January 18, 2025
Antarala

ಇಲ್ಲಿಯವರೆಗೆ…..
ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆಅವಳು ಸಾಯುವ ನಿರ್ಧಾರ ಮಾಡುತ್ತಾಳೆ….. ಸಾಯುವ ತೀರ್ಮಾನಕ್ಕೆ ಬಂದವಳು ಮನಸ್ಸು ಬದಲಿಸಿ ಕೆಲಸಕ್ಕೆ ಹೋಗುತ್ತಾಳೆ ಆದರೆ ಮಾಸಿಕ ಸ್ರಾವ ಆಗದೆ ಇರುವುದನ್ನು ನೋಡಿ ದುರುಳರ ಕಾಮದ ಕುರುಹು ಉಳಿದಿರುವುದು ಖಚಿತವಾಗುತ್ತದೆ. ಮತ್ತೆ ಗ್ರಂಥಾಲಯದ ಒಳಗಡೆ ಆತ್ಮಹತ್ಯೆಗೆ ಯತ್ನಿಸುತ್ತಿರುವಾಗ ಶಂಕರಮೂರ್ತಿ ಎನ್ನುವ ವ್ಯಕ್ತಿ ತಡೆಯುತ್ತಾರೆ.ಭವಾನಿಯಿಂದ ವಿಷಯವೆನ್ನೆಲ್ಲ ತಿಳಿದುಕೊಂಡ ಶಂಕರಮೂರ್ತಿ ಅವಳನ್ನು ಮದುವೆಯಾಗುತ್ತಾರೆ. ಇತ್ತ ಭವಾನಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮ್ಮನನ್ನು ಊರಿನಿಂದ ಕರೆದುಕೊಂಡು ಬರುವುದೆಂದು ತೀರ್ಮಾನಿಸುತ್ತಾಳೆ. ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆಯುತ್ತಾಳೆ.

 

ಅಂತರಾಳ – ಭಾಗ 5

ಒಂದು ವಾರದ ನಂತರ ಶಂಕರ್ ರವರು  ನನ್ನನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಊರಿನ ಹೆಂಗಸೊಬ್ಬರು ಇದ್ದರು………….
ನಾನೇ ಅವರ ಬಳಿಗೆ ಹೋಗಿ ಹೇಗಿದ್ದೀರಿ?.ನನ್ನ ಮಾವನ ಮನೆಗೆ ಹೋಗಿದ್ದೀರಾ? ನನ್ನ ಅಮ್ಮ ಹೇಗಿದ್ದಾರೆ? ಎಂದು ಕೇಳಿದೆ. ಆಗ ಅವರು ನಿನಗೆ ವಿಷಯ ಗೊತ್ತಿಲ್ಲವಾ? ನಿನ್ನ ಅಮ್ಮ ನಿನ್ನ ಮದುವೆ ಪತ್ರ ನೋಡಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಸತ್ತು ನಾಲ್ಕು ದಿನ ಕಳೆಯಿತು. ನಿನಗೆ ತಿಳಿಸಿಲ್ಲವೇ? …………ಎಂದಾಗ ನಾನು ವಿಷಯ ತಿಳಿದು ಕುಸಿದು ಬಿದ್ದೆ. ಅಮ್ಮನನ್ನು ನೆನೆದು ಜೀವವನ್ನು ಯಾರೋ ಕಿತ್ತುಕೊಂಡ ಹಾಗಾಗುತ್ತಿತ್ತು. ಅಮ್ಮ ಯಾಕೆ ಹೀಗೆ ಮಾಡಿದೆ! ………ಇಲ್ಲಾ ಮಾವ ಏನಾದರೂ ಕೊಂದು ಬಾವಿಗೆ ಹಾಕಿದ್ದಾರಾ? ……….ಎಂಬ ಸಂಶಯ ಕೂಡ ಬಂತು………


ಆದರೆ ಆಗ ನನಗೆ ಏನೂ ಮಾಡಲು ತೋಚಲಿಲ್ಲ. ಅಮ್ಮನಿಲ್ಲದ ಊರಿಗೆ ಹೋಗಿ ಏನು ಮಾಡಲಿ ಎಂದು ಊರಿಗೂ ಹೋಗಲಿಲ್ಲ. ನಾನು ಈಗ ಈ ಮನೆಗೆ ಬಂದು 5 ತಿಂಗಳೇ ಕಳೆಯಿತು. ನನ್ನ ಹೊಟ್ಟೆಗೆ 7 ತಿಂಗಳು ತುಂಬಿತು. ಶಂಕರ್ ಮೊದಲೇ ಹೇಳಿದಂತೆ ವಾರದಲ್ಲಿ ಎರಡು ದಿನ ಮಾತ್ರ ನನ್ನ ಜೊತೆ ಇದ್ದು ಉಳಿದ ದಿನ ಅವರ ಮನೆಗೆ ಹೋಗುತ್ತಿದ್ದರು. ಒಂದು ದಿನ ಅವರ ಮನೆಗೂ ಕರೆದುಕೊಂಡು ಹೋದರು. ಮೊದಲೇ ಹೇಳಿದಂತೆ ಶಂಕರ್ ನ್ ಆಫೀಸ್ ನಲ್ಲಿ ಕೆಲಸ ಮಾಡುವುದು ಎಂದು ಅವರ ಅಮ್ಮನಲ್ಲಿ ಹೇಳಿದೆ. ಅವರ ಅಮ್ಮ ನನ್ನನ್ನು ತುಂಬಾ ಉಪಚರಿಸಿದರು. ತಪ್ಪಿಯೂ ಶಂಕರ್ ಮದುವೆ ಆದ ಬಗ್ಗೆ ಹೇಳಲಿಲ್ಲ. ಅವರ ಮನೆಯಿಂದ ಶಂಕರ್ ನಿತ್ಯವೂ ತರಕಾರಿ, ಸಾಂಬಾರ್ ಹುಡಿ, ತಿಂಡಿ ತರುತ್ತಿದ್ದರು. ನಾನು ಶಂಕರ್ ನ ಅಮ್ಮನ ಪರಿಚಯದ ಬಳಿಕ ನಾನೂ ಅವರು ಪತ್ರದ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದೆವು. ಶಂಕರ್ ತಮಾಷೆಗೆ ಹೇಳುತ್ತಿದ್ದರು.

“ಮನೆಯಲ್ಲಿ ಅಮ್ಮನಿಗೆ ನಿಮ್ಮದೇ ಸುದ್ದಿ ನನ್ನ ಬಗ್ಗೆ ಕೇಳುವವರೇ ಇಲ್ಲ” ಎಂದು.ಹೀಗೆ ದಿನಗಳು ಕಳೆದು 9 ತಿಂಗಳು ಆಗಿ 2 ದಿನ ಆದಾಗ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ. 2 ವಾರ ಶಂಕರ್ ನನ್ನ ಜೊತೆಯಲ್ಲೇ ಇದ್ದು ಮಗುವಿನ ಬಟ್ಟೆ ನನ್ನ ಬಟ್ಟೆ, ಸ್ನಾನ , ಊಟ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. 2 ವಾರದ ನಂತರ ಅವರ ಮನೆಗೆ ಹೋಗಲು ಪ್ರಾರಂಭಿಸಿದರು. ಈಗಂತೂ ನನಗೆ ಮಗುವಿನ ಜೊತೆಯೇ ಸಮಯ ಕಳೆಯುತ್ತಿತ್ತು. ಮಗುವಿಗೆ ಈಗ 3 ತಿಂಗಳು ತುಂಬಿತು. ಶಂಕರ್ ಮಗುವಿಗೆ “ಶಮಿಕಾ “ ಎಂದು ಹೆಸರಿಟ್ಟು ಹಾಗೆಯೇ ಕರೆಯುತ್ತಿದ್ದರು. ” ನಮ್ಮ ಮನೆಯಲ್ಲಿ ಅಕ್ಕಂದಿರು, ತಂಗಿ, ಅಣ್ಣ ಎಲ್ಲಾ ಬಂದಿದ್ದಾರೆ.ನಾನೂ ಸ್ವಲ್ಪ ದಿನ ಕೆಲಸಕ್ಕೆ ರಜೆ ಹಾಕಿದ್ದೇನೆ. ಇಲ್ಲಿಗೂ ಬರುವುದಿಲ್ಲ. ಮಗು ನೀವು ಜಾಗ್ರತೆ” ಎಂದು ಎಲ್ಲಾ ಸಾಮಾನು ತೆಗೆದುಕೊಟ್ಟು ನನಗೆ ದುಡ್ಡು ಕೊಟ್ಟು ಹೋದವರು ಒಂದು ತಿಂಗಳು ಬರಲಿಲ್ಲ. ನನಗಂತೂ ಶಂಕರನನ್ನು ತುಂಬಾನೇ ಎನಿಸುತ್ತಿತ್ತು.ಮಗು ಶಮಿಕಾ ಕೂಡ ಯಾರೂ ಇಲ್ಲದೆ ದಿನವಿಡೀ ಅಳುತ್ತಿದ್ದಳು. ನನಗೆ ದಿಕ್ಕೇ ತೋಚುತ್ತಿರಲಿಲ್ಲ.

ಒಂದು ತಿಂಗಳ ಬಳಿಕ ಶಂಕರ್ ಬಂದರು ಮೊದಲಿನ ಉತ್ಸಾಹ ಮಾತ್ರ ಅವರಲ್ಲಿ ಇರಲಿಲ್ಲ. ಮನೆ,ಮಗುವಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತರುತ್ತಿದ್ದರು.
ಸ್ವಲ್ಪ ದಿನಗಳು ಕಳೆದು ಅವರ ಅಮ್ಮನ ಪತ್ರ ಬಂದಾಗ ಅದರಲ್ಲಿ ಶಂಕರ್ ಗೆ ಹೆಣ್ಣು ನೋಡಿದ್ದೇವೆ. ಹೆಸರು ರಾಜೇಶ್ವರಿ. ಅವಳು ಹೈಸ್ಕೂಲ್ ಟೀಚರ್ ಎಂದು ಬರೆದಿದ್ದರು. ಅದನ್ನು ಓದಿ ತುಂಬಾನೇ ದುಃಖವಾಯಿತು…….ನನ್ನ ಶಮಿಕಾಳ ಜೀವನದ ಗತಿ ಏನು ಎಂದು ನೆನೆದು ಚಿಂತೆ ಶುರುವಾಯಿತು . ಅವರಲ್ಲಿ ಕೇಳಲು ಭಯವಾಗುತ್ತಿತ್ತು……ನಾನು ಅತ್ತಾಗ ಮಾತ್ರ ” ನಾನು ಒಂದು ಹೊತ್ತು ಊಟ ಮಾಡಿದರೆ ನಿಮಗೂ ನಿಮ್ಮ ಮಗುವಿಗೂ ನೀಡುತ್ತೇನೆ ಭಯ ಬೇಡ” ಎನ್ನುತ್ತಿದ್ದರು. ಮನೆಗೆ ಮಾತ್ರ ಮೊದಲಿನ ಹಾಗೆ ಸಾಮಾನು ಹಣ್ಣು ಎಲ್ಲವನ್ನೂ ತರುತ್ತಿದ್ದರು. ಮಗು ಶಮಿಕಾಳಿಗೆ ಈಗ 6 ತಿಂಗಳು ಆಗಿತ್ತು. ಮುಖ ನೋಡಿ ನಗುತ್ತಿದ್ದಳು. ಪರಿಚಯ ಆಗುತ್ತಿತ್ತು. ಶಂಕರ್ ನ ಅಮ್ಮನಿಂದ ಮದುವೆ ಆಮಂತ್ರಣ ಬಂತು. ಓದಿ ಅಳುವೇ ಬಂತು. ಶಂಕರ್ ನನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅದನ್ನು ತೋರ್ಪಡಿಸಲು ಭಯವಾಗುತ್ತಿತ್ತು. ಅವರನ್ನು ಅಪ್ಪಿಕೊಳ್ಳಬೇಕು. ಅವರ ಮಡಿಲಲ್ಲಿ ಮಲಗಬೇಕು ಎಂದು ಕನಸು ಕಾಣುತ್ತಿದ್ದೆ……..ಇಷ್ಟು ದಿನ ನಾವಿಬ್ಬರೂ ಜೊತೆಯಲ್ಲಿಯೇ ಇದ್ದರೂ ಮೈ ಮುಟ್ಟಿದವರಲ್ಲ…….ಸಲುಗೆಯಿಂದ ಮಾತನಾಡಿಯೂ ಇರಲಿಲ್ಲ. ನನಗೆ ಮಾತ್ರ ಅವರ ಸಂಯಮ, ತಾಳ್ಮೆ, ಹೆಣ್ಣಿನ ಬಗ್ಗೆ ಇರುವ ಗೌರವ,ಯಾವ ತೊಂದರೆಗೂ ಕೋಪ ಮಾಡಿಕೊಳ್ಳದೆ ಮಂದಸ್ಮಿತವಾಗಿಯೇ ಪರಿಹರಿಸುವ ಗುಣ ನೋಡಿ ಮನಸ್ಸಿನಲೇ ಪ್ರೀತಿ ಮಾಡುತಿದ್ದೆ…… ಆದರೆ ನಾನು ಇದನ್ನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ …..

ನಾನು ಸಾಯುವುದೇ ಎಂಬ ಗಳಿಗೆಯಲ್ಲಿ ಅದನು ನಿಲ್ಲಿಸಿ,ಯಾರೋ ಪಾಪಿಗಳು ಮಾಡಿದ ಅನ್ಯಾಯದ ಫಲವನ್ನು ತಾನು ದುಡಿದು ಸಾಕಿ ನನ್ನನ್ನು ಮುತ್ತೈದೆ ಎಂಬ ಹೆಸರಿನಿಂದ ಕರೆಯುವ ಭಾಗ್ಯ ನೀಡಿದ ಇಂತಹ ಕರುಣಾಮಯಿಯಲ್ಲಿ ನಾನು ಪ್ರೀತಿಸುತೇನೆ ಎಂದು ಹೇಳಲು ಧೈರ್ಯವೇ ಇರಲಿಲ್ಲ. ಅವರೇ ನನ್ನನು ಪ್ರೀತಿಸಲಿ ಎಂದು ಮನದಲ್ಲೇ ಅಂದುಕೊಳ್ಳುತ್ತಾ ದಿನ ದೂಡುತ್ತಿದೆ……ಆದರೆ ಈಗ ಶಂಕರ್ ನ ಮದುವೆ ಆಮಂತ್ರಣ ನೋಡಿದ ಮೇಲೆ ಪ್ರತಿ ಕ್ಷಣ ಮಗುವಿನ ಮತ್ತು ನನ್ನ ಜೀವನದ ಗತಿ ಏನು ಎಂದು ನಿಂತಲ್ಲಿ ನಿಲ್ಲಲು ಆಗದೆ ಮಲಗಿದರೆ ನಿದ್ದೆ ಕೂಡ ಬರುತ್ತಿರಲಿಲ್ಲ ………. ಮದುವೆಯ ಆಮಂತ್ರಣ ಪತ್ರಿಕೆ ಬಂದ ಬಗ್ಗೆ ಹೇಳಿದಾಗ ನಿಮಗೇ ಇಷ್ಟವಿದ್ದರೆ ನೀವು ಮಗು ಮದುವೆಗೆ ಬನ್ನಿ ಎಂದಷ್ಟೇ ಹೇಳಿದರು. ಮದುವೆಗೆ ಒಂದು ವಾರ ಇರುವಾಗ ನಾನು ಮದುವೆ ಆದ ಮೇಲೆ ಬರುತ್ತೇನೆ. ಮನೆಯಲ್ಲಿ ತುಂಬಾ ಕೆಲಸ ಇದೆ. ಎಂದು ಸಾಮಾನು ತಂದು ಕೊಟ್ಟು ಸ್ವಲ್ಪ ಹಣ ನೀಡಿ ಹೋದರು.

ಮದುವೆಗೆ ಹೋಗಬೇಕೆ? …….ಬೇಡವೇ…… ಎಂಬ ಗೊಂದಲದಲ್ಲಿ, ದುಃಖದಲ್ಲಿ ಮದುವೆಗೆ ನಾನು ಶಮಿಕಾ ಹೋಗಲಿಲ್ಲ. ಮದುವೆ ಆಗಿ 1 ತಿಂಗಳು ಬರಲಿಲ್ಲ. ತುಂಬಾ ಜಾಗರೂಕತೆಯಿಂದ ದುಡ್ಡು ಉಪಯೋಗಿಸಿದೆ. ಎನೂ ಮಾಡಬೇಕು ಎಂದು ದಿಕ್ಕೇ ತೋಚಲಿಲ್ಲ..‌….. ಎಲ್ಲಿಯಾದರೂ ಕೆಲಸಕ್ಕೆ ಸೇರಿಕೊಂಡರೆ ಹೇಗೆ ಎಂದು ಯೋಚನೆ ಮಾಡಿದೆ.ಆದರೆ ಮಗುವನ್ನು ಎಲ್ಲಿ ಬಿಡುವುದು ಯಾರೂ ನೋಡಿಕೊಳ್ಳುತ್ತಾರೆ ಎಂದು ಹಗಲು ರಾತ್ರಿ ಯೋಚಿಸಿ ಚಿಂತಿಸುತ್ತಿದೆ…. ಒಂದು ತಿಂಗಳು ಕಳೆದು ಶಂಕರ್ ಬಂದರು……

ಬಂದಾಗ ತುಂಬಾನೇ ಮೌನಿಯಾಗಿದ್ದರು……..ಯಾವಾಗಲೂ ಬಂದಾಗ ಮಗುವಿನಲ್ಲಿ ಮಾತನಾಡುತ್ತಿದ್ದರು..ಆದರೆ ಈ ಸಲ ಮಗುವಿನ ಜೊತೆ ಕೂಡ ಹೆಚ್ಚು ಮಾತನಾಡಲಿಲ್ಲ. ಬರುವಾಗಲೇ ಮನೆಗೆ ಬೇಕಾದ ಸಾಮಾನುಗಳನ್ನು ತಂದಿದ್ದರು.. ಹೆಚ್ಚು ನಿಲ್ಲದೆ ಸ್ವಲ್ಪ ದುಡ್ಡು ನೀಡಿ ಹೋದರು. ನನಗಂತೂ ಈ ಪ್ರಪಂಚದಲ್ಲಿ ಯಾರೂ ಇಲ್ಲದ ಅನಾಥ ಭಾವವೊಂದು ಹಾದು ಹೋಗುತ್ತಿತ್ತು. ಮಗುವನ್ನು ಅಪ್ಪಿಕೊಂಡು ಅಳುತ್ತಿದ್ದೆ. ನೆರೆಹೊರೆಯವರಲ್ಲೂ ನಾನು ಮಾತನಾಡಲು ಹೋಗುತ್ತಿರಲಿಲ್ಲ…. ಮಾತನಾಡಲು ಆಸಕ್ತಿ ಇತ್ತು..ಆದರೆ ನನ್ನ ಈ ನರಕದ ಜೀವನ ಎಲ್ಲಿ ತಿಳಿಯುತ್ತದೋ ಎಂಬ ಭಯದಿಂದಲೇ ಯಾರಲ್ಲೂ ಮಾತನಾಡುತ್ತಿರಲಿಲ್ಲ …………..ಬದುಕೆ ಶೂನ್ಯವಾಗಿತ್ತು………
ನಾನು ನನ್ನ ಅಮ್ಮನನ್ನು ಜೊತೆಗೆ ಕರೆತಂದು ಜೀವನ ಸುಗಮವಾಗಿ ಸಾಗುತ್ತದೆ ಎಂದು ಕನಸು ಕಾಣುತ್ತಿರುವ ವಾಗಲೇ ಆ ದುಷ್ಟರಿಂದ ನನ್ನ ಜೀವನದ ಗತಿಯೇ ಬೇರೆಯಾಗಿ ಹೋಯಿತಲ್ಲ…… ಅಮ್ಮ ನ ಜೊತೆ ಮಗುವಾಗಿ ಇರಬೇಕು ಅಂದುಕೊಳ್ಳುತ್ತಿದ್ದೆ…‌‌…..
ಆದರೆ ನನಗೆ ತಿಳಿಯದೇ ನನ್ನ ಮಡಿಲಲ್ಲಿ ಮಗು ಆಗಿದೆ.

ಹೀಗೆಯೇ ಯೋಚನೆಗಳು ಕಿರಿ ಕಿರಿ ಮಾಡುತ್ತಿತ್ತು.
ಎರಡು ದಿನಗಳು ಕಳೆದ ಮೇಲೆ ಮನೆ ಮಾಲೀಕರು ಬಂದು ಇನ್ನು 1 ತಿಂಗಳು ಬಾಡಿಗೆ ನೀಡಿದ್ದಾರೆ. ಬರುವ ತಿಂಗಳು ಮನೆ ಖಾಲಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಬೇರೆ ಯಾರಾದರೂ ಬಾಡಿಗೆಗೆ ಇದ್ದರೆ ಹೇಳಲಿ ಶಂಕರಮೂರ್ತಿಯವರಲ್ಲಿ ಹೇಳಿ ಎಂದರು.
ನನಗೆ ದಿಕ್ಕೇ ತೋಚಲಿಲ್ಲ.

(ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *