September 20, 2024

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಇರುವ ಆಸ್ಪತ್ರೆ ನವಚೇತನ. ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಡಾಕ್ಟರ್ ಅಜಿತ್ ನ ಪ್ರೀತಿಸಿ ಮದುವೆಯಾದ ಎರಡು ವರ್ಷ ಆಗುವ ಮುಂಚೆ ಸಾಯುತ್ತಾಳೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಆಕಾಶ್ ಸುಶೀಲ ಅವರ ಮನೆಗೆ ಬಂದಾಗ ಸುಶೀಲ ತನ್ನ ಬಗ್ಗೆ ಈ ಪುಸ್ತಕದಲ್ಲಿ ನಾನು ಬರೆದಿದ್ದೇನೆ ನೀವು ಓದಿ ಎಂದು ನೀಡುತ್ತಾರೆ……

ಅವಿನಾಭಾವ ಭಾಗ 12

ಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಕಲರವ ಕರುವಿನ ಅಂಬಾ ಎಂಬ ಧ್ವನಿ ಕೇಳಿ ಆಕಾಶ್ ನಿಗೆ ಎಚ್ಚರ ಆಯಿತು. ಅಬ್ಬಾ ಇಷ್ಟು ಹೊತ್ತು ಮಲಗಿದ್ದೆ ಒಮ್ಮೆ ನಿದ್ದೆ ಬಂದ ಮೇಲೆ ಈಗಲೇ ಎಚ್ಚರ ಆಗಿರುವುದು ಎಷ್ಟು ಒಳ್ಳೆಯ ನಿದ್ದೆ ಬಂದಿದೆ ಎಂದು ಕೊಂಡು ಎದ್ದ ಆಕಾಶ್.
ಸುಶೀಲ ಡಾಕ್ಟರೇ ನಿದ್ದೆ ಬಂತೇ ಎಂದು ಕೇಳಿದಾಗ ಹೌದು ಅಂಟಿ ಒಮ್ಮೆ ಮಲಗಿದವನಿಗೆ ಈಗಲೇ ಎಚ್ಚರ ಆಗಿರುವುದು ಒಳ್ಳೆಯ ನಿದ್ದೆ ಎಂದು ಹೇಳಿ ಬಚ್ಚಲು ಮನೆಗೆ ಹೋಗಿ ಮುಖ ತೊಳೆದುಕೊಂಡು ಸ್ನಾನ ಮಾಡಿ ತಲೆ ಒರೆಸಿಕೊಂಡು ಒಳಗೆ ಬಂದ. ಬಿಸಿ ಬಿಸಿ ದೋಸೆ ಚಟ್ನಿ ತಿಂದು ಕಾಫೀ ಕುಡಿದು ರಿತಿಕಾ ಮತ್ತು ಆಕಾಶ್ ಕೆಲಸಕ್ಕೆ ಜೊತೆಗೆ ಹೊರಟರು. ಸುಶೀಲ ಆಂಟಿಯ ಮುಖ ಸಣ್ಣದು ಆಗಿರುವುದು ನೋಡಿ ಆಕಾಶ್ ನಿಗೂ ಬೇಸರ ಆಯಿತು. ಅಂಟಿ ಬರುವ ವಾರ ಬರುತ್ತೇನೆ ಎಂದು ಹೇಳಿದ್ದು ಕೇಳಿ ಸರಿ ಡಾಕ್ಟರೇ ಎಂದು ಇಬ್ಬರನ್ನೂ ಕಳಿಸಿಕೊಟ್ಟರು.
ಆಕಾಶ್ ನಿಗೆ ಯಾವಾಗ ಡೈರಿ ತೆಗೆದು ಓದುತ್ತೇನೆ ಎಂಬ ಕುತೂಹಲದಿಂದ ರಿತಿಕಾಳ ಬಳಿ ಹೆಚ್ಚು ಮಾತನಾಡದೇ ಅದೇ ಗುಂಗಿನಲ್ಲಿ ನೇರವಾಗಿ ಆಸ್ಪತ್ರೆಗೆ ಬಂದು ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಸಂಜೆ ಆಗುತ್ತಿದ್ದಂತೆ ಆಕಾಶ್ ನಿಗೆ ಡೈರಿ ಮನೆಗೆ ಕೊಂಡೊಯ್ದು ಯಾರೂ ನೋಡದ ರೀತಿಯಲ್ಲಿ ಓದುವ ತವಕದಿಂದ ಲಗುಬಗೆಯಿಂದ ಮನೆಗೆ ಬಂದು ತನ್ನ ಕಪಾಟಿನಲ್ಲಿ ಬೇರೆ ಪುಸ್ತಕದ ಅಡಿ ಭಾಗದಲ್ಲಿ ಯಾರು ತೆಗೆಯಲಾರರು ಎಂದು ಖಾತರಿಪಡಿಸಿಕೊಂಡು ಬೀಗ ಜಡಿದು ಇಟ್ಟು ಬೇಗಬೇಗನೆ ಸ್ನಾನ ಮುಗಿಸಿ ಶಾಸ್ತ್ರಕ್ಕೆ ಎಂಬಂತೆ ಸ್ವಲ್ಪ ಊಟ ಮಾಡಿ ಕೆಲಸದಾಳು ಬಳಿ ನನಗೆ ಸ್ವಲ್ಪ ನನ್ನ ಕೆಲಸಕ್ಕೆ ಸಂಬಂಧಿಸಿದಂತೆ ಓದುವುದಿದೆ ಯಾರು ಬಂದು ಕರೆಯಬೇಡಿ ಎಂದು ಅಮ್ಮನಲ್ಲಿ ಹೇಳಿ ಎಂದು ಅವರಲ್ಲಿ ಹೇಳಿ ಕೋಣೆಗೆ ಬಂದು ಬಾಗಿಲು ಭದ್ರಪಡಿಸಿ ಓದಲು ಕುಳಿತ ಆಕಾಶ್.
ಯಾಕೋ ಏನೋ ಆಕಾಶ್ ನಿಗೆ ಆ ಪುಸ್ತಕ ತೆಗೆದು ಓದಲು ಪುಟ ತಿರುಗಿಸಿದಾಗ ಇನ್ನೊಬ್ಬರು ಬರೆದ ತಮ್ಮ ಜೀವನ ಸಾರವನ್ನು ನಾನು ಓದಬಹುದೇ ಎಂಬ ಜಿಜ್ಞಾಸೆ ಹುಟ್ಟಿ ಬರೆದವರೆ ಇದನ್ನು ಓದು ಎಂದು ನೀಡಿದ ಮೇಲೆ ಈ ಯೋಚನೆ ನನಗೇಕೆ ಎಂದು ನಗು ಬಂತು ಆಕಾಶ್ ನಿಗೆ. ಕೆಲವು ವಿಚಾರಗಳು ಹೇಳಲು ಬರೆಯಲು ಬರುವುದಿಲ್ಲ ಅದು ಅನುಭವಕ್ಕೆ ಮಾತ್ರ ಬರುತ್ತದೆ ಎಂದು ಕೊಂಡ ಆಕಾಶ್.
ಅಕ್ಷರ ಅಂಕುಡೊಂಕು ಇದ್ದರೂ ಓದಬಹುದು ಎನಿಸುವ ಬರಹ ಎಂದು ಮನಸ್ಸಿನಲ್ಲೇ ಅಂದುಕೊಂಡ ಆಕಾಶ್.


ಮೊದಲ ಪುಟದಲ್ಲಿ “ ನೀನು ಏನು ಮಾಡಿದರೂ ನಿನ್ನ ಮನಸ್ಸು, ಹೃದಯ ಮತ್ತು ಆತ್ಮಪೂರ್ಣವಾಗಿ ಅರ್ಪಿಸಿ ಮಾಡಬೇಕು.” ಸ್ವಾಮಿ ವಿವೇಕಾನಂದರ ಈ ಸಂದೇಶ ಓದಿ ವಿವೇಕಾನಂದರ ವಿಚಾರಗಳನ್ನು ಹೆಚ್ಚು ಓದಿ ಕೊಂಡಿದ್ದಾರೆ ಎಂದು ಆಕಾಶ್ ನಿಗೆ ಹೆಮ್ಮೆ ಅನಿಸಿತು.
ನನ್ನನ್ನು ಎಲ್ಲರೂ ಮುದ್ದಿನಿಂದ ಸುಶಿ ಎಂದು ಕರೆಯುತ್ತಿದ್ದರು. ಅಜ್ಜ ಅಪ್ಪ ಅಮ್ಮ ಅಣ್ಣ ಎಲ್ಲರಿಗೂ ನಾನು ಒಬ್ಬಳೇ ಮುದ್ದಿನ ಸುಶಿ ಆಗಿದ್ದೆ. ತಮ್ಮ ಮಾತ್ರ ಶೀಲಾ ಅಕ್ಕ ಎನ್ನುತ್ತಿದ್ದ. ನನ್ನ ಪೂರ್ತಿ ಹೆಸರು ಸುಶೀಲ ಆಗಿತ್ತು.
ನಾನು ನನ್ನ ಬಾಲ್ಯ ಕಳೆದದ್ದು ಪುತ್ತೂರು ಪೇಟೆಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಇರುವ ಕಬಕ ನನ್ನ ಅಪ್ಪನ ಮನೆ ಇದು. ನನ್ನ ಅಮ್ಮ ಉಪ್ಪಿನಂಗಡಿ ಕರಾಯ ಎಂಬ ಸಣ್ಣ ಊರಿನವರು ಅವರನ್ನು ಮದುವೆ ಮಾಡಿ ಕೊಟ್ಟದು ಪುತ್ತೂರಿಗೆ. ನನ್ನ ಅಪ್ಪ ಅಮ್ಮನಿಗೆ ನಾನು ಎರಡನೇ ಮಗಳು ದೊಡ್ಡ ಅಣ್ಣ ಒಬ್ಬ ತಮ್ಮ ಒಟ್ಟು ನಾವು ಮೂರು ಜನ ಮಕ್ಕಳು. ಒಬ್ಬಳೇ ಮಗಳು ಎಂದು ತುಸು ಹೆಚ್ಚೇ ಅಕ್ಕರೆ ಮಮತೆಯಿಂದ ಬೆಳೆಸಿ ನಾನು ನಮ್ಮ ಮನೆಯಲ್ಲಿ ಸಣ್ಣ ಮಟ್ಟದ ಊರಿನ ರಾಣಿಯಂತೆ ಇದ್ದೆ ಎಂದರೆ ತಪ್ಪಾಗಲಾರದು. ಆ ಕಾಲದಲ್ಲೂ ಉಡಲು ತಿನ್ನಲು ಯಾವುದೇ ಕಡಿಮೆ ಇರಲಿಲ್ಲ. ಅಜ್ಜನಿಗೆ ಬೇಕಾದಷ್ಟು ಜಾಗ ತೋಟ ಗದ್ದೆ ಇದ್ದುದರಿಂದ ನನ್ನ ಅಪ್ಪ ಕೂಡ ಅವರ ಜೊತೆ ಆಳಾಗಿ ದುಡಿಯುವ ಮೂಲಕ ಊರಲ್ಲಿ ನಾವು ಶ್ರೀಮಂತರು ಎಂಬ ಹೆಸರು ಸಹಜವಾಗಿ ಬಂದಿತ್ತು.
ಶಾಲೆ ಓದಿಸಬೇಕು ಎಂದು ಅಪ್ಪನಿಗೆ ತುಂಬಾ ಆಸಕ್ತಿ ಇತ್ತು. ಅಣ್ಣ ಚೆನ್ನಾಗಿ ಓದಿದ ಆದರೆ ನನಗೇಕೋ ಹೆಚ್ಚು ಓದಲು ಆಸಕ್ತಿ ಇರಲಿಲ್ಲ. ಮನೆಯಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದವಳಿಗೆ ಅಪ್ಪ ಅಮ್ಮನ ಅಜ್ಜನ ಕೊಂಡಾಟದ ನನಗೆ ಶಾಲೆ ಓದು ಬರಹ ಎಂಬುದು ತುಂಬಾ ಕಷ್ಟ ಅನಿಸುತ್ತಿತ್ತು.ಹಾಗಾಗಿ ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಎಸ್ ಎಸ್ ಎಲ್ ಸಿ ತನಕ ಬಾರಿ ಕಷ್ಟದಲ್ಲಿ ಓದಿ ನಂತರ ಕಥೆ ಕಾದಂಬರಿ ಗ್ರಂಥಾಲಯ ಎಂದು ಇದರಲ್ಲೇ ಕಾಲ ಕಳೆದೆ.
10ನೇ ತರಗತಿ ಮುಗಿಸಿ ಎರಡು ವರ್ಷ ಹೇಗೆ ಕಳೆಯಿತು ಎನ್ನುವುದೇ ತಿಳಿಯಲಿಲ್ಲ. ಅಣ್ಣ ಡಿಗ್ರಿ ಓದುತ್ತಿದ್ದ. ತಮ್ಮ ಹೈಸ್ಕೂಲ್ ಓದುತ್ತಿದ್ದ.
ಎಸ್ ಎಸ್ ಎಲ್ ಸಿ ಆಗಿ ಮೂರು ವರ್ಷ ಆಗುವ ಮುಂಚೆಯೇ ಅಜ್ಜ ಸುಶಿಗೆ ಒಳ್ಳೆ ಕಡೆ ಗಂಡು ಹುಡುಕಿ ಮದುವೆ ಮಾಡಬೇಕು ಎಂದು ದಿನ ರಾಗ ತೆಗೆಯುತ್ತಿದ್ದರು. ಅಪ್ಪ ಅಮ್ಮ ಹೆಚ್ಚು ಪ್ರಾಯ ಆಗಿಲ್ಲ ಕೊಡೋಣ ಯಾಕೆ ಅವಸರ ಎಂದು ಹೇಳುತ್ತಿದ್ದರು.. ನನಗೆ ಮಾತ್ರ ಒಮ್ಮೆ ಮದುವೆ ಆಗಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತಾ ಇದ್ದೆ. ಕಥೆ ಕಾದಂಬರಿ ಓದಿ ನನ್ನ ಮದುವೆ ಆಗುವ ಹುಡುಗನ ಬಗ್ಗೆ ಕನಸು ಕಾಣುತ್ತಿದ್ದೆ. ಮದುವೆ ಎಂಬುದು ಒಂದು ರೀತಿಯ ಬಂಧನ ಅಲ್ಲಿ ಮದುವೆ ಆದ ಮೇಲೆ ಇರುವ ಕುಟುಂಬದ ಒತ್ತಡ ಸಾಮಾಜಿಕ ಕಟ್ಟುಪಾಡುಗಳ ಅರಿವು ತಿಳುವಳಿಕೆ ಇರಲಿಲ್ಲ. ಸಂತೋಷ ಸಂಭ್ರಮ ಮಾತ್ರ ಬೇರೆ ಮದುವೆ ಮನೆಯಲ್ಲಿ ನೋಡಿದ ನನಗೆ ಮದುವೆ ಬಗ್ಗೆ ತುಂಬಾ ಒಲವು ಇತ್ತು. ಅಪ್ಪನಿಗೆ ಓದಿದ ಹುಡುಗನಿಗೆ ಕೊಡಬೇಕು ಎಂಬ ಇಚ್ಛೆ ಇದ್ದರೆ ಅಮ್ಮ ಮತ್ತು ಅಜ್ಜನಿಗೆ ಹುಡುಗ ಹೆಚ್ಚು ಓದದಿದ್ದರೂ ಕೃಷಿ ಇರುವ ಮನೆಗೆ ಕೊಟ್ಟರೆ ಏನಾದರೂ ಉತ್ತು ಬಿತ್ತಿ ಉಣ್ಣುವರು. ಯಾವುದೇ ಜಾಗ ತೋಟ ಇಲ್ಲದಿದ್ದರೆ ಮುಂದೆ ಕಷ್ಟ ಆದೀತು ಎಂದು ಮನೆಯಲ್ಲಿ ಈ ಬಗ್ಗೆ ಅವರೊಳಗೆ ಚರ್ಚೆ ನಡೆಯುತ್ತಿತ್ತು. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನನ್ನ ಪಾಡಿಗೆ ನಾನು ಬೇಕಾದ ಹಾಗೆ ಇದ್ದೆ.
ಒಂದು ಜನವರಿ ತಿಂಗಳ ಕೊನೆಯ ವಾರದಲ್ಲಿ ನಮ್ಮ ದೂರದ ಸಂಬಂಧಿಗಳ ಪೈಕಿ ಒಬ್ಬರ ಮೂಲಕ ಮಂಗಳೂರಿನ ಅಡ್ಯಾರ್ ಎಂಬಲ್ಲಿನ ಹುಡುಗ ಮತ್ತು ಅವರ ಅಪ್ಪ ಮಾವ ಹೆಣ್ಣು ನೋಡಲು ಎಂದು ನಮ್ಮ ಮನೆಗೆ ಬರುತ್ತಾರೆ ಎಂದು ಮನೆಯಲ್ಲಿ ಅಪ್ಪ ಅಮ್ಮನಿಂದ ತಿಳಿಯಿತು.

(ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *