
ಹೆಣ್ಣು ಮಕ್ಕಳಿಗೆ ಕೊಂಚ ಜಾಸ್ತಿಯೇ ಭಾವುಕತೆ ಇರುತ್ತದೆ ಎಂದು ಹೇಳುತ್ತಾರೆ. ಅದು ಯಾರ ವಿಷಯದಲ್ಲೂ ಆಗಿರಬಹುದು.ಆದರೆ ನಾನು ತುಂಬಾ ಭಾವುಕಳು. ಅದರಲ್ಲೂ ಅಪ್ಪನ ವಿಚಾರದಲ್ಲಿ. ಬಾಲ್ಯದಲಿ ಉತ್ತಮ ಗೆಳೆಯ, ಪೋಷಕ,ಮಾಗ೯ದಶ೯ಕ ಎಲ್ಲವೂ ಅವರೇ ಆಗಿದ್ದರು

ಅಪ್ಪ ಅಂದಾಕ್ಷಣ ಮನದಲ್ಲಿ ಮೂಡುವುದು ಆತನ ಅಕ್ಕರೆಯ ಪ್ರೀತಿ. ತನ್ನ ನೋವನ್ನು ಅದುವಿಟ್ಟುಕೊಂಡು ಚೈತನ್ಯದಿಂದ ಸದಾ ಮಂದಹಾಸ ಬೀರುತ್ತಾರೆ. ತಂದೆ ಮಗಳ ಸಂಬಂಧ ಅಪಾರವಾದ ಪ್ರೀತಿ ತುಂಬಿರುವ ಬಾಂಧವ್ಯವಾಗಿರುತ್ತದೆ. ತಂದೆಗೆ ಮಗಳ ಜನನವಾಗಿದೆ ಎಂಬ ಸುದ್ದಿ ಕೇಳಿದೊಡನೆ ಮರಳಿ ತಾಯಿಯನ್ನೇ ಕಂಡಂತೆ ಖುಷಿ ಪಡುತ್ತಾರೆ. ಮಗಳಿಗೂ ಅಷ್ಟೇ ಅಪ್ಪನೆಂದರೆ ಒಂದು ಧೈರ್ಯ, ಆತ್ಮವಿಶ್ವಾಸ. ಅವಳ ಜೀವನದಲ್ಲಿ ಮೊದಲ ನಾಯಕ ಸ್ಥಾನ ತಂದೆಯಾಗಿರುತ್ತಾನೆ. “ಚಿಪ್ಪಿನೊಳಗೆ ಅವಿತುಕೊಂಡ ಆಮೆಯಂತೆ ಅಪ್ಪನ ಪ್ರೀತಿ ಸದಾ ಹಸಿರು”

ಚಿಕ್ಕವಳಿದ್ದಾಗ ಅಪ್ಪ ಇಲ್ಲದೇ ಬದುಕೇ ಇಲ್ಲ ಅಂದುಕೊಂಡಿದ್ದೆ ಆದರೆ ಈಗ ಆತ ಜೊತೆಯಾಗಿಲ್ಲ. ನನ್ನ ಬದುಕಿನ ಸುತ್ತ ಹರಡಿಕೊಂಡಿರುವುದು ಕೇವಲ ಆತನ ನೆನಪುಗಳು ಮತ್ತು ಅಮ್ಮನ ಬೆಂಬಲ ಮಾತ್ರ. ಹನ್ನೆರಡು ವರ್ಷಗಳ ಕಾಲ ಕಳೆದ ಆತನೊಂದಿಗಿನ ಕ್ಷಣಗಳು ಈಗಲೂ ಮನದಾಳದಲ್ಲಿ ಅಚ್ಚೆಯಾಗಿ ಕೂತಿವೆ. ಆಗ ನಮ್ಮ ಸನಿಹವನ್ನು ನಿರಾಕರಿಸಿ ಹೋದ ಆತ ಇಂದಿಗೂ ಮರಳಲಿಲ್ಲ. ಬದುಕಿನಲ್ಲಿ ಎತ್ತರಕ್ಕೇರುವ ಕನಸು ಮೂಡಿಸಿದಾತ ಅದನ್ನು ಏಕಾಂಗಿಯಾಗಿ ಸಾಧಿಸುವ ಜವಾಬ್ದಾರಿ ನೀಡಿದ.ಅದೆಷ್ಟೋ ಕಷ್ಟಗಳನ್ನು ಒಂಟಿಯಾಗಿ ಎದುರಿಸುವಾಗ ಅಪ್ಪ ಇರುತ್ತಿದ್ದರೆ ಕೈ ಹಿಡಿದು ನಡೆಸುತ್ತಿದ್ದ ಎಂದನಿಸುತ್ತಿತ್ತು. ಸಮಾಧಾನಕರ ವಿಷಯ ಎಂದರೆ ಒಂಟಿಯಾಗಿ ಕಷ್ಟ -ನೋವುಗಳ ನಿಭಾಯಿಸುವ ಪಾಠ ತಿಳಿಸಿಕೊಟ್ಟ ಎಂಬುದಷ್ಟೇ…
“ನಿನ್ನೊಂದಿಗೆ ಕಳೆದ ಆ ದಿನಗಳು ಇಂದಿಗೂ ಮನದಿಂದ ಮಾಸಿಲ್ಲ, ನಿನ್ನ ಹೆಗಲ ಮೇಲೆ ಕುಳಿತು ಹಿಗ್ಗಿದ ಕ್ಷಣಗಳು ನನ್ನೆದೆಯಲ್ಲಿ ನೆನಪಾಗಿ ಉಳಿದಿವೆ. ನಿನ್ನ ಬರುವಿಕೆಗಾಗಿ ಪ್ರತಿ ಕ್ಷಣವೂ ಕಾಯುತಿರುವೆ “.
