January 18, 2025
Antarala

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ……

ಅಂತರಾಳ – ಭಾಗ 8

ಕೆಲವೊಮ್ಮೆ ಪೇಟೆಗೆ ಹೋದಾಗ ಜನ ಜಂಗುಳಿಯಲ್ಲಿ ಶಂಕರ್ ಇರಬಹುದೇ ಎಂದು ಮನಸ್ಸು ಅವರನ್ನು ನೋಡಲು ಹಾತೊರೆಯುತ್ತಿದೆ…..‌……….
ಆದರೆ ಅವರಲ್ಲಿ ಮಾತನಾಡಿ ಅವರ ಮನಸ್ಸು, ಸಂಸಾರ ಕದಡಲು ನನಗೆ ಇಷ್ಟವಿಲ್ಲ….. ದೂರದಿಂದ ನೋಡಲು ಆಸೆ ಅಷ್ಟೇ……
ಇತ್ತೀಚೆಗೆ ಶಮಿಕಾ ನನ್ನಲ್ಲಿ ಸರಿಯಾಗಿ ಮಾತನಾಡುತ್ತಿಲ್ಲ. ನನ್ನನ್ನು ಸಂಶಯದಿಂದ ನೋಡುತ್ತಿದ್ದಾಳೆ…….
ಆದರೆ ನಾನು ಎನು ಹೇಳಲಿ ಶಮಿಕಾ ? ನಿನ್ನ ಪ್ರಶ್ನೆ ನನಗೆ ಗೊತ್ತು! ನಿನ್ನ ಅಪ್ಪ ಯಾರೆಂದು ನಾನು ಹೇಳಬೇಕು ಅಷ್ಟೇ ತಾನೇ? ….‌…
ಆದರೆ ಅಪ್ಪ ಯಾರೆಂದು ಹೇಳಲಿ? ……….

ಒಂದೇ ಕ್ಷಣದಲ್ಲಿ ನನ್ನ ಜೀವನವನ್ನು ರುದ್ರ ನರಕವನ್ನಾಗಿ ಮಾಡಿದ ಕಾಮ ಪಿಶಾಚಿಗಳು ಎನಿಸಿಕೊಂಡಿರುವ ಆ ಕಾಮುಕರು ನಿನ್ನ ಅಪ್ಪ ಎನ್ನಲೇ ? ಇಲ್ಲ ಪ್ರೀತಿ,ಕರುಣೆ ತೋರಿ ನನ್ನನ್ನು ನಿನ್ನನ್ನು ಸಾಕಿದ ಶಂಕರನನ್ನು ಅಪ್ಪ ಎನ್ನಲೇ…….. ಅವರನ್ನು ಅಪ್ಪ ಎಂದರೆ ಅವರ ಪ್ರೀತಿಯ ಸಂಸಾರಕ್ಕೆ ಹುಳಿ ಹಿಂಡಿದ ಹಾಗೆ ಅಲ್ವಾ…. ಅವರು ಮಾಡದ ತಪ್ಪಿಗೆ ನಾವು ಅವರನ್ನು ಬಲಿಪಶು ಮಾಡಬಹುದೇ………
ನನ್ನ ಈ ವರೆಗಿನ ಜೀವನದ ಅನುಭವದಿಂದ ಹೇಳುವುದು ಇಷ್ಟೇ ಶಮಿಕಾ! ಭೂಮಿಗೆ ಬೀಜ ಬಿತ್ತಿದವರು ಯಾರು? ……ಎಂದು ಬೇಕೇ? ……. ಭೂಮಿಗೆ ಬೀಜ ಬಿದ್ದ ಮೇಲೆ ಅದು ಗಿಡವಾಗಿ ಮರವಾಗಲು ಪೋಷಿಸಿದ ಭೂಮಿ ಮುಖ್ಯ ಅಲ್ಲವೇ? ……. ಬೀಜ ಬಿತ್ತಿದ ಮಾತ್ರಕ್ಕೆ ಆ ಗಿಡ ಅದರ ಫಲ ಬಿತ್ತಿದವನ ಸ್ವತ್ತೇ ……..ಬಿತ್ತಿದವನು ಹೇಗೆ ಬಿತ್ತಿದ ಎಲ್ಲಿ ಬಿತ್ತಿದ ಎಂಬುದು ಮುಖ್ಯವಲ್ಲವೇ? …….ಒಂದು ಮಗುವಿಗೆ ಅಪ್ಪ ಮುಖ್ಯ !……ಆದರೆ ಅಪ್ಪನಾಗಲು ಅವನಿಗೆ ಅರ್ಹತೆ ಬೇಡವೇ? ….‌.‌.‌.ಶಮಿಕಾ ನೀನು ತಿಳಿದವಳು, ಓದಿದವಳು, ಪ್ರಪಂಚ ಜ್ಞಾನ ಇದೆ. ಒಂದು ಪಾತ್ರೆ ಹಾಲಿಗೆ ಒಂದು ಹನಿ ಮೊಸರು ಬಿದ್ದರೂ ಇಡೀ ಹಾಲು ಮೊಸರು ಆಗುವುದು ನಿನಗೆ ತಿಳಿದಿಲ್ಲವೇ?…. ಹಾಗಿರುವಾಗ ಒಂದು ಹನಿ ಮೊಸರು ಎಲ್ಲಿಂದ?..
ಹೇಗೆ?………. ಯಾರು ಹಾಕಿದರು? ………
ಎಂಬುದು ಅಷ್ಟು ಮುಖ್ಯವೇ? ನಿನ್ನನ್ನು ಹೆರಿಗೆ ಆದಾಗ ನನಗೆ 19 ವರ್ಷ……… ಯೋಚಿಸು ಆಗಿನ್ನೂ ನನ್ನ ದೇಹದಲ್ಲಿ ಯೌವ್ವನ ಇತ್ತು….. ಆದರೆ ನನ್ನ ದೇಹವನ್ನು ಮನಸ್ಸು ಪೂರ್ತಿಯಾಗಿ ಕಟ್ಟಿ ಹಾಕಿತ್ತು. ಆದರೆ ಕೆಲವೊಮ್ಮೆ ಅದು ಕಡಿದು ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆಯುತ್ತಿದ್ದೆ..‌‌. ಪ್ರಕೃತಿ ಸಹಜ ಆಸೆ ಆಕಾಂಕ್ಷೆಗಳು ನುಗ್ಗಿ ಬರುತ್ತಿತ್ತು……. ಪ್ರಕೃತಿಯಲ್ಲಿ ಮನುಷ್ಯ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳು ದೈಹಿಕ ಮಿಲನದಲ್ಲಿ ಪಾಲ್ಗೊಳ್ಳುತ್ತದೆ….. ಹಾಗಂತ ಮನುಷ್ಯ ತನ್ನ ಆಸೆ ಆಕಾಂಕ್ಷೆಗಳನ್ನು ಸಿಕ್ಕಿದಲ್ಲಿ ತೋರ್ಪಡಿಸಲು ಸಾಧ್ಯವಿಲ್ಲ… ಹಾಗೆ ತೋರ್ಪಡಿಸಿದರೆ ಅವನು ಮನುಷ್ಯ ಆಗಲಾರ… ಮನಸ್ಸು ಒಪ್ಪಿದರೆ ಮಾತ್ರ ದೇಹ ಒಪ್ಪಿಗೆ ಸೂಚಿಸಬಹುದು …..ನನಗೂ ಆಕಾಂಕ್ಷೆ ಇದೆ….. ಹೌದು ಆದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿ ನಾನಿರಲಿಲ್ಲ…… ಎನೂ ತಪ್ಪು ಮಾಡದೆ ಶಿಕ್ಷೆ ಅನುಭವಿಸುತ್ತಿದ್ದೇನೆ… ಇನ್ನೂ ಗೊತ್ತಿದ್ದು ಎನಾದರೂ ಎಡವಟ್ಟು ಆದರೆ………
ಹಳ್ಳಿಯಲ್ಲಿ ಒಂದು ಗಾದೆ ಇದೆ ಹಾವು ಕಚ್ಚಿದವನಿಗೆ ಹಗ್ಗ ಕಂಡಾಗ ಭಯ ಅಂತೆ. ಆದೇ ರೀತಿ ಯಾವ ಗಂಡಸನು ಕಂಡರು ಎನೋ ಒಂದು ರೀತಿಯ ಭಯ ಹಾಗೂ ಸಂಶಯ …. ಅಲ್ಲದೆ ನನ್ನ ಜೀವನದಲ್ಲಿ ನೀನು ಮಾತ್ರ ಕಾಣುತ್ತಿದ್ದೆ ಶಮಿಕಾ ….. ನನ್ನ ಜೀವನ, ನನ್ನ ಉಸಿರು, ನನ್ನ ಪ್ರೀತಿ ನನ್ನ ಪ್ರತಿ ಕ್ಷಣ ಎಲ್ಲವೂ ಶಮಿಕಾಳಿಗಾಗಿ ಮಾತ್ರ …… ಇಷ್ಟು ಓದಿದ ಮೇಲೂ ಅಂತಹ ನೀಚರನ್ನು ಕಾಣಬೇಕಾ‌ ? ಎಂದು ನೀನೆ ಯೋಚನೆ ಮಾಡು ಶಮಿಕಾ…………
ಆದರೆ ನನಗೆ ಆ ದಿನ ನಡೆದ ಘಟನೆ ಮಾತ್ರ ನೆನಪು ಇದೆ..ಆ ಕತ್ತಲಲಿ ಆ ಕಾಮುಕರ ಮುಖ ಪರಿಚಯ ಇಲ್ಲ. ಆ ಕಾಮುಕರು ಯಾರು ಎಂದು ಗೊತ್ತಾಗಿ ಅವರಿಗೆ ತಕ್ಕ ಶಿಕ್ಷೆ ಆದರೆ ನಾನೆಷ್ಟು ಕುಶಿ ಪಡುತ್ತೇನೆ ಎಂಬುದಕ್ಕಿಂತ ಅಂತವರಿಗೆ ಶಿಕ್ಷೆ ಆಗುವುದರಿಂದ ಇನ್ನು ಅಂತಹ ನೀಚ ಕೆಲಸ ಮಾಡುವವರಿಗೆ ಭಯ ಇರುತ್ತದೆ.. ಒಂಟಿ ಹೆಣ್ಣು ಇಂತವರ ಕಪಿಮುಷ್ಠಿಯಲ್ಲಿ ನರಳಿ ಜೀವನ ಪೂರ್ತಿ ದುಃಖ ಪಡುವುದು ತಪ್ಪುತ್ತದೆ ಎಂಬುದೇ ಆನಂದದ ವಿಚಾರ. ಇಲ್ಲಿವರೆಗಿನ ನನ್ನ ಜೀವನದ ಪುಟಗಳನ್ನು ತೆರೆದು ಇಟ್ಟಿದ್ದೇನೆ ಶಮಿಕಾ. ಇದನ್ನು ಓದಿ ನಿನಗೆ ನನ್ನ ಬಗ್ಗೆ ಹೇಸಿಗೆ ಹುಟ್ಟಿಸುತ್ತದೊ ಇಲ್ಲ ಗೌರವ ಮೂಡುತ್ತದೊ ಕಾಲವೇ ಉತ್ತರ ನೀಡಬೇಕು.

ಕೆಲವೊಮ್ಮೆ ನಮ್ಮ ದೃಢವಾದ ನಿಲುವುಗಳು ನಮಗೆ ತಿರುವು ಮುರುವು ಆಗಬಹುದು. ಬದುಕು ಎಲ್ಲಾ ಕಡೆ ನಾವು ಎನಿಸಿದಂತೆ ನಡೆಯುವುದಿಲ್ಲ. ಬಿರುಗಾಳಿ ಬೀಸಿದಾಗ ಸೆಟೆದು ನಿಂತ ಮರವೇ ಉರುಳಿ ಬೀಳಬಹುದು …ಇಲ್ಲ ಬರೀ ಮರದ ಗೆಲ್ಲು ಮಾತ್ರ ಮುರಿಯಬಹುದು. ಇದನ್ನು ಯಾವ ಜಾತಕವು ಬರೆಯಲಾರದು .ಯಾವ ಜೋತಿಷ್ಯವು ಹೇಳಲಾರದು. ಅಪ್ಪ ಯಾರು ಎಂದು ನಿನ್ನಲ್ಲಿ ತುಂಬಾ ಜನ ಕೇಳಿರಬಹುದು. ನಿನಗೆ ಅದಕ್ಕೆ ಮುಜುಗರವೂ ಆಗಿರಬಹುದು. ಎಲ್ಲಾ ಕೆಲಸಕ್ಕೂ ಅರ್ಹತೆ ವಿದ್ಯಾಭ್ಯಾಸ ಕೇಳುತ್ತಾರೆ. ಆದರೆ ಅಪ್ಪ ಎನಿಸಿ ಕೊಳ್ಳಲು ‌ಯಾವ ಅರ್ಹತೆಯು ‌ ಕೇಳುವುದಿಲ್ಲ ಯಾವ ವಿದ್ಯಾಭ್ಯಾಸವು ಬೇಕಾಗಿರುವುದಿಲ್ಲ…… ಯಾಕೆ? ನನ್ನ ಮನಸ್ಸಿನ ಭಾವನೆಗಳು, ನನ್ನ ಬಾಲ್ಯದ ನೆನಪುಗಳು, ನಿನ್ನ ಬಾಲ್ಯವನ್ನು ಕಳೆದ ರೀತಿ ಸಮುದ್ರ ಎಂಬ ನನ್ನ ಜೀವನದಲ್ಲಿ ಯಾವ ರೀತಿ ದಡ ಸೇರಿದೆ ಎಂಬುದನ್ನು ಯಾವ ವಿಚಾರವನ್ನು ಮುಚ್ಚಿಡದೆ ಪೂರ್ತಿಯಾಗಿ ನಿನ್ನ ಮುಂದೆ ತೆರೆದಿಟ್ಟಿದ್ದೇನೆ……‌ ನೀನು ನನಗಿಂತ ಹೆಚ್ಚು ಓದಿದವಳು, ತಿಳಿದವಳು…… ನನಗೆ ಬೇರೆ ಎನೂ ಆಸೆ ಇಲ್ಲ… ಆದರೆ ಯಾವೊಬ್ಬ ಹೆಣ್ಣು ಅತ್ಯಾಚಾರಕ್ಕೆ ಒಳಗಾಗಬಾರದು. ಪ್ರತಿ ಜೀವಿಯೂ ಅದರಲ್ಲೂ ಪ್ರತಿ ಹೆಣ್ಣಿಗೂ ಅವಳದೇ ಆದ ಸುಪ್ತ ಬಯಕೆಗಳು, ಜೀವನದ ಕನಸುಗಳು ಇದ್ದೇ ಇರುತ್ತದೆ. ಹಾಗಿರುವಾಗ ಅದನು ಕಸಿದುಕೊಳ್ಳುವ ಯಾವ ಹಕ್ಕೂ ಯಾರಿಗೂ ಇರುವುದಿಲ್ಲ… ನೀನು ಒಬ್ಬ ಹೆಣ್ಣು ನಿನ್ನ ಜೀವನ ನಿಂತ ನೀರಾಗಬಾರದು… ನನ್ನಂತಹ ಅದೆಷ್ಟೋ ಒಂಟಿ ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮ ಮಕ್ಕಳನ್ನು ಸಾಕಲಾಗದೆ ಸರಿಯಾದ ದುಡಿಮೆ, ಸೂರು ಇಲ್ಲದೆ , ದುಡ್ಡಿಗಾಗಿ ಇಷ್ಟ ಇಲ್ಲದೆ ತಮ್ಮ ದೇಹವನ್ನು ಮಾರಿ ಜೀವನ ಮಾಡುತ್ತಿದ್ದಾರೆ. ಅಂತಹವರಿಗೆ ನೀನು ಆಸರೆ ಆಗಬೇಕು ಎಂದು ನನ್ನ ಬಹುದಿನದ ಬಯಕೆ…

ಇತೀ ನಿನ್ನ ತಾಯಿ
ಭವಾನಿ

 

ಪತ್ರ ಓದಿ ಮುಗಿಸಿದ ಮೇಲೆ ಯಾವುದೋ ಲೋಕದಲ್ಲಿ ಇದ್ದ ಹಾಗೆ ಅನಿಸಿತು. ಕಣ್ಣಲಿ ನೀರು ಬಿಂದು ಬಿಂದಾಗಿ ಕೆನ್ನೆ ಮೇಲೆಲ್ಲಾ ಬೀಳುತಿತ್ತು…. … ತಲೆ ಎಲ್ಲಾ ಗಿರ ಗಿರ ತಿರುಗುವ ತರ ಮೈಯಿಡಿ ಎನೋ ಒಂದು ವಸ್ತುವನ್ನು ಇಟ್ಟ ರೀತಿ ಭಾಸವಾಯಿತು …. ಮನಸ್ಸು ನಾಚಿಕೆ ಆಗುತ್ತಿದೆ …ನಾನು ಕಲಿತಿದ್ದೇನೆ ನನಗೆ ಕೆಲಸ ಇದೆ ಎಂಬ ಹುಸಿ ಜಂಬ ಬಿಟ್ಟರೆ ಈ ಸಮಾಜದಲ್ಲಿ ಆಗುವ ಅನ್ಯಾಯ, ಶೋಷಣೆ ಯಾವುದು ಗೊತ್ತಿಲ್ಲ, ನೋಡಿಲ್ಲ. ಅಮ್ಮ ನನಗಾಗಿ ಇಷ್ಟು ನೋವು, ಅವಮಾನ, ಕಷ್ಟ ಅನುಭವಿಸಿ ನನ್ನನು ಈ ಸ್ಥಿತಿಗೆ ತಂದಿದ್ದಾರೆ. ಆದರೆ ನಾನು ಅವರನ್ನೇ ಸಂಶಯದಿಂದ ನೋಡಿ ಮಾತು ಬಿಟ್ಟು ಎಷ್ಟು ಹೀನಾಯವಾಗಿ ಕಂಡೆ….. ಛೇ ಪಾಪ ಅಮ್ಮ ಅಷ್ಟು ಸಣ್ಣ ‌ ವಯಸ್ಸಿನಲ್ಲಿ ಎಷ್ಟೋಂದು ನೋವು ತಿಂದಿದ್ದಾರೆ. ಆದರೆ ಅವರ ಮುಖದಲ್ಲಿ ಮಂದಹಾಸ ಹಾಗೆಯೇ ಇದೆ. ನಾನು ಎನಿಸಿದ್ದು ಒಂದು ಆದರೆ ಇಲ್ಲಿ ಇರುವ ವಿಷಯ ನನಗೆ ಹಿಂತಿರುಗಿ ಬಂದು ಹೊಡೆದಂತೆ ‌ಇದೆ . ಒಂದು ವ್ಯಕ್ತಿಯ ಹುಟ್ಟಿನ ಹಿಂದೆ ಇಷ್ಟೆಲ್ಲಾ ವಿಚಾರ ಇರುತ್ತದೆ ಎಂದು ನಾನು ಎನಿಸಿಯೇ ಇರಲಿಲ್ಲ. ಅದಕ್ಕೆ ಇರಬೇಕು ಕನಕದಾಸರು ಕುಲ ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಎನಾದರೂ ಬಲ್ಲಿರಾ….. ಎಂದು ಹೇಳಿರುವುದು.

ಮೊನ್ನೆ ಕಾಲೇಜಿನಲ್ಲಿ ಮಹಿಳೆ ಮತ್ತು ಸಮಾಜ ಈ ವಿಷಯದ ಚರ್ಚೆ ಇದ್ದಾಗ ಹೆರಿಗೆ ಆಗಿ ಮಗುವನ್ನು ಕಸದ ತೊಟ್ಟಿಯಲ್ಲಿ ಅಥವಾ ಪೊದರಿನಲ್ಲಿ ಮಹಿಳೆ ಬಿಸಾಡಿ ಹೋಗುವುದು ಅವಳದ್ದೇ ತಪ್ಪು ಎಂದು ವಾದ ಮಾಡಿದ್ದೆ.. ಬೇರೆಯವರು ಅದು ಹಾಗಲ್ಲ ಶಮಿಕಾ ಹೆಣ್ಣು ತನ್ನ ಮಗುವನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಲು ತುಂಬಾ ಬಲವಾದ ಕಾರಣ ಇರುತ್ತದೆ. ಇಲ್ಲದಿದ್ದರೆ ಹೆಣ್ಣು ತನ್ನ ರಕ್ತ ಮಾಂಸವನ್ನು ಹಂಚಿಕೊಂಡು 9‌ ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತು ಕೊಂಡು ಎನೂ ಆರಿಯದ ಹಸುಗೂಸನ್ನು ಬಿಸಾಡಲು ಸಾದ್ಯವೇ ಇಲ್ಲ ಎಂದು ಅವರೆಲ್ಲ ಹೇಳುವಾಗ ಕಾರಣ ಏನೇ ಇರಲಿ ಎಲ್ಲೆಂದರಲ್ಲಿ ಬಿಟ್ಟು ಹೋಗುವುದು ತಪ್ಪೆ ಎಂದಿದ್ದೆ. ಆಗ ಅವರು ಹೆಣ್ಣು ಬಲವಂತವಾಗಿ, ಇಲ್ಲ ಅತ್ಯಾಚಾರದಿಂದ ಬಸುರಿ ಆಗಿದ್ದರೆ, ಅತ್ಯಾಚಾರ ಮಾಡಿದವನು ಸಮಾಜದಲಿ ಪ್ರತಿಷ್ಠಿತ ವ್ಯಕ್ತಿಗಳು ಆಗಿದ್ದರೆ ಹೆಣ್ಣು ಅಸಹಾಯಕಳಾಗಿದು ತಾನೇ ಹೆತ್ತ ಮಗುವನ್ನು ಬಿಟ್ಟು ಯಾರಾದರೂ ಸಾಕಲಿ ಎಂದು ಹೊಗುತ್ತಾಳೆ ಎಂದಾಗ ಹೆಣ್ಣಿಗೆ ಆತ್ಮವಿಶ್ವಾಸ ಬೇಕು ಎಂದು ಅವರೆಲ್ಲರ ಬಾಯಿ ಮುಚ್ಚಿಸಿದೆ. ಆದರೆ ಈಗ………ಪ್ರಕೃತಿಯಲ್ಲಿ ಇಷ್ಟೊಂದು ಅಸಮಾನತೆ ಯಾಕಿದೆ. ಹುಟ್ಟಿಗೆ ಗಂಡು ತಾನು ಕಾರಣಕರ್ತನಾದರೂ ಅದರ ಅಂಶಗಳನ್ನು ಹೆಣ್ಣು ಮಾತ್ರ ಹೊತ್ತು ಕೊಳ್ಳಬೇಕು ಛೇ…. ಎಷ್ಟೊಂದು ನೋವಿನ ಭಾವವನ್ನು ಹೆಣ್ಣು ಹೊರಬೇಕು. ಭಾಷಣ, ಚರ್ಚೆ, ಉಪದೇಶ, ಹಿತನುಡಿ ಎಲ್ಲವು ಹೇಳಲು ಕೇಳಲು ಚಂದ..ನಾವೇ ಅದರಲ್ಲಿ ಇದ್ದಾಗ ಮಾತ್ರ ಅದರ ನೋವು ಅರ್ಥಮಾಡಿಕೊಳ್ಳಲು ಸಾಧ್ಯ……..
ಇನ್ನು ಮುಂದೆ ಅಮ್ಮನನ್ನು ಅಕ್ಕರೆಯಿಂದ ನೋಡಿ ಕೊಳ್ಳಬೇಕು.ಅವರ ಬೇಕು ಬೇಡಗಳನ್ನು ಪೂರೈಸಬೇಕು ಎಂದು ಮನಸಿನಲ್ಲೇ ನಿಶ್ಚಯಿಸಿ ಕೊಂಡಳು ಶಮಿಕಾ…..
ಬಾಗಿಲು ಬಡಿದ ಸದ್ದಾಯಿತು ಅಮ್ಮನನ್ನು ಅಪ್ಪಿಕೊಂಡು ತಪ್ಪಾಯಿತು ಎಂದು ಬೇಡಿಕೊಳ್ಳುತ್ತೇನೆ ಎಂದು ಎನಿಸಿ ಬಾಗಿಲು ತೆಗೆದು ನೋಡುತ್ತಾಳೆ..ಯಾರೋ ಎರಡು ಅಪರಿಚಿತ ಹೆಂಗಸರು ನಿಂತಿದ್ದಾರೆ.. ನಾನು ಆಶ್ಚರ್ಯದಿಂದ ಯಾರೂ ಎಂಬಂತೆ ನೋಡುತ್ತಾ ನಿಂತೆ ಇದ್ದೆ. ಆಗ ಅವರು ನೀವು ಭವಾನಿ ಅವರ ಮಗಳು ಅಲ್ವಾ.ಅವರಿಗೆ ಸ್ವಲ್ಪ ಪೆಟ್ಟು ಆಯಿತು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ನೀವು ತಕ್ಷಣ ಬನ್ನಿ ಎಂದು ಹೋಗಿಯೇ ಬಿಟ್ಟರು.ನಿಂತ ನೆಲ ಅಲುಗಾಡಿದಂತೆ ಶಮಿಕಾಳಿಗೆ ಅನಿಸಿತು…..

( ‌‌ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ

Leave a Reply

Your email address will not be published. Required fields are marked *