January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಆ ಮಹಿಳೆಯನ್ನು ನೋಡಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಇರುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ತನ್ನ ಜೊತೆ ಕೆಲಸ ಮಾಡುವ ಲೇಡಿ ಡಾಕ್ಟರ್ ರೇಖ ಹೇಳುತ್ತಾರೆ.ರೋಗಿಯ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ದಿಗ್ಭ್ರಮೆಗೊಂಡು ಕೆಳಗೆ ಬೀಳುತ್ತಾರೆ..

ಅವಿನಾಭಾವ -ಭಾಗ 4

ಆಕಾಶ್ ಎಷ್ಟು ಹೊತ್ತು ಕ್ಯಾಂಟಿನ್ ನಲ್ಲಿ ಕುಳಿತು ಯೋಚನೆ ಮಾಡಿದ್ದಾನ ಗೊತ್ತಿಲ್ಲ ಚಿತ್ರ ಬಿಡಿಸುವವರು ಪೆನ್ಸಿಲ್ ನಲ್ಲಿ ನವಿರಾದ ಗೆರೆ ಎಳೆದಂತೆ ಸಣ್ಣದಾಗಿ ಕತ್ತಲು ಆವರಿಸಿತ್ತು.. ಹಕ್ಕಿಗಳು ಗೂಡಿಗೆ ಮರಳಲು ಎಲ್ಲರೂ ರೆಡಿ ಆಗಿ ಎಂದು ಹೇಳುವಂತೆ ಪರಸ್ಪರ ಮಾತನಾಡುತ್ತಿರುವಂತೆ ಚಿಲಿಪಿಲಿ ಗುಟ್ಟ್ಟುತ್ತಿತ್ತು.. ಇಳಿಸಂಜೆಯಲ್ಲಿ ತಂಪಾದ ಗಾಳಿ ಬೀಸುತ್ತಿತ್ತು…. ಆಕಾಶ್ ನಿಗೆ ಇಂತಹ ವಾತಾವರಣ ತುಂಬಾ ಇಷ್ಟ…..ಜನರ ಸದ್ದು ಗದ್ದಲ ಇಲ್ಲದೆ ವಾಹನಗಳ ಕರ್ಕಶ ಶಬ್ದ ಬಾರದೆ ಪ್ರಶಾಂತ ಆಹ್ಲಾದಕರ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ ಎಂದು ಅಂದುಕೊಂಡನು….. ಸುಮ್ಮನೆ ಹೀಗೆ ಇರೋಣ ಎಂದುಕೊಂಡನು. ಸ್ವಲ್ಪ ಹೊತ್ತಿನ ಬಳಿಕ ಅವನ ಕರ್ತವ್ಯದ ಸಮಯ ಮುಗಿಯುತ್ತದೆ ಹೋದ ವಾರ ರಾತ್ರಿ ಪಾಳಿಯಲ್ಲಿ ಕೆಲಸ ಇತ್ತು. ಈ ವಾರ ಹಗಲು ಡ್ಯೂಟಿ ಇದೆ ಎಂದೆನಿಸಿದ .. ಈ ಆಸ್ಪತ್ರೆಯ ಹೆಸರು ನವಚೇತನ ಎಂದು. ಅಷ್ಟೇನೂ ದೊಡ್ಡ ಆಸ್ಪತ್ರೆ ಅಲ್ಲ. ಇಲ್ಲಿ ಬರುವ ರೋಗಿಗಳ ಸಂಖ್ಯೆ ತೀರಾ ಕಡಿಮೆ ಅಂದರೆ ಕಡು ಬಡವರು ಅಲ್ಲದ ಶ್ರೀಮಂತರು ಅಲ್ಲದವರು ಹೆಚ್ಚು ಮದ್ಯಮ ವರ್ಗದವರು ಬರುತ್ತಾರೆ. ಹೆಚ್ಚು ಸುಲಿಗೆ ಮಾಡುವ ಆಸ್ಪತ್ರೆ ಇದಾಗಿರಲಿಲ್ಲ… ಮನುಷ್ಯನ ಮನಸ್ಥಿತಿ ಹೇಗೆಂದರೆ ಹೆಚ್ಚು ಮೋಸ ಸುಲಿಗೆ ಮಾಡಬಾರದು ಎಂದು ಅಂದುಕೊಳ್ಳುತ್ತಾರೆ… ಆದರೆ ಅಂತಹ ಕಡೆಯೇ ಹೆಚ್ಚು ಹೆಚ್ಚು ಹೋಗಿ ಅವರ ಮೋಸ ಸುಲಿಗೆಗೆ ಪರೋಕ್ಷವಾಗಿ ಬೆಂಬಲಿಸುತ್ತಾರೆ!! ಶ್ರೀಮಂತರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂಬ ಒಂದೇ ಕಾರಣಕ್ಕೆ ಬಡ ವರ್ಗದ ಜನರು ಹೆಚ್ಚು ದುಡ್ಡು ಪಡೆಯುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿ ಇರುತ್ತದೆ ಎಂದು ನಂಬಿಕೊಂಡಿರುತ್ತಾರೆ!!!!
ವೈದ್ಯರು ಮನಸು ಮಾಡಿದರೆ ಒಬ್ಬ ರೋಗಿಯ ಕಾಯಿಲೆಯನ್ನು ಬೇಗ ಗುಣಪಡಿಸಲು ಸಾಧ್ಯವಿದೆ ಎಂದು ಆಕಾಶ್ ನ ನಂಬಿಕೆ. ಹೇಗೆಂದರೆ ರೋಗಿಯ ರೋಗ ಅರ್ಧ ಔಷಧಿಯಿಂದ ಪರಿಹಾರ ಆದರೆ ಅರ್ಧ ವೈದ್ಯರ ಮಾತಿನಿಂದ ಗುಣಪಡಿಸಲು ಸಾಧ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಸ್ಪರ ಮಾತುಕತೆ ನಡೆಸಲು ಯಾರಿಗೂ ಸಮಯವಿಲ್ಲ ಹಾಗಿರುವಾಗ ದೇವರು ಎಂದು ನಂಬಿರುವ ವೈದ್ಯರು ಹೇಗೆ ತಾನೇ ಮಾತನಾಡುತ್ತಾರೆ. ಮೊದಲು ಎಲ್ಲಾ ರೋಗಕ್ಕೂ ಒಬ್ಬರೇ ವೈದ್ಯರು ಮದ್ದು ನೀಡಿ ಗುಣಪಡಿಸಲು ಸಾಧ್ಯವಿತ್ತು. ಈಗ ಹಾಗಿಲ್ಲ ವೈದ್ಯರಿಗೆ ಔಷಧಿಯ ಚೀಟಿ ಮಾತ್ರ ಬರೆಯಲು. ಬೇರೆ ಎಲ್ಲ ಪರೀಕ್ಷೆಗಳನ್ನು ಮಾಡಲು ಬೇರೆ ಬೇರೆ ವಿಭಾಗ, ತಜ್ಞರು ಇರುತ್ತಾರೆ.

ವಾರ್ಡ್ ಬಾಯ್ ಬಂದು ಸರ್ ನಿಮ್ಮನ್ನು ಕರೆಯುತ್ತಾರೆ ಎಂದು ಹೇಳಿದಾಗ ಆಕಾಶ್ ತಕ್ಷಣ ಎದ್ದು ಬೇಗ ಬೇಗ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದ. ಸುಶೀಲ ಅವರಿಗೆ ಎಚ್ಚರ ಆಗಿತ್ತು.. ಆಕಾಶ್ ನನ್ನು ನೋಡಿ ಒಮ್ಮೆ ಯಾಕೋ ಸಪ್ಪೆ ಮುಖ ಮಾಡಿದರು. ಮರುಕ್ಷಣ ಮುಖದಲ್ಲಿ ಮಂದಹಾಸ ಬೀರುತ್ತಾ ಅವನನ್ನೇ ಎವೆಯಿಕ್ಕದೆ ನೋಡಿದರು. ಆಕಾಶ್ ನಿಗೂ ಅವರು ಆರೋಗ್ಯವಾಗಿ ಇರುವುದು ಕಂಡು ತುಂಬಾ ಕುಶಿ ಆಯಿತು. ಅವರನ್ನು ಬರಸೆಳೆದು ಬಿಗಿದಪ್ಪಿ ಹಿಡಿಯಬೇಕು ಎಂಬ ಮನಸ್ಥಿತಿ ಆಕಾಶ್ ನಿಗೆ ಆಯಿತು.. ಇವರನ್ನು ನೋಡಿದರೆ ನನಗೆ ಯಾಕೆ ಹೀಗಾಗುತ್ತದೆ ಎಂದು ಆಕಾಶ್ ತುಂಬಾ ಎಚ್ಚರಿಕೆಯಿಂದ ಮನಸ್ಸಿನಲ್ಲೇ ಅಂದುಕೊಂಡನು. ಅವರನ್ನು ಬಿಟ್ಟು ಹೋಗಲು ಮನಸ್ಸು ಆಗಲಿಲ್ಲ. ಆಗ ಸುಶೀಲ ಅವರು ಡಾಕ್ಟರೆ ನಾನು ಮನೆಗೆ ಹೋಗುತ್ತೇನೆ ಈಗ ನಾನು ಚೆನ್ನಾಗಿ ಇದ್ದೇನೆ ಅಂದರು. ಈಗ ಕತ್ತಲು ಆಗಿದೆ ನೀವು ಒಬ್ಬರೇ ಹೇಗೆ ಹೋಗುತ್ತೀರಿ ನಿಮ್ಮ ಜೊತೆ ಯಾರು ಇದ್ದಾರೆ ಎಂದು ಕೇಳಿದಾಗ ನಾನು ಇದ್ದೇನೆ ಸರ್ ಎಂದು ಮುಖ ದುಂಡಾದ ಗೋಧಿ ಮೈ ಬಣ್ಣದ 20 ವರುಷದ ಹೆಣ್ಣು ಮುಂದೆ ಬಂದಳು.. ಹೇಗೆ ಹೋಗುತ್ತೀರಿ ಎಂದಾಗ ಆಟೋ ಮಾಡಿ ಹೋಗುತ್ತೇವೆ ಸರ್ ಎಂದಳು. ಆಕಾಶ್ ತಕ್ಷಣ ಅವರಿಗೆ ಜಾಷಧಿ ಚೀಟಿ ಬರೆದು ಪುನಃ ಯಾವಾಗ ಬರಬೇಕು ಎಂದು ತಿಳಿಸಿ ನಾನು ಮನೆಗೆ ಹೋಗುತ್ತಿದ್ದೇನೆ ನನ್ನ ಕಾರಲ್ಲಿ ಬಿಡುತ್ತೇನೆ ಎಂದು ಅವರ ಮಾತಿಗೂ ಕಾಯದೆ ಕಾರ್ ಬಳಿಗೆ ತೆರಳಿ ಆಸ್ಪತ್ರೆಯ ಮುಂದೆ ತಂದು ಸುಶೀಲ ಅವರನ್ನು ಬನ್ನಿ ಎಂದು ಕರೆದ. ಇಬ್ಬರು ಬಂದು ಹಿಂದಿನ ಸೀಟಿನಲ್ಲಿ ಕುಳಿತರು. ಕಾರು ಚಲಾಯಿಸುವಾಗ ನಿಧಾನವಾಗಿ ನೀವು ಈಗ ಮೊದಲು ಇದ್ದ ಮನೆಯಲ್ಲಿ ಇಲ್ಲ ಯಾಕೆ ಎಂದು ಇದಕ್ಕೆ ಇವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಭಯದಿಂದಲೇ ಕೇಳಿದ ಆಕಾಶ್. ಅದಕ್ಕೆ ಅಷ್ಟೇ ಸಾವಕಾಶವಾಗಿ ಸುಶೀಲ ‌ಅವರು ಅಲ್ಲಿ ಪೇಟೆ. ಅಲ್ಲದೆ ಅಷ್ಟು ದೊಡ್ಡ ಮನೆಯಲ್ಲಿ ನಾನು ಒಬ್ಬಳೇ ಇರಬೇಕು ಎಂದು ಅದನ್ನು ಮಾರಿ ಬಂದ ದುಡ್ಡಿನಿಂದ ಹಳ್ಳಿಯಲ್ಲಿ ಒಂದು ಸಣ್ಣ ಮನೆ ಸ್ವಲ್ಪ ಎನಾದರೂ ತರಕಾರಿ ಹೂ ಹಣ್ಣು ಗಿಡ ಮಾಡಬಹುದು ಎಂದು ಮನೆ ಜಾಗ ಸೇರಿ ಹದಿನೈದು ಸೆಂಟ್ಸ್ ಜಾಗವನ್ನು ತೆಗೆದುಕೊಂಡು ಸ್ವಲ್ಪ ದುಡ್ಡು ಬ್ಯಾಂಕ್ ನಲ್ಲಿ ಇಟ್ಟು ಹಿಂದಿನ ನೆನಪುಗಳನ್ನು ಕೆಲವೊಮ್ಮೆ ಬಿಡುತ್ತಾ ಕೆಲವೊಮ್ಮೆ ಬೇಡ ಎಂದರು ಬಂದು ಮೆಲುಕು ಹಾಕುತ್ತಾ ಇದ್ದೇನೆ ಅಂದರು. ಈಗ ನೀವು ಎಲ್ಲಿ ಇರುವುದು ಎಂದಾಗ ಸುರತ್ಕಲ್ ನಲ್ಲಿ ಹೊನ್ನ ಕಟ್ಟೆ ಎಂಬ ಹಳ್ಳಿಯಲ್ಲಿ ಎಂದರು ಸುಶೀಲ.

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *