಗೆ ಸಂಜೀವರಿಗೆ ಔಷಧಿ ತರಲು ಹೋಗುತ್ತಾರೆ …ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳುತ್ತಾನೆ…. ಸಂಜೀವರ ಮನೆ ಪಕ್ಕ ಉತ್ತರ ಕರ್ನಾಟಕದ ಇಬ್ಬರು ಮಧ್ಯವಯಸ್ಕ ಗಂಡಸರು ಬಾಡಿಗೆಗೆ ಇದ್ದರು ಇವರಲ್ಲಿ ಸಂಜೀವರಿಗೆ ಗೆಳೆತನ ಬೆಳೆದು ತಾನು ಗ್ರಂಥಾಲಯದಲ್ಲಿರುವ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳಿ ಅವಳನ್ನು ತೋರಿಸುತ್ತಾನೆ…. ಇವರಿಬ್ಬರೂ ಸಂಜೀವರನು ಮೋಸದಿಂದ ಅಲ್ಕೋಹಾಲ್ ಕುಡಿಸಿ ತಾವು ಸೇರಿಕೊಂಡು ಸಂಜೀವ ಪ್ರೀತಿಸುತ್ತಿರುವ ಆ ಹುಡುಗಿಯನ್ನು ಮೋಸದಿಂದ ಅತ್ಯಾಚಾರ ಮಾಡುತ್ತಾರೆ…..ಮರುದಿನ ಸಂಜೀವ ಏಳುವ ಮುನ್ನವೇ ಅವರಿಬ್ಬರೂ ಊರಿಗೆ ಎಂದು ಹೋಗಿ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಸೇರಿಸಿರುತ್ತಾರೆ….. ಸಂಜೀವ ಗ್ರಂಥಾಲಯಕ್ಕೆ ಹೋದಾಗ ಅಲ್ಲಿ ಆ ಹುಡುಗಿ ಇರುವುದಿಲ್ಲ……..
ಅಂತರಾಳ – ಭಾಗ 32
“ಜೀವನದಲ್ಲಿ ಎದುರಾಗುವ ಸಂಕಷ್ಟ ಮತ್ತು ಸವಾಲುಗಳು ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ”
ಏನೇನೋ ಕಲ್ಪಿಸಿಕೊಂಡು ಆ ಹೆಣ್ಣು ಎನೂ ಮಾಡಿಕೊಂಡಳಾ ಎಂಬ ಚಿಂತೆಯಿಂದ, ಇವರಿಬ್ಬರೂ ನಿನ್ನೆ ಹೀಗೆ ಮಾಡದಿದ್ದರೆ ನಾನು ಅವರನ್ನು ನೋಡಲು ಖಂಡಿತಾ ಹೋಗುತ್ತಿದ್ದೆ ಆದರೆ ಇವರ ಕೆಟ್ಟ ಕೆಲಸದಿಂದ ಅವರಿಗೆ ಹಾಗೆ ಆಗಿದ್ದು ಒಳ್ಳೆಯದು ಆಯಿತು ಎಂಬ ಯೋಚನೆ ಮಾಡಿಕೊಂಡು ಒಲ್ಲದ ಮನಸ್ಸಿನಿಂದ ಮನೆಗೆ ಬಂದೆ. ಅಪ್ಪ ತೋಟಕ್ಕೆ ಹೋಗಿದ್ದರು. ಅಮ್ಮ ಒಂದೇ ಉಸಿರಿಗೆ ನಿನ್ನ ಜೊತೆ ಕಷ್ಟ ಸುಖ ಮಾತನಾಡಿಕೊಳ್ಳುತ್ತಿದ್ದ ಆ ನಿನ್ನ ಗೆಳೆಯರು ಬೆಳಿಗ್ಗೆ ಬೇಗ ಎದ್ದು ಹೋಗಿ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ ಅಂತೆ ಗೊತ್ತಾಯಿತ ಎಂದು ಕೇಳಿದರು.ನನಗೆ ಅವರ ಬಗ್ಗೆ ಹೆಚ್ಚು ಮಾತನಾಡುವುದು ಇಷ್ಟ ಇರಲಿಲ್ಲ ಹೂಂ ಎಂದಷ್ಟೇ ಹೇಳಿ ಒಳಗೆ ಹೋದೆ.
ಪಾಪ ಹುಡುಗಿ ಎನೂ ಮಾಡಿಕೊಂಡಲಾ ಏನೋ ಅದೇ ಚಿಂತೆ ನಾಳೆ ಬೆಳಿಗ್ಗೆ ಪುನಃ ಹೋಗಬೇಕು. ಹೋಗುವ ಮುಂಚೆ ಅಮ್ಮನಲ್ಲಿ ಸತ್ಯ ಹೇಳಿ ಅವರ ಒಪ್ಪಿಗೆ ತೆಗೆದುಕೊಂಡು ಹೋಗುವುದು ಎಂದು ನಿರ್ಧಾರ ಮಾಡಿದೆ.
ಮದ್ಯಾಹ್ನ ಊಟಕ್ಕೆ ಬರುವ ಮುಂಚೆನೇ ಅಪ್ಪ ಅವಸರ ಅವಸರವಾಗಿ ದೊಡ್ಡ ಹೆಜ್ಜೆ ಹಾಕುತ್ತಾ ಒಳಗೆ ಬಂದರು ಅಮ್ಮ ಏನಾಯಿತು ಏನಾಯಿತು ಎಂದು ಕೇಳಿದಾಗ ನಾನು ಹತ್ತಿರ ಹೋದೆ… ಅಣ್ಣನಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ ಅಂತೆ ಅವನ ಗೆಳೆಯರು ತೋಟದ ಹತ್ತಿರ ಒಂದು ಮನೆಯಲ್ಲಿ ಟೆಲಿಪೋನ್ ಇದೆ ಅದಕ್ಕೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ತಿಳಿಯಿತು ಅದನು ಕೇಳಿ ಅಮ್ಮ ಒಂದೇ ಸಮನೆ ಅಳತೊಡಗಿದರು.ಅಪ್ಪ ನನ್ನನು ಕರೆದು ಈಗಲೇ ಹೊರಡು… ಮದ್ಯಾಹ್ನ ಎರಡು ಗಂಟೆಗೆ ಇಲ್ಲಿಂದ ಒಂದು ಲಾರಿ ಬೊಂಬಾಯಿಗೆ ಹೋಗಲು ಇದೆ ಎಂದು ನನಗೆ ಪರಿಚಯದವರು ಒಬ್ಬರು ಹೇಳಿದರು. ನಾನು ನಿನ್ನನು ಕಳಿಸುತ್ತೇನೆ ಎಂದು ಹೇಳಿದ್ದೇನೆ.. ಎರಡು ಮೂರು ಬಟ್ಟೆ ತೆಗೆದುಕೊಳ್ಳು .. ಹೋಗಿ ನಿನ್ನ ಅಣ್ಣ ಹೇಗಿದ್ದಾನೆ ಎನೂ ಎಂದು ವಿವರವಾಗಿ ಪತ್ರ ಬರೆದು
ಹಾಕು. ಅವನು ಆಸ್ಪತ್ರೆಯಲ್ಲಿ ಇರುವವರೆಗೆ ಇದ್ದು ಅವನನ್ನು ಜೊತೆಯಲ್ಲಿ ಕರೆದುಕೊಂಡು ಬಾ ಎಂದು ನಾನು ಏನು ಎಂದು ಯೋಚನೆ ಮಾಡುವ ಮುಂಚೆ ನನ್ನ ಕೈಗೆ ದುಡ್ಡು ಕೂಡಾ ಕೊಟ್ಟು ಬೇಗ ಹೊರಡು ಎಂದು ಅವಸರ ಮಾಡಿದರು.ನನಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಯಿತು.ಏನು ಹೇಳಬೇಕು ಎಂಬುದೇ ತೋಚಲಿಲ್ಲ. ನಾನು ಈಗಾಗಲೇ ಒಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಈಗ ಅಣ್ಣನಿಗೆ ಅಪಘಾತ ಆಗಿ ಬೊಂಬಾಯಿಗೆ ಹೋಗಲು ಹೇಳುತ್ತಿದ್ದಾರೆ.ಬೇಡ ಹೋಗುವುದಿಲ್ಲ ಎಂದು ಹೇಳಿದರೆ ಯಾಕೆ ಎಂದು ಕೇಳುತ್ತಾರೆ ಏನೂ ಅಂತ ಹೇಳುವುದು ಕೆಲವೊಮ್ಮೆ ಸಮಸ್ಯೆಗಳು ಒಟ್ಟಾಗಿ ಬರುತ್ತದೆಯಾವ ರೀತಿ ಯೋಚಿಸಿದರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಆಗಲಿಲ್ಲ.
ಕೊನೆಗೆ ಅಪ್ಪ ಹೇಳಿದ ಹಾಗೆ ಹೋಗದಿದ್ದರೆ ಸಮಸ್ಯೆ ದೊಡ್ಡದು ಆಗುತ್ತದೆ. ಎರಡು ಮೂರು ದಿನದಲ್ಲಿ ಹಿಂದೆ ಅಣ್ಣನನ್ನು ಕರೆದು ಕೊಂಡು ಬರುತ್ತೇನೆ ಆಮೇಲೆ ಗ್ರಂಥಾಲಯಕ್ಕೆ ಹೋಗಿ ಅವಳನ್ನು ಒಪ್ಪಿಸಿ ಮದುವೆ ಆಗುತ್ತೇನೆ ಎಂದು ನಿಶ್ಚಯಿಸಿ ಬೊಂಬಾಯಿಗೆ ಒಲ್ಲದ ಮನಸ್ಸಿನಿಂದ ಹೊರಟೆ.
ಬೊಂಬಾಯಿಗೆ ಎರಡು ಮೂರು ದಿನದಲ್ಲಿ ಉಡುಪಿಗೆ ಹಿಂದೆ ಬರುತ್ತೇನೆ ಎಂಬ ಆಲೋಚನೆಯಿಂದ ಬಂದಿದ್ದರೆ ಇಲ್ಲಿಯೇ ನೋಡ ನೋಡುತ್ತಿದ್ದಂತೆ ಒಂದು ತಿಂಗಳು ಕಳೆಯಿತು ಅಣ್ಣನಿಗೆ ಬೆನ್ನಿಗೆ ಬಲವಾದ ಏಟು ಬಿದ್ದುದರಿಂದ ನಡೆಯಲು ಸಾಧ್ಯವೇ ಇರಲಿಲ್ಲ. ನನಗಂತೂ ದಿಕ್ಕೇ ತೋಚುತ್ತಿರಲಿಲ್ಲ. ರಾತ್ರಿ ನಿದ್ದೆ ಕೂಡ ಸರಿಯಾಗಿ ಬರುತ್ತಿರಲಿಲ್ಲ ಕೆಟ್ಟ ಕೆಟ್ಟ ಕನಸೇ ಬೀಳುತಿತ್ತು. ಅಂತೂ ಇಂತೂ ಒಂದು ತಿಂಗಳು ಇಪ್ಪತ್ತು ದಿನಗಳೇ ಆಗಿದ್ದವು.ಅಣ್ಣನಿಗೆ ಸ್ವಲ್ಪ ಮಟ್ಟಿಗೆ ಗುಣವಾಗಿ ಡಿಸ್ಚಾರ್ಜ್ ಮಾಡಿ ಉಡುಪಿಗೆ ಕರೆದುಕೊಂಡು ಬಂದೆ.. ಬರುವಾಗಲೇ ಆ ನನ್ನ ಬೆಳದಿಂಗಳ ಚುಕ್ಕಿಯನು ಯಾವಾಗ ಬೇಟಿ ಆಗುತ್ತೇನಾ ಯಾವಾಗ ಅವಳನ್ನು ಕಣ್ಣು ತುಂಬಾ ನೋಡುತ್ತೇನಾ ಎಂಬ ಕಾತರದಿಂದ, ಆತುರದಿಂದ ಇದ್ದೆ. ರಾತ್ರಿ ನಿದ್ದೆ ಬರಲಿಲ್ಲ ಯಾವಾಗ ಬೆಳಿಗ್ಗೆ ಆಗುತ್ತದೆ ಎಂದು ಕಾಯುತ್ತಿದ್ದೆ ನಾಳೆ ಖಂಡಿತಾ ಅಮ್ಮನಿಗೆ ಹೇಳುತ್ತೇನೆ.ಅಮ್ಮ ಒಪ್ಪಿಯೇ ಒಪ್ಪುತ್ತಾರೆ ಎಂಬ ಭರವಸೆ ನನಗಿತ್ತು.
ನಾವು ಒಂದು ಎನಿಸಿದರೆ ವಿಧಿ ಬೇರೆಯೇ ಬರೆದು ಇಟ್ಟಿರುತ್ತದೆ ಎಂದು ನಾನು ಅಂದುಕೊಳ್ಳುತ್ತೇನೆ.ಮನುಷ್ಯ ನಿಮಿತ್ತ ಮಾತ್ರ ಕೆಲವೊಮ್ಮೆ ನಾವು ಪ್ರಯತ್ನ ಪಟ್ಟರೆ ನಾವು ಅಂದುಕೊಂಡದ್ದು ನೆರವೇರಿಸಲು ಸಾಧ್ಯ ಎಂದು ಕೊಳ್ಳುತ್ತೇವೆ. ಆದರೆ ಪ್ರಯತ್ನ ಪಡುವ ಮುಂಚೆಯೇ ಅಲ್ಲಿ ಬೇರೆಯೇ ಘಟನೆ ನಡೆದರೆ ಎನೂ ಮಾಡಲು ಸಾಧ್ಯ?
ನಾನು ಬೆಳಿಗ್ಗೆ ದಿನ ಏಳುವ ಮುನ್ನವೇ ಎದ್ದೆ.
ಅಮ್ಮ ಎದ್ದು ಹಟ್ಟಿಯಲ್ಲಿ ದನ ಕರುಗಳಿಗೆ ಮೇವು ಹಾಕುತ್ತಿದ್ದರು.ಅಣ್ಣನ ಕೊಣೆಗೆ ಹೋಗಿ ಅವನನ್ನು ಹೊರಗೆ ನಿಧಾನಕ್ಕೆ ಹೊರಗೆ ಕರೆದುಕೊಂಡು ಬಂದೆ. ಅಮ್ಮನಲ್ಲಿ ಅಪ್ಪ ಎಲ್ಲಿ ಎಂದಾಗ ತೋಟದ ಕಡೆ ಹೋಗಿದ್ದಾರೆ ಎಂದರು. ಅಮ್ಮ ನನಗೆ ಇವತ್ತು ಪೇಟೆಗೆ ಹೋಗಲು ಇದೆ ಬೇಗ ಹೋಗಿ ಬೇಗ ಬರುತ್ತೇನೆ ಹೋಗುವ ಮುಂಚೆ ನನಗೆ ಸ್ವಲ್ಪ ನಿಮ್ಮಲ್ಲಿ ಮಾತನಾಡಲು ಇದೆ ಎಂದೆ.ಎನ್ನೋ ಅದು ಅಷ್ಟು ಗುಟ್ಟಿನ ವಿಚಾರ ಎಂದರು. ಹೌದು ಅದು ಗುಟ್ಟಿನ ವಿಚಾರವೇ ಅಂದೆ.
ಯಾರೋ ಹೊರಗೆ ಕರೆಯುವುದು ಕೇಳುತ್ತಿದೆ ಎಂದು ಅಮ್ಮ ಹೇಳಿದಾಗ ಇಷ್ಟು ಬೆಳಿಗ್ಗೆ ಯಾರು ಎಂದು ನಾನು ಹೊರಗೆ ಬಂದೆ. ತೋಟದ ಹತ್ತಿರ ಮನೆ ಇರುವ ಅಪ್ಪನ ಆತ್ಮೀಯ ಒಬ್ಬರು ಕರೆಯುತ್ತಿದ್ದರು. ನಿನ್ನ ಅಪ್ಪ ತೋಟದಲ್ಲಿ ಜಾರಿ ಬಿದ್ದು ಕಾಲು ನೆಲಕ್ಕೆ ಊರಲು ಆಗುತ್ತಿಲ್ಲ ನಾವು ಎರಡು ಮೂರು ಜನ ಎತ್ತಿ ನಮ್ಮ ಮನೆಯಲ್ಲಿ ಮಲಗಿಸಿದ್ದೇವೆ ಬೇಗ ಬನ್ನಿ ಎಂದರು. ಅಮ್ಮನಲ್ಲಿ ಹೇಳಿ ನೀವು ಇಲ್ಲಿ ಅಣ್ಣನ ಹತ್ತಿರ ಇರಿ ನಾನು ಕರೆದುಕೊಂಡು ಬರುತ್ತೇನೆ ಎಂದು ರಭಸವಾಗಿ ಹೋದೆ. ಆದರೆ ನೋಡಿದ ಮೇಲೆ ತಿಳಿಯಿತು ಕಾಲು ನಡೆಯಲು ಆಗುತ್ತಿರಲಿಲ್ಲ ಅಕ್ಕಪಕ್ಕದ ಮನೆಯವರು ಎಲ್ಲಾ ಸೇರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಕಾಲು ಮುರಿದಿದೆ ಎಂದು ಅಡ್ಮಿಟ್ ಆಗಲು ಹೇಳಿದರು. ಈಗಾಗಲೇ ಒಂದು ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಗೆ ಬಂದರೆ ಇಲ್ಲಿ ಇನ್ನೊಂದು ಆಸ್ಪತ್ರೆಯಲ್ಲಿ ಇರುವಂತೆ ಆಗಿತ್ತು…. ಅಪ್ಪನನ್ನು ಒಬ್ಬರನ್ನೇ ಬಿಟ್ಟು ಹೋಗುವ ಹಾಗೂ ಇರಲಿಲ್ಲ.ಮನೆಯಲ್ಲಿ ಅಣ್ಣ ಬೆನ್ನು ಮೂಳೆಯ ನೋವಿನಿಂದ ಮಲಗಿದಲ್ಲೇ ಇರುವ ಕಾರಣ ಅಮ್ಮನಿಗೂ ಆಸ್ಪತ್ರೆಗೆ ಬರುವ ಆಗಿರಲಿಲ್ಲ.
ಆದರೆ ನನ್ನ ಪಾಡು ನಾಯಿ ಪಾಡು ಆಗಿದೆ ಎಂದರೆ ತಪ್ಪಾಗಲಾರದು. ನಾನು ಈ ಒಂದೂವರೆ ತಿಂಗಳಿನಿಂದ ಪಡುವ ಪಾಡುಗುಲಾಬಿ ಹೂವಿನ ಎಸಳಿನಂತೆ ಇರುವ ಆ ಹೆಣ್ಣಿನ ನಗು, ಬೆಳದಿಂಗಳ ಬೆಳಕಿನಂತೆ ಇರುವ ಮಾಧುರ್ಯ , ಮಲ್ಲಿಗೆಯ ಘಮದಂತೆ ಇರುವ ಕೋಮಲತೆಯನು ಹರಿದು ಬಿಸಾಕಿದ ಆ ಇಬ್ಬರು ಬಿಕನಾಸಿಗಳು ಇನ್ನೂ ಆಸ್ಪತ್ರೆಯಲ್ಲಿ ನರಳುವುದು ಕಂಡು ನಾನು
ಒಂದು ತಿಳಿದುಕೊಂಡೆ ಪ್ರಕೃತಿಯಲ್ಲಿ ಹೆಣ್ಣು ಮತ್ತು ಮಣ್ಣು ಇದರ ಬೆಲೆ, ಮೌಲ್ಯ, ಎಷ್ಟು ಎಂದು. ಹೆಣ್ಣಿನ ಬಗ್ಗೆ ತಿಳಿದವರಿಗೆ ಮಾತ್ರ ಗೊತ್ತು ಅವಳ ಶಕ್ತಿ ಏನೂ ಎಂಬುದು. ಮಣ್ಣು, ಮಣ್ಣಿನ ಶಕ್ತಿ ಕೂಡ ಹಾಗೆ ಮಣ್ಣನ್ನು ಭಾವನಾತ್ಮಕವಾಗಿ ಪ್ರೀತಿಸುವ ಅದರ ಒಡಲನ್ನು ಪ್ರೇಮದಿಂದ, ಗೌರವದಿಂದ ಉತ್ತು ಬಿತ್ತಿ ಅದರಿಂದ ಬರುವ ಬೆಳೆ ತೆಗೆಯುವವರಿಗೆ ಮಾತ್ರ ಗೊತ್ತು ಭೂಮಿ ತಾಯಿಯ ಶಕ್ತಿ!!!!! ಮಣ್ಣನ್ನು ಅಪಮಾನಿಸಿ ಪ್ರಕೃತಿಯನ್ನು ನಾನ ವಿಧವಾಗಿ ಹಾಳು ಮಾಡಿ,ಭೋಗದ ವಸ್ತುವನ್ನಾಗಿ ಮಾಡಿಕೊಂಡು ರಾಸಾಯನಿಕ ಗೊಬ್ಬರ ಹಾಕಿ ಅದರ ಒಡಲನ್ನು ಹಾಳು ಮಾಡಿದರೆ ಅದರ ಫಲವನ್ನು ನಾವು ತಿನ್ನದೇ ಇರುವುದಿಲ್ಲ.!!!!!!
ಅದೇ ರೀತಿ ಹೆಣ್ಣನ್ನು ಪೂಜಿಸಿ ಪ್ರೇಮದಿಂದ ಗೌರವದಿಂದ ಒಲಿಸಿಕೊಂಡು ಬೀಜ ಬಿತ್ತದೆ ಹೆಣ್ಣಿಗೆ ಕೆಣಕಿ ಅವಳನ್ನು ಅಪಮಾನಿಸಿ, ಅವಳ ಶೀಲ ಎನ್ನುವ ನೈಸರ್ಗಿಕವಾದ ಅವಳ ಸೊತ್ತನ್ನು ಹಾಳು ಮಾಡಿ, ಅವಳನ್ನು ಭೋಗದ ವಸ್ತುವನ್ನಾಗಿ ಮಾಡಿಕೊಂಡು ಅವಳ ಕಣ್ಣು ಎಂಬ ಒಡಲಿನಿಂದ ಜಾರಿದ ಮುತ್ತಿನ ಮಳೆಯಂತೆ ಸುರಿಸಿದ ಕಣ್ಣೀರಿನ ಶಾಪದ ಫಲವನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ………..!!! ಕೆಲವರಿಗೆ ಬೇಗನೇ ಫಲ ಸಿಗಬಹುದು ಕೆಲವರಿಗೆ ಅವರ ಇಳಿಸಂಜೆಯಲ್ಲಿ ಅದರ ಫಲ ಸಿಗಬಹುದು……ಆದರೆ ತಿನ್ನದೇ ಇಲ್ಲಿಂದ ಖಂಡಿತಾ ಹೋಗುವುದಿಲ್ಲ.ಸ್ವರ್ಗ ನರಕ ಬೇರೆ ಎಲ್ಲೂ ಇಲ್ಲ. ಈ ಸುಂದರ ಭೂಮಿಯಲ್ಲೇ ಇದೆ ಇದು ನೂರಕ್ಕೆ ನೂರು ಸತ್ಯ!!!!!!!!
(ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ