January 19, 2025
shivas

        

         ತಮ್ಮ ಕ್ಷೌರಿಕ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಬಾಲಿವುಡ್ ದಿಗ್ಗಜರನ್ನು ಕಣ್ತುಂಬಿಕೊಳ್ಳಲು ಬೆರಗುಗಣ್ಣಿನಿಂದ ನೋಡುತ್ತಿದ್ದ ಪ್ರಸಿದ್ಧ ಬಾಲಿವುಡ್ ಸಿನಿಮಾ  ಮಾಸಪತ್ರಿಕೆಯಲ್ಲಿ ಮುಂದೊಂದು ದಿನ ತಾವೂ ಒಬ್ಬ ಸೆಲೆಬ್ರಿಟಿಯಾಗಿ ಜಗತ್ತಿಗೆ ಪರಿಚಯಿಸಲ್ಪಡಬಹುದು ಎಂಬ ಕಲ್ಪನೆಯೂ ಇವರಿಗೆ ಇರಲಿಲ್ಲವೇನೋ?

         ಕಾರ್ಕಳದ ಅತ್ತೂರಿನಿಂದ 1979 ರಲ್ಲಿ ಹೊಟ್ಟೆಪಾಡಿಗಾಗಿ ಹದಿನೈದರ ಹರೆಯದಲ್ಲಿಯೇ ಮುಂಬಯಿಗೆ ತೆರಳಿ ಅಲ್ಲಿ ಕ್ಷೌರಿಕ ವೃತ್ತಿಯನ್ನಾರಂಭಿಸಿ, 1984 ರಲ್ಲಿ ಕತಾರ್ ದೇಶಕ್ಕೆ ತೆರಳಿ ಅಲ್ಲಿ ವೃತ್ತಿ ಪರಿಣತಿ, ವೃತ್ತಿ ಕುಶಲತೆ ಮೈಗೂಡಿಸಿಕೊಂಡು 1988 ರಲ್ಲಿ ಮುಂಬಯಿ ಮಹಾನಗರಿಗೆ ಹಿಂತಿರುಗಿ ಬಂದು “ಶಿವಾಸ್ ಹೇರ್ ಡಿಸೈನಿಂಗ್ ಪ್ರೈವೇಟ್ ಲಿಮಿಟೆಡ್” ಸಂಸ್ಥೆ ಆರಂಭಿಸಿ, ಮುಂಬಯಿಯ ಪ್ರಖ್ಯಾತ ಉದ್ಯಮಿಗಳಿಗೆ, ಖ್ಯಾತನಾಮರಿಗೆ, ಹಿಂದಿ ಚಿತ್ರರಂಗದ ನಟ ನಟಿಯರಿಗೆ ಕೇಶ ವಿನ್ಯಾಸ ಮಾಡುತ್ತಾ, ಮುಂಬಯಿಯ ಮೂಲೆ ಮೂಲೆಗಳಲ್ಲಿ ಸರಣಿ ಕೇಶ ವಿನ್ಯಾಸ ಮಳಿಗೆಗಳನ್ನು ಸ್ಥಾಪಿಸಿ, ಹಿಂದಿ ಚಿತ್ರಗಳಲ್ಲಿ ನಟಿಸಿ, ತಮ್ಮ ವೃತ್ತಿ ನೈಪುಣ್ಯತೆಯಿಂದ ಮುಂಬಯಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಹೆಸರು ಸಂಪಾದಿಸಿ, ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿಕೊಂಡು “ಭಂಡಾರಿ ಪದ್ಮ ವಿಭೂಷಣ” ಬಿರುದಾಂಕಿತರಾಗಿ ಮುಂಬಯಿ ಮಹಾನಗರಿಯಲ್ಲಿ ಅದ್ಭುತ ಯಶಸ್ಸಿನೊಂದಿಗೆ ನೆಲೆಯೂರಿರುವ ತುಳುನಾಡ ಕನ್ನಡಿಗ ಡಾ|| ಶಿವರಾಮ.ಕೆ. ಭಂಡಾರಿ ಇವರೇ ಈ ತಿಂಗಳ ಹಿಂದಿ ಚಿತ್ರರಂಗದ ಹೆಸರಾಂತ ಸಿನಿಮಾ ಮಾಸಪತ್ರಿಕೆ “ಸ್ಟಾರ್ ಡಸ್ಟ್” ನ ಮುಖಪುಟ ಲೇಖನದ ಗೌರವಕ್ಕೆ ಪಾತ್ರರಾದ ಸೆಲೆಬ್ರಿಟಿ.


         ಇವರ ವೃತ್ತಿ ಬದುಕಿನ ಸಫಲತೆಯ ಮಜಲುಗಳನ್ನು “ಸಾಗಾ ಶಿವಾ” ಹೆಸರಿನ ಲೇಖನದಲ್ಲಿ ಹೇರ್ ಸ್ಟೈಲಿಷ್ಟ್ ಸುಪ್ರಿಮೋ ಶಿವರಾಮ ಭಂಡಾರಿಯವರ ಬಗ್ಗೆ “ಸ್ಟಾರ್ ಡಸ್ಟ್” ಮುಖಪುಟ ಲೇಖನದ ವಿಶೇಷಾಂಕ ಪ್ರಕಟಿಸಿ ಇವರನ್ನು ವಿಶೇಷವಾಗಿ ಗೌರವಿಸಿದೆ. ಮುಂಬಯಿಯ ಐಷಾರಾಮಿ ಪ್ರದೇಶ ಮಲಬಾರ್ ಹಿಲ್ಸ್‌ ನ ವಾಲ್ಕೇಶ್ವರದ ತೀನ್ ಬತ್ತಿಯ ವೀಣಾ ಅಪಾರ್ಟ್ ಮೆಂಟ್ಸ್ ನ ನೆಲಮಹಡಿಯಲ್ಲಿ ಶಿವಾಸ್ ಹೇರ್ ಡಿಸೈನರ್ಸ್ ನ ಹದಿನಾರನೇ ಮಳಿಗೆ ಮತ್ತು ಅತ್ಯಾಧುನಿಕ ವಿಲಾಸಿ ಕೇಶವಿನ್ಯಾಸ ಮತ್ತು ಸೌಂದರ್ಯವರ್ಧಕ ಮಳಿಗೆ ” ಶಿವಾಸ್ ಸಿಗ್ನೇಚರ್ ಸಲೂನ್ ಅ್ಯಂಡ್ ಸ್ಪಾ” ಉದ್ಘಾಟನೆ ಮಾಡಿದ ಬಾಲಿವುಡ್ ನ ಹೆಸರಾಂತ ನಿರ್ದೇಶಕ, ನಿರ್ಮಾಪಕ ಶ್ರೀ ಮಧುರ್ ಭಂಡಾರ್ಕರ್ ಶಿವರಾಮ ಭಂಡಾರಿಯವರ ವೃತ್ತಿಬದುಕಿನ ಸಫಲ ಕಥಾನಕದ  ಸ್ಟಾರ್ ಡಸ್ಟ್ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

        ಈ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ನ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ನಾಯಕಿ ನಟಿ ಮುಗ್ಧಾ ಗೋಡ್ಸೆ, ನಿರ್ಮಾಪಕಿ ಅಮೃತಾ ಫಡ್ನವಿಸ್, ಸ್ಟಾರ್ ಡಸ್ಟ್ ಕಾರ್ಯ ನಿರ್ವಾಹಕರಾಗಿರುವ ನಿರಾ ಹಿರಾ, ನಿರ್ದೇಶಕ ಅಶೋಕ್ ಧಮಣ್ಕರ್, ಸ್ಟಾರ್ ಡಸ್ಟ್ ಸಂಪಾದಕಿ ಸುಮಿತಾ ಚಕ್ರಬೋರ್ತಿ, ಶಿವರಾಮ ಭಂಡಾರಿಯವರ ತಾಯಿ ಗುಲಾಬಿ ಕೃಷ್ಣ ಭಂಡಾರಿ, ಪತ್ನಿ ಶ್ರೀಮತಿ ಅನುಶ್ರೀ ಶಿವರಾಮ ಭಂಡಾರಿ, ಮಕ್ಕಳಾದ ಮಾಸ್ಟರ್ ರೋಹಿಲ್, ಕುಮಾರಿ ಆರಾಧ್ಯ ಮತ್ತು ಶಿವಾಸ್ ಗ್ರೂಪ್ಸ್ ನ ಹಿರಿಯ ಕಿರಿಯ ವೃತ್ತಿ ನಿಪುಣರು, ಬ್ಯೂಟೀಷಿಯನ್ಸ್ ಗಳು ಉಪಸ್ಥಿತರಿದ್ದರು.

          ಶಿವರಾಮ ಭಂಡಾರಿಯವರು ಮಾತನಾಡಿ “ನನ್ನ ಜೀವನದಲ್ಲಿ ಏನಾದರೂ ಅಲ್ಪ ಸಾಧನೆಯನ್ನು ಮಾಡಿದ್ದರೆ ಅದು ನಾನು ನಂಬಿದ ದೇವರು, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ನನ್ನನ್ನು ಪ್ರೀತಿಸುವ ನನ್ನ ಸಂಸ್ಥೆಯ ಪ್ರಾಮಾಣಿಕ ಉದ್ಯೋಗಿಗಳ ಹಾರೈಕೆಯಿಂದ” ಎಂದು ವಿನಮ್ರರಾಗಿ ನುಡಿದರು.

          ಕ್ಷೌರಿಕ ವೃತ್ತಿ ಬದುಕಿನ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸಿಕೊಟ್ಟು, ಒಬ್ಬ ಸಾಧಾರಣ ವ್ಯಕ್ತಿಯೂ ಶ್ರಮಪಟ್ಟರೆ ಅಸಾಧಾರಣವಾದುದನ್ನು ಸಾಧಿಸಿ ತೋರಿಸಬಹುದು ಎಂದು ಯುವಸಮೂಹಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ, ಮಿತಭಾಷಿ, ಸಹೃದಯಿ, ಭಂಡಾರಿ ಬಂಧುಗಳ ನೋವು ನಲಿವಿಗೆ ಸದಾ ಸ್ಪಂದಿಸುವ ಡಾ|| ಶಿವರಾಮ.ಕೆ.ಭಂಡಾರಿಯವರು ನಮ್ಮ ಭಂಡಾರಿ ಸಮಾಜದ ಹೆಮ್ಮೆ.ಅವರು ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಿ ಯಶಸ್ಸಿನ ಉತ್ತುಂಗಕ್ಕೇರಲಿ, ಜೀವನದ ಹಾದಿಯಲ್ಲಿ ಭಗವಂತನ ಅನುಗ್ರಹ ಸದಾ ಅವರ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *