January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಆ ಮಹಿಳೆಯನ್ನು ನೋಡಿ ತನ್ನ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ.ರೋಗಿಯ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಕೆಳಗೆ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಡಾಕ್ಟರ್ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸಲು ಹೋಗುತ್ತಾನೆ. ಅವರ ಜೊತೆ ಸುಶೀಲ ಅವರ ಸೋದರ ಸಂಬಂಧಿ ರಿತಿಕಾ ಇರುತ್ತಾಳೆ. ಅವಳಿಗೆ ಕೆಲಸ ಹುಡುಕುವಂತೆ ಆಕಾಶ್ ನಲ್ಲಿ ಸುಶೀಲ ಕೇಳಿಕೊಳ್ಳುತ್ತಾರೆ..

ಅವಿನಾಭಾವ -ಭಾಗ 6

ಆಕಾಶ್ ಹೊರಡುತ್ತೇನೆ ಎಂದು ಎದ್ದು ಹೊರಗೆ ಬಂದಾಗ ಸುಶೀಲರವರು ಕೂಡ ತುಂಬಾ ನೊಂದುಕೊಂಡಿರುವುದು ಆಕಾಶ್ ನ ಗಮನಕ್ಕೆ ಬಾರದೆ ಇರಲಿಲ್ಲ. ನಿಮ್ಮ ಉಪಕಾರ ಮರೆಯುವುದಿಲ್ಲ ಎಂದು ಕೈ ಮುಗಿದಾಗ ಆಕಾಶ್ ನಿಗೆ ಹೃದಯ ಹಿಂಡಿದ ಅನುಭವ ಆಯಿತು . ನಿಮ್ಮ ಫೋನ್ ನಂಬರ್ ಕೊಡಿ ಎಂದಾಗ ರಿತಿಕಾ ನಿನ್ನ ಮೊಬೈಲ್ ನಂಬರ್ ಕೊಡು ಮಗ ಎಂದರು ಸುಶೀಲ!! ನಿಮ್ಮ ನಂಬರ್ ಕೊಡಿ ಅಂಟಿ ಎಂದು ಆಕಾಶ್ ಸುಶೀಲರವರಲ್ಲಿ ಕೇಳಿದಾಗ ನನ್ನ ನಂಬರ್ ಬೇಡ ಅದಕ್ಕೆ ಸರಿ ಪೋನ್ ಬರುವುದಿಲ್ಲ ಎಂದರು. ಇಬ್ಬರ ನಂಬರ್ ಕೊಡಿ ಎಂದು ಇಬ್ಬರ ಮೊಬೈಲ್ ನಂಬರ್ ಪಡೆದು ಅವರಿಗೆ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಸೀದಾ ಮನೆಗೆ ಬಂದನು ಆಕಾಶ್..
ದಿನಾ ಗಂಭೀರವಾಗಿ ಇರುತಿದ್ದ ಆಕಾಶ್ ಇವತ್ತು ತುಂಬಾ ಪ್ರಫುಲ್ಲವಾಗಿ ಇರುವುದನ್ನು ಕಂಡು ಆಕಾಶ್ ನ ಅಮ್ಮ ಸುಜಯಳಿಗೆ ಕುಶಿ ಆಯಿತು. ನಮಗೆ ಇರುವುದು ಒಬ್ಬ ಮಗ ಅವನು ಸಂತೋಷವಾಗಿ ಇರುವಂತೆ ಯಾವಾಗಲೂ ಇರಲಿ ಎಂದು ಆಶಿಸುತ್ತಾ ಕೆಲಸದವರಲ್ಲಿ ಆಕಾಶ್ ನಿಗೆ ಏನು ತಿನ್ನುತ್ತಾನೆ ಎಂದು ಕೇಳಿ ಎಂದು ಹೇಳಿದಳು. ಮನೆಯಲ್ಲಿ ಇರುವುದು ಮೂವರು ಮಾತ್ರ ಆದರೆ ಒಬ್ಬರಿಗೊಬ್ಬರು ಪರಸ್ಪರ ಮಾತುಕತೆ ಇಲ್ಲವೇ ಇಲ್ಲ ಎನ್ನುವಷ್ಟು ಎಂದರೆ ಸುಳ್ಳಲ್ಲ. ಎಲ್ಲಾ ಕೆಲಸಕ್ಕೂ ಕೆಲಸದವರು ಎನು ಬೇಕಾದರೂ ಕೆಲಸದವರೇ .ಈ ಮನೆಯಲ್ಲಿ ಕೆಲಸದರಿಗೆ ಇದ್ದಷ್ಟು ಸ್ವಾತಂತ್ರ್ಯ ಉಲ್ಲಾಸ ಮನೆಯವರಿಗೆ ಇಲ್ಲ . ಸುಶೀಲ ಅವರ ಮನೆಯಲ್ಲಿ ಇದ್ದ ಜೀವನ ಪ್ರೀತಿ ಸ್ನೇಹ ಇಲ್ಲಿ ಯಾಕಿಲ್ಲ? ಇಲ್ಲಿ ಎಲ್ಲವೂ ಯಾಂತ್ರಿಕ ನಾಟಕೀಯ ಜೀವನ ಎಂದು ಅಂದುಕೊಂಡು, ಕೆಲಸದವರಲ್ಲಿ ನನಗೆ ಹಸಿವು ಇಲ್ಲ ಎಂದು ತನ್ನ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡು ಸ್ನಾನ ಮಾಡಿ ಬಂದು ಹಾಸಿಗೆಯ ಮೇಲೆ ಬೋರಲಾಗಿ ಮಲಗಿದ ಆಕಾಶ್.
ಬೊರಲಾಗಿ ಮಲಗಿ ಬುದ್ಧಿ ತಿಳಿದ ಮೇಲೆ ಮೊದಲ ಬಾರಿಗೆ ಜೋರಾಗಿ ಅತ್ತು ಬಿಟ್ಟ….. ಹತ್ತು ನಿಮಿಷ ಎಡೆಬಿಡದೇ ಬಿಕ್ಕಿಬಿಕ್ಕಿ ಅತ್ತು ಸುಸ್ತು ಅದ.. ಆಕಾಶ್ ನಿಗೆ ಇವತ್ತೇ ಈ ರೀತಿಯ ಮನಸ್ಥಿತಿ ಬಂದಿದ್ದು ಅಣ್ಣ ಅಥವಾ ತಮ್ಮ ಅಕ್ಕ ಯಾರಾದರೂ ನನ್ನ ಜೊತೆ ಇರಬೇಕಿತ್ತು. ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಎಂಬ ತುಡಿತ ಬಹಳವಾಗಿ ಕಾಡತೊಡಗಿತು……
ಒಂದು ಮನೆ ಅಥವಾ ಕುಟುಂಬದಲ್ಲಿ ತುಂಬಾ ಮಾತು, ವಿಷಯ ವಿನಿಮಯ, ವಿಷಯದ ಬಗ್ಗೆ ಚರ್ಚೆ, ವಾದ ಇದ್ದಾಗ ಕೆಲವರಿಗೆ ಕಿರಿ ಕಿರಿ ಅನಿಸಬಹುದು.ಆದರೆ ಒಂದು ಮನೆ ಅಥವಾ ಕುಟುಂಬದಲ್ಲಿ ಯಾವುದೇ ಮಾತುಕತೆ ಇಲ್ಲದೇ ಇದ್ದಾಗ ಅಲ್ಲಿ ಸ್ಮಶಾನ ಮೌನ ಆವರಿಸಿದಾಗ ಅಲ್ಲಿ ಇದ್ದವರಿಗೆ ಉಸಿರು ಕಟ್ಟಿಸುವ ವಾತಾವರಣ ಆಗುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು.. ಬಡವರ ಮನೆ ಊಟ ಚೆಂದ ಶ್ರೀಮಂತರ ಮನೆ ನೋಟ ಚೆಂದ ಎಂದು ಅದಕ್ಕೆ ಬಲ್ಲವರು ಹೇಳುತ್ತಾರೆ….


ಆಕಾಶ್ ನಿಗೆ ರಾತ್ರಿ ಯಾವಾಗ ನಿದ್ದೆ ಬಂತೋ ಗೊತ್ತಾಗಲಿಲ್ಲ ಬೆಳಿಗ್ಗೆ ಎಚ್ಚರ ಆಗುವಾಗ ದಿನಾ ಏಳುವುದಕ್ಕಿಂತ ಹೆಚ್ಚು ಸಮಯ ಆಗಿತ್ತು.. ಬೇಗ ಬೇಗ ಸ್ನಾನ ಮುಗಿಸಿ ತಿಂಡಿ ತಿನ್ನಲು ಬಂದಾಗ ಅಪ್ಪ ಅಮ್ಮ ಹೀಗಾಗಲೇ ಯಾರೋ ಬಂದವರಲ್ಲಿ ಜೋರಾಗಿ ಮಾತನಾಡುವುದು ಕೇಳುತ್ತಿತ್ತು.. ಅವರ ಹತ್ತಿರ ಹೋಗದೆ ತಿಂಡಿ ತೆಗೆದುಕೊಂಡು ತಿಂದು ಆಸ್ಪತ್ರೆಗೆ ಹೊರಡಿ ಕಾರು ತೆಗೆದಾಗ ಅಮ್ಮ ಓಡೋಡಿ ಬಂದು ಆಕಾಶ್ ತಿಂಡಿ ಆಯಿತಾ ಎಂದು ಕೇಳಿದಾಗ ಹಂ ಅಮ್ಮ ತಿಂದೆ ಬರುತ್ತೇನೆ ಎಂದು ಹೇಳಿ ಆಸ್ಪತ್ರೆಗೆ ಕಾರು ಚಲಾಯಿಸಿದ ಆಕಾಶ್…
ಆಸ್ಪತ್ರೆಗೆ ಬಂದಾಗ ಹಿರಿಯ ವೈದ್ಯರಾದ ಗೋಪಾಲ್ ರಾಯರು ಬಂದಿದ್ದರು. ಇವನನ್ನು ಕಂಡವರೇ ಏನು ಆಕಾಶ್ ಗಡಿಬಿಡಿಯಲ್ಲಿ ಇದ್ದ ಹಾಗೆ ಇದ್ದೀರಿ ಎಂದಾಗ ಬಗ್ಗಿ ಯಾರೋ ಪೇಶೆಂಟ್ ನ ಹಿಸ್ಟರಿ ಓದುತಿದ್ದ ರೇಖಾ ಕೂಡ ಆಕಾಶ್ ನ ಮುಖವನ್ನೇ ದಿಟ್ಟಿಸಿ ನೋಡಿದಳು. ಹಿರಿಯ ವೈದ್ಯರಾದ ಗೋಪಾಲ್ ರಾಯರು ಆಗರ್ಭ ಶ್ರೀಮಂತರು ಆದರೆ ಅವರಿಗೆ ಮನಃಶಾಂತಿ ಎಂಬುದು ಇಲ್ಲ. ಇದ್ದ ಒಬ್ಬ ಮಗಳು ಗೌತಮಿಯನು ಓದಿಸಿ ಅವಳು ಮಕ್ಕಳ ಡಾಕ್ಟರ್ ಆಗಿ ಕೆಲಸ ಮಾಡುತಿದ್ದರು. ವೈದ್ಯ ಓದುವಾಗಲೇ ಅಜಿತ್ ನನು ಪ್ರೀತಿಸಿ ಅವನನ್ನೇ ಮದುವೆ ಆಗುತ್ತೇನೆ ಎಂದು ಹಠಕ್ಕೆ ಬಿದ್ದು ಗೋಪಾಲ್ ರಾಯರು ಒಲ್ಲದ ಮನಸ್ಸಿನಿಂದ ಅಜಿತ್ ನಿಗೆ ಮದುವೆ ಮಾಡಿಸಿದರು. ಮದುವೆ ಆದ ಮೇಲೆ ಗೋಪಾಲ್ ರಾಯರ ಮಗಳು ಗೌತಮಿಗೆ ತಿಳಿಯಿತು.. ತನ್ನಂತೆ ವೈದ್ಯನಾದರೂ ಅಜಿತ್ ದುಡ್ಡು ಹಣ ಎಂದರೆ ಬಾಯಿ ಬಾಯಿ ಬಿಡುವವನು ಎಂದು… ಅಪ್ಪನ ಬಳಿ ಒಂದೆರಡು ಬಾರಿ ಹೇಳಿದ್ದಳು…. ಅವನು ಪ್ರೀತಿಸಿದ್ದು ನನ್ನನ್ನು ಅಲ್ಲ ಬದಲಾಗಿ ನಾನು ಒಬ್ಬಳೇ ಮಗಳು ಹಾಗಾಗಿ ಅಪ್ಪ ಅಮ್ಮ ನ ಆಸ್ತಿ ದುಡ್ಡು ನನಗೆ ಸಿಗುತ್ತದೆ ಅದಕ್ಕಾಗಿ ಪ್ರೀತಿ ಎಂಬ ನಾಟಕ ಆಡಿ ಮದುವೆ ಆದ ಅಪ್ಪ…ನಾನು ಇಷ್ಟು ಓದಿಯೂ ಇವನ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಆಗದೆ ಮೋಸ ಹೋದೆ ಎಂದು .. ಆದರೆ ಗೋಪಾಲ್ ರಾಯರು ಬೇಡ ಅವನ ಜೊತೆ ಮದುವೆ ಎಂದಾಗ ಹಠ ಮಾಡಿದ ಗೌತಮಿ ಈಗ ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ ಗೋಪಾಲ್ ರಾಯರು..
ಮದುವೆ ಆಗಿ ಎರಡು ವರ್ಷ ಆಗುವ ಮುನ್ನವೇ ಒಂದು ರಾತ್ರಿ ಅಜಿತ್ ನ ಮನೆಯಿಂದ ಫೋನ್ ಕಾಲ್ ಬಂತು ಗೋಪಾಲ್ ರಾಯರಿಗೆ. ತಕ್ಷಣ ಬರಬೇಕು ಎಂದು…. ಗೋಪಾಲ್ ರಾಯರು ಮತ್ತು ಅವರ ಹೆಂಡತಿ ವೇದಾ ಗಡಿಬಿಡಿಯಲ್ಲಿ ಕಾರಲ್ಲಿ ಹೋದರು…….

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *