ಅಂದು ನನ್ನ ವಯಸ್ಸು 3-4 ರ ಒಳಗಿತ್ತು. ನನ್ನ ದೊಡ್ಡಕ್ಕಳ ಮದುವೆ ಆ ಕಾಲದಲ್ಲೇ ನಡೆದಿತ್ತು. ನಮ್ಮ ಭಾವ ಕಟೀಲು ಹತ್ತಿರದ ಎಕ್ಕಾರು ಎಂಬ ಊರಿನವರು. ಇವರು ಕಟಿಲ ಉಲ್ಲಾಲ್ದಿಯ ಮಹಾ ಭಕ್ತರು ಆಗಿದ್ದರು. ದಿನಕ್ಕೆ ಒಂದು ಹತ್ತು ಬಾರಿಯಾದರೂ “ಅಪ್ಪೆ ಕಟಿಲ ಉಲ್ಲಾಲ್ದಿ”ಎಂದು ಅವರು ಭಜಿಸುತ್ತಿದ್ದರು. ಅವರ ಹಾಸ್ಯಮಯ ಮಾತುಗಳು ಮನೆಮಂದಿಗೆಲ್ಲಾ ಖುಷಿ ಕೊಡುತ್ತಿತ್ತು. ಸುಳ್ಳು ಹೇಳಿ ಜನರನ್ನು ನಗಿಸುವ ಪ್ರವೃತ್ತಿ ಅವರಲ್ಲಿತ್ತು. ಈ ಗುಣ ಇವರಲ್ಲಿ ಇದ್ದರಿಂದ ಅವರ ಮಾತುಗಳನ್ನು ಕೆಲವೊಮ್ಮೆ ಯಾರೂ ನಂಬುತ್ತಿರಲಿಲ್ಲ. ಅವರು ಸತ್ಯವನ್ನು ನುಡಿಯು ತ್ತಿದ್ದರೂ ಜನರು ಅಲ್ಲದೆ ಅವರ ಪತ್ನಿಯೂ ನಂಬುತ್ತಿರಲಿಲ್ಲ. ಆ ಕ್ಷಣದಲ್ಲಿ “ಕಟಿಲ ಉಲ್ಲಲ್ದಿ ಕಂಟಲೆ”ಎಂದು ಸತ್ಯ ಪ್ರಮಾಣ ಮಾಡುವುದೂ ಇತ್ತು. ಆಗ ಅವರ ಮಾತುಗಳ ನ್ನು ಎಲ್ಲರೂ ನಂಬುತ್ತಿದ್ದರು. ಉಲ್ಲಾಲ್ದಿಯ ಪರಮ ಭಕ್ತ ಎಂದು ಎಲ್ಲರಿಗೂ ತಿಳಿದಿತ್ತು.
ಅಕ್ಕ ಭಾವ ಬೊಂಬಾಯಿಯಲ್ಲಿ ಇದ್ದವರು. (ಭಾವ ಈಗ ಇಲ್ಲ. ಅಕ್ಕ ಬೊಂಬಾಯಿಯಲ್ಲೇ ಇದ್ದಾರೆ)ಅವರು ಊರಿಗೆ ಬಂದಾಗ ಕಟಿಲ ಉಲ್ಲಲ್ದಿಯ(ದುರ್ಗ ಪರಮೇಶ್ವರಿ) ಫೋಟೋ ಒಂದನ್ನು ನಮ್ಮ ಮನೆಗೆ ತಂದು ಗೋಡೆಯಲ್ಲಿ ನೇತು ಹಾಕಿದ್ದರು. “ಅಪ್ಪೆ ಕಟಿಲ ಉಲ್ಲಾಲ್ದಿಯೇ ಕಾಪುಲ” ಎಂದು ಕೈ ಮುಗಿಯುವುದನ್ನು ನಾನು ನೋಡುತ್ತಾ ಇದ್ದೆ. ಆವರೆಗೆ ನನಗೆ ದೇವರ ಹೆಸರು ಮತ್ತು ಆರಾಧಿಸುವ ಕ್ರಮವೇ ಗೊತ್ತಿರಲಿಲ್ಲ. ನಮ್ಮ ಮನೆಯಲ್ಲೂ ಈ ರೀತಿ ಆರಾಧಿಸುವ ಪದ್ಧತಿ ಇರಲಿಲ್ಲ. ದೇವರಿಗೆ ಮತ್ತು ತುಲಸಿ ಕಟ್ಟೆಗೆ ದೀಪ ಇಡುವುದನ್ನು ಮಾತ್ರ ಕಂಡಿದ್ದೆ. ಭಾವನವರು ಉಚ್ಛರಿಸುವ ದೇವರ ಹೆಸರು ಮತ್ತು ಕೈ ಮುಗಿದು ಬೇಡುವ ರೀತಿ ನನ್ನನ್ನು ಸೆಳೆದು ಬಿಟ್ಟಿತ್ತು.
ಅಪ್ಪೆ,ಕಟಿಲ,ಉಲ್ಲಲ್ದಿ,ಕಾಪುಲ ಈ ಪದಗಳು ಏನೆಂದು ನನಗೆ ತಿಳಿದಿರಲಿಲ್ಲ. ಅದು ಎಲ್ಲಿದೆ ಎಂದೂ ಗೊತ್ತಿಲ್ಲ. ಆದರೆ ನಾನೂ ಈ ಪದಗಳನ್ನು ಪ್ರಯತ್ನಿಸಿ ಉಚ್ಛರಿಸುತ್ತಿದ್ದೆ. ಇಷ್ಟೇ ಅಲ್ಲದೆ ಉಲ್ಲಲ್ದಿಗೆ ಹೂವಿನ ಪೂಜೆ, ಸೀರೆ ಒಪ್ಪಿಸುವ ಮಾತುಗಳನ್ನು ನನ್ನ ತಾಯಿ ಮತ್ತು ದೊಡ್ಡ ಅಕ್ಕ ಮಾತಾ ನಾಡುವುದನ್ನೂ ಕೇಳುತ್ತಿದ್ದೆ. ಆದರೆ ಅದೇನು ಎಂದು ಗೊತ್ತಾಗುತ್ತಿರಲಿಲ್ಲ.
ನಾನು ಶಾಲೆಗೆ ಸೇರಿದ ಬಳಿಕ ದೇವರಿಗೆ ಭಜನೆ ಹೇಳುವ ಅಭ್ಯಾಸ ಆದೊಡನೆ ಮನೆಯಲ್ಲೂ ಭಜನೆಯ ಕಾರ್ಯಕ್ರಮ ನಡೆಯುತ್ತಿತ್ತು. ಬೇರೆ ಬೇರೆ ದೇವರುಗಳ ಹೆಸರುಗಳು ತಿಳಿಯುತ್ತದೆ. ಅವರಿಗೆ ಬೇಕಾದ ಭಜನೆಗಳನ್ನು ಅಣ್ಣ ಅಕ್ಕರೊಂದಿಗೆ ಹಾಡುವ ಅಭ್ಯಾಸವು ದಿನವೂ ಇರುತ್ತಿತ್ತು. ಕಟಿಲ ಉಲ್ಲಾಲ್ದಿಯ ಇತರ ಹೆಸರುಗಳಾದ ದೇವಿ,ಭ್ರಾಮರಿ,ದುರ್ಗಾ ಪರಮೇಶ್ವರಿ,ಕಟಿಲೇಶ್ವರಿ ಇತ್ಯಾದಿ ಹೆಸರುಗಳ ಅರಿವು ಆಗುತ್ತದೆ. ಆದರೂ ಆರಂಭದಲ್ಲಿ ಉಚ್ಛರಿಸಿದ್ದ “ಅಪ್ಪೆ ಕಟಿಲ ಉಲ್ಲಲ್ದಿ ಕಾಪುಲ”ಎಂಬ ಮೂಲ ಮಂತ್ರ ಶಾಶ್ವತವಾಗಿ ನನ್ನ ಬಾಯಿಯಲ್ಲಿ ಉಳಿದೇ ಹೋಯಿತು.
ನಾನು ಹತ್ತನೇ ಕ್ಲಾಸ್ ಕಲಿಯುವ ಸಮಯದಲ್ಲಿ ಮೊಟ್ಟ ಮೊದಲಾಗಿ ಉಲ್ಲಲ್ದಿ ಕ್ಷೇತ್ರಕ್ಕೆ ಹೋಗಿದ್ದೆ. ಆಗ ದೇವಾಲಯ ದ ಹೆಸರಿನ ಫಲಕ ದುರ್ಗಾ ಪರಮೇಶ್ವರಿ ದೇವಾಲಯ ಎಂದಿತ್ತು. ನಂತರದ ವರ್ಷಗಳಲ್ಲಿ ಅದೆಷ್ಟು ಬಾರಿ ನಾನು ಕಟೀಲ್ ಕ್ಷೇತ್ರಕ್ಕೆ ಹೋಗಿದ್ದೇನೆಂದು ಹೇಳಲು ಬರುವುದಿಲ್ಲ. ಸಂಸಾರಿ ಆದ ಬಳಿಕ ಅಂತು ಇದರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ನನ್ನ ಕುಟುಂಬ ಬೆಳೆದಂತೆ ಉಲ್ಲಲ್ದಿ ಕ್ಷೇತ್ರಕ್ಕೆ ಹೋಗಿ ಬರುವುದು ಅದೊಂದು ವಾಡಿಕೆ ಆಗಿ ಬಿಡ್ತು. ಅಲ್ಲಿ ಹೆಚ್ಚಾಗಿ ನಡೆಯುವ “ಹೂವಿನ ಪೂಜೆ”ಎಂಬ ಹರಕೆಯನ್ನು ಎಷ್ಟು ಬಾರಿ ಕೊಟ್ಟಿದ್ದೇನೆ ಎಂಬುದಕ್ಕೆ ಲೆಕ್ಕ ಇಲ್ಲ. ಏನು ಚಿಕ್ಕ ಕಷ್ಟ ಬಂದರೂ ದುರ್ಗೆಗೆ ಹೂವಿನ ಪೂಜೆ ಕೊಡುತ್ತೇನೆ ಎಂಬ ಹರಕೆಯನ್ನು ಮನೆಯಲ್ಲಿ ಮಹಿಳೆಯರು ಹೇಳುವುದು ಮಾಮೂಲು. ಅಲ್ಲದೆ ಉಲ್ಲಲ್ದಿಗೆ ಸೀರೆ ಒಪ್ಪಿಸುವುದು,ಮನೆ ಮಂದಿಗೆ ತೀರ್ಥ ಸ್ನಾನ ಮಾಡುವುದು ಇತ್ಯಾದಿ ಸೇವೆಗಳನ್ನು ಬೇರೆ ಬೇರೆ ಕಾರಣದ ಸಮಯಗಳಲ್ಲಿ ಮಾಡಿದ್ದೇನೆ.
ನನಗೆ ಉದ್ಯೋಗ ಸಿಕ್ಕಿದ ಬಳಿಕ ಕೆಲವು ವರ್ಷಗಳವರೆಗೂ ಉಲ್ಲಲ್ದಿ,ಮಂಜುನಾಥ,ಸುಬ್ರಹ್ಮಣ್ಯ,ಕೃಷ್ಣ,ರಾಘವೇಂದ್ರ ದೇವಾಲಯಗಳಿಗೆ ಪ್ರತಿ ತಿಂಗಳು ಸಂಬಳದ ದಿನಕಾಣಿಕೆ ಕಳುಹಿಸುವ ಒಂದು ರೀತಿಯ ದೇವರ ಮೇಲಿನ ಪ್ರೀತಿಯ ಹುಚ್ಚು ಇತ್ತು. ತುಲುನಾಡಿಗೆ ವರ್ಗಾವಣೆ ಆದ ಬಳಿಕ ಆ ರೀತಿ ಕಾಣಿಕೆ ಕಳುಹಿಸುವುದು ನಿಂತು ಹೋಗುತ್ತದೆ. ಮನಸ್ಸು ಬಂದಂಗೆ ದೇವರ ಬಳಿಗೆ ಹೋಗಿಬರುವ ಅಭ್ಯಾಸ ಶಾಶ್ವತವಾಗಿ ಇದ್ದು ಬಿಡುತ್ತದೆ. ಇಲ್ಲಿಇನ್ನೊಂದು ಕಾಕತಾಳೀಯ ಎಂದರೆ ಈ ಎಲ್ಲಾ ದೇವಾಲಯಗಳು ಇರುವ ಊರಲ್ಲೂ ನಾನು ಕೆಲಸ ಮಾಡುತ್ತಿದ್ದ ವಿಜಯಾ ಬ್ಯಾಂಕ್ ಇತ್ತು. ನಂತರದ ವರ್ಷಗಳಲ್ಲಿ ಈ ಎಲ್ಲಾಶಾಖೆಗಳಿಗೆ ನಾನು ಪರಿಶೀಲನಾಧಿಕಾರಿ(Inspector)ಆಗಿ ಬಂದು ಇಲ್ಲಿನ ಖಾತೆಗಳನ್ನು ತಪಾಸಣೆ ಮಾಡಿದ್ದುಇದೆ.
ನಿವೃತ್ತನಾದ ಬಳಿಕ ಹೇಗೆ ಕಾಲ ಕಳೆಯಲೆಂಬ ಅಳುಕು ನನ್ನಲ್ಲಿತ್ತು. ಆದರೆ ಈ ದೇವರುಗಳು ನನಗೆ ಬರೆಯುವ ಹುಚ್ಚನ್ನು ತಗಲಿಸಿ ಬಿಟ್ಟಿದ್ದರು. ತುಲುನಾಡಿನ ನೂರಾರು ಊರುಗಳ ಹೆಸರು ಹೇಗೆ ಬಂತೆಂದು ಬರೆದು ಮುಗಿಸಿದ್ದೆ. ಆದರೆ “ಕಟೀಲು”ಎಂಬ ಹೆಸರು ಹೇಗೆ ಬಂತೆಂದು ಬರೆಯಲು ವರ್ಷಗಳೇ ಬೇಕಾಯಿತು. ಕಟೀಲು ಎಂಬ ಪದದಲ್ಲಿ “ಕಟ್ಟ”ಮತ್ತು “ಇಲ್ಲ್”ಎಂಬ ಎರಡು ಪದಗಳು ಸೇರಿ “ಕಟೀಲ್”ಆಗಿದೆ ಎಂಬ ಮಾನಸಿಕ ಚಿತ್ರವನ್ನು ಅಥವಾ ಭಾವನೆಯನ್ನು ರೂಪಿಸಿ ಚಿತ್ರಿಸಿ ಕೊಂಡಿದ್ದೆ. “ಕಟ್ಟದ ಇಲ್ಲ್”
ಇಲ್ಲಿ ಕಟ್ಟ ಎಂದರೆ ಹರಿಯುವ ನೀರನ್ನು ಹರಿಯದಂತೆ ತಡೆಯುವ ಗೋಡೆ ಅಥವಾ ಅಣೆಕಟ್ಟು. “ಇಲ್ಲ್”ಎಂದರೆಮನೆ. ಹೊಳೆಯ ದಂಡೆ(ಕಟ್ಟ)ಯ ಮೇಲೆ ಕಟ್ಟಿದ ಮನೆ. ಬೃಹತ್ ಕಟ್ಟವೇ ಆನೆ ಕಟ್ಟೆ. ಅದನ್ನು ತಪ್ಪಾಗಿ ಎಲ್ಲೆಡೆಅಣೆಕಟ್ಟು ಎಂದು ಉಚ್ಚಾರಣೆ ಮಾಡಿದ್ದಾರೆ. ಇಲ,ಇಲ್, ಇಲ್ಲ್ ಎಂದರೆ ತುಲು ಭಾಷೆಯಲ್ಲಿ ಒಂದು ನಿರ್ದಿಷ್ಟಜಾಗ ಅಥವಾ ಸ್ಥಳ ಎಂದಾಗುತ್ತದೆ. “ಅಲ” ಎಂದರೆನೀರು ಎಂದರ್ಥ. ಕೊನೆಗೆ ಕಟ್ಟ+ಅಲ=ಕಟ್ಟಲ,ಕಟ್ಲ,ಕಟಿಲಎಂದು ಉಚ್ಛರಿಸುವರು. ಒಟ್ಟಿನಲ್ಲಿ ಇಲ್ಲಿ ಕಟ್ಟ ಇತ್ತು. ನೀರುಇತ್ತು ಮತ್ತು ಮನೆ ಇತ್ತು. ಅದು ಉಲ್ಲಲ್ದಿ ಮನೆ ಎಂದು ಎಂದು ದೃಢನಿರ್ಧಾರ ಮಾಡಿದ್ದೆ.
“ಉಲ್ಲಲ್ದಿ” ಎಂಬ ಹೆಸರು ಬಂದಾಗ ಕಟ್ಟದ ದಂಡೆಯಲ್ಲಿ ಮನೆ ಇದೆ ಇತ್ತು ಎಂದು ಸುಲಭವಾಗಿ ಅರಿವು ಮೂಡಿಸುವುದು. ಅದು ಉಲ್ಲಲ್ದಿಯ ಮನೆ. ತುಲುನಾಡಿನ ತುಲು ಭಾಷೆಯಲ್ಲಿ “ಉಲ್ಲಯೆ-ಉಲ್ಲಲ್” ಎಂಬ ಪದಗಳಿವೆ. ಉಳ್ಳವರಿಗೆ (ಶ್ರೀಮಂತರಿಗೆ)ಈ ಪದಗಳಿಂದ ಕರೆಯುವ ರೂಢಿ ಇತ್ತು. “ಆಯೆ”ಎಂದರೆ ಅವನು ಮತ್ತು “ಆಲ್” ಎಂದರೆ ಅವಳು ಎಂಬ ಅರ್ಥವಾಗಿತ್ತು. ಪುರುಷರನ್ನುಉಲ್ಲಯ|ಉಲ್ಲಯೆ ಎಂದು ಕರೆದರೆ ಸ್ತ್ರೀಯರನ್ನು ಉಲ್ಲಲ್ತಿ | ಉಲ್ಲಲ್ದಿ ಎಂದು ಗೌರವದಿಂದ ಕರೆಯುವುದುಇತ್ತು. ಒಟ್ಟಿನಲ್ಲಿ ಅವರನ್ನು “ಉಲ್ಲಾಕುಲು” (ಉಳ್ಳವರು) ಎಂದು ಗೌರವದಿಂದ ಕರೆಯುತ್ತಿದ್ದರು. ಈ “ಕಟಿಲ ಉಲ್ಲಲ್ದಿ” ಎಂದರೆ ಕಟಿಲಿನ ಉಲ್ಲಲ್ದಿ ರಾಣಿ ಆಗಿದ್ದಳು. ಮಾತೃ ಪ್ರಧಾನ ಕುಟುಂಬವಾಗಿದ್ದರಿಂದ ಉಲ್ಲಲ್ದಿಯುಕಟ್ಟದ ಮನೆಯಲ್ಲಿ ರಾಣಿಯಾಗಿ ಮೆರೆದಿದ್ದಳು. ರಾಣಿಯ ಹೆಸರನ್ನು ಹೇಳದೆ ಗೌರವದಿಂದ ಕಟಿಲ ಉಲ್ಲಲ್ದಿ ಎಂದೇಕರೆಯಲಾಗುತ್ತದೆ.
ಕಟೀಲು ಕ್ಷೇತ್ರದಲ್ಲಿ ಕಟ್ಟ ಅಥವಾ ಅಣೆಕಟ್ಟು ಎಲ್ಲಿದೆ ಎಂದು ದೇವಾಲಯದ ಆವರಣದಲ್ಲಿ ಹುಡುಕಿದ್ದೆ. ಆವರಣದಲ್ಲಿರುವ ನಾಗ ಸನ್ನಿಧಿಯ ಕೆಳಗೆ ಇರುವ ಕಟ್ಟವನ್ನು ಹಲವು ಬಾರಿ ನೋಡಿ ಅದು ಅಲ್ಲ ಎಂದು ತೀರ್ಮಾನಕ್ಕೆಬಂದಿದ್ದೆ. ಏಕೆಂದರೆ ಅಲ್ಲಿ ಯಾವುದೇ ಕುರುಹುಗಳು ಕಾಣಲಿಲ್ಲ. ಅಲ್ಲಿ ಹೊಳೆ ಬಿಟ್ಟರೆ ಸಮತಟ್ಟಾದ ನೆಲ ಇರಲಿಲ್ಲ. ಅದು ತಾಯಿ ದುರ್ಗಾ ಪರಮೇಶ್ವರಿ ಭಕ್ತರ ಸಲುವಾಗಿ ನಂತರದ ಕಾಲದಲ್ಲಿ ನಿರ್ಮಾಣ ಆಗಿದೆ ಎಂದು ಸುಲಭವಾಗಿ ತಿಳಿಯುತ್ತದೆ. ಈ ಸ್ಥಳದ ಚಿಂತನೆಯನ್ನುಕೈಬಿಟ್ಟು ಸುಮ್ಮನಿದ್ದೆ.
ಅದು ಶುಕ್ರವಾರ 2022 ರ ನವರಾತ್ರಿ ದಿನಗಳು. ಅದುಸಂಜೆಯ 4. 00-4. 30 ಸಮಯ ಆಗಿತ್ತು. ನನಗೆ ದಿಢೀರನೆಕಟಿಲ್ ಕ್ಷೇತ್ರಕ್ಕೆ ಹೋಗುವ ಮನಸ್ಸಾಯಿತು. ಮನೆಯಲ್ಲಿತಿಳಿಸಿ ಹೊರಟೇ ಬಿಟ್ಟೆ. “ಆದರೆ ಇಂದು ಅಲ್ಲೇ ತಂಗುತ್ತೇನೆ. ಈವರೆಗೂ ಅಲ್ಲಿ ರಾತ್ರಿ ಉಳಿದಿಲ್ಲ”ಎಂದು ಮನೆಯಲ್ಲಿ ತಿಳಿಸಿದೆ. “ನವರಾತ್ರಿ ದಿನಗಳಲ್ಲಿ ಅಲ್ಲಿ ನಿಮಗೆ ರೂಮುಸಿಗುವುದಿಲ್ಲ”ಎಂದು ಮನೆಯವರು ತಿಳಿಸಿದರೂ ನಾನು ನನ್ನ ಮಾಮೂಲು ಬ್ಯಾಗನ್ನು ಹೆಗಲಲ್ಲಿ ಹಾಕಿ ಕ್ಷೇತ್ರಕ್ಕೆಹೊರಟೇ ಬಿಟ್ಟೆ. ಅದೇಕೋ ನೇರವಾಗಿ ಕಟೀಲ್ ಕ್ಷೇತ್ರಕ್ಕೆಬಸ್ ಸಿಕ್ಕೇ ಬುಡ್ತು. ಆರು ಗಂಟೆಗೆ ಸರಿಯಾಗಿ ಕಟೀಲುದುರ್ಗೆಯ ನೆಲಕ್ಕೆ ಕಾಲೂರಿದೆ. ರೂಮು ಸಿಗುತ್ತಾ ಎಂದು ದೇವಾಲಯದ ವತಿಯಿಂದ ವಿಚಾರಿಸಿದಾಗ “ಇಲ್ಲ ಎಲ್ಲಾಭರ್ತಿ ಆಗಿದೆ. ನವರಾತ್ರಿಯ ಈ ಸಂದರ್ಭದಲ್ಲಿ ರೂಮುಹೇಗೆ ಸಿಗುತ್ತದೆ”ಎಂದರವರು. ನಾನು ನನ್ನ ವಿಜಯಾಬ್ಯಾಂಕ್ ನಿವೃತ್ತ ಅಧಿಕಾರಿ ಎಂದು ಕಾರ್ಡ್ ತೋರಿಸಿ ಪರಿಚಯಿದಾಗ ಒಮ್ಮೆಲೆ ದೇವಾಲಯದ ಸಿಬ್ಬಂದಿ ನನ್ನನೋಡಿ ನಗುತ್ತಾ ದೇವಾಲಯದ ಪಕ್ಕದಲ್ಲಿ ಇರುವಭ್ರಾಮರಿ ಅತಿಥಿ ಗೃಹದಲ್ಲಿ ರೂಮ್ ಕೊಟ್ಟೇ ಬಿಟ್ಟರು. ನನ್ನ”ವಿಜಯಾಬ್ಯಾಂಕ್”ಗೆ ಅವರು ಕೊಟ್ಟಿರುವ ಗೌರವಕ್ಕೆನನಗೆ ಹೆಮ್ಮೆ ಎನಿಸಿತು. ಅಂದು ರಾತ್ರಿ ಕಟಿಲೇಶ್ವರಿ ಅಪ್ಪೆ ಕಟಿಲ ಉಲ್ಲಲ್ದಿ ದರ್ಶನ ಪಡೆದೆ. ಅನ್ನ ಪ್ರಸಾದವನ್ನುಸ್ವೀಕರಿಸಿದೆ. ನಡು ರಾತ್ರಿಯವರೆಗೂ ಯಕ್ಷಗಾನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದೆ. ದೇವಿಯ ನೆಲದಲ್ಲಿಬೆಳಗಿನ ಆರು ಗಂಟೆಯವರೆಗೂ ಸುಖ ನಿದ್ರೆ. ಬೆಳಗಿನ ಏಳು ಗಂಟೆಗೆ ದೇವರ ದರ್ಶನ ಪಡೆದು ಬೆಳಗಿನ ಉಪಹಾರದಲ್ಲಿ ತಾರಾಯಿ(ತೆಂಗಿನಕಾಯಿ)ಗಂಜಿ ಉಂಡುಕಟಿಲಿನ ಕಟ್ಟ|ಅಣೆಕಟ್ಟು ಬಗ್ಗೆ ಮಾಹಿತಿಯನ್ನು ಹುಡುಕಲು ಆರಂಭಿಸಿದೆ.
ಅತಿಥಿ ಗ್ರಹದ ಮೆಟ್ಟಿಲುಗಳನ್ನು ಇಳಿದು ಬರುವಾಗ ಅತಿಥಿ ಗ್ರಹದ ವಾಚ್ ಮ್ಯಾನರಲ್ಲಿ ಕಟಿಲಿನ ಕಟ್ಟದ ಮಾಹಿತಿ ವಿಚಾರಿಸಿದಾಗ ಅತಿಥಿ ಗ್ರಹದಿಂದಲೇ ಕಾಣುವ “ಕುದುರು” ಪ್ರದೇಶವನ್ನು ಬೆರಳಿನಿಂದ ಬೊಟ್ಟು ಮಾಡಿ ತೋರಿಸಿದರು. ಅಲ್ಲಿ ಅಣೆಕಟ್ಟು ಇತ್ತು ಎಂಬ ಮಾಹಿತಿಯನ್ನು ಅವರ ಹಿರಿಯರು ಹೇಳುತ್ತಿದ್ದರಂತೆ. ನನಗಂತೂಹಸಿರು ನಿಶಾನೆಯನ್ನು ತೋರಿಸಿದಂತೆ ಆಯಿತು. ಕುದುರುಜಾಗವು ದೇವಾಲಯದ ಪಕ್ಕದಲ್ಲೇ ಇದ್ದುದರಿಂದ ಹುಡುಕಲು ನನಗೆ ಕಷ್ಟ ಆಗಲಿಲ್ಲ. ನಾನು ದಾರಿಯಲ್ಲಿ ಕೆಲವರಲ್ಲಿವಿಚಾರಿಸಿದಾಗ ಕಟ್ಟ|ಅಣೆಕಟ್ಟದ ವಿಚಾರದಲ್ಲಿ ಕುದುರಿನ ಪಕ್ಕದಲ್ಲೇ ಇತ್ತಂತೆ ಎಂಬ ಸತ್ಯಾಸತ್ಯತೆಯನ್ನು ಅವರು ಹೇಳಿದರು.
ಕುದುರು ಪ್ರದೇಶವನ್ನು ಪ್ರವೇಶಿಸಿದಂತೆಯೇ ಅಲ್ಲಿನಕೆಲವು ಪ್ರಾಕೃತಿಕ ದೃಶ್ಯಗಳು ನನಗೆ ಕೆಲವು ಮಾಹಿತಿಗಳನ್ನು ಒದಗಿಸಿದವು. ಒಂದು ಕಾಲದಲ್ಲಿ ತುಲುನಾಡಿನ ಬಹುಪಾಲು ಪ್ರದೇಶವು ಕೊಳ(ಪಟ್ಲ)ವಾಗಿತ್ತು. ನೀರು ಹರಿದುಹೋಗಲು ತೋಡು,ಹೊಳೆ,ನದಿಗಳು ಇದ್ದಿರಲಿಲ್ಲ. ಮಳೆನೀರು ಪಟ್ಲ ಪ್ರದೇಶದಲ್ಲಿ ತುಂಬಿ ತಗ್ಗು ಪ್ರದೇಶಗಳನ್ನು ಹುಡುಕುತ್ತಾ ಹರಿದು ಕಡಲು ಸೇರುತ್ತಿತ್ತು. ತುಲುನಾಡಲ್ಲಿಹೊಲ ಗದ್ದೆಗಳ ಅದರಲ್ಲೂ ಮುಖ್ಯವಾಗಿ ಕೊಳ ಪ್ರದೇಶದಭೂಮಿಯಲ್ಲಿ “ಕೊಳ”ಕ್ಕೆ ಗದ್ದೆಗಳ ನಿರ್ಮಾಣದ ಕಾಲದಲ್ಲಿ ಕಾಲುವೆ,ನಾಲೆಗಳನ್ನು ನಿರ್ಮಾಣ ಮಾಡಿಕೊಳದ ನೀರನ್ನು ಅವುಗಳಲ್ಲಿ ಹರಿಬಿಡುವ ಬೃಹತ್ ಯೋಜನೆ ನಡೆಯುತ್ತದೆ. ಅದರಂತೆ ಆ ರೀತಿಯ ಕಾಲುವೆಅಥವಾ ನಾಲೆ(ಈಗ ಹೊಳೆ)ಈ ಕುದುರು ಪ್ರದೇಶದಲ್ಲಿದಕ್ಷಿಣ ದಿಕ್ಕಿನಿಂದ ಹರಿದು ಬರುತ್ತದೆ. ಉತ್ತರಾಭಿಮುಖವಾಗಿ ಹರಿದು ಪಶ್ಚಿಮ ದಿಕ್ಕಿಗೆ ತಿರುವು ಪಡೆದು ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾಗಿ ಮೇಲಿನತಿರುವಿನಲ್ಲಿ ನೀರು ನೇರವಾಗಿ ವೇಗವಾಗಿ ಹರಿಯಲಾಗದೆಪ್ರವಾಹದ ಭೀತಿ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಕುದುರು ಪ್ರದೇಶದಲ್ಲಿ ಇನ್ನೊಂದು ನಾಲೆಯನ್ನು ನಿರ್ಮಿಸಿನೀರನ್ನು ಇನ್ನೊಂದು ಮಗ್ಗುಲಲ್ಲಿ ಪೂರ್ವ ಮತ್ತು ಪಶ್ಚಿಮಮುಖವಾಗಿ ಹರಿಯುವಂತೆ ಮಾಡುತ್ತಾರೆ. ಎರಡೂ ನಾಲೆಗಳು ಪಶ್ಚಿಮಕ್ಕೆ ಹರಿದು ಮುಂದಕ್ಕೆ ಒಟ್ಟಾಗಿ ಹರಿದುಹೋಗುತ್ತದೆ. ಈ ಸ್ಥಳದಲ್ಲಿ ಸುತ್ತಲೂ ನೀರು ಹರಿದು ಆವರಿಸುತ್ತದೆ. ನಂತರದಲ್ಲಿ ಈ ಜಾಗವನ್ನು “ಕುದುರು”ಎಂದು ಕರೆಯಲಾಗುತ್ತದೆ.
ಕುದುರಿನಲ್ಲಿ ಇಲ್ಲ್ (ಮನೆ)ಇತ್ತು. ಅದು ಸಣ್ಣ ಮನೆ ಅಲ್ಲ. ಅರಮನೆಯಾಗಿತ್ತು. ಅದು ಉಲ್ಲಾಲ್ ಅರಮನೆ. ಉಲ್ಲಲ್ಎಂದರೆ ಉಳ್ಳವಳು. ಶ್ರೀಮಂತಳು, ರಾಣಿಯಂತೆ ಮೆರೆದವಳು. “ಉಲ್ಲಲ್ದಿ”ಎಂದು ಕರೆಸಿಕೊಂಡವಳು. ಮಾತೃಪ್ರಧಾನ ಕುಟುಂಬದ ರಾಣಿ ಅವಳು. ಎರಡು ನಾಲೆಗಳುಸೇರುವಲ್ಲಿ ಕಟ್ಟ ಇತ್ತು. ಆ ಬೃಹತ್ ಕಟ್ಟವಾಗಿತ್ತು. ಇದನ್ನುಅಣೆಕಟ್ಟ ಎಂದು ಕರೆಯುತ್ತಿದ್ದರು. ಕಟ್ಟದ ಇಲ್ಲೇ ಕಟ್ಟ ಇಲ್ಲ್,”ಕಟಿಲ್” ಎಂದು ಕರೆಯಲಾಗುತ್ತದೆ. ಕಟ್ಟ+ ಇಲ=ಕಟಿಲಎಂತಲೂ ಕರೆಯುತ್ತಾರೆ. ಇಲ್ಲಿ ಇಲ ಎಂದರೆ ನಿರ್ದಿಷ್ಟ ಸ್ಥಳ. ಕಟ್ಟ+ಅಲ=ಕಟ್ಟಲ,ಕಟ್ಲ,ಕಟೀಲ್ ಎಂದೂ ಕರೆದಿದ್ದಾರೆ. ಇಲ್ಲಿ ಅಲ ಎಂದರೆ ನೀರು ಎಂದಾಗುತ್ತದೆ. ಕಟ್ಟದಲ್ಲಿತುಂಬಾ ನೀರು ಇರುತ್ತಿತ್ತು. ಅಲ್ಲದೆ ಉಲ್ಲಲ್ದಿಯ ಅರ ಮನೆ ಸುತ್ತಲೂ ಎರಡೂ ನಾಲೆಗಳಲ್ಲೂ ನೀರು ಇರುವುದರಿಂದ ಕಳ್ಳಕಾಕರಿಂದ ಅಲ್ಲದೆ ವೈರಿಗಳಿಂದಲೂ ರಕ್ಷಣೆ ಸಿಗುವಂತೆ ಆಗುತ್ತದೆ. ಕಟ್ಟದ ಮೇಲಿಂದಲೇ ಜನರಿಗೆ ನಡೆನಡೆಯುವ ದಾರಿ ಇತ್ತು. ಅಲ್ಲಿ ಪ್ರವೇಶಕ್ಕೆ ಪಾರೆ ಇತ್ತು. ಎರಡು ನಾಲೆಗಳ ನಿರ್ಮಾಣದ ಉದ್ದೇಶವು ರಾಣಿಯರರಕ್ಷಣಾ ಕ್ರಮಕ್ಕಾಗಿಯೇ ಆಗಿದೆ. ಅಲ್ಲದೆ ಅಣೆಕಟ್ಟ ಕೂಡಾಅದೇ ಉದ್ದೇಶಕ್ಕೆ ಆಗಿದೆ ಎಂದೂ ತಿಳಿಯುತ್ತದೆ.
ಕಟ್ಟದ ಮೇಲಿನ ಕುದುರುವಿನಲ್ಲಿ ಶಿವನ ಗುಡಿ ಇತ್ತು. ಕಟಿಲ ಉಲ್ಲಾಲ್ದಿಯು ಶಿವರಾಧಕರೂ ಹೌದು. ಅವರು ದೈವ ಆರಾಧಕರೂ ಹೌದು. ಅಲ್ಲಿ ಈಗಲೂ ಶಿವನ ಗುಡಿಇದೆ. ನಾಗನ ಸನ್ನಿಧಿಯೂ ಇದೆ. ಬೂತೊಗಳೂ ಅಲ್ಲಿವೆ. ಈ ಎಲ್ಲಾ ಆರಾಧನೆಗಳು ಅಂದು ಅಲ್ಲಿದ್ದರೂ ಜನರು ದೈವ ದೇವರುಗಳ ಹೆಸರನ್ನು ಪಠಿಸದೆ ಊರ ಉಲ್ಲಾಲ್ದಿಯ ಹೆಸರನ್ನು ಪಠಿಸಿ “ಅಪ್ಪೆ(ಅಮ್ಮಾ) ಕಟಿಲ ಉಲ್ಲಾಲ್ದಿ”ಎಂದು ಕಟಿಲಿನ ರಾಣಿಯನ್ನೇ ಪಠಿಸಿ ಕೊಂಡು ಬಂದಿದ್ದಾರೆ. ಈಗಲೂ ಸ್ಥಳೀಯರು ಅಲ್ಲದೆ ಅಕ್ಕಪಕ್ಕದ ಊರವರೂ ಈಗಲೂ ಅದೇ ಮೂಲ ಮಂತ್ರವನ್ನು ಜಪಿಸುತ್ತಾರೆ. “ಅಪ್ಪೆ ಕಟಿಲ ಉಲ್ಲಾಲ್ದಿ ಕಾಪುಲೆ”(ತಾಯಿ ಕಟಿಲ ಉಲ್ಲಾಲ್ತಿ ಕಾಯಮ್ಮ)ಎಂದು ಆರಾಧಿಸುವರು.
ನಂತರದ ಕಾಲದಲ್ಲಿ ಎರಡು ನಾಲೆಗಳು ಒಟ್ಟಾಗುವ ಕಟ್ಟದ ತುಸು ಕೆಳಗೆ ಶ್ರೀ ದುರ್ಗಾ ಪರಮೇಶ್ವರಿ ದೇವಿಯದೇವಾಲಯ ಸ್ಥಾಪನೆ ಆಗುತ್ತದೆ. ದಿನದಿಂದ ದಿನಕ್ಕೆ ಇಲ್ಲಿಗೆಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ದೇವಿ ದರ್ಶನಪಡೆಯುತ್ತಾರೆ. ಆದರೂ ಇಲ್ಲಿನ ಸ್ಥಳೀಯರು ಅಲ್ಲದೆ ಅಕ್ಕ ಪಕ್ಕದ ಊರವರು ದೇವಿ ಭ್ರಾಮರಿಯನ್ನು “ಅಪ್ಪೆಕಟಿಲ ಉಲ್ಲಾಲ್ದಿ”ಎಂದೇ ಮೂಲ ಮಂತ್ರದಂತೆ ಪಠಿಸಿಭಜಿಸುತ್ತಾರೆ. ಅಂದಿನ ಕಟ್ಟದ ಇಲ್ಲದ ಅಪ್ಪೆ(ರಾಣಿ)ಉಲ್ಲಾಲ್ದಿಯನ್ನು ಸ್ಮರಿಸುತ್ತಾರೆ.
ಕಟಿಲಿನ ಉಲ್ಲಲ್ತಿ ಅಷ್ಟೊಂದು ಪ್ರಸಿದ್ಧಿ ಪಡೆದಿರುವುದು ತಿಳಿಯುವಾಗ ಅವಳು ಉಲ್ಲಾಳದ ರಾಣಿ ಅಬ್ಬಕ್ಕ ದೇವಿಯ ನೆನಪು ಬರುತ್ತದೆ. ಅಬ್ಬಕ್ಕಳ ಪೂರ್ವಜರ ಕಾಲದವಳು ಈ ಉಲ್ಲಲ್ದಿ ಆಗಿರಬಹುದೇ ಎಂದೆನಿಸುತ್ತದೆ. ಉಲ್ಲಾಳ ಎಂಬ ಹೆಸರು ಬಂದಿರುವುದೇ “ಉಲ್ಲಾಲ್” (ಉಳ್ಳವಳು)ಪದದಿಂದಲೇ ಆಗಿದೆ. ಮಾತೃ ಪ್ರಧಾನ ಕುಟುಂಬದ ಮಹಿಳೆಯೇ ಇಲ್ಲಿನ ರಾಣಿ ಆಗಿದ್ದಳು. ಆ ಕಾಲದಲ್ಲಿ ಮಂಗಳೂರು ಸಂಸ್ಥಾನದ ರಾಜಧಾನಿಯೇಉಲ್ಲಾಳ ಆಗಿತ್ತು. ಅಂದು ಆದಿ ಆರಂಭದಲ್ಲಿ ಉಲ್ಲಾಳ ದಲ್ಲಿ ಬಸದಿಗಳು ಇರಲಿಲ್ಲ. ಆದರೆ ಆಗಲೇ ಮೂಡಬಿದಿರೆ ಯಲ್ಲಿ ಬಸದಿಗಳು ಇದ್ದವು. ಉಳ್ಳಾಲದ ರಾಣಿಯರುಆರಾಧನೆಗಾಗಿ ಆಗಾಗ್ಗೆ ಮೂಡಬಿದಿರೆಗೆ ಬರುವುದು ಸಹಜ. ಆ ರಾಣಿಯರು ಕುದುರೆ ಗಾಡಿ ಇಲ್ಲವೇ ದಂಡಿಗೆಯಲ್ಲಿ ಬರುವವರು. ಅಂದಿನ ರಾಜರು ಕೂಡಾ ಪ್ರಯಾಣದೂರವಾಗಿದ್ದರೆ ಒಂದು ಊರಲ್ಲಿ ತಂಗುವುದು ಇತ್ತು. ಅದರಂತೆ ಉಳ್ಳಾಲದ ರಾಣಿಯರು ಕಟೀಲ್ ಮಾರ್ಗವಾಗಿಬಂದು ಇಲ್ಲಿನ ಕಟ್ಟದ (ಇಲ್ಲ್)ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದು ನಂತರ ಮೂಡಬಿದಿರೆಗೆ ಹೋಗುವುದು. ವಾಪಸ್ಸುಬರುವಾಗಲೂ ಕಟೀಲಿನಲ್ಲಿ ಕೆಲವು ದಿನಗಳವರೆಗೆ ಇದ್ದುಉಳ್ಳಾಲಕ್ಕೆ ಹಿಂತಿರುಗುವ ಪರಿಪಾಠ ಇದ್ದಿರಬಹುದು. ಉಳ್ಳಾಲದಲ್ಲಿ ಶಿವರಾಧನೆಗಾಗಿ ಸೋಮನಾಥ ಇದ್ದ ರೀತಿಯಲ್ಲಿ ಕಟೀಲಿನ ಕಟ್ಟದ ಮನೆಯ ಕುದುರು ಸ್ಥಳದಲ್ಲಿಈಗ ಇರುವ ಶಿವಲಿಂಗವನ್ನು ಪ್ರತಿಷ್ಟೆ ಮಾಡಿರಬಹುದು. ಮೂಡಬಿದ್ರೆಯ ಪುತ್ತಿಗೆಯಲ್ಲೂ ಸೋಮನಾಥ ಮಂದಿರಇದೆ. ಅಲ್ಲದೆ ಉಳ್ಳಾಲದ ರಾಣಿಯವರು ಮೂಡಬಿದ್ರೆಯಚೌಟ ಅರಸರ ಸಂಬಂಧದವರೆಂಬ ಎಂಬ ಇತಿಹಾಸ ಇದೆ.
ಉಳ್ಳಾಲ ಎಂಬ ಹೆಸರು ಉಲ್ಲಾಲ್ದಿ|ಉಲ್ಲಾಲ್ತಿ ಪದಗಳಿಂದ ಬಂದಂತೆಯೇ ಕಟೀಲ ಉಲ್ಲಾಲ್ದಿ ಎಂಬ ಹೆಸರು ಕೂಡಾಕಟ್ಟದ ಮನೆಯ ಉಲ್ಲಾಲ್ದಿ|ಉಲ್ಲಾಲ್ತಿ ಪದಗಳಿಂದಲೇಬಂದಿದೆ. ಉಲ್ಲಾಲದ ರಾಣಿಯರೇ ಅಬ್ಬಕ್ಕಳ ಪೂರ್ವಜರು. ಸೋಮೇಶ್ವರ ದೇವಾಲಯವೂ ಈ ಉಲ್ಲಾಲದ ಉಲ್ಲಾಲ್ದಿಯವರಿಂದಲೇ ಸ್ಥಾಪನೆ ಆಗಿದೆ. ಆದಿ ಆರಂಭದಲ್ಲಿ ಈಗಇರುವ ಉಳ್ಳಾಲದ ಆದಿನಾಥ ಬಸದಿ ಇದ್ದಿರಲಿಲ್ಲ. ನಂತರದಲ್ಲಿ ನಿರ್ಮಾಣ ಆಗುತ್ತದೆ. ಉಳ್ಳಾಲದ ರಾಣಿಯವರುಮೂಡಬಿದಿರೆಗೆ ಆರಾಧನೆ ಮಾಡಲು ಬರುತ್ತಿದ್ದರು. ಕಟ್ಟದ ಇಲ್ಲ್ (ಅರಮನೆ)ನಲ್ಲಿ ವಿಶ್ರಾಂತಿ ಪಡೆದು ನಂತರ ಮೂಡಬಿದಿರೆಗೆ ಹೋಗುತ್ತಿದ್ದರು. ವಾಪಸ್ಸು ಬರುವಾಗಲೂ ಅಲ್ಲಿ ತಂಗಿ ನಂತರದಲ್ಲಿ ಅವರ ರಾಜಧಾನಿ ಉಲ್ಲಾಲಕ್ಕೆ ಬರುವುದು ಇತ್ತು.
ಅಪ್ಪೆ ಕಟಿಲ ಉಲ್ಲಾಲ್ದಿ ಕಾಪುಲೆ🙏
ಐ. ಕೆ. ಗೋವಿಂದ ಭಂಡಾರಿ ,ಕಾರ್ಕಳ
(ನಿವೃತ್ತ ವಿಜಯಾಬ್ಯಾಂಕ್)