ಇಲ್ಲಿಯವರೆಗೆ…..
ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಮ್ಮ ಜೀವನ ಸಾರವನ್ನು ಬರೆದ ಪುಸ್ತಕ ಆಕಾಶ್ ಗೆ ನೀಡುತ್ತಾಳೆ , ಸುಶೀಲ ಮೂಲತಃ ಪುತ್ತೂರಿನ ಕಬಕದವರು ಒಟ್ಟು ಮೂರು ಮಕ್ಕಳು ಸುಶೀಲ ಮದುವೆಯ ವಯಸ್ಸಿಗೆ ಬಂದಾಗ ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ….
ಅವಿನಾಭಾವ ಭಾಗ 14
ಜಾತಕ ಎಂಬ ಹೆಸರು ಹೇಳಿದ ಕ್ಷಣವೇ ನನ್ನ ಜಂಘಾಬಲವೇ ಹುದುಗಿ ಹೋಯಿತು. ನನ್ನ ಅಜ್ಜಿ ಅಂದರೆ ಅಮ್ಮನ ಅಮ್ಮ ಒಮ್ಮೆ ನಾನು ಅಜ್ಜಿ ಮನೆಗೆ ಹೋದಾಗ ಹುಡುಗಿ ಮೈ ಕೈ ತುಂಬಿಕೊಂಡು ಲಕ್ಷಣವಾಗಿದ್ದಾಳೆ. ಆದರೆ ಜಾತಕದಲ್ಲಿ ಮೂಲ ನಕ್ಷತ್ರ ಇದೆಯಲ್ಲ. ಇದು ಕೆಲವರಿಗೆ ಆಗುವುದಿಲ್ಲ.ಮೂಲ ನಕ್ಷತ್ರದ ಹುಡುಗಿಯನ್ನು ಮದುವೆ ಆದರೆ ಒಂದಾ ಹುಡುಗನ ಅಪ್ಪ ಇಲ್ಲ ಹುಡುಗನ ಮಾವನಿಗೆ ಮರಣ ಅಂತೆ ಎಂದು ಹೇಳುತ್ತಾರೆ. ಹಾಗಾಗಿ ಮೂಲ ನಕ್ಷತ್ರದ ಹುಡುಗಿಯನ್ನು ಮದುವೆ ಆಗಲು ಯಾರು ಮುಂದೆ ಬರುವುದಿಲ್ಲ ಇವಳ ಹಣೆ ಬರಹ ಹೇಗೆ ಇದೆಯೋ ಎಂದು ಅವರು ಹೇಳುವುದನ್ನು ಕೇಳಿದ್ದೆ!
ಈಗ ಇವರು ನನ್ನ ಜಾತಕ ಕೇಳುತ್ತಿದ್ದಾರೆ ನಕ್ಷತ್ರ ನೋಡಿ ಹುಡುಗಿ ಬೇಡ ಎಂದು ಹೇಳಿದರೆ ಎಂದು ನಿಂತ ನೆಲವೇ ಕುಸಿದಂತಾಯಿತ್ತು , ಕಾರಣ ಮೊದಲ ನೋಟದಲ್ಲೇ ಹುಡುಗ ಇಷ್ಟವಾಗಿದ್ದ!
ಅಪ್ಪ ಯಾವ ಅಳುಕು ಅಂಜಿಕೆಯು ಇಲ್ಲದೆ ಅಮ್ಮ ತಂದು ಕೊಟ್ಟ ಜಾತಕವನ್ನು ಹುಡುಗನ ಮಾವನಲ್ಲಿ ನೀಡಿದರು!
ಅವರು ಜಾತಕವನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದಿ ಹುಡುಗನನ್ನು ಅವರ ಅಪ್ಪನನ್ನು ಹೊರಗೆ ಅಂಗಳಕ್ಕೆ ಕರೆದು ಕೊಂಡು ಹೋಗಿ ಪಿಸು ಪಿಸು ಮಾತಾಡಿದರು. ಹುಡುಗ ಸುಮ್ಮನೆ ಅವರ ಹಿಂದೆ ನಿಂತೆ ಇದ್ದ., ಸುಮಾರು 7-8 ನಿಮಿಷ ಗಹನವಾದ ಚರ್ಚೆ ನಡೆಸಿ ಪುನಃ ಒಳಗೆ ಬಂದು ನನ್ನ ಅಪ್ಪ ಅಜ್ಜ ನಲ್ಲಿ ಹುಡುಗಿದ್ದು ಮೂಲ ನಕ್ಷತ್ರ ಇದೆಯಲ್ಲ ಎಂಬ ಪ್ರಶ್ನೆ ಮುಂದಿಟ್ಟರು!!! ಅಜ್ಜ ಅಪ್ಪ ಸುಮ್ಮನೆ ಏನೂ ಮಾತಾಡದೆ ಇದ್ದಾಗ ಹುಡುಗನ ಅಪ್ಪನೇ ಮುಂದುವರಿದು ನಮ್ಮ ಅಶೋಕನಿಗೆ ಹುಡುಗಿ ಇಷ್ಟವಾಗಿದ್ದಳೆ ಈ ನಕ್ಷತ್ರದಲ್ಲಿನ ಸಮಸ್ಯೆಗೆ ಏನಾದರೂ ಪರಿಹಾರ ಇದೆಯೇ ಎಂಬುದನ್ನು ತಿಳಿದವರಲ್ಲಿ ಕೇಳೋಣ ಯಾವುದಕ್ಕೂ ಎರಡು ವಾರ ಕಳೆದು ನಿಮಗೆ ಈ ಬಗ್ಗೆ ಸುದ್ದಿ ಮುಟ್ಟಿಸುತ್ತೇವೆ ಎಂದು ಹೇಳಿ ನಾವು ಹೊರಡುತ್ತೇವೆ ಎಂದು ಹೊರಗೆ ಬಂದರು. ನನ್ನ ಅಪ್ಪ ಅಜ್ಜ ಅಮ್ಮ ಸರಿ ಎಂದಷ್ಟೆ ತಲೆ ಆಡಿಸಿದರು. ಯಾರು ಹೆಚ್ಚು ಮಾತನಾಡಲಿಲ್ಲ. ಹುಡುಗ ಹಿಂದೆ ತಿರುಗಿ ನನ್ನ ಮುಖವನ್ನು ನೋಡಿದಾಗ ಅವನ ಕಣ್ಣು “ಜೋಪಾನ ನಾನು ಬಂದೇ ಬರುತ್ತೇನೆ” ಎಂದು ಹೇಳಿದ ಹಾಗೆ ಅನಿಸಿತು.
ಎರಡು ವಾರ ಹೇಗೆ ಕಳೆಯಿತು ಎಂಬುದೇ ತಿಳಿಯಲಿಲ್ಲ ಕುಂತಲ್ಲಿ ನಿಂತಲ್ಲಿ ಅವನದೇ ನೆನಪು, ಅವನ ದ್ವನಿ, ಕಣ್ಣೋಟ, ಮಂದಸ್ಮಿತ ಎಲ್ಲವೂ ಮನಸ್ಸಿಗೆ ಮುದ ನೀಡುತ್ತಿತ್ತು. ಅಜ್ಜ ಅಪ್ಪ ಮತ್ತು ಅಮ್ಮ ಹುಡುಗನ ಹಾಗೂ ಅವನ ಅಪ್ಪನ ಗುಣಗಾನ ಮಾಡುತಿದ್ದರು. ಕಾರಣ ಹುಡುಗನ ಅಪ್ಪ ನಮ್ಮ ಅಶೋಕನಿಗೆ ಹುಡುಗಿ ಇಷ್ಟವಾಗಿದ್ದಳೆ ನಕ್ಷತ್ರದ ಸಮಸ್ಯೆ ಬಗ್ಗೆ ಏನಾದರೂ ಪರಿಹಾರ ನೋಡೋಣ ಎಂದು ಹೇಳಿರುವುದು ನಮ್ಮ ಮನೆಯಲ್ಲಿ ಎಲ್ಲರಿಗೂ ಅವರ ಕುಟುಂಬದ ಬಗ್ಗೆ ಸದಾಭಿಪ್ರಾಯ ಮೂಡಿತ್ತು. ಈಗೀನ ಕಾಲದಲ್ಲಿ ಇಷ್ಟು ಮುಕ್ತವಾಗಿ ಇರುವವರು ಇರುವುದು ತುಂಬಾ ವಿರಳ ಸುಶಿ ಇಂತವರ ಮನೆಗೆ ಹೋಗುವುದು ಅವಳ ಪುಣ್ಯ ಖಂಡಿತಾ ಈ ಮದುವೆ ನಡೆಯುತ್ತದೆ ಎಂದು ದಿನಾ ಸಂಜೆ ಮನೆಯಲ್ಲಿ ಮಾತುಕತೆ ನಡೆಯುತ್ತಿತ್ತು..
ನನಗಂತೂ ಅವರ ಸುದ್ದಿ ಕಾಯುವುದೇ ದೊಡ್ಡ ಹಿಂಸೆ ಆಗುತ್ತಿತ್ತು. ಹೇಳಿದಂತೆ ಬೇರೆಯವರಲ್ಲಿ ನಮಗೆ ಹುಡುಗಿ ಒಪ್ಪಿಗೆ. ಅವರಿಗೂ ಒಪ್ಪಿಗೆ ಎಂದಾದರೆ ನಮ್ಮ ಮನೆ ನೋಡಲು ಬರಲಿ ಎಂದು ಹೇಳಿಕಳಿಸಿದರು. ನಮ್ಮ ಮನೆಯಲ್ಲಿ ಹೆಚ್ಚು ತಡಮಾಡದೆ ಹುಡುಗನ ಮನೆ ನೋಡಿ ನಿಶ್ಚಿತಾರ್ಥದ ದಿನ ಗೊತ್ತು ಮಾಡಿಯೇ ಬಂದರು. ಅದರಂತೆ ನಿಶ್ಚಯದ ದಿನ ಎರಡು ಕಡೆಯವರಿಂದ ವೀಳ್ಯದೆಲೆ ಅಡಿಕೆ ಅದಲು ಬದಲು ಮಾಡಿ ಇನ್ನೂ ಮೂರು ತಿಂಗಳಿಗೆ ಮದುವೆ ಎಂದು ತೀರ್ಮಾನ ಮಾಡಿದರು.
ನನಗಂತೂ ಅಮ್ಮ ಮನೆಯಲ್ಲಿ ತರತರದ ತಿಂಡಿ ಹಾಲು, ಮೆಂತ್ಯ ಗಂಜಿ ಎಂದು ದಿನಾ ತಿನ್ನಿಸುತ್ತಿದ್ದರು. ಬಿಸಿಲಿಗೆ ಕಪ್ಪಾಗುತ್ತಿಯೆಂದು ಹೊರಗೆಯೆ ಬಿಡುತ್ತಿರಲಿಲ್ಲ. ಇವರ ಉಪಚಾರದಿಂದ ಮದುವೆ ದಿನ ಮೈ ಕೈ ತುಂಬಿಕೊಂಡು ಮುಖ ಕಳೆ ಕಳೆಯಾಗಿ ಮಿರುಗುತ್ತಿತ್ತು. ಅಂತೂ ಮದುವೆ ವಿಜೃಂಭಣೆಯಿಂದ ನಡೆಯಿತು. ಮದುವೆ ಆಗಿ ಗಂಡನ ಮನೆಗೆ ಬಂದೆ. ಬಂದ ದಿನವೇ ಮೂಲ ನಕ್ಷತ್ರದ ಪರಿಹಾರಕ್ಕೆ ಎಂದು ಪೂಜೆ ಏರ್ಪಡಿಸಲಾಗಿತ್ತು.
( ಮುಂದುವರಿಯುವುದು)
✍️ ವನಿತಾ ಅರುಣ್ ಭಂಡಾರಿ ಬಜಪೆ.