ಇಲ್ಲಿಯವರೆಗೆ…..
ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಆ ಮಹಿಳೆಯನ್ನು ನೋಡಿ ತನ್ನ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ.ರೋಗಿಯ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಕೆಳಗೆ ಬಿದ್ದು ಪ್ರಜ್ಞೆ ತಪ್ಪುತ್ತಾರೆ . ಇದರಿಂದ ಡಾಕ್ಟರ್ ಆಕಾಶ್ ಗಾಬರಿಯಾಗುತ್ತಾನೆ.ಸ್ವಲ್ಪ ಸಮಯದ ಬಳಿಕ ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಅವರನ್ನು ಡಾಕ್ಟರ್ ಆಕಾಶ್ ತನ್ನ ಕಾರಲ್ಲಿ ಕಳಿಸಲು ಹೋಗುತ್ತಾನೆ.
ಅವಿನಾಭಾವ -ಭಾಗ 5
ನಾವು ಇಲ್ಲಿಂದ ಆಟೋ ಹತ್ತಿ ಹೋಗುತ್ತೇವೆ.ನಿಮಗೆ ಯಾಕೆ ತೊಂದರೆ ಎಂದರು ಸುಶೀಲ. ಇಲ್ಲ ನಾನು ನಿಮ್ಮನ್ನು ಮನೆಗೆ ತಲುಪಿಸಿ ಮತ್ತೆ ಹೋಗುತ್ತೇನೆ. ನನಗೆ ಎನು ತೊಂದರೆ ಇಲ್ಲ ನಾಳೆ ಹಗಲು ಡ್ಯೂಟಿ ಎಂದನು ಆಕಾಶ್. ಅದಕ್ಕೆ ಸುಶೀಲ ನಿಮ್ಮ ಅಪ್ಪ ಅಮ್ಮ ಹೇಗಿದ್ದಾರೆ ಅವರು ನಿಮ್ಮನ್ನು ಕಾಯಬಹುದು ಅಲ್ವಾ ಎಂದರು. ಅವರಿಬ್ಬರೂ ಚೆನ್ನಾಗಿ ಇದ್ದಾರೆ. ಅವರು ನನ್ನನ್ನು ಕಾಯುವುದಿಲ್ಲ ಎಂದು ಹೇಳುತ್ತಾ ಇವರಲ್ಲಿ ಇಷ್ಟು ಮಾತನಾಡಲು ಸಾಧ್ಯವಾಯಿತು ಎಂದು ತುಂಬಾ ಕುಶಿಪಟ್ಟನು ಆಕಾಶ್. ಸುಶೀಲ ಅವರ ಜೊತೆಗೆ ಇರುವ ಹೆಣ್ಣು ಮಗಳನ್ನು ಇವರು ಯಾರು ಎಂದು ಕೇಳಿದ ಆಕಾಶ್. ಇವಳು ನನ್ನ ದೂರದ ಸಂಬಂಧಿ ಮಗಳು ಹೆಸರು ರಿತಿಕಾ. ಡಿಗ್ರಿ ಮುಗಿಸಿ ನಮ್ಮ ಮನೆಯಲ್ಲಿ ಇದ್ದಾಳೆ. ನಾನು ಒಬ್ಬಳೇ ಇರುವುದು ಎಂದು ನನ್ನ ಜೊತೆ ಇದ್ದಾಳೆ. ಅವಳಿಗೆ ಹತ್ತಿರದಲ್ಲೇ ಕೆಲಸ ಎನಾದರೂ ಸಿಕ್ಕರೆ ನಮ್ಮ ಮನೆಯಿಂದಲೇ ಹೋಗುತ್ತೇನೆ ಎನ್ನುತ್ತಿದ್ದಾಳೆ ಎಂದರು ಸುಶೀಲ. ಆಕಾಶ್ ನಿಗೆ ಇವರಿಗೆ ಎನಾದರೂ ನನ್ನಿಂದ ಸಾದ್ಯವಾದರೆ ಸಹಾಯ ಮಾಡಬೇಕು ಎಂದು ಯೋಚನೆ ಬಂದ ಆ ಕ್ಷಣವೇ ಸುಶೀಲ ಡಾಕ್ಟರೆ ನಿಮಗೆ ಎಲ್ಲಾದರೂ ಗೊತ್ತಿದ್ದರೆ ಇವಳಿಗೆ ಒಂದು ಕೆಲಸ ನೋಡಿ ಹೇಳಿ ಎಂದರು. ಇವರಿಗೆ ಕಂಪ್ಯೂಟರ್ ಗೊತ್ತಿದೆಯೇ ಎಂದು ಕೇಳಿದಾಗ ರಿತಿಕಾ ಹೌದು ಸರ್ ಎಂದಳು. ಆಕಾಶ್ ನಿಗೆ ಯಾವುದೋ ಒಂದು ಮನಸ್ಸು ಸುಶೀಲ ಅವರ ಕಡೆ ಎಳೆಯುತ್ತಿತ್ತು. ಯಾಕೆ ಹೀಗಾಗುತ್ತದೆ ಎಂದು ತಿಳಿಯುತ್ತಿರಲಿಲ್ಲ.. ಇವರ ಜೊತೆ ಹೆಚ್ಚಿನ ಒಡನಾಟ ಪಡೆದು ನನ್ನ ತಂದೆ ತಾಯಿ ಯಾಕೆ ಇವರನ್ನು ಅಷ್ಟು ದ್ವೇಷ ಮಾಡುತಿದ್ದರು ಎಂದು ತಿಳಿಯಬೇಕು ಎಂದು ಆಕಾಶ್ ಯೋಚಿಸಿದ. ರಿತಿಕಾಳಿಗೆ ಕೆಲಸ ಕೊಡಿಸಿದರೆ ಸುಶೀಲ ಅವರ ಸ್ನೇಹ ಸಂಪಾದಿಸಬಹುದು ಎಂದು ಅಂದುಕೊಂಡನು ಆಕಾಶ್.
ಇಲ್ಲೇ ನಮ್ಮ ಮನೆಗೆ ಹೋಗುವ ರಸ್ತೆ. ಇಲ್ಲಿ ನಿಲ್ಲಿಸಿದರೆ ನಾವು ಹೋಗುತ್ತೇವೆ ಎಂದರು ಸುಶೀಲ. ಬೇಡ ಇಲ್ಲಿ ಇಳಿಯಬೇಡಿ ನಾನು ಮನೆಗೆ ತಲುಪಿಸಿ ಹೋಗುತ್ತೇನೆ ನಿಮಗೆ ಮೊದಲೇ ಮೈ ಹುಷಾರಿಲ್ಲ ಎಂದಾಗ ಸುಶೀಲ ಸುಮ್ಮನೆ ಆದರು.
ಮನೆಗೆ ಬಂದ ಕೂಡಲೇ ರಿತಿಕಾ ಬೀಗ ತೆಗೆದು ಲೈಟ್ ನ ಸ್ವಿಚ್ ಹಾಕಿ ಲೈಟ್ ಉರಿಯಿತು.ಸುಶೀಲ ಕರೆಯದಿದ್ದರು ಆಕಾಶ್ ಮನೆಯ ಒಳಗೆ ನಡೆದನು. ಆಕಾಶ್ ಮನೆಗೆ ಬಂದು ಅಲ್ಲೇ ಇರುವ ಈಜಿ ಚೇರ್ ನಲ್ಲಿ ಕುಳಿತಾಗ ಸುಶೀಲ ತುಂಬಾ ಯೋಚನಾ ಕ್ರಾಂತರಾದರೋ ಕುಶಿ ಪಟ್ಟರೋ ಬೇಸರ ಆಯಿತೋ ಒಂದು ತಿಳಿಯಲಿಲ್ಲ ಆಕಾಶ್ ನಿಗೆ. ಆದರೆ ಲವಲವಿಕೆಯಿಂದ ಒಳಗೆ ಹೋಗಿ ಹಾಲು ಕಾಯಿಸಿ ಆಕಾಶ್ ನಿಗೆ ತಂದು ಕೊಟ್ಟರು. ಬೇಡ ಅಂಟಿ ಎಂದಾಗ ಇಲ್ಲ ಮೊದಲ ಸಲ ನಮ್ಮ ಮನೆಗೆ ಬಂದಿದ್ದೀರಿ ಕುಡಿಯಿರಿ ಎಂದಾಗ ಹೆಚ್ಚು ಒತ್ತಾಯ ಮಾಡಿಕೊಳ್ಳದೆ ಅವರ ಕೈಯಿಂದ ಲೋಟ ತೆಗೆದು ಕೊಂಡು ಬಾಯಲ್ಲಿ ಇಟ್ಟು ಕುಡಿಯಬೇಕು ಆ ಕ್ಷಣ ಅವನ ಕಣ್ಣು ಒಳಮನೆಯ ಗೊಡೆಯಲಿ ನೇತು ಹಾಕಿದ ಪೋಟೋ ಇವನ ಗಮನ ಸೆಳೆಯಿತು. ಮಾತ್ರವಲ್ಲ ಆದೇ ಪೋಟೋ ಆಕಾಶ್ ನ ಮನೆಯಲ್ಲಿ ಇರುವುದು ಅವನ ಮಿದುಳು ನೆನಪು ಮಾಡಿಕೊಂಡಿತು. ಯಾಕೋ ಏನೋ ಮನಸ್ಸು ತುಂಬಾ ಅಲ್ಲೋಲ ಕಲ್ಲೋಲ ಆಗಿದ್ದು ಇವನ ಮನಸ್ಸಿಗೆ ತಿಳಿಯಿತು. ಈಗ ಈ ಬಗ್ಗೆ ಕೇಳಿದರೆ ಅವರಿಗೆ ಕೋಪ ಬಂದು ಬೇರೆ ಎನೋ ಎಡವಟ್ಟು ಆಗಬಾರದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಹೇಗಾದರೂ ಸರಿ ಇವರಲ್ಲಿ ಒಡನಾಟ ಇಟ್ಟುಕೊಳ್ಳಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿದನು ಆಕಾಶ್. ಅವರ ಕೈಯಿಂದ ಹಾಲು ತೆಗೆದುಕೊಂಡು ಕುಡಿದ ಮೇಲೆ ಹೊಟ್ಟೆ ಮನಸ್ಸು ಎರಡೂ ಸಮಾಧಾನ ಆಯಿತು ಆಕಾಶ್ ನಿಗೆ. ಹಾಲು ಕುಡಿದು ಲೋಟವನ್ನು ರಿತಿಕಾ ತೆಗೆದುಕೊಂಡು ಹೋದಳು.. ಊಟ ಮಾಡಿ ಹೋಗು ಎಂದು ಹೇಳಿದರೆ ಊಟ ಮುಗಿಸಿ ಹೋಗಬಹುದಿತ್ತು ಎಂದು ಮನಸ್ಸಿನಲ್ಲೇ ಯೋಚನೆ ಬಂದು ಅವನ ಯೋಚನೆಗೆ ಅವನಿಗೆ ಒಮ್ಮೆ ನಗು ಬಂತು ಆಕಾಶ್ ನಿಗೆ…. ಸುಶೀಲ ಅವರು ಮೊದಲಿನ ಕಾಲದ ಬೆತ್ತದ ಕುರ್ಚಿಯಲ್ಲಿ ಕುಳಿತು ಒರಗಿಕೊಂಡು ಆಕಾಶ್ ನನು ದಿಟ್ಟಿಸಿ ನೋಡುತ್ತಾ ಏನನ್ನೋ ಯೋಚಿಸುತ್ತಾ ಇದ್ದರು….. ಅವರು ಏನನ್ನು ಯೋಚನೆ ಮಾಡುತ್ತಿರಬಹುದು ಎಂದು ಆಕಾಶ್ ನಿಗೆ ಕುತೂಹಲ ಇತ್ತು… ಕೇಳುವ ಆಸಕ್ತಿಯೂ ಇತ್ತು ಆದರೆ ಮಧ್ಯಾಹ್ನದ ಘಟನೆ ನೆನಪಿಗೆ ಬಂದು ಸುಮ್ಮನೆ ಇರುವುದೇ ಒಳಿತು ಎಂದುಕೊಂಡನು….
ಆಕಾಶ್ ಏನೋ ನೆನೆಪಿಸಿಕೊಂಡು ರಿತಿಕಾರವರೇ ನಿಮ್ಮ ಮಾರ್ಕ್ಸ್ ಕಾರ್ಡ್ ಬಯೋ ಡೇಟಾ ಇದೆಯಾ ನಾನು ಇರುವ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿ ಹುದ್ದೆಗೆ ಒಬ್ಬರು ಹೆಣ್ಣು ಬೇಕು ಎನ್ನುತ್ತಿದ್ದರು.. ನಿಮಗೆ ಆಸಕ್ತಿ ಇದ್ದರೆ ನಾನು ವಿಚಾರಿಸುತ್ತೇನೆ ಎಂದಾಗ ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳು ಪುಟ್ಟ ಎಂದು ತಕ್ಷಣ ಸುಶೀಲ ಹೇಳಿದರು. ರಿತಿಕಾ ಒಳಗೆ ಹೋಗಿ ದೊಡ್ಡ ಪೈಲ್ ತಂದುಕೊಟ್ಟಳು. ಅದನ್ನು ನೋಡಿ ಹಿಂದೆ ಕೊಡುವಾಗ “ ರಿತಿಕಾ ಅದು ಅವರಲ್ಲಿ ಇರಲಿ ಕೆಲಸ ಸಿಗುವುದಾದರೆ ಪ್ರಯತ್ನ ಮಾಡಿ ಡಾಕ್ಟರೇ” ಎಂದು ಸುಶೀಲ ಹೇಳಿದರು.. ಅದನು ಕೇಳಿ ಆಕಾಶ್ ರಿತಿಕಾಳ ಬಯೋಡೇಟಾದ ಪೈಲ್ ಹಿಡಿದುಕೊಂಡ. ಅವನು ಕುಳಿತೇ ಇರುವುದನ್ನು ಕಂಡು ಸುಶೀಲನೇ ಡಾಕ್ಟರೇ ನೀವು ಹೊರಡಿ ನಿಮ್ಮ ಅಪ್ಪ ಅಮ್ಮ ಕಾಯುತ್ತಿರಬಹುದು ಎಂದಾಗ ಒಲ್ಲದ ಮನಸ್ಸಿನಿಂದ ಆಕಾಶ್ ಎದ್ದು ನಿಂತನು.
( ಮುಂದುವರಿಯುವುದು)
✍️ ವನಿತಾ ಅರುಣ್ ಭಂಡಾರಿ ಬಜಪೆ