January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ.….

ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಾವು ಬರೆದ ಆತ್ಮಕಥೆ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ತಂದೆ ತಾಯಿಗೆ ತಿಳಿಸದೆ ಗುಟ್ಟಾಗಿ ಓದಲು ಶುರು ಮಾಡುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಇವರಿಗೆ ಮದುವೆ ಮಾಡುತ್ತಾರೆ. ವರುಷ ಹಲವು ಕಳೆದರೂ ಸುಶೀಲ ಅಶೋಕ್ ರಿಗೆ ಮಕ್ಕಳು ಆಗಿರುವುದಿಲ್ಲ…..

                                                                                                                                                                 ಅವಿನಾಭಾವ ಭಾಗ -17


ರವಿ ಮತ್ತು ಉಷಾನ ಸುಂದರ ಸಂಸಾರದ ಫಲವಾಗಿ ಉಷಾ ಗರ್ಭಿಣಿ ಆಗಿದ್ದು 7 ತಿಂಗಳು ತುಂಬಿದ ಕೂಡಲೇ ರವಿ ಮತ್ತು ಮನೆಯವರು ಸೇರಿ ಸಂಬಂಧಿಕರು ಹಾಗೂ ಊರವರನು ಕರೆದು ಉಷಾಳಿಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದರು . ಚೊಚ್ಚಲ ಹೆರಿಗೆಗೆಂದು ಉಷಾಳ ತಾಯಿ ಮನೆಗೆ ಉಷಾಳನು ಕಳಿಸಿದರು. ರವಿಯು ತುಂಬಾ ಆನಂದದಿಂದ ಇದ್ದರು .ತನ್ನದೇ ಮಗು ಇನ್ನು ಎರಡು ತಿಂಗಳ ಬಳಿಕ ಮನೆಗೆ ಬರುತ್ತದೆ ಎಂದು ಮನೆಯೆಲ್ಲಾ ಕುಶಿ ಗೊಂಡಿತು. ಅದರಂತೆ ಉಷಾಳಿಗೆ ತಿಂಗಳು ತುಂಬಿ ಹೆರಿಗೆ ನೋವು ಪ್ರಾರಂಭ ಆಗಿ ಬಾರೀ ಕಷ್ಟದಿಂದ ಸೂಲಗಿತ್ತಿ ಮಗುವನ್ನು ಹೊರಗೆ ಹೇಗೋ ತೆಗೆದರು.ಆದರೆ ಮಗು ಭೂಮಿಗೆ ಬರುವಾಗಲೇ ಉಸಿರಾಟ ನಿಂತು ಹೋಗಿತ್ತು !!! ಮಗುವನ್ನು ಹೊರಗೆ ತೆಗೆದ ಮೇಲೆ ತಾಯಿಗೆ ರಕ್ತ ಸ್ರಾವ ಸತತವಾಗಿ ಹೋಗುತ್ತಲೇ ಇತ್ತು… ಗೊತ್ತಿದ್ದ ಎಲ್ಲ ಮದ್ದು ಆಯಿತು ದೂರದಿಂದ ವೈದ್ಯರನ್ನೂ ಕರೆತಂದರೂ ಕೂಡ ಹೆರಿಗೆ ಆಗಿ ಆರು ಗಂಟೆ ಬಿಟ್ಟು ತಾಯಿಯ ಪ್ರಾಣಪಕ್ಷಿ ಹಾರಿ ಹೋಯಿತ್ತು. ಈ ಸುಖ ಸಂಸಾರಕ್ಕೆ ಯಾರ ಕಣ್ಣೂ ಬಿತ್ತೋ ಇಲ್ಲವೇ ವಿಧಿ ಆಟವೇ ಇಷ್ಟೋ ರವಿಯ ಹೆಂಡತಿ,ಮಗು ಬಾರದ ಲೋಕಕ್ಕೆ ಹೋದರು. ಇದರಿಂದ ರವಿ ತಾನು ಬದುಕಿರಬಾರದು ಎಂದು ತನ್ನ ಜೀವನದ ಅಂತ್ಯವನ್ನು ಕಾಣಬೇಕು ಎಂದು ಅನ್ನ ಆಹಾರವನ್ನು ಬಿಟ್ಟು ರವಿಯ ಆರೋಗ್ಯ ಕೂಡ ಕೆಟ್ಟಿತ್ತು. ರವಿಯ ಅಪ್ಪ ಅಮ್ಮ ಮತ್ತು ಅಶೋಕ್ ನ ಸತತ ಪ್ರಯತ್ನ ಹಾಗೂ ರವಿಯನ್ನು ರಾತ್ರಿ ಹಗಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಂತೆ ಕಾಯುತ್ತಿದ್ದರು. ಇದರಿಂದಾಗಿ ಕ್ರಮೇಣ ರವಿ ಜೀವನ ಪ್ರೀತಿಯನ್ನು ಪಡೆಯಲು ಸಾಧ್ಯ ಆಯಿತು. ಆದರೂ ಆಫೀಸಿನಲ್ಲಿ ಅನ್ಯಮಸ್ತನಾಗಿ ಇರುತ್ತಿದ್ದರು. ಅಶೋಕ್ ನ ಸತತ ಪ್ರಯತ್ನದಿಂದಾಗಿ ರವಿ ಸಹಜ ಸ್ಥಿತಿಗೆ ಬರುವಂತೆ ಆಗಿತ್ತು. ಇವು ಇಷ್ಟು ರವಿ ಚಂದ್ರರ ವೈಯಕ್ತಿಕ ವಿಚಾರಗಳು.
ಹಾಗೆ ನೋಡಿದರೆ ರವಿಯವರು ನನ್ನಲ್ಲಿ ಮಾತನಾಡುವಾಗ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಕೂಡ ಕೆಟ್ಟ ಭಾವನೆಗಳಿಂದ ಮನಸ್ಸಿನಲ್ಲಿ ಕ್ಲುಲಕ ಆಸೆ ಇಟ್ಟುಕೊಂಡು ವರ್ತಿಸುತ್ತಿರಲಿಲ್ಲ.
“ ಸಂಬಂಧದ ಹೂವು ಸಹಜವಾಗಿ ಅರಳುವುದು ಪರಸ್ಪರ ಪ್ರೀತಿ ಗೌರವಗಳ ತೋಟದಲ್ಲೇ ಹೊರತು ಅಧಿಕಾರವೆಂಬ ಪಂಜರದಲ್ಲಲ್ಲ “
ಹಾಗೆ ನನಗೆ ರವಿಯನ್ನು ಕಂಡರೆ ಮನಸ್ಸಿನಲ್ಲಿ ತುಂಬಾನೇ ಮಧುರ ಭಾವವೊಂದು ಇರುತ್ತಿತ್ತು. ಆದರೆ ಆ ಮಧುರ ಭಾವನೆಯಲ್ಲಿ ಅಶೋಕ್ ನಿಗೆ ವಂಚನೆ ಮಾಡುವ ಯಾವ ದುರುದ್ದೇಶವು ಇರಲಿಲ್ಲ.
“ ಭಾವನೆಗಳೇ ಬದುಕಲ್ಲ, ಭಾವನೆಗಳು ಬದುಕಿನ ಒಂದು ಭಾಗವಷ್ಟೇ “ ಎಂಬುದು ನನಗೆ ಅರಿವು ಇತ್ತು. ನನ್ನ ಭಾವನೆಗಳನ್ನು ಹತೋಟಿಯಲ್ಲಿ ಇಡುವುದು ಹೇಗೆ ಎಂಬುದು ನನಗೆ ತಿಳಿದಿದೆ.
ಕೆಲವೊಂದು ಸಾರಿ ನಾನು ಅಶೋಕ್ ರವಿ ಮೂವರು ಒಟ್ಟಿಗೆ ರವಿಯ ಕಾರಲ್ಲಿ ಬೀಚ್ ಗೆ, ನಾಟಕ, ಯಕ್ಷಗಾನ, ಸಿನಿಮಾ ಎಂದು ನೋಡಲು ಹೋಗುತ್ತಿದ್ದೆವು. ಮೂವರು ತುಂಬಾ ಆತ್ಮೀಯವಾಗಿ ಮಮತೆಯಿಂದ ಇದ್ದು ತಿರುಗಾಡಿ ಹೊಟೇಲ್ ನಲ್ಲಿ ತಿಂದು ಬರುತ್ತಿದ್ದೆವು.
ಅತ್ತೇ ಮಾವ ಕೂಡ ಈ ಬಗ್ಗೆ ಏನೂ ಹೇಳುತ್ತಿರಲಿಲ್ಲ. ರವಿಯವರಲ್ಲಿ ಅಶೋಕ್ ಏನನ್ನು ಮುಚ್ಚಿಡುತಿರಲಿಲ್ಲ…. ಮದುವೆ ಆಗಿ ಇಷ್ಟು ವರ್ಷ ಮಕ್ಕಳು ಆಗದೆ ಇರುವುದು ರವಿ ಬಳಿ ಹೇಳಿದಾಗ ರವಿಯ ಸಲಹೆ ಏನಿತ್ತು ಅಂದರೆ ಒಮ್ಮೆ ವೈದ್ಯರಲ್ಲಿ ಹೋಗಿ ಪರೀಕ್ಷೆ ಮಾಡಿದರೆ ತಪ್ಪೇನು ಇಲ್ಲ ಎಂದು. ಸಮಾಜದಲ್ಲಿ ಸಹಜವಾಗಿ ಎಲ್ಲರೂ ಹೇಳುವಂತೆ ಅಶೋಕ್ ಕೂಡ ನಾನು ಯಾಕೆ ಪರೀಕ್ಷೆ ಮಾಡಬೇಕು? ಮಗು ಆಗದೆ ಇರುವುದು ಸುಶೀ ಗೆ ತಾನೇ? ಅವಳನ್ನೇ ಪರೀಕ್ಷೆ ಮಾಡಬೇಕಲ್ಲ!! ಎಂದು ರವಿಯಲ್ಲಿ ಕೇಳಿದಾಗ ರವಿ ಅದಕ್ಕೆ ಅದು ಹಾಗಲ್ಲ ಅಶೋಕ್ ಹೆಣ್ಣಿನ ಗರ್ಭಕೋಶದಲ್ಲಿ ಮಗು ಬೆಳೆಯುವುದು ನಿಜ ಹಾಗಂತ ಮಗು ಆಗದೆ ಇರುವುದಕ್ಕೆ ಕೆಲವೊಮ್ಮೆ ಹೆಣ್ಣಿನ ತೊಂದರೆ ಇರಬಹುದು ಅಥವಾ ಗಂಡಿನ ತೊಂದರೆಯೂ ಇರಬಹುದು. ಮಗು ಆಗದೆ ಇರುವುದು ಯಾರಿಗೆ ಯಾಕೆ ಎಂಬುದು ನುರಿತ ವೈದ್ಯರಿಗೆ ಮಾತ್ರ ತಿಳಿಯುತ್ತದೆ ನಮಗೆ ಅಲ್ಲ ಯಾರಿಗೆ ಸಮಸ್ಯೆ ಎಂಬುದು ಅವರು ಹೇಳಬೇಕು ಎಂದು ವಿವರವಾಗಿ ಹೇಳಿದರು. ಹೀಗಾಗಿ ಅಶೋಕ್ ವೈದ್ಯರಲ್ಲಿ ಪರೀಕ್ಷೆಗಾಗಿ ರವಿ ಜೊತೆ ಮಂಗಳೂರಿಗೆ ತೆರಳಿದರು…..

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *