December 3, 2024
Antarala

ಅಂತರಾಳ ಭಾಗ-34

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇದ್ದು ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸಿ ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬಾಡಿಗೆಗೆ ಮನೆ ಮಾಡುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂಬ ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ನಂತರ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಪರಸ್ಪರ ಪ್ರೀತಿಸುತ್ತಾರೆ……. ಪದ್ಮಜಾಳಿಗೆ ಭವಾನಿ ನೀಡಿದ ಡೈರಿ ನೆನಪಾಗಿ ಓದಿ ಮಗ ಪವನ್ ಗೂ ಓದಲು ನೀಡುತ್ತಾರೆ. ಉಡುಪಿಯಲ್ಲಿ ರಮಣಿಯ ಗಂಡನಿಗೆ ಹುಶಾರ್ ಇಲ್ಲ ಎಂದು ಗೊತ್ತಾಗಿ ಶಮಿಕಾ, ಆರತಿ ಮತ್ತು ಪವನ್ ಅಲ್ಲಿಗೆ ನೋಡಲು ಹೋಗುತ್ತಾರೆ.. ಪವನ್ ಮತ್ತು ಆರತಿ ಉಡುಪಿಗೆ ಹೋಗುತ್ತಾರೆ …ರಮಣಿಯ ಗಂಡ ಸಂಜೀವ ಶಮಿಕಾಳ ಬಳಿ ತಾನು 22 ವರುಷದ ಹಿಂದೆ ಮಾಡಿದ ತಪ್ಪನು ಹೇಳುತ್ತಾನೆ…. ಸಂಜೀವರ ಮನೆ ಪಕ್ಕ ಉತ್ತರ ಕರ್ನಾಟಕದ ಇಬ್ಬರು ಮಧ್ಯವಯಸ್ಕ ಗಂಡಸರು ಬಾಡಿಗೆಗೆ ಇದ್ದರು ಇವರಲ್ಲಿ ಸಂಜೀವರಿಗೆ ಗೆಳೆತನ ಬೆಳೆದು ತಾನು ಗ್ರಂಥಾಲಯದಲ್ಲಿರುವ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳಿ ಅವಳನ್ನು ತೋರಿಸುತ್ತಾನೆ…. ಇವರಿಬ್ಬರೂ ಸಂಜೀವರನು ಮೋಸದಿಂದ ಅಲ್ಕೋಹಾಲ್ ಕುಡಿಸಿ ತಾವು ಸೇರಿಕೊಂಡು ಸಂಜೀವ ಪ್ರೀತಿಸುತ್ತಿರುವ ಆ ಹುಡುಗಿಯನ್ನು ಮೋಸದಿಂದ ಅತ್ಯಾಚಾರ ಮಾಡುತ್ತಾರೆ. ಮರುದಿನ ಸಂಜೀವ ಏಳುವ ಮುನ್ನವೇ ಅವರಿಬ್ಬರೂ ಊರಿಗೆ ಎಂದು ಹೋಗಿ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಸೇರಿಸಿರುತ್ತಾರೆ….. ಸಂಜೀವ ಗ್ರಂಥಾಲಯಕ್ಕೆ ಹೋದಾಗ ಅಲ್ಲಿ ಆ ಹುಡುಗಿ ಇರುವುದಿಲ್ಲ. ಸಂಜೀವನಿಗೆ ಮರುದಿನ ತುರ್ತು ತನ್ನ ಅಣ್ಣನನ್ನು ನೋಡಲು ಬೊಂಬಾಯಿಗೆ ಹೋಗಿ ಬೇಗ ಬರಲು ಸಾಧ್ಯ ಆಗದೆ ಎರಡು ತಿಂಗಳ ನಂತರ ಬರುವಾಗ ಗ್ರಂಥಾಲಯದಲ್ಲಿ ಹುಡುಗಿ ಇರುವುದಿಲ್ಲ… ಹುಡುಕಲು ಪ್ರಯತ್ನಿಸಿ ಸೋತು ಬೇರೆ ಹೆಣ್ಣು ರಮಣಿಯನು ಮದುವೆ ಆಗುತ್ತಾನೆ.ಕೊನೆಗೆ ಶಮಿಕಾಳಿಗೆ ತನ್ನ ತಾಯಿಯನ್ನು ಅತ್ಯಾಚಾರ ಮಾಡಿ ತನ್ನ ಹುಟ್ಟಿಗೆ ಕಾರಣ ಆದ ವ್ಯಕ್ತಿ ಈತನೇ ಎಂಬುದು ತಿಳಿಯುತ್ತದೆ…..

ಅಂತರಾಳ ಭಾಗ-34

 

“ಕನಸುಗಳ ಸಾಕಾರಕ್ಕಾಗಿ ಮನ ನೆಟ್ಟವನಿಗೆ ದಾರಿಯಲ್ಲಿನ ಕಲ್ಲು ಮುಳ್ಳುಗಳು ಅಸಹನೀಯವೆನಿಸುವುದಿಲ್ಲ. ಆದರೆ ಕಾಲಿಗೆ ನೆಟ್ಟ ಚಿಕ್ಕ ಮುಳ್ಳುಗಳನ್ನೇ ಅತಿ ದೊಡ್ಡ ತೊಂದರೆಯೆಂದು ಭ್ರಮಿಸುವವನು ಒಂದು ಹೆಜ್ಜೆಯೂ ಮುಂದೆ ಹೋಗುವುದಿಲ್ಲ”
ಅಪ್ಪ ಯಾರು ಎಂದು ಭವಾನಿ ಹೇಳಿಲ್ಲ ಎಂದು ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡ ಶಮಿಕಾ, ಇಷ್ಟು ದಿನ ಅಪ್ಪನಿಗಾಗಿ ಹಪಹಪಿಸುತ್ತಿದ ಶಮಿಕಾ ಈ ಮನುಷ್ಯನೇ ತನ್ನ ಅಪ್ಪ ಎಂದು ಗೊತ್ತಾದ ಮರುಕ್ಷಣ ಒಂದು ರೀತಿಯ ಭ್ರಾಂತಿ ಗೆ ಒಳಗಾದದು ಮಾತ್ರವಲ್ಲ ಅಪ್ಪನೆಂಬ ಈ ವ್ಯಕ್ತಿಯ ಎಲ್ಲಾ ಗೋಳಿನ ಕಥೆ ಕೇಳಿಯೂ ಹೇವರಿಕೆ ಬಂದುದು ಅವಳ ಗಮನಕ್ಕೆ ಬಂತು!!!! ಯಾಕೆ ಹೀಗಾಯಿತು ಅಪ್ಪನೇ ನನ್ನ ಬಾಳು ಎಂದು ಕನಸು ಕಾಣುತ್ತಿದ್ದ ನಾನು ಈ ವ್ಯಕ್ತಿಯೇ ತನ್ನ ಅಪ್ಪ ಎಂದು ತಿಳಿದ ಮೇಲೆ ಮನಸ್ಸಿಗೆ ಕವಿದ ಬಂಧನ ಎಂಬ ಕಾರ್ಮೋಡ ಕರಗಿತು!!!!! ಒಂದು ವಸ್ತು ಅಥವಾ ಸಂಬಂಧಿತ ವ್ಯಕ್ತಿ ಮೇಲೆ ಅತಿಯಾದ ಪ್ರೀತಿ ಪ್ರೇಮ ಇಟ್ಟು ಪೂಜಿಸುತ್ತೇವೆ !!! ಅದು ನಮಗೆ ಸಿಗುವವರೆಗೆ ಮಾತ್ರನಾ……..!!!!!. ಸಿಕ್ಕಿದ ಮೇಲೆ ನಮಗೆ ತಿಳಿದು ಬಿಡುತ್ತದೆ….ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ಗಾದೆಯೇ ಇದೆ ಅಲ್ವಾ??
ವಸ್ತು ಅಥವಾ ವ್ಯಕ್ತಿ ದೂರದಲ್ಲಿ ಇದ್ದಾಗ ಅದರ ನ್ಯೂನತೆಗಳು ಸಾಧಕ ಬಾಧಕಗಳನ್ನು ಅರಿಯದೆ ಬೇಕು ಎಂಬ ಹಪಾಹಪಿ ಇರುತ್ತದೆ. ಹತ್ತಿರ ಬಂದಾಗ ಮಾತ್ರ ಬೆಂಕಿ ಸುಡುತ್ತದೆ ಎಂದು ತಿಳಿಯುವುದು ಸಹಜ ಅಲ್ವಾ?

ಸಂಜೀವ ಪುನಃ ಮಗಳೇ ನಿನ್ನ ಅಪ್ಪ ಅಮ್ಮ ನ ಹೆಸರು ಏನೂ ಎಂದಾಗ ಶಮಿಕಾ ಯಾವ ಮುಖಭಾವವನ್ನು ತೊರ್ಪಡಿಸದೇ ಭಾರತಿ ಅಮ್ಮನ ಹೆಸರು ಅಪ್ಪನ ಹೆಸರು ರವಿ ಎಂದು ಸುಳ್ಳನ್ನು ಸಲೀಸಾಗಿ ಹೇಳಿದಳು .

ಅಮ್ಮನ ಹೆಸರು ಭವಾನಿ ಎಂದು ಹೇಳದೆ ಭಾರತಿ ಎಂದು ಹೇಳಿದ ಮೇಲೆ ‌ಶಮಿಕಾ “ಯಾವುದೇ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಲು ಅಡ್ಡದಾರಿಗಳಿರುವುದಿಲ್ಲ.ಅಂತೆಯೇ ಯಶಸ್ಸು ಕೂಡಾ ಸರಿಯಾದ ದಾರಿಯಲ್ಲಿ ಸ್ವಂತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ”ಎಂದು ಅಂದುಕೊಂಡಳು.

ರಮಣಿ ಇವರಿಬ್ಬರೂ ಇಷ್ಟು ಹೊತ್ತು ಮಾತನಾಡಿದ್ದು ಕೇಳಿದ ಮೇಲೆ ತನ್ನ ಗಂಡ ಮದುವೆ ಆಗುವ ಮುಂಚೆ ಏನೋ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಅಂದುಕೊಂಡಿದ್ದಳು.ಆದರೆ ಇಂತಹ ನೀಚ ಕೆಲಸ ಮಾಡಿದ್ದಾರೆ ಎಂದು ಎನಿಸಿರಲಿಲ್ಲ………….. ಅದಕ್ಕೆ ಇರಬೇಕು ನನ್ನ ಮಗಳನ್ನು ಇವರ ಕೆಟ್ಟ ಕೆಲಸದಿಂದ ಕಳೆದುಕೊಂಡೆ ಎಂದು ಪರಿತಪಿಸಿದಳು..
ಅಲ್ಲದೆ ಶಮಿಕಾ ಅವಳ ಅಮ್ಮನ ಹೆಸರು ಭವಾನಿ ಎಂದು ಹೇಳದೆ ಭಾರತಿ ಅಂತ ಯಾಕೆ ಸುಳ್ಳು ಹೇಳಿದಳು ಎಂಬುದು ರಮಣಿಯ ಮನಸಿನಲ್ಲಿ ಕೊರೆಯಲು ಶುರುವಾಯಿತು…. ಇನ್ನೂ ಇಲ್ಲೇ ನಿಂತರೆ ನನ್ನ ಬಟ್ಟೆ ಒಗೆಯುವ ಕೆಲಸ ಆಗುವುದಿಲ್ಲ ಎಂದು ತನ್ನ ಗಂಡನ ಕೆಟ್ಟ ಕೆಲಸದಿಂದ ಅನ್ಯಮಸ್ಕಳಾಗಿ ಹೊಳೆ ಬದಿಗೆ ನಡೆದಳು….

ಶಮಿಕಾಳ ಬಳಿ ತನ್ನ ಮನಸ್ಸಿನ ಭಾರವನ್ನು ಇಳಿಸಿ ಆಯಿತು ಎಂಬಂತೆ ಕಣ್ಣು ಮುಚ್ಚಿ ಮಲಗಿದರು ಸಂಜೀವ..
ಶಮಿಕಾಳಿಗೆ ರಮಣಿಯ ಮನೆಗೆ ಬರುವಾಗ ಇದ್ದ ಕಾತರ ಹುರುಪು ಉತ್ಸಾಹ ಮಾಯವಾಗಿ ಒಮ್ಮೆ ಮಂಗಳೂರಿಗೆ ಹೋಗಿ ಅಮ್ಮನ ಜೊತೆ ಇರಬೇಕು ಎಂದು ಮನಸ್ಸು ಹೃದಯ ತುಂಬಾನೇ ತುಡಿಯಿತು.

ಆಗ ನೆನಪಾಯಿತು ಆರತಿ ಮತ್ತು ಪವನ್ ಉಡುಪಿಗೆ ಜಾಷಧಿ ತರಲು ಹೋಗಿ ಇನ್ನೂ ಬಂದಿಲ್ಲ ಯಾಕೆ ಇಷ್ಟು ಹೊತ್ತು ಮಾಡಿದರು!!!

ಶಮಿಕಾ ಆರತಿ ಮತ್ತು ಪವನ್ ಗೆ ಪೋನ್ ಮಾಡುತ್ತೇನೆ ಎಂದು ಅಂದುಕೊಂಡವಳು ಮೊದಲು ಅಮ್ಮನಿಗೆ ಫೋನ್ ಮಾಡುತ್ತೇನೆ ಎಂದೆನಿಸಿ ಭವಾನಿಗೆ ಕಾಲ್ ಮಾಡಿದಳು…. ಅತ್ತ ಕಡೆಯಿಂದ ಭವಾನಿ ಹಲೋ ಎಂದಾಗ ಅಮ್ಮನಲ್ಲಿ ಪ್ರೀತಿ ಉಕ್ಕಿ ಬಂತು ಅಮ್ಮ ನನಗೆ ನಿಮ್ಮನ್ನು ತುಂಬಾ ಎನಿಸುತ್ತದೆ ಎಂದಳು ಶಮಿಕಾ… ನನಗೂ ತುಂಬಾ ನೆನಪು ಬರುತ್ತದೆ ಶಮಿಕಾ ನೀವು ನಾಳೆ ಬಂದು ಬಿಡಿ ಎಂದಾಗ ಸರಿ ಅಮ್ಮ ಖಂಡಿತಾ ನಾಳೆ ಬರುತ್ತೇವೆ ಎಂದು ಫೋನ್ ಇಟ್ಟಳು… ನಂತರ ಆರತಿಗೆ ಫೋನ್ ಮಾಡಿದಾಗ ಮನೆಗೆ ಹತ್ತಿರ ಆಗುತ್ತಿದ್ದೆವೆ ಎಂದಳು. ಅದರಂತೆ ಹತ್ತು ಹದಿನೈದು ನಿಮಿಷಗಳಲ್ಲಿ ಆರತಿ ಮತ್ತು ಪವನ್ ತುಂಬಾ ಸಂತೋಷ ಹಾಗೂ ಆನಂದದಿಂದ ಇಬ್ಬರು ಮಾತನಾಡುತ್ತಾ, ನಗುತ್ತಾ ಮನೆಗೆ ಬಂದರು.. ಆ ದಿನ ಹೇಗೋ ಕಳೆಯಿತು ಶಮಿಕಾ ಮತ್ತು ರಮಣಿ ಅನ್ಯಮಸ್ಕರಾಗಿ ಇದ್ದರೂ ಆರತಿ ಮತ್ತು ಪವನ್ ಅದನ್ನು ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ….
ಮರುದಿನ ಬೆಳಿಗ್ಗೆ ಬೇಗ ಶಮಿಕಾ, ಆರತಿ, ಪವನ್ ಮೂವರು ಮಂಗಳೂರಿಗೆ ಹೊರಟರು.. ರಮಣಿ ಹೆಚ್ಚು ಬೇಸರವೂ ಅಲ್ಲದೆ ಹೆಚ್ಚು ಸಂತೋಷವು ಇಲ್ಲದ ಸ್ಥಿತಿಯಲ್ಲಿ ಮೂವರನ್ನು ಕಳಿಸಿದಳು….

ಮಣ್ಣಿನಲ್ಲಿ ಬಿದ್ದ ಎಲ್ಲಾ ಬೀಜ ಮೊಳಕೆ ಬರುವುದಿಲ್ಲ…. ಒಮ್ಮೆ ಆ ಮಣ್ಣಿನಲ್ಲಿ ತಳವೂರಿ ಮೊಳಕೆ ಬಂದರೆ ಯಾವುದೇ ಸಂದರ್ಭದಲ್ಲಿ ಮಣ್ಣು ಆ ಮೊಳಕೆಯ ಬೇರನ್ನು ಬಿಟ್ಟು ಕೊಡುವುದಿಲ್ಲ…. ಬಾಹ್ಯ ಸಂಪರ್ಕಗಳಿಂದ ಮೊಳಕೆಯನ್ನು ಎಳೆಯಬೇಕೇ ವಿನಃ ಮಣ್ಣು ಮೊಳಕೆಯನ್ನು ಬಿಟ್ಟು ದೂರ ಸರಿಯಲಾರದು!!!

ಇದೇ ರೀತಿ ನಮ್ಮ ಸಂಬಂಧಗಳು ಕೂಡ….!!!!!

ಮಂಗಳೂರಿಗೆ ಬಂದ ಒಂದು ವಾರದಲ್ಲೇ ಆರತಿ ಮತ್ತು ಪವನ್ ಗೆ ಸರಳವಾಗಿ ಮದುವೆ ಆಯ್ತು ಪವನ್ ನ ತೋಟದಲ್ಲಿ……. ತನ್ನ ತಾಯಿಯ ಮದುವೆಗೆ ಪ್ರೀತಿ ಸಾಕ್ಷಿ ಆದಳು…. ಶಮಿಕಾ ತುಂಬಾ ಸಂತೋಷವಾಗಿ ಓಡಾಡಿ ಮದುವೆಗೆ ಬಂದ ಕಾಲೇಜಿನ ಸಹೋದ್ಯೋಗಿಗಳನ್ನು ಉಪಚರಿಸಿದಳು….
ಮದುವೆಯ ರಾತ್ರಿ ಪವನ್ ಮತ್ತು ಆರತಿ ತೋಟದಲ್ಲಿ ಬೆಳದಿಂಗಳ ಬೆಳಕಿನಲ್ಲಿ ಕುಳಿತು ಮಾತನಾಡುತ್ತಿದ್ದರು.
ಆ ಕ್ಷಣ ಆರತಿಗೆ ತನ್ನ ಮೊದಲ ಗಂಡ ವಿಶಾಲ್ ನ ನೆನಪು ಬಂತು…. ತಾನು ಓದಿದ ಸ್ವಾಮಿ ವಿವೇಕಾನಂದರ “ನೀನು ಏನೂ ಮಾಡಿದರೂ ನಿನ್ನ ಮನಸ್ಸು, ಹೃದಯ ಮತ್ತು ಆತ್ಮ ಪರಿಪೂರ್ಣವಾಗಿ ಅರ್ಪಿಸಿ ಮಾಡಬೇಕು’ ಎಂದು ಹೇಳಿರುವುದನ್ನು ನೆನಪಿಗೆ ತಂದುಕೊಂಡು ಇನ್ನೂ ಮುಂದೆ ಪವನ್ ನ ಪಕ್ಕ ಇರುವಾಗ ವಿಶಾಲ್ ನ ನೆನಪು ಬರಬಾರದು ಎಂದು ನಿರ್ಧರಿಸಿಕೊಂಡಳು….

ಪವನ್ ಮತ್ತು ಆರತಿಗೆ ಮದುವೆ ಆಗಿ ಈಗ ಮೂರು ವರ್ಷಗಳೇ ಕಳೆದಿವೆ ಮುದ್ದಾದ ಪ್ರಥ್ವಿ ಅವರ ಮಡಿಲಿಗೆ ಬಂದಿದ್ದಾನೆ….
ಪವನ್ ನ ತೋಟದಲ್ಲಿ ವಿಸ್ತಾರವಾದ, ಸುಸಜ್ಜಿತವಾದ, ನಿರ್ಮಲವಾದ, ಶಾಂತಿಯುತ, ವಿಶ್ರಾಂತಿ ಧಾಮ ಆಗಿದೆ…… ” ನೊಂದು ಬೆಂದು ಅನಾಥವಾಗಿರುವ ವನಿತೆಯರಿಗಾಗಿ ‘ ಎಂಬ ಫಲಕವಿದೆ…. ಇಲ್ಲಿ ನೊಂದ ಬೆಂದ ಅನಾಥ ಹೆಣ್ಣು ಮಕ್ಕಳು ಇದ್ದಾರೆ ಕೆಲವರು ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿದ್ದಾರೆ, ಕೆಲವರು ತೋಟದಲ್ಲಿ ತರಕಾರಿ ಹಣ್ಣು ಕೊಯ್ಯುತ್ತಿದ್ದಾರೆ, ಕೆಲವರು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ, ಕೆಲವರು ಹೊಲಿಗೆ, ಕೆಲವರು ಕಥೆ ಬರೆಯಲು, ಓದಲು , ಕೆಲವರು ಹಟ್ಟಿಯಲ್ಲಿ ದನ ಕರುಗಳಿಗೆ ಮೇವು ಹಾಕುತ್ತಿದ್ದರು….ಹೀಗೆ ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.. ಭವಾನಿ ಗ್ರಂಥಾಲಯದಲ್ಲಿ ಓದುವವರಿಗೆ ನೆರವಾದರೆ, ಪದ್ಮಜಾ ಅಡುಗೆ ಮನೆಯಲ್ಲಿ ನೆರವಾಗುತ್ತಾಳೆ. ಪವನ್ ತೋಟದ ಕೆಲಸದಲ್ಲಿ ನಿರತರಾಗಿದ್ದಾನೆ.. ಆರತಿ ಈ ಆಶ್ರಮದಲ್ಲಿ ಓದಲು ಆಸಕ್ತಿ ಇರುವವರಿಗೆ ಆಯಾ ವಿಷಯಕ್ಕೆ ಸಂಬಂಧಿಸಿದ ಹಾಗೆ ಪಾಠ ಮಾಡುತ್ತಿದ್ದಳು…. ಶಮಿಕಾ ಈ ವನಿತೆಯರ ಆಶ್ರಮದ ಪೂರ್ತಿ ಜವಾಬ್ದಾರಿ ತೆಗೆದು ಕೊಂಡು ಲೆಕ್ಕ ಪತ್ರ ಹಾಗೂ ಆಶ್ರಮಕ್ಕೆ ಬರುವವರ ಬಗ್ಗೆ ಅವರ ಮುಂದಿನ ಜೀವನದ ಬಗ್ಗೆ ನೊಂದವರಿಗೆ ಸಾಂತ್ವನ ನೀಡಿ ಸಮಾಲೋಚನೆ ನಡೆಸಿ ಪ್ರತಿಯೊಬ್ಬರ ಬೇಕು ಬೇಡಗಳನ್ನು ನಿರ್ವಹಿಸುತ್ತಿದ್ದಳು.

ಶಮಿಕಾನವರು ಉಡುಪಿಯಿಂದ ಮಂಗಳೂರಿಗೆ ಬಂದ ದಿನವೇ ಸಂಜೀವ ಇಹ ಲೋಕವನ್ನು ತ್ಯಜಿಸಿದ್ದರು.. ರಮಣಿ ಒಂಟಿಯಾಗಿ ಜೀವನ ಮಾಡುತಿದ್ದರು… ಒಂದು ವರುಷದ ಹಿಂದೆ ರಮಣಿ ಕೂಡ ವನಿತೆಯರ ಆಶ್ರಮದ ಸದಸ್ಯಳಾಗಿ ನಗು ನಗುತ್ತಾ ಕೆಲಸ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು…

ಶಮಿಕಾ ತನ್ನ ಅಮ್ಮನಲ್ಲಿ ಅಪ್ಪ ನೆಂಬ ವ್ಯಕ್ತಿ ಸಿಕ್ಕಿದ್ದಾರೆ ಎಂದು ಈವರೆಗೆ ಹೇಳಲಿಲ್ಲ…. ಹೇಳಬೇಕು ಎಂದು ಕೂಡ ಶಮಿಕಾಳಿಗೆ ಅನಿಸಲಿಲ್ಲ…….

ಶಮಿಕಾ ಪ್ರಶಾಂತ ವಾತಾವರಣದಲ್ಲಿ ಮೌನವಾಗಿ ಕುಳಿತು ನೀಲಿ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಮೈ ಮರೆತಿದ್ದಳು….. ಆಗ ಅಲ್ಲಿಗೆ ಬಂದ ಆರತಿ ಶಮಿಕಾ ತಪ್ಪು ತಿಳಿದು ಕೊಳ್ಳಬೇಡ? “ಬದುಕೆಂಬುದು ಒಬ್ಬಂಟಿ ಪಯಣವಲ್ಲ.ಈ ಸಂಘ ಯಾನದಲ್ಲಿ ಜೊತೆಗಾರ ಇದ್ದರೆ ಬದುಕು ಇನ್ನು ಸುಂದರ ತಾಣ” ಎಂದಾಗ ಶಮಿಕಾ

“ಬದುಕಿನಲ್ಲಿ ಬಯಸಿದ್ದೆಲ್ಲ ಸಿಗುತ್ತದೆ ಎಂದೇನಿಲ್ಲ ಲಬ್ಬಿಸಿದ್ದನ್ನು ಸರಿಯಾಗಿ ಬಳಸಿಕೊಂಡು ನೆಮ್ಮದಿಯಿಂದ ಜೀವನ ನಡೆಸುವ ಜಾಣತನ ತೋರಬೇಕು” ನೀನು ಮೊನ್ನೆಯಿಂದ ನನಗೆ ಮದುವೆ ಆಗು ಎಂದು ಹೇಳುತ್ತಿರುವುದು ಗೊತ್ತಿದೆ…. ಮದುವೆ ಎಂಬುದೇ ಅಂತಿಮ ಅಲ್ಲ ಆರತಿ. ಮೊದಲಿನ ತಿಳಿದವರು ಹೇಳಿದ್ದು ನಿಜ ಮದುವೆ ಆಗಿ ಮಕ್ಕಳನ್ನು ಪಡೆದರೆ ಮಾತ್ರ ಸಂಸಾರ ಸಾರ. ಅಲ್ಲಿ ಜಯಿಸಿ ನಂತರ ಲೋಕ ಜಯಿಸು ಎಂದು….

“”ಪ್ರಾಮಾಣಿಕ ಮನುಷ್ಯ ಮಾತ್ರ ಸ್ವಾತಂತ್ರ್ಯ ವನ್ನು ಪ್ರೀತಿಸಬಲ್ಲ. ಉಳಿದವರು ಸ್ವಚ್ಛಂದತೆಯನ್ನು ಮಾತ್ರ ಪ್ರೀತಿಸುವರು, ಸ್ವಾತಂತ್ರ್ಯ ವನ್ನಲ್ಲ”” ಹೀಗೆಂದು ಹೇಳಿದವರು ಭಗತ್ ಸಿಂಗ್ ಅದಕ್ಕಾಗಿ ಅಂತಹಾ ಸ್ವಾತಂತ್ರ್ಯವನ್ನು ನೀಡುವ ಪ್ರಾಮಾಣಿಕ ಮನುಷ್ಯ ಸಿಗುವವರೆಗೆ ಇಲ್ಲಿ ಇರುವ ಎಲ್ಲರೊಂದಿಗೆ ನಗುನಗುತ್ತಾ ಬಾಳೋಣ ಆರತಿ ಎಂದಾಗ ಇಬ್ಬರೂ ಪ್ರೀತಿಯಿಂದ ಮಮತೆಯಿಂದ ಅಪ್ಪಿ ಕೊಂಡರು…….

ಶಮಿಕಾ, ಪವನ್, ಆರತಿ, ಭವಾನಿ, ಪದ್ಮಜಾ, ರಮಣಿ ಹೀಗೆ ಎಲ್ಲರ ಸಹಕಾರ ಹಾಗೂ ಮುತುವರ್ಜಿಯಿಂದ ದಾನಿಗಳ ಸಹಾಯ ಹಸ್ತದಿಂದ ಆಶ್ರಮ ಚೆನ್ನಾಗಿ ನಡೆಯುತ್ತಿದೆ………

– ಧಾರಾವಾಹಿ ಮುಕ್ತಾಯವಾಯಿತು **”

( ಅಂತರಾಳ ಧಾರಾವಾಹಿ 34 ವಾರಗಳಲ್ಲಿ ಪ್ರಕಟವಾಗಿದೆ… ಪ್ರತಿ ವಾರವೂ ಕಥೆ ಓದಿ ನನಗೆ ಹುರಿದುಂಬಿಸಿ, ವಿಮರ್ಶೆ ಮಾಡಿ ಪ್ರೊತಾಹಿಸಿದ ಎಲ್ಲಾ ಓದುಗ ಮಿತ್ರರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. )

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *