ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇದ್ದು ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸಿ ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬಾಡಿಗೆಗೆ ಮನೆ ಮಾಡುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂಬ ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ನಂತರ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಪರಸ್ಪರ ಪ್ರೀತಿಸುತ್ತಾರೆ……. ಪದ್ಮಜಾಳಿಗೆ ಭವಾನಿ ನೀಡಿದ ಡೈರಿ ನೆನಪಾಗಿ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ. ಉಡುಪಿಯಲ್ಲಿ ರಮಣಿಯ ಗಂಡನಿಗೆ ಹುಶಾರ್ ಇಲ್ಲ ಎಂದು ಗೊತ್ತಾಗಿ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಅಲ್ಲಿ ಪವನ್ ಮತ್ತು ಆರತಿ ಪರಸ್ಪರರನ್ನು ಅರಿತುಕೊಳ್ಳಲು ಪ್ರೀತಿಯನ್ನು ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಪವನ್ ಮತ್ತು ಆರತಿ ಉಡುಪಿಗೆ ಸಂಜೀವರಿಗೆ ಔಷಧಿ ತರಲು ಹೋಗುತ್ತಾರೆ …ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳುತ್ತಾನೆ…. ಸಂಜೀವರ ಮನೆ ಪಕ್ಕ ಉತ್ತರ ಕರ್ನಾಟಕದ ಇಬ್ಬರು ಮಧ್ಯವಯಸ್ಕ ಗಂಡಸರು ಬಾಡಿಗೆಗೆ ಇದ್ದರು ಇವರಲ್ಲಿ ಸಂಜೀವರಿಗೆ ಗೆಳೆತನ ಬೆಳೆದು ತಾನು ಗ್ರಂಥಾಲಯದಲ್ಲಿರುವ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳಿ ಅವಳನ್ನು ತೋರಿಸುತ್ತಾನೆ…. ಇವರಿಬ್ಬರೂ ಸಂಜೀವರನು ಮೋಸದಿಂದ ಅಲ್ಕೋಹಾಲ್ ಕುಡಿಸಿ ತಾವು ಸೇರಿಕೊಂಡು ಸಂಜೀವ ಪ್ರೀತಿಸುತ್ತಿರುವ ಆ ಹುಡುಗಿಯನ್ನು ಮೋಸದಿಂದ ಅತ್ಯಾಚಾರ ಮಾಡುತ್ತಾರೆ…..ಮರುದಿನ ಸಂಜೀವ ಏಳುವ ಮುನ್ನವೇ ಅವರಿಬ್ಬರೂ ಊರಿಗೆ ಎಂದು ಹೋಗಿ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಸೇರಿಸಿರುತ್ತಾರೆ….. ಸಂಜೀವ ಗ್ರಂಥಾಲಯಕ್ಕೆ ಹೋದಾಗ ಅಲ್ಲಿ ಆ ಹುಡುಗಿ ಇರುವುದಿಲ್ಲ……..
ಅಂತರಾಳ – ಭಾಗ 33
ಅಂತೂ ಇಂತೂ ಅಪ್ಪ ಎರಡು ವಾರ ಅದ ಮೇಲೆ ಡಿಸ್ಚಾರ್ಜ್ ಆಗಿದ್ದರು…. ನಾನು ಎನಿಸಿದಂತೆ ಗ್ರಂಥಾಲಯಕ್ಕೆ ಹೋದೆ…. ಅವಳು ಕುಳಿತುಕೊಳ್ಳುವ ಜಾಗದಲ್ಲಿ ಬೇರೆ ಹೆಣ್ಣು ಕುಳಿತಿದ್ದಳು…… !!!! ಒಮ್ಮೆ ಎದೆ ಡಬ್ ಡಬ್ ಆಗಲು ಶುರುವಾಯಿತು ಎನಾದರೂ ಜೀವಕ್ಕೆ ಅಪಾಯ ಆಗಿದೆಯಾ ಎಂದು ಇಡೀ ಶರೀರ ಕಂಪಿಸುತ್ತಿತ್ತು….. ಸಾವರಿಸಿಕೊಂಡು ಮೊದಲು ಇದ್ದ ಗ್ರಂಥ ಪಾಲಕಿ ಎಲ್ಲಿ ಎಂದು ಕೇಳಿದಾಗ ನನ್ನನು ಒಮ್ಮೆ ದೀರ್ಘವಾಗಿ ನೋಡಿ ಅವರು ಕೆಲಸ ಬಿಟ್ಟಿದ್ದಾರೆ ಎಂದು ಹೇಳಿದಳು…. ಅಷ್ಟಕ್ಕೆ ಸುಮ್ಮನಿರದೆ ಯಾಕೆ ಕೆಲಸ ಬಿಟ್ಟಿದ್ದಾರೆ ಎಂದು ಕೇಳಿದೆ. ಈಗ ಮಾತ್ರ ನನ್ನನು ಸುಟ್ಟು ಬೂದಿ ಮಾಡುವ ಹಾಗೆ ನೋಡುತ್ತಾ ಮದುವೆ ಆಯಿತು ಎಂದು ಇನ್ನೂ ಏನೇನೋ ಕೇಳಬೇಡ ಎನ್ನುವಂತೆ ಅಲ್ಲಿಂದ ಎದ್ದು ಆಚೆ ನಡೆದಳು
ದುರ್ನಾತ ತೆಗೆದುಕೊಂಡಂತೆ ಬಂದ ದಾರಿಗೆ ಸುಂಕ ಇಲ್ಲ ಎಂದು ಹಿಂದೆ ಬಂದೆ…. ಯಾರಲ್ಲಿ ಕೇಳುವುದು ಇವಳು ಹೇಳಿರುವುದು ಸತ್ಯವೇ? ಅಥವಾ ಸುಳ್ಳು ಆಗಿರಬಹುದೇ ಹೀಗೆ ನೂರಾರು ಯೋಚನೆಗಳು…. ಯಾರಲ್ಲಿ ಮಾತನಾಡಲು ಎಲ್ಲೂ ಹೋಗಲು ಊಟ ಮಾಡಲು ಇಷ್ಟ ಇರಲಿಲ್ಲ…. ಅಪ್ಪ ಹುಶಾರ್ ಇಲ್ಲದೆ ಇರುವುದರಿಂದ ನಾನೇ ತೋಟದ ಕೆಲಸಕ್ಕೆ ಹೋಗಬೇಕಿತ್ತು….. ಅಮ್ಮ ಈ ಮಧ್ಯೆ ನೀನು ನನ್ನ ಬಳಿ ಏನೋ ಹೇಳಲು ಇದೆ ಎಂದು ಹೇಳಿದ್ದು ನೀನು ಹೇಳಲಿಲ್ಲ ಎಂದಾಗ ಎನೂ ಹೇಳಬೇಕು ಎಂಬುದೇ ಹೊಳೆಯಲಿಲ್ಲ…….ಆ ಹುಡುಗಿ ಅಲ್ಲಿ ಇರುತ್ತಿದ್ದರೆ ಅಮ್ಮನಲ್ಲಿ ಹೇಳಿ ಮಾತುಕತೆ ನಡೆಸಿ ಮದುವೆ ಆಗಬಹುದಿತ್ತು. ಆದರೆ ಅವಳೇ ಇಲ್ಲ ಎಂದ ಮೇಲೆ ಹೇಗೆ ವಿಷಯ ಹೇಳುವುದು…. ರಾತ್ರಿ ಮಲಗಿದರೆ ನಾನು ಮಾಡಿದ ತಪ್ಪು ನನ್ನನು ಚುಚ್ಚುತ್ತಿತ್ತು…..
ಅಣ್ಣ ಸ್ವಲ್ಪ ಹುಶಾರ್ ಅದ ಮೇಲೆ ತಿರುಗಿ ಕೆಲಸಕ್ಕಾಗಿ ಬೊಂಬಾಯಿಗೆ ಹೋದ… ಅಪ್ಪ ಮುಂಚಿನ ಹಾಗೆ ಆಗಲು ಸಾಧ್ಯ ಆಗಲಿಲ್ಲ…. ಅಮ್ಮ ನೀನಾದರೂ ಮದುವೆ ಆಗು ಮನೆಯಲ್ಲಿ ಹೆಣ್ಣು ಅಂತ ಇದ್ದರೆ ಮನೆಗೊಂದು ಲಕ್ಷಣ ಇರುತ್ತದೆ ನನಗೂ ಅಡುಗೆ ಕೆಲಸ ಹಾಲು ಕರೆಯುವುದು ಕಷ್ಟ ಆಗುತ್ತದೆ ಎಂದು ದಿನಾ ಹೇಳುತ್ತಿದ್ದರು…. ನನಗೆ ಜೀವ ಮಾನದಲ್ಲಿ ಮದುವೆಯೇ ಬೇಡ ಎಂದು ಅನಿಸುತ್ತಿತ್ತು…… ನಾನು ಮಾನಸಿಕವಾಗಿ ತುಂಬಾ ಅಲೋಚನೆ ಮಾಡಿ ಮಾಡಿ ಒಂದು ರೀತಿಯಲ್ಲಿ ರೋಗಿಯ ಹಾಗೆ ಅದೆ ಎಂದರೆ ತಪ್ಪಾಗಲಾರದು..
ದಿನಗಳು ಯಾರಿಗೂ ನಿಲ್ಲುವುದಿಲ್ಲ. ಹಾಗೆ ಇದು ನಡೆದು ಒಂದೂವರೆ ವರುಷವೇ ಕಳೆಯಿತು.
ಈ ಮಧ್ಯೆ ಒಂದು ಘಟನೆ ನಡೆಯಿತು ನಮ್ಮ ಊರಿನ ಯುವಕ ಮಂಡಲ ಮತ್ತು ಯುವತಿ ಮಂಡಲಕ್ಕೆ ಸೇವಾ ಸಮಾಜದ ಕೆಲವರು ಬಂದು ಯುವ ಜನರ ಸಬಲೀಕರಣದ ಬಗ್ಗೆ ಒಂದು ದಿನದ ಕಾರ್ಯಾಗಾರ ಮಾಡಿದರು.. ನಮ್ಮ ಊರಿನ ಯುವಕ ಮಂಡಲದ ಅಧ್ಯಕ್ಷ ನನ್ನ ಆತ್ಮೀಯ ಗೆಳೆಯ ಅವನ ಒತ್ತಾಯದ ಮೇರೆಗೆ ಆ ಕಾರ್ಯಕ್ರಮಕ್ಕೆ ನಾನು ಹೋದೆ…. ಅಲ್ಲಿ ಹಲವು ವ್ಯಕ್ತಿಗಳು ವಿವಿಧ ರೀತಿಯ ಮಾಹಿತಿ ನೀಡಿದರು ಕೊನೆಯಲ್ಲಿ ಶಂಕರ ಮೂರ್ತಿ ಎನ್ನುವ ಯುವಕ ಮಹಿಳಾ ಸಶಕ್ತೀಕರಣದ ವಿಷಯ ಮಾತನಾಡುತ್ತಾ ಒಬ್ಬ ಮಹಿಳೆಯನ್ನು ಸ್ವಾವಲಂಬಿ ಬದುಕು ಸಾಗಿಸಲು ಬಿಡುವುದಿಲ್ಲ. ಕೆಲವು ಕಾಮುಕ ಪುರುಷರು ಒಂದೇ ಹೆಣ್ಣನ್ನು ಮೂರು ನಾಲ್ಕು ಜನ ಸೇರಿ ಅತ್ಯಾಚಾರ ಮಾಡುತ್ತಾರೆ ಎಂದು ಹೇಳಿ ಉದಾಹರಣೆಗೆ ಗ್ರಂಥಾಲಯದಲ್ಲಿ ಒಬ್ಬ ಬಡ ಹೆಣ್ಣು ಮಗಳು ಕೆಲಸ ಮಾಡುತ್ತಿದ್ದಳು.. ಒಂದು ದಿನ ಆ ಹೆಣ್ಣನ್ನು ಮೂರು ಜನ ಸೇರಿ ಅತ್ಯಾಚಾರ ಮಾಡಿ ಅದರಿಂದ ಅವಳು ಗರ್ಭಿಣಿ ಆಗಿದ್ದು ಇದನ್ನು ತಿಳಿದ ಹುಡುಗಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದಾಳೆ…. ಒಬ್ಬ ಗಂಡಸು ಅವಳನ್ನು ಇದರಿಂದ ಪಾರಾಗಲು ಸಹಾಯ ಮಾಡುತ್ತಾನೆ.. ಅವಳು ಹೆಣ್ಣು ಮಗುವನ್ನು ಹೆರಿಗೆ ಆಗಿದ್ದಾಳೆ ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು… ನನಗೆ ಇದು ನಾವು ಮಾಡಿದ ಅನ್ಯಾಯವೇ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ ಅಲ್ಲಿ ತನಕ ನಿರ್ಲಿಪ್ತ ಭಾವದಿಂದ ಇದ್ದ ನಾನು ಒಮ್ಮೆಲೇ ಜೀವ ಬಂದ ಹಾಗೆ ಅದೆ ಮನಸ್ಸು ತುಂಬಾನೇ ಅಳುತ್ತಿತ್ತು…..ಆ ಮಗು ನನ್ನದು ಎಂದು ಮನಸ್ಸು ಚಿರಿ ಚಿರಿ ಹೇಳುತ್ತಿತ್ತು..ಪಾಪ ಆ ಹೆಣ್ಣಿಗೆ ಯಾವ ಗತಿ ಬಂತು ಎಂದು ಮಮ್ಮಲ ಮರುಗಿದೆ …… ಮಾಹಿತಿ ಕಾರ್ಯಕ್ರಮ ಅದ ಮೇಲೆ ಶಂಕರ್ ಅವರನ್ನು ಹುಡುಕಿಕೊಂಡು ಹೋಗಿ ಮಾತನಾಡಿದೆ ……. ಆ ಹೆಣ್ಣು ಎಲ್ಲಿಗೆ ಹೋಗಿದ್ದಾಳೆ ಎಂದು ಗೊತ್ತಿಲ್ಲ…..ಮಗುವಿಗೆ ಐದು ತಿಂಗಳು ಆಗಿದೆ.ಮದುವೆ ಆಗಿಲ್ಲ ಎಂದು ಹೇಳಿ ಇನ್ನೂ ನನ್ನಲ್ಲಿ ಕೇಳಬೇಡಿ ಎಂದು ಅವರು ಹೋದರು. ಮನೆಗೆ ಬಂದ ಮೇಲೆ ಅವಳು ನನಗೆ ಸಿಕ್ಕಿದಷ್ಟು ಸಂತೋಷ ಪಟ್ಟೆ… ಪುನಃ ಅವರ ಬಳಿ ಹೋಗಿ ಮಗುವಿನ ಹೆಸರು ಕೇಳಿ ಅವಳ ವಿಳಾಸ ಪತ್ತೆ ಹಚ್ಚಿ ಅವಳನ್ನು ಮನೆಗೆ ಕರೆದುಕೊಂಡು ಬರಬೇಕು ಅವಳು ಇವರಿಗೆ ಎಲ್ಲಿ ಸಿಕ್ಕಿದಳು ಎಂದು ಕೇಳಬೇಕು…. ಅವಳು ಮಗು ಮನೆಗೆ ಬರುತ್ತಾರೆ ಎಂಬ ಸಂತೋಷದಿಂದ ನಿದ್ದೆ ಮಾಡಿದೆ…..
ಮೂರು ದಿನ ಮನೆಯಲ್ಲಿ ತುಂಬಾ ಕೆಲಸ ಇದ್ದುದರಿಂದ ಅವರ ಬಳಿ ಹೋಗಲು ಸಾಧ್ಯವೇ ಆಗಲಿಲ್ಲ…
ನಾಲ್ಕನೇ ದಿನ ಅವರ ಆಫೀಸ್ ಹುಡುಕಿಕೊಂಡು ಹೋದೆ…. ಆಫೀಸ್ ನಲ್ಲಿ ಶಂಕರ್ ಎಲ್ಲಿ ಎಂದು ಕೇಳಿದೆ. ಅವರು ಕೆಲಸ ಬಿಟ್ಟಿದ್ದಾರೆ ಎಂದು ಹೇಳಿದರು ನನ್ನ ಕಿವಿಯನ್ನು ನಾನೇ ನಂಬಲಾಗಲಿಲ್ಲ….. ಪುನಃ ಪುನಃ ಕೇಳಿದೆ… ಅವರ ಮನೆಯ ವಿಳಾಸ ಕೇಳಿದಾಗ ಅವರು ನಿನ್ನೆ ಬೊಂಬಾಯಿಗೆ ಹೋಗಿದ್ದಾರೆ ಇನ್ನೂ ಕೆಲಸಕ್ಕೆ ಬರುವುದಿಲ್ಲ ಎಂದರು….ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹೇಳುವುದು ಇದಕ್ಕೆ ಇರಬೇಕು…… ಪಾಪಿ ಚಿರಾಯು ಎನ್ನುತ್ತಾರೆ ಅಲ್ವಾ ಹಾಗೆ ಆಯಿತು…… ನನ್ನ ಅವಸ್ಥೆ… ಆದರೆ ಮಗು ಹಿಡಿದುಕೊಂಡು ಅವಳ ಪರಿಸ್ಥಿತಿ ಹೇಗಿರಬಹುದು ಅವಳು ಎನೂ ಮಾಡುತ್ತೀರಾ ಬಹುದು ಎಂದು ಮನಸ್ಸು ಹೃದಯ ತುಂಬಾನೇ ಅಲ್ಲೋಲಕಲ್ಲೋಲ ಆಯಿತು… ಹೋಗುವಾಗ ಇದ್ದ ಸಂತೋಷ ಬರುವಾಗ ಇರಲಿಲ್ಲ… ನಾನು ಅದರ ನಂತರ ಹುಚ್ಚರ ಹಾಗೆ ಪೇಟೆ ಹಳ್ಳಿ ಎಂದು ನೋಡದೆ ಮೂರು ನಾಲ್ಕು ತಿಂಗಳು ಹುಡುಕಿದರೂ ಅವಳ ಮಗುವಿನ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ……
ಎನೂ ಮಾಡಬೇಕು ಎಂದೇ ಹೊಳೆಯಲಿಲ್ಲ.. ನನ್ನ ಸಣ್ಣ ಗೆಳತನ ಎಂಬ ಸಹವಾಸ ದೋಷದಿಂದ ನನ್ನ ಬದುಕೇ ಸರ್ವ ನಾಶವಾಗಿತ್ತು…….!!!!!!
ಇದಾಗಿ ಎಂಟು ತಿಂಗಳ ನಂತರ ಅಮ್ಮನೂ ಹುಶಾರ್ ಇಲ್ಲದೆ ಮಲಗುವಂತೆ ಆಯಿತು…. ನಾನು ಒಬ್ಬನಿಂದ ಅಪ್ಪನ ಆರೈಕೆ ಅಮ್ಮನ ಅಗತ್ಯಗಳನ್ನು ಪೂರೈಸಲು, ಮನೆಕೆಲಸ, ತೋಟದ ಕೆಲಸ ಹೀಗೆ ದೇಹವು ಜರ್ಜರಿತ ವಾಯಿತು…… ಮನಸ್ಸು ಈ ಮೊದಲೇ ಸುಟ್ಟ ಬಾಳೆ ಎಲೆಯಂತೆ ಆಗಿತ್ತು….
ಎಲ್ಲರ ಒತ್ತಾಯ ಹಾಗೂ ಅನಿವಾರ್ಯ ಕಾರಣದಿಂದ ರಮಣಿಯನು ಮದುವೆ ಅದೆ. ಮದುವೆ ಆದ ಮೇಲೆ ರಮಣಿ ಬಳಿ ಈ ವಿಷಯ ಹೇಳಬೇಕು ಎಂದು ತುಂಬಾ ಪ್ರಯತ್ನ ಪಟ್ಟೆ ಆದರೆ ಎಲ್ಲಿ ನನ್ನನು ಒಂಟಿ ಮಾಡಿ ಹೊರಟು ಹೋಗುತ್ತಾಳೊ ಎಂಬ ಭಯದಿಂದ ನಾನು ಅವಳ ಬಳಿ ಹೇಳಲಿಲ್ಲ…..
ಮದುವೆ ಆಗಿ ಎರಡು ವರ್ಷಗಳ ಮೇಲೆ ನಮಗೆ ಹೆಣ್ಣು ಮಗು ಹುಟ್ಟಿತು….ಆಗ ಕೂಡ ನಾನು ನನ್ನ ಮೊದಲಿನ ಮಗುವನ್ನು ಎನಿಸುತಿತ್ತು …ಆ ಮಗು ಹೆಣ್ಣು ಎಂದು ನನಗೆ ಆ ಶಂಕರ್ ಎನ್ನುವ ವ್ಯಕ್ತಿ ಹೇಳಿದ್ದು ನೆನಪಿದೆ…. ಯಾವಾಗ ನನ್ನ ರಮಣಿಯ ಮಗಳು ಸ್ಪೂರ್ತಿ ಯನು ಅತ್ಯಾಚಾರ ಮಾಡಿ ಕೊಂದು ಹಾಕಿದರೊ ಅದರ ನಂತರ ನಾನು ಮಾನಸಿಕ ರೋಗಿಯೇ ಆದೆ… ಸ್ವರ್ಗ ನರಕ ಎಂಬುದು ಬೇರೆ ಎಲ್ಲೂ ಇಲ್ಲ ಅದು ಈ ಭೂಮಿ ಮೇಲೆಯೇ ಇದೆ ಎಂಬುದು ತಿಳಿಯಿತು…. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ ಹೆಣ್ಣನ್ನು ಕಣ್ಣೀರು ಹಾಕಿಸಿದರೆ ಅದರ ಹತ್ತು ಪಟ್ಟು ಹೆಚ್ಚು ಕಣ್ಣೀರು ಪುರುಷ ಹಾಕುತ್ತಾನೆ…. ಹೂವನ್ನು ಗಿಡದಿಂದ ಕಿತ್ತು ನಮಗೆ ಶಕ್ತಿ ಇದೆ ಎಂದು ಅದನು ಹಿಚುಕಿದರೆ ಕಾಲ ಚಕ್ರ ಉರುಳಿ ನಾವು ಬೇರೆಯವರಿಂದ ನರಳುವಂತೆ ಆಗುತ್ತದೆ…. ಹುಟ್ಟು ಸಾವು ಎಂಬುದು ಬೇಕಾ ಬೇಡ್ವಾ ಎಂದು ಯಾರಲ್ಲೂ ಕೇಳದೆ ಬರುತ್ತದೆ.. ಅದರ ಮದ್ಯೆ ಹೆಣ್ಣು ಹೊನ್ನು ಮಣ್ಣು ಎಂದು ದ್ವೇಷ ಅಸೂಯೆ, ಮತ್ಸರ, ಆಸೆ ಬೇಕಾ?
“ಅಹಂಕಾರ ಎಂಬುದು ಮಾನಸಿಕ ಹಿರಿತನವನ್ನು ಕುಂಠಿತಗೊಳಿಸುತ್ತದೆ. ಅದು ವ್ಯಕ್ತಿಯ ಪ್ರಗತಿಗೆ ಸಾಧನವಾಗಲಾರದು”
ಎಲ್ಲವೂ ತಪ್ಪು ಮಾಡಿದ ಮೇಲೆ ನಾವು ಪ್ರಪಾತಕ್ಕೆ ಬಿದ್ದ ಮೇಲೆ ತಿಳಿಯುತ್ತದೆ….
ಎಲ್ಲವೂ ಹೌದು ಆದರೆ ಪ್ರತಿ ದಿನ ನನಗೆ ಅನಿಸುವುದು ಒಂದೇ… ತಪ್ಪು ಮಾಡಿದವನು ಕಷ್ಟ ಅನುಭವಿಸುತ್ತಾನೆ.. ಆದರೆ ಏನೂ ತಪ್ಪು ಮಾಡದವರಿಗೆ ಯಾಕೆ ನಿಸರ್ಗ ಶಿಕ್ಷೆ ನೀಡುತ್ತದೆ… ಉದಾಹರಣೆಗೆ ನಾನು ತಪ್ಪು ಮಾಡಿದೆ ಅದಕ್ಕೆ ಪ್ರತಿಕಾರವಾಗಿ ನನ್ನ ಮಗಳು ಸ್ಪೂರ್ತಿಯನ್ನು ಯಾರೋ ಕೊಂದು ಹಾಕಿದರು. ಇಲ್ಲಿ ತಪ್ಪೆ ಮಾಡದ ಸ್ಪೂರ್ತಿಯ ತಾಯಿ ರಮಣಿ ಗೆ ಯಾಕೆ ಈ ಶಿಕ್ಷೆ….ಈ ಪ್ರಶ್ನೆ ಯಾವಾಗಲೂ ನನ್ನನ್ನು ಕಾಡುತ್ತಿದೆ???
ನಿನ್ನನು ನೋಡಿದ ಮೇಲೆ ರಮಣಿಗೂ ಏನೋ ಅಕ್ಕರೆ ನನಗಂತೂ ನನ್ನ ಮನಸ್ಸಿನ ಭಾವನೆಗಳನ್ನ ನೀನು ಅರ್ಥ ಮಾಡಿಕೊಂಡು ನನ್ನನು ಸಂತೈಸುವಿ ಎನ್ನುವ ಭಾವ ಕಾಡುತ್ತಿದೆ ಮಗಳೇ….. ನಾನು ಮಾಡಿದ ಕ್ಷಮಿಸಲಾರದ ತಪ್ಪು ನನ್ನ ಆಗಿನ ತೊಳಲಾಟವನ್ನು ಅನುಭವಿಸಿದ ನೋವುಗಳು ಎಲ್ಲವನ್ನೂ ಬಿಡಿ ಬಿಡಿಯಾಗಿ ನಿನ್ನಲ್ಲಿ ಹೇಳಿದೆ….. ಈಗ ತಲೆಯಲ್ಲಿ ಇಷ್ಟು ದಿನ ಹೊತ್ತು ಕೊಂಡು ದೊಡ್ಡ ಭಾರವನ್ನು ಕೆಳಕ್ಕೆ ಇಳಿಸಿ ಮನಸ್ಸು ಹೃದಯ ಎಲ್ಲವೂ ನಿರ್ಮಲವಾಯಿತು ಎಂದು ಸಂಜೀವ ತಮ್ಮ ದೀರ್ಘವಾದ ಮಾತನ್ನು ಮುಗಿಸಿದರು..
ಶಮಿಕಾಳಿಗೆ ಅಮ್ಮ ನ ಡೈರಿ ಓದಿದ ಪರಿಣಾಮ ಇವರು ಹೇಳಿದ ಎಲ್ಲವನ್ನೂ ಕೇಳಿ ಈ ವ್ಯಕ್ತಿ ಬೇರೆ ಯಾರೂ ಅಲ್ಲ ನನ್ನ ಹುಟ್ಟಿಗೆ ಕಾರಣ ಆದ ಅಪ್ಪ ಎಂದು ಮನವರಿಕೆ ಆಯಿತು…. ಸಂತೋಷ ಪಡಬೇಕೆ !!!!! ಅಥವಾ ಕೋಪಗೊಳ್ಳಬೇಕೆ ??? ಯಾವೊಂದು ಭಾವವು ತೋರ್ಪಡಿಸದೆ ಅದುಮಿಟ್ಟುಕೊಂಡು
“ಕಳೆದು ಹೋದ ಜೀವನವನ್ನು ನೆನಪಿಸಿಕೊಂಡು ಕೊರಗಬೇಡಿ, ನಿನ್ನೆಯ ನೋವು ಇಂದಿನ ಅಮೂಲ್ಯ ಸಂತೋಷವನ್ನು ಹಾಳುಗೆಡವಬಹುದು”
ಎಂದು ಹೇಳಿ ದೀರ್ಘವಾದ ಉಸಿರನ್ನು ಬಿಟ್ಟಳು ಆಗ ಸಂಜೀವರು ನಿನ್ನ ಅಮ್ಮ ಅಪ್ಪ ನ ಹೆಸರೇನು ಮಗಳೇ ಎಂದರು!!!!!
(ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ