ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ.
ಅಂತರಾಳ – ಭಾಗ 9
ಶಮಿಕಾ ಗಡಿಬಿಡಿಯಲ್ಲಿ ಆಸ್ಪತ್ರೆಗೆ ಹೋಗುತ್ತಾಳೆ. ತಾಯಿ ತುರ್ತು ಚಿಕಿತ್ಸಾ ಘಟಕದಲ್ಲಿ ಇರುವುದು ತಿಳಿಯುತ್ತದೆ… ಒಳಗೆ ಹೋಗಲು ಬಿಡಲಿಲ್ಲ. ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ . ಮನಸ್ಸು ಏನೇನೋ ಯೋಚಿಸುತ್ತಿದೆ… ಕೆಟ್ಟ ಯೋಚನೆಗಳು ತಕ್ಷಣ ಬರುತ್ತದೆ ……….. ಅಯ್ಯೋ ಅಮ್ಮನಿಗೆ ಎನಾದರೂ ಆದರೆ…….. ನನ್ನ ಪರಿಸ್ಥಿತಿ ಎನು? ಎಲ್ಲಿಗೆ ಹೋಗುವುದು?……. ಇಲ್ಲ ಅಮ್ಮನಿಗೆ ಏನು ಆಗಲಾರದು……. ಇಲ್ಲಿ ತನಕ ದೇವರಿಗಿಂತ ಆತ್ಮಸ್ಥೈರ್ಯ ಮುಖ್ಯ… ನಮ್ಮಲಿ ಧೈರ್ಯ ಇದ್ದರೆ ಅದೇ ದೇವರು ಎನ್ನುತ್ತಿದ್ದೆ…. ಆದರೆ ದೇವರು ಇದ್ದಾರೋ ಇಲ್ಲವೋ ಗೊತ್ತಿಲ್ಲ… ಪರರಿಗೆ ಒಳ್ಳೆದು ಬಯಸುವುದೇ ದೇವರು ಎಂದು ನನ್ನ ಭಾವನೆ…..
ಏನೇ ಆದರೂ ನನ್ನ ಅಮ್ಮನಾಗಲಿ ನಾನು ಆಗಲಿ ಬೇರೆಯವರಿಗೆ ಯಾವತ್ತೂ ಕೆಟ್ಟದನ್ನು ಬಯಸಿಲ್ಲ ಹಾಗಿರುವಾಗ ದೇವರೇ ನನ್ನ ಅಮ್ಮನನ್ನು ಕಾಪಾಡು. ನನ್ನ ಈವರೆಗಿನ ತಪ್ಪು ಅಂದರೆ ಅಮ್ಮನನ್ನು ಎಷ್ಟು ನೋಯಿಸಿದೆ… ನಾವು ಮನುಷ್ಯರು ಬುದ್ಧಿ ಶಕ್ತಿ ಪ್ರಾಣಿ ಪಕ್ಷಿಗಳಿಗಿಂತ ಹೆಚ್ಚು ಇದೆ ಎಂದು ಬೀಗುತ್ತೇವೆ… ಆದರೆ ನಮ್ಮ ಸಂಬಂಧಿಕರು ಅಥವಾ ಆತ್ಮೀಯರು, ನೆರೆಹೊರೆಯವರು ಯಾರೇ ಇದ್ದರೂ ಅವರಲ್ಲಿ ಸಣ್ಣ ಸಂಶಯಕ್ಕೆ, ಕ್ಷುಲ್ಲಕ ಕಾರಣಕ್ಕೆ, ಆಸ್ತಿಗಾಗಿ, ಹಣಕ್ಕಾಗಿ, ಅವರಲ್ಲಿ ಇರುವ ಪ್ರತಿಭೆಗಾಗಿ, ಅವರ ಅಧಿಕಾರಕ್ಕಾಗಿ, ನಮ್ಮ ಮತ್ಸರ, ಅಹಂಕಾರ,ಕಪಟತನ, ಸಣ್ಣತನ,ಮೋಸ ಈ ಎಲ್ಲಾ ಗುಣಗಳಿಂದ ವ್ಯಕ್ತಿ ನಮ್ಮ ಸನಿಹದಲ್ಲಿ ಇದ್ದರೂ ಮಾತನಾಡುವುದಿಲ್ಲ,ನಗುವುದಿಲ್ಲ,ಕರುಣೆ ತೋರುವುದಿಲ್ಲ, ಉಡಾಫೆ ಮಾಡಿಬಿಡುತ್ತೇವೆ. ಅದೇ ವ್ಯಕ್ತಿ ಇನ್ನೇನೋ ಸಾಯುತ್ತಾರೆ ಎಂದಾಗ ಎಷ್ಟು ಚಡಪಡಿಸುತ್ತೇವೆ , ಮಾತನಾಡಲು ಹಾತೊರೆಯುತ್ತೇವೆ, ಹಾಗೆ ಸಹಾಯ ಮಾಡಬಹುದಿತ್ತು ಹೀಗೆ ಮಾತನಾಡಬಹುದಿತು ಎಂದು ಲೆಕ್ಕ ಹಾಕುತ್ತೇವೆ. ಛೇ ಇಂತಹ ಸಮಯದಲ್ಲೂ ಈ ರೀತಿ ಮನಸ್ಸು ಓಡುತ್ತದೆಯಾ….. ಮನಸ್ಸಿಗೆ ಏನೂ ಎಲ್ಲಿ ಬೇಕಾದರೂ ಹೋಗಬಹುದು ಎನೂ ಬೇಕಾದರೂ ಮಾಡಬಹುದು. ಅದನ್ನು ಅಂಕೆಯಲ್ಲಿ ಇಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಅಮ್ಮನಾಗಿ ಮಾತ್ರ ಅಲ್ಲ ಅಪ್ಪನಾಗಿ, ತಂಗಿಯಾಗಿ, ಅಕ್ಕನಾಗಿ ಹೀಗೆ ಎಲ್ಲ ಪಾತ್ರಗಳನೂ ಅಮ್ಮ ಒಬ್ಬರೇ ನಿರ್ವಹಿಸುತ್ತಿದ್ದರು… ಆದರೆ ನಾನು ಮಾತ್ರ ಸರ್ವಾಧಿಕಾರಿಯಂತೆ ಅಮ್ಮನಲ್ಲಿ ವರ್ತಿಸಿದೆ. ಬಾಲ್ಯದಲೂ ಅಮ್ಮ ಎಷ್ಟು ನೋವು ಅಪಮಾನ ಕಷ್ಟ ಅನುಭವಿಸಿ ಬೆಳೆದವರು.. ಯೌವನದಲ್ಲಿ ಆ ದುಷ್ಟರಿಂದ ಗರ್ಭಿಣಿಯಾಗಿ ಅಪಮಾನ ನೋವುಗಳಿಂದ ಎಷ್ಟು ರಾತ್ರಿಗಳು ನಿದ್ದೆ ಇಲ್ಲದೆ ಕಳೆದಿದ್ದರೊ? ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದೂ ಸಾಲದು ಎಂಬಂತೆ ನಾನು ಮಗಳಾಗಿ ಎಷ್ಟು ಅವಮಾನ ಮಾಡಿದೆ…….
ಭವಾನಿ ಕಡೆಯವರು ಯಾರು ಇದ್ದಾರೆ ಎಂದು ದಾದಿ ಜೋರು ಹೇಳಿದಾಗ ತಕ್ಷಣ ಯೋಚನೆಯಿಂದ ಎದ್ದು ಗಡಿಬಿಡಿಯಲ್ಲಿ ದಾದಿ ಬಳಿ ಶಮಿಕಾ ಓಡಿದಳು… “ಹೇಗಿದ್ದಾರೆ ಸಿಸ್ಟರ್ ನನ್ನ ಅಮ್ಮ ನಾನು ಅವರ ಬಳಿ ಹೋಗಬಹುದೇ” ನಿಮ್ಮ ಅಮ್ಮನಿಗೆ ಈಗ ಪ್ರಜ್ಞೆ ಬಂದಿದೆ ಚೆನ್ನಾಗಿ ಇದ್ದಾರೆ ಗಾಬರಿ ಆಗಬೇಡಿ .ಆದರೆ ಈಗ ಹೋಗಲು ವೈದ್ಯರ ಅನುಮತಿ ಇಲ್ಲ ಈಗ ಹೋಗಿ ಈ ಔಷಧಿಯನ್ನು ತೆಗೆದುಕೊಂಡು ಬನ್ನಿ ಎಂದರು.ಅದರಂತೆ ಶಮಿಕಾ ವೈದ್ಯರ ಚೀಟಿಯಲ್ಲಿ ಇದ್ದ ಜಾಷಧಿ ತಂದು ದಾದಿ ಕೈಯಲ್ಲಿ ನೀಡಿದಳು. ಏನು ಮಾಡುವುದು ಎಂಬ ಯೋಚನೆಯಲ್ಲಿ ಇದ್ದಾಗ ಪಕ್ಕದಲ್ಲಿ ಕುಳಿತ ಮಧ್ಯವಯಸ್ಕ ಮಹಿಳೆಯೊಬ್ಬರು ನಿಮ್ಮ ಅಮ್ಮನಿಗೆ ಏನಾಗಿದೆ ಎಂದರು? ಶಮಿಕಾ ಆ ಪ್ರಶ್ನೆಯಿಂದ ಒಮ್ಮೆಲೇ ಅವರ ಕಡೆಗೆ ತಿರುಗಿ ಅವರ ಮುಖ ನೋಡಿದಳು. ಮೊದಲು ಆಗಿದ್ದರೆ ಶಮಿಕಾ ಮಾತನಾಡುತ್ತಿರಲಿಲ್ಲವೋ ಎನೋ… ಆದರೆ ಈಗ ಅಮ್ಮನ ಡೈರಿ ಓದಿದ ಮೇಲೆ ಹಾಗೂ ಅಮ್ಮ ಆಸ್ಪತ್ರೆಯಲ್ಲಿ ಇರುವುದರಿಂದ ಹೆಣ್ಣು, ಹೆಂಗಸರ ಬಗ್ಗೆ ಕರುಣೆ ಬಂದ ಹಾಗೆ ಇತ್ತು. ಹಂ ಅಂಟಿ ಅಮ್ಮಾ ರಸ್ತೆ ದಾಟುವಾಗ ಒಮ್ಮೆಲೇ ಬೈಕ್ ಬಂತಂತೆ ಅಮ್ಮ ನೆಲಕ್ಕೆ ಬಿದ್ದು ಡಾಂಬರು ರಸ್ತೆ ತಲೆಗೆ ತಾಗಿ ಪ್ರಜ್ಞೆ ತಪ್ಪಿದೆ. ಈಗ ಪ್ರಜ್ಞೆ ಬಂತು ಎಂದು ಹೇಳಿದರು.. ಯಾಕೆ ಹಾಗೆ ಅಷ್ಟು ರಭಸದಿಂದ ಗಾಡಿ ಓಡಿಸುತ್ತಾರೋ ? ಅವರ ಜೀವಕ್ಕೆ ಹೇಗೋ ಬೆಲೆ ಇಲ್ಲ…. ಆದರೆ ಅವರಿಂದ ಬೇರೆ ಎಷ್ಟು ಜೀವನ ಹಾಳಾಗುತ್ತದೆ ಎಂದು ಯೋಚಿಸುವುದಿಲ್ಲ ಈ ಮನುಷ್ಯರು……ಆಗ ಆ ಮಹಿಳೆ ಹೌದು ಈ ಸಣ್ಣ ಪ್ರಾಯದ ಗಂಡು ಮಕ್ಕಳೇ ಹೀಗೆ…. ರಸ್ತೆ ಎಂದು ನೆನಪು ಇರುವುದಿಲ್ಲ ಇವರಿಗೆ….. ಆಕಾಶದಲ್ಲಿ ಹಾರಾಡುವ ಹಾಗೆ ಮಾಡುತ್ತಾರೆ ಅಪ್ಪ ಅಮ್ಮನ ಮಾತು ಕೇಳುವುದಿಲ್ಲ ಎಂದರು… ಶಮಿಕಾ ಕೇಳದೆ ನನ್ನ ಹೆಸರು ರಮಣಿ ನನ್ನ ಗಂಡನ ಹೆಸರು ಸಂಜೀವ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ 17 ದಿನ ಆಯಿತು ಎಂದರು…. ಓಹ್ ಹೌದ ಅವರಿಗೆ ಏನಾಗಿದೆ ಅಂಟಿ ಎಂದು ಶಮಿಕಾ ಕೇಳಿದಳು… ಅವರು ಮಾನಸಿಕ ರೋಗಿ ಆಗಿದ್ದಾರೆ ಮಗಳೇ ಎನೂ ಮಾಡುವುದು ಎಂದರು…. ಅಂಟಿ ನನ್ನ ಹೆಸರು ಶಮಿಕಾ ಎಂದು…. ಹೌದ ಹೆಸರು ಮುದ್ದು ಆಗಿರುವಂತೆ ನೀನು ಚೆನ್ನಾಗಿ ಇದ್ದಿ ಎಂದಾಗ… ಎನೂ ತೋಚದೆ ನಿಮಗೆ ಮಕ್ಕಳು ಇದ್ದಾರಾ ಅಂಟಿ ಎಂದಾಗ ರಮಣಿ ತನ್ನ ಸೆರಗಿನಿಂದ ಕಣ್ಣು ಒರೆಸಿಕೊಂಡು ಇದ್ದಿದ್ದರೆ ನಿನ್ನ ಹಾಗೆ ಇರುತ್ತಿದ್ದಳು ಶಮಿಕಾ…..
ಅವಳ ಹೆಸರು ಸ್ಪೂರ್ತಿ….. ಆದರೆ ಅವಳು ಇಲ್ಲದೆ 5 ವರುಷಗಳೇ ಕಳೆದವು ಶಮಿಕಾ…. ಅವಳು ಇಲ್ಲದೆ ನಮ್ಮ ಬಾಳು ಕತ್ತಲೆ ಆಯಿತು ಅವಳ ಮರಣದ ನಂತರ ಅವಳ ಅಪ್ಪ ನನ್ನ ಗಂಡ ಕೂಡ ಮಾನಸಿಕವಾಗಿ ದುರ್ಬಲಗೊಂಡರು…. ಇತ್ತೀಚೆಗೆ ಏನೇನೋ ಹೇಳುತ್ತಾರೆ ನನಗೆ ಒಂದು ಅರ್ಥವಾಗುವುದಿಲ್ಲ…….
ನಿಮ್ಮ ಮನೆ ಎಲ್ಲಿ ಅಂಟಿ ಎಂದಾಗ ನಾವು ಉಡುಪಿಯಲ್ಲಿ ಇರುವುದು.. ನನ್ನ ತಂಗಿ ಇಲ್ಲೇ ಮಂಗಳೂರಿನಲ್ಲಿ ಇರುವುದು. ಅಲ್ಲದೆ ಈ ಆಸ್ಪತ್ರೆಯಲ್ಲಿ ಸ್ವಚ್ಛತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಳೆ. ಅದಕ್ಕೆ ಅವಳು ಭಾವನನ್ನು ಇಲ್ಲಿ ಸೇರಿಸಿ ಎಂದಳು. ಹಾಗೆ ಇಲ್ಲಿ ಸೇರಿಸಿದ್ದು ಎಂದರು… ಆಗ ಶಮಿಕಾ ನಿಮಗೆ ಅಭ್ಯಂತರವಿಲ್ಲದಿದ್ದರೆ ಸ್ಪೂರ್ತಿ ಹೇಗೆ ಮರಣ ಹೊಂದಿದ್ದು ಕೇಳಬಹುದೇ…….? ನನಗೆ ಅಭ್ಯಂತರ ಯಾಕೆ ಮಗಳೇ…ಯಾವ ಹೆಣ್ಣು ಮಗುವಿಗೂ ಅಂತಹಾ ಅನ್ಯಾಯ ಆಗಬಾರದು.. ಹೆಣ್ಣು ಮಕ್ಕಳು ಪ್ರತಿ ಕ್ಷಣ ಎಚ್ಚರ ಆಗಿರಬೇಕು ಹಾಗೂ ಅವರ ಪೋಷಕರು ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುವವರು ಕೂಡ ಹೆಣ್ಣು ಮಗು ಮತ್ತು ಹೆಂಗಸರ ಬಗ್ಗೆ ಜಾಗೃತಿ ಇರಬೇಕು. ಎಂದು ನಾನು ಅಂದುಕೊಳ್ಳುತ್ತೇನೆ………….
ಅವಳು ಮೊದಲ ವರ್ಷದ ಡಿಗ್ರಿ ಓದುತ್ತಿದ್ದಳು… ಒಂದು ದಿನ ನಮ್ಮ ಮನೆಯ ಒಂದು ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಪರಿಚಯ ಇರುವ ಒಬ್ಬರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಇತ್ತು…. ನನ್ನ ಮಗಳು ಸ್ಪೂರ್ತಿ ಮತ್ತು ಅವಳ ಅಪ್ಪ ಅಲ್ಲಿಗೆ ಹೋಗಿದ್ದರು. ನಾನು ಹೋಗಿರಲಿಲ್ಲ… ಬಹುಶಃ ನಾನು ಆ ದಿನ ಹೋಗಿದ್ದರೆ ಇವತ್ತು ಸ್ಪೂರ್ತಿ ಖಂಡಿತಾ ಇರುತ್ತಿದ್ದಳು… ಇತ್ತೀಚೆಗೆ ಮೆಹಂದಿ ಎನ್ನುವ ಸಂಭ್ರಮ ಬರೀ ಕುಡಿತ ಮತ್ತು ತಿನ್ನುವುದು ಡ್ಯಾನ್ಸ್ ಮಾಡುವುದು ಇದಕ್ಕೆ ಸೀಮಿತವಾಗಿದೆ ಎಂದೇ ಹೇಳಬಹುದು.. ಮೊದಲೆಲ್ಲ ಸಂಬಂಧಿಕರು ತಮ್ಮೊಳಗೆ ಮಾತನಾಡಿಕೊಂಡು ಕಷ್ಟ-ಸುಖ ಹಂಚಿಕೊಂಡು, ಎಷ್ಟು ದೊಡ್ಡ ಕಾರ್ಯಕ್ರಮವೇ ಇರಲಿ ಎಷ್ಟೇ ಜನ ಬರಲಿ ಹೆಣ್ಣು ಗಂಡು ಬೇಧವಿಲ್ಲದೆ ಅಡುಗೆ ಕೆಲಸಗಳನ್ನು ಎಲ್ಲರೂ ಸೇರಿ ಮಾಡುತ್ತಿದ್ದರು. ಈಗ ಹಾಗಲ್ಲ….
10 ಜನ ಸೇರಿದರೂ ಊಟ ಕ್ಯಾಟರಿಂಗ್ ನವರಲ್ಲಿ ಮಾಡಿಸುತ್ತಾರೆ…ಬಂದ ಯಾರಿಗೂ ಬೇರೆ ಕೆಲಸ ಇಲ್ಲ. ಇಲ್ಲಿ ಕೂಡ ಎಷ್ಟು ಬೇಕೋ ಅಷ್ಟು ಕುಡಿದು ತಿಂದು ಬೇಕಾ ಬಿಟ್ಟಿಯಾಗಿ ಕುಣಿಯುತ್ತಿದ್ದರಂತೆ .. ಅಷ್ಟು ಮಾತ್ರವಲ್ಲ ಇಡೀ ಊರಿಗೆ ಕೇಳುವ ಹಾಗೆ ಹಾಡು ಹಾಕಿದ್ದರು…ಈ ರೀತಿ ಹೆಚ್ಚಿನ ಕಾರ್ಯಕ್ರಮದಲ್ಲಿ ಯಾರು ಕಿರುಚಿದರೂ ಕೇಳದಷ್ಟು ಜೋರಾಗಿ ಹಾಡು ಹಾಕುತ್ತಾರೆ…. ಇಲ್ಲಿ ಕೂಡ ಹಾಗೆಯೇ ಎನೂ ಮಾತನಾಡಿದರು ಯಾರಿಗೂ ಕೇಳುತ್ತಿರಲಿಲ್ಲ, ಕೇಳುವ ಪುರುಸೊತ್ತು ಸಮಯ ಕೂಡಾ ಯಾರಿಗೂ ಇರುವುದಿಲ್ಲ.. ಮದುವೆ ಮನೆಯವರು ಮೆಹಂದಿಯ ಖುಷಿಯಲ್ಲಿ ಇರುತ್ತಾರೆ… ಸ್ಪೂರ್ತಿಯ ಅಪ್ಪನಿಗೆ ಗೆಳೆಯರು ಕುಡಿತ ಮೋಜು ಮಸ್ತಿ ಇದ್ದರೆ ಮಗಳು ಬೇಡ ಯಾರೂ ಬೇಡ…. ಅದು ನನಗೆ ಮದುವೆ ಆದ ಮೇಲೆಯೇ ತಿಳಿದಿದ್ದು…………
ಆ ದಿನ ರಾತ್ರಿ ಸ್ಪೂರ್ತಿ ಊಟ ಮಾಡಿದ್ದು ನಮ್ಮ ಸಂಬಂಧಿಕರು ನೋಡಿದ್ದಾರೆ… ಆಮೇಲೆ ಅವಳು ಯಾಕೆ ಹೊರಗೆ ಹೋಗಿದ್ದಾಳೆ? ಅಥವಾ ಬೇರೆ ಯಾರಾದರೂ ಬಾ ಎಂದು ಕರೆದಿದ್ದಾರ? ಅಥವಾ ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದಾರ ಯಾವುದೂ ನಮಗೆ ಗೊತ್ತಾಗಲಿಲ್ಲ……..
(ಮುಂದುವರಿಯುವುದು)
✍️ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ