January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ…..

            ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಮ್ಮ ಜೀವನ ಸಾರವನ್ನು ಬರೆದ ಪುಸ್ತಕ ಆಕಾಶ್ ಗೆ ನೀಡುತ್ತಾಳೆ , ಸುಶೀಲ ಮೂಲತಃ ಪುತ್ತೂರಿನ ಕಬಕದವರು ಒಟ್ಟು ಮೂರು ಮಕ್ಕಳು ಸುಶೀಲ ಮದುವೆಯ ವಯಸ್ಸಿಗೆ ಬಂದಾಗ ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ….

ಅವಿನಾಭಾವ ಭಾಗ 13

ಮನೆಯಲ್ಲಿ ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದು ಎಲ್ಲರೂ ಕಾತರದಿಂದ ಆತುರದಿಂದ ಆ ದಿನ ಕಾಯುತ್ತಿದ್ದರು. ನನಗೂ ಮನಸ್ಸಿನಲ್ಲೇ ತಳಮಳಗಳು ನಡೆಯುತಿತ್ತು. ಹುಡುಗ ಹೇಗಿರಬಹುದು? ನನಗೋ ಉದ್ದ ತೆಳ್ಳಗೆ ಎಣ್ಣೆ ಕಪ್ಪು ಲಕ್ಷಣವಾಗಿರುವ ಹುಡುಗ ಆಗಿದ್ದರೆ ಚೆನ್ನಾಗಿತ್ತು ಎಂದು ಮನಸ್ಸಿನಲ್ಲೇ ಆಶಿಸುತ್ತಿದ್ದೆ. ನಾನು ಪರಮ ಸುಂದರಿ ಅಲ್ಲದಿದ್ದರೂ ಒಂದು ಕ್ಷಣ ಹುಡುಗರು ಮಾತ್ರ ಅಲ್ಲ ಹೆಣ್ಣು ಮಕ್ಕಳು ನೋಡುವಂತಹ ರೂಪ ನನ್ನಲ್ಲಿ ಇತ್ತು. ಗೋಧಿ ಮೈ ಬಣ್ಣ ಅಪ್ಪ ಅಮ್ಮನಂತೆ ಎತ್ತರ ಇದ್ದೆ ಹೆಚ್ಚು ದಪ್ಪವು ಅಲ್ಲದ ಹೆಚ್ಚು ತೆಳ್ಳಗೆಯು ಇಲ್ಲದೆ ದುಂಡಾದ ಮುಖ ನನ್ನ ಗೆಳತಿಯರು ನೀನು ಸುಂದರಿ ನಿನ್ನ ನೋಡಲು ಬಂದ ಗಂಡು ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತಾನೆ ಎಂದು ಕೆಲವೊಮ್ಮೆ ಚೇಷ್ಟೆ ಮಾಡಿದ್ದೂ ಉಂಟು, ಇದೆಲ್ಲ ಈಗ ಸುಶಿಗೆ ನೆನಪು ಆಯಿತು. ಏನೋ ಕಾತುರ ತಳಮಳ ಎದೆ ಡವ ಡವ ಅನಿಸುತಿತ್ತು. ಒಮ್ಮೆಲೇ ಅಪ್ಪ ಗಂಡಿನ ಕಡೆಯವರು ಬಂದರು ಎಂದಾಗ ಮನೆಯ ಒಳಗೆ ಹೋಗಿ ಅಲ್ಲಿಂದ ಹೊರಗೆ ಇಣುಕಿ ನೋಡಿದೆ!! ಅಮ್ಮ ಕೂಡ ಅಷ್ಟೇ ಕುತೂಹಲದಿಂದ ಮನೆಯ ಒಳಗಿನಿಂದ ಇಣುಕುತ್ತಿದ್ದರು.‌ ನನ್ನ ಕಡೆ ತಿರುಗಿ ಮೆಲ್ಲಗೆ ಪಿಸು ಮಾತಿನಿಂದ ಒಮ್ಮೆಲೇ ನಗಬೇಡ ಚೆಲ್ಲು ಚೆಲ್ಲಾಗಿ ಅವರ ಎದುರು ವರ್ತಿಸಬೇಡ ಎಂದರು. ಇದನ್ನು ಬಹುಶಃ ಹುಡುಗನ ಕಡೆಯವರು ಬರುತ್ತಾರೆ ಎಂದು ಗೊತ್ತಾದ ಮೇಲೆ ದಿನ ಎರಡು ಮೂರು ಬಾರಿ ಹೇಳಿರಬಹುದು. ಕೇಳಿ ಕೇಳಿ ನನಗೂ ರೋಸಿ ಹೋಗಿತ್ತು. ಆದರೆ ಏನು ಪ್ರತ್ಯುತ್ತರ ನೀಡದೆ ಸರಿ ಎಂದು ಗೋಣು ಆಡಿಸಿದೆ. ಒಂದು ಜೀಪಿನಲ್ಲಿ ಒಟ್ಟು ಐದು ಜನ ಮನೆಗೆ ಬಂದಿದ್ದರು. ಬಂದವರಿಗೆ ಅಪ್ಪ ಅಜ್ಜ ಬನ್ನಿ ಬನ್ನಿ ಕೈ ಕಾಲು ತೊಳೆದು ಕೊಳ್ಳಿ ಎಂದು ತಂಬಿಗೆಯಲ್ಲಿ ತುಂಬಿಸಿ ಇಟ್ಟ ನೀರು ಕೊಟ್ಟರು.

ಬಂದವರಿಗೆ ನಾವು ಒಳಗಿನಿಂದ ಇಣುಕಿ ನೋಡುವುದು ಅವರಿಗೆ ತಿಳಿಯುವುದಿಲ್ಲ ಆದರೆ ನಮಗೆ ಅವರು ಕಾಣುತ್ತಾರೆ. ಯಾಕೋ ಕದ್ದು ಮುಚ್ಚಿ ನೋಡುವಾಗ ತುಂಬಾ ಆಸಕ್ತಿ ಇರುತ್ತದೆ ಎಂದುಕೊಂಡೆ. ಬಹುಶಃ ಮೊದಲೇ ಗೊತ್ತಿದ್ದ ಹುಡುಗ ಆಗಿದ್ದರೆ ಇಷ್ಟು ಕುತೂಹಲ ಆಸಕ್ತಿ ಇರಲಾರದು ಎಂದು ಅನ್ನಿಸಿತು. ಮದುವೆ ಆಗುವಾಗ ಈ ರೀತಿ ಇರುವುದು ಒಂದು ರೀತಿಯಲ್ಲಿ ಕುಶಿ ಆಗುತ್ತದೆ ಇದನ್ನು ಅಮ್ಮನಲ್ಲಿ ಹೇಳಬೇಕು ಅಂದುಕೊಂಡೆ. ಅಮ್ಮ ಅದೇ ಹುಡುಗ ಎಂದು ನನಗೆ ಪಿಸು ಮಾತಿನಿಂದ ಹೇಳಿದರು.ನಾನು ಹುಡುಗ ಯಾರು ಎಂದು ನೋಡಿದೆ. ಮುಖದಲ್ಲಿ ಆ ಹುಡುಗನಿಗೂ ಒಂದು ರೀತಿಯ ಅಳುಕು ಭಯ ಇರುವುದು ನೋಡಿದ ಕೂಡಲೇ ತಿಳಿಯುತ್ತಿತ್ತು!!! ಬಹುಶಃ ಹುಡುಗನಿಗೂ ಹುಡುಗಿ ಹೇಗಿರುವಳು ಎಂಬ ತಳಮಳ ಕಾತರ ಇರಬಹುದು ಅಲ್ಲವೇ ಎಂದು ಮನಸ್ಸಿನಲ್ಲೇ ಅಂದುಕೊಂಡು ಆ ಹುಡುಗನನ್ನು ನೋಡಿದೆ.

ಹುಡುಗ ನೋಡಲು ಲಕ್ಷಣವಾಗಿ ಇದ್ದ ಆ ಕ್ಷಣ ಅವನ ಮಾವನ ಅಥವಾ ಅಪ್ಪನ ಗೊತ್ತಿಲ್ಲ ಏನೋ ಹೇಳಿದ್ದಕ್ಕೆ ನಗು ಬೀರಿದ ಆ ನಗು ಬೀರಿದ ಮುಖದ ಸೌಂದರ್ಯ ನೋಡಲು ಅಂದವಾಗಿ ಮೋಹಕವಾಗಿ ನನ್ನ ಮನಸ್ಸಿಗೆ ಮುದ್ರೆ ಒತ್ತಿದಂತೆ ಆಯಿತು. ಓರಣವಾಗಿ ಇರುವ ಚಿಗುರು ಮೀಸೆ, ನಗುವಾಗ ಪೋಣಿಸಿದಂತೆ ಇರುವ ಬಿಳಿಯ ಹಲ್ಲು, ನೀಳವಾದ ಶರೀರ ಎಲ್ಲೂ ಬೇಡದ ಕೊಬ್ಬು ಮೈಯಲ್ಲಿ ಇರಲಿಲ್ಲ!! ಒಟ್ಟು ನನ್ನ ಕನಸಿನ ರಾಜಕುಮಾರನಂತೆ ಇದ್ದ ಎಂಬುದು ಸ್ಪಷ್ಟ. ಅಪ್ಪ ಅಮ್ಮ ಒಪ್ಪುವ ಮುಂಚೆ ಇವನ್ನೇ ನನ್ನ ಗಂಡ ಆದರೆ ಸಾಕು ಎಂದು ಆ ಕ್ಷಣವೇ ಎನಿಸಿತು. ಅಪ್ಪ ಒಳಗೆ ಬಂದು ಸುಶೀ ಕೈಯಲ್ಲಿ ಶರಬತ್ತು ನೀಡುವಂತೆ ಅಮ್ಮನಲ್ಲಿ ಹೇಳಿದರು. ಹುಡುಗನ ಕಡೆಯವರು ಬರುವ ಮುಂಚೆಯೇ ತಿಳಿ ಗುಲಾಬಿ ಬಣ್ಣದ ಸೀರೆ ಉಡಲು ಅಮ್ಮ ಸಹಾಯ ಮಾಡಿದ್ದರು. ಸಾಧಾರಣವಾಗಿ ಇದ್ದ ನನ್ನ ಜಡೆ ಹೆಣೆದು ನನ್ನ ಗೆಳತಿ ಜೆಸಿಂತಾ ನೀಡಿದ ಮಲ್ಲಿಗೆ ಹೂವು ಮುಡಿದಿದ್ದರು.

ಅಮ್ಮ ನೀಡಿದ ಶರಬತ್ತು ಹಿಡಿದು ಒಳಕೊಣೆಯಿಂದ ಹೊರಗೆ ಬಂದೆ. ಮೊದಲು ಯಾವುದೇ ಭಯ ನನಗೆ ಇರಲಿಲ್ಲ. ಆದರೆ ಬಂದವರನ್ನು ನೋಡಿದ ಕೂಡಲೇ ಕೈ ಕಾಲು ನಡುಕ ಹುಟ್ಟಿತ್ತು. ಅಪ್ಪನ ಪ್ರೀತಿಯ ಮಗಳು ನಾನು ಹಾಗಾಗಿ ನನ್ನ ನಡುಕ ಅವರಿಗೆ ತಿಳಿದು ನನ್ನ ಕೈಯಿಂದ ಬಟ್ಟಲು ತೆಗೆದುಕೊಂಡು ಹೆದರಬೇಡ ಒಂದೊಂದೇ ಲೋಟ ತೆಗೆದುಕೊಡು ಎಂದು ಹೇಳಿ ಧೈರ್ಯ ತುಂಬಿದರು. ಈ ಕೆಲಸ ಮಾತ್ರ ನನಗೆ ಕಿರಿ ಕಿರಿ ಆಯಿತು ಬಂದವರು ಎಲ್ಲರೂ ನನ್ನನ್ನೇ ತದೇಕಚಿತ್ತದಿಂದ ನೋಡುತ್ತಾ ಇರುವುದು ನಾನು ಪ್ರದರ್ಶನದ ಬೊಂಬೆಯಂತೆ ಅವರ ಮುಂದೆ ಇರುವುದು ಸರಿ ಕಾಣಲಿಲ್ಲ. ಬೇರೆ ದಿನಗಳಲ್ಲಿ ಈ ಬಗ್ಗೆ ನಾನು ವಾದವನ್ನು ಮಾಡುತಿದ್ದೆ.ಯಾವುದೇ ಚರ್ಚೆ ನಡೆದರೂ ಅಪ್ಪ ನನ್ನ ಸಹಾಯಕ್ಕೆ ಬರುತ್ತಿದ್ದರು. ಆದರೆ ಇಂದು ವಾದ ಮಾಡುವ ಸಮಯ ಅಲ್ಲ ಎಂದು ನನಗೆ ತಿಳಿದಿತ್ತು. ಎಲ್ಲರ ಕೈಯಲ್ಲೂ ಲೋಟ ನೀಡಿದ ಮೇಲೆ ಹುಡುಗನ ಮಾವ ನಿನ್ನ ಹೆಸರು ಎನು ಮಗ ಎಂದು ಕೇಳಿದರು. ಮುಖ ಮೇಲೆತ್ತಿ ನೋಡಿದಾಗ ಹುಡುಗ ನನ್ನನ್ನೆ ದಿಟ್ಟಿಸಿ ನೋಡುತ್ತಾ ನಿಧಾನಕ್ಕೆ ಮುಖದಲ್ಲಿ ಮಂದಹಾಸ ಬೀರಿದ ನನಗೂ ಮುಖದಲ್ಲಿ ನಗು ಮೂಡಿತ್ತು. ಅದೇ ಮುಖ ಭಾವದಲ್ಲಿ ಸುಶೀಲ ಅಂದೆ. ಹೆಸರು ಕೇಳಿದ್ದು ಹುಡುಗನ ಮಾವ ನಾನು ಹೇಳಿದ್ದು ಹುಡುಗನ ಮುಖ ನೋಡಿ!! ನನ್ನ ಅಜ್ಜ ಹುಡುಗನ ಹೆಸರು ಕೇಳಿದರು ಆಗ ಸ್ಪಷ್ಟವಾಗಿ ಆತ್ಮ ವಿಶ್ವಾಸದಿಂದ ಅಶೋಕ್ ಎಂದು ತಮ್ಮ ಹೆಸರು ಹೇಳಿದರು. ನನಗೂ ಹುಡುಗನ ಹೆಸರು ಅಶೋಕ್ ಎಂದು ತಿಳಿಯಿತು. ಮರುಕ್ಷಣ ಹುಡುಗಿಯ ಜಾತಕ ಇದೆಯೇ ಎಂಬ ಪ್ರಶ್ನೆ ಹುಡುಗನ ಮಾವನಿಂದ ತೂರಿ ಬಂತು …..

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

 

Leave a Reply

Your email address will not be published. Required fields are marked *