January 19, 2025
dark-green-blue-wallpaper-meets-wallpapers_20180118161749634

ಕನ್ನಡ ಚಿತ್ರರಂಗದ ಹೊಸ ಅಲೆಯ ಚಿತ್ರಗಳ ನಿರ್ದೇಶಕ, ಅನುಭವಿ ನಟ,ನಿರ್ಮಾಪಕ ಶ್ರೀ ಕಾಶೀನಾಥ್ ತಮ್ಮ ಚಿತ್ರಪ್ರಯಾಣದ ಅಂತಿಮ ಪರದೆ ಎಳೆದಿದ್ದಾರೆ. ಎಂಬತ್ತರ ದಶಕದಲ್ಲಿ ಏಕತಾನತೆಯಿಂದ ಬಸವಳಿದಿದ್ದ ಕನ್ನಡ ಚಿತ್ರರಸಿಕರಿಗೆ ಕಚಗುಳಿ ಇಡುವಂತೆ ಪಾದಾರ್ಪಣೆ ಮಾಡಿದ ಕಾಶೀನಾಥ್ ತಮ್ಮ ವಿಭಿನ್ನ ಶೈಲಿಯ ನಿರ್ದೇಶನ, ತಮ್ಮದೇ ಹಾಸ್ಯಮಿಶ್ರಿತ ಹಾವಭಾವ,ನಟನೆಯಿಂದ ಕನ್ನಡ ಚಿತ್ರರಸಿಕರನ್ನು ಸೂಜಿಗಲ್ಲಿನಂತೆ ಸೆಳೆದರು.1951 ರಲ್ಲಿ ಕುಂದಾಪುರ ಬಳಿಯ ಕೋಟೇಶ್ವರದ ಶ್ರೀ ವಾಸುದೇವ ರಾವ್ ಮತ್ತು ಶ್ರೀಮತಿ ಸರಸ್ವತಿಯವರ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶೀನಾಥ್ ಇಂಜಿನಿಯರ್ ಆಗುವ ಮಹದಾಸೆ ಹೊತ್ತು ಬೆಂಗಳೂರಿಗೆ ಬಂದು ವಿಜಯಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರ್ಣಗೊಳಿಸುವುದರೊಳಗಾಗಿ ಚಿತ್ರರಂಗದೆಡೆಗೆ ಆಕರ್ಷಿತರಾಗಿದ್ದರು. ಓದುತ್ತಿರುವಾಗಲೇ ಕಿರುಚಿತ್ರದ ಸುಳಿಗೆ ಸಿಲುಕಿ ಚಿತ್ರರಂಗದೆಡೆಗೆ ಸೆಳೆಯಲ್ಪಟ್ಟು 1975 ರಲ್ಲಿ “ಅಪರೂಪದ ಅತಿಥಿಗಳು” ಚಿತ್ರ ನಿರ್ದೇಶಿಸುವುದರೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಸುರೇಶ್ ಹೆಬ್ಳೀಕರ್ ರವರ “ಅಸೀಮ ಫಿಲ್ಮ್ ಸೆಂಟರ್” ಸೇರಿ 1978 ರಲ್ಲಿ ತಯಾರಿಸಿದ ಚಿತ್ರ “ಅಪರಿಚಿತ” ಅವರಿಗೆ ನಿರ್ದೇಶಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತು.1984 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ “ಅನುಭವ” ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶವೇ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತಹ ಹೆಸರು ತಂದುಕೊಟ್ಟಿತು.ಅಲ್ಲಿಂದ ಅವರು ಹಿಂದೆ ತಿರುಗಿ ನೋಡಲೇ ಇಲ್ಲ. ಅನುಭವ ಚಿತ್ರವನ್ನು ಹಿಂದಿಯಲ್ಲಿ “ಅನುಭವ್” ಎಂಬ ಹೆಸರಿನಲ್ಲಿ ನಿರ್ದೇಶಿಸಿದರು.”ಅನಂತನ ಅವಾಂತರ,ಅಜಗಜಾಂತರ,ಲವ್ ಮಾಡಿ ನೋಡು, ಮನ್ಮಥರಾಜ,ಹಲೋ ಯಮ,ಅವಳೇ ನನ್ನ ಹೆಂಡ್ತಿ,” ಹೀಗೆ ಸಾಲುಸಾಲು ಹಿಟ್ ಚಿತ್ರಗಳನ್ನು ಕೊಟ್ಟರು. ಸುಧಾರಾಣಿಯವರೊಂದಿಗೆ ಅಭಿನಯಿಸಿದ “ಅವನೇ ನನ್ನ ಗಂಡ” ಬರೋಬ್ಬರಿ ಒಂದು ವರ್ಷ ಸತತವಾಗಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು.ತಮ್ಮ ಚಿತ್ರ ಜೀವನದಲ್ಲಿ 43 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ,17 ಕ್ಕೂ ಹೆಚ್ಚಿನ ಚಿತ್ರ ನಿರ್ದೇಶಿಸಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರ “ಅಜ್ಜೀ ಲೇಹ್ಯ,ತೂತು ಉಂಟು ತಾಳ ಇಲ್ಲ, ಡಗಾರ್,ಮಂಗಳೂರು ಮಂಜುನಾಥ” ಎಂಬಿತ್ಯಾದಿ ಪದಗಳು ಆಗ ಪಡ್ಡೇ ಹುಡುಗರ ಬಾಯಲ್ಲಿ ಸೀರುಂಡೆಯಾಗಿದ್ದವು.

 


ನಟನೆಯೊಂದಿಗೆ ನಿರ್ದೇಶನ, ಸಂಭಾಷಣೆ,ಸಾಹಿತ್ಯ ರಚನೆ,ಸಂಗೀತ ಸಂಯೋಜನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಕನ್ನಡ ಚಿತ್ರರಂಗಕ್ಕೆ ಉಡುಗೊರೆಯಾಗಿ ನೀಡಿದರು.ಕನ್ನಡ ಚಿತ್ರರಂಗದ ಅಮೂಲ್ಯ ಪ್ರತಿಭೆ ನಟ,ನಿರ್ದೇಶಕ ಉಪೇಂದ್ರ ಅವರ ಗರಡಿಯಲ್ಲಿಯೇ ಪಳಗಿದವರು.ಸಂಗೀತ ನಿರ್ದೇಶಕ ವಿ.ಮನೋಹರ್,ಕ್ಯಾಮರಾಮನ್ ಸುಂದರನಾಥ್ ಸುವರ್ಣ, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ನಟಿಯರಾದ ಉಮಾಶ್ರೀ, ಅಭಿನಯ,ಅಂಜಲಿ,ಅಂಜನಾ,ವನಿತಾವಾಸು ಇನ್ನೂ ಮುಂತಾದವರೆಲ್ಲಾ ಕಾಶೀನಾಥ್ ರವರ ಅನ್ವೇಷಣೆಗಳು.ಹಲವಾರು ಪ್ರತಿಭೆಗಳು ಇವರಿಂದ ಸಿನಿ ಜಗತ್ತಿಗೆ ಪರಿಚಿತಗೊಂಡು ಯಶಸ್ಸಿನ ಉತ್ತುಂಗಕ್ಕೇರಿದ್ದಾಗ್ಯೂ ಇವರು ಎಲ್ಲಿಯೂ ಅವರನ್ನು ನಾನು ಬೆಳಕಿಗೆ ತಂದೆ ಎಂದು ಹೇಳಿಕೊಳ್ಳಲಿಲ್ಲ.ತಾನೂ ಬೆಳೆದು ತನ್ನೊಂದಿಗೆ ಇರುವವರನ್ನೂ ಬೆಳೆಸಿದ ವಿಶಿಷ್ಟ ವ್ಯಕ್ತಿತ್ವ ಕಾಶೀನಾಥ್ ಅವರದ್ದು.

 

ಕಾಶೀನಾಥ್ ರನ್ನು ಜನ ಮರೆತರು ಅನ್ನುವಾಗಲೆಲ್ಲಾ ಫೀನಿಕ್ಸ್ ನಂತೆ ಎದ್ದು ಬಂದು ಚಿತ್ರರಸಿಕರನ್ನು ಚಕಿತಗೊಳಿಸುತ್ತಿದ್ದರು.ಆ ಸಾಲಿನಲ್ಲಿ ಬರುವ ಚಿತ್ರಗಳಲ್ಲಿ ಪ್ರಮುಖವಾದವುಗಳು “ಹಲೋ ಯಮ,ಶ್ಯು,ಚೌಕ”. ಚೌಕ ಚಿತ್ರದ ಅವರ ಅಭಿನಯ ಹಲವು ಕಾಲ ನೆನಪಿಡುವಂತಹುದಾಗಿತ್ತು.ಆ ಚಿತ್ರದ “ ಅಪ್ಪಾ…ಐ ಲವ್ ಯೂ ಪಾ….“ಹಾಡಂತೂ ಹಲವರ ಕಣ್ಣು ತೇವಗೊಳಿಸಿತ್ತು.

ಹಲವು ವರ್ಷಗಳಿಂದ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ಎಲ್ಲೂ ತೋರ್ಪಡಿಸಿಕೊಳ್ಳದೇ ನಗುನಗುತ್ತಲೇ ಜೀವಿಸಿದ ಕಾಶೀನಾಥ್, ಕಾಯಿಲೆ ಉಲ್ಬಣಿಸಿದ ಕಾರಣ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಸೇರಿದವರು ಜನವರಿ 18 ರ ಬೆಳಿಗ್ಗೆ ಜವರಾಯನ ಉರುಳಿಗೆ ಕೊರಳೊಡ್ಡಿ ತಮ್ಮ ಅಭಿಮಾನಿಗಳನ್ನು ದುಃಖದ ಕಡಲಿಗೆ ದೂಡಿ ಹೊರಟುಹೋಗಿದ್ದಾರೆ‌.

 

ಭಗವಂತನು ಅವರ ಪತ್ನಿ ಶ್ರೀಮತಿ ಚಂದ್ರಪ್ರಭಾ,ಮಗ ಅಭಿಮನ್ಯು, ಮಗಳು ಹಾಗೂ ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

 

ಭಂಡಾರಿವಾರ್ತೆ

2 thoughts on “ಅಪರಿಚಿತ ಅನುಭವ ನೀಡಿದ ಚಪಲ ಚೆನ್ನಿಗರಾಯನ ಅಂತ್ಯ

  1. ಹೌದು ಅಪರೂಪದ ವ್ಯಕ್ತಿತ್ವದ ಕಾಶಿನಾಥರ ಆತ್ಮಕ್ಕೆ ಶಾಂತಿಸಿಗಲಿ. ಅವರ ವ್ಯಕ್ತಿತ್ವ ಇತರರಿಗೂ ಮಾದರಿ ಆಗಲಿ.
    ಉತ್ತಮ ನಿರೂಪಣೆ Thanks to ಭಂಡಾರಿ ವಾರ್ತೆ

Leave a Reply

Your email address will not be published. Required fields are marked *