ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ….
ಅಂತರಾಳ – ಭಾಗ 7
ಒಂದೊಂದು ಕ್ಷಣ ಶಂಕರ್ ಬಗ್ಗೆ ಸಿಟ್ಟು ಬರುತ್ತಿತ್ತು….. ನನ್ನನ್ನು ಶಮಿಕಾಳನು ಬಿಟ್ಟು ಬೇರೆ ಮದುವೆ ಆದದ್ದು ತಪ್ಪು ಅಲ್ವಾ…… ಇಲ್ಲ ನನ್ನ ಮಗುವಿಗೆ ನನ್ನ ಈ ಪರಿಸ್ಥಿತಿಗೆ ಅವರು ಕಾರಣ ಅಲ್ಲ ಅಲ್ವಾ...ಅವರ ಅಮ್ಮ ಅಕ್ಕ ಅಣ್ಣ ನೋಡಿ ನಿಶ್ಚಯಿಸಿದ ಹೆಣ್ಣನ್ನು ಮದುವೆ ಆಗಿದ್ದಾರೆ.. ಇಲ್ಲದಿದ್ದರೆ ಅವರ ಮನೆಯಲ್ಲಿ ಸಂಬಂಧಿಕರಲ್ಲಿ, ನೆರೆಹೊರೆಯಲ್ಲಿ,ಕೆಲಸ ಮಾಡುವ ಕಛೇರಿಯಲ್ಲಿ ಏನೆಂದು ಉತ್ತರ ನೀಡಬೇಕಿತ್ತು… ಪರಿಸ್ಥಿತಿಯ ಒತ್ತಡಕ್ಕೆ ಹಾಗೆ ಮಾಡಿದ್ದರು ಎಂದು ಮನಸ್ಸನ್ನು ಸಮಾಧಾನ ಮಾಡುತ್ತಿದ್ದೆ……
ಮನುಷ್ಯ ಎಲ್ಲಾರೂ ಹೀಗೆಯೇ ಇರಬಹುದೇ ಅನ್ಯಾಯ ಮಾಡಿದವರು ಬೇರೆ ಯಾರೋ ಆ ಕೋಪ ಸಿಟ್ಟು ಬರುವುದು ಬೇರೆ ಯಾರೊಂದಿಗೊ……… ಅನ್ಯಾಯ ಮಾಡಿದವರಿಗೆ ಮತ್ತು ಇವರಿಗೆ ಸಂಬಂಧವೇ ಇಲ್ಲ…. ಆದರೆ ಸಿಟ್ಟು ಬೇಸರ ಇವರಲ್ಲಿ ಯಾಕೆ…
ಸಹಾಯ ಮಾಡಿದವರ ಮೇಲೆಯೇ ನಮಗೆ ತಪ್ಪು ಕಾಣುತ್ತದೆ ಯಾಕೆ? ……....
ಬೇರೆ ಯಾವ ಪುರುಷರು ಅವರ ಸ್ಥಾನದಲ್ಲಿ ಇದ್ದಿದ್ದರೆ ನನ್ನ ಎಲ್ಲ ವಿಷಯ ತಿಳಿದು ನನ್ನನ್ನು ದೈಹಿಕವಾಗಿ ಬಳಸದೆ ಬಿಡುತ್ತಿದ್ದರು ?…………
ಆದರೆ ಶಂಕರ್ ತಪ್ಪಿಯೂ ನನ್ನನ್ನು ಮುಟ್ಟಿರಲಿಲ್ಲ….. ಅವರ ಮಾತು, ನಡೆ ,ನುಡಿಗಳಲ್ಲಿ ಯಾವತ್ತೂ ನನ್ನ ಬಗ್ಗೆ ಯಾವುದೇ ಕುಹಕದ ನೋಟ, ನಡತೆ ಇರಲಿಲ್ಲ… ಅಲ್ಲದೆ ನನ್ನನ್ನು ಯಾವತ್ತೂ ಟೀಕೆ ಕೂಡ ಮಾಡಿರಲಿಲ್ಲ. ನನಗೆ ತುಂಬಾ ಗೌರವ ನೀಡುತ್ತಿದ್ದರು. ಆದರೆ ನಾನು ಮಾತ್ರ ಅವರ ಸಂಯಮ ತಾಳ್ಮೆ ನೋಡಿ ಮನಸಾರೆ ಪ್ರೀತಿಸುತ್ತಿದ್ದೆ………….
ಶಮಿಕಾಳ ಹೆರಿಗೆ ಆದ ದಿನ ಮಾತ್ರ ನನ್ನ ಹಣೆಗೆ ಹೂ ಮುತ್ತನ್ನು ನೀಡಿದ್ದರು. ನನ್ನ ಬರಡಾದ ಜೀವನಕ್ಕೆ ಅದೇ ಸಂಜೀವಿನಿ ಆಯಿತು…….ಜೀವನ ಪೂರ್ತಿ ಆ ಒಂದು ಮುತ್ತು ನನ್ನ ಈ ಪುಟ್ಟ ಹೃದಯದಲ್ಲಿ ಇಟ್ಟು ನೆನಪು ಮಾಡುತಿದ್ದೆ….…….
ಇಲ್ಲಿಗೆ ಬಂದು ದಿನಾ ತಿಂಗಳು ವರ್ಷ ಕಳೆದು ಹೋಯಿತು……ರಾತ್ರಿ ಮಲಗಿದಾಗ ಏಕಾಂಗಿಯಾಗಿರುವಾಗ ಅಮ್ಮನ ನೆನಪು ಬರುತಿತ್ತು.. ಅವರ ಜೀವ ನನ್ನಿಂದಲೇ ನನ್ನ ಚಿಂತೆಯಿಂದಲೇ ಹೋಯಿತೇ….. ಎಂದು ನೆನೆದು ಮನಸ್ಸು ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿತ್ತು….ಈ ಭೂಮಿಯ ಮೇಲೆ ಒಬ್ಬರೆ ಒಬ್ಬ ಗಂಡಸು ಇರಬಾರದು ಸರ್ವನಾಶ ಆಗಬೇಕು ಎಂದು ಮನಸಿನಲ್ಲಿ ಅಂದುಕೊಳ್ಳುತ್ತಿದ್ದೆ…
ಆಗ ಶಂಕರ್ ನ ನೆನಪು ಬಂದು ಅವರು ಗಂಡಸು ತಾನೇ. ಎಲ್ಲಾ ಪುರುಷರು ಕಾಮುಕ, ಲಂಪಟರಾಗಿ ಇರುವುದಿಲ್ಲ , ಹೆಣ್ಣಿನ ಬಗ್ಗೆ ಗೌರವ ,ಸಮಾನ ಭಾವನೆ ಇರುವ ತುಂಬಾ ಪುರುಷರು ಇದ್ದಾರೆ.ಆದರೆ ವಿಷ ಸ್ವಲ್ಪ ಇದ್ದರೂ ಅದು ವಿಷವೇ ಹಾಗಾಗಿ ಎಲ್ಲರೂ ಅದೇ ರೀತಿ ಎಂದು ಕೊಳ್ಳುತ್ತೇವೆ ಎಂದು ನನಗೆ ನಾನೇ ಸಮಾಧಾನ ಪಡುತ್ತಿದ್ದೆ……….
ಅಮ್ಮ ಮತ್ತು ಶಂಕರ್ ನೆನಪು ಬಂದರೆ ಯಾರಿಗೂ ತಿಳಿಯದಂತೆ ಅಳುತ್ತಿದ್ದೆ… …. ಕಣ್ಣಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು… ಯಾರಾದರೂ ನೋಡಿದರೆ ಎಂದು ತಕ್ಷಣ ಹೋಗಿ ಮುಖ ತೊಳೆಯುತ್ತಿದ್ದೆ.
ಈಗ ಶಮಿಕಾ ಶಾಲೆಗೆ ಹೋಗುತ್ತಿದ್ದಳು. ಕೆಲವೊಮ್ಮೆ ರಾತ್ರಿ ಅವಳನ್ನು ಅಪ್ಪಿ ಅಳುತ್ತಿದ್ದೆ. ಶಮಿಕಾ ಯಾಕೆ ಅಮ್ಮ ಅಳುತ್ತಿ ಎಂದು ಕೇಳುತ್ತಿದ್ದಳು.. ಏನೆಂದು ಹೇಳಲಿ ….ಹೇಳಿದರೂ ಆ ಮಗುವಿಗೆ ಎನೂ ತಿಳಿಯುತ್ತದೆ……….
ನನ್ನ ಅಳುವಿಗೆ ಕಾರಣವೇ ಇರಲಿಲ್ಲ. ಈ ಜಗತ್ತಿನಲ್ಲಿ ನನ್ನಂತಹ ನಿರ್ಭಾಗ್ಯ ಹೆಣ್ಣುಗಳು ಎಷ್ಟು ಜನ ಇದ್ದಾರೋ ಯಾರಿಗೆ ಗೊತ್ತು,? ……. ಆದರೆ ನನ್ನ ಹಾಗೆ ಆಸರೆ ಸಿಗುವವರು ಕಡಿಮೆಯೇ ಎಂದು ಸಮಾಧಾನ ಪಡುತ್ತಿದ್ದೆ.
ವರುಷ ಕಳೆದು ನನ್ನ ಮತ್ತು ಶಮಿಕಾಳ ಜಗತ್ತೇ ಈ ಕಾನ್ವೆಂಟ್ ಆಯಿತು.. ಅಲ್ಲಿಯವರೆ ನನ್ನ ಬಂಧು ಬಳಗ ಎನಿಸಿದರು. ಶಮಿಕಾ ಹೈಸ್ಕೂಲ್ ಮುಗಿಸಿ ಕಾಲೇಜು ಮುಗಿಸಿದಳು… ಶಂಕರ್ ನ ನೆನಪಿಗಾಗಿ ಸಮಾಜ ಸೇವೆಯಲ್ಲಿ ಡಿಗ್ರಿ ಸಂಪಾದಿಸ ಬೇಕು ಎಂಬ ಆಸೆ ನನಗೆ ಇತ್ತು ಅದರಂತೆ ಶಮಿಕಾಳು ಓದಿದಳು.. ಈಗ ಶಮಿಕಾಳಿಗೆ ಮಂಗಳೂರಿನಲ್ಲಿ ಕೆಲಸ ಸಿಕ್ಕಿದೆ. ಇಲ್ಲಿ ನಾನು ಶಮಿಕಾ ಇಬ್ಬರೇ ಇರೋದು ಕೆಲವೊಮ್ಮೆ ಶಮಿಕಾ ನನ್ನ ಜೊತೆಯಲ್ಲಿ ತುಂಬಾನೇ ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ ಇರುತ್ತಾಳೆ…ಆದರೆ ಕೆಲವೊಮ್ಮೆ ಗಂಭೀರವಾಗಿ ಸಿಟ್ಟಿನಿಂದ ಮಾತನಾಡಿದ್ದು ಕಂಡುಬರುತ್ತದೆ.. ಇವಳು ಕಾನ್ವೆಂಟ್ ನಲ್ಲಿ ಇರುವಾಗ ಈ ರೀತಿ ವರ್ತಿಸುತ್ತಿರಲಿಲ್ಲ….ಕೆಲಸ ಸಿಕ್ಕಿದಾ ಮೇಲೆ ಯಾಕೆ ಈ ರೀತಿ ವರ್ತನೆ ಎಂದು ಅರ್ಥವಾಗುವುದಿಲ್ಲ. ಜೊತೆಯಲ್ಲಿ ಇದ್ದೇವೆ ಆದರೆ ನನ್ನಲ್ಲಿ ಮಾತು ಬಿಟ್ಟರೆ ವಾರಗಟ್ಟಲೆ ಮಾತಾಡುವುದಿಲ್ಲ. ಇದು ನನಗೆ ತುಂಬಾನೇ ಹಿಂಸೆ ನೀಡುತ್ತಿದೆ.. ಹೌದು ಅವಳಿಗೆ ನಾನು ಪಟ್ಟ ಕಷ್ಟ ನನ್ನ ವೇದನೆ ನನಗೆ ಪರಪುರುಷ ರಿಂದ ಆದ ಅನ್ಯಾಯ ಯಾವುದನ್ನು ಇಲ್ಲಿವರೆಗೆ ಹೇಳಿಲ್ಲ. ಬಹುಶಃ ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ ಹಾಗೂ ಅಂತಹಾ ಸಂದರ್ಭ ಕೂಡಾ ಸಿಗಲಿಲ್ಲ.ಬೇರೆಯವರ ಅಪ್ಪ ಅಮ್ಮ ಇಬ್ಬರೂ ಜೊತೆಯಾಗಿ ಇರುವುದು ಕಂಡು ಇವಳಿಗೆ ನನ್ನ ಬಗ್ಗೆ ಅವಳ ಮನಸಿನಲ್ಲಿ ಕೆಟ್ಟ ಅಭಿಪ್ರಾಯ ಇರಬಹುದೇ ಎಂಬ ಸಂಶಯ ಕೂಡ ಬರುತ್ತಿದೆ… ಆದರೆ ಅವಳು ಬೆಳೆದು ಬಂದ ಪರಿಸರ ಅಲ್ಲಿಯ ಒಡನಾಟ , ಹೆಣ್ಣಿನ ಬಗ್ಗೆ ನೀಚವಾಗಿ ಎನಿಸಲು ಸಾಧ್ಯವಿಲ್ಲ.ಅದರೆ ನಾನು ತುಂಬಾ ಸಲ ಕೇಳಿದರೂ ಅನ್ಯಮನಸ್ಕಳಾಗಿಯೇ ಇರುವುದು ನನಗೇಕೋ ತುಂಬಾ ಹಿಂಸೆ ಅನಿಸುತ್ತದೆ….ಕರುಳು ಹಿಂಡಿದಂತೆ ಭಾಸವಾಗುತ್ತದೆ…ಅವಳು ಇಲ್ಲದೆ ನನ್ನ ಜೀವನ ಇಲ್ಲ… ಜೀವನದಲ್ಲಿ ಸಂತೋಷ, ಪ್ರೀತಿ ಇದೆಯೋ ಗೊತ್ತಿಲ್ಲ…. ನೀರು ಹರಿಯುವ ಹಾಗೆ ದಿನ ಕಳೆಯುತ್ತಿದೆ… ಜೀವನವು ಹೀಗೆಯೇ ಸಾಗುವುದೇ………….. ಪ್ರೀತಿ ಪ್ರೇಮ ಮಾಡುವ ವಯಸ್ಸು ಅಲ್ಲ ಎಂದು ಎನಿಸುತ್ತದೆ. ಮರುಕ್ಷಣವೇ ಪ್ರೀತಿಗೆ ವಯಸ್ಸು ಇದೆಯಾ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.... ಶಮಿಕಾ ನನ್ನಲ್ಲಿ ಮಾತನಾಡದೆ ಗಂಭೀರವಾಗಿ ಇರುವುದನ್ನು ಕಂಡಾಗ ಇವಳ ಹಂಗಿನಲ್ಲಿ ನಾನಿದ್ದೇನೆ ಎಂಬ ಭಾವ ಕೂಡ ಹಾದುಹೋಗುತ್ತಿದೆ…. ನಾನು ಯಾರಿಗಾಗಿ ಬದುಕಲಿ.. ನನ್ನ ಜೀವವನ್ನು ಪ್ರೀತಿಸುವ ಒಂದು ಹೃದಯ ಇರಬಾರದೇ ಎಂದು ಪ್ರತಿಕ್ಷಣ ಪ್ರೀತಿಯ ಹೃದಯಕ್ಕಾಗಿ ಹಂಬಲಿಸುತ್ತಾಇದ್ದೇನೆ
( ಮುಂದುವರಿಯುವುದು)
✍️ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ