ಕೊಡಗು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಜಲಪ್ರಳಯಕ್ಕೆ ಸಿಲುಕಿರುವ ಕಾವೇರಿ ಕಣಿವೆಯ ಮಕ್ಕಳ ನೆರವಿಗೆ ದೇಣಿಗೆ ಸಂಗ್ರಹಿಸಲು ಸ್ಥಳೀಯ ಕಲಾವಿದರಾದ ಶ್ರೀ ರತ್ನಾಕರ್ ಭಂಡಾರಿ ಯವರಿಂದ ಒಂದು ವಿನೂತನ ಪ್ರಯತ್ನಕ್ಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಾಕ್ಷಿಯಾಯಿತು. ಆಗಸ್ಟ್ 20 ರ ಸೋಮವಾರ ಶಿರಾಳಕೊಪ್ಪದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಥಳದಲ್ಲೇ ಆಸಕ್ತರ ವ್ಯಂಗ್ಯಚಿತ್ರ,ರೇಖಾಚಿತ್ರ, ಭಾವಚಿತ್ರ ರಚಿಸಿಕೊಟ್ಟು,ಆ ಮೂಲಕ ಸಂಗ್ರಹವಾಗುವ ಮತ್ತು ದಾನಿಗಳು ನೀಡುವ ಹಣವನ್ನು ಕೊಡಗು ನೆರೆ ಸಂತ್ರಸ್ತರ ನಿಧಿಗೆ ತಲುಪಿಸಲು ನಿರ್ಧರಿಸಿ,ಈ ಯೋಜನೆಯಲ್ಲಿ ಶಿರಾಳಕೊಪ್ಪದ ಸ್ಥಳೀಯ ಸಂಘ ಸಂಸ್ಥೆಗಳಾದ ಜೆ.ಸಿ.ಐ.ಮಯೂರ, ಲಯನ್ಸ್ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು, ಯುವಾ ಬ್ರಿಗೇಡ್, ಕಾರ್ಯನಿರತ ಪತ್ರಕರ್ತರ ಸಂಘ, ಛಾಯಾಗ್ರಾಹಕರ ಸಂಘ, ಸಫ್ರಾನ್ ಸೇವಾ ಟ್ರಸ್ಟ್, ಸವಿತಾ ಸಮಾಜ, ಭಂಡಾರಿ ಸಮಾಜ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ರೈತಸಂಘ, ಶಿರಾಳಕೊಪ್ಪದ ಎಲ್ಲಾ ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಹತ್ತು ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೆ ನಿರಂತರವಾಗಿ ವ್ಯಂಗ್ಯಚಿತ್ರ ರಚಿಸಿ,ಸಂಭಾವನೆ ರೂಪದಲ್ಲಿ ಒಟ್ಟಾದ ಹಣವನ್ನು ಕೊಡಗು ಜಿಲ್ಲೆಯಲ್ಲಿ ಶತಮಾನದ ಮಹಾಮಳೆಯ ಸುಳಿಗೆ ಸಿಲುಕಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೀಡುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ಶಿರಾಳಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರ ಅಭೂತಪೂರ್ವ ಸ್ಪಂದನೆಯಿಂದಾಗಿ ಒಟ್ಟಾದ ಹದಿನಾಲ್ಕು ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ತಮ್ಮ ಔದಾರ್ಯವನ್ನು ಮೆರೆದಿದ್ದಾರೆ. ಇವರ ಈ ಕಾರ್ಯವನ್ನು ಮೆಚ್ಚಿ ಶಿರಾಳಕೊಪ್ಪದ ನಾಗರಿಕರ ಪರವಾಗಿ ಶ್ರೀ ವಿಶ್ವನಾಥ ಪಾಟೀಲ್ ರವರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಿದರು.
ಇವರ ಈ ಮಹತ್ಕಾರ್ಯಕ್ಕೆ ಶಿರಾಳಕೊಪ್ಪದ ಎಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಮತ್ತು ನಾಗರೀಕರು ಪ್ರಶಂಸೆಯ ಸುರಿಮಳೆಯನ್ನು ಸುರಿಸಿದ್ದಾರೆ.
ನಮ್ಮ ಭಂಡಾರಿ ಸಮಾಜದ ಉತ್ಸಾಹಿ ಯುವಕ, ಬಹುಮುಖ ಪ್ರತಿಭೆಯ ರತ್ನಾಕರ್ ಭಂಡಾರಿಯವರ ಈ ಸತ್ಕಾರ್ಯವನ್ನು “ಭಂಡಾರಿವಾರ್ತೆ” ಮುಕ್ತ ಕಂಠದಿಂದ ಶ್ಲಾಘಿಸುತ್ತದೆ ಮತ್ತು ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತದೆ.
ನಮ್ಮ ಸಮಾಜದ ಯುವ ಸಮೂಹ ಸಾಮಾಜಿಕ ಸೇವೆಯಲ್ಲಿ ಸದಾ ಮುಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ರತ್ನಾಕರ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.