January 18, 2025
WhatsApp Image 2022-12-17 at 13.42.01

ಆತ್ಮೀಯ ಓದುಗರೇ ,

ತಮಗೆಲ್ಲರಿಗೂ ನೂತನ ವರ್ಷದ ಶುಭಾಶಯಗಳು. ಈ ವರ್ಷ ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ. ನಿಮಗೆ ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇವೆ .
ಅಂತರಾಳ ಎಂಬ ಕೌಟುಂಬಿಕ ಧಾರಾವಾಹಿಯ ಬಳಿಕ ಮತ್ತೊಂದು ಹೊಸ ಕಥೆಯೊಂದಿಗೆ ಲೇಖಕಿ ಶ್ರೀಮತಿ ವನಿತಾ ಅರುಣ್ ಭಂಡಾರಿಯವರ ಹೊಸ ಧಾರಾವಾಹಿಯು ಇಂದಿನಿಂದ ಪ್ರಕಟಗೊಳ್ಳಲಿದೆ.
ಅಂತರಾಳ ವನ್ನು ಪ್ರೋತ್ಸಾಹಿಸಿದಂತೆ ಅವಿನಾಭಾವ ಧಾರಾವಾಹಿಗೂ ನಿಮ್ಮ ಪ್ರೋತ್ಸಾಹ, ಉತ್ತೇಜನವನ್ನು ನಿರೀಕ್ಷಿಸುತ್ತಿದ್ದೇವೆ .

 

ಅವಿನಾಭಾವ -ಭಾಗ 1

   ಆ ಹೆಂಗಸು ಯಾಕೆ ನನ್ನನ್ನೇ ಪ್ರೀತಿಯಿಂದ ನೋಡುತ್ತಾರೆ ನನ್ನನು ದೂರದಿಂದ ನೋಡಿಯೇ ಅವರ ಕಣ್ಣು ಅಯಸ್ಕಾಂತದಂತೆ ನನ್ನನ್ನು ಸೆಳೆಯುತ್ತಿತ್ತು. ನನ್ನನ್ನು ನೋಡಿದ ಕ್ಷಣ ಅವರ ಮುಖ ಅರಳುತಿತ್ತು, ಕಣ್ಣು ನಗುತ್ತಿತ್ತು. ನಾನು ಬಾಲ್ಯದಲ್ಲಿ ಇದ್ದಾಗ ಅಪ್ಪ ಅಮ್ಮ ಇಬ್ಬರೂ ಆಫೀಸಿಗೆ ಹೋಗಿ ಬರುವಾಗ ತಡವಾದರೆ ನಾನು ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಬರಸೆಳೆದು ಬಿಗಿದಪ್ಪಿ ಮುದ್ದಾಡುತ್ತಿದ್ದರು. ಅಪ್ಪ ಅಮ್ಮನ ಕಾರಿನ ಹಾರ್ನ್ ಕೇಳಿದ ತಕ್ಷಣ ನಮ್ಮ ಅಂಗಳದಿಂದ ಅವರ ಮನೆಗೆ ಸರಕ್ಕನೆ ಹೋಗಿ ಮಾಯವಾಗುತ್ತಿದ್ದರು .ಅವರು ಯಾರು ಅವರಲ್ಲಿ ಯಾಕೆ ಮಾತನಾಡಬಾರದು? ನಮಗೂ ಅವರಿಗೂ ಎನೂ ಸಂಬಂಧ ಎಂದು ಎಷ್ಟು ಬಾರಿ ಕೇಳಿದರೂ ಅಮ್ಮನೂ ಹೇಳಿರಲಿಲ್ಲ ಅಪ್ಪನೂ ಹೇಳಿರಲಿಲ್ಲ!!!!!! ಆದರೆ ಅವರ ಜೊತೆ ಮಾತನಾಡುವುದು ಬಿಡಿ ಮುಗುಳು ನಕ್ಕರು ಅಮ್ಮ ಗದರುತ್ತಿದ್ದರು. ಅಪ್ಪನಂತು ಯಾವುದೇ ಕಾರಣಕ್ಕೂ ಹೊಡೆಯದಿದ್ದವರು ಆ ಹೆಂಗಸನ್ನು ಯಾಕೆ ನೋಡುತ್ತಿ ಎಂದು ಬೆನ್ನಿಗೆ ಗುದ್ದಿಯೇ ಬಿಡುತ್ತಿದ್ದರು. ಇದು ನನಗೆ ತುಂಬಾ ಹಿಂಸೆ ಅನಿಸುತ್ತಿತ್ತು. ಇದು ಯಾಕೆ ಹೀಗೆ ಎಂದು ಆ ಸಣ್ಣ ಪ್ರಾಯದಲ್ಲಿ ಕೂಡ ನನಗೆ ಬಾದಿಸುತ್ತಿದ್ದ ವಿಷಯ ಆಗಿತ್ತು. ನಮ್ಮ ಮನೆಗೆ ಅಂಟಿಕೊಂಡು ಇರುವ ಸಣ್ಣ ಅಂಗಳ ಇರುವ ಹೆಚ್ಚು ದೊಡ್ಡದು ಅಲ್ಲದ ಹೆಚ್ಚು ಸಣ್ಣದು ಅಲ್ಲದ ಮಾದ್ಯಮ ಗಾತ್ರದ ಮನೆಯೇ ಅವರದು ಆಗಿತ್ತು. ನಮ್ಮ ಮನೆ ತುಂಬಾ ದೊಡ್ಡದಾಗಿ ವರಾಂಡದಲೇ ಒಮ್ಮೆಲೇ ಐವತ್ತು ಜನ ಕುಳಿತು ಕೊಳ್ಳಲು ಸಾಧ್ಯ ಇರುವ ಐಶಾರಾಮಿ ಮನೆ ನಮ್ಮದಾಗಿತ್ತು. ನಮ್ಮ ಅಂಗಳದಲ್ಲಿ ಯಾವಾಗಲೂ ಕಾರು ಬೈಕ್ ಜೀಪು ಇದ್ದೆ ಇರುತಿತ್ತು. ಮನೆಯಲ್ಲಿ ನೆಂಟರು ಅಪ್ಪನ ಗೆಳೆಯರು ಅಮ್ಮನ ಗೆಳತಿಯರು ಹೀಗೆ ಯಾವಾಗಲೂ ಜನ ಜಂಗುಳಿ ತುಂಬಿ ತುಳುಕುತ್ತಿತ್ತು.ಅಪ್ಪನಿಗೂ ಕಾರು ಇತ್ತು. ಅಮ್ಮನಿಗೂ ಕಾರು ಇತ್ತು. ಅಪ್ಪ ಅಮ್ಮ ಮನೆಯಲ್ಲಿ ಹೊರಗೆ ಎಲ್ಲೆಲ್ಲೂ ನಗು ನಗುತ್ತಾ ಮಾತನಾಡುತ್ತಿದ್ದರು. ಆದರೆ ನಮ್ಮ ಮನೆಯ ಹತ್ತಿರದ ಹೆಂಗಸನ್ನು ಕಂಡರೆ ಸಿಡಿಮಿಡಿ ಗೊಳ್ಳುತಿರುವುದು ಯಾಕೆ ಎಂದು ಎಷ್ಟು ಯೋಚಿಸಿದರೂ ಅರ್ಥವೇ ಆಗುತ್ತಿರಲಿಲ್ಲ. ಎರಡು ಮೂರು ಸಲ ಅಪ್ಪ ಅಮ್ಮ ಇಲ್ಲದೆ ಇರುವಾಗ ಆ ಹೆಂಗಸು ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ನನ್ನನ್ನು ನೋಡಿ ಬರಸೆಳೆದು ಅಪ್ಪಿ ಮುತ್ತಿಟ್ಟು ಹೋದ ವಿಷಯ ನಮ್ಮ ಮನೆಯ ಕೆಲಸದ ಆಳುಗಳಿಂದ ಅಪ್ಪ ಅಮ್ಮನಿಗೆ ತಿಳಿದು ನನಗೆ ಪೆಟ್ಟು ನೀಡಿದ್ದು, ಮಾತ್ರವಲ್ಲದೆ ಇಬ್ಬರು ಕೆಲಸದವರಿಗೂ ತುಂಬಾ ಹೊತ್ತು ಕ್ಲಾಸ್ ತೆಗೆದು ಕೊಂಡಿದ್ದರಿಂದ, ನಂತರ ಯಾವ ವಿಷಯವನ್ನು ಕೂಡ ಕೆಲಸದವರು ಅಪ್ಪ ಅಮ್ಮನಲ್ಲಿ ಹೇಳುವುದು ಬಿಟ್ಟು ಬಿಟ್ಟರು. ಆ ಹೆಂಗಸು ಕೂಡ ಮನೆಯ ಒಳಗಿನಿಂದ ನನ್ನನು ನೋಡಿ ಸಮಾಧಾನ ಪಟ್ಟು ಕೊಂಡಿದ್ದಾರೆ ಎಂದು ನನಗೆ ತಿಳಿಯುತ್ತಿತ್ತು. ಆ ಹೆಂಗಸಿನ ಹೆಸರು ಏನು ಎಂದು ಕೂಡ ನನಗೆ ಗೊತ್ತಿರಲಿಲ್ಲ. ಅಮ್ಮ ಮತ್ತು ಅಪ್ಪ ನಿನಗೆ ಯಾಕೆ ಅದೆಲ್ಲ ಎಂದು ಜೋರು ಮಾಡುತಿದ್ದರು. ಕೆಲಸದವರು ಇಬ್ಬರೂ ನಮಗೆ ಗೊತ್ತಿಲ್ಲ ಎನ್ನುತ್ತಿದ್ದರು . ಆ ಮನೆಯಲ್ಲಿ ನಾನು ಗಮನಿಸಿದ ಹಾಗೆ ಆ ಹೆಂಗಸು ಒಬ್ಬರೇ ಇದ್ದರು. ಗಟ್ಟಿ ಮುಟ್ಟಾದ ಹೆಣ್ಣು, ನಡು ಪ್ರಾಯ ಆಗಿದ್ದರೂ ಸುಂದರ ಯುವತಿ ಎಂದರೆ ತಪ್ಪಾಗಲಾರದು. ಯಾಕೆಂದರೆ ನಾನು ಹೈಸ್ಕೂಲು ಓದುವ ಸಮಯದಲ್ಲಿ ಅವರಿಗೆ ಹೆಚ್ಚು ಅಂದರೆ ಮೂವತ್ತೈದು ನಲವತ್ತು ವರ್ಷ ಆಗಿರಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ಈ ಪ್ರಾಯದಲ್ಲಿ ಇಷ್ಟು ಮುದ್ದಾಗಿ ಸುಂದರವಾಗಿ ಇರಬೇಕಾದರೆ ಅವರ ಯೌವ್ವನದಲ್ಲಿ ಹೇಗಿರಬಹುದು? ಸುಂದರವಾಗಿ ಇದ್ದಿರಬಹುದು ಎಂದು ನಾನು ಅಂದುಕೊಳ್ಳುತ್ತಿದ್ದೆ. 

ಕೆಲವೊಮ್ಮೆ ನಾನು ಅವರನ್ನು ನೋಡಲು ಹವಣಿಸುತ್ತಿದ್ದೆ. ಎನೋ ಒಂದು ಬಗೆಯ ಆಕರ್ಷಣೆ ಅವರಲ್ಲಿ ಇತ್ತು. ಅಪ್ಪ ಆ ಹೆಂಗಸಿನ ವಿಷಯದಲ್ಲಿ ಹೊಡೆದಾಗ ಆ ಹೆಂಗಸು ಮತ್ತು ನನ್ನ ಅಪ್ಪನಿಗೆ ಕೆಟ್ಟ ರೀತಿಯ ಸಂಬಂಧ ಇರಬಹುದಾ ಎಂದು ಕೂಡ ನನಗೆ ಸಂಶಯ, ಕುತೂಹಲ ಆಗುತಿತ್ತು.!!!!! ಹಾಗೆ ನೋಡಿದರೆ ನನ್ನ ಅಮ್ಮನಿಗಿಂತ ಆ ಹೆಂಗಸು ಚೆನ್ನಾಗಿ ಮೈ ಕೈ ತುಂಬಿಕೊಂಡು ಮುಖದಲ್ಲಿ ಮಂದಹಾಸ ಇತ್ತು. ಆದರೆ ಅವರ ಕಣ್ಣು ತೀಕ್ಷ್ಣ ವಾಗಿ ಜೀವನದ ಸಾರವನ್ನು ಬಲ್ಲವರು ಶ್ರಮಜೀವಿ ಯಾರಿಗೂ ಬಗ್ಗದ ಸ್ವಾಭಿಮಾನಿ ಹೆಣ್ಣು ಎಂದು ಹೇಳುತ್ತಿತ್ತು. ಅಪ್ಪ ಮತ್ತು ಆ ಹೆಂಗಸಿಗೆ ಪ್ರಾಯದಲ್ಲಿ ಹೆಚ್ಚು ವ್ಯತ್ಯಾಸ ಕಾಣುತ್ತಿರಲಿಲ್ಲ. ಅಮ್ಮ ಪ್ರಾಯದಲ್ಲಿ ಆ ಹೆಂಗಸಿಗಿಂತ ಸಣ್ಣ ಇದ್ದರೂ ಅಮ್ಮನ ಪೀಚಲು ದೇಹ ಸಪೂರ ಕೈ ಕಾಲು ರೋಗಿಯ ಹಾಗೆ ಕಾಣುತ್ತಿದ್ದರು. ಅದಕ್ಕೆ ಪೂರಕವಾಗಿ ಮುಖಕ್ಕೆ ಮೇಕಪ್ ಎನ್ನುವ ಹೆಸರಿನಲ್ಲಿ ಏನೇನೋ ಬಣ್ಣ ಹಚ್ಚಿ ಅವರು ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗ ವೇಷ ಹಾಕಿದ ಹಾಗೆ ಕಾಣುತ್ತಿದ್ದರು ಎಂದರೆ ಸುಳ್ಳಲ್ಲ. ಅಮ್ಮ ಏನೇನೋ ಬಣ್ಣ ಹಚ್ಚಿ ಹೊರಟಾಗ ಅಪ್ಪ ಕೂಡ ಕುಶಿ ಪಡುವುದು ಕಂಡಾಗ ನನಗೆ ಯಾಕೋ ಇಬ್ಬರ ಬಗ್ಗೆನೂ ಭ್ರಮನಿರಸನ ಆಗುತಿತ್ತು.

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *