ನಾವುಂದದ ಅರೆಹೊಳೆಯ “ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ” ಹಿಂದೂಗಳ ಪಾಲಿನ ಒಂದು ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಇಲ್ಲಿ ಒಂದೇ ದೇವಸ್ಥಾನದಲ್ಲಿ ಎರಡೂ ದೇವರ ವಿಗ್ರಹಗಳಿಗೂ ಸಮಾನ ರೀತಿಯಲ್ಲಿ ಪೂಜಾಕೈಂಕರ್ಯಗಳು ನೆರವೇರುತ್ತವೆ.
ಈ ದೇವಸ್ಥಾನದ ಉಗಮದ ಬಗ್ಗೆ ಒಂದು ಕುತೂಹಲಕಾರಿಯಾದ ಕಥೆ ಜನಮಾನಸದಲ್ಲಿ ಜನಜನಿತವಾಗಿದೆ.ಒಮ್ಮೆ ಶ್ರೀಮಹಾಲಿಂಗ ಶಾನುಭೋಗ ಮತ್ತು ಶ್ರೀ ಮಹಾಲಿಂಗ ಶೆಟ್ಟಿ ಎಂಬಿಬ್ಬರಿಗೆ ಹೊಳೆಯಲ್ಲಿ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿಯ ಮೂರ್ತಿಗಳು ದೊರಕಿದವು.ಅವುಗಳನ್ನು ಎಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಷಯದಲ್ಲಿ ಅರೆಹೊಳೆ ಮತ್ತು ಬಡಾಕೇರಿ ಎಂಬ ಎರಡು ಹಳ್ಳಿಗಳ ಜನರಲ್ಲಿ ಬಿನ್ನಭಿಪ್ರಾಯ ಏರ್ಪಟ್ಟು, ಕೊನೆಗೆ ಹಿರಿಯರ ತೀರ್ಮಾನದಂತೆ ಚಿತ್ತಾಡಿ ದೇವಸ್ಥಾನದಲ್ಲಿ ಮುಖಂಡರೆಲ್ಲಾ ಸಭೆ ಸೇರಿ ಮೂರ್ತಿಗಳನ್ನು ಸೇವಂತೀಗುಂಡಿಯಲ್ಲಿ ಹಾಕಿಡುವುದು ಮತ್ತು ನೇಗಿಲ ನೊಗವನ್ನು ಹೊಳೆಯಲ್ಲಿ ತೇಲಿಬಿಡುವುದು ಅದು ಎಲ್ಲಿ ನೆಲೆ ನಿಲ್ಲುತ್ತದೋ ಅಲ್ಲಿ ದೇವಸ್ಥಾನ ನಿರ್ಮಿಸುವುದೆಂದು ತೀರ್ಮಾನಿಸಿ, ಹೊಳೆ ನೀರಿನಲ್ಲಿ ನೊಗವೊಂದನ್ನು ತೇಲಿಬಿಟ್ಟಾಗ ಅದು ಅರೆಹೊಳೆ ಎಂಬಲ್ಲಿ ಬಂದು ಹೊಳೆದಂಡೆಗೆ ತಾಗಿ ನಿಂತುಕೊಂಡಿರುವುದನ್ನು ಗಮನಿಸಿ ಅಲ್ಲಿಯೇ ದೇವಸ್ಥಾನ ನಿರ್ಮಿಸುವುದೆಂದು ತೀರ್ಮಾನಿಸಿ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನವನ್ನು ಅರೆಹೊಳೆಯಲ್ಲಿ ನಿರ್ಮಿಸಲಾಯಿತು ಎಂಬುದು ಜನರ ಬಾಯಲ್ಲಿ ಜನಪದದಂತೆ ಹರಿದಾಡುತ್ತಿರುವ ಕಥೆ.
ನಂಬಿದ ಭಕ್ತರ ಅಭೀಷ್ಟೇಗಳನ್ನು ಈಡೇರಿಸುತ್ತ ,ಕಾಲಕಾಲಕ್ಕೆ ಭಕ್ತರಿಂದ ಜಾತ್ರೆ ಉತ್ಸವಗಳಲ್ಲಿ ಸೇವೆಯನ್ನು ಸ್ವೀಕರಿಸುತ್ತ ನೆಲೆನಿಂತಿರುವ ಶ್ರೀ ದೇವರು ವರ್ಷಕ್ಕೊಮ್ಮೆ ಜಾತ್ರೆ ನಡೆದಾಗ ಸೋಜಿಗವೊಂದನ್ನು ಸೃಷ್ಠಿಸಿ ಭಕ್ತರಿಗೆ ತನ್ನ ಇರುವಿಕೆಯ ಅರಿವು ಮೂಡಿಸುತ್ತಾನೆ. ಜನವರಿಯಲ್ಲಿ ಜಾತ್ರೆ ನಡೆದ ದಿನದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕುಡಿಯುವ ನೀರಿನ ಬಾವಿಯ ಸಿಹಿ ನೀರೆಲ್ಲಾ ಉಪ್ಪು ನೀರಾಗಿ ಪರಿವರ್ತನೆ ಆಗುತ್ತದೆ.ಮತ್ತೆ ಕೆಲ ದಿನಗಳ ನಂತರ ಪುನಃ ಮಾಮೂಲಿನಂತೆ ನೀರು ಸಿಹಿಯಾಗುತ್ತದೆ.ಇದು ದೇವರ ಪವಾಡವೆಂದೇ ಗ್ರಾಮಸ್ಥರು ನಂಬುತ್ತಾರೆ.
ಶಿವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕ ಇರುತ್ತದೆ.ಸಾವಿರಾರು ಭಕ್ತರು ಸೇರಿ ದೇವರಿಗೆ ತಮ್ಮ ಶಕ್ತ್ಯಾನುಸಾರ ಸೇವೆಗಳನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಮಾಹಿತಿ: ಗಣಪಯ್ಯ.ಅರೆಹೊಳೆ.